ಸೋಮವಾರ, ಜನವರಿ 13, 2014

ವೈವಿಧ್ಯಮಯ ಜನಪದರ ಸಂಕ್ರಾಂತಿ



-ಡಾ.ಜಿ.ಅರುಣ ಕುಮಾರ್


 ಕರ್ನಾಟಕದಲ್ಲಿ ಸಂಕ್ರಾಂತಿಯೆಂದರೆ, ರೈತಪರಿವಾರವು ತಮ್ಮ ಬೆಳೆ, ಹೊಲ, ಎತ್ತು, ದನ ಕರುಗಳ ಜತೆ ಸಂಭ್ರಮಿಸುವ ಹಬ್ಬ. ಇದು ಜನಪದ ಸಾಹಿತ್ಯದಲ್ಲಿಯೂ ವ್ಯಕ್ತವಾಗುತ್ತದೆ. ಜನಪ್ರಿಯ ಕಥನಗೀತೆ ‘ಧರಣಿ ಮಂಡಲ ಮಧ್ಯದೊಳಗೆ ಎನ್ನುವ ಗೋವಿನ ಹಾಡಿನ ಹಸು ಮತ್ತು ಹುಲಿಯ ಕಥೆಯೊಂದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಈ ಗೀತೆ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿದೆ. ವಿವಾದಕ್ಕೂ ಕಾರಣವಾಗಿದೆ.  ಇಂತಹ ಕಥನಗೀತೆಯೊಂದು ಹುಟ್ಟಿಕೊಂಡ ಸಂದರ್ಭ ಕೂಡ  ಸಂಕ್ರಾಂತಿಯ ಹಬ್ಬದ್ದು ಎನ್ನುವ ಮಾತಿದೆ. ಇದಕ್ಕಾಗಿಯೇ ಇರಬೇಕು ಈ ಹಾಡನ್ನು ಕರ್ನಾಟಕದ ಕೆಲವು ಕಡೆ ಸಂಕ್ರಾಂತಿ ಹಬ್ಬದಂದೇ ಹಾಡುತ್ತಾರೆ.

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ಬರುವ ತುರುಗಳನ್ನು
ಬಳಿಗೆ ಕರೆದನು ಹರುಷದಿ

 ಹೀಗೆ ಸಾಗುವ ಈ ಹಾಡು ಗೋವಿನ ಪ್ರಾಮಾಣಿಕತೆಯನ್ನು ಸಾರುತ್ತಾ ಜಾನುವಾರುಗಳ ಕಥನವೊಂದನ್ನು ಕಟ್ಟಿಕೊಡುತ್ತದೆ. ಈ ಕಥನಗೀತೆಗೆ ಪೂರಕವಾಗಿ ಸಂಕ್ರಾಂತಿ ಹಬ್ಬದಂದು ಎತ್ತು, ದನ, ಕರು, ಹಸುಗಳಿಗೆ ಕಾಟ ಕೊಡುವ ಪ್ರಾಣಿಗಳನ್ನು ಹಿಡಿದು ಬೆದರಿಸಿ ಓಡಿಸುವ ಆಚರಣೆಗಳಿವೆ. ಇದು ಕಾಡುಪ್ರಾಣಿಗಳು ಜಾನುವಾರುಗಳ ಮೇಲೆ ಕಣ್ಣು ಹಾಕಬಾರದೆಂಬ ಬೆದರಿಕೆ ಹುಟ್ಟಿಸುವ ತೆರನದ್ದು. ಕರ್ನಾಟಕದಲ್ಲಿಯೇ ವಿಶಿಷ್ಠವಾದ ಆಚರಣೆಯೊಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕದಬಳ್ಳಿಯಲ್ಲಿತ್ತು. (ಕದಂಬರ ದೊರೆ ಈ ಊರಿಗೆ ಬಂದದ್ದರ ಕಾರಣ ಕದಂಬಳ್ಳಿ ಎಂಬ ಹೆಸರಿತ್ತು ಎಂದು ಕ.ರಾ.ಕೃ ಹೇಳುತ್ತಾರೆ) ಈ ಹಳ್ಳಿಯಲ್ಲಿ ಊರಿನವರು ಬೇಟೆಗೆ ಹೋಗಿ ಜೀವಂತ ನರಿಗಳನ್ನು ಹಿಡಿದು ತಂದು, ಅವುಗಳಿಗೆ ಪಟಾಕಿ ಹಚ್ಚಿ ಕಾಡಿಗೆ ಓಡಿಸುತ್ತಿದ್ದರು. ಈಚೆಗೆ ಮೂರ‍್ನಾಲ್ಕು ವರ್ಷದಿಂದ ಪ್ರಾಣಿದಯಾ ಸಂಘದವರ ದೂರಿನ ಮೇರೆಗೆ, ಈ ಆಚರಣೆಗೆ ಹೈಕೋರ್ಟ ನಿಶೇದಾಜ್ಞೆ ಹೊರಡಿಸಿದೆ. ಸಂಕ್ರಮಣದಲ್ಲೀಗ ಪೋಲಿಸರ ಕಾವಲಿರುತ್ತದೆ. ಈಗಲೂ ಬಲೆ ತೆಗೆದುಕೊಂಡು ಕಾಡಿಗೆ ಹೋಗುವ ಆಚರಣೆಯಿದೆ. ಈ ಆಚರಣೆಯನ್ನು ನೋಡಿದರೆ ಜಾನುವಾರುಗಳಿಗೆ ಕಾಟ ಕೊಡುವ ಕಾಡಿನ ಪ್ರಾಣಿಗಳನ್ನು ಕುರಿತ ಜನಪದ ಗೀತೆಗಳು ಕಥನಗಳು ಹುಟ್ಟಿರುವ ಸಾಧ್ಯತೆ ಇದೆ. ಇದರ ಭಾಗವಾಗಿಯೇ ಗೋವಿನ ಹಾಡನ್ನೂ ನೋಡಬಹುದು.

   ಇದನ್ನು ನೋಡಿದರೆ, ಸಂಕ್ರಾಂತಿಯಂದು ಹೋರಿಗಳನ್ನು ಕಿಚ್ಚಾಯಿಸುವ ಸಂಪ್ರದಾಯಕ್ಕೂ ಜಾನುವಾರುಗಳಲ್ಲಿ ದೈರ್ಯತುಂಬುವುದಕ್ಕೂ ಸಂಬಂಧವಿದ್ದಂತಿದೆ. ತುಮಕೂರು, ಮಂಡ್ಯ ಮೈಸೂರು ಚಾಮರಾಜನಗರ ಭಾಗದಲ್ಲಿ ಇದರ ಸಂಭ್ರಮ ಹೆಚ್ಚು. ಎತ್ತು, ಆಕಳಗಳನ್ನು ಸಿಂಗರಿಸುವ ಪರಿ ನೋಡಲು ಮೋಹಕವಾಗಿರುತ್ತದೆ. ಎತ್ತುಗಳೂ ಚಳಿಯಿಂದ ಬಿಡಿಸಿಕೊಂಡು ಕಾವೇರಲಿ, ಎತ್ತಿನ ದೇಹದಲ್ಲಿನ ಕ್ರಿಮಿಗಳು ನಾಶವಾಗಲಿ, ಒಳ್ಳೆಯ ರಾಸುಗಳಿಗೆ ರಾವು ಬಡಿಯದಿರಲಿ ಎನ್ನುವ ಹಿನ್ನೆಲೆಯೂ ಈ ಆಚರಣೆಗೆ ಇದ್ದಂತಿದೆ. ಹೀಗೆ ಕಿಚ್ಚಾಯಿಸುವ ಸಂಪ್ರದಾಯಗಳೂ ಪ್ರಾದೇಶಿಕವಾಗಿ ಭಿನ್ನವಾಗಿವೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಮನೆಗಾಗಿ ದುಡಿದು ತೀರಿದ ಎತ್ತುಗಳ ಸಮಾಧಿಗೆ ಪೂಜೆ ಮಾಡುವ ಆಚರಣೆಯಿದೆ. ಇಲ್ಲಿ ಎತ್ತುಗಳನ್ನು ದೇವರೆಂದು ಭಾವಿಸುತ್ತಾರೆ. ವಿಶೇಷವೆಂದರೆ ಹಬ್ಬಕ್ಕೆ ಮಾಡಿದ ಕಿಚಡಿಯನ್ನೇ ಆ ದಿನ ಎತ್ತುಗಳಿಗೆ ತಿನ್ನಿಸಲಾಗುತ್ತದೆ. ಅಂದು ಹಬ್ಬದಡುಗೆಯನ್ನು ಎತ್ತಿಗೂ ತಿನ್ನಿಸುವ ಮೂಲಕ ಎತ್ತನ್ನು ಮನೆ ಮಕ್ಕಳಂತೆ ನೋಡಿಕೊಳ್ಳುವ ಆಶಯ ವ್ಯಕ್ತವಾಗುತ್ತದೆ.

  ಅಂತೆಯೇ ಸುಗ್ಗಿಯ ಆಚರಿಸುವ ಹಾಡುಗಳಲ್ಲಿಯೂ ಸಂಕ್ರಾಂತಿಯು ಮೈ ಪಡೆದು ಅರಳುತ್ತದೆ. ಅಂತಹ ಒಂದು ಸುಗ್ಗಿಯ ಹಾಡೊಂದರ ಚರಣಗಳು ಹೀಗಿವೆ:

ಕೋಲು ಮಾತಾಡುತಾವೆ-ಹೂವಿನ
ಗೆಜ್ಜೆ ಮಾತಾಡುತಾವೆ  || ಸೊಲ್ಲು ||

ಹೊಳೆಯಲ್ಲಿ ನೀರು ತುಂಬಿ ಹೊಲದಲ್ಲಿ ಬೆಳೆ ತುಂಬಿ
ಊರೂರಿನ ಗುಡಿ ಮನೆತುಂಬಿ | ಹೂವಿನ |

ಊರೂರಿನ ಗುಡಿ ಮನೆತುಂಬಿ ಜನತುಂಬಿ
ಸಂಕ್ರಾಂತಿ ಬಂತು ಸಿರಿತುಂಬಿ | ಹೂವಿನ |

ಸಂಕ್ರಾಂತಿ ಹಬ್ಬದಲ್ಲಿ ಸಂಭ್ರಮವೇನಮ್ಮ
ದೇವೇಂದ್ರನೈಭೋಗ ಧರೆಯಲ್ಲಿ | ಹೂವಿನ |

ದೇವೇಂದ್ರನೈಭೋಗ ಧರೆಯಲ್ಲಿ ನೋಡುಬಾರೆ
ಬೆಳೆದು ಬೀಗ್ಯಾಳೆ ಭೂಮಿತಾಯಿ | ಹೂವಿನ |

ಭೂಮಿಯು ನಮ್ಮ ತಾಯಿ ತಂದೇಯು ಬಸವಣ್ಣ
ಅವರಿತ್ತ ಸಿರಿಯ ನೋಡ ಬನ್ನಿ | ಹೂವಿನ |

   ಹೀಗೆ ಸಂಕ್ರಾಂತಿಯು ಜನಪದರ ಸಂಭ್ರವನ್ನು ದಾಖಲಿಸಿದೆ. ಅವರ ಆಚರಲೋಕದ ವೈವಿಧ್ಯವನ್ನು ದಾಖಲಿಸಿದೆ. ಬೆಳೆದ ಬೆಳೆಯನ್ನು ಕಣದಲ್ಲಿ ಒಕ್ಕುವಾಗ ರಾಶಿ ಮಾಡುವುದು, ರಾಶಿಯನ್ನು ಪೂಜೆ ಮಾಡುವುದು, ಹೀಗೆ ಒಕ್ಕುವಾಗ ಓಲಿಗ್ಗೋ..ಹಾಕುವುದು ನಡೆಯುತ್ತದೆ. ಸಂಕ್ರಾಂತಿಯಂದು ರಾಶಿಪೂಜೆಯ ಹೊತ್ತಲ್ಲಿ ಓಲಗ ಹಾಡು ಹಾಡುವುದೂ ಇದೆ.

ಒಳ್ಳೆ ಸಂಕ್ರಾಂತಿ ಹಬ್ಬ ಬಂತು |
ಓಲಿಗ್ಯೊ ಓಲಿಗ್ಯೊ ಓಲಿಗ್ಯೊ |
ಹಿಗ್ಗಾಳಿ ಮುಗ್ಗಾಳಿ ಬರದಿರು ಕಣಕೆ
ಕುಗ್ಗೀದ ಗುಣವ ಕೊಡದೀರು ಮನಕೆ          | ಸೊಲ್ಲು |

ಮೂಡಾಲಗಾಳಿಗೆ ಏನು ಬಂತೊ ಮಾಯ
ನೋಡಿ ನೀ ದಯ ಮಾಡೊ ದೇವ ಶಿವರಾಯ
ಕೂಡೀದ ರಾಸಿಗೆ ಬಡಿಸೇನು ಕಾಯ
ಕಾಡಿಸಿಕೊಳ್ಳದೆ ಕೊಡುವೇನು ಆಯ | ಓಲಿಗ್ಯೊ |

ಎತ್ತೀನ ಪಾದದ ಮುತ್ತೀನ ಜೋಳ
ಸುತ್ತ ಗುಡಿಸೇನು ಹವಳದ ಕಾಳ
ಅತ್ತಿಗಕ್ಕಯ್ಯಾರ ಬಳೆಗಳ ತಾಳ
ಹೊತ್ತಾತು ತರಬೇಕು ನೂರಾರು ಆಳ        | ಓಲಿಗ್ಯೊ |

ಮಾಯಾದ ಗಾಳಿಬಂತು ಬರ್ರಾನೆ ಬೀಸಿ
ಶ್ರೀಶೈಲ ಶಿಖರಕ್ಕೆ ಸಮನಾದ ರಾಶಿ
ಮನ್ದೇವ್ರಿಗೋಗಾಕೆ ಬಲುದೂರ ಕಾಸಿ
ಮಲ್ಲೀಗಿ ದಂಡೇಲಿ ಪೂಜೀವು ರಾಸಿ | ಓಲಿಗ್ಯೊ |


  ಈ ಹಾಡು ಹೇಳುವ ಮೂಲಕ ಒಬ್ಬರು ಓಲಗನನ್ನು ಇಟ್ಟರೆ ಕಣದಲ್ಲಿ ಸೇರಿದ ಬಂಧು ಬಳಗದವರು ಒಂದು ಸಾಲು ಹೇಳಿದ ಕೊನೆಗೆ ಓಲಗೋ ಎಂದು ಸೇರಿಸುತ್ತಾರೆ. ಈ ಓಲಗೋ ಹಾಡಿನಲ್ಲಿ ದೇವರ ನೆನಪಿದೆ, ಒಕ್ಕಲು ಮಾಡುವ ಪರಿಕರಗಳ ನೆನಪಿದೆ, ಅಂತೆಯೇ ಕಾಡಿನ ಹಕ್ಕಿಗಳನ್ನೂ ನೆನಪಿಸಿಕೊಳ್ಳುತ್ತಾರೆ. ಇಲ್ಲಿ ನಿಸರ್ಗದ ಜತೆ ರೈತರ ಸಂಬಂಧದ ಹಲವು ಮಜಲುಗಳನ್ನು ಇಂತಹ ಸಂಕ್ರಾಂತಿಯ ಹಾಡುಗಳು ಕಟ್ಟಿಕೊಡುತ್ತವೆ.

   ನಿಸರ್ಗದಲ್ಲಾಗುವ ಬದಲಾವಣೆಗೆ ಜನಸಮುದಾಯ  ತೋರುವ ಸ್ಪಂದನೆ ರೂಪದ ಹಲವು ಆಚರಣೆಗಳಲ್ಲಿ ಸಂಕ್ರಾಂತಿಯೂ ಒಂದು. ಸೂರ್ಯ ಒಂದು ರಾಶಿಯೊಳಗಿನ ಹೆಜ್ಜೆಯನ್ನು, ಮತ್ತೊಂದರಲ್ಲಿ ಇಡುವುದರ ಸಾಂಕೇತಿಕ ಸಂಭ್ರಮವಿದು. ಹನ್ನೆರಡು ರಾಶಿ, ಮಾಸಗಳ ಕಾರಣ ವರ್ಷಕ್ಕೆ ಹನ್ನೆರಡು ಸಂಕ್ರಾಂತಿಗಳೇ ಸಂಭವಿಸುತ್ತವೆ. ಇವುಗಳಲ್ಲಿ ಎರಡನ್ನು ಮಾತ್ರ ಮುಖ್ಯವೆಂದು ಭಾವಿಸಲಾಗುತ್ತದೆ. ಸೂರ್ಯ ಮಿಥುನದಿಂದ ಕರ್ಕಾಟಕಕ್ಕೆ ಪ್ರವೇಶಿಸುವುದು ಒಂದಾದರೆ, ಧನುವಿನಿಂದ ಮಕರಕ್ಕೆ ಸಂಕ್ರಮಿಸುವುದು ಮತ್ತೊಂದು. ಇವೆರಡೂ ಸೂರ್ಯನ ದಾರಿಯ ಮಾರ್ಗಸೂಚಿಗಳು. ಒಂದು ದಕ್ಷಿಣಾಯನವಾದರೆ, ಮತ್ತೊಂದು ಉತ್ತರಾಯಣ. ಈ ಬಗೆಗಿನ ಪುರಾಣ ಐತಿಹ್ಯಗಳು ಹಲ ಬಗೆಯ ಕಥನಗಳನ್ನು ಹುಟ್ಟಿಸಿವೆ.

 ಇದರಲ್ಲಿ ತಿಲಾಸುರನ ವಧೆಯ ಕಥೆ ಜನಪ್ರಿಯ. ಬ್ರಹ್ಮನಿಂದ ವರ ಪಡೆದ ತಿಲಾಸುರನೆಂಬ ರಾಕ್ಷಸ ಲೋಕಪೀಡಕನಾಗುತ್ತಾನೆ. ಆಗ ‘ಮಕರ’ ‘ಕರ್ಕ’ ಎಂಬ ಮಹಿಳೆಯರ ಸಹಾಯ ಪಡೆದು ಸೂರ್ಯ ಆತನನ್ನು ಸಂಹರಿಸುತ್ತಾನೆ. ಮಕರ ತಿಲಾಸುರನ ಹೊಟ್ಟೆಬಗೆದಾಗ ಭೂಮಿಗೆ ಎಳ್ಳಿನ ಪ್ರವೇಶವಾಗುತ್ತದೆ. ಆಗ ಮಕರಳ ಸಾಹಸ ಮೆಚ್ಚಿ ಸೂರ್ಯ ‘ನಿನ್ನನ್ನು,  ನಿನ್ನಿಂದ ಭೂಮಿಗೆ ಬಂದ ಎಳ್ಳನ್ನು ಪೂಜಿಸಿದವರಿಗೆ ಒಳಿತಾಗಲಿ’ ಎಂದು ಹರಸಿದನಂತೆ. ಹೀಗೆ ಎಳ್ಳು ಬೀರುವ ಆಚರಣೆ ಬಂದದ್ದಾಗಿಯೂ, ಮಕರ ಸಂಕ್ರಮಣ ಎಂಬ ಹೆಸರು ಜನರಲ್ಲಿ ಉಳಿದದ್ದಾಗಿಯೂ ಈ ಕಥೆ ಹೇಳುತ್ತದೆ.

  ರಾತ್ರಿಯೇ ಹೆಚ್ಚಾಗಿ, ಹಗಲು ಕಡಿಮೆ ಇರುವ ಚಳಿಗಾಲಕ್ಕಿದು ಇಳಿಗಾಲ. ಹಗಲು ಹಿಗ್ಗಿಕೊಂಡು, ರಾತ್ರಿ ಕುಗ್ಗಿಕೊಳ್ಳುವ, ಶೀತವು ಶಾಖಕ್ಕೆ ಅಂಜಿ ಹಿಂದೆ ಸರಿಯುವ ಕಾಲಮಾನವಿದು. ಹೀಗಾಗಿಯೇ ಜನಪದರು ‘ ಸಂಕ್ರಾಂತಿಗೆ ಚಳಿ ಕಡಿಮೆಯಾಗಿ, ಶಿವರಾತ್ರಿಗೆ ಶಿವ ಶಿವ ಅಂತ ಮಾಯವಾಯ್ತೆ’ ಎಂದದ್ದಿದೆ. ಹಾಗಾಗಿ ಚಳಿಯಲ್ಲಿ ಮುದುಡಿಕೊಂಡ ದೇಹ ಮನಸ್ಸುಗಳನ್ನು ಬಿಸಿಲಿಗೆ ಬೆಚ್ಚಗಾಗಿಸುವ, ಹೈದರಾಬಾದ್ ಕರ್ನಾಟಕದವರಿಗೆ ಬರಲಿರುವ ಬಿಸಿಲಿನ ತಾಪದ ನೆನಪಿಸಿ ಬೆವರಿಳಿಸುವ ಹಬ್ಬ ಈ ಸಂಕ್ರಮಣ.

  ಹದವಾಗಿ ಹುರಿದ ಎಳ್ಳು, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುಂಡು, ಬೆಲ್ಲದಚ್ಚು , ಜೊತೆಗೆ ಕಬ್ಬಿನ ತುಂಡುಗಳ ಮಿಶ್ರಣವನ್ನು ತಯಾರಿಸುವುದೂ, ಅದನ್ನು ಎಳ್ಳುಬೀರಿ ‘ಎಳ್ಳು ಬೆಲ್ಲ ಕೊಳ್ಳಿ, ಒಳ್ಳೊಳ್ಳೆ ಮಾತಾಡಿ ಎನ್ನುವುದು ಸಂಕ್ರಮಣದ ಸಂಭ್ರಮವನ್ನು ಹಂಚಿಕೊಳ್ಳುವ ವಿಧಾನ. ಇದು ಎಲ್ಲಾ ಕಡೆಗೂ  ಸಾಮಾನ್ಯವಾಗಿದೆ.  ಇದನ್ನೇ ವೈದ್ಯರು ‘ಚಳಿಗಾಲದಲ್ಲಿ ದೇಹದಲ್ಲಿರುವ ಎಣ್ಣೆ ಅಂಶ(ಪ್ಯಾಟ್) ದೇಹವನ್ನು ಬಿಸಿಯಾಗಿಡಲು ಹೆಚ್ಚು ಖರ್ಚಾಗಿ ಕಡಿಮೆಯಾಗುತ್ತದೆ. ಹಾಗಾಗಿ ಎಣ್ಣೆ ಅಂಶವಿರುವ ಎಳ್ಳು, ಒಣಕೊಬ್ಬರಿ, ನೆಲಗಡಲೆ ಜತೆ ಬೆಲ್ಲ ಸಕ್ಕರೆಯನ್ನು ತಿನ್ನುವುದು ಒಳ್ಳೆಯದು ಎನ್ನುವ ಅಭಿಪ್ರಾಯ ತಾಳುತ್ತಾರೆ.

   ಸಂಕ್ರಮಣವು ಕರ್ನಾಟಕದ ಆಹಾರ ವೈವಿದ್ಯಗಳನ್ನು ಅದರೆಲ್ಲಾ ರುಚಿಗಳೊಂದಿಗೆ ಒಟ್ಟಿಗೆ ತರುತ್ತದೆ. ಆ ವರ್ಷ ಬೆಳೆದ ಬೆಳೆಗಳ ವೈವಿದ್ಯಗಳನ್ನೆಲ್ಲಾ ಬಳಸಿಕೊಳ್ಳುವಷ್ಟು ವಿಭಿನ್ನವಾದ ಅಡುಗೆ ಮಾಡಲಾಗುತ್ತದೆ. ಅವರೆ ಕಾಳಿನ ಕಿಚಡಿ, ಗೆಣಸಿನ ಕಡುಬು, ಗೋದಿ ಪಾಯಸ, ಉತ್ತರ ಕರ್ನಾಟಕದ ಭಾಗದಲ್ಲಿ ಎಳ್ಳಚ್ಚಿದ ಸಜ್ಜೆ, ಜೋಳದ ರೊಟ್ಟಿ, ಎಣ್ಣೆ ಬದನೆಕಾಯಿ, ಕಲಬೆರಕೆ ಸೊಪ್ಪುಸಾರು, ಆಗಲಕಾಯಿ ಪಲ್ಯ, ತಾರಾವರಿ ಉಪ್ಪಿನಕಾಯಿಗಳು, ಮೊಸರು ಬಾನ, ಗುರೆಳ್ಳು ಚೆಟ್ನಿ, ಸೌತೆ, ಮೂಲಂಗಿ, ಗಜ್ಜರಿಯ ಪಚಡಿ, ಮೆಂತೆಸೊಪ್ಪು ಈರುಳ್ಳಿಯ ಕಲಬೆರಕೆ, ಎಲ್ಲಾ ತರಕಾರಿಗಳನ್ನು ಹಾಕಿ ಮಾಡುವ ಬರ್ತ, ಕುಂಬಳಕಾಯಿ ಬರ್ತ, ಕೆಂಪು ಮೆಣಸಿನಕಾಯಿ ಚಟ್ನಿ, ಹೀಗೆ ಹೇಳುತ್ತಾ ಹೋದರೆ ಬಾಯಿಯಲ್ಲಿ ನೀರೂರುತ್ತದೆ. ಪ್ರಾದೇಶಿಕವಾಗಿ ಆಯಾ ಭಾಗದ ಬೆಳೆಗಳನ್ನು ಆಧರಿಸಿದ ವೈವಿದ್ಯದ ರುಚಿಯನ್ನು ಸಂಕ್ರಮಣ ಒಂದುಗೂಡಿಸುತ್ತದೆ.
  ಈ ಎಲ್ಲಾ ಅಡುಗೆಯನ್ನು ಬುತ್ತಿಕಟ್ಟಿಕೊಂಡು ಹೊಳೆ ದಡಕ್ಕೋ, ನದಿ ತಟಕ್ಕೋ ಹೋಗಿ ಊಟ ಮಾಡುವುದೂ ಸಹ ರುಚಿಯನ್ನು ಹೆಚ್ಚಿಸುತ್ತದೆ. ಎಳ್ಳೆಣ್ಣೆ ಹಚ್ಚಿ ಜನ ನೀರಿಗಿಳಿದು ಸ್ನಾನ ಮಾಡಿ ಸೂರ್ಯ ನಮಸ್ಕಾರ ಮಾಡುತ್ತಾರೆ. ಇದಕ್ಕೆ ಸಂಕ್ರಾಂತಿಯ ಕರಿ ಕಳೆಯುವುದು ಎನ್ನುವ ಹೆಸರಿದೆ. ಹೀಗೆ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡದಿದ್ದರೆ ಸಂಕ್ರಾಮಪ್ಪ ದೇವರು ಬಂದು ಮೈ ಮೂಸಿ ನೋಡಿ ಶಾಪ ಕೊಡುತ್ತಾನೆಂಬ ನಂಬಿಕೆ ಸಿರುಗುಪ್ಪ ಭಾಗದಲ್ಲಿದೆ. ಹೀಗಾಗಿ ಹೊಳೆ ದಂಡೆ, ನದಿ ದಡಗಳಿರದ ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬದ ತೀವ್ರತೆ ಕಡಿಮೆ.


  ಮಾಗಡಿ ತಾಲೂಕಿನ ಭಾಗದಲ್ಲಿರುವ ಇಲ್ಲಿಗ ಸಮುದಾಯವು ಸಂಕ್ರಾಂತಿಯನ್ನು ಸಂಕುರಾತಿ ಎನ್ನುತ್ತಾರೆ. ಹಸಿ ಮಣ್ಣಿನಿಂದ ಸಂಕುರಾತಿ ಅಮ್ಮನ  ಕೋಟೆ ಕಟ್ಟಿ, ನಾಲ್ಕು ಆರತಿ ಮಾಡಿ ಆರತಿಗೊಂದರಂತೆ ನಾಲ್ಕು ಕೋಳಿ ಬಲಿ ಕೊಟ್ಟು. ಹಸುವಿನ ಕೆಚ್ಚಲಿನಿಂದ ಉಣ್ಣೆ ತೆಗೆದು ಅನ್ನಕ್ಕೆ ಹಾಕಿ ಬೇಯಿಸುತ್ತಾರೆ. ಇದನ್ನು ಉನ್ನಿ ಅನ್ನ ಎಂದು ಕರೆಯುತ್ತಾರೆ. ಈ ಅನ್ನವನ್ನು ದನದ ಹಿಂಡಿನ ಮೇಲೆ ಚೆಲ್ಲುತ್ತಾರೆ. ತುಮಕೂರು ಮುಂತಾದ ಕಡೆ ಊರ ಹೊರಗೆ ಜೇಡಿ ಮಣ್ಣಿನಿಂದ ಪಿರಮಿಡ್ಡಿನಾಕಾರದಲ್ಲಿ ಗುಡಿ ಕಟ್ಟುತ್ತಾರೆ. ಅದನ್ನು ಕಾಟುಮ್ ರಾಯ್, ಕಾಟ್ ಮೆಟ್ರಾಯ್, ಸಂಕ್ರಾತೆಮ್ಮಾ ಅಂತೆಲ್ಲಾ ಕರೆಯುತ್ತಾರೆ. ಅದನ್ನು ಕಾರೆಗಿಡದ ರಂಬೆ ಸಿಕ್ಕಿಸಿ ,ಉಗುನಿ ಹೂ ಮುಡಿಸಿ ಸಿಂಗರಿಸಿ ದನಗಳನ್ನು ತಂದು ಪೂಜಿಸುತ್ತಾರೆ. ಇವೆಲ್ಲಾ ದನಗಾರ ಸಂಸ್ಕೃತಿಯ ನೆನಪುಗಳನ್ನು ತರುತ್ತವೆ.  ಸೂರ್ಯನು ಎಕ್ಕೆ ಗಿಡದಲ್ಲಿ ನೆಲೆಸಿದ್ದಾನೆಂಬ ನಂಬಿಕೆಯ ಕಾರಣ, ಕೆಲವೆಡೆ ಸಂಕ್ರಮಣಕ್ಕೆ ಎಕ್ಕೆ ಗಿಡದ ಎಲೆಗಳನ್ನು ತಲೆಮೇಲಿಟ್ಟುಕೊಂಡು ಸ್ನಾನ ಮಾಡುತ್ತಾರೆ.

  ಜನಪದ ಲೋಕದಲ್ಲಿ ಬಹುವಿಧ ರೂಪು ಪಡೆದ ಸಂಕ್ರಾಂತಿ ಬರು ಬರುತ್ತಾ ನಗರ ಕೇಂದ್ರಿತ ಹಬ್ಬವಾಗಿ ಬದಲಾಗುತ್ತಿದೆ. ರೈತ ಪರಿವಾರ ಹಿಂದೆ ಹಾಡಿದ ಜನಪದ ಗೀತೆಗಳನ್ನು ಹೆಚ್ಚು ಸಂಭ್ರಮದಿಂದ ಹಾಡಲಾರರು. ಕಾರಣ ಅಕಾಲಿಕ ಮಳೆಯಿಂದಾಗಿಯೂ, ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದಿದ್ದಕ್ಕೂ ಇಂತಹದೇ ಹತ್ತಾರು ಕಾರಣಗಳು ಹೊಲಬದುಕನ್ನು ಕಷ್ಟಕರವಾಗಿಸಿವೆ. ಈಗ ಗ್ರಾಮೀಣ ಪ್ರದೇಶದಲ್ಲಿ ಸಾಗುವಳಿ ಭೂಮಿಯ ಪ್ರಮಾಣ ಕಡಿಮೆಯಾಗುತ್ತಿದೆ. ತುಂಡು ಹಿಡುವಳಿಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಎತ್ತುಗಳನ್ನು ಹೊಂದುವಿಕೆಯ ಪ್ರಮಾಣದಲ್ಲೂ ಇಳಿಮುಖವಾಗುತ್ತಿದೆ.

  ಬೆಳೆಗಳಲ್ಲಿನ ವೈವಿಧ್ಯತೆಗಳು ನಾಶವಾಗಿ ಏಕ ಮಾದರಿಯ ವಾಣಿಜ್ಯ ಬೆಳೆಗಳು ಹೆಚ್ಚಿವೆ. ಹಾಗಾಗಿ ಹಸು ಕರು ಎತ್ತುಗಳಿಗೆ ಬೇಕಾಗುವ ಮೇವಿನ ಬೆಳೆಗಳು ಇಲ್ಲವಾಗುತ್ತಿವೆ. ದನ ಕರುಗಳು ತಿರುಗಾಡಿ ಮೇಯಲು ಗೋಮಾಳಗಳು ಸೈಟುಗಳಾಗುತ್ತಿವೆ, ಈ ಕಾರಣಗಳಿಂದಾಗಿ ಜಾನುವಾರುಗಳ ಸಾಕುವಿಕೆಯೆ ಕಷ್ಟವಾಗಿ ಅವುಗಳ ಪ್ರಮಾಣ ಇಳಿಯುತ್ತಿದೆ.  ಇಂತಹ ಬದಲಾವಣೆ ಸಂಕ್ರಾಂತಿ ಹಬ್ಬದ ಆಚರಣೆಯನ್ನೂ ಸಹಜವಾಗಿ ಬದಲುಗೊಳಿಸಿದೆ. ಹಾಗಾಗಿ ಸಂಕ್ರಾಂತಿ ಹಬ್ಬದ ಸಂಭ್ರಮ ಗ್ರಾಮೀಣ ಭಾಗದಲ್ಲಿ ಯಾಂತ್ರಿಕ ಆಚರಣೆಯಾಗಿ ಮುಂದುವರಿಯುತ್ತಿರುವುದು ಸುಳ್ಳೇನಲ್ಲ.



1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com