ಶನಿವಾರ, ಜನವರಿ 25, 2014

ಹಲ್ಲು ಕಿತ್ತ ಹಾವಿನಂತಾಗಿರುವ ಜಾನಪದ ಪರಂಪರೆ

-ಅರುಣ್ ಜೋಳದಕೂಡ್ಲಿಗಿ


ಜನಪದ ಮೌಖಿಕ ಪರಂಪರೆಯಲ್ಲಿ ಹಾವಾಡಿಗರೆಂಬ ಮನರಂಜಕ ಸಮುದಾಯವಿದೆ. ಇಲ್ಲಿ ಹಾವಿನ ಬುಟ್ಟಿಗಳನ್ನು ಇಟ್ಟುಕೊಂಡಿರುತ್ತಾನೆ. ಕೆಲವು ಮಣ್ಣಾವುಗಳು ತೆವಳುತ್ತಾ ನಡೆಯುತ್ತಿರುತ್ತವೆ. ಹಾವಾಡಿಗ ನಾನು ಎಂತೆಂಥ ಹಾವುಗಳನ್ನು ಹಿಡಿದಿದ್ದೇನೆ ಎಂಬ ಬಗ್ಗೆ ಸಾಹಸದ ಕಥೆಗಳನ್ನು ಹೇಳಿ ಜನರಲ್ಲಿ ರೋಮಾಂಚನ ಹುಟ್ಟಿಸುತ್ತಿರುತ್ತಾನೆ. ಅಂತೆಯೇ ನನ್ನ ಆಟವನ್ನು ಮೆಚ್ಚಿದವರೆಂದು ಸಿನೆಮಾ ನಟರೊಂದಿಗೆ ಚಿತ್ರ ತೆಗಿಸಿಕೊಂಡ ಫೋಟೋಗಳನ್ನು ಜನರಿಗೆ ತೋರಿಸುತ್ತಾನೆ. ಆ ಹಾವಾಡಿಗನ ಹೆಂಡತಿ ಸಣ್ಣ ಡೋಲು ಬಾರಿಸುತ್ತ ಆತನ ಮಾತಿಗೆ ವ್ಯಂಗ್ಯದ ಟೀಕೆಗಳನ್ನು ಮಾಡುತ್ತಿರುತ್ತಾಳೆ. ತಾನು ಸಾಹಸದಿಂದ ತಂದ ವಸ್ತುವನ್ನು ತೋರಿಸುತ್ತಿದ್ದರೆ, ಅದನ್ನು ‘ತಾನೆ ತಂದಾನ’ ಎಂದು ಆತನ ಹೆಂಡತಿ ನಿಜವನ್ನು ಜನರೆದುರು ಹೇಳುತ್ತಿರುತ್ತಾಳೆ. ಹಾವಾಡಿಗ ತಾನು ಆಡಿಸಲು ಬಂದ ಹಾವುಗಳನ್ನೆಲ್ಲಾ ಹಲ್ಲು ಕಿತ್ತಿರುತ್ತಾನೆ. ಹಾಗಾಗಿ ಆ ಹಾವುಗಳು ಕಚ್ಚುವಂತೆ ವೀರಾವೇಶದಿಂದ ಅಭಿನಯಿಸಿ ಜನರಲ್ಲಿ ಭಯ ಹುಟ್ಟಿಸಿದರೂ, ಕಚ್ಚುವ ನಟನೆ ಮಾಡಿದರೂ ಕಚ್ಚಲಾರದು.
ಹಾವು ಎಂಬ ಭಯವನ್ನು ಮಾತ್ರ ಹಾವಾಡಿಗ ತನ್ನ ಆಟದ ಬಂಡವಾಳವನ್ನಾಗಿಸಿಕೊಂಡಿರುತ್ತಾನೆ. ಜನಪದ ಕಲೆ ಪರಂಪರೆಯೊಳಗಿನ ಪ್ರತಿರೋಧದ ಅಂಶಗಳನ್ನು ಸಾಮರಸ್ಯದ ಮುಸುಕು ಹಾಕಿ ಅಧ್ಯಯನ ಮಾಡುವಾಗಲೆ ಇಡೀ ಜಾನಪದ ಪರಂಪರೆಯ ಹಲ್ಲುಕೀಳುವ ಪ್ರಯತ್ನ ನಡೆಯಿತು. ಇದಕ್ಕೆ ರೂಪಕವಾಗಿ ಇದೇ ಹಾವಾಡಿಗನ ಪ್ರತಿಮೆಯನ್ನು ಕೊಕೊಕೋಲಾ ಜಾಹಿರಾತಿನಲ್ಲಿ ಬಳಸಿಕೊಳ್ಳಲಾಯಿತು. ಅಲ್ಲಿ ಶಾರುಕ್ ಖಾನ್ ಪುಂಗಿ ಊದುತ್ತಾ ಬರುತ್ತಾನೆ, ಈ ಪುಂಗಿ ನಾದವನ್ನು ಕೇಳಿಸಿಕೊಂಡ ಕೊಕೊಕೋಲಾ ಬಾಟಲೊಂದು ಹಾವಾಡಿಗನ ಬೆನ್ನತ್ತಿ ಬರುತ್ತದೆ. ಈ ಜಾಹೀರಾತು ಇಂದು ಹಲ್ಲು ಕಿತ್ತ ಹಾವಿನಂತಾಗಿರುವ ಜಾನಪದ ಪರಂಪರೆಗೆ ಒಂದು ರೂಪಕದಂತೆ ಕಾಣುತ್ತದೆ.
ಇಂದು ಜನಪದ ಕಲೆ ಪರಂಪರೆಗಳು ಯಾವ ರೀತಿ ಬಳಕೆಯಾಗುತ್ತವೆ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಇಡೀ ಜಾನಪದ ಪರಂಪರೆಯೇ ಪ್ರತಿರೋಧವನ್ನು ಅಡಗಿಸಿಟ್ಟುಕೊಂಡು ಮೌನಗೊಂಡಂತೆ ಕಾಣುತ್ತದೆ. ಕಾರಣ ಆಯಾ ಸಮುದಾಯ ಕಡುಕಷ್ಟದಲ್ಲಿ ಜೀವಿಸುತ್ತಿರುತ್ತದೆ, ಜಾತಿಯ ಕಾರಣಕ್ಕೆ ಮೇಲು ಜಾತಿಗಳ ತುಳಿತಕ್ಕೆ ಒಳಗಾಗಿರುತ್ತದೆ. ಆದರೆ ತುಳಿತಕ್ಕೊಳಗಾದ ಸಮುದಾಯವೇ ತುಳಿಯುವವರ ಮೆರವಣಿಗೆಯಲ್ಲಿ ರಂಗು ರಂಗಾಗಿ ಅಭಿನಯಿಸಿ ಜನಮೆಚ್ಚುಗೆ ಪಡೆಯುತ್ತದೆ. ಅದೇ ಹೊತ್ತಿಗೆ ಆ ಕಲೆಯ ಮೂಲಕ ಅದೇ ಸಮುದಾಯ ತುಳಿಯುವವರ ಕ್ರೌರ್ಯವನ್ನು ಮುಚ್ಚಿ ಹಾಕುತ್ತಿರುತ್ತದೆ. ಇಂತಹ ಘಟನೆಗಳಿಗೆ ಹಲವು ಉದಾಹರಣೆಗಳನ್ನು ಕೊಡಬಹುದು.
ಹಂಪಿ ಉತ್ಸವದಲ್ಲಿ ಕಮಲಾಪುರದಿಂದ ಹೊರಟ ಜಾನಪದ ಮೆರವಣಿಗೆ ಆರು ಕಿಲೋಮೀಟರ್ ಸಾಗುತ್ತದೆ. ಹೀಗೆ ಸಾಗುವ ಮಾರ್ಗ ಮಧ್ಯದಲ್ಲಿ ರಾಜಕಾರಣಿಗಳ, ಪ್ರಭಾವಿಗಳ ವೀಕ್ಷಣೆಗೆಂದು ಒಂದು ಗ್ಯಾಲರಿ ಮಾಡಿರುತ್ತಾರೆ. ಈ ಗ್ಯಾಲರಿ ಹತ್ತಿರ ಬರುತ್ತಿದ್ದಂತೆ ಜನಪದ ಕಲಾವಿದರು ದೆವ್ವ ಹಿಡಿದವರಂತೆ ಮೈದುಂಬಿಕೊಂಡು ಪ್ರದರ್ಶನ ನೀಡುತ್ತಾರೆ. ಅದನ್ನು ದಾಟಿದ ನಂತರ ಮಾಮೂಲಾಗಿ ಪ್ರದರ್ಶನ ನೀಡುತ್ತಾ ನಿತ್ರಾಣರಾಗಿ ಉಸಿರಿಲ್ಲದವರಂತೆ ಮುಂದೆ ಸಾಗುತ್ತಾರೆ. ಇದಕ್ಕೆ ಕಾರಣ ರಾಜಕಾರಣಿಗಳು ಪ್ರಭಾವಿ ಜನರು ನಮ್ಮ ಕಲೆಯನ್ನು ನೋಡಿ ಮೆಚ್ಚಿದರೆ ಮುಂದಿನ ಕಾರ್ಯಕ್ರಮಕ್ಕೆ ನಮಗೆ ಅವಕಾಶ ಸಿಗುತ್ತದೆಂಬ ಒಂದು ಸಣ್ಣ ಆಸೆ ಈ ಕಲಾವಿದರನ್ನು ಹಾಗೆ ಮಾಡಿಸುತ್ತದೆ.
ಮೂಲತಃ ನಮ್ಮ ಸಾಂಸ್ಕೃತಿಕ ಅಧ್ಯಯನಗಳ ದೃಷ್ಟಿಕೋನಗಳಲ್ಲಿ ಈ ತೊಡಕಿದೆ. ಕರ್ನಾಟಕದ ಬಹುಪಾಲು ಜಾನಪದ ಅಧ್ಯಯನಗಳು ಸಾಮರಸ್ಯದ ಅಧ್ಯಯನಗಳು. ಅಲ್ಲಿ ಪ್ರತಿರೋಧವಿಲ್ಲ. ಅಥವಾ ಇರುವ ಪ್ರತಿರೋಧದ ಅಂಶಗಳನ್ನು ಮುಚ್ಚಿ ಹಾಕಿಯೋ, ತೇಲಿಸಿಯೋ ಅಥವಾ ಅವುಗಳನ್ನು ಸೌಮ್ಯವಾಗಿ ವಿವರಿಸಿಯೋ ಆಯಾ ಕಲೆ ಮೌಖಿಕ ಸಾಹಿತ್ಯದೊಳಗೆ ಇರಬಹುದಾದ ಪ್ರತಿರೋಧದ ಕಿಡಿಯನ್ನು ನಂದಿಸಲಾಗಿದೆ. ಸರಕಾರ ಜಾನಪದ ಜಾತ್ರೆಗಳನ್ನು ಮಾಡುತ್ತದೆ. ಈ ಜಾತ್ರೆಗಳಲ್ಲಿ ಯಾವ ಯಾವ ಕಲೆಯನ್ನು ಹೇಗೆ ಅಭಿನಯಿಸಬೇಕೆಂಬ ತರಬೇತಿ ನಡೆಯುತ್ತದೆ. ಆ ತರಬೇತಿಯಲ್ಲಿ ಇಡೀ ಕಲೆಯನ್ನು ಸಾಂಸ್ಕೃತಿಕ ಸೌಂದರ್ಯವರ್ಧಕದಂತೆ ತಯಾರಿಸುತ್ತವೆ. ಅಲ್ಲಿ ಆಯಾ ಕಲೆಯ ಕಲಾವಿದರ ಮೂಲ ಕಲೆಯನ್ನು ಕುಲಗೆಡಿಸಿ ಒಂದು ಯಾಂತ್ರಿಕ ಕಲೆಯನ್ನು ರೂಪಿಸುತ್ತಾರೆ. ಹಾಗೆ ನೋಡಿದರೆ ಇಂದು ಕರ್ನಾಟಕದಲ್ಲಿ ಪ್ರದರ್ಶನವಾಗುತ್ತಿರುವ ಜನಪದ ಕಲೆಗಳೆಲ್ಲವೂ ತಮ್ಮ ಮೂಲ ಆಶಯಗಳಿಂದ ಬಿಡಿಸಿಕೊಂಡು ಯಾಂತ್ರಿಕ ಕಲೆಗಳಾಗಿ ಪರಿವರ್ತಿತವಾಗಿವೆ. ಅದು ಎಷ್ಟರಮಟ್ಟಿಗೆ ಎಂದರೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ಆಕರ್ಷಕ ವಸ್ತುವಿನಂತೆ. ಹೀಗಾಗಿ ಯಾಂತ್ರಿಕವಾದ ಕಲೆಗಳನ್ನು ಯಾರು ಬೇಕಾದರೂ ಕೊಳ್ಳಬಹುದು ಎನ್ನುವಂತಾಗಿದೆ.
ಜನಪದವೆಂಬುದನ್ನು ಜನಪರವೆಂಬ ದೊಡ್ಡ ವ್ಯಾಖ್ಯಾನದಲ್ಲಿ ಅಡಗಿಸಿದ ಕಾರಣ, ಜನಪರತೆಯ ಮುಸುಕು ಹಾಕುವ ಬಂಡವಾಳಶಾಹಿಗಳೂ ಕೂಡ ಜಾನಪದವನ್ನು ಒಂದು ಆಯುಧದಂತೆ ಬಳಸುತ್ತಾರೆ. ಹಸೆ ಕಲೆಯನ್ನು ದೊಡ್ಡ ದೊಡ್ಡ ಹೋಟೆಲುಗಳಲ್ಲಿ ಬಳಸಲಾಗುತ್ತದೆ. ಈ ಕಲೆಗೆ ಯಾವುದೇ ಸಂಸ್ಕೃತಿಕ ಹಕ್ಕುದಾರಿಕೆಯನ್ನು ಆಯಾ ಬುಡಕಟ್ಟು ಸಮುದಾಯ ಕೇಳುವಂತಿಲ್ಲ. ಹಸೆ ಕಲೆಯನ್ನು ಕಲಿತ ಆಧುನಿಕ ಕಲಾವಿದರು, ಮೂಲ ಹಸೆ ಕಲಾವಿದರು ಬೆಚ್ಚಿಬೀಳುವಂತೆ ಚಿತ್ರಿಸುತ್ತಾರೆ. ಆದರೆ ಅದೇ ಹಸೆ ಕಲೆಯನ್ನು ಮಾಡುವ ಸಮುದಾಯಗಳು ಉಸಿರುಗಟ್ಟಿ ಬದುಕುತ್ತಿರುತ್ತವೆ. ರಾಜಧಾನಿ ಬೆಂಗಳೂರಿನಲ್ಲಿಯೇ ಕರ್ನಾಟಕದ ಎಲ್ಲಾ ಜನಪದ ಕಲಾಪ್ರಕಾರದ ತಂಡಗಳು ಸಿಗುತ್ತವೆ. ಆಯಾ ತಂಡಗಳು ಕರ್ನಾಟಕದ ಬೇರೆ ಬೇರೆ ಊರುಗಳ ಹೆಸರಿನ ಬ್ಯಾನರ್ ಹಿಡಿದು ಪ್ರದರ್ಶನ ಕೊಡುತ್ತವೆ. ಅಲ್ಲಿಗೆ ಕರ್ನಾಟಕದ ಪ್ರಾದೇಶಿಕತೆಯನ್ನು ಮುಚ್ಚಿಹಾಕುವ ಪ್ರಯತ್ನ ಯಶಸ್ವಿಯಾಗಿ ಮುಗಿಯುತ್ತದೆ. ಸ್ಟಾರ್ ಹೋಟಲುಗಳಲ್ಲಿ ರಾಗಿ ಮುದ್ದೆ ಮೆಣಸಿನಕಾಯಿ ಚಟ್ನಿ ತಿನ್ನುವ ಮೂಲಕ ತಾನು ಜನಪದ ಆಹಾರ ಕ್ರಮವನ್ನು ಬೆಂಬಲಿಸುತ್ತೇನೆ, ಎಂದು ಸೋಗು ಹಾಕುವಂತಹ ಕೃತಕತೆಯ ರೂಪದಲ್ಲಿ ಜಾನಪದ ಕಲೆಗಳು ಬಳಕೆಯಾಗುತ್ತಿವೆ.
ಜನಪದ ಕಲೆಗಳು ದೊಡ್ಡ ದೊಡ್ಡ ಉತ್ಸವದ ಮೆರವಣಿಗೆಯಲ್ಲಿ ರಂಗೇರುತ್ತವೆ. ಎರಡು ಮೂಡು ಕಿಲೋಮೀಟರ್ ಮೆರವಣಿಗೆಯಲ್ಲಿ ಜನಪದ ಕಲಾವಿದರೆಲ್ಲಾ ನೀರಡಿಸಿ ನೀರಿಗಾಗಿ ತಡಕಾಡುತ್ತಾರೆ. ಆದರೆ ಅವರಿಗೆ ನೀರು ಕೊಡುವವರು ಯಾರೂ ಇರುವುದಿಲ್ಲ. ಆದರೆ ಅವರ ಒಂದು ದಿನಪೂರ್ತಿ ಮೆರವಣಿಗೆಗೆ ಸಿಗುವ ಸಂಭಾವನೆ ಐದು ಸಾವಿರವೋ ಹತ್ತು ಸಾವಿರವೋ ಇರುತ್ತದೆ. ಇದು ಇಡೀ ಟೀಮಿಗೆ ಕೊಡುವ ಸಂಭಾವನೆ. ಅದೇ ಸಿನೆಮಾ ಗಾಯಕನೊಬ್ಬ ತನ್ನ ತಂಡದೊಂದಿಗೆ ಹತ್ತಾರು ಹಾಡುಗಳ ಒಂದುಗಂಟೆಯ ಕಾರ್ಯಕ್ರಮಕ್ಕೆ ಕನಿಷ್ಟ ಇಪ್ಪತ್ತು ಲಕ್ಷದ ಸಂಭಾವನೆ ಪಡೆಯುತ್ತಾನೆ. ಕ್ಲಾಸಿಕಲ್ ಮ್ಯೂಜಿಕ್ ಕಲಾವಿದರನ್ನು ಸ್ಟಾರ್ ಹೋಟೆಲುಗಳಲ್ಲಿ ಉಳಿಸಲಾಗುತ್ತದೆ. ಆದರೆ ಅದೇ ಜನಪದ ಕಲಾವಿದರು ಉಳಿಯಲು ಬಯಲೇ ಆಲಯವಾಗಿರುತ್ತದೆ. ಇದರ ವಿರುದ್ಧ ಸಿಡಿದೇಳುವ ಗುಣ ಸ್ವತಃ ಈ ಕಲಾವಿದರಿಗೆ ಇರುವುದಿಲ್ಲ. ಅಥವಾ ಹಾಗೆ ವಿರೋಧಿಸಿದರೆ ನಮ್ಮ ತಂಡವನ್ನು ಮುಂದಿನ ಕಾರ್ಯಕ್ರಮಕ್ಕೆ ಕರೆಯುವುದಿಲ್ಲ ಎಂಬ ಅಳುಕು ಆ ಕಲಾವಿದರನ್ನು ಭಾದಿಸುತ್ತದೆ.
ಜನಪದ ರೂಪಕ ಪ್ರತಿಮೆಗಳನ್ನು ಖಾಸಗಿ ಒಡೆತನದ ಜನರು ತನ್ನ ವ್ಯಾಪಾರದ ಭಾಗವಾಗಿ ಬಳಸುತ್ತಾರೆ. ಶಿಕ್ಷಣವನ್ನು ವ್ಯಾಪಾರವನ್ನಾಗಿಸಿದ ಕೆಲವರು ಹಮ್ಮಿಕೊಂಡ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಜನಪರತೆಯ ಮುಸುಕು ಹಾಕಲು ಜಾನಪದ ಪರಂಪರೆಯನ್ನು ಬಳಸುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ವಸ್ತುಗಳನ್ನು ಪ್ರಚಾರ ಮಾಡಲು ಜನಪದ ಕಲೆ, ಕಥನವನ್ನು ಬಳಸಿಕೊಂಡು ಜಾಹೀರಾತನ್ನು ಮಾಡುವುದಕ್ಕೂ ಇದಕ್ಕೂ ವ್ಯತ್ಯಾಸವಿಲ್ಲ. ಹೀಗೆ ಜೀವ ವಿರೋಧಿಗಳು ತಮ್ಮ ವ್ಯಾಪಾರವನ್ನೂ, ಸಿರಿವಂತಿಕೆಯನ್ನು ಹೆಚ್ಚಿಸಿಕೊಳ್ಳಲು ಸಾಂಸ್ಕೃತಿಕ ಮುಖವಾಡ ಹಾಕಲು ಜಾನಪದ ಕಲೆ ಮತ್ತು ಪರಂಪರೆಯನ್ನು ಬಳಸಿಕೊಳ್ಳುತ್ತಾರೆ. ಇದರ ಸೂಕ್ಷ್ಮತೆಯನ್ನು ಅರಿಯದವರು ಇದನ್ನೇ ಜಾನಪದದ ಬಗೆಗಿನ ಅಭಿಮಾನವನ್ನಾಗಿ ಹೊಗಳುತ್ತಾರೆ. ಇಂತವರ ಹೊಗಳಿಕೆಯಿಂದಾಗಿ ಸಾಂಸ್ಕೃತಿಕ ಮುಖವಾಡ ಹಾಕಿದವರು ಸಂತಸದಿಂದ ಬೀಗುತ್ತಾರೆ. ಇಂತಹದ್ದೊಂದು ಪ್ರಕ್ರಿಯೆ ಕರ್ನಾಟಕದಲ್ಲಷ್ಟೇ ಅಲ್ಲ ಭಾರತದಾದ್ಯಂತ ನಡೆಯುತ್ತಿದೆ. ಇಂತಹ ಸೂಕ್ಷ್ಮತೆಗಳನ್ನು ಅಧ್ಯಯನ ಮಾಡಬೇಕಾದ ಜಾನಪದ ಅಧ್ಯಯನಕಾರರು ಮತ್ತದೇ ಸಾಮರಸ್ಯದ ಬಡಕಲು ವ್ಯಾಖ್ಯಾನಗಳಿಗೆ ಜೋತು ಬಿದ್ದು ತೇಲಾಡುತ್ತಿದ್ದಾರೆ.
ಈಗಲೂ ಪ್ರತಿರೋಧವನ್ನು ಅಡಗಿಸಿಕೊಂಡ ಜಾನಪದ ಪರಂಪರೆಯನ್ನು, ಕಲೆಯನ್ನು ಹೀಗೆ ಯಾರು ಬೇಕಾದರೂ ಬಳಸಿಕೊಳ್ಳಲು ಸಾಧ್ಯವಾಗದು. ‘ಹಲಗೆ’ ಅಥವಾ ‘ತಮಟೆ’ ಎನ್ನುವ ವಾದ್ಯ ದಲಿತರ ಅಸ್ಮಿತೆಯಾಗಿದೆ. ಈಗಲೂ ಈ ಹಲಗೆಯ ಸದ್ದು ಪ್ರತಿರೋಧದ ಸದ್ದಿನಂತೆಯೇ ಕಾಣುತ್ತದೆ. ಹೈದರಾಬಾದ್ ಕರ್ನಾಟಕದಲ್ಲಿ ಹಲಗೆ ಬಾರಿಸದೆ ಇರುವುದೂ ಕೂಡ ಪ್ರತಿಭಟನೆಯ ಸಂಕೇತವಾಗಿದೆ. ಹಬ್ಬ ಜಾತ್ರೆಗಳಲ್ಲಿ ನಾವೇ ಯಾಕೆ ಹಲಗೆ ಬಾರಿಸಬೇಕು ? ಎನ್ನುವ ಪ್ರಶ್ನೆ ದಲಿತರಲ್ಲಿ ಹುಟ್ಟಿದ ಕಾರಣ ಇಂತಹ ಕಡೆ ಹಲಗೆ ಮೌನವಾಗಿ ಪ್ರತಿಭಟಿಸಿದೆ. ಆದರೆ ಅದೇ ಹಲಗೆ ದಲಿತ ಹೋರಾಟಗಳಲ್ಲಿಯೂ ಬಳಕೆಯಾಯಿತು. ಇಂತಹ ಕಡೆ ಹೋರಾಟದ ಕೂಗಿಗೆ ಧ್ವನಿಯಾಗಿಯೂ ಅದರ ಸದ್ದು ಮಿಳಿತವಾಗಿದೆ. ಹೀಗಾಗಿ ಈ ಹಲಗೆಯನ್ನು ಒಂದು ಜಾನಪದ ಕಲೆ ಎಂದು ಗುರುತಿಸಿದ್ದು ಕಡಿಮೆ. ಅಥವಾ ನಮ್ಮ ಯಾವ ಜಾನಪದ ಉತ್ಸವಗಳಲ್ಲೂ ಹಲಗೆಯನ್ನು ಬಳಸಿಕೊಳ್ಳುವುದು ಕಡಿಮೆ. ಕಾರಣ ಈ ವಾದ್ಯ ದಲಿತರದು ಎನ್ನುವುದು ಎಷ್ಟು ಸತ್ಯವೋ, ಅದು ಪ್ರತಿಭಟನೆಯ ಸಂಕೇತವಾಗಿದೆ ಎನ್ನುವುದೂ ಅಷ್ಟೇ ಸತ್ಯ.
ಹಾಗಾಗಿ ಇಂದು ಜಾನಪದ ಕಲೆ ಪರಂಪರೆಯನ್ನು ಶೋಷಕ ಸಮುದಾಯಗಳು ಬಳಸಿಕೊಂಡು ಹುಸಿ ಜನಪರತೆಯ ಮುಸುಕು ಹಾಕಲು ಸಾಧ್ಯವಾಗದಂತೆ ವಿವರಿಸುವ ಅಗತ್ಯವಿದೆ. ಅಂತೆಯೇ ಈಗಾಗಲೆ ಇರುವ ಜಾನಪದ ಸಾಮರಸ್ಯದ ವಿಶ್ಲೇಷಣೆಗಳನ್ನು ಒಡೆದುಕಟ್ಟುವ ಅಗತ್ಯವೂ ಇಂದು ಹೆಚ್ಚಾಗಿದೆ. ಜಾನಪದ ಸಾಹಿತ್ಯವನ್ನು ಮರುಓದಿಗೆ ಒಳಪಡಿಸಿ, ಹೊಸ ಬಗೆಯ ಸಾಮಾಜಿಕ ನ್ಯಾಯದ, ಅಂಬೇಡ್ಕರ್ ಹೇಳುವ ಸಾಂಸ್ಕೃತಿಕ ಸಂವಿಧಾನದ ನೆಲೆಯ ವಿಶ್ಲೇಷಣೆ ಮಾಡುವ ಜರೂರಿದೆ.

ಕಾಮೆಂಟ್‌ಗಳಿಲ್ಲ: