ಗುರುವಾರ, ಜನವರಿ 9, 2014

ಹುಲಿಯ ಹಾಡು

ಹುಲಿಯ ಹಾಡು





ಡಾ. ಕೆ.ವೈ.ನಾರಾಯಣಸ್ವಾಮಿ


ಧರಣಿ ಮಂಡಲ ಮಧ್ಯದೊಳಗೆ
ಮೆರೆವ ಕರ್ನಾಟ ದೇಶದಿ
ಸತ್ಯವಾಕ್ಯಕೆ ಮೆಚ್ಚಿ ಮಡಿದ
ಹುಲಿಯ ಕತೆಯನು ಹೇಳ್ವೆನು

ಕಾಡಿನ ಹುಲಿ ಮರಿಯು ನಾನು
 ತಾಯಿ ಇಲ್ಲದ ತಬ್ಬಲಿ
ಕಾಡಲೊಂಟಿಯಾಗಿ ನಾನು
ನೊಂದ ಪರಿಯನು ಪೇಳ್ವೆನು

ಅಣ್ಣಗಳಿರಾ ಅಕ್ಕಗಳಿರಾ
ಆಡಿ ಪಾಡುವ ಕಂದಗಳಿರಾ
ಒಂದು ಗಳಿಗೆ ಮತಿಯ ನೀಡಿ
ನನ್ನ ಬಿನ್ನಹ ಕೇಳಿರಿ

ಕಾಡಿನೊಳಗಡೆ ಕಾಳಿಂಗನೆಂಬ
ಗೊಲ್ಲಗೌಡನು ಜೀವಗಳನು
ಆಲನೆಪಾಲನೆ ಮಾಡಿಕೊಂಡು
ಸುಖದಿ ಅಲ್ಲಿರುತ್ತಿದ್ದನು

ಮುಗಿಲು ಮೇಯೊ ಬೆಟ್ಟ ಆಕಡೆ
ಪಾತಾಳ ಆಳ ಕಣಿವೆ ಈಕಡೆ
ನಟ್ಟ ನಡುವೆ ಹುಲ್ಲು ಗಾವಲು
ಎಂಥ ಚಂದವೊ ಕಾನನ.


ಗುಡ್ಡವೆರಡರ ಮಧ್ಯದೊಳಗೆ
ದಟ್ಟ ಕಾಡಿನ ನಟ್ಟ ನಡುವಲಿ
ಇದ್ದಿತೊಂದು ಪೊಟರೆ ಅಲ್ಲಿ
ಅದುವೆ ನನ್ನಯ ಗವಿಮನೆ.

ಅಲ್ಲಿ ಅರ್ಬುದ ನೆಂಬ ಹುಲಿಯು
ತನ್ನ ಮರಿಗಳ ಸಾಕಿಕೊಂಡು
ಆಟ ಪಾಟವ ಆಡಿಕೊಂಡು
ಅಡವಿಯೊಳಗೆ ಇದ್ದಳು.

ಹಸಿದರುಂಟು ಬೇಟೆಯಾಟವು
ಜೊನೆಯ ಒಳಗಿನ  ನೀರೆ ಜೇನು
ಕನಸಿನಂತೆಯೆ ಕಳೆಯುತ್ತಿದ್ದವು
ಹಗಲು ಇರುಳಿನ  ದಿನಗಳು.

ಒಂದು ದಿವಸ ಹುಲಿ ಮರಿಯನು
ಬೆಟ್ಟ ಕಿಬ್ಬೆಗೆ ಕರೆದು ತಂದಳು
ಕಾಡ ಬಯಲನು ದಿಟ್ಟಿಸೆಂದಳು
  ಜೀವಜಂತುನು ತೋರಿಸಿ

ಚಿಗುರು ಹುಲ್ಲನು ಮೇಯುತಿದ್ದವು
ತಿಳಿಯ ಜಲವನು ಕುಡಿಯುತಿದ್ದವು
ಕಂಡು ಅವುಗಳ ಚಲನವಲನ
ಹಸಿವು ಕೂಗಿ ಕರೆಯಿತು


ಒಂದು ನಿಮಿಷ ಮಗುವೆ ಕೇಳು
ಹಸಿವೆಗೆಷ್ಟೋ ಅಷ್ಟೇ ಸಾಕು
ಕೊಲ್ಲಬಾರದು ಆಸೆಯಿಂದ
ಎಂದು ತಾಯಿ ಉಲಿಯಿತು.

ಹಸಿಗೂಸನು ಕಾಡಬಾರದು
ಬಸುರಿಂiiನ್ನು ಮುರಿಯಬಾರದು
ಒಡಲು ತುಂಬಿರುವಾಗ ಕಂದ
ಜೀವಹಾನಿಯು ಕೂಡದು

ಮೀರಿದರೆ ಆ ಬೇಟೆ ನಿಯಮ
ಮೀರಿದರೆ ಆ ಕಾಡ ಕಟ್ಟಳೆ
ತಪ್ಪದಣ್ಣ ದೈವ ನಿಂದನೆ
ಮರೆಯದಿರು ನೀ ಕಂದನೆ

ಬಿಸಿಲು ಬಾಡಿ ಮಳೆಯು ಮೂಡಿ
ಮೂರು ತಿಂಗಳು ಚಳಿಯು ಕಾಡಿ
ಹಗಲು ಇರುಳಿನ ಗೊಡವೆ ಇಲ್ಲ
ಸರಿದು ಹೋದವು ಋತುಗಳು

ಇಂತು ಹೀಗೆ ತೂಗುತಿತ್ತು
ಅಡವಿಯೊಳಗೆ ತಾಯ ತೊಟ್ಟಲು
ಒಂದು ದಿವಸ ಬೆಳಗು ಹರಿಯಲು
ಹುಲಿಯ ಘರ್ಜನೆ ಕೇಳಿತು.


ಕಣ್ಣ ಬಾಗಿಲು ತೆರೆದುಕೊಂಡು
ನಿದ್ದೆ ಓಡಿತು ಎತ್ತಲೋ
ಬೆಟ್ಟ ದನಿಯು ಸೆಲೆಗೊಳ್ಳಲು
ಬೆಚ್ಚಿ ಬಿದ್ದನು ಗೌಡನು

ಹಟ್ಟಿಯಾಚೆಗೆ ಬಂದ ಅವನು
ದುಷ್ಟ ವ್ಯಾಘ್ರ ಎಂದು ಹಳಿದು
ಹುಲಿಯು ಕೂಡ ತಾಯಿ ಎಂಬ
ಸರಳ ಸತ್ಯವ ಮರೆತನು.

ಅಮ್ಮ ಹಸಿವು ತಾಳಲಾರೆ
ಗಳಿಗೆ ಇನ್ನು ನಿಲ್ಲಲಾರೆ
ಎಂದು ಅಮ್ಮನ ಕಾಡಿಸುತ್ತಾ
ನೊಂದು ನುಡಿಯಿತು ಹುಲಿಮರಿ

ಜಿಂಕೆ ಬೇಕೆ ಮೇಕೆ ಬೇಕೆ
ಕಾಡು ಹಂದಿ ಕೋಣ ಬೇಕೆ
ಏನು ಬೇಕು ತಿನ್ನಲೀಗ
ತಾಯಿ ಅಂದಳು ತವಕದಿ

ಹಾರಿ ನೋಡಲು ಸುತ್ತ ಮುತ್ತಾ
ದೂರ ಬಯಲೊಳು ಮೇಯುತ್ತಿದ್ದ
ಗೋವನೊಂದನು ತೋರಿಸುತ್ತಾ
ಕೊಂದು ಕೊಡುವೆನು ಎಂದಿತು.


ಕಂದ ಬಾರೋ ಹಿಂದೆ ಹಿಂದೆ
ಗೋವು ಬರುವ ದಾರಿಯಲ್ಲಿ
ಅಡ್ಡಗಟ್ಟಿ ನಿಂತಿತಲ್ಲೆ
ಹೊಂಚು ಹಾಕುತ್ತಾ ಹುಲಿಯದು.

ಹುಲಿಯ ವಾಸನೆ ಬಡಿದು ಮೂಗಿಗೆ
ಚೆದರಿ ಹೋದವು ಹಸುಗಳೆಲ್ಲ
ಯಾವ ನೆನಹೋ ಹಗಲಕನಸೋ
ಹಸುವದೊಂದು ಬಂದಿತು.

ಸಾವಿನಂತಹ ಹುಲಿಯ ಕಂಡು
ಪ್ರಾಣಗಂಡವ ಮನನಗೊಂಡು
ದೈವವನ್ನ ಮನದಿ ನೆನೆದು
ಹುಲಿಗೆ ಹಸು ಇಂತೆಂದಿತು.

ಕೊಂದು ತಿನ್ನೋ ಹುಲಿಯೇ ಕೇಳು
ಪುಣ್ಯಕೋಟಿ ಗೋವು ನಾನು
ದೊಡ್ಡಿಯೊಳಗೆ ಕಂದನಿರುವನು
ಹಸಿದು ದಾರಿಯ ಕಾಯುತಾ.

ಒಂದು ನಿಮಿಷ ಮೊಲೆಯ ಕೊಟ್ಟು
ಕೊನೆಯ ಬಾರಿಗೆ ಮುತ್ತನಿಟ್ಟು
ಅಕ್ಕತಂಗಿಯರೊಪ್ಪಿಸಿ ನಾ
ಬಂದು ಸೇರುವೆನಿಲ್ಲಿಗೆ


ಹಸಿದೆ ವೇಳೆಗೆ ಸಿಕ್ಕ ನಿನ್ನನ್ನು
ವಶವ ಮಾಡದೆ ಬಿಡುವರೇನು
ಹೋದ ಮೇಲೆ ಮತ್ತೆ ಬರುವೆಯಾ
ನಂಬೆನು ನಾ ನಿನ್ನನ್ನು

ಸತ್ಯವೆ ನನ್ನ ತಂದೆ ತಾಯಿ
ಸತ್ಯವೇ ನನ್ನ ಬಂದು ಬಳಗ
ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.

ಪುಣ್ಯಕೋಟಿಯ ಮಾತು ಕೇಳಿ
ಮರಿಯ ಗುಂಡಿಗೆ ಕರಗಿ ಹೋಗಿ
ಅಮ್ಮ ಕಳಿಸೇ ಅವಳನಟ್ಟಿಗೆ
ಮೊಲೆಯ ಕೊಟ್ಟು ಮರಳಲಿ.

ತುಂಬಿ ಬಂದಿತು ಕಣ್ಣ ಕೋಡಿ
ಮರಿಯ ಮುಖವನು ಒಮ್ಮೆ ನೋಡಿ
ಹಾಗೆ ಆಗಲಿ ಹೋಗಿ ಬಾರೆಂದು
ಹುಲಿಯು ಹಾದಿಯ ಬಿಟ್ಟಿತು.

ಪುಣ್ಯಕೋಟಿ ಹೋಗಲತ್ತಾ
ಅಮ್ಮ ಹಸಿವು ಎನ್ನಲಿತ್ತಾ
ಮೊಲೆಯನಿತ್ತು ಮೈದಡವಿ
 ಒಲುಮೆಯಿಂದ ಅಪ್ಪಿತ್ತು.

ಹೊತ್ತು ಇಳಿಯಿತು ನೆತ್ತ್ತಿಯಿಂದ
ಪುಣ್ಯಕೋಟಿಯು ಬಾರದಿನ್ನು
ನಡಿಯೋ ಗುಹೆಗೆ ಕಂದ ಎಂದು
ತಾಯಿ ಹುಲಿಯು ಅಂದಿತ್ತು.

ಕೊಟ್ಟ ಮಾತಿಗೆ ತಪ್ಪಲಾರದು
ಕೆಟ್ಟಯೋಚನೆ ಮಾಡಲಾರದು
ಬಂದೇ ಬರುವೆನು ಅಂದ ಹಸುವು
ಬರುವುದೇನೋ ನೋಡುವಾ

ಗುಡ್ಡವೇರಿ ನೋಡಲತ್ತ
ಕಾಣುತಿತ್ತು ಗೊಲ್ಲ ದೊಡ್ಡಿ
ತನ್ನ ತಾಯಿಯ ಅಡ್ಡಗಟ್ಟಿತು
ಅಳುತಲಿ ಹಸುಕಂದನು.

ಕಣ್ಣನೊರೆಸಿ ಮುದ್ದು ಮಾಡಿ
ಹೊರಟು ನಿಂತಿತು ಪುಣ್ಯಕೋಟಿ
ಬಾರ ಹೃದಯವ ಹೊತ್ತುಕೊಂಡು
ಸಾವ ಗೆದ್ದ ಗೋವದು.

ಖಂಡವಿದಿಕೋ ಮಾಂಸವಿದಿಕೋ
ಗುಂಡಿಗೆಯ ಬಿಸಿ ರಕ್ತವಿದಿಕೋ
ಇದೆಲ್ಲವನು ಉಂಡು ವ್ಯಾಘ್ರನೆ
ನೀನು ಸಂತಸದಿಂದಿರು.


ಯಾಕೆ ಬಂದೆ ಎಲೆ ಮರುಳೆ
ಸಾವನರಸಿ ಬರುವರೇನೇ?
ಕಂದನನು ಹೇಗೆ ಬಿಟ್ಟು ಬಂದೆ
ಎನು ಹೇಳಿತು ಕಂದನು?

ಅಮ್ಮ ನೀನು ಹೋಗಲೇಕೆ
ನನ್ನ ತಬ್ಬಲಿ ಮಾಡಲೇಕೆ
ಹೋಗಬೇಡ ಹುಲಿಯ ಬಳಿಗೆ
ನೊಂದು ಕಂದ ನುಡಿಯಿತು.

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಇನ್ನು ಇವನು ನಿಮ್ಮ ಕಂದನು
ಕಾಯಿರಿವನ ಜತನದಿ.

ಭಾಷೆಗೊಂಡು ಬಂದೆನಿಲ್ಲಿ
ಉಪ್ಪಿನ ಋಣ ತೀರಿತಿನ್ನು
ತಡವ ಮಾಡದೆ ಕೊಂದು ತಿನ್ನು
ಹಸುವು ಅರಿಕೆಯ ಮಾಡಿತು.

ಗೋವ ಮಾತನು ಹುಲಿಯು ಕೇಳಿ
ನೋವ ನುಡಿಯಲಿ ತಂದುಕೊಂಡು
ಮರಿಯ ಕಣ್ಣನು ನೋಡುತಾಗ.
ತಾಯಿ ಹುಲಿ ಇಂತೆಂದಿತು.


ಕೊಂದು ನಿನ್ನನ್ನು ತಿನ್ನಲಾರೆ
ದೈವ ದ್ರೋಹವ ಮಾಡಲಾರೆ
  ಒಡಹುಟ್ಟು ನೀ ಎನಗೆ
ಹೋಗು ಕಂದನಲ್ಲಿಗೆ

ಕೊಟ್ಟ ಮಾತನು ಉಳಿಸಿಕೊಂಡು
ಕಣ್ಣು ತೆರೆಸಿದೆ ನೀ ಎನಗೆ
ದೈವದಂತೆ ನಿನ್ನ ಮೂರುತಿ
ಹಬ್ಬಲಿ  ನಿನ್ನ ಕೀರುತಿ

ಕೊಲ್ಲಲಾರೆನು ತಾಯಿಗಳ
 ಮಾಡಲಾರೆನು ತಬ್ಬಲಿಗಳ
ಇನ್ನು ಮುಂದೆ ಎಂದಿಗೂ ನಾ
ಇದೇ ನನ್ನ ಶಪಥವು

ಹುಲಿಯ ಮಾತ ಕೇಳಿ ಹಸವು
ಹುಲಿಯ ಕಾಲಿಗೆ ಎರಗಿ ಗೋವು
ತಾಯ ನೆನಹು ಬಂದಿತೆಂದು
ಕಂದನನತ್ತ ಓಡಿತು.

ಕೊಂದು ತಿನ್ನೋ ಹುಲಿಯಾದರು
ಹುಲ್ಲು ತಿನ್ನೋ ಗೋವಾದರೂ
ಅಮ್ಮನೆಂಬುದೇ ಇಳೆಯ ದೈವ
ತಾಯ ಹುಲಿ ಮರಿ ತಬ್ಬಿತು.



ಕಂದ ನಡಿಯೋ ಕತ್ತಲಿಳಿಯುತು
ಗುಹೆಯ ದಾರಿ ಬಲು ಕಡಿದು
ಇರುಳಿನಲ್ಲಿ ಬೇಟೆಗಾರ
ಹೊಂಚಿ ಸಂಚನು ಹೂಡುವ

ಎದೆ ತುಂಬಿ ಬಂದಂತೆ
ಹುಲಿಯ ತನವ ನೀಗಿದಂತೆ
ಚಂದ್ರನುಣ್ಣಿಮೆ ಚೆಲ್ಲುತಿರಲು
ನಡೆದವು ಅವು ಗವಿಯೆಡೆ

ಬೆಳಕಿನ ಆ ಮರೆಯೊಳಗೆ
ಕಾಳ ಕತ್ತಲೆ ಇರುವ ಹಾಗೆ
ಪುಣ್ಯಕೋಟಿಯ ಬೆನ್ನೊಳಗೆ
ಬಂದಿದ್ದ ಗೊಲ್ಲಗೌಡನು

ದುಷ್ಟಯೋಚನೆ ಮಾಡಿದ್ದ
ತೂಪಾಕಿಯನು ತಂದಿದ್ದ
ಮದ್ದುಗುಂಡು ತುಂಬಿಸಿದ್ದ
ಗೊಲ್ಲನಲ್ಲವೋ ಕಾಳಿಂಗ

ಮಡುವಿನಲ್ಲಿ ಶ್ರೀಪಾದವು
ಸೋಕಿದರು ಕರಗಿರಲಿಲ್ಲ
ಮನದ ವಿಷವು ತೀರಿಲಿಲ್ಲ
ಕಲ್ಲಾಯಿತು ಗುಂಡಿಗೆ


ತಾಟಿ ಮರದ ಮರೆಗೆ ನಿಂತ
ಶ್ರೀರಾಮನ ತೆರದಿ ಗೊಲ್ಲ
ಗುಂಡನಾರಿಸಿ ಗುಂಡಿಗೆ ಸೀಳಿ
ಪಾಪ ಹುಲಿಯನು ಕೊಂದನು

ಅಮ್ಮ ನಿನ್ನ ಕೊಂದರೇಕೆ?
ನನ್ನ ತಬ್ಬಲಿ ಮಾಡಲೇಕೆ?
ಪಾಪ ಎಂದರೆ ಪ್ರಾಣತೆಗೆವರೆ
ಯಾರು ನಮಗೆ ಹಿತವರು?

ಹುಲಿತನವನು ಬಿಟ್ಟ ಮೇಲೆ
ಉಳಿಗಾಲವಿಲ್ಲ ಹುಲಿಗೆ
ಕರುಣೆಯು ತರವಲ್ಲ ಕಂದನೆ
ಕಾಡೊಳಗೆ ಹುಲಿಯಂದಿತು.

ಸವಿಯಲ್ಲವೋ ಸಕ್ಕರೆಯೂ
ಬಿಳುಪೆಲ್ಲವು ಹಾಲೆಲ್ಲವು
ಹೋಗು ಗವಿಯೊಳಗೆಂದು
ಹುಲಿಯು ದೂಡಿತು ಮರಿಯನು

ಉರುಳಿ ಬಿದ್ದಿತು ತಾಯಿ ಹುಲಿಯು
ಅಯೋ ಎಂದಿತು ಕಾಡುಮೇಡು
ಪಾತಳವಿತ್ತು ಕಣಿವೆ ಕೆಳಗೆ
ಕಡಿದು ಕಣಿವೆಯ ದಾರಿಯು

ಸತ್ತ ಹುಲಿಯನು ಕಂಡ ಗಳಿಗೆ
ಸತ್ಯವಾಕ್ಕೆಕೆ ಮೆಚ್ಚಿ ಹುಲಿಯು
ತನ್ನ ಪ್ರಾಣವ ಬಿಟ್ಟಿತೆಂದು
ಪುಣ್ಯಕೋಟಿಯು ನಂಬಿತು.

ಮೋಸದಿಂದ ಹುಲಿಯ ಕೊಂದವ
ಕಾಳಿಂಗ ಗೊಲ್ಲನೆಂಬ
ಸತ್ಯ ಸಂಗತಿ ತಿಳಿಯಲಿಲ್ಲ
ಪುಣ್ಯಕೋಟಿ ಗೋವಿಗೂ

ಬಾಡು ತಿನ್ನುವ ಜೀವವದುವೆ
ದುಷ್ಟ ಮೃಗವು ಎಂದು ದೂರಿ
ಕಣ್ಣು ಕಟ್ಟಿನ  ಕತೆಯ ಕಟ್ಟಿ
ಕೊಂದರೋ ಹುಲಿ ಸಂತತಿ

ಕೊಂದು ತಿನ್ನುವುದಲ್ಲ ಕರ್ಮ
ಬೇಟೆಯೇ ನಮ್ಮ ಬಾಳ ಧರ್ಮ
ಹುಲ್ಲು ತಿನ್ನುವ ಹುಲಿಯ ಇನ್ನು
ಹುಟ್ಟಿಸಲಿ ಆ ದೈವವು

ಸತ್ಯವೆಂದರೆ ಪರಮಾತ್ಮನು
ದಯೆಯೆ ಧರ್ಮದ ಸಾರವು
ಸತ್ಯಪಥದಲಿ ನಡೆದ ಹುಲಿಯನು
ಕಪಟದಿಂದ ಕೊಂದರು.



ಅಕ್ಕಗಳಿರಾ ಅಣ್ಣಗಳಿರಾ
ಸಕಲಜೀವ ರಾಶಿಗಳಿರಾ
ಬೇಟೆಯಾಡದೆ ಬದುಕಲೇಗೆ
ನೀಡಿ ಹುಲಿಮರಿಗೆ ಉತ್ತರ.

ಕಾಮೆಂಟ್‌ಗಳಿಲ್ಲ: