ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ.. : ಭಾಗ – 2
- ಎಚ್.ಜಯಪ್ರಕಾಶ್ ಶೆಟ್ಟಿ
ಸೌಜನ್ಯ: ವರ್ತಮಾನ
ನಾವು ಹಸು ಎಂದು ಸಾಮಾನ್ಯಾರ್ಥದಲ್ಲಿ ಕರೆಯುವ ಜಾನುವಾರುಗಳಲ್ಲಿ ವರ್ಗವಾರು-ಹೋರೆಮ್ಮೆ, ಕಡಗಂಟಿ ಎಂಬ ಎರಡು ವಿಭಾಗಗಳಿವೆ. ಎರಡನ್ನೂ ಸೇರಿಸಿ ಗಂಟಿ ಎಂದೇ ಕರೆಯುವ ರೂಢಿ ನಮ್ಮದು. ಹಟ್ಟಿ, ಕೋಳಿಗೂಡು ಮತ್ತು ಬಸಳೆಚಪ್ಪರಗಳಿಲ್ಲದ ಮನೆಗಳೇ ನನ್ನೂರಿನಲ್ಲಿಲ್ಲ. ಮನೆ ಎಂದ ಮೇಲೆ ಗೋಮಯಕ್ಕಾದರೂ ಒಂದು ಹಸು ಇರಲೇಬೇಕೆಂಬ ಅಲಿಖಿತ ಸಂವಿಧಾನವನ್ನು ಅನುಸರಿಸಿಕೊಂಡು ಬಂದ ಊರು ನಮ್ಮದು. ನಮಗೆ ಮನೆಯಿರುವ ಹಾಗೆಯೇ ಗಂಟಿಗಳಿಗೆ ಹಟ್ಟಿ ಇರಲೇಬೇಕು. ಹಟ್ಟಿಯಲ್ಲಿಯೂ ಉತ್ತಮ ಮತ್ತು ಕನಿಷ್ಠ ಎನ್ನುವ ಒಳವಿಭಾಗಗಳುಂಟು. ಹಟ್ಟಿಯ ಒಳವಿನ್ಯಾಸದಲ್ಲಿ ಎದುರು ಭಾಗವನ್ನು ‘ಮುಂದಣೆ’ ಎಂತಲೂ ಹಿಂಭಾಗವನ್ನು ‘ಹಿಂದಣೆ’ ಎಂತಲೂ ಕರೆಯುವುದು ವಾಡಿಕೆ. ಮುಂದಣೆಯಲ್ಲಿ ಕಟ್ಟುವುದಕ್ಕೆ ಯೋಗ್ಯವಾದ ದಳಕಟ್ಟು, ಅಕ್ಕಚ್ಚ್ಟು-ಬಾಯರು ಕುಡಿಯಲು ಬಾಣಿ/ಮರ್ಗಿ ಇವುಗಳ ಸಹಿತ ಆ ಹಟ್ಟಿಯ ಮಟ್ಟಿಗೆ ಅದು ವಿಐಪಿ ಸ್ಟ್ಯಾಂಡ್ ತರಹ ಇರುತ್ತದೆ. ‘ಹಿಂದಣೆ’ ಹೆಸರೇ ಹೇಳುವಂತೆ ಮುಖ್ಯ ಜಾನುವಾರುಗಳ ಬೆನ್ನಿಗೆ ಸಿಕ್ಕಜಾಗದಲ್ಲಿ ಮಲಗುವುದಕ್ಕೆ ಇರುವ ಅವಕಾಶ. ಈ ಅವಕಾಶದಲ್ಲಿ ಕೆಲವೊಮ್ಮೆ ಮುಂದಿನ ಹಸು ಹಿಂದಕ್ಕೆ ಬಂದು ಹಾಕಿದ ಸಗಣಿಯೂ ಇರಬಹುದು. ಇಲ್ಲವೇ ಹುಲ್ಲು ತಿನ್ನುವಾಗಲೆ (ಹೆಣ್ಣು ಹಸುವಾದರೆ) ಹಿಂದಕ್ಕೆ ಚಿಮ್ಮಿಸಿ ಬಿಡುವ ಉಚ್ಚೆಯೂ ಇರಬಹುದು. ಒಟ್ಟಾರೆ ಹಿಂದಣೆ ಎಂದರೆ ನಮ್ಮ ಸಮಾಜದಲ್ಲಿ ದಲಿತರ ಜಾಗ ಇದ್ದಂತೆ. ನಗರದಲ್ಲಿ ಕೊಳೆಗೇರಿ ಇದ್ದಂತೆ. ಇಕ್ಕಟ್ಟಿನಲ್ಲಿಯೇ ಸಿಕ್ಕಿದ್ದನ್ನು ತಿಂದು ಬದುಕಬೇಕು. ಮುಂದಣೆಯಲ್ಲಿ ಕಟ್ಟಲು ಜಾಗವಿಲ್ಲದೆ ಹೋದಾಗ ಮಿಕ್ಕವುಗಳಿಗೆ ಇಲ್ಲಿಯೇ ಜಾಗ ಸಿಕ್ಕಬೇಕು. ಇವುಗಳ ಪರಿಸ್ಥಿತಿಯೆಂದರೆ ತಿನ್ನುವುದರಲ್ಲಿ ಹಿಡಿಯಷ್ಟು ಪಾಲು ಆದರೆ ಅಪಾಯದಲ್ಲಿ ಹಿರಿದಾದ ಪಾಲು. ಯಾರಾದಾದರೂ ಮನೆಯ ಹಗ್ಗಬಿಚ್ಚಿಕೊಂಡ ಬೀಡಾಡಿ ಹಸುಗಳು ಹಟ್ಟಿಗೆ ನುಗ್ಗಿದಲ್ಲಿ ಮೊದಲು ಆಕ್ರಮಣ ಮಾಡುವುದು ಈ ಹಿಂದಣೆಯಲ್ಲಿರುವವುಗಳನ್ನೇ. ಅದಲ್ಲದೆ ಹಟ್ಟಿಗೆ ನುಗ್ಗುವ ಅಪಾಯಕಾರಿ ಪ್ರಾಣಿಗಳು ಮೊದಲು ಎರಗುವುದು ಇವುಗಳ ಮೇಲೆಯೇ. ಇದೊಂದರ್ಥದಲ್ಲಿ ಗಂಟಿಗುರಾಣಿಗಳ ತಾಣ. ಇನ್ನೂ ಒಂದರ್ಥದಲ್ಲಿ ಇದು ಹಟ್ಟಿಯಿಂದ ಹೊರಹಾಕಲೇಬಾಕಾದ ಅನುಪಯುಕ್ತವೆನಿಸಿದವುಗಳ ತಾತ್ಕಾಲಿಕ ತಂಗುದಾಣವೂ ಹೌದು.
ಹಸು ಸಾಕುವುದು ಅಲಂಕಾರಕ್ಕಲ್ಲ ಎಂಬುದನ್ನು ನಾನು ಹೇಳಬೇಕಾಗಿಲ್ಲ. ಆದರೆ ಹಾಗೆ ಸಾಕುವವರೂ ಉಂಟು. ಕಂಬಳದ ಫಲಕ ಗೆದ್ದು ಮೀಸೆ ತಿರುವುದಕ್ಕಾಗಿ ಅಲಂಕಾರಕ್ಕೆಂಬಂತೆ ಸಾಕುವವರಿರುವರಾದರೂ ಅವರುಗಳು ನಮ್ಮ ಜಾಗತೀಕರಣದ ಜಗತ್ತಿನ ಉದ್ಯಮಪತಿಗಳಂತಿರುವವರು. ಕ್ರಿಕೆಟಿಗರನ್ನು ಕೊಂಡುಕೊಂಡು ಆಟವಾಡಿಸಿ ಮೋಜುಮಾಡಬಲ್ಲವರು, ಮೃಗಾಲಯದ ಆನೆಯನ್ನು ದತ್ತುಪಡೆಯಬಲ್ಲವರು ಮತ್ತು ದೇಗುಲ/ಮಠಗಳಿಗೆ ಆನೆದಾನ ಮಾಡಬಲ್ಲವರು. ಅಂತಹ ಅಲಂಕಾರ ಪ್ರಿಯರಾರೂ ನನ್ನೂರಿನಲ್ಲಿ ಇರಲು ಅಂದಿಗೆ ಅವಕಾಶವಿರಲಿಲ್ಲ. ಅವರೆಲ್ಲಾ ಇರುವ ಹೊಲಮನೆ ಉಳುವುದಕ್ಕಾಗಿ, ಚಾಕಣ್ಣು (ಡಿಕಾಕ್ಷನ್) ಬಿಡಿಸಿ ಅದಕ್ಕೊಂದಿಷ್ಟು ಹಾಲು ಬೆರೆಸುವುದಕ್ಕಾಗಿ, ಹೋಟೆಲು ಮನೆಗಳಿಗೆ ಹಾಲು ಹಾಕಿ ಚೂರು ಪಾರು ಕಾಸು ಗಿಟ್ಟಿಸಿ ತಾವು ಬೆಳೆಯದ ಉಪ್ಪು ಮೆಣಸು ಹೊಂದಿಸುವ ದೈನಿಕದ ಒತ್ತಡಕ್ಕಾಗಿ ಹಸು ಸಾಕುತ್ತಿದ್ದರು ಮತ್ತು ಸಾಕುತ್ತಿರುವವರು. ಈ ಒತ್ತಡಕ್ಕಾಗಿಯೂ ಅವರು ವೈಜ್ಞಾನಿಕ ಹೈನುಗಾರಿಕೆ ನಡೆಸಲಾರದ ಸ್ಥಿತಿಯಲ್ಲಿ ಕರಾವಿಗೆಂದು ಸಾಕುತ್ತಿದ್ದುದು ಬಹುವಾಗಿಮಲೆನಾಡು ಗಿಡ್ಡ ಇಲ್ಲವೆ ದೇಸೀ ತಳಿಯ ಕಿರುಗಾತ್ರದ ಅವೇ ಹುಂಡಿ, ಕೆಂಪಿ, ಬುಡ್ಡಿಯಂತಹ ದನಗಳನ್ನು. ವರ್ಷಕ್ಕೊ, ಎರಡು ವರ್ಷಕ್ಕೊ ಕರುಹಾಕುವ ಈ ಹಸುಗಳು, ದಿನಕ್ಕೆ ನಾಲ್ಕೈದು ಸಿದ್ದೆ ಹಾಲು ಕೊಟ್ಟರೆ ಅದೇ ಹೆಚ್ಚು. ಇವು ಹಾಕುವ ಹೆಣ್ಣು ಕರುಗಳನ್ನು ಸಂತಾನವಾಗಿ ಬಳಸಿಕೊಳ್ಳಲು ಸಮಸ್ಯೆಯಿರಲಿಲ್ಲ. ಆದರೆ ಗಂಡುಕರುಗಳು ಮಾವಿನಕಾಯಿ ಗಾತ್ರದವುಗಳೇ ಹೆಚ್ಚಾಗಿರುತ್ತಿದ್ದ ಕಾರಣಕ್ಕಾಗಿ ಉಳುವ ಗುಡ್ಡಗಳನ್ನಾಗಿ ಬಳಸಿಕೊಳ್ಳಲು ಸಾಧ್ಯವಾಗದೆ ಬೆಳೆಯುವ ತನಕ ಕೆಲವೊಂದಿಷ್ಟು ಕಾಲ ಹಿಂದಣೆಯಲ್ಲಿ ಕಟ್ಟಿ, ಅಲ್ಲ್ಲಿಯೇ ಸಗಣಿಯ ಮೇಲೆಯೇ ಹುಲ್ಲುತಳಿದು, ಬಿಟ್ಟು-ಕಟ್ಟಿ ಹೇಗೋ ಅನುಭವಿಸುವಷ್ಟು ಉಪದ್ರವವನ್ನು ಅವುಗಳಿಂದ ಅನುಭವಿಸಿಯಾದ ಮೇಲೆ ಮತ್ತು ಹಿಂದಣೆಯಲ್ಲಿ ಮತ್ತೊಂದನ್ನು ಕಟ್ಟಲೇಬೇಕಾದಾಗ ಇವುಗಳನ್ನು ಸಿಕ್ಕಷ್ಟಕ್ಕೆ ಸಾಗಹಾಕಿ ಯಾವುದಾದರೂ ಒಂದು ಸಣ್ಣ ಖರ್ಚನ್ನು ಸರಿತೂಗಿಸಿಕೊಳ್ಳುತ್ತಿದ್ದುದು ರೂಢಿ. ಕಟ್ಟಿ ಸಾಕಲು ಸಾಧ್ಯವಿಲ್ಲವೆನಿಸಿದಾಗ, ಯಾರು? ಮತ್ತು ಯಾಕೆ? ಕೊಳ್ಳುತ್ತಾರೆ ಎಂಬ ಅರಿವಿದ್ದೂ, ಹಟ್ಟಿಯನ್ನು ವಿಸ್ತರಿಸಲಾರದ, ಮನುಷ್ಯರಂತೆ ಅನುಪಯುಕ್ತ ಮಗುವನ್ನು ಲಿಂಗಪತ್ತೆ ಮಾಡಿ ಭ್ರೂಣಹತ್ಯೆ ಮಾಡುವ ವೈದ್ಯಕೀಯ ರೂಢಿಯೂ ಇರದ ಅವರು ಅವುಗಳನ್ನು ಮಾರಲೇಬೇಕು. ಅವುಗಳು ಎಲ್ಲಿಗೆ ಹೋಗುತ್ತವೆ ಎಂಬ ಅರಿವಿದ್ದೂ ಒಂದೂ ಕಾಸಿಲ್ಲದೆ ಎಲ್ಲಿಗೋ ಹೊಡೆದು ಬರುವುದು ಅವರಿಗೆ ಸಾಧ್ಯವೂ ಇರಲಿಲ್ಲ. ಮಾತ್ರವಲ್ಲ ನನ್ನೂರಿನಲ್ಲಿ ಹಾಗೆ ಹೊಡೆದುಬಂದ ಒಂದೇ ಒಂದು ಉದಾಹರಣೆಯನ್ನು ನಾನು ಕಂಡಿಲ್ಲ. ಆದರೆ ಹಿಂದಣೆಗಳು ಮಾತ್ರ ಹೊಸ ಸದಸ್ಯನಿಗಾಗಿ ಖಾಲಿಯಾಗುತ್ತಿದ್ದುದು ನಿಜ.
ಹಾಗೆಯೇ ಉಳುವುದಕ್ಕಾಗಿ ತರುತ್ತಿದ್ದ ಸಾಕಷ್ಟು ಜಾನುವಾರುಗಳಲ್ಲಿ ಬಾಯ್ಗೂಡಿ ಹಲ್ಲಾದವುಗಳೇ ಹೆಚ್ಚು. 2-3 ಸಾಗುವಳಿ ಮಾಡಿದ ಮೇಲೆ ಬಹುಸಂದರ್ಭಗಳಲ್ಲಿ ಇವುಗಳ ವಿಕ್ರಯವೂ ಮೇಲಿನಂತೆಯೇ ಅನಿವಾರ್ಯ. ಸಣ್ಣ ಬಂಡವಾಳವನ್ನು ಹೂಡಿ ತರುತ್ತಿದ್ದ ಎತ್ತು/ಕೋಣಗಳು ತಮ್ಮಿಂದ ಖಾಲಿಯಾಗುವಾಗ ಒಂದಿಷ್ಟಾದರೂ ಇಡಗಂಟು ಉಳಿಸಿಹೋಗದೇ ಇದ್ದರೆ ಸಣ್ಣ ರೈತರ ಪಾಡು ನಿಲುಗಡೆಗೆ ಬಿದ್ದಂತೆಯೇ. ಅದೇ ತೆರನಾಗಿ ಹಾಲು ಕರೆಯುವ ಮುದಿಹಸುಗಳೂ ತಮ್ಮ ಕರು ಉತ್ಪಾದಿಸುವ ಸಾಮರ್ಥ್ಯ ತೀರಿದ ಮೇಲೆ, ಹಾಲು ಕೊಡಲಾರದ ಸ್ಥಿತಿಯಲ್ಲಿ ಮುಂದಣೆಯಿಂದ ಹಿಂದಣೆಗೆ ಬರಲೇಬೇಕು. ಯಾಕೆಂದರೆ ಕರಾವಿನಚಕ್ರದಲ್ಲಿ ಆ ಮುದಿ ಹಸುವಿನ ಮಗಳಿಗೆ ಹೊಸಜಾಗ ಬೇಕಲ್ಲವೇ? ಇವು ಹಿಂದಣೆಯಲ್ಲಿ ಸಗಣಿ ಮೇಲೆ ಅಷ್ಟಿಷ್ಟು ದಿನ ಕಳೆದು ಖಾಲಿಯಾಗುತ್ತಿದ್ದವು, ಇಲ್ಲವೇ ಮಾರಲ್ಪಡುತ್ತಿದ್ದವು. ಕರು ಹಾಕಲಾರದ ಕರಾವಿನ ದನ, ಎಮ್ಮೆಗಳನ್ನು ಬಂಡವಾಳಕ್ಕಿಂತ ಹೆಚ್ಚಾಗಿ ಮುದಿವಯಸ್ಸಿನಲ್ಲಿ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ವಯಸ್ಸಾದಂತೆ ಬಾಯಿಯ ಹಲ್ಲುಗಳು ಒಂದೊಂದಾಗಿ ಜಾರಿ ಆಹಾರವನ್ನು ಸ್ವಯಂ ಜಗಿದು ನುಂಗಲಾರದ ದುರ್ಬಲ ಸ್ಥಿತಿಯಲ್ಲಿ ಚಂಡೆ ಉಗಿಯುವಂತಾಗುವ ಅವುಗಳ ಪಾಡು ಯಾತನಾದಾಯಕ. ಮೆಂದು ಬರಲಾರದ, ಹಾಕಿದ್ದನ್ನೂ ಚೆನ್ನಾಗಿ ಜಗಿದು ತಿನ್ನಲಾರದ ಜೀರ್ಣಾವಸ್ಥೆಯಲ್ಲಿ, ವಯಸ್ಸಿನ ಪರಿಣಾಮವಾಗಿ ಮೈಮೇಲೆ ಆಗುವ ಗಾಯಗಳು ಬೇರೆ. ಚರ್ಮದ ಮೇಲೆ ಈ ಹಂತದಲ್ಲಿ ಆಗುವ ಗಾಯಗಳು, ಅವುಗಳ ಮೇಲೆ ಕೂತು ಇಪ್ಪಿ ಹಾಕುವ ನೊಣಗಳನ್ನು ಓಡಿಸಿಕೊಳ್ಳುವಲ್ಲ್ಲಿಯೂ ಸೋಲುವ ಚೋಂಕಾಗಿ(ರೋಮಉದುರಿ) ನಿತ್ರಾಣಗೊಂಡ ಬಾಲ ಹಾಗೂ ಅಲ್ಲಾಡಿಸಲಾರದ ಕಿವಿಗಳಿಂದಾಗಿ ಈ ಗಾಯಗಳಲ್ಲಿ ಹುಳುವಾಗಿ ನೆತ್ತರು ಸೋರುವಂತಾಗುತ್ತದೆ. ಬಯಲು ಹಾಗೂ ತೆರದ ಹಟ್ಟಿಯಲ್ಲಿ ಈ ಗಾಯಗಳ ಮೇಲೆ ದಾಳಿಮಾಡುವ ಕಾಗೆಗಳ ಹಿಂಸೆ ನೋಡಿಕೊಂಡಿರುವುದೇ ಯಾತನಾದಾಯಕ. ಅದೂ ಸಹಿಸಿಕೊಂಡು ಅವುಗಳು ಹಟ್ಟಿಯಲ್ಲಿಯೇ ಉಳಿದವೆಂದರೆ ಹಾಲುಕೊಡುವಾಗ ಕಾಮಧೇನುವಾಗಿದ್ದ ಅದೇ ಹಸು ಅಕ್ಷರಶ: ‘ಕಾಡುವಧೇನು’ ಆಗಲೂಬಹುದು. ಮಲಗಿದಲ್ಲಿಂದ ಏಳಲಾರದ ಅವುಗಳನ್ನು ಎಬ್ಬಿಸುವ ಸಲುವಾಗಿ ಅನಿವಾರ್‍ಯವಾಗಿ ಬಾಲವನ್ನು ತಿರುವಲಾಗುತ್ತದೆ. ಕೊನೆ ಕೊನೆಗೆ ಹೀಗೆ ತಿರುವುವ ವೇಳೆ ಉಂಟಾಗುವ ಬಾಲದ ವೇದನೆಗೂ ಎದ್ದು ನಿಲ್ಲುವ ತಾಕತ್ತು ಕಳೆದುಕೊಂಡ ಮೇಲೆ ಅವುಗಳ ಶುಶ್ರೂಷೆಗೆ ಕನಿಷ್ಠ 3-4 ಜನ ನಿಲ್ಲಬೇಕಾದ ಸ್ಥಿತಿ ಉಂಟಾಗಬಹುದು. ಎಮ್ಮೆ, ಕೋಣ, ಎತ್ತುಗಳಾದರೆ ಈ ಸ್ಥಿತಿ ಮತ್ತಷ್ಟು ಸಂಕಟದಾಯಕ. ಆದಾಯವೂ ಇಲ್ಲದೆ ಬಂಡವಾಳವನ್ನೂ ಕಳೆದುಕೊಳ್ಳುತ್ತಾ ಅನಾಥಾಶ್ರಮದಂತೆ ಚಾರಿಟಿಯ ಕೆಲಸ ಮಾಡುವ ಸಾಮರ್ಥ್ಯ ಒಬ್ಬ ಸಾಮಾನ್ಯ ರೈತನಿಗೆ ಇರುವುದು ಸಾಧ್ಯವೇ? ಕೈ ಮೈ ನೆಕ್ಕಿದ ಅದೇ ಹಸು ಈಗ ಇಡಿಯ ಮನೆಯನ್ನೇ ನೆಕ್ಕಿನಾಶ ಮಾಡಿದ ಅನುಭವವಾಗುತ್ತದೆ. ದುರಂತವೆಂದರೆ ಈ ಸ್ಥಿತಿಗೆ ತಲುಪಿದ ಹಸುವನ್ನು ಕೊಂದು ಪಾಪಕಟ್ಟಿಕೊಳ್ಳಲಾರದ ಅವರು ಅದು ಸಾಯುವ ತನಕ ಪಡಬಾರದ ಪಾಡುಪಡುತ್ತಾರೆ. ಹಾಗಾಗಿ ಆ ಸ್ಥಿತಿ ಒದಗದಿರಲಿ ಎಂದು ಮುಂಚಿತವಾಗಿಯೇ ಅದನ್ನು ಹಿಂದಣೆಯಲ್ಲಿ ಕಟ್ಟಿ ಹಟ್ಟಿಯಿಂದ ಹೊರಹಾಕಿ ಹಗುರಾಗಲು ಕಾಯುತ್ತಾರೆ.
ಹಸುಗಳ ಸಾವು ನಮ್ಮ ನಡುವಿನ ನಂಬಿಕೆಯಂತೆ ‘ಹೊಟ್ಟೆಗೆಂಡೆಗೆ ಬೀಳುವ ಪೆಟ್ಟು’. ಹಾಗಾಗಿಯೇ ‘ಹಟ್ಟಿಗೆ ಬೆಂಕಿ ಬೀಳಲಿ’, ‘ಕರುಮರಿ ನಾಶವಾಗಲಿ’, ‘ನಿರ್ಗ್ವಾಮಯ್ ಆಗ್ಲಿ’ ಎಂಬವುಗಳು ನಮ್ಮ ನಡುವಿನ ತೀವ್ರವಾದ ಶಾಪಾಶಯಗಳು (ಸಾಪುಳಿಗಳು). ಹಾಕಿದ ಬಂಡವಾಳ ಹಿಂತಿರುಗಿ ಬಾರದೆ, ಉಳುವ ಜಾನುವಾರು ಹಟ್ಟಿಯಲ್ಲಿಯೇ ಸತ್ತವೆಂದರೆ ಬೇಸಾಯದ ಮೂಲಬಂಡವಾಳಕ್ಕೇ ಪೆಟ್ಟು ಬಿದ್ದಂತೆ. ನನಗೆ ಗೊತ್ತಿರುವ ಹಾಗೆ ನಮ್ಮೂರಿನ ಕಿರುಹಿಡುವಳಿದಾರ ರೈತರೊಬ್ಬರು ಒಂದೇ ಮಳೆಗಾಲದಲ್ಲಿ ಕಾಯಿಲೆಯಿಂದ ಮತ್ತು ಚೇಳುಕಚ್ಚಿ ಎರಡುಜೋಡಿ ಕೋಣಗಳನ್ನು ಬೆನ್ನಿಂದ ಬೆನ್ನಿಗೆ ಕಳೆದುಕೊಂಡ ಪರಿಣಾಮ ಅವರ ಹಟ್ಟಿಯಲ್ಲಿ ಮುಂದಿನ ಆರು ವರ್ಷಗಳ ತನಕ ಉಳುವ ಜಾನುವಾರುಗಳನ್ನು ಕಟ್ಟಲಾಗಿಲ್ಲ. ಕೊನೆಗೂ ಅವರು ಜೋಡುಮಾಡಿದುದು ಒಂದು ಸಾಹಸವೇ ಆಗಿತ್ತು. ಹೇಳಿಕೇಳಿ ಈ ಜನ ಇಂದಿಗೂ ತಾವು ತರುವ ಜಾನುವಾರುಗಳ ಮೇಲೆ ವಿಮೆ ಮಾಡುವ ರೂಢಿ ಹೊಂದಿಲ್ಲ. ಅನೇಕ ಸಂದರ್ಭದಲ್ಲಿ ಕಾಯಿಲೆ ಬಿದ್ದರೆ ದೇವರು-ದಿಂಡರ ಜೊತೆಗೆ ನಾಟಿ ವೈದ್ಯವನ್ನೇ ಅವಲಂಬಿಸಿ ಗಂಟು ಕಳೆದುಕೊಳ್ಳುವವರಿವರು. ಹೀಗಿದ್ದ ಮೇಲೆ ಬಂಡವಾಳದ ಭಾಗಶಃ ಹಿಂಪಡೆಯುವಿಕೆಯೂ ಇಲ್ಲದೆ, ಅಲ್ಲೇ ಕಂತಿಹೋದರೆ (ಮುಳುಗಿದರೆ) ಅವರ ಪಾಡು ಹಕ್ಕಿಯಾಗಿ ಹಾರಬೇಕಷ್ಟೇ.
ನಮ್ಮ ಪರಿಸರದಲ್ಲಿ ಮಳೆಗಾಲದ ಆರಂಭವನ್ನು ಸೂಚಿಸುವ ಅನೇಕ ನೈಸರ್ಗಿಕ ಸಂಗತಿಗಳನ್ನು ಜಾನಪದಲೋಕ ಗುರುತಿಸುತ್ತದೆ. ಅವುಗಳಲ್ಲಿ ಮಳೆಯ ಆರಂಭದವಾರ್ತೆ ತರುವಂತೆ ಕೂಗುವ ‘ಉರಿಯೋ ಅಕ್ಕ’ ಹಾಗೂ ‘ಹೋರ್ ಸತ್ತ್ಹೋಯ್ತೊ’ ಎಂಬ ಹಾಗೆ ಕೂಗುವ ಎರಡು ಹಕ್ಕಿಗಳ ಕೂಗನ್ನು ಮಳೆಗಾಲದ ಖಚಿತ ಮಾಹಿತಿಯೆಂಬಂತೆ ಗಮನಿಸಲಾಗುತ್ತದೆ. ಈ ಹಕ್ಕಿಗಳನ್ನು ಗಂಡ ಹೆಂಡತಿಯರಾಗಿ ಈ ಭಾಗದ ಜನ ಕಥೆಕಟ್ಟಿಕೊಂಡಿದ್ದಾರೆ. ರೈತ ದಂಪತಿ ಎಂಬಂತೆ ಪ್ರಚಲಿತವಿರುವ ಈ ಹಕ್ಕಿಗಳ ಕುರಿತಾದ ಕಥನದ ಮೇರೆಗೆ,-”ಹೋರಿ (ಕೋಣ) ತಂದೂ ತಂದೂ ಸಾಯುತ್ತಲೇ ಹೋದಾಗ, ನೇಲು-ನೊಗ ಅಟ್ಟಕ್ಕೆ ಹಾಕುವಂತಾಗಿ ಮಳೆಗಾಲದ ವ್ಯವಸಾಯ ಮಾಡಲಾರದ ಸ್ಥಿತಿಯಲ್ಲಿ ಬದುಕಲಾಗದ ಹಂತ ತಲುಪಿದ ಬೇಸಾಯಗಾರ ಹಕ್ಕಿಯಾಗಿ ಹಾರಿ ಹೋದನೆಂದೂ, ಅವನ ಬಸುರಿಹೆಂಡತಿ ಗಂಡನಿಲ್ಲದೇ ಹೆರಿಗೆಯಾಗಿ, ಗಂಡನ ಅಕ್ಕನ ಆರೈಕೆ ಪಡೆಯಬೇಕಾಗಿದ್ದವಳು ಅವಳ ಕುದಿನೀರಿನ ಬಿಸಿ ತಾಳಲಾರದೇ ಅವಳೂ ಹಕ್ಕಿಯಾಗಿ ಹಾರಿದಳೆಂ”ದೂ ಕಥೆ. ಈ ಬೇಸಾಯಗಾರ ಸಮಕಾಲೀನ ಸಂದರ್ಭದ ರೈತನ ಆತ್ಮಹತ್ಯೆಯನ್ನು ನೆನಪಿಸುವಂತೆ ಹಕ್ಕಿಯಾಗಿ ಹಾರಿಯೂ ಉಳುಮೆ ಮಾಡಲಾಗದ ಆತ್ಮ ಸಂಕಟವನ್ನು ತೋಡಿಕೊಳ್ಳುವವನಂತೆ ‘ಹೋರ್‌ಸತ್ತ್ಹೋಯ್ತೋ’ ಎಂದು ಕೂಗುತ್ತಾನೆ. ಗಂಡನನ್ನು ಕಳೆದುಕೊಂಡು ಅನಾಥಳಾಗಿ ಅತ್ತಿಗೆಯ ವಂಚನೆಯಿಂದ ಸತ್ತವಳು ಬೀದಿಪಾಲಾದ ಕುಟುಂಬ ಸ್ಥಿತಿಯನ್ನು ಗಂಡನೊಂದಿಗೆ ನೆನೆದುಕೊಳ್ಳುವಂತೆ ‘ಉರಿಯೋ ಅಕ್ಕ’ ಎಂದು ಕೂಗುವ ಮೂಲಕ ಜಾನುವಾರು ಕಳೆದುಕೊಂಡು ನಿರ್ಗತಿಕನಾಗುವ ರೈತನ ದುರ್ಗತಿಯನ್ನು ಪ್ರತಿಧ್ವನಿಸಿಕೊಂಡೇ ಬರುತ್ತಿದ್ದಾಳೆ. ಈ ಕೂಗು ಕೇಳಿದಾಗೆಲ್ಲಾ ನಾವದಕ್ಕೆ ‘ಹೋರ್ ಸತ್ಹೋಯ್ತೋ ನೇಲ್‌ನೊಗ ಅಟ್ಕ್‌ಹಾಕ್ಯೊ’ ಎಂದು ಉಳಿದಭಾಗವನ್ನು ಸೇರಿಸಿ ಹಾಡುತ್ತಿದ್ದೆವು. ಆದರೆ ಆ ಸ್ಥಿತಿ ನಮ್ಮ ಹಟ್ಟಿಯದೇ ಆದಾಗ ನಮಗೆ ಹಾಗೆ ಉಳಿದ ಕೋರಸ್ ಸೇರಿಸುವ ಶಕ್ತಿಯೇ ಇರುತ್ತಿರಲಿಲ್ಲ. ಚಾಲ್ತಿಯಲ್ಲಿರುವ ಈ ಕಥೆಯ ಆಳದಲ್ಲಿರುವುದು ಚಿಕ್ಕಹಿಡುವಳಿದಾರನ ಬಂಡವಾಳದ ಮುಳುಗುವಿಕೆಯಿಂದಾಗುವ ಸಂಸಾರದ ಅನಾಥಸ್ಥಿತಿ. ದುಡಿಮೆಯ ಹತಾರು, ದುಡಿಯುವ ನೆಲ ಕಳೆದುಕೊಳ್ಳುವ ರೈತರಿಗೆ ಒಂದೇ ದಾರಿ ಸಾವು. ಇಂತಹ ಸರಳ ಸತ್ಯಗಳು ಅರ್ಥವಾಗದ ವಾಣಿಜ್ಯೀಕೃತ ಆಸಕ್ತಿಗಳು ಅಭಿವೃದ್ಧಿಯ ಹೆಸರಲ್ಲಿ ರೈತರನ್ನು ಎತ್ತಂಗಡಿ ಮಾಡಿ, ಅವರಿಗೆ ಅವರು ಮಾಡಲಾರದ ಕೆಲಸ/ಉದ್ಯೋಗ ಕೊಡುವ ಮಾತಾಡುತ್ತವೆ. ಹಾಗೆಯೇ ಬಂಡವಾಳ ಹೂತು ಹೋದರೂ ಪರವಾಗಿಲ, ಭಾವನೆಯನ್ನು ಗೌರವಿಸು ಎಂಬ ಶಾಸನ ರೂಪಿಸುವಲ್ಲಿ ಒತ್ತಡ ಹೇರುತ್ತವೆ. ಮೂಲವನ್ನೇ ಕಳೆದುಕೊಳ್ಳುವ ರೈತರು ಮುಂದಿನ ದಿನಗಳಲ್ಲಿ ಮಳೆ ಬರುವುದನ್ನೂ ಎಚ್ಚರಿಸುವ ಭಾಗ್ಯ ಪಡೆಯುವರೆಂಬ ವಿಶ್ವಾಸವಿಲ್ಲ. ಯಾಕೆಂದರೆ ಕನಿಷ್ಠ ಆ ಸಂವೇದನೆಯನ್ನಾದರೂ ದುಡ್ಡು-ಧರ್ಮಗಳ ಅಮಲು ಉಳಿಸಬೇಕಲ್ಲವೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ