ಶುಕ್ರವಾರ, ಜನವರಿ 17, 2014

ದೇಸಿ ತಿಳಿವಿನ ಪ್ರಯೋಗ ಶಾಲೆ-ಆದಿಮ

ಆದಿಮ


ಕಳೆದ ಮೂರು ದಶಕಗಳಿಂದ ವಿವಿಧ ಸಾಮಾಜಿಕ ಆಂದೋಲನಗಳಲ್ಲಿ ತೊಡಗಿದ್ದ ಕೆಲವು ಗೆಳೆಯರು ನಮ್ಮ ಸಂಸ್ಕೃತಿಯ ಜೀವಪರ ಬೇರುಗಳನ್ನು ಅರಸಿ ನೀರೂಡಿಸುವ ಕನಸು ಕಂಡರು. ಅದರ ಫಲವಾಗಿ ಕೋಲಾರ ಜಿಲ್ಲೆ ಅಂತರಗಂಗೆ ಬೆಟ್ಟದ ಮೇಲೆ ಜಿಂಕೆ ರಾಮಯ್ಯ ಜೀವತಾಣದಲ್ಲಿ ಆ ಗೆಳೆಯರು ಕೂಡಿ ಆರಂಭಿಸಿದ ನಡಿಗೆಯೇ ಆದಿಮ.

ಇರುವೆಗಳು ಗೂಡು ಕಟ್ಟುವ ಹಾಗೆ ಹತ್ತಾರು ವರ್ಷಗಳ ಕಾಲ ಎಷ್ಟೋ ಮಂದಿ ಸಮಾನ ಮನಸ್ಕರು ದಿನಕ್ಕೊಂದು ರೂಪಾಯಿಯ ಹಾಗೆ ಸಂಗ್ರಹಿಸಿದ ಮೊತ್ತವೇ ಆದಿಮದ ಮೂಲ ನಿಧಿ. ಆ ಹಣದಲ್ಲಿ ಮೊದಲಿಗೆ ಮಣ್ಣಿನ ಕುಟೀರವೊಂದನ್ನು ಕಟ್ಟಿಕೊಂಡು ಆದಿಮ ತನ್ನ ನಡೆ ಆರಂಭಿಸಿತು. ಆಗಿನಿಂದ ಜಾತಿ ಮತ ಅಂತಸ್ತುಗಳಾಚೆ, ಹೆಚ್ಚಾಗಿ ಮಕ್ಕಳ ಚಟುವಟಿಕೆಗಳ ಸುತ್ತಲೇ ಆದಿಮ ಸಾಂಸ್ಕೃತಿಕ ಎಚ್ಚರದ ದಿಕ್ಕಿನಲ್ಲಿ ಹೆಜ್ಜೆಗಳನ್ನಿಡುತ್ತ ಬಂದಿದೆ. ನಿರ್ಲಕ್ಷಿತ ಸಾಂಸ್ಕೃತಿಕ ಸಮುದಾಯಗಳ ಅಂತರಂಗದ ಚಿಲುಮೆಯಾಗಲು ಯತ್ನಿಸುತ್ತ ಆ ಸಮೂಹದ ಘನತೆಯನ್ನು ಎತ್ತರಿಸುತ್ತ ಬಂದಿದೆ.



ಸದ್ಯದ ಹಲ ಬಗೆಯ ಬಿಕ್ಕಟ್ಟುಗಳಿಗೆ ನಮ್ಮ ಸಾಂಸ್ಕೃತಿಕ ಬೇರುಗಳಲ್ಲೇ ಜೀವಪರ ಉತ್ತರಗಳನ್ನು ಹುಡುಕುವುದು ಆದಿಮದ ಆಶಯ.



ಆ ನಿಟ್ಟಿನಲ್ಲಿ ಆದಿಮ ಮಕ್ಕಳ ಸುಪ್ತ ಪ್ರತಿಭೆಗೆ ನೀರೆರೆದು ಅಗತ್ಯ ತರಬೇತಿ ನೀಡುತ್ತ ನಮ್ಮ ದಿಕ್ಕೇಡಿ ಆಧುನಿಕ ಜಗತ್ತಿನ ಸವಾಲುಗಳಿಗೆ ಅವರನ್ನು ಸಜ್ಜುಗೊಳಿಸುತ್ತಿದೆ. ಈ ನಡಿಗೆ, ಹಾಡು, ನೃತ್ಯರೂಪಕ, ನಾಟಕ ಮುಂತಾದ ಸಮೂಹ ಕಲೆಗಳ ಸಂಭ್ರಮದ ಮೂಲಕ ಸಾಕಾರಗೊಳ್ಳುತ್ತಿದೆ.

ಎಳೆಯರಷ್ಟೇ ಅಲ್ಲದೆ, ನಿರಂತರ ಸಂವಾದ-ವಾಗ್ವಾದಗಳ ಮೂಲಕ ಎಲ್ಲದರಲ್ಲೂ ಸಾಂಸ್ಕೃತಿಕ ಎಚ್ಚರ ತರುವುದು ಆದಿಮದ ಕಾಳಜಿ.

ಬನ್ನಿ, ಜೀವರಕ್ಷಣೆಗೆ ಸಮನಾದ ಈ ಪಯಣದಲ್ಲಿ ಜೊತೆಯಾಗಿ ಹೆಜ್ಜೆಯಿಡೋಣ.

ಹುಣ್ಣಿಮೆ ಹಾಡು- ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ......
ಪ್ರತಿ ಹುಣ್ಣಿಮೆ ರಾತ್ರಿ ಬೆಟ್ಟದ ಮೇಲೆ ನಡೆಯುವ ಹುಣ್ಣಿಮೆ ಹಾಡು- ಆದಿಮದ ಬಹು ಮುಖ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲೊಂದು.
ನಾಟಕ, ಹಾಡು, ಹಸೆ, ನೃತ್ಯ ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ- ಹೀಗೆ ಬಹು ವಿಧದ ಕಾರ್ಯಕ್ರಮಗಳು ತಿಂಗಳು ತಿಂಗಳೂ ತಪ್ಪದೆ ನಡೆಯುತ್ತ ಬಂದಿವೆ.
ಹುಣ್ಣಿಮೆ ಹಾಡು ಇಂದು ಜಿಲ್ಲೆಯ ಸಾಂಸ್ಕೃತಿಕ ಹೆಗ್ಗುರುತುಗಳಲ್ಲೊಂದಾಗಿ ಬೆಳೆದಿರುವುದರಿಂದಲೇ ಪ್ರತಿ ಕಾರ್ಯಕ್ರಮಕ್ಕೂ ಸಾವಿರಾರು ಜನ ಸೇರಿ ಉತ್ಸಾಹದಿಂದ ಪಾಲ್ಗೊಂಡು ಹಬ್ಬದ ವಾತಾವರಣ ಸೃಷ್ಟಿಸುತ್ತಾರೆ.


ಆದಿಮ ನಡೆ- ತರಬೇತಿ, ಪ್ರಯೋಗ, ಪ್ರದರ್ಶನ
ಕಳೆದ ಸಾಲಿನಲ್ಲಿ ನುರಿತ ರಂಗಪಟುಗಳಿಂದ ಯುವಕ-ಯುವತಿಯರಿಗೆ ತರಬೇತಿ ನೀಡಿ ಆದಿಮ ಸಿದ್ಧಪಡಿಸಿದ ನೃತ್ಯ ರೂಪಕಗಳು ಮೂರು- ಹಕ್ಕಿಹಾಡು, ಕಿನ್ನರಿ ನುಡಿದೋ ಮತ್ತು ಅಣ್ಣಾ ಹಜಾರೆ. ಆದಿಮದ ಈ ಅರೆ ರೆಪರ್ಟರಿ ಐದು ತಿಂಗಳ ಕಾಲ ಅನೇಕ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದೆ.
ಹೀಗೆ ಪ್ರತಿ ವರ್ಷವೂ ಒಂದೊಂದು ಹೊಸ ತಂಡ ರೂಪುಗೊಳ್ಳುತ್ತದೆ.



ಚುಕ್ಕಿಮೇಳ- ಮಕ್ಕಳ ಬೇಸಿಗೆ ಶಿಬಿರ
1999ರಿಂದ ಚೌಕಿ ಸಂಸ್ಕೃತಿ ಕೇಂದ್ರದ ಮೂಲಕ ಪ್ರತಿ ವರ್ಷವೂ ಚುಕ್ಕಿಮೇಳ- ಮಕ್ಕಳ ಬೇಸಿಗೆ ಶಿಬಿರಗಳನ್ನು ಅತ್ಯಂತ ಸಾರ್ಥಕವಾಗಿ ನಿರ್ವಹಿಸಲಾಗುತ್ತಿದೆ. ಇದರೊಂದಿಗೆ, ಕನ್ನಡ ರಂಗಭೂಮಿಗೆ ಹತ್ತಕ್ಕೂ ಹೆಚ್ಚು ಹೊಸ ನಾಟಕಗಳು ಕೊಡುಗೆಯಾಗಿ ಸಂದಿವೆ.
ಇದೀಗ ಚುಕ್ಕಿಮೇಳವನ್ನು ಆದಿಮ ಕೇಂದ್ರದಲ್ಲೇ ಆಯೋಜಿಸಲಾಗುತ್ತಿದೆ.

ಆದಿಮ ಪ್ರಕಾಶನ
ಅರ್ಥಪೂರ್ಣ ಸಾಂಸ್ಕೃತಿಕ ಸಂವಾದದ ಆಶಯಕ್ಕೆ ಪೂರಕವಾದ ಮತ್ತೊಂದು ಚಟುವಟಿಕೆ- ಪುಸ್ತಕಗಳ ಪ್ರಕಟಣೆ. ಈ ನಿಟ್ಟಿನಲ್ಲಿ ಆದಿಮ ಪ್ರಕಾಶನ ಈವರೆಗೆ ಮಹತ್ವದ ಐದು ಕೃತಿಗಳನ್ನು ಹೊರತಂದಿದೆ:
1. ಆವರಣ ಅನಾವರಣ- ಎನ್.ಎಸ್.ಶಂಕರ್.
ಎಸ್.ಎಲ್.ಭೈರಪ್ಪನವರ ಕೋಮುವಾದಿ ಪ್ರಣಾಳಿಕೆಯ ಕಾದಂಬರಿ ಆವರಣಕ್ಕೆ
ಸಮರ್ಥ ಪ್ರತಿಕ್ರಿಯೆ. ನಾಡಿನ ಸಾಂಸ್ಕೃತಿಕ ವಲಯದಲ್ಲಿ ಹೊಸ ವಾಗ್ವಾದವನ್ನು
ಹುಟ್ಟುಹಾಕಿದ ಹೊತ್ತಗೆ.
2. ಕನಕ ಮುಸುಕು- ಡಾ.ಕೆ.ಎನ್.ಗಣೇಶಯ್ಯ
ಕನ್ನಡಕ್ಕೇ ವಿಶಿಷ್ಟವಾದ ಇತಿಹಾಸ ಸಂಶೋಧನೆ ಆಧಾರಿತ ಕೌತುಕಮಯ ಕಾದಂಬರಿ.
3. ಸಾಮಾನ್ಯನ ಸಂಕ್ರಮಣ- ಎನ್.ಎಸ್.ಹಾಲಪ್ಪ
ಸಾಮಾನ್ಯನೊಬ್ಬನ ಸ್ವಾತಂತ್ರ್ಯ ಹೋರಾಟ ಅನುಭವದ ಅಪರೂಪದ ದಾಖಲೆ.
4. ಕಾರಿಡಾರ್ ಕಾಲಕೋಶ- ಜೆಸುನಾ
ಹಿರಿಯ ಪತ್ರಕರ್ತ ಜೆಸುನಾ ನೀಡಿದ- ನಮ್ಮ ರಾಜಕೀಯ ನಾಯಕರ ದೈನಂದಿನದ ಆಪ್ತ ಚಿತ್ರಣ.
5. ಬ್ರಾಹ್ಮಣ ಧರ್ಮದ ದಿಗ್ವಿಜಯ- ಡಾ.ಬಿ.ಆರ್.ಅಂಬೇಡ್ಕರ್
ಕನ್ನಡಕ್ಕೆ:ಎನ್.ಎಸ್.ಶಂಕರ್. ಹಿಂದೂ ಚರಿತ್ರೆಯಲ್ಲಿ ಆಸಕ್ತಿ ಉಳ್ಳವರೆಲ್ಲರೂ
ಕಡ್ಡಾಯವಾಗಿ ಓದಬೇಕಾದ- ಅಂಬೇಡ್ಕರರ ಸ್ಫೋಟಕ ಸಂಶೋಧನಾ ಕೃತಿಯ
ಕನ್ನಡಾನುವಾದ.
******

ನಮ್ಮೊಂದಿಗೆ ನೀವೂ ಹೆಜ್ಜೆಗೂಡಿಸುವಂತಿದ್ದರೆ, ನೀವು
* ದಿನಕ್ಕೊಂದು ರೂಪಾಯಿ ಕೂಡಿಸಿ ನೀಡುವ ಮೂಲಕ ಆದಿಮದ ಸದಸ್ಯರಾಗಬಹುದು
* ಆದಿಮ ಕಾರ್ಯ ಚಟುವಟಿಕೆಗಳಿಗೆ ನಿಮ್ಮಿಂದಾದಷ್ಟು ಹಣದ ನೆರವು ನೀಡುವ ಮೂಲಕ ನಮ್ಮ
ಬಳಗದಲ್ಲಿ ಒಬ್ಬರಾಗಬಹುದು
* ಆದಿಮ ರೆಪರ್ಟರಿಯ ಪ್ರಯೋಗಗಳನ್ನು ಆಹ್ವಾನಿಸಿ ನಿಮ್ಮ ಶಾಲೆ/ಸಮಾರಂಭಗಳಲ್ಲಿ ಅರ್ಥಪೂರ್ಣ
ಮನರಂಜನೆ ಒದಗಿಸುವ ಮೂಲಕವೂ ಆದಿಮಕ್ಕೆ ನೆರವಾಗಬಹುದು
* ಆದಿಮ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ನೀಡಬಹುದು.

ನಿಮ್ಮ ಸಲಹೆ ಸೂಚನೆಗಳಿಗೂ ಸ್ವಾಗತ.


ನಮ್ಮ ಬ್ಯಾಂಕ್ ಖಾತೆ: ಕೆನರಾ ಬ್ಯಾಂಕ್, ಕೋಲಾರ
ಖಾತೆಯ ಹೆಸರು: ಆದಿಮ ಸಾಂಸ್ಕೃತಿಕ ಸಂಘಟನೆ
ಖಾತೆ ಸಂಖ್ಯೆ: 0539101025242
ನಮ್ಮ ವಿಳಾಸ:

ಆದಿಮ
ಜಿಂಕೆ ರಾಮಯ್ಯ ಜೀವತಾಣ
ಶಿವಗಂಗೆ, ಮಡೇರಹಳ್ಳಿ ಅಂಚೆ
ಕೋಲಾರ-563 101

ಫೋನ್: 08892769414
ಇ-ಮೇಲ್: adimaramaiah@gmail.com

ಕಾಮೆಂಟ್‌ಗಳಿಲ್ಲ: