-arun joladkudligi
ಜನಪದ ಸಾಹಿತ್ಯದಲ್ಲಿ ವರ್ತಮಾನದ ಸಂಗತಿಗಳು ನುಗ್ಗುವ ಬಗೆಗಿನ ಚರ್ಚೆಗಳು ಅಷ್ಟಾಗಿ ನಡೆದಿಲ್ಲ. ಈ ಚರ್ಚೆಯು ಬಲ ಪಡೆದರೆ ಈಗಿನ ಜಾನಪದ ಕುರಿತ ವ್ಯಾಖ್ಯಾನಗಳು ಸಡಿಲವಾಗುವ ಭಯ ಕೆಲವು ಸಾಂಪ್ರದಾಯಿಕ ಜಾನಪದ ವಿದ್ವಾಂಸರಲ್ಲಿ ಮನೆ ಮಾಡಿದಂತಿದೆ. ಹಾಗಾಗಿ ತಮಗೆ ಆಧುನಿಕ ಸಂಗತಿಯ ಜನಪದ ಗೀತೆಗಳು ಸಿಕ್ಕರೂ ಅವನ್ನು ಹಾಗೆ ಅಡಗಿಸಿಡುವ ಅಥವಾ ಇದು ಜನಪದ ಆಗುವುದಿಲ್ಲ ಎಂದು ಹೊರಗಿಡುವ ಪರಿಪಾಟ ಕನ್ನಡದಲ್ಲಿ ಸ್ವಲ್ಪಮಟ್ಟಿಗೆ ಇದೆ. ಇದರಿಂದಾಗಿ ಆಧುನಿಕ ಅನುಭವ ಲೋಕಗಳು ಜನಪದ ಸಾಹಿತ್ಯದಲ್ಲಿ ಬಂದ ಬಗ್ಗೆ ತುಂಬಾ ಕಡಿಮೆ ವಿಶ್ಲೇಷಣೆಗಳು ದೊರೆಯುತ್ತವೆ. ಹೆಚ್ಚು ಜನಪ್ರಿಯವಾದ ಪದಗಳನ್ನು ಮತ್ತೆ ಮತ್ತೆ ಚರ್ಚಿಸಲಾಗುತ್ತದೆ.
ಅಂತಹ ಜನಪ್ರಿಯ ಹಾಡುಗಳಲ್ಲಿ ಕಡ್ಲಿಮಟ್ಟಿ ಸ್ಟೇಷನ್ ಮಾಷ್ಟರ್ ಹಾಡು ಒಂದು. ಇದು ತೀರಾ ಆಧುನಿಕ ಘಟನೆಯನ್ನು ಆಧರಿಸಿ ಕಟ್ಟಿದ ಹಾಡು. ಈ ಹಾಡು ರಿವಾಯ್ತು, ಲಾವಣಿ, ಭಜನೆ ಹೀಗೆ ಬೇರೆ ಬೇರೆ ಹಾಡು ಪ್ರಕಾರಗಳಲ್ಲಿ ಚಾಲ್ತಿಯಲ್ಲಿದೆ.
ಹೀಗೆ ಆಧುನಿಕ ಸಂಗತಿಗಳು ಜನಪದ ಹಾಡುಪರಂಪರೆಯನ್ನು ಪ್ರವೇಶ ಮಾಡಿ ಅವು ಮೌಖಿಕ ಸಾಹಿತ್ಯಿಕ ಗುಣಗಳನ್ನು ಪಡೆದಿವೆ. ಇಂತಹ ಸಾಹಿತ್ಯದ ಚರ್ಚೆ ಹೆಚ್ಚೆಚ್ಚು ಆದರೆ, ನಾವು ಕಟ್ಟಿಕೊಂಡ ಜಾನಪದದ ವ್ಯಾಖ್ಯಾನಗಳನ್ನು ಮುರಿದುಕಟ್ಟುವ ಕೆಲಸವೂ ಆಗುತ್ತದೆ. ಕ್ಷೇತ್ರ ಕಾರ್ಯ ಮಾಡುವಾಗ ಹಲ ಬಗೆಯ ಆಧುನಿಕ ಸಂಗತಿಗಳ ಹಾಡುಗಳು ಸಿಕ್ಕಿವೆ. ಇವು ನಮ್ಮ ಶಿಷ್ಟ ಕವಿಗಳು ತನ್ನ ಕಾಲಕ್ಕೆ ಸ್ಪಂದಿಸುವುದಕ್ಕಿಂತ ತೀವ್ರವಾಗಿ ಪ್ರತಿಕ್ರಿಯಿಸಿವೆ. ಅಂತಹ ಒಂದೆರಡು ಉದಾಹರಣೆ ನೋಡೋಣ.
ಸುರಪುರ ತಾಲೂಕಿನ ಲಕ್ಷ್ಮಿಪುರ ಎಂಬುದೊಂದು ಊರಿದೆ. ಈ ಊರು ರಿವಾಯ್ತು ಹಾಡುಗಾರಿಕೆಗೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ನಾನು ಆ ಊರಿಗೆ ಹೋದಾಗ ಮುಂಬೈ ತಾಜ್ ಹೋಟೆಲ್ ಮೇಲೆ ಉಗ್ರರ ಬಾಂಬ್ ದಾಳಿ ನಡೆದು ಒಂದೆರಡು ತಿಂಗಳಾಗಿತ್ತು. ಆಗ ನನಗೆ ಸುರಪುರದ ಬನಶಂಕರಿ ಆಡಿಯೋ ಸೆಂಟರ್ ನಲ್ಲಿ `ಬೊಂಬೈ ಸುಟ್ಟಾದ ಬೆಂಕ್ಯಾಗ’ ಎಂಬುದೊಂದು ಡಿವಿಡಿ ಸಿಕ್ಕಿತು. ಈ ಡಿವಿಡಿಯಲ್ಲಿ ಹಾಡಿದವರು ಲಕ್ಷ್ಮೀಪುರದ ಎಂ.ಡಿ. ಚಾಂದ್ ಪಾಶ. ಈ ಡಿವಿಡಿಯಲ್ಲಿ ತಾಜ್ ಹೋಟೆಲ್ ಸುಡುತ್ತಿರುವ ಚಿತ್ರ ಬರುತ್ತಿದೆ, ಅದರ ಮುಂದೆ ಚಾಂದ್ ಪಾಶಾ ರಿವಾಯ್ತು ಹಾಡುತ್ತಿದ್ದಾನೆ. ಅದೇ ಹೊತ್ತಿಗೆ ಲಕ್ಷ್ಮೀಪುರದ ಮೊಹರಂನ ಚಿತ್ರವನ್ನೂ ಕಾಂಪೋಸ್ ಮಾಡಲಾಗಿದೆ. ಈ ಹಾಡಿನ ಚರಣವೊಂದು ಹೀಗಿದೆ,
ಉಗ್ರರು ಎಸಗಿದ ಕೆಟ್ಟತನಾ
ತಲ್ಲಣಗೊಂಡಿತು ಬಾಂಬೆ ಜನಾ..
ಒಂದಾಗಿ ಬಾಳ್ತಾರಾ ಎಲ್ಲಜನಾ
ಜನರ ನಂಟ ಕೆಡಿಸ್ಯಾರ ಉಗ್ರಜನಾ..
ಉಗ್ರರಿಗೆ ಒಳ್ಳೆ ಬುದ್ದಿ ಕೊಡು ಶಿವನೇ
ನಮ್ಮ ಜನರ ಕಾಯತಾನ, ನಮ ಹುಸೇನಾ..
ಈ ಹಾಡು ಇಡೀ ಬಾಂಬ್ ಸ್ಪೋಟದ ದುಷ್ಪರಿಣಾಮಗಳನ್ನು ಹೇಳುತ್ತಿದೆ. ಅಂತೆಯೆ ತಮ್ಮೂರಿನ ದೇವರಲ್ಲಿ ಉಗ್ರರಿಗೆ ಒಳ್ಳೆ ಬುದ್ಧಿ ಕೊಡು ಶಿವನೆ ಎಂದು ಬೇಡುವಿಕೆಯೂ ಇದೆ. ದೂರದ ಬಾಂಬೆಯನ್ನು ತಮ್ಮೂರು ಲಕ್ಷ್ಮೀಪುರಕ್ಕೆ ತಂದು ಹಾಡುವ ಹಾಡು ಒಂದಾದರೆ, ತನ್ನ ಸುತ್ತಮುತ್ತಣ ಸಂಗತಿಗಳಿಗೂ ಈ ಹಾಡುಗಾರರು ತುಡಿಯುತ್ತಿರುವುದನ್ನು ನೋಡಬಹುದು.
2004 ರ ಆಗಷ್ಟ್ 15 ರಂದು ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಬಗಲೂರು ಹೊಳಿಯಲ್ಲಿ ನಾವಿ ಮುಳುಗಿ ಮುವತ್ತಕ್ಕಿಂತ ಹೆಚ್ಚು ಜನರು ಜಲಸಮಾಧಿಯಾದರು. ಈ ಸಂಗತಿಯನ್ನು ಲಕ್ಷ್ಮೀಪುರದ ವೆಂಕಟೇಶ್ ಮಿಠ್ಠಾ ಎಂಬ ರಿವಾಯ್ತು ಹಾಡುಗಾರ ಮನಕರಗುವಂತೆ ಹಾಡುಕಟ್ಟಿದ್ದಾನೆ. ಈ ಹಾಡಿನ ಪೂರ್ಣ ಪಾಠವನ್ನೋಮ್ಮೆ ಓದಿ:
ಸಬೆದೊಳಗಾ ಸೆರಣೆಂದು ಹಾಡುವೆನು ನಾ
ಕೇಳರಿ ಕಣ್ಣೀರಿನ ಕಥೆಯೊಂದನಾss|
ಎರಡು ಸಾವಿರದ ನಾಲ್ಕು ಹದಿನೈದು ತಾರೀಕು
ಆಗಸ್ಟ್ ತಿಂಗಳು ಆಯಿತ್ವಾರ ಅಮವಾಸಿ ದಿನ |
ದತ್ತರಗಿ ಕ್ಷೇತ್ರಕ್ಕೆ ಭಕ್ತ ಜನಾss
ಮಾಡ್ಲಕಾ ಬರುತಾರ ಬಾಗಮ್ಮನ ದರುಶನಾss
ಭೀಮನದಿಯಲ್ಲಿ ನಾಲ್ಕು ವರ್ಷದ ತಾನಾss
ಕಡಿಮಿತ್ತು ನೀರು ಮಳಿ ಇಲ್ದ ಕಾರಣಾss|
ಮಹಾರಾಷ್ಟ್ರ ರಾಜ್ಯದೊಳಗ ಜೋರಾಗಿ ಮಳಿಬಂದು
ಉಜ್ಜನಿ ಡ್ಯಾಂ ತುಂಬಿ ಹರಿದುದ ಪೂರ್ಣ ||
ಎರಡು ದಂಡಿ ಸೋಸಿ ಒಂಟದ ಒಂದೇಸವನಾss
ಕಣ್ಣಕಾಲು ತಿರುಗುತಾವ ನೋಡಿ ನೀರನ್ನಾss|
ಹೊಳಿದಾಟಿ ದತ್ತರಿಗಿ ಹೋದಾಗ ಜನಾss
ದಾಟಲಾರದ ನಿಂತರ ಸುಮನಾss|
ಹೊಳಿಯ ದಾಟಿಸುವುದಕ ಹಂಗೋಲು ನಿಂತಿತು
ಹೊಳಿ ದಂಡಿಗಿ ತಯಾರಾಗಿ ತುಂಬಿ ಜನರನ್ನ ||
ಬೀಜಪೂರ ಜಿಲ್ಲಾ ಸಿಂದಗಿ ತಾಲೂಕಿನಾss
ಬಗಲೂರು ಹೊಳಿದಂಡಿ ಇದರ ಖೂನಾss|
ನಾಡಿನಾ ಭಕ್ತಾರು ಬಾಳ ಜನಾss
ಬಗಲೂರು ದಂಡಿಗಿ ಇಳಿದರು ಸನ್ನಾss||
ಮುಂದ ಕಾಣುವಂತ ದತ್ತರಗಿ ಗ್ರಾಮಕ್ಕಾ
ನಾವೆ ಇಳಿದು ಹೋಗಬೇಕು ಅಲ್ಲಿನ ಜನಾss ||
ಲೆಕ್ಕತಪ್ಪಿ ತುಂಬದಿಲ್ಲ ನಾವ್ಯಾಗ ಮಂದೀನಾss
ತೂಕಕ್ಕ ಸರಿಯಾಗಿ ಒಯ್ಯತಾರ ಜನರನ್ನಾss ||
ಆದಿವಾಸಿ ನಾವಿಯೊಳಗ ಬಾಳಜನಾs
ಲೆಕ್ಕತಪ್ಪಿ ಕುಂತಾರ ಮಾಡುವುದೇನಾss ||
ನಲವತ್ತಾಲು ಜನ ನಾವಿಯೊಳಗ ಕುಂತಾರ
ನಾವಿಕರು ಎಷ್ಟು ಹೇಳ್ತಾರ ಕೇಳಲಿಲ್ಲ ಜನ ||
ಮುಂದೆ ಸಾಗಿತು ನಾವಿ ಮಾಡುವುದೇನಾss
ಸೃಷ್ಟಿಕರ್ತ ಬ್ರಹ್ಮ ಇಷ್ಟೆ ಖರೆದಾನss |
ಒಳಿನೀರು ಸೆಳೆವಿತ್ತು ಒಂದೇ ಸವನಾss
ಹೋಗವಲ್ದು ಹರಿನಾದ ಹಿಡದ ಲೈನಾss |
ಮುಳ್ಳಿನ ಕಂಟಿ ತಾಗಿ ಬಡಿದಾಡಿ ಸುತ್ತ ತಿರುಗಿ
ಮುಳಿಗಿ ಹೋಯ್ತರಿ ನಾವಿ ಸಂಪೂರಣss ||
ಜನರೆಲ್ಲ ಮುಳುಗ್ಯಾರ ಒದರಿ ಪೂರ್ಣ
ಕಂಟಿ ಹಿಡಿದುವರುಳುದಾರ ಸ್ವಲ್ಪ ಜನss |
ಹೊಳಿದಂಡಿಗಿರುವಂತ ಗಟ್ಟಿಮುಟ್ಟ ಜನಾss
ತೆಗೆದು ಬಯಲಿಗೆ ಬಾಕ್ಕಾರ ಹೆಣಗಳನ್ನss ||
ನೀರಾಗ ಉಳಿದವರು ಈಜುತ್ತ ಮುಂದೆ ಹೋಗಿ
ಪಾರಾಗಿ ನೆನಿಸ್ಯಾರ ಭಾಗಮ್ಮನs|
ದುಃಖ ಬಂದಿತು ನೋಡಿ ಶುಭಹೆಣಗಳನಾss
ಅವಸರದಿಂದ ಆಯ್ತು ಇಂಥ ದುರ್ಗಟನಾss ||
ಮುಖ್ಯಮಂತ್ರಿ ಧರ್ಮಸಿಂಗ್ ಅಲ್ಲಿಗಿ ಬಂದಾರ್
ಸಚಿವ ಖರ್ಗೆ ಅವರ ಜೊತಿಗಿದ್ದಾರಾss |
ಹೆಣಗಳ ನೋಡ್ಯಾರ ಹರಿದಾವ ಕಣ್ಣೀರಾ
ಐವತ್ತು ಸಾವಿರ ಮಾಡಿಸ್ಯಾರ ಸ್ಯಾಂಕ್ಷನಾ ||
ಸತ್ತವರಿಗಿ ಪರಿಹಾರ ಧನಾss
ಕೊಟ್ಟು ಹೇಳ್ಯಾರ ಎಲ್ಲರಿಗೂ ಸಮದಾನss ||
ಕಾಯ್ದಾಳ ಬಾಗಮ್ಮನಂಬಿದವರನ್ನಾss
ಕೈಹಿಡಿದು ಸಲುವುತಾಳ ತಲುವುತಾಳ ಕೊನಿಯ ತನಾss |
ಊರಿಗೋದವರು ತಿರುಗಿ ಬರಲಿಲ್ಲ ತಮ್ಮನಿಗೀ
ವೆಂಕಟೇಶ ಮನಕರಗಿ ಮಾಡ್ಯಾನ ಕವನಾss |
ಹೊನ್ನೂರ ಸಾಹೇಬ ಶರಣ ಮತಿಕೊಟ್ಟನಾss
ಲಕ್ಷಂಪೂರ ಪದಗಳು ಸುತ್ತವಾಹಿನಾss
ಈ ಹಾಡು ಒಂದು ದುರ್ಘಟನೆಯನ್ನು ತನ್ನದೇ ಹಳ್ಳಿ ಜನರಿಗೆ ಮನ ಕರಗುವಂತೆ ಹೇಳುವ ದಾಟಿಯಲ್ಲಿದೆ. ಆಗ ಮುಖ್ಯಮಂತ್ರಿಯಾಗಿದ್ದ ಧರಮಸಿಂಗ್ ಮತ್ತು ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಕೂಡ ಈ ಹಾಡಿನಲ್ಲಿ ಬರುತ್ತಾರೆ. ಇದು ಆಧುನಿಕ ಕಾಲದ ಹಲವು ವೈರುಧ್ಯಗಳನ್ನು ದಾಟಿಸುತ್ತಿದೆ. ಈ ಹಾಡು ಮನುಕುಲದ ದುರಂತವೊಂದರ ನೆನಪಿನ ಮೊಹರಂ ಹಬ್ಬದಲ್ಲಿ ಹಾಡಲ್ಪಡುತ್ತಿದೆ. ಇಲ್ಲಿ ನದಿದಾಟುವಾಗ ಹೆಚ್ಚು ಜನ ಕೂರಲು ಅವಕಾಶವಿಲ್ಲದೆಯೂ ದಾಟಿಸುವವನ ಮಾತನ್ನು ಲೆಕ್ಕಿಸದೆ ಜನರು ತುಂಬುತ್ತಾರೆ. ಇಲ್ಲಿ ಜನರು ತಮ್ಮ ದುರಂತವನ್ನು ತಾವೇ ತಂದು ಕೊಂಡರು ಎಂಬ ಧ್ವನಿಯೂ ಈ ಹಾಡಿನಲ್ಲಿದೆ. ಇಲ್ಲಿ ದೈವ ಭಕ್ತಿ, ದುರಂತ, ರಾಜಕಾರಿಣಿಗಳ ಪ್ರವೇಶ ಮುಂತಾದ ಸಂಗತಿಗಳನ್ನು ಹಾಡೊಂದರಲ್ಲಿ ಜನಪದರು ತರಲು ಸಾಧ್ಯವಾಗಿದೆ. ದುರಂತಗಳನ್ನು ಹಾಡಿನಲ್ಲಿ ಕಟ್ಟಿದ ಭಿನ್ನ ಪಾಠಾಂತರಗಳು ರಿವಾಯ್ತು, ಲಾವಣಿ, ಭಜನೆ, ಕೋಲಾಟದ ಹಾಡುಗಳಲ್ಲೂ ಸಿಗುತ್ತವೆ. ಇಂತಹ ಹಾಡುಗಳನ್ನು ಅಧ್ಯಯನ ಮಾಡಿ ಹೊಸ ಬಗೆಯ ಜನಪದ ಕಾವ್ಯಮೀಮಾಂಸೆಯನ್ನು ಕಟ್ಟಲು ಸಾಧ್ಯವಿದೆ. ಅಂತಹ ಒಂದು ಸಾಧ್ಯತೆಗೆ ಪೂರಕವಾಗಿ ಈ ಬರಹವನ್ನು ಗಮನಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ