ಭಾನುವಾರ, ಜನವರಿ 5, 2014

ಅಜ್ಜಿ ಕಥೆ ಪಠ್ಯಕ್ರಮದಲ್ಲಿ ...


-ಡಾ.ಟಿ.ಗೋವಿಂದರಾಜು
ಸೌಜನ್ಯ:ಪ್ರಜಾವಾಣಿ

ಪ್ರಾಥಮಿಕ ಹಂತದಿಂದ ಪ್ರೌಢ ಹಂತದವರೆಗಿನ ಪಠ್ಯದಲ್ಲಿ ಜನಪದ ಕತೆಗಳನ್ನು ಅಳವಡಿಸಬೇಕು ಎಂಬುದು ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ತಳ ಹಂತದಿಂದಲೇ ಜಾನಪದ ಸಾಹಿತ್ಯದ ಪರಿಚಯವಾಗುತ್ತದೆ. ಇದರೊಂದಿಗೆ ಇಂತಹ ಶಿಕ್ಷಣ ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲೂ ಪೂರಕ ಪ್ರಭಾವ ಬೀರಲಿದೆ.
ಸಮೃದ್ಧ ಕಥಾ ಸಾಹಿತ್ಯ
ಕನ್ನಡದಲ್ಲಿ ಜನಪದ ಕತೆಗಳಿಗೆ ಕೊರತೆ ಏನೂ ಇಲ್ಲ. ರಾಜ್ಯದ ಎಲ್ಲಾ ಪ್ರಾಂತ್ಯ, ಸಮುದಾಯಗಳಲ್ಲಿ ಸಮೃದ್ಧವಾದ ಕಥಾ ಸಾಹಿತ್ಯವಿದೆ. ಆಯಾ ಪ್ರಾಂತ್ಯದ ಭಾಷಾ ಸೊಗಡು, ಸಾಂಸ್ಕೃತಿಕ ಸಂಗತಿಗಳೂ ಈ ಕಥಾನಕಗಳಲ್ಲಿ ಅಡಕವಾಗಿರುತ್ತವೆ. ಮಕ್ಕಳಿಗೆ ಈ ಕತೆಗಳನ್ನು ಕಲಿಸುವ ಮೂಲಕ ಹಲವು ರೀತಿಯ ಪ್ರಯೋಜನಗಳು ಪ್ರಾಪ್ತವಾಗುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗುರುತಿಸಲಾಗಿದೆ:
ನಮ್ಮ ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ, ಕಾನ್ವೆಂಟ್‌ಗಳಲ್ಲಿ ಕಲಿಯುವ ಮಕ್ಕಳಿಗೆ, ಮನೆಯಲ್ಲಿ ಆಡುನುಡಿ ಕನ್ನಡವೇ ಆಗಿದ್ದರೂ, ಶಾಲೆಗಳಲ್ಲಿ ಪರಿಚಯಿಸುವ ಕತೆಗಳು ಬಹುವಾಗಿ ವಿದೇಶಿ ಮೂಲದ ಆಂಗ್ಲ ಅನುವಾದ­ಗಳೇ ಆಗಿರುತ್ತವೆ. ಇದರಿಂದಾಗುವ ಪ್ರಮುಖ ಕೊರತೆ ಎಂದರೆ, ಈ ಸಮಾಜದ, ಸಂಸ್ಕೃತಿಯ ಭಾಗವೇ ಆಗಿರುವ ಮಕ್ಕಳಿಗೂ ದೇಶೀತನಕ್ಕೆ ಬದಲು ವಿದೇಶಿ ತನದ ಪರಿಚಯವೇ ಅಧಿಕವಾಗುತ್ತದೆ.
ಆ ಮೂಲಕ ಅವರಲ್ಲಿ ಒಂದು ರೀತಿಯ ಪರಕೀಯ ಪ್ರಜ್ಞೆ ಬೆಳೆಯತೊಡಗುತ್ತದೆ. ಅಂದರೆ, ಈ ನೆಲದ ಬದುಕಿಗೂ, ಇಲ್ಲಿನ ಜನ ಜೀವನಕ್ಕೂ ತಮಗೂ, ತಮ್ಮ ಕಲಿಕೆ, ಭವಿಷಕ್ಕೂ ಕರುಳು ಬಳ್ಳಿ ಸಂಬಂಧವೇ ಇಲ್ಲವೆಂಬಂತಹ ಭಾವನೆಗೆ ಅವರು ತುತ್ತಾಗುತ್ತಾರೆ. ಇದೊಂದು ರೀತಿ, ನೆಲದ ಸರ್ವ ಸಾವಯವ ಸತ್ವ ಹೀರಿ ಬೆಳೆಯಬೇಕಾದ ಗಿಡಗಳನ್ನು ಕುಂಡದಲ್ಲಿ ನೆಟ್ಟು, ರಾಸಾಯನಿಕ ಪೋಷಕಾಂಶಗಳಲ್ಲಿ ಬೆಳೆಸಿದಂತಾಗುತ್ತದೆ. ಇದು ಗಿಡಕ್ಕೂ ಒಳ್ಳೆಯದಲ್ಲ, ನೆಲ-ಪರಿಸರಕ್ಕೂ ಒಳ್ಳೆಯದಲ್ಲ, ಅದರ ಹೂ, ಹಣ್ಣು ಪಡೆವ ಪೋಷಕರಿಗೂ ಒಳ್ಳೆಯದಲ್ಲ.
ಮಕ್ಕಳಿಗೆ ಇಲ್ಲಿನವೇ ಕತೆಗಳನ್ನು ಪರಿಚಯಿಸುವುದರಿಂದ- ಅವರಿಗೆ ತಮ್ಮ, ಅಂದರೆ, ಸ್ಥಳೀಯ ಭಾಷೆಯ ಪರಿಚಯ- ಕೇಳಿ, ಗ್ರಹಿಸಿ, ಮನನ ಮಾಡಿಕೊಳ್ಳುವ ಸಾಮರ್ಥ್ಯ, ಸ್ವತಃ ಸಮರ್ಥವಾಗಿ ಅಭಿವ್ಯಕ್ತಿಪಡಿಸುವ ಸಾಮರ್ಥ್ಯಗಳು ಸುಲಭವಾಗಿ ಕರಗತವಾಗುತ್ತವೆ. ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಜಾರಿಗೊಳಿಸಬೇಕೆಂಬ ಸರ್ಕಾರದ ಸದುದ್ದೇಶಕ್ಕೂ ಇದು ಪೂರಕವಾಗಿಯೇ ಇದ್ದಂತಾಗುತ್ತದೆ.
ಸ್ಥಳೀಯ ಜನಪದ ಕತೆಗಳನ್ನು ಕೇಳುವುದರಿಂದ ಮಕ್ಕಳಿಗೆ ನೆಲ ಜಲ, ಪ್ರಾಣಿ, ಪಕ್ಷಿ, ಮಳೆ, ಬೆಳೆ, ಬೆಟ್ಟ, ಗುಡ್ಡ... ಆದಿಯಾಗಿ ತಮ್ಮ ಸುತ್ತಿನ ಪರಿಚಯ, ಹಬ್ಬ ಆಚರಣೆ,ಉಡುಪು, ಊಟ ಉಪಚಾರ, ಕುಟುಂಬ ವ್ಯವಸ್ಥೆ, ಬಂಧುತ್ವ ಪ್ರೀತಿಯೂ ಸೇರಿದಂತೆ ಒಟ್ಟು ಬದುಕಿನ ಪರಿಚಯ ಆಗುತ್ತದೆ. ಅವರು ಮುಂದೆ ಸತ್ಪ್ರಜೆಯಾಗಿ ಬದುಕು ನಿರ್ವಹಿಸಲು ಈ ಎಲ್ಲದರ ಅರಿವು ಅವರಿಗೆ ಅಗತ್ಯವಿರುತ್ತದೆ. ಪ್ರಾಣಿ–ಪಕ್ಷಿ ಕತೆಗಳು, ವಿನೋದ ಕತೆಗಳು, ಬಂಧುತ್ವ ಪ್ರೀತಿಯ( ಅಣ್ಣ–ತಂಗಿ, ಅಮ್ಮ –ಮಕ್ಕಳು, ಅಜ್ಜ–ಅಜ್ಜಿ ಮೊದಲಾದವರಿಗೆ  ಸಂಬಂಧಿಸಿದ) ಕತೆಗಳು, ಸಾಹಸ ಕತೆಗಳು, ಕೌಶಲದ ಕತೆಗಳು, ಒಗಟಿನ ಕತೆಗಳು, ಲೆಕ್ಕದ ಕತೆಗಳು... ಹೀಗೆ ಬಹು ಬಗೆಯ ಕತೆಗಳನ್ನು ಅನೇಕ ಆನ್ವಯಿಕ ಕಾರಣಗಳಿಗಾಗಿ ಬಳಸಬಹುದಾಗಿದೆ.
ಇವುಗಳಲ್ಲಿ ಪ್ರಾಥಮಿಕ ತರಗತಿಗಳಿಗೆ ಸರಳ ನಿರೂಪಣೆಯ ಪ್ರಾಣಿ–ಪಕ್ಷಿ ಕತೆ, ವಿನೋದ ಕತೆಗಳನ್ನು ಕಲಿಸಬಹುದು. ಮಾಧ್ಯಮಿಕ ಹಾಗೂ ಪ್ರೌಢ ಹಂತದ ತರಗತಿಗಳಿಗೆ ಬಂಧುತ್ವದ ಕತೆಗಳು, ಸಾಹಸ ಕತೆಗಳು, ಒಗಟಿನ ಕತೆಗಳನ್ನು (ಮುಂದುವರೆದು ಪಿಯುಸಿ, ಪದವಿ ಹಂತಕ್ಕೆ, ಸರಪಳಿ ರೂಪದ ದೀರ್ಘ ಕತೆಗಳು, ಕಥನ ಕಾವ್ಯಗಳು, ಜನಪದ ಪುರಾಣ ಕಾವ್ಯಗಳ ಆಯ್ದ ಭಾಗಗಳು) ಪರಿಚಯಿಸಬಹುದು. (ಪಿಯು ಹಂತದಲ್ಲಿ ಜಾನಪದವನ್ನು ಒಂದು ಪ್ರತ್ಯೇಕ ಬೋಧನಾ ವಿಷಯವಾಗಿ ಅಳವಡಿಸಲು ಕೆಲವು ತೊಡಕುಗಳಿವೆ- ಎಂದು ತಿಳಿದು ಬಂದಿದೆ. ಹಾಗಿದ್ದಲ್ಲಿ, ಕನ್ನಡ ಪಠ್ಯದಲ್ಲಿಯೇ ಜನಪದ ಕತೆ, ಕಾವ್ಯ, ಪರಿಚಯಾತ್ಮಕ ಲೇಖನಗಳನ್ನು ಹೆಚ್ಚಿನ ರೀತಿ ಅಳವಡಿಸುವ ಬಗ್ಗೆ ಪರಿಶೀಲಿಸಬಹುದು).
ಪ್ರಾಥಮಿಕ ತರಗತಿಗಳಿಗೆ ಶಿಕ್ಷಕರು ಆಯ್ದ ಕತೆಗಳನ್ನು ಹೇಳಿ, ಮಕ್ಕಳಿಂದ ಮತ್ತೆ ಹೇಳಿಸುವ ಅಭ್ಯಾಸ ಮಾಡಿದರೆ ಸಾಕು. ಮುಂದಿನ ಹಂತಗಳಲ್ಲಿ ಹೇಳುವ, ಕೇಳುವ, ಓದುವ, ಬರೆಯುವ ಅಭ್ಯಾಗಳನ್ನು ಮಾಡಬಹುದು. ಮಕ್ಕಳು ವಿವಿಧ ಪ್ರಾಂತ್ಯ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಬಂದವರಾದ್ದರಿಂದ ಅವರ ಗ್ರಹಿಕೆಗೆ ಸುಲಭವಾಗುವಂತಹ, ಅವರದೇ ಸಮುದಾಯ, ಭಾಷಾ ಸೊಗಡಿನ ಕತೆಗಳನ್ನೇ ಪ್ರಾಥಮಿಕ ಹಂತಗಳಲ್ಲಿ ಬಳಸುವುದು ಯೋಗ್ಯವಾದುದು. ಆದರೆ, ನಗರದ ಮಕ್ಕಳಿಗೆ ವಿವಿಧ ಸಮುದಾಯ, ಪ್ರದೇಶಗಳ ಹಿನ್ನೆಲೆಯಲ್ಲಿ ಆಯ್ದ ಕತೆಗಳನ್ನು ಪರಿಚಯಿಸಬಹುದು.
ಈ ಹಿನ್ನೆಲೆಯಲ್ಲಿ, ನಾಡಿನ ವಿವಿಧ ಭಾಗಗಳ ಅಧ್ಯಯನಕಾರರು ಈಗಾಗಲೇ ಸಂಗ್ರಹಿಸಿ, ಪ್ರಕಟಿಸಿರುವ ಪುಸ್ತಕಗಳಿಂದ ಈ ಉದ್ದೇಶಕ್ಕೆ ಅನ್ವಯವಾಗಬಹುದಾದ ಕತೆಗಳನ್ನು ಆಯ್ದುಕೊಳ್ಳಬಹುದು. ಹೀಗೆ ಆಯ್ದ ಕತೆಗಳಲ್ಲಿ ಕೆಲವೊಮ್ಮೆ ಅಲ್ಲಿನ ಜಾಯಮಾನಕ್ಕನುಗುಣವಾಗಿ ಉಳಿದುಬಂದಿರುವ ಕೆಲವು ‘ಅವಾಚ್ಯ’ ಶಬ್ದಗಳನ್ನು ತೆಗೆದು, ತೀರಾ ಅಗತ್ಯವಿದ್ದರೆ, ಆ ಸಂದರ್ಭಕ್ಕೆ ತಕ್ಕುದಾದ ‘ಸಹ್ಯ’ ಪದವನ್ನು ಬಳಸಬಹುದು.
ಹಾಗೆಯೇ, ಅತಿ ಕ್ಲಿಷ್ಟವಾದ, ತೀರಾ ಗ್ರಾಮ್ಯವಾದ ಆಡುನುಡಿಗೆ ಬದಲು, ಸ್ಥಳೀಯ ಸೊಗಡಿನ, ಆದರೆ, ಎಲ್ಲರೂ ಸಲಭವಾಗಿ ಓದಬಹುದಾದ, ಗ್ರಹಿಸಬಹುದಾದ ಆಡುನುಡಿಯಲ್ಲಿ ಆ ಕತೆಯನ್ನು ಪುನರ್ ರೂಪಿಸಿಕೊಡಬಹುದು. ಮೌಢ್ಯ, ದುರ್ಬೋಧನೆಯ ಸಂಗತಿಗಳು ನುಸುಳಿದ್ದರೆ ಅವನ್ನು ತೆಗೆದು ಆಧುನಿಕ ಅರಿವಿಗೆ ತಕ್ಕುದಾದ ರೀತಿ ಪುನರ್ ನಿರೂಪಿಸುವ ಕೆಲಸವೂ ಆಗಬೇಕಾಗುತ್ತದೆ.
ಈ ಕಾರ್ಯವನ್ನು ಆಯಾ ಕೃತಿಯ ಸಂಗ್ರಹಕಾರರೇ ಮಾಡಿಕೊಡುವುದು ಸೂಕ್ತ. ಹೀಗೆ, ರಾಜ್ಯದ ಎಲ್ಲಾ ಭಾಗಗಳಿಂದ ತಲಾ ೨-೩ ಕತೆಗಳನ್ನು ತರಿಸಿ­ಕೊಂಡು, ಅವುಗಳಲ್ಲಿ ಪ್ರಾತಿನಿಧಿಕ­ವಾದ ಒಂದು ಮಾದರಿ ಜನಪದ ಕಥಾ ಸಂಪುಟವನ್ನು ಸಿದ್ಧಪಡಿಸಬೇಕು. ಇದನ್ನು ಜಾನಪದ ವಿ.ವಿ ಅಥವಾ ಶಿಕ್ಷಣ ಇಲಾಖೆ ಪ್ರಕಟಿಸಿ, ರಾಜ್ಯದ ಎಲ್ಲಾ ಶಾಲೆಗಳಿಗೆ ಕಳುಹಿಸಬಹುದು.
 

ಕಾಮೆಂಟ್‌ಗಳಿಲ್ಲ: