ಭಾನುವಾರ, ಜುಲೈ 7, 2013

ಜಾನುವಾರು ಸಂತೆ

-

 

ಸೌಜನ್ಯ: ಕಣಜ

ಮಲೆನಾಡಿನಲ್ಲಿ ಎತ್ತು-ಎಮ್ಮೆ ಆಯ್ಕೆ ಪದ್ಧತಿ

ಭಾನುವಾರ ಹೊತ್ತು ಮೂಡುವ ಮೊದಲೇ ನಾಲ್ಕು ದಿಕ್ಕಿನಿಂದಲೂ ಎಮ್ಮೆ, ಎತ್ತು, ದನಗಳು ಶಿರಾಳಕೊಪ್ಪದ ಕಡೆ ಮುಖ ಮಾಡಿದ್ದವು.  ಬಿಸಿಲೇರುವ ಮೊದಲೇ ಸಂತೆ ಜಾಗ ಸೇರಿ, ನೆರಳು ಇರುವ ಜಾಗ ಹುಡುಕಿ ಬೇಗ ಬೇಗ ವ್ಯಾಪಾರ ಮುಗಿಸಿ, ಒಂದಿಷ್ಟು ತರಕಾರಿ, ದಿನಸಿ ತೆಗೆದುಕೊಂಡು ಬರುವುದು ಎನ್ನುವ ಯೋಚನೆ ರೈತರದು.  ಸಂತೆ ಸೇರುವ ಮೊದಲೇ ಬೊಂಡಾ ಅಂಗಡಿ, ಮಂಡಕ್ಕಿ ಅಂಗಡಿ, ಚಾ-ಕಾಫಿ ದುಕಾನ್, ಹಗ್ಗ ಕಣ್ಣಿ, ಗಗ್ಗರ ಗಂಟೆ, ಚಾಟಿ ಬೆತ್ತ ಮುಂತಾದ ಅಂಗಡಿಗಳು ರಸ್ತೆ ಪಕ್ಕ ಜಮಾಯಿಸಿದ್ದವು.

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ಆಯನೂರು ಹಾಗೂ ಸಾಗರದ ಬಳಿಯ ಮಾಸೂರಿನಲ್ಲಿ ವಾರಕ್ಕೊಮ್ಮೆ ಜಾನುವಾರು ಸಂತೆ ನಡೆಯುತ್ತದೆ.  ಭಾನುವಾರ, ಸೋಮವಾರ ಶಿರಾಳಕೊಪ್ಪದಲ್ಲಿ, ಮಂಗಳವಾರ ಆಯನೂರಿನಲ್ಲಿ ಹಾಗೂ ಶುಕ್ರವಾರ ಮಾಸೂರಿನಲ್ಲಿ ನಡೆಯುತ್ತದೆ.  ಶಿರಾಳಕೊಪ್ಪ ಹಾಗೂ ಆಯನೂರುಗಳಲ್ಲಿ ಐದು ಸಾವಿರಕ್ಕೂ ಅಧಿಕ ಜಾನುವಾರುಗಳು ಸೇರಿದರೆ ಮಾಸೂರಿನದು ಚಿಕ್ಕ ಸಂತೆ, ಹತ್ತು ವರ್ಷಗಳ ಹಿಂದೆ ಹುಟ್ಟಿದ್ದು.

ಸುಣ್ಣದಕೊಪ್ಪ ಬಸವನಗೌಡ್ರು ಶಿರಾಳಕೊಪ್ಪದ ಸಂತೆಗೆ ೪೦ ವರ್ಷಗಳಿಂದ ಬರುತ್ತಿದ್ದಾರೆ.  ಹಿಂದೆ ಮಹಾರಾಷ್ಟ್ರ, ಆಂಧ್ರದಿಂದ ಜಾನುವಾರುಗಳು ಬರುತ್ತಿದ್ದವು.  ಈಗೆಲ್ಲಾ ಬಡಕಲು ಬರ್‍ತಾವ್ರಿ, ನಮ್ಮದು ಕಟುಕರ ಸಂತೆ ಬಿಡ್ರಿ ಎನ್ನುತ್ತಾರೆ.
ಈ ಊರುಗಳು ಮಲೆನಾಡು , ಬಯಲುಸೀಮೆಯ ಗಡಿ ಊರುಗಳು. ವ್ಯಾಪಾರಕ್ಕೆ ಬರುವವರು ಹೆಚ್ಚಿನವರು ಬಯಲುಸೀಮೆಯವರು.  ಮಲೆನಾಡಿನ ಮಾಲನ್ನು ಅಗ್ಗಕ್ಕೆ ಖರೀದಿಸಿ ಬಯಲುಸೀಮೆಯ ಮಾಲನ್ನು ದುಬಾರಿಗೆ ಮಾರುವ ಚಾಣಾಕ್ಷರು.  ಬಯಲುಸೀಮೆಯಲ್ಲಿ ಜಾನುವಾರುಗಳಿಗೆ ಉತ್ತಮ ಆಹಾರ ಮತ್ತು ಒಳ್ಳೆಯ ವಾತಾವರಣ ಸಿಗುತ್ತದೆ.  ಹೀಗಾಗಿ ದಷ್ಟಪುಷ್ಟವಾಗಿ ಬೆಳೆದು ಆರೋಗ್ಯವಂತವಾಗಿರುತ್ತವೆ.  ಮಲೆನಾಡಿನಲ್ಲಿ ಹುಲ್ಲು, ಸೊಪ್ಪು ಯಥೇಚ್ಛವಾಗಿ ಸಿಕ್ಕರೂ ಇಲ್ಲಿಯ ಮಳೆಗಾಲ ಹಾಗೂ ಶೀತಲ ವಾತಾವರಣವನ್ನು ಸಹಿಸಲಾರವು.  ಇದರಿಂದ ಬೆಳವಣಿಗೆಯೂ ಕುಂಠಿತ.  ಇಲ್ಲಿಯ ಬೆಟ್ಟಗುಡ್ಡ ಪರಿಸರ ವಾತಾವರಣವನ್ನು ಮಲೆನಾಡು ಗಿಡ್ಡ ತಳಿಗಳು ಮಾತ್ರ ಸಹಿಸಬಲ್ಲವು.  ಉಳಿದ ತಳಿಗಳು ಹೊಂದಿಕೊಳ್ಳಲು ಮೂರು ನಾಲ್ಕು ತಲೆಮಾರುಗಳು ಬೇಕು.  ಮಲೆನಾಡಿನಲ್ಲಿ ನಾಲ್ಕು ಲೀಟರ್ ಹಾಲು ಕೊಡುವ ಎಚ್.ಎಫ್ ತಳಿಯ ದನ ಬಯಲುಸೀಮೆಯಲ್ಲಿ ಹತ್ತು ಲೀಟರ್ ಹಾಲು ಕೊಡುತ್ತದೆ ಎನ್ನುತ್ತಾರೆ ದಲ್ಲಾಳಿ ಮುಸ್ತಫ್.  ಅದೇ ರೀತಿ ಆರು ಲೀಟರ್ ಹಾಲು ಕೊಡುವ ಮುರ್ರಾ ಎಮ್ಮೆ ಮಲೆನಾಡಿಗೆ ಬಂದ ಮೆಲೆ ನಾಲ್ಕು ಲೀಟರ್ ಹಾಲು ಮಾತ್ರ ನೀಡುವುದು.  ಖಾಯಿಲೆ ಬರುವುದು ಆರಂಭವಾಗುತ್ತದೆ.

ಬಯಲುಸೀಮೆಗಳಲ್ಲಿ ಹೊಲಗಳ ಕೆಲಸಕ್ಕೆ ಜಾನುವಾರುಗಳು ಅತ್ಯಗತ್ಯ.  ಜಾನುವಾರು ಸಾಕುವುದು ಅವರ ಹವ್ಯಾಸ, ಹುಚ್ಚು, ಕಲೆ ಇತ್ಯಾದಿ.  ಮಲೆನಾಡಿನಲ್ಲಿ ತೋಟಗಳು ಜಾಸ್ತಿ.  ಹಾಲು ಹಾಗೂ ಗೊಬ್ಬರಕ್ಕೋಸ್ಕರ ಮಾತ್ರ ಸಾಕುತ್ತಾರೆ.  ಹೀಗಾಗಿ ಮಲೆನಾಡಿನಲ್ಲಿ ಜಾನುವಾರು ಸಂತೆ ಕಾಣುವುದಿಲ್ಲ.

ಆಯನೂರು ಸಂತೆಗೆ ಬಂದ ಸೂಗೂರಿನ ಚೆನ್ನಬಸಪ್ಪನಿಗೆ ಯಾವ ಎಮ್ಮೆಯೂ ಸರಿಹೋಗುತ್ತಿರಲಿಲ್ಲ.  ಹಾಲಿದ್ದರೆ ಲಕ್ಷಣವಿಲ್ಲ, ಮೂರನೇ ಕರು ಹಾಕಿದ್ದು ನೋಡಲು ಚೆನ್ನಾಗಿದೆ.  ಆದರೆ ಕೆಚ್ಚಲು ಕಮ್ಮಿ ಎಂದು ಗೊಣಗಿದರು.  ಚೊಚ್ಚಲು ಕರು ಹಾಕಿದ ಕಪ್ಪು ಮುರ್ರಾ ಎಮ್ಮೆಯನ್ನು ಹನ್ನೆರಡು ಸಾವಿರಕ್ಕೆ ವ್ಯಾಪಾರ ಮಾಡಿದರು.  ಎತ್ತಾಗಲಿ, ಎಮ್ಮೆಯಾಗಲಿ ತರುವಾಗ ಲಕ್ಷಣ ನೋಡುವುದು ಪದ್ಧತಿ.  ಎಮ್ಮೆ ತರುವಾಗ ತೊಡೆ, ಮಾಳ (ಯೋನಿ), ಕೆಚ್ಚಲು, ಮೊಲೆ, ಬಲ ಸೊಂಟದ ಎಲುಬು, ಗಂಗೆದೊಗಲು, ಮೈನುಣುಪು, ಕಣ್ಣು, ಉಸಿರಾಟ ಹಾಗೂ ನಡಿಗೆ ನೋಡುತ್ತಾರೆ.  ಹಿಂದಿನವರು ಮುಖ್ಯವಾಗಿ ಮೈಮೇಲಿರುವ ಸುಳಿಗಳನ್ನು ನೋಡುತ್ತಿದ್ದರು. ಇಷ್ಟೆಲ್ಲಾ ಸರಿಯಾಗಿ ಶಕುನ ಸರಿಹೋಗದಿದ್ದರೆ ವ್ಯಾಪಾರ ಮುರಿಯುತ್ತದೆ.

ಎಮ್ಮೆಯ ಆಯ್ಕೆಯ ರೀತಿ
ಹಿಂದಿನ ತೊಡೆಗಳು ದಷ್ಟಪುಷ್ಟವಾಗಿರಬೇಕು.  ಮುಂಗಾಲಿಗಿಂತಲೂ ಹಿಂಗಾಲು ಎತ್ತರವಿದ್ದರೆ ಒಳ್ಳೆಯದು.  ಗೊರಸುಗಳು ಸರಿಯಾಗಿ ಕತ್ತರಿಸಿದ್ದು ನಡೆಯುವಾಗ ಚಪ್ಪಟೆಯಾಗಿ ಹರಡಬಾರದು.  ಕಾಲನ್ನು ನೇರವಾಗಿ ಎತ್ತಿಡಬೇಕು.  ಬೀಸಿ ಬೀಸಿ ಹಾಕುತ್ತಾ ನಡೆಯಬಾರದು.

ಮಾಳ (ಯೋನಿ) ಜೋತಿರಬಾರದು.  ಹೊಲಿಗೆ ಹಾಕಿದ ಗುರುತು ಅಥವಾ ಗಾಯವಾದ ಗುರುತು ಇದ್ದರೆ ಗರ್ಭಕೋಶ ಜಾರಿರುವ ಸಾಧ್ಯತೆ ಇರುತ್ತದೆ.  ತಜ್ಞರು ಮಾಳ ನೋಡಿಯೇ ಕರು ಹಾಕಿ ಎಷ್ಟು ದಿನವಾಯಿತೆಂದು ಅಥವಾ ಕರು ಹಾಕಲು ಎಷ್ಟು ದಿನ, ಎಷ್ಟು ತಿಂಗಳು ಬೇಕು ಎನ್ನುವುದನ್ನು ಹೇಳಬಲ್ಲರು.  ಮಾಳದಿಂದ ಕೆಟ್ಟವಾಸನೆ ಬರಬಾರದು.
ಬಾಲ ಗಟ್ಟಿಯಾಗಿದ್ದು ಮಾಂಸಲವಾಗಿರಬೇಕು.  ತುದಿಯಲ್ಲಿ ಕೂದಲು ದಟ್ಟವಾಗಿರಬೇಕು.  ಬಾಲ ತಿರುಚಿದಂತಿದ್ದು, ತುದಿಯಲ್ಲಿ ಕೂದಲುಗಳಿಲ್ಲದಿದ್ದರೆ ಓತಿಬಾಲ ಎನ್ನುತ್ತಾರೆ.  ಇದು ಅನಾರೋಗ್ಯದ ಲಕ್ಷಣ.

ಕೆಚ್ಚಲಿನಲ್ಲಿ ಹೊರಗೆಚ್ಚಲು ಒಳಗೆಚ್ಚಲು ಎಂದು ಎರಡು ವಿಧ.  ಹಾಲಿನ ನರಗಳು ಕಾಣುವಂತಿರಬೇಕು.  ಮೊಲೆಗಳು ನೇರವಾಗಿರಬೇಕು.  ಹಾಲಿನ ಕಂಡಿ ಸೊಟ್ಟವಿದ್ದರೆ ಹಾಲಿನ ಧಾರೆ ಅಡ್ಡಾದಿಡ್ಡಿ ಹಾರುತ್ತದೆ.  ಮೊಲೆಗಳು ಮೃದುವಾಗಿರಬೇಕು.
ಸೊಂಟದ ಪಕ್ಕೆಬುಲುಗಳು ಬಾಲಕ್ಕೆ ತ್ರಿಕೋನದಲ್ಲಿರಬೇಕು.  ಮೇಲೆದ್ದಿರಬಾರದು.  ಹೊಟ್ಟೆಯ ಎಲುಬುಗಳು ಕಾಣಬಾರದು.
ಮೈಮೇಲೆ ರೋಮ ತೆಳುವಾಗಿದ್ದು ವಿರಳವಾಗಿದ್ದರೆ ಹಾಲು ತೆಳು, ರೋಮ ದಪ್ಪವಾಗಿದ್ದು ಒತ್ತಗಿದ್ದರೆ ಹಾಲು ದಪ್ಪ, ದೇಹ ಉದ್ದವಾಗಿದ್ದು ನೀಳವಾಗಿರಬೇಕು.  ಚರ್ಮ ಹೊಳಪಿರಬೇಕು.  ಕೆಂಗಣ್ಣು, ಹೊರಕೋಡು ಇರಬಾರದು.  ಕೋಡು ಚಿಕ್ಕದಿದ್ದರೆ ವಯಸ್ಸು ಕಮ್ಮಿ.  ಆದರೆ ಸುರುಟಿಯಲ್ಲಿ ಕೋಡು ತೆಳುವಾಗಿದ್ದು ಉದ್ದವಾಗಿರುತ್ತದೆ.

ಕತ್ತಿನ ಸುತ್ತ ಗಂಗೆದೊಗಲು ಚೆನ್ನಾಗಿರಬೇಕು.  ಹೊಳಪಿನಿಂದ ಕೂಡಿರಬೇಕು.  ಕರು ಹಾಕಿದ ಆಧಾರದಲ್ಲಿ ಎಮ್ಮೆಯ ವಯಸ್ಸಿನ ನಿರ್ಧಾರ ಮಾಡುತ್ತಾರೆ.  ಮೊದಲ ಕರು ಚೊಚ್ಚಲು ಸುಮಾರು ಎರಡೂವರೆ ವರ್ಷ.  ಅನಂತರ ಮುರುಚಲು ಮೂರನೇ ಕರು ಹಾಕಿದ ಎಮ್ಮೆ ಅಧಿಕ ಹಾಲು ನೀಡುತ್ತದೆ ಎಂಬುದು ಎಮ್ಮೆ ತಜ್ಞರ ಅನುಭವ.

ಆದರೂ ಎಮ್ಮೆಯನ್ನು ಹಾಲು ಕರೆದು ನೋಡದೆ ತರಬಾರದು.  ಒದೆಯುವ ತಿವಿಯುವ ಚಾಳಿ ಇದ್ದರೆ ತಕ್ಷಣ ತಿಳಿಯುತ್ತದೆ.  ಹಣೆಯಲ್ಲಿ ಬಿಳಿ ಅರ್ಧ ಚಂದ್ರಾಕೃತಿ, ಬಾಲದ ಹೂಗುಚ್ಛ ಬಿಳಿಯಾಗಿದ್ದು ಕಾಲಿನ ಗೊರಸಿನ ಮೇಲ್ಭಾಗದಲ್ಲಿ ಬಿಳಿ ಗಡಗದಂತಿದ್ದರೆ ಅಂತಹ ಎಮ್ಮೆಗೆ ಅಪಾರ ಬೆಲೆ.

ಶಿರಾಳಕೊಪ್ಪ, ಆಯನೂರು ಸಂತೆಗೆ ಮುರ್ರಾ, ಸುರುಟಿ ಎಮ್ಮೆಗಳಿಗಿಂತಲೂ ಹುಲ್ಲೆಮ್ಮೆ, ಜವಾರಿ ತಳಿಗಳೇ ಹೆಚ್ಚು ಬರುತ್ತವೆ.  ಎಚ್.ಎಫ್. ಜರ್ಸಿ ಮತ್ತು ಮಲೆನಾಡಿನ ಗಿಡ್ಡಮಿಶ್ರ ಹಸುಗಳೂ ಬರುತ್ತವೆ. ಹಿಂದೆಲ್ಲಾ ಹಾಸನದ ಬೆಟ್ಟಸಾಲು ತಳಿಗಳು ಬರುತ್ತಿದ್ದವು.  ಈಗ ಅವು ಕಾಣಿಸುತ್ತಲೇ ಇಲ್ಲ ಎಂದು ಚೋರಡಿಯ ಗೋವಿಂದಪ್ಪನವರು ಹೇಳುತ್ತಾರೆ.

ಎತ್ತುಗಳ ಆಯ್ಕೆಯ ರೀತಿ
ಸ್ಥಳೀಯ ಮಲೆನಾಡು ಗಿಡ್ಡ ತಳಿ ಗದ್ದೆ ಕೆಲಸಗಳಿಗೆ ಬಳಸಿದರೂ ಇವು ಕೆಲಸಗಳ್ಳ. ಪುಂಡುತನ ಹೆಚ್ಚು.  ಗಟ್ಟಿ ಕೆಲಸಗಳಿಗೆ ಹಿಂದೇಟು ಹೊಡೆಯುತ್ತವೆ.  ಗಾಡಿಗೆ ಗಿಡ್ಡ ಆದರೆ ಹಳ್ಳಿಕಾರ್, ಕಿಲಾರಿ ಜವಾರಿಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾರವು.  ಹೀಗಾಗಿ ಮಲೆನಾಡಿನ ರೈತರು ಹೆಚ್ಚಾಗಿ ವರ್ಷಕ್ಕೊಮ್ಮೆ ಎತ್ತುಗಳನ್ನು ಬದಲಾಯಿಸುತ್ತಾರೆ.
ಆಯ್ಕೆಯ ರೀತಿ ಎಮ್ಮೆಗಳಿಗಿಂತಲೂ ಭಿನ್ನ, ಸಪೂರ ಕಾಲು, ನೀಳವಾಗಿದ್ದು ಮಾಟವಾಗಿರಬೇಕು.  ಗೊರಸುಗಳು ಗಟ್ಟಿಯಾಗಿದ್ದು ಹರಿತವಾಗಿರಬೇಕು (ಮುಂದೆ ಹಲ್ಲೆ ಕಟ್ಟುತ್ತಾರೆ).  ಮಿಲ್ಟ್ರಿ ಸೈನಿಕರಂತೆ ಕಾಲನ್ನು ಎತ್ತಿ ಇಡಬೇಕು.  ಸೊಂಟದ ಎಲುಬುಗಳು ಹೆಚ್ಚು ಅಗಲವಿರಬಾರದು, ಮೇಲೆದ್ದಿರಬಾರದು.  ಭುಜ ಉಬ್ಬಿದಷ್ಟೂ ಬಲ ಹೆಚ್ಚು.

ಕುತ್ತಿಗೆಯಲ್ಲಿ ಗಂಗೆದೊಗಲು ವಿಶಾಲವಾಗಿದ್ದು ಗಟ್ಟಿಯಾಗಿರಬೇಕು.  ಮೈ ನುಣುಪಾಗಿದ್ದು, ಚಿಕ್ಕ ರೋಮಗಳಿಂದ ಕೂಡಿರಬೇಕು.  ಹೊರಪಲುಗಳು ಇರಬಾರದು.  ಸೌಮ್ಯ ಕಣ್ಣುಗಳಿದ್ದು ಹತ್ತಿರ ಹೋದರೆ ಬುಸುಗುಡಬಾರದು, ಕೆಂಪು ಕಣ್ಣಿದ್ದರೆ ಕೆಂಡಗಣ್ಣು ಎನ್ನುತ್ತಾರೆ.  ಇವು ಮಹಾ ಕೆಲಸಗಾರರು, ಆದರೆ ಸಿಟ್ಟು ಹೆಚ್ಚು ಸೊಕ್ಕಿನವರಿಗೆ ಇದು ಒಳ್ಳೆಯದು. ಎರಡೂ ಕೋಡುಗಳು ನೀಳ, ಸಪೂರ ಹಾಗೂ ಹೊಳಪಿನಿಂದ ಕೂಡಿರಬೇಕು.  ಸಿಪ್ಪೆ ಸುಲಿದಂತಿರಬಾರದು.

ಎತ್ತುಗಳ ವಯಸ್ಸನ್ನು ಹಲ್ಲು ನೋಡಿ ನಿರ್ಧರಿಸುತ್ತಾರೆ.  ಹಲ್ಲುಗಳು ಇಲ್ಲದಿದ್ದರೆ ಒಂದು ವರ್ಷಕ್ಕೂ ಕಡಿಮೆ ಎಂದು, ಎರಡುಹಲ್ಲು ಬಂದರೆ ಎರಡು ವರ್ಷ ಆಗಿರಬಹುದೆಂದು ಊಹಿಸುತ್ತಾರೆ.  ಈ ಎತ್ತುಗಳನ್ನು ಬೇಸಾಯಕ್ಕೆ ಬಳಸುವುದಿಲ್ಲ.  ನಾಲ್ಕು ಹಲ್ಲು ಮೂಡಿದ ಮೇಲೆ ಬೇಸಾಯಕ್ಕೆ ರೂಢಿಸುತ್ತಾರೆ.  ಆರು ಎಂಟು ಹಲ್ಲುಗಳು ಬರುವ ವೇಳೆಗೆ ಒಳ್ಳೆಯ ಕೆಲಸಗಾರರಾಗಿರುತ್ತಾರೆ.  ಎಂಟು ಹಲ್ಲುಗಳಿಗೆ ಬಾಯಿಗೂಡಿದ ಎತ್ತುಗಳು ಎನ್ನುತ್ತಾರೆ.  ಇವು ಸುಮಾರು ಹತ್ತು ವರ್ಷಗಳವರೆಗೆ ಕೆಲಸಕ್ಕೆ ಯೋಗ್ಯ, ಹಲ್ಲು ಉದುರಿಹೋಗಿದ್ದರೆ ಅದು ಮುದಿ ಎಂದು ತೀರ್ಮಾನಿಸುತ್ತಾರೆ.

ಎತ್ತಿನ ಸುಳಿ ನೋಡಿ ಗುಣ ಹಾಗೂ ತಮ್ಮೊಂದಿಗಿನ ಸಾಮರಸ್ಯಯವನ್ನು ಹಿಂದಿನವರು ನಿರ್ಧರಿಸುತ್ತಿದ್ದರು.  ಇದೊಂದು ಮೌಖಿಕ ಪರಂಪರೆ.  ಗ್ರಂಥಗಳ ಆಧಾರ ಸಿಗುವುದಿಲ್ಲ.  ಸುಳಿ ಎಂದರೆ ಎತ್ತುಗಳ ಮೈಮೇಲೆ ಕೆಲವು ಜಾಗಗಳಲ್ಲಿ ಚಕ್ರಾಕಾರವಾಗಿ ಸುತ್ತಿದಂತಿರುತ್ತದೆ.  ಅದು ಯಾವ ಜಾಗದಲ್ಲಿದೆ ಎಂಬ ಆಧಾರದ ಮೇಲೆ ಒಳ್ಳೆಯ ಸುಳಿ ಅಥವಾ ಹೀನಸುಳಿ ಎಂಬುದನ್ನು ನಿರ್ಧರಿಸಲಾಗುತ್ತದೆ.

ವ್ಯಾಪಾರದಲ್ಲಿ ಮೂರು ರೀತಿ; ನೇರ ವ್ಯಾಪಾರ, ಮುಚ್ಚು ವ್ಯಾಪಾರ ಹಾಗೂ ಸಾಟಿ ವ್ಯಾಪಾರ.
ನೇರ ವ್ಯಾಪಾರದಲ್ಲಿ ಎಲ್ಲವೂ ನೇರ, ಸ್ಪಷ್ಟ.  ಬೆಲೆಯನ್ನು ಬಾಯ್ಬಿಟ್ಟು ಮಾತನಾಡಿ ಚೌಕಾಶಿ ಮಾಡಿ ನಿರ್ಧರಿಸುತ್ತಾರೆ.  ಮುಚ್ಚು ವ್ಯಾಪಾರ ಮಾತ್ರ ಬಲು ಚಾಲೂಕಿನದು.  ಇದಕ್ಕಾಗಿಯೇ ನುರಿತ ವ್ಯಾಪಾರಸ್ಥರು ಇದ್ದಾರೆ.  ತಿಳಿಯದ ಮಲೆನಾಡಿಗರು ಪೆಚ್ಚಾಗುತ್ತಾರೆ.

ಮಾರಾಟಗಾರ, ಗ್ರಾಹಕ ಇಬ್ಬರು ಒಂದು ಹೆಗಲು ವಸ್ತ್ರದ ಅಡಿಯಲ್ಲಿ (ಟವೆಲ್, ಶಾಲು) ಕೈ ಕೈ ಹಿಡಿದುಕೊಂಡು ಬೆಲೆ ನಿರ್ಧರಿಸುತ್ತಾರೆ.  ಮುಷ್ಠಿಗೆ ಸಾವಿರದ ಲೆಕ್ಕ.  ಬೆರಳಿಗೆ ನೂರರ ಲೆಕ್ಕ.  ಅರ್ಧಮಡಿಚಿದ ಬೆರಳಿಗೆ ಐವತ್ತು ರೂಪಾಯಿ.  ಕೈಸನ್ನೆಯ ಮೂಲಕ ನಡೆಯುವ ವ್ಯಾಪಾರ ಹೊರಗಿನವರಿಗೆ ಏನೂ ತಿಳಿಯುವುದಿಲ್ಲ.  ಕೊನೆಯಲ್ಲಿ ಆದ ನಿರ್ಧಾರವನ್ನು ಎರಡೂ ಕಡೆಯವರಿಗೆ ಗುಟ್ಟಾಗಿ ತಿಳಿಸುತ್ತಾರೆ.  ಈ ಕುಶಲತೆ ಎಲ್ಲರಿಗೂ ಬರಲು ಸಾಧ್ಯವಿಲ್ಲ.
ಈ ವ್ಯವಹಾರ ಸುಮಾರು ೧೦೦ ವರ್ಷಗಳ ಹಿಂದೆ ಪ್ರಾರಂಭವಾಗಿರಬಹುದು.  ಹಿಂದೆ ಇರಲಿಲ್ಲ ಎಂದು ಹಿರಿಯರು ಹೇಳುತ್ತಾರೆ.

ಎತ್ತಿಗೆ ಎತ್ತು ಎನ್ನುವ ಸಮಸಾಟಿ, ಎತ್ತುಕೊಟ್ಟು ಮೇಲೊಂದಿಷ್ಟು ಹಣ ತೆರುವ ಮೇಲ್‌ಸಾಟಿ ಪದ್ಧತಿಗಳಿವೆ.   ಇದರಲ್ಲೂ ತಜ್ಞರಿದ್ದಾರೆ. ಯಾರಿಗೆ ಯಾವ ರೀತಿ ಎತ್ತು ಬೇಕು, ಸರಿಜೋಡಿ ಎತ್ತುಗಳು ಯಾವುದು ಹೀಗೆಲ್ಲಾ ಸರಿದೂಗಿಸುತ್ತಾ ಸಾಟಿಯನ್ನು ನಡೆಸುತ್ತಾರೆ.
ಒಟ್ಟಾರೆ ಎತ್ತನ್ನು ಮುಂದೆ ನೋಡು, ಎಮ್ಮೆಯನ್ನು ಹಿಂದೆ ನೋಡು ಎನ್ನುವ ಗಾದೆ ಸಂತೆಯ ವ್ಯಾಪಾರದಲ್ಲಿ ನಿಖರವಾಗಿ ಪಾಲಿಸಲಾಗುತ್ತದೆ.

ಎತ್ತು ಎಮ್ಮೆಯ ಮಾರಾಟವಾದ ಮೇಲೆ ಕಣ್ಣಿಯನ್ನು ಮಾತ್ರ ಕೊಡುವುದಿಲ್ಲ.  ಕೊಂಡವರು ಹೊಸಕಣ್ಣಿಯನ್ನು ಹಾಕಿಕೊಂಡು ಒಯ್ಯಬೇಕು. ಮಾರಾಟವಾದ ಎತ್ತು ಎಮ್ಮೆಗಳನ್ನು ಮನೆಯವರೆಗೂ ಪ್ರಾಮಾಣಿಕವಾಗಿ ತಂದುಕೊಡುವ ಕಾಲಾಳುಗಳೂ ಇರುತ್ತಾರೆ.  ಆದರೆ ಈಗ ಲಾರಿ, ಟೆಂಪೊ, ಆಟೋಗಳಿಂದ ಇವರಿಗೆ ಕೆಲಸವಿಲ್ಲ.

ಶಿರಾಳಕೊಪ್ಪದ ಸಂತೆಗೆ ಕುರಿಗಳೂ ಬರುತ್ತವೆ.  ಹಬ್ಬದ ಸಮಯದಲ್ಲಿ ಕುರಿ ವ್ಯಾಪಾರ ಅಧಿಕ.  ಆದರೆ ಎಲ್ಲವೂ ಹೊಟ್ಟೆಪಾಲು.
ಮೊದಲೇ ಹೇಳಿದಂತೆ ಈ ಎರಡೂ ಸಂತೆಗಳು ಕಟುಕರ ಸಂತೆಗಳಾಗಿವೆ.  ಮಲೆನಾಡಿನ ಹಸುಗಳು ಸಂತೆಗೆ ಹೋದವು ಎಂದರೆ ಮುದಿಯಾಗಿವೆ ಅಥವಾ ಆರೋಗ್ಯ ಸರಿಯಿಲ್ಲ ಎಂದು ಹಿನ್ನೆಲೆಯ ಅರ್ಥ.  ಅದಕ್ಕೆ ತಕ್ಕಂತೆ ಈ ಊರುಗಳಲ್ಲಿ ಕಸಾಯಿಖಾನೆಗಳೂ ಹೆಚ್ಚು.  ಇಲ್ಲಿ ಜಾನುವಾರುಗಳನ್ನು ಕೊಳ್ಳುವ ಅನೇಕರು ಕಸಾಯಿಖಾನೆ ಮಾಲೀಕರು.  ದಲ್ಲಾಳಿಗಳ ಮೂಲಕ ವ್ಯವಹಾರ ನಡೆಸುತ್ತಾರೆ.  ತೂಕವನ್ನು ಕಣ್ಣಿನಿಂದಲೇ ಅಂದಾಜು ಮಾಡಿ ವ್ಯಾಪಾರ ಮಾಡುತ್ತಾರೆ.
ಹೀಗಾಗಿ ಇದು ಪ್ರಖ್ಯಾತವಲ್ಲ (ಕುಖ್ಯಾತ).  ಆದರೂ ನಾಲ್ಕು ಐದು ಲಕ್ಷಗಳ ವ್ಯಾಪಾರ ನಡೆಯುತ್ತದೆ.

ಕಾಮೆಂಟ್‌ಗಳಿಲ್ಲ: