ಸೋಮವಾರ, ಜುಲೈ 8, 2013

ಪಾಲೆಬಂಡಿ - ಜಾರುಬಂಡಿ : ಮಕ್ಕಳ ಆಟ ಆಟಿಕೆಗಳ ಅವಕಾಶಗಳ ತಾಣಗಳು ತೆರೆದುಕೊಳ್ಳಲಿ !

-ಡಾ.ವಾಮನ ನಂದಾವರ

 ತುಳುನಾಡಿನ ಬೀಡು, ಗುತ್ತು, ಬಾಳಿಕೆ ಮೊದಲಾದ ತರವಾಡು ಮನೆಗಳೆಂದರೆ ಕೃಷಿಕರ ಕುಟುಂಬದ ವಾಸದ ಮನೆಗಳು. ಅವೆಲ್ಲ ಹಿಂದೆ ಅವಿಭಕ್ತ ಕುಟುಂಬದ ಮನೆಗಳು. ಇಂತಹ ಮನೆಗಳ ಮುಂದೆ ವಿಶಾಲವಾದ ಬಯಲು, ಪಡ್ಪು, ಪದವು, ತೋಡು, ಹೊಳೆ ಇದ್ದರೆ ಹಿಂದುಗಡೆ ಗುಡ್ಡಕಾಡು ಪ್ರದೇಶವಿರುತ್ತದೆ. ಅಲ್ಲೆಲ್ಲ ಬೆಟ್ಟುಗದ್ದೆಗಳಿರುವುದೂ ಉಂಟು. ಸಾಮಾನ್ಯವಾಗಿ ಮನೆ ಮುಂದುಗಡೆ ದೊಡ್ಡ ಅಂಗಳವಿದ್ದು ಅದರ ಒತ್ತಿನಲ್ಲೇ ಬತ್ತ ಕುಟ್ಟುವ ಬರೆಕಳವಿರುತ್ತದೆ, ಹಟ್ಟಿಕೊಟ್ಟಿಗೆಗಳು ಇರುತ್ತವೆ.

ಮನೆಯ ಮುಂದಿರುವ ಬಯಲಿನಲ್ಲಿ ಮೊದಲಿನದು ಬಾಕಿಮಾರು ಗದ್ದೆ. ಇಲ್ಲಿಂದ ಆನೆಬಾಗಿಲು ಇಲ್ಲವೇ ಗಡಿಬಾಗಿಲು (ಪಡಿಬಾಕ್‌ಲ್) ದಾಟಿದರೆ ಮೊಗಸಾಲೆ ಸಿಗುತ್ತದೆ. ಮೊಗಸಾಲೆಯಿಂದ ಚಾವಡಿ ತನಕದ ಜಾಗವೇ ಪಡಿಪ್ಪಿರೆ ಇಲ್ಲವೇ ಗರೊಡಿ. ಆ ಕಡೆ ಈ ಕಡೆ ತೋಟ, ಹಿತ್ತಿಲು, ಬಯಲು ಪ್ರದೇಶ.

ಇಲ್ಲಿ ಗರೋಡಿ (ಗರಡಿ) ಎನ್ನುವುದು ಅಂಗ ವ್ಯಾಯಾಮ, ಶಾರೀರಿಕ ಕಸರತ್ತುಗಳೆನಿಸಿಕೊಂಡ ಕುಸ್ತಿ, ಗೋದೆ, ತಾಲೀಮು, ಮಲ್ಲಯುದ್ಧ ಮೊದಲಾದ ಸ್ಪರ್ಧಾತ್ಮಕ ಕ್ರೀಡೆಗಳ ಪ್ರದರ್ಶನಗಳು ನಡೆಯುವ ವಿಶಾಲವಾದ ಸ್ಥಳ. ಕುಟುಂಬದ ಹಿರಿಯರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಇಂತಹ ತರಬೇತಿ ಮತ್ತು ಪ್ರದರ್ಶನಗಳು ಒಂದು ಕಾಲದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದುವು. ತರವಾಡುಮನೆಯೆಂದರೂ ಹಾಗೆಯೇ.  

  ಮನೆತುಂಬ ಜನರು, ಹಿರಿಯರು, ಗಂಡಸರು ಹೆಂಗಸರು, ಯುವಕರು, ಯುವತಿಯರು, ಮಕ್ಕಳು, ಹೊರಗೆಲ್ಲ ದುಡಿಯವ ಒಕ್ಕಲುಸಕ್ಕಲು, ಆಳುಕಾಳು ಮನೆ ಮಂದಿಗಳಿಂದ ತುಂಬಿರುತ್ತದೆ. ಬಿಡುವಿನ ಸಮಯಗಳಲ್ಲಿ ಅಜ್ಜ ಅಜ್ಜಿ ಮೊದಲಾದ ಹಿರಿಯರ ಮಾರ್ಗದರ್ಶನದಲ್ಲಿ ಮನೆಯೊಳಗೆ, ಹೊರಗೆ, ಗರೋಡಿ ಮೊದಲಾದೆಡೆಗಳಲ್ಲಿ ಹೊಸ ಪೀಳಿಗೆಯ ಮಕ್ಕಳೆಲ್ಲ ಸೇರಿಕೊಂಡು ಒಳಾಂಗಣ ಅಥವಾ ಹೊರಾಂಗಣ ಆಟಗಳನ್ನು ಆಡುತ್ತಿರುತ್ತಾರೆ. ಹಾಗೆಯೇ ಬೇರೆ ತರದ ಆಟಗಳಲ್ಲಿ ತಮ್ಮನ್ನು ತಾವು ಪಳಗಿಸಿಕೊಳ್ಳುತ್ತಾರೆ. ಹೊಸ ಹೊಸ ಆಟಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಅಂತಹವುಗಳಲ್ಲಿ ಪಾಲೆಬಂಡಿ, ಜಾರುಬಂಡಿ ಮೊದಲಾದ ಮಕ್ಕಳ ಆಟಗಳು ಜನಪ್ರಿಯ.
  "ಬರಬರ ಪರಪರ ಪಾರು ಬಂಡಿ, ಜರಜರ ಬುರುಬುರು ಜಾರು ಬಂಡಿ. ಅಡಕೆಯ ಹಾಳೆಯ ಬಂಡಿಯಿದು. ಸಾಗಲಿ ಬೇಗನೆ ಹೋಗಲಿ ದೂರ ತಲಪಲಿ ಸೇರಲಿ ಆ ತೀರ. ನಡೆಯಲಿ ಹೀಗೆಯೇ ನಮ್ಮೀ ಆಟ."
 ಹೀಗೆಲ್ಲ ಆಡುವ ಮಕ್ಕಳ ಈ ಆಟಗಳಿಗೆ ನಿರ್ದಿಷ್ಟವಾದ ಪ್ರತ್ಯಕ್ಷವಾದ ಪ್ರೇಕ್ಷಕರು ಇಲ್ಲದಿರಬಹುದು. ಆದರೆ ಮನೆಮಂದಿ, ಆಳುಕಾಳುಗಳೆಲ್ಲ ಅವರವರ ಕೆಲಸಗಳಲ್ಲಿ ನಿರತರಾಗಿದ್ದಂತೆಯೇ ಈ ತರದ ಮಕ್ಕಳ ಆಟಗಳಿಗೆ ಹೊಗಳಿಕೆ ಇಲ್ಲವೇ ತೆಗಳಿಕೆಯ ಪ್ರತಿಕ್ರಿಯೆ ತೋರಿಸದೆ ಇರುವುದಿಲ್ಲ. ಇಲ್ಲೆಲ್ಲ ಹೊಗಳಿಕೆ ತೆಗಳಿಕೆಯೆನ್ನುವುದು ಮಕ್ಕಳ ಮುಗ್ಧತೆ, ಚೇಷ್ಟೆ ಮತ್ತು ತುಂಟತನಗಳಿಗೆ ಸಂಬಂಧಿಸಿದ್ದು.
 ಅಡಕೆ ತೋಟದಲ್ಲಿ ಬಿದ್ದ ಅಡಕೆ ಸೋಗೆಯನ್ನು ಗಮನಿಸಿದರೆ ಅದೊಂದು ವಿಶಿಷ್ಟ ವಸ್ತು, ಉಪಯುಕ್ತ ಸ್ವತ್ತು. ಮನೆಮಂದಿಗೆ ಇತರ ಕೆಲಸಗಳಿಗೆ ಅದು ಅಗತ್ಯವೆನಿಸಿದರೆ, ಮಕ್ಕಳಿಗೆ ಒಳ್ಳೆಯ ಆಟದ ಉಪಕರಣ.
  ಇಲ್ಲಿ ಸೋಗೆಯೆಂದರೆ ಅದರ ಜೊತೆಯಲ್ಲಿ ಮೆತ್ತನೆಯ ಚಂದದ ಹಾಳೆ (ಪಾಲೆ/ಪಾಳೆ)ಯೊಂದಿರುತ್ತದೆ. ಈ ಹಾಳೆ ಸಾಕಷ್ಟು ಉದ್ದವಾಗಿ ಅಗಲವೂ ಇರುತ್ತದೆ. ಈ ಸೋಗೆಯ ಭಾಗದ ಗರಿಗಳನ್ನು ಸವರಿಬಿಟ್ಟರೆ ದಿಢೀರ್ ಪಾಲೆಬಂಡಿ ಪ್ರತ್ಯಕ್ಷ ! ಸೋಗೆಯ ದಂಡೇ (ದಂಟು) ಪಾಲೆಬಂಡಿಗೆ ಆಧಾರದ ಹಿಡಿ.


 ಕನಿಷ್ಠ ಇಬ್ಬರಿಂದ ತೊಡಗಿ ಹತ್ತಾರು ಮಕ್ಕಳು ಪಾಲೆಬಂಡಿ ಆಡಬಹುದು. ಹುಡುಗರೂ ಹುಡುಗಿಯರೂ ಆಡಬಹುದಾದ ಹೊರಾಂಗಣ ಆಟವಿದು. ಒಬ್ಬರು ಹಾಳೆಯಮೇಲೆ ಕುಳಿತುಕೊಂಡು ಹಾಳೆಯ ಹಿಡಿಯ ಬುಡವನ್ನು ಆಧರಿಸಿ ಹಿಡಿದುಕೊಂಡರೆ ಇನ್ನೊಬ್ಬರು ಹಿಡಿಯ ತುದಿಯಲ್ಲಿ ಹಿಡಿದು ಮುಂದಕ್ಕೆ ಎಳೆದೊಯ್ಯುತ್ತಾರೆ. 

 ಹೀಗೆ ಇಂತಹ ಪಾಳೆಬಂಡಿಗಳು ಸಾಲಾಗಿ ಬರಬರ ಪರಪರ ಸದ್ದು ಮಾಡುತ್ತಾ ಅಂಗಳದ ಇನ್ನೊಂದು ಅಂಚಿನತನಕ ಸಾಗಬಹುದು. ಈ ಸಾಗಾಟದಲ್ಲಿ ಯಾರು ಮೊದಲು ನಿರ್ದಿಷ್ಟ ದೂರ ಗಮಿಸುತ್ತಾರೋ ಅವರು ಗೆದ್ದ ಹಾಗೆ. ಮನೆಯ ಅಂಗಳ, ಪಡಿಪ್ಪಿರೆ, ಗರೊಡಿ, ಬೆಟ್ಟುಗದ್ದೆ, ಪಡ್ಪು ಮೊದಲಾದ ಹೆಚ್ಚು ಕಲ್ಲು, ಮಣ್ಣು, ಧೂಳು, ಕೆಸರು ಇಲ್ಲದ ಸ್ಥಳಗಳಲ್ಲಿ ಪಾಲೆಬಂಡಿ ಆಟವನ್ನು ಆಡಲು ಅನುಕೂಲ.

  ಎಲ್ಲಿ ಎತ್ತರದ ಸ್ತಳ ಹತ್ತಿ ಇಳಿಯಲು ಸಿಗುವುದೋ ಅಲ್ಲೆಲ್ಲ ಮಕ್ಕಳಿಗೆ ಏರಿ ಮೇಲೆ ಹಾರಿ ಕೆಳಗೆ ಜಾರಿ ಬೀಳುವುದೆಂದರೆ ಎಲ್ಲಿಲ್ಲದ ಉತ್ಸಾಹ. ಹಾರಿಹಾರಿ ಹಾರುತ್ತಲೇ ಮೇಲೆ ಏರುವುದು, ಮತ್ತೆ ಜಾರಿಜಾರಿ ಜಾರುತ್ತಲೇ ಕೆಳಗೆ ಇಳಿಯುವುದು ಎಂದರೆ ಬಲು ಮೋಜು. ಹೀಗೆ ಆಡುವುದೆಂದರೆ ಅವರಿಗೆ ಖುಶಿಯೋ ಖುಶಿ. ಇದು ಜಾರುಬಂಡಿ (ಜಾರ್‌ಬಂಡಿ, ಜಾರ್ಬಂಡಿ). ಈ ಆಟಕ್ಕೆ ಜಾರುಬಂಡೆ ಎನ್ನುವ ಹೆಸರೂ ಇದೆ.
  ಆಟದ ಮೈದಾನದಲ್ಲಿ ಚಿಕ್ಕ ಮಕ್ಕಳಿಗೆ ಎತ್ತರದಿಂದ ಜಾರುವ ಆಟವಾಡಲು ಜಾರು ದಿಬ್ಬಗಳನ್ನು ನಿರ್ಮಿಸುವುದೂ ಉಂಟು. ಮನೆ ಮಹಡಿ ಮೆಟ್ಟಿಲುಗಳು, ಜಗಲಿ ಅಂಚಿನ ಚಿಟ್ಟೆಗಳು, ಗೋಪುರ, ಪಾಗಾರಗಳನ್ನು ಹತ್ತಲಿರುವ ಮೆಟ್ಟಿಲುಗಳ ಇಬ್ಬದಿಗಳಲ್ಲಿರುವ ಎತ್ತರದ, ತುಸು ಅಗಲದ ಜಗಲಿಗಳೂ ಇವರಿಗೆ ಜಾರುಬಂಡಿಗಳೇ ಆಗಿರುತ್ತವೆ.
  ಶಾಲಾ ಆಟದ ಮೈದಾನುಗಳಲ್ಲಿ ಅಥವಾ ಸಾರ್ವಜನಿಕ ಉದ್ಯಾನಗಳಲ್ಲಿ ಜಾರುವುದಕ್ಕಾಗಿ ಬಳಸುವ ಕೆಲವು ಸಾಧನಗಳನ್ನು ನಿರ್ಮಿಸಿರುವುದುಂಟು. ಅವು ಆನೆ, ಕುದುರೆ, ಹುಲಿ, ಚಿರತೆ, ಸಿಂಹ, ಜಿರಾಫೆ, ಒಂಟೆ ಮೊದಲಾದ ಎತ್ತರದ ದೊಡ್ಡಡೊಡ್ಡ ಪ್ರಾಣಿಗಳನ್ನು ಹೋಲುವಂತಿರುತ್ತವೆ. ಬ್ರಹ್ಮರಕ್ಕಸನಂತಹ ಅದ್ಭುತರಮ್ಯ ಅತಿಮಾನವ ಸ್ವರೂಪಗಳೂ ತೆರೆದ ಬಯಲು, ಮೈದಾನಗಳಲ್ಲಿ ಮಕ್ಕಳಿಗೆ ಜಾರುಬಂಡಿಗಳಾಗಿರುತ್ತವೆ. ಅವನ್ನು ಮರ, ಕಲ್ಲು, ಕಬ್ಬಿಣ, ಅಥವಾ ಸಿಮೆಂಟುಗಳಿಂದ ರಚಿಸಲಾಗುತ್ತದೆ.
  ಸಾಮಾನ್ಯವಾಗಿ ಒಂದು ಕಡೆಯಿಂದ ಮೆಟ್ಟಿಲುಗಳನ್ನು ಹತ್ತಿ ಇನ್ನೊಂದು ಕಡೆಯಿಂದ ಇಳಿಜಾರು ಮೈಯಲ್ಲಿ ಜಾರಿ ಆಟವಾಡುತ್ತಾರೆ. ಆನೆಯಂತಹ ಪ್ರಾಣಿಯ ಬಾಲದ ಕಡೆಯಿಂದ ಹತ್ತಿಕೊಂಡು ತಲೆಯಮೇಲೆ ನಿಂತು ಸೊಂಡಿಲಿನ ಮೂಲಕ ಜಾರುವ ಮಜವೇ ಬೇರೆ. ಕೆಲವೊಮ್ಮೆ ಮಕ್ಕಳೇ ಎತ್ತರದ ಜಾಗ, ದಿಬ್ಬ ಅಥವಾ ಗೋಡೆಗಳಿಗೆ ಹಲಗೆಗಳನ್ನು ಆನಿಸಿಕೊಂಡು ಬೇಕಾದಂತೆ ತಾವೇ ಜಾರುಬಂಡಿಗಳನ್ನು ತಯಾರಿಸಿಕೊಳ್ಳುತ್ತಾರೆ. ಮಕ್ಕಳು ಧಾರಾಳವಾಗಿ ಬೇಕಾದಂತೆ ಆಡಿ ಪುಳಕಗೊಳ್ಳಲು, ಆನಂದಿಸಲು ಅವಕಾಶವಿರುವಂತಹ ಜಾರುಬಂಡೆಗಳೂ ಅವುಗಳಾಗಿರುತ್ತವೆ.

  ಕೆಲವು ಮಕ್ಕಳು ನಿಂತುಕೊಂಡು ಜಾರುವಾಟ ಆಡಿದರೆ ಕೆಲವರು ಹಿಂದುಮುಂದಾಗಿ ಕುಳಿತು ಜಾರುತ್ತಾರೆ. ಮಕ್ಕಳನ್ನು ಹೆಗಲ ಮೇಲೆ ಕೂರಿಸಿ, ಹೊತ್ತುಕೊಂಡು ಇಲ್ಲವೇ ಹೊಟ್ಟೆಯ ಮೇಲೆ ಮಲಗಿಸಿಕೊಂಡು ಜಾರಿ ಖುಶಿಪಡುವುದೂ ಉಂಟು.

  ಮುಂಗಾಲುಗಳನ್ನೂರಿ ಕುಳಿತಿರುವ ಕೆಲವು ಬೃಹತ್ ಪ್ರಾಣಿಗಳ ಸ್ವರೂಪದಲ್ಲಿ ನಿರ್ಮಾಣಗೊಂಡ ಬಂಡೆಗಳನ್ನೇರಿ ನಾನು ಜಾರಿ ಬಂದೆ ಈ ಜಾರುಬಂಡೆ ಎಂದು ಗೆದ್ದು ಬಂದ ಉತ್ಸಾಹವನ್ನು ಆತುರದಿಂದ ಗೆಳೆಯರೊಡನೆ ಹಂಚಿಕೊಳ್ಳುವುದೇ ಒಂದು ಸಂಭ್ರಮ. ಹೀಗೆ ಇಲ್ಲಿ ಯಾರು ಹೆಚ್ಚು ವೇಗವಾಗಿ ಜಾರುವುದು ಎಂಬುದರ ಮೇಲೆ ಸ್ಪರ್ಧೆಯಿರುತ್ತದೆ.
  ಆಧುನಿಕ ಸಂದರ್ಭಗಳಲ್ಲಿ ನಿಸರ್ಗಧಾಮ, ಪ್ರವಾಸಿ ತಾಣ, ಸಾರ್ವಜನಿಕ ಉದ್ಯಾನ, ಬಾಲವನ, ಮ್ಯೂಸಿಯಂ, ವಸ್ತುಪ್ರದರ್ಶನ, ಸಾಂಸ್ಕೃತಿಕ ಮೇಳ ಮೊದಲಾದೆಡೆಗಳಲ್ಲಿ ವ್ಯವಸ್ಥಿತ ಮತ್ತು ಅಚ್ಚುಕಟ್ಟಾದ ಮಾದರಿಗಳಲ್ಲಿ ಇಂತಹ ಮಕ್ಕಳ ಆಟದ ಆಕರ್ಷಣೆಗಳ ಅವಕಾಶಗಳು ತೆರೆದುಕೊಳ್ಳಬೇಕಾಗಿವೆ.
ಮಕ್ಕಳು ಆಡಬೇಕು, ಹಾಡಬೇಕು, ಆಡಿ ದಣಿಯಬೇಕು, ಹಾಡಿ ತಣಿಯಬೇಕು...
ಮಕ್ಕಳ್ ನಕ್ಕರೆ ಪಾಲ್ನೊರೆ ಉಕ್ಕಿದಂತೆ, ಅಂಗಳದ ಮಲ್ಲಿಗೆ ಅರಳಿದಂತೆ...
ಈ ಕವಿವಾಣಿಗೆ ನಾವೆಲ್ಲ ಹಿರಿಯರು ಮಣಿಯಬೇಕು.

2 ಕಾಮೆಂಟ್‌ಗಳು:

Laxmi prasad ಹೇಳಿದರು...

ನಾವು ಕೂಡಾ ಚಿಕ್ಕಂದಿನಲ್ಲಿ ಪಾಳೆ ಬಂಡಿ ಆಡುತ್ತಿದ್ದೆವು !ಲೇಖನ ತುಂಬಾ ಚೆನ್ನಾಗಿದೆ -ಡಾ.ಲಕ್ಷ್ಮಿ ಜಿ ಪ್ರಸಾದ

Unknown ಹೇಳಿದರು...

ನನ್ನ ಬಾಲ್ಯದ ದಿನಗಳಿಗೆ ಹೋಗಿ ಬಂದ ಹಾಗಾಯಿತು..ಇವತ್ತಿನ ಹೆಚ್ಚಿನ ಮಕ್ಕಳು ಈ ಬಾಲ್ಯದ ಸಂತೋಶಗಳಿಂದ ವಂಚಿತರೆಂಬುದೇ ನೋವಿನ ವಿಶಯ. ಲೇಖನ ಚೆನ್ನಾಗಿದೆ.