ಬುಧವಾರ, ಮೇ 25, 2016

ಪ್ರಭುತ್ವ, ಸಮುದಾಯ ಮತ್ತು ಸಹಭಾಗಿತ್ವ – ಎರಡು ಹಳ್ಳಿಗಳ ಕತೆ


-ಪ್ರೊ.ಎಂ. ಚಂದ್ರ ಪೂಜಾರಿ

ಪಾಪಿನಾಯಕನಹಳ್ಳಿ (ಪಿ.ಕೆ.ಹಳ್ಳಿ) ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿದೆ. ಹೊಸಪೇಟೆಯಿಂದ ಬಳ್ಳಾರಿಗೆ ಹೋಗುವ ಹೆದ್ದಾರಿಯಲ್ಲಿ ಹೊಸಪೇಟೆಯಿಂದ ಸುಮಾರು ೧೨ಕಿ.ಮೀ.ದೂರದಲ್ಲಿ ಈ ಹಳ್ಳಿ ಸಿಗುತ್ತವೆ. ಒಂದು ಲೆಕ್ಕಾಚಾರ ಪ್ರಕಾರ ಇಲ್ಲಿನ ಜನ ಸಂಖ್ಯೆ ಐದು ಸಾವಿರ ಹತ್ತಿರವಿದೆ. ಹಳ್ಳಿಯಲ್ಲಿರುವ ಒಟ್ಟು ಕುಟುಂಬಗಳು ೮೫೫. ಅವುಗಳ ಜಾತಿವಾರು ವಿಂಗಡನೆ ಇಂತಿದೆ. ೧೦೬ ನಾಯಕ, ೧೧೦ ಹರಿಜನ, ೧೫೩ ಲಿಂಗಾಯತ, ೮೮ ವಡ್ಡ, ೮೦ ಕುರುಬ, ೬೯ ಮುಸ್ಲಿಂ, ೩೨ ಕ್ರಿಶ್ಚಿಯನ್ ಮತ್ತು ಇತರ ಜಾತಿಗೆ ಸೇರಿದ ೨೧೭ ಕುಟುಂಬಳಿಗೆ (ಮನೆ ತೆರಿಗೆ ರಿಜಿಸ್ಟರ್, ೧೯೯೯). ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಇಂತಿದೆ. ಕೃಷಿಕರು ೪೭೧, ಕೃಷಿ ಕಾರ್ಮಿಕರು ೪೫೮, ಪಶು ಸಂಗೋಪನೆ, ಮೀನುಗಾರಿಕೆ ಇತ್ಯಾದಿ ೧೧, ಗಣಿಗಾರಿಕೆ ಇತ್ಯಾದಿ ೧೧, ಗಣಿಗಾರಿಕೆ ೩೧೪, ಗುಡಿ ಕೈಗಾರಿಕೆ ೩, ಆಧುನಿಕ ಕೈಗಾರಿಕೆ ೧೭ ಕಟ್ಟೋಣ ಕೆಲಸ ೩೪, ವಾಣಿಜ್ಯ/ವ್ಯಾಪಾರ ೪೨ ಮತ್ತು ಸಾರಿಗೆ ಸಂಪರ್ಕ ೧೫೭ (ಸೆನ್ಸಸ್, ೧೯೯೧). ಹಳ್ಳಿಯ ಒಟ್ಟು ಕೃಷಿ ಭೂಮಿಯಲ್ಲಿ ಬಹು ಪಾಲು ಇಲ್ಲಿನ ಲಿಂಗಾಯತರ ಒಡೆತನದಲ್ಲಿದೆ. ಉಳಿದ ಜಾತಿಯವರಲ್ಲೂ ಜಮೀನು ಇದೆ. ಆದರೆ ಅದರ ಪ್ರಮಾಣ ಕಡಿಮೆ(ಅರುಣೋದಯ,೧೯೯೯). ಐವತ್ತರ ದಶಕದಲ್ಲೇ ಡಾಲ್ಮಿಯಾ ಕಂಪೆನಿಯವರು ಹಳ್ಳಿಯ ಸರಹದ್ದಿಯಲ್ಲಿ ಗಣಿಗಾರಿಕೆ ಶುರುಮಾಡಿದ್ದರು. ಹಲವಾರು ಕಾರಣಗಳಿಂದ ಹಳ್ಳಿಯ ಕೆಳ ವರ್ಗ ಆರಂಭದ ದಿನಗಳಲ್ಲಿ ಗಣಿ ಕೆಲಸಕ್ಕೆ ಹೋಗಿರಲಿಲ್ಲ. ಆದರೆ ೧೯೭೦ರ ನಂತರ ಕೃಷಿ ಕಾರ್ಮಿಕರು ಮತ್ತು ಸಣ್ಣ ರೈತರು ಗಣಿ ಕೆಲಸಕ್ಕೆ ಹೋಗಲು ಆರಂಭಿಸಿದರು. ಇಂದು ಅಲ್ಲಿ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಶೇಕಡಾ ೬೦ ದಾಟಿದೆ. ಅದರಲ್ಲಿ ಶೇಕಡಾ ತೊಂಬತ್ತರಷ್ಟು ಗಣಿ ಕೆಲಸ. ಇದು ಉತ್ತರ ಕರ್ನಾಟಕದ ಇತರ ಹಳ್ಳಿಗಳಿಗೆ ಹೋಲಿಸಿದರೆ ತುಂಬ ಭಿನ್ನವಾದ ಚಿತ್ರಣ. ಅದಕ್ಕೆ ಗಣಿ ಕೆಲಸ ಕೊಡುವ ಸ್ವಲ್ಪ ಹೆಚ್ಚಿನ ಸಂಬಳ ಒಂದು ಕಾರಣವಾದರೆ ಕೃಷಿಗೆ ಅಗತ್ಯವಿರುವ ನೀರಾವರಿ ಕೊರತೆ ಮತ್ತೊಂದು ಕಾರಣ. ಹೊಸಪೇಟೆಯಲ್ಲಿ ತುಂಗಭದ್ರಾ ಆಣೆಕಟ್ಟು ಆದಾಗ ಊರಿನ ನೀರಿನ ಸಮಸ್ಯೆ ಪರಿಹಾರವಾದೀತೆಂಬ ದೂರದ ಕನಸು ಊರವರಿಗಿತ್ತು. ಆಣೆಕಟ್ಟಿನ ಕೆಲಸ ನಡಿಯುತ್ತಿದ್ದಾಗ ಊರೆಲ್ಲಾ ಅದೇ ಸುದ್ಧಿಯಂತೆ. ತುಂಗಭದ್ರಾ ಅಣೆಕಟ್ಟೆಯ ಮೇಲ್ದಂಡೆ ಕಾಲುವೆ (ಆಂಧ್ರಕ್ಕೆ ಹೋಗುವ ಕಾಲುವೆ) ಕಾರಿಗನೂರು, ವಡ್ಡರಹಳ್ಳಿ, ಪಾಪಿನಾಯಕನ ಹಳ್ಳಿಗಾಗಿ ಹೋಗುವ ಸಾಧ್ಯತೆ ಇತ್ತೆಂದು ಊರವರ ಅಭಿಪ್ರಾಯ. ಆದರೆ ಆ ರೀತಿ ಆಗಲಿಲ್ಲ. ಆಂಧ್ರಕ್ಕೆ ಹೋಗುವ ಕಾಲುವೆ ಇವರ ಊರ ಸಮೀಪನೂ ಬರಲಿಲ್ಲ.

ಊರ ಕೆರೆಗಳು

ಇತರ ಊರುಗಳಂತೆ ಇಲ್ಲಿ ಕೂಡಾ ಕೆರೆಗಳಿವೆ. ಒಂದು ಆಂಜನೇಯ ಗುಡಿ ಹಿಂದಿರುವ ಈಶ್ವರನ ಕೆರೆ ಮತ್ತೊಂದು ಡಾಲ್ಮಿಯಾ ಗಣಿಗೆ ಹೋಗುವ ದಾರಿಯಲ್ಲಿರುವ ಸೆಟ್ಟಿ ಕೆರೆ. ಈಶ್ವರನ ಕೆರೆ ಮಳೆಗಾಲದಲ್ಲಿ ತುಂಬುತ್ತದೆ. ಅದರ ಪಾತ್ರ ಚಿಕ್ಕದು. ಕೆರೆಗೆ ನೀರುಣಿಸುವ ಮೂಲಗಳು ಕಡಿಮೆ. ಜನರ, ದನಕರುಗಳ ಸ್ನಾನಕ್ಕೆ ಮತ್ತು ಊರವರ ಬಟ್ಟೆ ಒಗೆತಕ್ಕೆ ಈ ಕೆರೆ ಸೀಮಿತ. ಈ ಕೆರೆಯ ಕೆಳಭಾಗದಲ್ಲಿ ಕೆಲವು ಹೊಳಗಳಿವೆ. ಮುಸ್ಲಿಮರಿಗೆ ಸೇರಿದ್ದು. ಆದಾಗ್ಯೂ ಈ ಕೆರೆಯ ನೀರು ಕೃಷಿಗೆ ಬಳಕೆಯಾಗುತ್ತಿಲ್ಲ. ಜನವರಿ-ಫೆಬ್ರವರಿ ತಿಂಗಳಿಗಾಗುವ ನೀರು ಖಾಲಿಯಾಗಿ ಕೆರೆ ಬತ್ತಿರುತ್ತದೆ. ಮತ್ತೊಂದು ಸೆಟ್ಟಿಕೆರೆ. ಇದು ಡಾಲ್ಮಿಯಾ ಗಣಿಗೆ ಹೋಗುವ ರಸ್ತೆಯಲ್ಲಿದೆ. ಜಿಜಿ.ಬ್ರದರ್ಸ್‌ ಫ್ಯಾಕ್ಟರಿಯ ಎದುರು ಭಾಗದ ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ.ಸಾಗಿದರೆ ಗುಡ್ಡಗಳ ಸಾಲುಗಳು ಆರಂಭವಾಗುತ್ತದೆ. ಅಲ್ಲೆ ಎರಡು ಗುಡ್ಡಗಳು ಪರಸ್ಪರ ಮುಖ ಮಾಡಿ ನಿಂತಿವೆ. ಆ ಗುಡ್ಡಗಳ ನಡುವೆ ಒಳ ಹೋಗಲು ಕಣಿವೆಯಿದೆ. ಆ ಕಣಿವೆಯ ಮೂಲಕ ಒಳ ಹೊಕ್ಕರೆ ಹಲವಾರು ಎಕ್ರೆಗಳಷ್ಟು ಸಮತಟ್ಟಾದ ಭೂಮಿ ನಂತರ ಪುನಃ ಗುಡ್ಡಗಳ ಸಾಲುಗಳು. ಪರಸ್ಪರ ಮುಖ ಮಾಡಿ ನಿಂತಿರುವ ಎರಡು ಗುಡ್ಡಗಳನ್ನು -ಸ್ವಲ್ಪ ಒಳ ಭಾಗದಲ್ಲಿ -ಸೇರಿಸಿ ವಿಜಯನಗರ ಕಾಲದಲ್ಲೆ ಸೆಟ್ಟಿಕೆರೆ ನಿರ್ಮಾಣವಾಗಿತ್ತು. ಸುಮಾರು ಐವತ್ತು ಎಕ್ರೆಗಳಷ್ಟು ಸಮತಟ್ಟಾದ ಭೂಮಿ ಕೆರೆಯ ಪಾತ್ರವಾಗಿದೆ. ಮಳೆಗಾಲದಲ್ಲಿ ಗುಡ್ಡಗಳ ಮೇಲೆ ಸುರಿಯುವ ನೀರು ಹರಿದು ಈ ಕೆರೆ ಸೇರುತ್ತದೆ. ಹಿಂದಿನ ಕಾಲದಲ್ಲಿ ಈ ಕೆರೆ ಒಂದು ತಡೆ ಕೆರೆ (ಚೆಕ್ ಡ್ಯಾಮ್) ಇದ್ದಂತೆ. ಇದರ ಕೆಳಭಾಗದಲ್ಲಿ ವಡ್ಡರ ಹಳ್ಳಿ ಕೆರೆ ನಂತರ ಕಮಲಾಪುರ ಕೆರೆಗಳಿವೆ. ಮಳೆಗಾಲದಲ್ಲಿ ಸುರಿಯುವ ನೀರನ್ನು ಹಲವಾರು ಹಂತಗಳಲ್ಲಿ ತಡೆ ಹಿಡಿದು ಆಯಾಯ ಪ್ರದೇಶದ ಜನರ ಉಪಯೋಗಕ್ಕೆ ಬಳಸುವ ಕಲೆ ಹಿಂದಿನಿಂದಲೇ ಕರಗತವಾಗಿತ್ತು.
ಆದರೆ ಈಗ ಸ್ಥಿತಿ ತೀರಾ ಭಿನ್ನವಾಗಿದೆ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಈ ಕೆರೆಯ ಕಟ್ಟೆ ಹರಿಯಿತು. ಆರಂಭದಲ್ಲಿ ತುಂಬಾ ಚಿಕ್ಕ ಪ್ರಮಾಣದ ಬಿರುಕಿತ್ತಂತೆ, ನಂತರ ಅದು ಬೆಳೆಯಿತು. ಈಗ ಅದು ಚಿಕ್ಕ ಪ್ರಮಾಣದ ನದಿಯಷ್ಟು ವಿಶಾಲವಾಗಿದೆ. ಇದೆಲ್ಲಾ ಊರವರ ಕಣ್ಣ ಮುಂದೆಯೇ ಆಗಿದೆ. ಜಾಸ್ತಿ ಮಳೆಯಾದಾಗ ಈ ನದಿ ತುಂಬಿ ಹರಿಯುತ್ತದೆ. ಗಣಿ ಪ್ರದೇಶದ ಕಲ್ಲು, ಬಿಡಿ ಮಣ್ಣುಗಳನ್ನು ಕೆಳಭಾಗದ ಹೊಲಗಳಲ್ಲಿ ಇದು ತುಂಬುತ್ತದೆ. ವಿಚಿತ್ರವೆಂದರೆ ಕೋಡಿ ಹರಿದು ಕಲ್ಲು ಮಣ್ಣಿಂದ ತುಂಬಿರುವ ಹೊಲಗಳಲ್ಲಿ ಬಹುತೇಕ ಹೊಲಗಳು ಹಿಂದೆ ಸ್ಥಳೀಯ ರಾಜಕೀಯದಲ್ಲಿ ಪ್ರಬಲರಾಗಿದ್ದ ಮೇಟಿ ಲಿಂಗಾಯತ ಕುಟುಂಬಳಿಗೆ ಸೇರಿದ್ದು. ಊರ ಪ್ರಮುಖರು ಈ ಕೆರೆಯ ರಿಪೇರಿಗೆ ಪ್ರಯತ್ನಿಸಿಲ್ಲ. ಕೆಲವು ಬಾರಿ ಕೆರೆ ರಿಪೇರಿಗಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಹಿಂದೊಂದು ಬಾರಿ ಘೋರ್ಪಡೆಯವರು ಗ್ರಾಮೀಣ ಅಭಿವೃದ್ಧಿ ಮಂತ್ರಿಯಾಗಿದ್ದಾಗ ಕೆರೆ ರಿಪೇರಿ ಮಾಡಿಸುವ ಭರವಸೆ ಇತ್ತಿದ್ದಾರಂತೆ. ಆದರೆ ಡಾಲ್ಮಿಯ ಗಣಿ ಮಾಲಿಕರು ಅಡ್ಡಗಾಲು ಹಾಕಿದುದರಿಂದ ಕೆಲಸ ಮುಂದುವರಿಯಲಿಲ್ಲ ಎಂದು ಸ್ಥಳೀಯರ ಅಭಿಪ್ರಾಯ. ಘೋರ್ಪಡೆಯವರು ಪುನಃ ಗ್ರಾಮೀಣ ಅಭಿವೃದ್ಧಿ ಮಂತ್ರಿಗಳಾಗಿದ್ದಾರೆ. ೧೯೯೯ರಲ್ಲಿ ಪುನಃ ಈ ಕೆರೆಗೆ ಪುನರ್ ಜೀವ ಕೊಡುವ ಮಾತುಕತೆ ಕೇಳಿಬಂತು. ಈ ಕೆರೆಗೆ ಮತ್ತು ಇದರ ಕೆಳಭಾಗದಲ್ಲಿ ಬರುವ ವಡ್ಡರ ಹಳ್ಳಿ ಕೆರೆಗೆ ಚೆಕ್ ಡ್ಯಾಮ್ ಕಟ್ಟಿಸಲು ಒಂದೊಂದು ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ ಎಂಬ ಸುದ್ಧಿಯಾಯಿತು. ಆದರೆ ಯಾವುದು ಕಾರ್ಯರೂಪಕ್ಕೆ ಬರಲಿಲ್ಲ. ಈ ಕೆರೆಗೆ ಪುನರ್ ಜೀವ ಬಂದರೆ ಎರಡು ಅನುಕೂಲಗಳಿವೆ. ಒಂದು, ೨೦೦ ರಿಂದ ೩೦೦ ಎಕ್ರೆ ಭೂಮಿಗೆ ನೀರಾವರಿ ಸಾಧ್ಯತೆ ಇದೆ. ಭೂಗರ್ಭದಲ್ಲಿ ನೀರಿನ ಮಟ್ಟ ಏರುವುದರಿಂದ ಬೋರ್‌ವೆಲ್ ಹಾಕಿ ಕೃತಕ ನೀರಾವರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಸಂಘಟಿತ ಪ್ರಯತ್ನ
ಊರಿನ ಹಿರಿಯರು, ಸ್ಥಳೀಯ ರಾಜಕಾರಣಿಗಳು, ಮಂತ್ರಿಗಳು ಇವರೆಲ್ಲ ಕೆರೆ ನಿರ್ಮಾಣದ ಮಾತುಗಳನ್ನು ಹಲವಾರು ವರ್ಷಗಳಿಂದ ಆಡುತ್ತಲೇ ಬಂದಿದ್ದಾರೆ. ಆದರೆ ವಾಸ್ತವದಲ್ಲಿ ಕೆರೆ ನಿರ್ಮಾಣದ ಒಂದಿಂಚು ಕೆಲಸ ಕೂಡ ನಡೆದಿಲ್ಲ. ಅರ್ಜಿ ಕೊಡುವುದರಿಂದ ಅಥವಾ ಮಂತ್ರಿಗಳು ಬಂದಾಗ ಅವರ ಗಮನಕ್ಕೆ ತರುವುದರಿಂದ ಈ ಕೆಲಸ ಆಗುವುದಿಲ್ಲ ಎಂಬ ಸತ್ಯ ಹಳ್ಳಿಯ ಯುವಕರ ಗಮನಕ್ಕೆ ಬಂತು. ಆದುದರಿಂದ ತಾವೇ ಮುಂಚೂಣಿಗೆ ಬಂದು ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಕೆರೆ ನಿರ್ಮಾಣವಾಗಲಿ ರಿಪೇರಿ ಆಗಲಿ ಆಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಈ ಯುವಕರ ಬಗ್ಗೆ ಸ್ವಲ್ಪ ಹೇಳಬೇಕು. ಸುಮಾರು ಐದು ಮಂದಿ ಯುವಕರು ತಮ್ಮ ಕಾಲೇಜು ಓದಿನ ಸಂದರ್ಭದಲ್ಲಿ ಊರಲ್ಲೊಂದು ಯುವಕ ಮಂಡಲ ಆರಂಭಿಸಿದ್ದರು. ಅದು ತುಂಬ ಸಕ್ರಿಯವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿತ್ತು. ಓದು ಮುಗಿಸಿ ಕೆಲವರು ಕೆಲಸ ಸೇರಿಕೊಂಡರು. ಇನ್ನು ಕೆಲವರು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಬೇರೆ ಕಡೆ ಹೋದರು. ಹೀಗೆ ಆ ಯುವಕ ಮಂಡಲ ನಿಂತು ಹೋಯಿತು. ಸ್ನಾತಕೋತ್ತರ ಪದವಿ ಮುಗಿಸಿ ಒಬ್ಬರು ಸರಕಾರಿ ಕಾಲೇಜಲ್ಲಿ ತಾತ್ಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬರು ಕೆಲಸ ಸಿಗದೆ ಊರಲ್ಲಿ ತಮ್ಮ ಕೃಷಿ ನೋಡುತ್ತಿದ್ದಾರೆ. ಎಲ್ಲರಿಗೂ ಮದುವೆ ಆಗಿ ಎರಡು ಮೂರು ಮಕ್ಕಳು ಇವೆ. ಹಲವಾರು ವರ್ಷಗಳ ನಂತರ ಹಿಂದೆ ಯುವಕ ಮಂಡಲದಲ್ಲಿ ಸಕ್ರಿಯರಾಗಿದ್ದ ಹೆಚ್ಚಿನ ಯುವಕರು ಪುನಃ ಊರಿಗೆ ಬಂದಿದ್ದಾರೆ. ಊರಲ್ಲಿ ನೀರಾವರಿ ಸಮಸ್ಯೆ ಬಿಗಡಾಯಿಸಿದೆ. ಪರಿಹಾರ ಸಿಗುವ ಲಕ್ಷಣವೇ ಕಾಣುತ್ತಿಲ್ಲ. ಯುವಕರಿಗೆ ಊರಿನ ಸ್ಥಿತಿಯಲ್ಲಿ ಸುಧಾರಣೆ ತರಬೇಕೆಂಬ ಇಚ್ಚೆ. ಅದಕ್ಕಾಗಿ ಗ್ರಾಮಪಂಚಾಯತ್ ಚುನಾವಣೆಗೂ ನಿಲ್ಲುವ ಆಲೋಚನೆ ಮಾಡಿದ್ದರು. ಆದರ ಹಲವಾರು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಊರವರನ್ನೆಲ್ಲ ಒಟ್ಟು ಮಾಡಿಯಾದರೂ ಕೆರೆ ನೀರಾವರಿ ಸಮಸ್ಯೆ ಪರಿಹರಿಸಬೇಕೆಂಬ ಬಯಕೆ ಅವರದ್ದು. ಇದಕ್ಕಾಗಿ ಹಳ್ಳಿಯವರು ಅದರಲ್ಲೂ ಮುಖ್ಯವಾಗಿ ಕೆರೆ ನೀರು ಬಳಕೆದಾರರು ಸಂಘಟಿತ ಪ್ರಯತ್ನ ಮಾಡಬೇಕೆಂಬ ತೀರ್ಮಾನಕ್ಕೆ ಬಂದರು.

ಸಂಘಟಿತ ಪ್ರಯತ್ನಕ್ಕೊಂದು ಸಮಿತಿ ರಚಿಸುವ ಉದ್ದೇಶದಿಂದ ನೀರು ಬಳಕೆದಾರರ ಸಭೆಯೊಂದನ್ನು ಕಳೆದ ವರ್ಷ ಜೂನ್ ತಿಂಗಳಲ್ಲಿ ಪಂಚಾಯತ್ ಆವರಣದಲ್ಲಿ ಕರೆದರು. ಸಭೆಗೆ ಎಲ್ಲ ಜಾತಿಯಿಂದಲೂ ಪ್ರತಿನಿಧಿಗಳು ಬರುವಂತೆ ನೋಡಿಕೊಂಡರು. ಐದು ಗಂಟೆಗೆ ಆರಂಭವಾಗಬೇಕಾದರೆ ಸಭೆ ಸುಮಾರು ಆರು ಗಂಟೆಗೆ ಆರಂಭವಾಯಿತು. ಬಂದವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚಿತ್ತು. ಊರಿನ ಪ್ರಮುಖರೆಂದು ಗುರುತಿಸಬಹುದಾದ ಕೆಲವು ಹಿರಿಯರು ಬಂದಿದ್ದರು. ಹಲವಾರು ವರ್ಷಗಳಿಂದ ಊರವರ ಕೆರೆ ಆದೀತೆಂಬ ನಂಬಿಕೆಯಿಂದ ಕಾದಿರುವುದು, ಆದರೆ ಆ ನಂಬಿಕೆ ಸುಳ್ಳಾಗುತ್ತಾ ಬಂದಿರುವುದು, ಈ ನಿಟ್ಟಿನಲ್ಲಿ ಊರವರೆಲ್ಲ ಒಟ್ಟು ಸೇರಿ ಸಂಘಟಿತವಾಗಿ ಸೆಟ್ಟಿಕೆರೆ ನಿರ್ಮಾಣ ಮತ್ತು ಈಶ್ವರನ ಕೆರೆ ರಿಪೇರಿಗೆ ಪ್ರಯತ್ನಿಸಬೇಕಾದ ಅನಿವಾರ್ಯತೆ ಬಂದಿರುವುದು ಮತ್ತು ಅದಕ್ಕಾಗಿ ಒಂದು ಸಮಿತಿ ರಚಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ ಎಂದು ಸಭೆಯ ಉದ್ದೇಶವನ್ನು ಯುವಕರಲ್ಲೊಬ್ಬರು ವಿವರಿಸಿದರು. ಉದ್ದೇಶ ವಿವರಣೆಯನ್ನು ಕೇಳಿದ ಸಭೆ ಸ್ವಲ್ಪ ಹೊತ್ತು ಮೌನ ಇತ್ತು. ಯಾರು ಏನೂ ಮಾತಾಡಿಲ್ಲ. ಏನಾದರೂ ಹೇಳಿ ಎಂದು ಯುವಕರು ಹಿರಿಯರ ಮುಖ ನೋಡಿದರು. ಸಭೆಗೆ ಬಂದಿದ್ದ ಮಾಜಿ ಮಂಡಲ ಅಧ್ಯಕ್ಷರು, ‘ಕೆರೆ ಕುರಿತು ಜಿಲ್ಲಾ ಪಂಚಾಯತ್ ಸದಸ್ಯರಲ್ಲಿ ನಾವು ಕೇಳಿದ್ದೇವೆ. ಅವರು ಈ ವರ್ಷದ ಯೋಜನೆಯಲ್ಲಿ ಸೇರಿಸುತ್ತೇವೆ ಎಂದು ಭರವಸೆ ಇತ್ತಿದ್ದಾರೆ. ಸೇರಿಸದಿದ್ದರೆ ನಾವು ಪ್ರತಿಭಟಿಸುವ ಅದಕ್ಕೆ ಮುನ್ನವೇ ನಾವು ಸಂಘ, ಪ್ರತಿಭಟನೆ ಎಂದು ಮಾತಾಡಿದರೆ ಸರಿಯಾಗುವುದಿಲ್ಲ,’ ಎಂದರು. ಅದಕ್ಕೆ ಹಾಲಿ ಪಂಚಾಯತ್ ಅಧ್ಯಕ್ಷರು ಧ್ವನಿ ಸೇರಿಸಿದರು. ‘ನಾವು ಎಷ್ಟು ಸಮಯ ಇದೇ ರೀತಿ ಕಾಯವುದು. ಒಂದು ವೇಳೆ ಹಿರಿಯರು ಹೇಳಿದಂತೆ ಈ ಬಾರಿಯ ಜಿಲ್ಲಾ ಪಂಚಾಯತ್ ಯೋಜನೆಯಲ್ಲಿ ಸೇರಿದರೆ ಒಳ್ಳೆಯದೆ ಆಯಿತು. ನಾವು ಸಂಘ ರಚಿಸಿಕೊಂಡರೆ ವೇಸ್ಟ್ ಆಗುವುದಿಲ್ಲ. ಈಶ್ವರನ ಕೆರೆ ರಿಪೇರಿ ಮಾಡಲು ಒಟ್ಟು ಸೇರಬಹುದು ಅಥವಾ ಹಳ್ಳಿಯಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು,’ ಎಂದು ಮತ್ತೊಬ್ಬ ಯುವಕರು ವಾದಿಸಿದರು.

ಇದರಿಂದ ಪ್ರೇರಿತವಾದ ಮತ್ತೊಬ್ಬರು ಹಾಲಿ ಪಂಚಾಯತ್ ಅಧ್ಯಕ್ಷರನ್ನು ಉದ್ಧೇಶಿಸಿ, ‘ನೀವು ಅಧಿಕಾರಕ್ಕೆ ಬಂದು ಒಂದು ವರ್ಷ ಆಗುತ್ತಾ ಬಂತು. ಕೆರೆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಕೇಳಿದರೆ ಬಳ್ಳಾರಿಗೆ ಹೋದೆ, ಹೊಸಪೇಟೆಗೆ ಹೋದೆ, ಅವರನ್ನು ಕಂಡೆ, ಇವರನ್ನು ಕಂಡೆ ಎಂದು ಹೇಳುವುದು ಬಿಟ್ಟರೆ ನೀವು ಏನನ್ನಾದರು ಸಾಧಿಸಿದ್ದೀರಾ?,’ ಎಂದು ಸ್ವಲ್ಪ ಕಟುವಾಗಿಯೇ ಟೀಕಿಸಿದರು. ಇದು ಸ್ವಲ್ಪ ವಿಕೋಪಕ್ಕೆ ಹೋಗುವ ಲಕ್ಷಣ ನೋಡಿ ಸಭೆ ಸಂಯೋಜಿಸಿದ ಯುವ ನಾಯಕರಲ್ಲೊಬ್ಬರು, ‘ನಾವು ಸಭೆ ಸೇರಿದ ಮುಖ್ಯ ಉದ್ದೇಶ ಬಗ್ಗೆ ಸಂಯೋಜಿಸಿದ ಯುವ ನಾಯಕರಲ್ಲೊಬ್ಬರು, ‘ನಾವು ಸಭೆ ಸೇರಿದ ಮುಖ್ಯ ಉದ್ದೇಶ ಬಗ್ಗೆ ಆಲೋಚಿಸುವ. ನಾವು ಸಂಘಟಿತರಾಗಿ ಪ್ರಯತ್ನಿಸುವ ಅಗತ್ಯ ಇದೆಯೇ? ಇದ್ದರೆ ಒಂದು ಸಮಿತಿ ರಚಿಸುವ ಬಗ್ಗೆ ಚರ್ಚಿಸುವ,’ ಎಂದರು. ಅದಕ್ಕೆ ಸೇರಿದ ಹಿರಿಯರು ಮತ್ತು ಯುವಕರು ಸಮಿತಿ ರಚಿಸಬಹುದು ಎಂದು ಒಪ್ಪಿಗೆ ಇತ್ತರು. ಸಮಿತಿಯ ಸದಸ್ಯರಾಗಲು ಆಸಕ್ತಿ ಇರುವವರು ಕೈ ಎತ್ತಿ ತಮ್ಮ ಒಪ್ಪಿಗೆ ನೀಡಿ ಎಂದರು ಸಂಯೋಜಕರು. ಯಾರು ಕೈ ಎತ್ತಲಿಲ್ಲ. ಯಾರ್ಯಾರು ಸಮಿತಿಯ ಸದಸ್ಯರು ಆಗಬಹುದೆಂದು ಹೆಸರು ಸೂಚಿಸಲು ಸಭಿಕರಿಗೆ ಕೇಳಲಾಯಿತು. ಆಗ ಸಭಿಕರು ಅಲ್ಲಿ ಸೇರಿದವರ ಕೆಲವರ ಹೆಸರನ್ನು ಹೇಳಲು ಆರಂಭಿಸಿದರು. ಆರಂಭದಲ್ಲಿ ನಿಧಾನವಾಗಿ ಒಂದೊಂದು ಹೆಸರು ಬಂದವು. ನಂತರ ಅಲ್ಲಿದ್ದವರು ಯಾವುದೋ ಅಧಿಕಾರ ಹಂಚಿಕೆಯಲ್ಲಿ ತಮ್ಮ ಅವಕಾಶ ಎಲ್ಲಿ ತಪ್ಪಿ ಹೋಗುತ್ತದೋ ಎನ್ನುವ ರೀತಿಯಲ್ಲಿ ಅಥವಾ ತಮ್ಮ ಪೈಕಿ ಯಾರದರೊಬ್ಬರು ಸಮಿತಿಯಲ್ಲಿರಬೇಕು ಎನ್ನುವ ರೀತಿಯಲ್ಲಿ ಹೆಸರನ್ನು ಸೂಚಿಸಲು ಆರಂಭಿಸಿದರು. ಸಂಯೋಜಕರು ಪುನಃ ತಡೆದು, ‘ನೋಡಿ ಈ ಸಮಿತಿ ಮಾಡುವುದು ಯಾವುದೇ ಅಧಿಕಾರ ಹಂಚಿಕೊಳ್ಳಲು ಅಲ್ಲ; ಜವಾಬ್ದಾರಿ ಹೊರಲು, ಕೆಲಸ ಮಾಡಲು ಆಸಕ್ತಿ ಇದ್ದವರ ಹೆಸರು ಮಾತ್ರ ಸೂಚಿಸಿ,’ ಎಂದರು ಆದರೂ ಸದಸ್ಯರ ಸಂಖ್ಯೆ ಮೂವತ್ತು ದಾಟಿತು. ಹೇಳಿದವರಿಗೆ ಬೇಸರ ಮಾಡುವುದು ಬೇಡ ಎಂದು ಹೆಸರುಗಳನ್ನು ಪಟ್ಟಿ ಮಾಡಿಕೊಂಡರು. ಇನ್ನು ಪದಾಧಿಕಾರಿಗಳ ಆಯ್ಕೆ ಆಗಬೇಕೆಂದಾಯಿತು. ಅದನ್ನು ಮುಂದಿನ ಮೀಟಿಂಗ್‌ನಲ್ಲಿ ಮಾಡುವ ಅದರ ದಿನ ನಿರ್ಧರಿಸುವ ಎಂದು ಮತ್ತೊಬ್ಬರು ಸಲಹೆ ಇತ್ತರು. ಅದರಂತೆ ಮೂರು ದಿನ ಬಿಟ್ಟು ಮುಂದಿನ ಸಭೆ ಇದೆ ಎಲ್ಲರು ತಮ್ಮ ಜತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರನ್ನು ಕರೆದುಕೊಂಡು ಬರಬೇಕೆಂದು ತಿಳಿಸಿ ಅಂದಿನ ಸಭೆಯನ್ನು ಬರ್ಕಾಸ್ತುಗೊಳಿಸಿದರು.

ಮೂರು ದಿನ ಬಿಟ್ಟು ಸಭೆಯ ಸಂಯೋಜಕರು ಐದು ಗಂಟೆಗೆ ಪಂಚಾಯತ್ ಆವರಣದಲ್ಲಿ ಬಂದು ಕಾದರು. ಗಂಟೆ ಐದೂವರೆ ಆದರು ಒಂದು ನರಪಿಳ್ಳೆಯೂ ಪಂಚಾಯತ್ ಕಟ್ಟಡದತ್ತ ಬರುವುದು ಕಾಣಲಿಲ್ಲ. ಎಲ್ಲರು ಸಭೆಯ ಬಗ್ಗೆ ಮರೆತಿರಬಹುದೋ ಏನೋ ಎಂದು ಸಂಯೋಜಕರು ಊರಿನ ಮಧ್ಯ ಇರುವ ಲಿಂಗಾಯತರ ಹೊಟೇಲ ಹತ್ತಿರ ಬಂದರು. ಊರ ಪ್ರಮುಖರು ಸಂಜೆ ಹೊತ್ತು ಸೇರುವ ಜಾಗ ಅದು. ನೋಡಿದರೆ ಹಿಂದಿನ ಸಭೆಗೆ ಹಾಜರಾದ ಬಹುತೇಕ ಹಿರಿಯರು ಅಲ್ಲಿದ್ದರು. ಅವರನ್ನು ಕಂಡು ಬನ್ನಿ ಸಭೆ ಶುರು ಮಾಡುವ ಎಂದರು ಸಂಯೋಜಕರು. ಅಲ್ಲಿ ಸೇರಿದವರಲ್ಲಿ ಒಂದು ಗುಂಪು, ‘ನೀವು ಸಭೆ ಶುರು ಮಾಡಿ ನಾವು ಅರ್ಜೆಂಟಾಗಿ ಅಂಗಡಿಯವರು ಬಾಳೆ ತೋಟ ನೋಡಿ ಬರುತ್ತೇವೆ,’ ಎಂದು ಮಾಜಿ ಮಂಡಲ ಅಧ್ಯಕ್ಷೆ ನೇತೃತ್ವದಲ್ಲಿ ಹೊಲದ ಕಡೆಗೆ ಹೊರಟೇ ಬಿಟ್ಟಿತು. ಸಂಯೋಜಕರಲ್ಲಿ ಒಬ್ಬರು ಅವರನ್ನು ತಡೆದು ಸಭೆ ಮುಗಿಸಿಕೊಂಡು ಹೋಗಿ ಎಂದು ಕೇಳಿಕೊಂಡರೂ ಅವರು ಕೇಳಲಿಲ್ಲ. ಸುಮಾರು ಹತ್ತು ಮಂದಿಯ ಗುಂಪು ಹೊಲದ ಕಡೆಗೆ ಹೋಗಿಯೇ ಬಿಟ್ಟಿತು. ಹಾಲಿ ತಾಲ್ಲೂಕು ಪಂಚಾಯತ್ ಸದಸ್ಯರು ಮತ್ತು ಅವರ ಸಂಗಡಿಗರನ್ನು ಕರೆದುಕೊಂಡು ಸಂಯೋಜಕರು ಪಂಚಾಯತ್ ಆವರಣಕ್ಕೆ ಬಂದರು. ಅಲ್ಲಿ ಸೇರಿದರು. ಏಳೆಂಟು ಜನ ಆಗಲಿಲ್ಲ. ಅಷ್ಟು ಜನ ಸೇರಿಸಿಕೊಂಡು ಮೀಟಿಂಗ್ ಮಾಡುವುದು ಸರಿಯಲ್ಲ ಎಂದು ಹೊಲಕ್ಕೆ ಹೋದ ಸದಸ್ಯರಿಗಾಗಿ ಕಾದರು.

ಅದೇನು ಅವರು ಈಗ ಹೊಲಕ್ಕೆ ಹೋಗುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ ಎಂದು ಸಂಯೋಜಕರಲ್ಲೊಬ್ಬರು ತಾ.ಪ.ಸದಸ್ಯರ ಗುಂಪಿನವರಲ್ಲಿ ಕೇಳಿದರು. ‘ಅಂಗಡಿಯವರು ಬಾಳೆ ಗಿಡ ಹಾಕಲು ತುಂಗಭದ್ರಾ ಸಹಕಾರಿ ಬ್ಯಾಂಕಿನಿಂದ ಸಾಲ ಮಾಡಿದ್ದಾನೆ. ಬ್ಯಾಂಕ್ ಮೇನೇಜರ್ ನಮ್ಮ ವೀರಭದ್ರಪ್ಪನವರ (ಹಳ್ಳಿಯ ಶ್ರೀಮಂತ ಕುಳಗಳಲ್ಲಿ ಒಬ್ಬರು) ಅಳಿಯ ಸಾಲ ಕೊಟ್ಟ ಬ್ಯಾಂಕಿನವರು ತೋಟ ನೋಡುವ ಕ್ರಮ ಇದೆಯಂತೆ. ಬ್ಯಾಂಕ್ ಮೆನೇಜರ್, ‘ನನ್ನ ಪರವಾಗಿ ನೀವೆ ತೋಟ ನೋಡಿ ಎಂದು ಮಾವ ವೀರಭದ್ರಪ್ಪನವರಿಗೆ ಹೇಳಿದ್ದಾರೆ.’ ಹಾಗೆ ಅವರೆಲ್ಲ ಹೋಗಿದ್ದಾರೆ’, ಎಂದರು. ಅದಕ್ಕೆ ಅವರ ಪಕ್ಕದಲ್ಲಿ ಇದ್ದ ಮತ್ತೊಬ್ಬರು, ‘ಅದು ಹಾಗಲ್ಲ. ಅವರು ಹೋದುದರ ಹಿಂದೆ ಬೇರೆಯೇ ಕತೆ ಇದೆ, ಎಂದು ಹೇಳಲು ಆರಂಭಿಸಿದರು. ನಿನ್ನೆ ಸಂಜೆ ಹೊಟೇಲ್ ಬಳಿ ಮಾಜಿ ಮಂಡಲ ಅಧ್ಯಕ್ಷರಿಗೂ ಹಾಲಿ ಪಂಚಾಯತ್ ಅಧ್ಯಕ್ಷರಿಗೂ ಯಾವುದೇ ಕಾಮಗಾರಿಯಲ್ಲಿ ದುಡ್ಡು ದುರುಪಯೋಗ ಆದ ಬಗ್ಗೆ ಜಗಳ ಆಯಿತು. ಮಾತಿಗೆ ಮಾತು ಬೆಳೆದು ಹಾಲಿ ಅಧ್ಯಕ್ಷರೇ ಪಂಚಾಯತ್ ಹಣ ತಿಂದಿದ್ದಾರೆಂದು ಮಾಜಿ ಅಧ್ಯಕ್ಷರು ಆರೋಪಿಸಿದರು. ಅವರ ಜತೆ ಇದ್ದ ತಾ.ಪ. ಸದಸ್ಯರು ಹಾಲಿ ಅಧ್ಯಕ್ಷರ ಪರ ವಹಿಸಿ ಮಾತಾಡಲು ಆರಂಭಿಸಿದರು. ಮಂಡಲ ಪಂಚಾಯತ್ ಇರುವಾಗಲೂ ಬೇಕಾದಷ್ಟು ಹಣ ದುರುಪಯೋಗ ಆಗಿದೆ. ಅದನ್ನು ನೀವೇ ಮಾಡಿರಬಹುದ್ದಲ್ಲ ಎಂದು ಮಾಜಿ ಅಧ್ಯಕ್ಷರನ್ನು ತಾ.ಪ.ಸದಸ್ಯರು ಪ್ರಶ್ನಿಸಿದರು. ಅದನ್ನು ಮಾಜಿ ಅಧ್ಯಕ್ಷರಿಗೆ ಸಹಿಸಲಾಗಲಿಲ್ಲ. ಇತ್ತೀಚಿನವರೆಗೂ ಸ್ನೇಹಿತರಾಗಿದ್ದ ತಾ.ಪ.ಸದಸ್ಯರು ಈ ರೀತಿ ತಿರುಗಿ ಬಿದ್ದದ್ದು ಮಾಜಿ ಅಧ್ಯಕ್ಷರಿಗೆ ನುಂಗಲಾರದ ತುತ್ತಾಯಿತು. ಹೆಚ್ಚು ಮಾತು ಬೆಳಸದೆ ಅವರು ಅಲ್ಲಿಂದ ಜಾಗ ಖಾಲಿ ಮಾಡಿದರು. ಹೀಗೆ ಅವರ ಸ್ನೇಹ ಹಿಂದಿನ ದಿನ ಕೆಟ್ಟು ಅಂದು ನಡೆಯಬೇಕಾದ ನೀರಿನ ಸಭೆಗೆ ತ್ರಿಶಂಕು ಸ್ಥಿತಿ ಬಂತು.

ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದ ಮಾಜಿ ಅಧ್ಯಕ್ಷರು ಮತ್ತು ತಾ.ಪ.ಸದಸ್ಯರು ಅದ್ಯಾಕೆ ಒಮ್ಮೊಂದೊಮ್ಮೆಲೆ ವೈರಿಗಳಾಗಿ ಬಿಟ್ಟರು ಎಂದು ಅಲ್ಲೇ ಇದ್ದ ಇನ್ನೊಬ್ಬರು ಪ್ರಶ್ನಿಸಿದರು. ಅವರ ಸ್ನೇಹಕ್ಕೆ ತಿಲಾಂಜಲಿ ಇತ್ತ ಕಾರಣವನ್ನು ಮತ್ತೊಬ್ಬರು ವಿವರಿಸಿದರು. ಮಾಜಿ ಅಧ್ಯಕ್ಷರು ತಮ್ಮ ಅಧಿಕಾರ ಅವಧಿಯಲ್ಲಿ ಈಗಿನ ತಾ.ಪ.ಸದಸ್ಯರ ಮಗನಿಗೆ ಹಳ್ಳಿಯ ಸರಹದ್ದಿನಲ್ಲೇ ಬಂದಿದ ಆರ್ಯುವೇದಿಕ್ ಮೆಡಿಕಲ್ ಕಾಲೇಜಲ್ಲಿ ಗುಮಾಸ್ತನ ಕೆಲಸ ಕೊಡಿಸುತ್ತೇನೆಂದು ಸ್ವಲ್ಪ ಹಣ ಪಡಕೊಂಡಿದ್ದರು. ಮಾಜಿ ಅಧ್ಯಕ್ಷರು ತಮ್ಮ ಅಧಿಕಾರ ಅವಧಿಯಲ್ಲಿ ಮಂಡಲದ ವ್ಯಾಪ್ತಿಯಲ್ಲಿ ಇದ್ದ ಐದು ಎಕರೆ ಭೂಮಿಯನ್ನು ಮೆಡಿಕಲ್ ಕಾಲೇಜಿಗೆ ಕೊಡಿಸಿದ್ದರು. ಆ ವ್ಯವಹಾರದಿಂದ ಅವರ ಮತ್ತು ಕಾಲೇಜು ಆಡಳಿತ ಮಂಡಳಿ ಮಧ್ಯೆ ಪರಿಚಯ ಉಂಟಾಯಿತು. ಆ ಪರಿಚಯದ ಆಧಾರದಲ್ಲಿ ಅವರು ತಾ.ಪ.ಸದಸ್ಯರ ಮಗನಿಗೆ ಕಾಲೇಜಲ್ಲಿ ಗುಮಾಸ್ತನ ಹುದ್ದೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಆ ಭರವಸೆಯನ್ನು ಅವರಿಗೆ ಈಡೇರಿಸಲಾಗಲಿಲ್ಲ. ಇದರಿಂದ ಬೇಸತ್ತ ತಾ.ಪ. ಸದಸ್ಯರು ಮಾಜಿ ಅಧ್ಯಕ್ಷರಿಂದ ಸ್ವಲ್ಪ ದೂರವೇ ಇದ್ದರು. ಹಾಲಿ ಪಂಚಾಯತ್ ಅಧ್ಯಕ್ಷರಿಗಂತೂ ತಾ.ಪ.ಸದಸ್ಯರ ಕೆಲಸ ಮಾಡಿ ಸ್ನೇಹ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇವೆಲ್ಲದರ ಪರಿಣಾಮವಾಗಿ ತಾ.ಪ.ಸದಸ್ಯರು ಸಾರ್ವಜನಿಕವಾಗಿ ಹಾಲಿ ಅಧ್ಯಕ್ಷರ ಪರ ನಿಲ್ಲುವಂತಾಯಿತು. ಹೀಗೆ ಊರ ಪ್ರಮುಖರ ಸಂಬಂಧಗಳ ವಿಶ್ಲೇಷಣೆ ಮಾಡುತ್ತಾ ಒಂದೂವರೆ ಗಂಟೆ ಕಳೆಯಿತು. ಅಷ್ಟೊತ್ತಿಗೆ ಬಾಳೆ ತೋಟ ನೋಡಲು ಹೋಗಿದ್ದ ಮಾಜಿ ಅಧ್ಯಕ್ಷರ ಗುಂಪು ಪಂಚಾಯತ್ ಆವರಣಕ್ಕೆ ಬಂತು. ಅವರನ್ನು ಕಂಡು ಸಂಯೋಜಕರು ಸಭೆ ಆರಂಭಿಸಿದರು. ಅಂದಿನ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಆಗಬೇಕಿತ್ತು. ಆ ವಿಚಾರವನ್ನು ಸಭೆಯ ಮುಂದಿಟ್ಟಾಗ ಮಾಜಿ ಅಧ್ಯಕ್ಷರು, ಬಳ್ಳಾರಿಗೆ ಹೋಗಿ ನಮ್ಮ ಕೆರೆ ಯೋಜನೆಯಲ್ಲಿ ಸೇರಿದೆಯೇ ಇಲ್ಲವೇ ಎಂದು ನೋಡಿ ಬರುವುದು ಒಳ್ಳೆಯದೆಂದು, ಪುನಃ ತಮ್ಮ ಹಳೇ ರಾಗ ತೆಗೆದರು. ಅದಕ್ಕೆ ಸಭೆ ಒಪ್ಪಿ ಯಾರು ಹೋಗುವುದೆಂದು ತೀರ್ಮಾನಿಸಲು ಸೂಚಿಸಿತು. ಪಂಚಾಯತ್ ಅಧ್ಯಕ್ಷರು ಹೋಗಿ ಬರಲಿ ಎಂದು ಮಾಜಿ ಅಧ್ಯಕ್ಷರು ಹೇಳಿದರು. ಕೆಲವರು ಮಾಜಿ ಅಧ್ಯಕ್ಷರು ಹಾಗೂ ತಾ.ಪ.ಸದಸ್ಯರು ಜತೆಗೆ ಹೋಗಲಿ ಎಂದರು. ತಾ.ಪ.ಸದಸ್ಯರು ತನಗೆ ಆಗುವುದಿಲ್ಲ. ತನ್ನ ಬದಲಿಗೆ ತಮ್ಮ ಸಂಬಂಧಿ ಯುವಕನ ಹೆಸರನ್ನು ಸೂಚಿಸಿ ಆತ ಬರುತ್ತಾನೆ ಎಂದು ಹೇಳಿ ಜಾರಿಕೊಂಡರು. ಸಭೆ ಅದಕ್ಕೆ ಒಪ್ಪಿಗೆ ನೀಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಕೆಲಸವನ್ನು ಪುನಃ ಮುಂದೂಡಿತು.

ಅರಿವು ಮೂಡಿಸುವುದು
ಒಂದು ತಿಂಗಳ ನಂತರ ಸಭೆ ಸೇರಿ ಪದಾಧಿಕಾರಿಗಳ ಆಯ್ಕೆ ಆಯಿತು. ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿ ಒಟ್ಟು ಐದು ಪದಾಧಿಕಾರಿಗಳನ್ನು ಆರಿಸಲಾಯಿತು. ಅಲ್ಲೂ ಪದಾಧಿಕಾರಿಗಳಾಗಲು ಯಾರು ಮುಂದೆ ಬಂದಿಲ್ಲ. ಕೆಲವರನ್ನು ಒತ್ತಾಯದಿಂದಲೇ ಒಪ್ಪಿಸಬೇಕಾಯಿತು. ಸಂಘಕ್ಕೆ ಜನ ಜಾಗೃತಿ ಸಮಿತಿ-ಪಾಪಿನಾಯಕನ ಹಳ್ಳಿ ಎಂದು ಹೆಸರಿಟ್ಟರು. ಪದಾಧಿಕಾರಿಗಳು ಬೇರ ಸಂಘ ಸಂಸ್ಥೆಗಳ ಬೈಲಾಗಳನ್ನು ನೋಡಿ ಸಂಘಕ್ಕೆ ಒಂದು ಬೈಲಾ ತಯಾರು ಮಾಡಿ ಆದಷ್ಟು ಬೇಗ ಸಂಘವನ್ನು ಸೊಸೈಟಿ ಕಾಯಿದೆ ಪ್ರಕಾರ ನೋಂದಾಯಿಸಬೇಕೆಂದು ತೀರ್ಮಾನಿಸಿದರು. ಹಿಂದೆ ಆಯ್ಕೆ ಆದ ಜಂಬೋ ಸಮಿತಿಯನ್ನು ಕಟ್ ಮಾಡಿ ಒಟ್ಟ ಕಾರ್ಯಕಾರಿ ಸಮಿತಿ ಸದಸ್ಯರ ಸಂಖ್ಯೆಯನ್ನು ಹದಿನೈದಕ್ಕೆ (ಪದಾಧಿಕಾರಿಗಳನ್ನು ಸೇರಿಸಿ) ಮಿತಿಗೊಳಿಸಲಾಯಿತು. ಅದಕ್ಕೆ ಕಾರಣವೂ ಇತ್ತು. ಅಂದು ಪಟ್ಟಿ ಮಾಡುವಾಗ ಆಸಕ್ತಿ ಇದ್ದವರು ಇಲ್ಲದವರು ಎಲ್ಲರ ಹೆಸರುಗಳನ್ನು ಸೇರಿಸಲಾಗಿತ್ತು. ಅವರಲ್ಲಿ ಕೆಲವರಂತು ಹಿಂದೆ ನಡೆದ ಯಾವುದೇ ಸಭೆಗೂ ಹಾಜರಾಗಿಲ್ಲ. ಅಂತವರನ್ನು ಯಾಕೆ ಮುಂದುವರಿಸಬೇಕೆಂದು ಕಾರ್ಯಕಾರಿ ಸಮಿತಿ ಸದಸ್ಯರ ಸಂಖ್ಯೆಯನ್ನು ಹದಿನೈದಕ್ಕೆ ಇಳಿಸಿತು.

ಕಾರ್ಯಕಾರಿ ಸಮಿತಿಯ ಪ್ರಥಮ ಮೀಟಿಂಗ್‌ನಲ್ಲಿ ಸೆಟ್ಟಿಕೆರೆ ನಿರ್ಮಾಣ ಮತ್ತು ಈಶ್ವರನ ಕೆರೆ ರಿಪೇರಿ ಕುರಿತು ಜನರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಹಾಕಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಅದಕ್ಕೊಂದು ಹೊಸ ಕಾರ್ಯಕ್ರಮ ಹಾಕಿಕೊಳ್ಳುವ ಬದಲು ಈಗಾಗಲೇ ಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲು ಪ್ರಯತ್ನಿಸಬೇಕೆಂದು ತೀರ್ಮಾನವಾಯಿತು. ಅವರ ಆಶಯಕ್ಕೆ ಪೂರಕವೇ ಎಂಬಂತೆ ಕೆಲವೇ ದಿನಗಳಲ್ಲಿ ಊರಲ್ಲಿ ನಡೆಯಲಿರುವ ವಾರ್ಷಿಕ ಸತ್ಯ ನಾರಾಯಣ ಪೂಜೆ ಸುದ್ದಿಯನ್ನು ಸದಸ್ಯರೊಬ್ಬರು ತಿಳಿಸಿದರು. ಅದು ಯಾವಾಗಲೂ ಊರ ಮಧ್ಯ ಇರುವ ಗುಡಿಯಲ್ಲಿ ನಡೆಯುತ್ತದೆ. ಊರ ಪ್ರಮುಖರನ್ನು ಒಪ್ಪಿಸಿ ಈ ಬಾರಿ ಅದನ್ನು ಸೆಟ್ಟಿಕೆರೆ ಪಾತ್ರದಲ್ಲಿ ಏರ್ಪಡಿಸಬೇಕೆಂದು ತೀರ್ಮಾನವಾಯಿತು. ಅದೇ ಸಂದರ್ಭದಲ್ಲಿ ಕೆರೆ ನಿರ್ಮಾಣ ಮತ್ತು ರಿಪೇರಿ ಬಗ್ಗೆ ಊರವರಿಗೆ ಮನವರಿಗೆ ಮಾಡಬಹುದೆಂಬ ಆಲೋಚನೆ ಸಂಘದ್ದು. ಊರಲ್ಲಿ ನಡೆಯುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ಊರ ಪ್ರಮುಖರು ವಹಿಸುತ್ತಾರೆ. ಪ್ರಮುಖರ ಪಟ್ಟಿಯಲ್ಲಿ ಊರಿನ ಪ್ರಮುಖ ಜಾತಿಗಳಿಂದ ಪ್ರತಿನಿಧಿಗಳಿದ್ದಾರೆ. ಹಿಂದೆ ಪಂಚಾಯತ್ ಅಧ್ಯಕ್ಷರು ಮೇಲ್ ಜಾತಿಯವರಿದ್ದಾಗ ಅವರು ಪ್ರಮುಖರ ಪಟ್ಟಿಯಲ್ಲಿ ಅನಿವಾರ್ಯವಾಗಿ ಇರುತ್ತಿದ್ದರು. ಯಾವಾಗ ಅಧ್ಯಕ್ಷಗಿರಿ ಕೆಳ ಜಾತಿಗೆ ಬಂತೋ ಅಂದಿನಿಂದ ಅಧ್ಯಕ್ಷರು ಊರ ಪ್ರಮುಖರ ಪಟ್ಟಿಯಲ್ಲಿ ಇರುವುದು ಗ್ಯಾರಂಟಿ ಇಲ್ಲ. ಕೆರೆ ಪಾತ್ರದಲ್ಲಿ ಸತ್ಯ ನಾರಾಯಣ ಪೂಜೆಯನ್ನು ಮಾಡಬೇಕೆಂಬ ಸಂಘದವರ ಸಲಹೆಯನ್ನು ಊರ ಪ್ರಮುಖರಿಗೆ ಜೀರ್ಣಿಸಿಕೊಳ್ಳಲು ಆಗಲಿಲ್ಲ. ಗುಡಿಯಲ್ಲಿ ಮಾಡಬೇಕಾದನ್ನು ಆ ನೀರಿಲ್ಲದ ಕೆರೆ ಪಾತ್ರದಲ್ಲಿ ಮಾಡಬೇಕೆಂದು ಹೇಳುವವರನ್ನು ತಲೆ ಕೆಟ್ಟವರೆಂದು ನೇರ ಹೇಳಲಿಲ್ಲ. ಆದರೆ ಅದೇ ಅರ್ಥ ಬರುವ ರೀತಿಯಲ್ಲಿ ವರ್ತಿಸಿದರು. ಸಂಘದವರ ಸಲಹೆಯನ್ನು ಖಡಾಖಂಡಿತವಾಗಿ ವಿರೋಧಿಸಿದರು. ಪ್ರಮುಖರು ವಿರೋಧಿಸಿದರೆ ಪರವಾಗಿಲ್ಲ. ಊರಿನವರನ್ನು ಒಪ್ಪಿಸಿದರೆ ಆ ಕೆಲಸ ಮಾಡಿಸಬಹುದೆಂದು ಮತ್ತೆ ಕೆಲವರು ಸಲಹೆ ನೀಡಿದರು. ಅದರಂತೆ ಊರಿನವರನ್ನು ವಿಚಾರಿಸಿದರೆ ಕೆಲವರು ನಂಬಿಕೆಯ ದೃಷ್ಟಿಯಿಂದ ವಿರೋಧಿಸಿದರೆ ಮತ್ತೆ ಕೆಲವರು ಅಷ್ಟು ದೂರ (ಕೆರೆ ಊರಿಂದ ಸುಮಾರು ಎರಡು ಕಿ.ಮೀ.ದೂರದಲ್ಲಿದೆ)ಯಾರು ಹೋಗುತ್ತಾರೆ ಎಂದು ಸಂಘದ ಸಲಹೆಯನ್ನು ತಿರಸ್ಕರಿಸಿದರು. ಈ ಜನರಿಗೆ ನೀರು ಮತ್ತು ಕೆರೆಯ ಮಹತ್ವನ್ನು ಅರ್ಥ ಮಾಡಿಸುವುದಾದರೂ ಹೇಗೆ? ವ್ಯಕ್ತಿಗತವಾಗಿ ಮಾತಾಡಿಸಿದರೆ ಪ್ರತಿಯೊಬ್ಬರೂ ಕೆರೆ ರಿಪೇರಿ ಆಗಬೇಕು ಅಥವಾ ನಿರ್ಮಾಣ ಆಗಬೇಕೆಂದು ಹೇಳುತ್ತಾರೆ. ಅದನ್ನು ಯಾರೂ ಮಾಡಬೇಕು? ಊರವರ ಪ್ರಕಾರ ಅದು ನಾಯಕರ ಕರ್ತವ್ಯ. ಊರಿನ ಹಿರಿಯ ನಾಯಕರ ಪ್ರಕಾರ ಅದು ಜಿಲ್ಲಾ ಅಥವಾ ರಾಜ್ಯ ಮಟ್ಟದ ನಾಯಕರ ತೀರ್ಮಾನಕ್ಕೆ ಬಿಟ್ಟ ವಿಚಾರ. ಹೀಗೆ ಇದೊಂದು ರೀತಿ ಕೊನೆಯೇ ಇಲ್ಲದ ಕತೆಯಾಯಿತು.

ಈ ರೀತಿ ಇತರ ಕಾರ್ಯಕ್ರಮಗಳಲ್ಲಿ ತೂರಿಕೊಂಡು ಅರಿವು ಮೂಡಿಸುತ್ತೇವೆ ಎಂದರೆ ನಮ್ಮ ಕೆಲಸ ಆಗಲಿಕ್ಕಿಲ್ಲ; ಇದಕ್ಕಾಗಿ ಪ್ರತ್ಯೇಕ ಕಾರ್ಯಕ್ರಮ ಹಾಕಿಕೊಳ್ಳಬೇಕೆಂದು ಸಂಘದ ಸದಸ್ಯರು ತೀರ್ಮಾನಿಸಿದರು. ಕಾರ್ಯಕಾರಿ ಸಮಿತ ಸಭೆ ಕರೆತು ಪ್ರತಿ ಸದಸ್ಯರೂ ಕನಿಷ್ಠ ಹತ್ತು ನೀರು ಬಳಕೆದಾರರನ್ನು ಒಟ್ಟು ಸೇರಿಸಬೇಕು. ಹಾಗೆ ಸೇರಿಸಿದ ನೀರು ಬಳಕೆದಾರರ ಸಣ್ಣ ಸಣ್ಣ ಗುಂಪು ಮಾಡಿ ಅವರಿಗೆ ಸಹಭಾಗಿತ್ವ ಕುರಿತ ಕಾರ್ಯಗಾರ ಮಾಡುವುದೆಂದು ನಿರ್ಧರಿಸಲಾಯಿತು. ಪ್ರತಿಯೊಬ್ಬರು ಹತ್ತು ನೀರು ಬಳಕೆದಾರರನ್ನು ಒಟ್ಟು ಸೇರಿಸಬೇಕು. ಹಾಗೆ ಸೇರಿಸಿದ ನೀರು ಬಳಕೆದಾರರ ಸಣ್ಣ ಸಣ್ಣ ಗುಂಪು ಮಾಡಿ ಅವರಿಗೆ ಸಹಾಭಾಗಿತ್ವ ಕುರಿತ ಕಾರ್ಯಗಾರ ಮಾಡುವುದೆಂದು ನಿರ್ಧರಿಸಲಾಯಿತು. ಪ್ರತಿಯೊಬ್ಬರು ಹತ್ತು ನೀರು ಬಳಕೆದಾರರನ್ನು (ಸದಸ್ಯತನದ ಜತೆಗೆ) ಗುರುತಿಸಿದರೆ ಕನಿಷ್ಠ ನೂರೈವತ್ತು ಬಳಕೆದಾರರನ್ನು ಸೇರಿಸಬಹುದು. ಆದರೆ ನಿರ್ದಿಷ್ಟ ದಿನದಂದು ನಾಲ್ವತ್ತು ಬಳಕೆದಾರರನ್ನೂ ಸೇರಿಸಲಾಗಲಿಲ್ಲ. ಸದಸ್ಯರಲ್ಲಿ ಕೇಳಿದರೆ ಅವರು ಗುರುತಿಸಿದ ಬಳಕೆದಾರರು ಬರುತ್ತೇವೆ ಎಂದು ಒಪ್ಪಿದ್ದಾರೆ; ಆದರೆ ಬಂದಿಲ್ಲ. ಯಾಕೆ ಬಂದಿಲ್ಲವೆಂದು ಅವರಿಗೂ ಗೊತ್ತಿಲ್ಲ. ಸ್ಥಳೀಯ ಸರಕಾರೇತರ ಸಂಸ್ಥೆಯ ಸಹಕಾರದಿಂದ ಬಂದ ಬಳಕೆದಾರರಿಂದ ಸಹಭಾಗಿತ್ವ ವಿಧಾನದಲ್ಲಿ ಕೆರೆ ನಿರ್ಮಾಣ ಮತ್ತು ರಿಪೇರಿ ಕುರಿತು ಮಾಹಿತಿ ಸಂಗ್ರಹಿಸಲಾಯಿತು. ಎಂಟು ಜನರ ಐದು ಗುಂಪು ಮಾಡಿ ಪ್ರತಿ ಗುಂಪು ಕೂಡ ಮೇಲಿನ ಸಮಸ್ಯೆಯ ಕುರಿತು ಚರ್ಚಿಸಿ ಅದರ ಪರಿಹಾರ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ತಿಳಿಸಲಾಯಿತು. ಮೊದಮೊದಲು ಬಂದ ರೈತರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಬಂದಿದ್ದ ಪರಿಣಿತರು ರೈತರಿಗೆ ಅವರೇನು ಮಾಡಬೇಕೆಂದು ಮತ್ತೊಂದು ಬಾರಿ ಮನವರಿಕೆ ಮಾಡಿದರು. ನಂತರ ಪ್ರತಿ ಗುಂಪು ಚದರಿ ಬೇರೆ ಬೇರ ಸ್ಥಳದಲ್ಲಿ ಕುಳಿತು ಸುಮಾರು ಅರ್ಧ ಗಂಟೆ ಹೊತ್ತು ಚರ್ಚಿಸಿತು. ಒಂದು ಗುಂಪು ತಮ್ಮ ಅಭಿಪ್ರಾಯಗಳನ್ನು ಮಂಡಿಸುವಾಗ ಉಳಿದ ಗುಂಪುಗಳು ಅದರ ವಿಮರ್ಶೆ ಮಾಡಬೇಕಿತ್ತು. ಮೊದಲ ಗುಂಪು ಕೆರೆ ನಿರ್ಮಾಣವಾಗಬೇಕು, ಅದಕ್ಕಾಗಿ ಜಿಲ್ಲಾ ಪಂಚಾಯತಿನಿಂದ ಹಿಡಿದು ಮಂತ್ರಿಗಳವರೆಗೆ ರೈತರು ಹೋಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕೆಂದು ಸೂಚಿಸಿತು. ಸಾಧ್ಯವಾದಷ್ಟು ಧನ ಸಹಾಯ ನೀಡುವುದು ಮತ್ತು ಕೆರೆ ರಿಪೇರಿಗೆ ಶ್ರಮದಾನ ಮಾಡುವುದು ಮಾತ್ರ ತಮ್ಮಿಂದ ಆಗಬಹುದಾದ ನೇರ ಭಾಗವಹಿಸುವಿಕೆ ಎಂದರು. ಉಳಿದ ಒಂದು ಗುಂಪನ್ನು ಹೊರತು ಪಡಿಸಿ ಎಲ್ಲ ಗುಂಪುಗಳು ಹೆಚ್ಚು ಕಡಿಮೆ ಅದೇ ಅಭಿಪ್ರಾಯವನ್ನು ಬೇರೆ ಬೇರೆ ರೂಪದಲ್ಲಿ ತಿಳಿಸಿದವು.

ಸಂಘದ ಅಧ್ಯಕ್ಷರು ಮತ್ತು ಕೆಲವು ಓದಿದ ಸದಸ್ಯರಿದ್ದ ಗುಂಪು ತುಂಬ ಉಪಯುಕ್ತ ಮಾಹಿತಿ ನೀಡಿತು. ಆ ಗುಂಪಿನ ಪ್ರಕಾರ ಕೆರೆ ನಿರ್ಮಾಣ ಅಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ಒಂದು ಕಾರಣ ಹಳ್ಳಿಯಲ್ಲಿನ ಒಗ್ಗಟಿನ ಕೊರತೆ. ಅವರ ಪ್ರಕಾರ ಆ ಸಮಸ್ಯೆಯನ್ನು ಹೇಗಾದರೂ ಸುಧಾರಿಸಬಹುದು. ಆದರೆ ಅದಕ್ಕಿಂತಲೂ ಗಂಭೀರವಾದ ಸಮಸ್ಯೆ ಗಣಿಮಾಲಿಕರು ಕೆರೆ ನಿರ್ಮಾಣವಾಗದಂತೆ ತಡೆಯುವ ಸಾಧ್ಯತೆ. ಯಾಕೆಂದರೆ ಈಗ ಗಣಿ ಪ್ರದೇಶಕ್ಕೆ ಹೋಗುವ ರಸ್ತೆ ಕೆರೆ ಪಾತ್ರದಲ್ಲಿ ಹೋಗುತ್ತದೆ. ಒಂದು ವೇಳೆ ಕೆರೆ ನಿರ್ಮಾಣವಾದರೆ ಗಣಿ ಮಾಲಿಕರು ಬೇರೆ ರಸ್ತೆ ಮಾಡಿಕೊಳ್ಳಬೇಕು. ಅದು ತುಂಬ ಸುತ್ತು ಬಳಸು ಆಗುತ್ತದೆ. ಅದಕ್ಕೆ ವಿನಿಯೋಜಿಸಬೇಕಾದ ಬಂಡವಾಳ ತುಂಬಾ ಜಾಸ್ತಿ ಆಗಬಹುದು. ಈ ಸಮಸ್ಯೆಯಿಂದ ಹೊರ ಬರಲು ಸಂಬಂಧ ಪಟ್ಟ ಕಡತಗಳನ್ನು ನೋಡುವ ಗುಮಾಸ್ತನಿಗೆ ಕೆಲವು ನೂರು ರೂಪಾಯಿ ಕೊಟ್ಟರೆ ಕೆರೆ ನಿರ್ಮಾಣವನ್ನು ಮುಂದಕ್ಕೆ ಹಾಕುತ್ತಾ ಹೋಗಬಹುದಲ್ಲ. ಎರಡು, ಊರವರು ಕೆರೆ ನಿರ್ಮಾಣ ಮತ್ತು ರಿಪೇರಿಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ಅವರಿಗೆ ಸಮಸ್ಯೆಯ ಅರಿವಿರಬೇಕು. ಬಹುತೇಕ ಬಳಕೆದಾರರಿಗೆ ಅದರ ಅರಿವು ಇಲ್ಲ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಇದಕ್ಕಾಗಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಒಳಗೊಂಡಂತೆ ಹಲವಾರು ಸಮಿತಿಗಳನ್ನು ಮಾಡಿ ಪ್ರತಿಯೊಂದು ಸಮಿತಿಗೂ ಸತತವಾಗಿ ಕೆಲವು ಚಟುವಟಿಕೆಗಳನ್ನು ಮಾಡಬಹುದೆಂದು ಆ ಗುಂಪು ಸೂಚಿಸಿತು. ಬೀದಿ ನಾಟಕ ಮೂಲಕ ನೀರಿನ ಸಮಸ್ಯೆ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಸೆಟ್ಟಿಕೆರೆ ಪಾತ್ರದಲ್ಲಿ ಕರ ಸೇವೆ ಮಾಡುವುದು, ಈಶ್ವರನ ಕೆರೆಯ ಹೂಳೆತ್ತಲು ಶ್ರಮದಾನ ಮಾಡುವುದು ಇತ್ಯಾದಿಗಳು ಆ ಗುಂಪು ಸೂಚಿಸಿದೆ ಕಾರ್ಯಕ್ರಮಗಳಲ್ಲಿ ಕೆಲವು.

ಕೋಳಿ ಜಗಳ
ಸಂಘದ ವತಿಯಿಂದ ಕೆರೆ ನೀರಾವರಿ ಬಗ್ಗೆ ಇಷ್ಟೆಲ್ಲ ಯೋಜನೆಗಳು ರೂಪುಗೊಳ್ಳುತ್ತಿರುವಾಗಲೇ ಹಳ್ಳಿಯಲ್ಲಿ ಒಂದು ಘಟನೆ ನಡೆಯಿತು. ಅದು ಸಂಘದ ಚಟುವಟಿಕೆಗೆ ದೊಡ್ಡ ಹೊಡೆತ ನೀಡಿತು. ಅದನ್ನು ಸಂಕ್ಷಿಪ್ತವಾಗಿ ವಿವರಿಸುತ್ತೇನೆ. ಊರಿನ ಕುಟುಂಬವೊಂದರಲ್ಲಿ ಗಂಡ ಹೆಂಡತಿ ನಡುವೆ ಜಗಳ ಆಗಿ ಬೇರ್ಪಟ್ಟಿದ್ದರು. ಹಾಗೆಂದು ಕೋರ್ಟ್‌‌ಗೆ ಹೋಗಿ ಫಾರ್ಮಲ್ ವಿಚ್ಚೇಧನೆ ಪಡೆದಿಲ್ಲ. ಗಂಡ ಹೆಂಡತಿಯಾಗಿ ಮುಂದುವರಿಯುವುದು ಸಾಧ್ಯವಿಲ್ಲ ಎಂದು ಮನವರಿಕೆಯಾದ ನಂತರ ಅವರು ಬೇರೆ ಬೇರೆ ಮನೆ ಮಾಡಿ ವಾಸವಾಗಿದ್ದರು. ಇದ್ದ ಎರಡು ಮಕ್ಕಳು, ಒಂದು ಗಂಡು ಮತ್ತು ಒಂದು ಹೆಣ್ಣು, ತಾಯಿ ಜತೆ ಇದ್ದವು. ಬೇರ್ಪಟ್ಟು ದಂಪತಿಗಳ ಮನೆಗಳು ಅಕ್ಕ ಪಕ್ಕದಲ್ಲೆ ಇದ್ದವು. ಒಂದು ದಿನ ಗಂಡನ ಮನೆಯ ಕೋಳಿಯೊಂದು ಹೆಂಡತಿ ಮನೆಯ ಜಗಳಿಯಲ್ಲಿ ಇಕ್ಕೆ ಹಾಕಿತು. ಅದಕ್ಕೆ ಹಿಡಿ ಶಾಪ ಹಾಕುತ್ತ ಹೆಂಡತಿ ಕಲ್ಲು ಬೀರಿದಳು. ಅದು ನೇರ ಹೋಗಿ ಗಂಡನ ಹಣೆಗೆ ಬಡಿಯಿತು. ಅವಳು ಉದ್ದೇಶ ಪೂರಿತವಾಗಿ ಗಂಡನಿಗೆ ಕಲ್ಲಿನಿಂದ ಬಡಿದಳೋ ಅಥವಾ ಕೋಳಿಗೆಂದು ಬಿಸಾಕಿದ ಕಲ್ಲು ಗಂಡನಿಗೆ ತಗಲಿತೋ. ಹೇಳುವುದು ಕಷ್ಟ. ಗಂಡನಿಗೆ ಕಲ್ಲಿನ ಏಟು ಬಿದ್ದದಂತೂ ನಿಜ. ಆ ಸಿಟ್ಟಿನಿಂದ ಆತ ಹೆಂಡತಿಯನ್ನು ಹಿಗ್ಗಾ ಮುಗ್ಗಾ ಬಡಿದ. ಅಲ್ಲಿಗೆ ಆ ಜಗಳ ನಿಂತ ಹಾಗೆ ಕಂಡಿತು.

ಆದರೆ ಆ ರೀತಿ ಆಗಲಿಲ್ಲ. ಹೆಂಡತಿ ಜತೆಗಿರುವ ಮಕ್ಕಳಿಬ್ಬರು ಹೊಸಪೇಟೆಯ ಹಿಂದುಳಿದ ವರ್ಗಗಳ ಹಾಸ್ಟೇಲ್‌ಲ್ಲಿ ಇದ್ದುಕೊಂಡು ಓದುತ್ತಿದ್ದಾರೆ. ಅವರು ತಮ್ಮ ತಾಯಿಗೆ ವಿಚ್ಚೇದಿತ ತಂದೆ ಬಡಿತ ಘಟನೆಯನ್ನು ತಮ್ಮ ಸ್ನೇಹಿತರಿಗೆ ತಿಳಿಸಿದ್ದಾರೆ. ಅವರ ಸ್ನೇಹಿತರಲ್ಲಿ ಕೆಲವರು ನಾಯಕ ಸಮುದಾಯಕ್ಕೆ ಸೇರಿದವರು. ಹೊಪೇಟೆಯಲ್ಲಿ ನಾಯಕ ಸಮುದಾಯದ ಯುವಕರು ಸಂಘಟಿತರಾಗಿದ್ದಾರೆ. ನಾಯಕ ಸಮುದಾಯದ ಕೆಲವು ಯುವಕರು ಒಂದು ಸಂಜೆ ಹಳ್ಳಿಗೆ ಬಂದು ಹೆಂಡತಿಗೆ ಗಂಡನನ್ನು ಬಾಯಿಗೆ ಬಂದಂತೆ ಬೈಯಲು ಆರಂಭಿಸಿದರು. ಊರಿನ ಕೆಲವು ಹಿರಿಯರು ಅವರಿಗೆ, ‘ನೋಡಿ ಇದು ನಮ್ಮ ಊರಿನ ಸಮಸ್ಯೆ ಇದಕ್ಕೆ ನೀವು ಹೊರಗಿನವರು ತಲೆ ಹಾಕಬೇಡಿ,’ ಎಂದು ಸಮಾಜದಲ್ಲೇ ಹೇಳಿದರು. ಆದರೆ ಯುವ ರಕ್ತ ಸಮದಾನದ ಮಾತಿಗೆ ಸೊಪ್ಪು ಹಾಕಲಿಲ್ಲ. ಸುತ್ತಮುತ್ತ ಜನ ಸೇರಿದರು. ಎರಡು ಪಕ್ಷಗಳಿಂದಲೂ ಬೈಗಳ ಯುದ್ಧ ನಡೆದಿತ್ತು. ಅಷ್ಟು ಹೊತ್ತಿಗೆ ಅಲ್ಲಿಗೆ ಅದೇ ಹಳ್ಳಿಯ ಮಾಜಿ.ತಾ.ಪ.ಅಧ್ಯಕ್ಷರು ಬಂದರು. ಸುತ್ತು ಸೇರಿದವರಲ್ಲಿ ಜಗಳದ ಕಾರಣ ತಿಳಿದುಕೊಂಡ ತಾ.ಪ. ಅಧ್ಯಕ್ಷರು ಯುವಕರನ್ನು ಕರೆದು ನೀವು ಆದಷ್ಟು ಬೇಗ ಜಾಗ ಖಾಲಿ ಮಾಡಿದರೆ ನಿಮಗೆ ಒಳ್ಳೆಯದು ಎಂದು ಗದರಿಸಿದರು. ಆದರೆ ಯುವಕರು ಅದಕ್ಕೂ ಸೊಪ್ಪು ಹಾಕಲಿಲ್ಲ. ಆವಾಗ ಮಾಜಿ ಅಧ್ಯಕ್ಷರು ಒಬ್ಬ ಯುವಕನ ಕೊರಳಪಟ್ಟಿ ಹಿಡಿದು ಬಾರಿಸಿದರು. ಒಬ್ಬನಿಗೆ ಏಟು ಬಿದ್ದರೆ ತಡ ಊರವರು ಉಳಿದ ಯುವಕರನ್ನು ಅಟ್ಟಿಸಿಕೊಂಡು ಹೋಗಿ ಹಿಗ್ಗಾಮುಗ್ಗಾ ಬಾರಿಸಿದರು. ಏಟು ತಿಂದು ಹೋದ ಯುವಕರು ಸುಮ್ಮನಿರಲಿಲ್ಲ. ತಮ್ಮ ಸಮುದಾಯದ ಯುವಕರ ಒಂದು ದೊಡ್ಡ ಗುಂಪು ಮಾಡಿಕೊಂಡು ಬಳ್ಳಾರಿ ಸರ್ಕಲ್ ಬಳಿ ಬಂದರು. ಹೊಸಪೇಟೆ ಬಸ್‌ ನಿಲ್ದಾಣದಿಂದ ಒಂದು ಅಥವಾ ಒಂದೂವರೆ ಕಿ.ಮೀ.ದೂರದಲ್ಲಿ ಬಳ್ಳಾರಿ ಸರ್ಕಲ್ ಇದೆ. ಬಳ್ಳಾರಿ ಕಡೆ ಹೋಗುವ ಎಲ್ಲ ವಾಹನಗಳೂ ಇಲ್ಲಿಂದಲೇ ಹೋಗಬೇಕು. ಏಟು ತಿಂದ ಯುವಕರು ಮತ್ತು ಅವರ ಸಂಗಡಿಗರು ಬಳ್ಳಾರಿ ಕಡೆ ಹೋಗುವ ಆಟೋ, ಮಿನಿ ಬಸ್, ಮೆಟಡೋರ್ ಗಳನ್ನು ನಿಲ್ಲಿಸಿ ನೀವು ಯಾವ ಹಳ್ಳಿಯವರೆಂದು ಕೇಳಿ ಅವರು ಪಿ.ಕೆ.ಹಳ್ಳಿಯವರೆಂದ ಕೂಡಲೇ ವಾಹನಗಳಿಂದ ಇಳಿಸಿ ಹೊಡೆಯಲು ಶುರು ಮಾಡಿದರು.

ಯುವಕರಿಂದ ಏಟು ತಿಂದವರಿಗೂ ಹಿಂದಿನ ದಿನ ಊರಲ್ಲಿ ನಡೆದ ಘಟನೆಗೂ ಏನೇನೂ ಸಂಬಂಧವಿರಲಿಲ್ಲ. ಅವರು ಜಗಳ ಆದಾಗ ಸ್ಥಳಕ್ಕೂ ಬಂದಿರಲಿಲ್ಲ. ಕಾರಣವಿಲ್ಲದೆ ಏಟು ತಿನ್ನುವುದನ್ನು ಸಹಿಸಲಾಗಲಿಲ್ಲ. ಏಟು ತಿಂದವರು ಹಳ್ಳಿಗೆ ಬಂದು ನೇರ ಹೋಗಿ ಹೆಂಗಸನ್ನು ಬೈಯುತ್ತಿದ್ದರು. ಆ ಯುವಕರಿಗೆ ಹೊಡೆಯುವುದನ್ನು ನಿಲ್ಲಿಸಲು ಹೇಳು ಇಲ್ಲದಿದ್ದರೆ ನಿನ್ನನ್ನು ಊರಿಂದ ಬಹಿಷ್ಕಾರ ಹಾಕಿಸುತ್ತೇವೆ ಎಂದು ಗದರಿದರು. ಆದರೆ ಮರು ದಿವಸ ಕೂಡ ಇದೇ ಘಟನೆ ಮರುಕಳುಹಿಸಿತು. ಈ ಬಾರಿ ಏಟು ತಿಂದವರು ಊರಲ್ಲಿ ಯುವಕರಿಗೆ ಮೊದಲು ಬಾರಿಸಿದ ಮಾಜಿ ತಾ.ಪ.ಅಧ್ಯಕ್ಷರ ಹತ್ತಿರ ಹೋಗಿ ‘ಇದೆಲ್ಲ ನಿನ್ನಿಂದಲೇ ಆಗಿರುವುದು, ನೀನು ಹೋಗಿ ಆ ಯುವಕರನ್ನು ಸಮದಾನ ಪಡಿಸಬೇಕೆಂದು,’ ಒತ್ತಾಯ ಮಾಡಿದರು. ಏಟು ತಿಂದವರಲ್ಲಿ ಕೆಲವರು ನೀರಿನ ಸಂಘದ ಸದಸ್ಯರು. ಅವರು ನೇರ ಬಂದು ಸಂಘದ ಅಧ್ಯಕ್ಷರಲ್ಲಿ ಆದ ಘಟನೆಯನ್ನು ವಿವರಿಸಿ ಇದನ್ನು ಹೇಗಾದರೂ ಮಾಡಿ ನೀವು ನಿಲ್ಲಿಸಬೇಕೆಂದು ಹೇಳಿದರು. ‘ಗುಂಪುಗಟ್ಟಿ ಸಾರ್ವಜನಿಕವಾಗಿ ಹೊಡೆಯುವುದೆಂದರೇನು? ಇದೇನು ಗುಂಡಾ ರಾಜವೇ? ನೀವು ಏಟು ತಿಂದುಕೊಂಡು ಇಲ್ಲಿ ತನಕ ಬಂದಿದ್ದೀರಲ್ಲ; ಅಲ್ಲೇ ಪೋಲಿಸ್ ಸ್ಟೇಷನ್ ಇತ್ತಲ್ಲ? ದೂರ ಕೊಡಬೇಕಿತ್ತು. ಈಗಲೂ ಸಮಯ ಮೀರಿಲ್ಲ. ಬನ್ನಿ ನಾನು ಬರುತ್ತೇನೆ ಪೋಲಿಸ್ ಸ್ಟೇಷನ್ ಹೋಗಿ ದೂರು ಕೊಡುವ,’ ಎಂದರು. ಅದಕ್ಕೆ ಏಟು ತಿಂದವರು ರೆಡಿ ಇಲ್ಲ. ಇನ್ನು ಪೋಲಿಸ್ ಠಾಣೆಗೆ ಹೋದರೆ ಅದು ಅಷ್ಟು ಸುಲಭದಲ್ಲಿ ಮುಗಿಯುವುದಿಲ್ಲ. ಅಧ್ಯಕ್ಷರು ಮತ್ತ ಇತರ ಪ್ರಮುಖರು ಮಾತಾಡಿ ಆ ಸಮಸ್ಯೆಯನ್ನು ಪರಿಹರಿಸಬೇಕೆಂದು ಏಟು ತಿಂದವರ ಬಯಕೆ. ಅವರ ಆ ಸಲಹೆಗೆ ಸಂಘದ ಅಧ್ಯಕ್ಷರು ಒಪ್ಪಲಿಲ್ಲ. ಏಟು ತಿಂದವರು ಮಾಜಿ ತಾ.ಪ.ಅಧ್ಯಕ್ಷರನ್ನು ಸಮಸ್ಯೆ ಪರಿಹರಿಸಲು ಒತ್ತಾಯಿಸತೊಡಗಿದರು. ಕಡೆಗೂ ಆ ಸಮಸ್ಯೆ ಪೋಲಿಸ್ ಠಾಣೆಗೆ ಹೋಗದೆ ಮಾತುಕತೆಯಲ್ಲೇ ಪರಿಹಾರವಾಯಿತು. ಇದಿಷ್ಟು ನಡೆದ ಘಟನೆ.

ಈ ಘಟನೆ ನಡೆದ ಕೆಲವು ದಿನಗಳ ನಂತರ ನೀರಿನ ಸಂಘದ ಸಭೆ ಕರೆದರು. ಕಾರ್ಯಕಾರಿ ಸಮಿತಿಯ ಅರ್ಧದಷ್ಟು ಜನ ಬರಲಿಲ್ಲ. ಸಭೆ ಇದೆಯೆಂದು ಬಂದವರಲ್ಲಿ ಕೆಲವರು ಬಾರದವರ ಮನೆಗೆ ಹೋಗಿ ಬಾರದಿರಲು ಕಾರಣ ಏನೆಂದು ವಿಚಾರಿಸಿದರು. ಸ್ವಲ್ಪ ದಿನ ಹಿಂದೆ ನಡೆದ ಘಟನೆಯೇ ಕಾರಣವೆಂದು ಅವರ ಗಮನಕ್ಕೆ ಬಂತು. ತಮಗೆ ಸಮಸ್ಯೆ ಆದಾಗ ಬಾರದ ಸಂಘ ಇದ್ದರೇನು?ಬಿಟ್ಟರೇನು? ಎನ್ನುವುದು ಬಾರದಿರುವವರ ವಾದ. ಸಂಘದ ಉದ್ದೇಶವೇ ಬೇರೆ. ಅದು ಬಿಟ್ಟ ಎಲ್ಲ ವಿಚಾರಗಳಲ್ಲೂ ಸಂಘ ತಮ್ಮ ಹಿಂದೆ ನಿಲ್ಲಬೇಕೆಂದು ಬಯಸುವುದು ಸರಿಯಲ್ಲ ಎಂದು ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಬಾರದಿರುವವರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವರು ಒಪ್ಪಲೇ ಇಲ್ಲ. ಸರಿ ಅರ್ಧಕ್ಕಿಂತಲೂ ಹೆಚ್ಚು ಸದಸ್ಯರು ಬರದಿದ್ದರೆ ಸಭೆ ನಡೆಸುವುದಾದರೂ ಹೇಗೆ? ಇನ್ನು ಹಿಂದಿನ ಬಾರಿ ಯೋಜಿಸಿದಂತೆ ಊರವರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಂತು ದೂರವೇ ಉಳಿಯಿತು. ಹೀಗೆ ಕೆಲವು ತಿಂಗಳು ಕಳೆಯಿತು. ಯಾರು ನೀರಿನ ಸಂಘದ ಬಗ್ಗೆ ಮಾತಾಡಲಿಲ್ಲ. ಸಂಘ ಹೇಗೋ ಜೀವಂತ ಇತ್ತು ಎನ್ನುವುದನ್ನು ಬಿಟ್ಟರೆ ಬೇರೆ ಕಾರ್ಯಕ್ರಮಗಳು ಸಂಘದ ವತಿಯಿಂದ ಇರಲಿಲ್ಲ.

ಹೀಗಿರುವಾಗ ಒಂದು ದಿನ ಜಿಲ್ಲಾ ಪಂಚಾಯತ್‌ನ ಮುಖ್ಯ ಎಂಜಿನೀಯರ್ ಹಳ್ಳಿಗೆ ಬಂದರು. ಅವರು ಸೆಟ್ಟಿಕೆರೆ ಇರುವ ಸ್ಥಳ ನೋಡಿಕೊಂಡು ಹೋಗಲು ಬಂದಿದ್ದರು. ಹಳ್ಳಿಗೆ ಬಂದ ನಂತರ ಬಳ್ಳಾರಿಗೊಂದು ಫೋನ್ ಮಾಡಬೇಕಾಗಿದೆ ಇಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ ಎಂದು ರಸ್ತೆ ಬದಿಯಲ್ಲಿ ಇದ್ದವರೊಬ್ಬರನ್ನು ಕೇಳಿದ್ದಾರೆ. ಅವರು ಹತ್ತಿರದಲ್ಲೇ ಇರುವ ಸ್ಟೇಷನರಿ ಅಂಗಡಿಯನ್ನು ತೋರಿಸಿದ್ದಾರೆ. ಅದು ನೀರಿನ ಸಂಘದ ಅಧ್ಯಕ್ಷರ ಅಂಗಡಿ. ಅಂಗಡಿ ಜತೆಯಲ್ಲಿ ಟೆಲಿಫೋನ್ ಬೂತ್ ಕೂಡ ನಡೆಸುತ್ತಿದ್ದರು ತಮ್ಮಲ್ಲಿಗೆ ಫೋನ್ ಮಾಡಲು ಬಂದವರು ಜಿಲ್ಲಾ ಪಂಚಾಯತ್ ಎಂಜಿನೀಯರ್ ಮತ್ತು ಅವರು ಕೆರೆ ನೋಡಲು ಬಂದಿದ್ದಾರೆ ಎಂದರೆ ಅಧ್ಯಕ್ಷರು ಸುಮ್ಮನಿರುತ್ತಾರೆಯೇ? ಕೆರೆ ಇರುವ ಸ್ಥಳ ತಾನೆ ತೋರಿಸುತ್ತೇನೆ ಎಂದು ಅಧ್ಯಕ್ಷರು ಹೊರಟರು. ಅದೇ ಸುಮಾರಿಗೆ ಮಾಜಿ ಮಂಡಲ ಅಧ್ಯಕ್ಷರು ಕೂಡ ರಸ್ತೆಯಲ್ಲಿ ಸಿಕ್ಕಿದರು. ತಾನು ಬರುತ್ತೇನೆ ಎಂದು ಅವರೂ ಹೊರಟರು. ಅವರೆಲ್ಲ ಇನ್ನೇನು ಕಾರು ಹತ್ತಬೇಕು ಅತ್ತ ಕಡೆಯಿಂದ ಹಾಲಿ ತಾ.ಪ.ಪಂಚಾಯತ್ ಸದಸ್ಯರು ಬರುತ್ತಿದ್ದಾರೆ. ಅವರನ್ನು ಬಿಟ್ಟು ಹೋಗುವುದು ಸರಿಯಲ್ಲ ಎಂದು ನೀರಿನ ಸಂಘದ ಅಧ್ಯಕ್ಷರು ಅವರನ್ನು ಬನ್ನಿ ಎಂದು ಕರೆದಿದ್ದಾರೆ. ಎಂಜಿನೀಯರ್ ಜತೆ ಅವರ ಕಚೇರಿಯ ಮೂರು ಸಿಬ್ಬಂದಿಗಳು, ಮಾಜಿ ಅಧ್ಯಕ್ಷರು, ನೀರಿನ ಸಂಘದ ಅಧ್ಯಕ್ಷರು ಸೇರಿ ಕಾರು ಆಗಲೇ ಭರ್ತಿಯಾಗಿತ್ತು. ತಮ್ಮ ಸಂಘದ ಕಾರ್ಯದರ್ಶಿಯ ಬೈಕ್‌ಲ್ಲಿ ತಾ.ಪ.ಸದಸ್ಯರನ್ನು ಬರಲು ಹೇಳಿ ಅಧ್ಯಕ್ಷರು ಎಂಜಿನೀಯರ್ ಜತೆ ಹೋದರು. ಆ ಸಲಹೆ ತಾ.ಪ. ಸದಸ್ಯರಿಗೆ ಅಷ್ಟೊಂದು ಇಷ್ಟವಾದಂತೆ ಕಾಣಲಿಲ್ಲ. ಕೆರೆ ಇರುವ ಸ್ಥಳಕ್ಕೆ ಹೋಗಿ ನೋಡಿಕೊಂಡು ಬಂದರೂ ಕಾರಲ್ಲಿದ್ದವರಿಗೆ ತಾ.ಪ.ಸದಸ್ಯರ ದರ್ಶನ ಆಗಲಿಲ್ಲ.

ಸಂಘದ ಅಧ್ಯಕ್ಷರು ಊರಿಗೆ ಬಂದ ಎಂಜಿನೀಯರ್‌ನ್ನು ಹಾಗೆ ಕಳುಹಿಸುವುದು ಬೇಡ ಎಂದು ಹತ್ತಿರದ ಲಿಂಗಾಯತರ ಹೊಟೇಲಿಗೆ ಕರೆದುಕೊಂಡು ಹೋದರು. ಅಲ್ಲಿಗೆ ಹೋದರೆ ತಾ.ಪ.ಸದಸ್ಯರು ಹೊಟೇಲಲ್ಲೇ ಇದ್ದರು. ಇವರೆನ್ನೆಲ್ಲ ಕಂಡ ಕೂಡಲೇ ತಾ.ಪ.ಸದಸ್ಯರ ಕೋಪ ಕಟ್ಟೆ ಹೊಡೆದು ಹರಿಯಲು ಶುರುವಾಯಿತು. ‘ನೀವು ನನ್ನನ್ನು ಏನೆಂದು ತಿಳಿದುಕೊಂಡಿದ್ದೀರಿ. ತಾ.ಪ.ಸದಸ್ಯ ಮುಖ್ಯವೋ ಅಥವಾ ಯಾವುದೋ ಕಾಲದ ಮಂಡಲ ಅಧ್ಯಕ್ಷ ಮುಖ್ಯನೋ? ನೀವೆಲ್ಲ ಸೇರಿ ಜಾತಿ ರಾಜಕೀಯ ಮಾಡತ್ತೀರಿ (ಮಾಜಿ ಮಂಡಲ ಅಧ್ಯಕ್ಷ ಮತ್ತು ಸಂಘದ ಅಧ್ಯಕ್ಷರು ಇಬ್ಬರೂ ಒಂದೇ ಜಾತಿಗೆ ಸೇರಿದವರು),’ ಎಂದು ಸಂಘದ ಮತ್ತು ಮಾಜಿ ಮಂಡಲ ಅಧ್ಯಕ್ಷರನ್ನು ಸೇರಿಸಿ ಕೂಗಾಡಿದರು. ಎಂಜಿನಿಯರ್ ಎದುರು ಊರಿನ ಮಾನ ಹರಾಜು ಹಾಕುವುದು ಬೇಡವೆಂದು ತಾ.ಪ.ಸದಸ್ಯರ ಮಾತಿಗೆ ಪ್ರತಿಯಾಡದೆ ಇಬ್ಬರು ಸುಮ್ಮನೆ ಕೂತರು. ಅಷ್ಟು ಸಾಲದೆಂಬಂತೆ ‘ತಾ.ಪ.ಪಂಚಾಯತ್ ಸದಸ್ಯ ನಾನು ಇಲ್ಲಿರುವಾಗ ಇವರನ್ನು ಕರೆದುಕೊಂಡು ನೀವು ಹೇಗೆ ಹೋದಿರಿ?’ ಎಂದು ಎಂಜಿನೀಯರನ್ನೂ ಕೇಳಿದರು. ‘ನೋಡಿ ನಾನು ನನ್ನ ಕರ್ತವ್ಯ ಮಾಡಲು ಬಂದಿದ್ದೇನೆ. ನಿಮ್ಮ ಊರಿನ ರಾಜಕೀಯಕ್ಕೆ ನನ್ನನ್ನು ಎಳೆಯಬೇಡಿ,’ ಎಂದು ಹೇಳಿ ಅವರು ಜಾಗ ಖಾಲಿ ಮಾಡಿದರು. ಸಂಘದ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷರು ಎಂಜಿನೀಯರನ್ನು ಕಾರಿನ ತನಕ ಬಿಡುವ ನೆಪದಲ್ಲಿ ತಾ.ಪ.ಸದಸ್ಯರಿಂದ ತಪ್ಪಿಸಿಕೊಂಡು ಹೊಟೇಲಿನಿಂದ ಹೊರಬಂದರು. ಈ ಘಟನೆ ನಡೆದ ನಂತರ ಅಪರೂಪಕ್ಕೊಮ್ಮೆ ಆಗುತ್ತಿದ್ದ ಸಂಘದ ಸಭೆಗಳು ನಿಂತೆ ಹೋಗಿವೆ.

ಸೌಜನ್ಯ:
ಪುಸ್ತಕ: ಸಮುದಾಯ ಮತ್ತು ಸಹಭಾಗಿತ್ವ (ಕೆರೆ ನೀರಾವರಿ ನಿರ್ವಹಣೆಯಲ್ಲಿ ಸಹಭಾಗಿತ್ವ)
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಕಾಮೆಂಟ್‌ಗಳಿಲ್ಲ: