-ಅರುಣ್ ಜೋಳದಕೂಡ್ಲಿಗಿ
ಅಗ್ನಿ ಸಂಚಿಕೆಯಲ್ಲಿ ಕಸಾಪದ ನೂತನ ರಾಜ್ಯಾಧ್ಯಕ್ಷರಾದ ಮನು ಬಳಿಗಾರ ಅವರು ಹನುಮಂತ ಹಾಲಿಗೇರಿ ಅವರ ಜತೆ ಬೀಡುಬೀಸಾಗಿ ಮಾತನಾಡಿದ ಮಾತುಗಳು ಅವರ ಅಸೂಕ್ಷ್ಮತೆಗೆ ಕನ್ನಡಿ ಹಿಡಿಯುವಂತಿವೆ. ಇದು ಪ್ರಾತಿನಿಧಿಕವಾಗಿ ಎಲ್ಲಾ ಹೊಸ ತಲೆಮಾರಿನ ಲೇಖಕರ ಬಳಿಯೂ ಅವರು ನಡೆದುಕೊಳ್ಳುತ್ತಿದ್ದ ಮಾದರಿಯಂತಿದೆ. ಈ ಬರಹದ `ಸಾಹಿತ್ಯದ ಪುಡಾರಿ' ತಲೆಬರಹವನ್ನು ಹೊರತುಪಡಿಸಿದರೆ, ಟ್ಯಾಬ್ಲೈಡ್ ಭಾಷೆ ಬಳಸದೆ ಹನುಮಂತ ಹಾಲಿಗೇರಿ ತುಂಬಾ ಸಜ್ಜನಿಕೆಯ ಭಾಷೆ ಬಳಸಿ ಆತ್ಮೀಯತೆಯಿಂದ ಪತ್ರರೂಪಿಯಾಗಿ ಬರೆದಿದ್ದಾರೆ. ಹಾಗಾಗಿ ಇದು ಹಿರಿಯರಾದ ಬಳಿಗಾರ ಅವರನ್ನು ಆತ್ಮಾವಲೋಕನಕ್ಕೆ ಸ್ವವಿಮರ್ಶೆಗೆ ಹಚ್ಚಬೇಕಿದೆ. ಹಾಗಾಗಿ ಬಳಿಗಾರ ಅವರು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದರಿಂದ ಹೆಚ್ಚು ಲಾಭಗಳಿವೆ ಅದುವೆ ಆರೋಗ್ಯಕರವಾದ ನಡೆಯಾಗಿದೆ.
ಈ ಚರ್ಚೆಯ ನೆಪದಲ್ಲಿ ಒಂದಷ್ಟು ಸಂಗತಿಗಳು ಮುನ್ನಲೆಗೆ ಬರಬೇಕಿದೆ. ನೂತನ ರಾಜ್ಯಾಧ್ಯಕ್ಷರಾದ ಬಳಿಗಾರರು ಆರಂಭಿಕ ಹಂತದಲ್ಲಿಯೇ ಇಂಥದ್ದೊಂದು ಚರ್ಚೆಗೆ ಒಳಗಾದ ಕಾರಣ, ಅವರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ನಡೆಗಳ ಬಗ್ಗೆ ಚರ್ಚಿಸಬೇಕಾಗಿದೆ. ಬಳಿಗಾರರು ತಮ್ಮ ಆಡಳಿತದ ಆರಂಭಕ್ಕೆ ಚೂರು ಅವಸರವಾಗಿ ಶ್ರೀವಿಜಯ ಪ್ರಶಸ್ತಿಯನ್ನು ಪ್ರಕಟಿಸಿದರು. ಈ ಆಯ್ಕೆಯಲ್ಲಿ ಇಬ್ಬರ ಆಯ್ಕೆಯ ಬಗ್ಗೆ ನಕಾರಾತ್ಮಕ ಚರ್ಚೆಗಳು ನಡೆದವು. ಅಂತೆಯೇ 40 ವರ್ಷದಿಂದ 45 ವರ್ಷಕ್ಕೆ ಏರಿಸಿದ ದಿಢೀರ್ ಕಾರಣವೂ ಗೌಪ್ಯವಾಗಿದೆ. ಹಾಗಾಗಿ ಮುಂದೆ ಕಸಾಪ ಪ್ರಶಸ್ತಿಗಳ ಆಯ್ಕೆಯನ್ನು ಅನುಮಾನಿಸದ ಹಾಗೆ ಪಾರದರ್ಶಕವಾಗಿ ಯೋಗ್ಯರನ್ನು ಆಯ್ಕೆ ಮಾಡುವಂತಾಗಬೇಕಿದೆ.
ಹಿಂದೆಯೂ ಕಸಾಪವನ್ನು ಟೀಕಿಸುವ, ಬೆಂಬಲಿಸುವ, ಹೇಗಿರಬೇಕೆಂಬ ಬುದ್ದಿಮಾತು ಹೇಳುವ ಚರ್ಚೆಗಳು ನಡೆದಿವೆ. ಆದರೆ ಇಂತಹ ಚರ್ಚೆಗಳಿಗೆ ಕಸಾಪ ಕಿವಿಕೊಟ್ಟದ್ದಕ್ಕಿಂತ ಕಿವುಡಾದದ್ದೆ ಹೆಚ್ಚು. ಕಸಾಪವನ್ನು ಸಾಹಿತ್ಯ ಕ್ಷೇತ್ರದಲ್ಲಿರುವ ಜಡತೆ ಅಸೂಕ್ಷ್ಮತೆ ಅಸಾಹಿತ್ಯಕತೆಗಳ ಒಂದು ಪ್ರತೀಕವೆಂದು ಭಾವಿಸಿ, ಅದನ್ನು ತಿರಸ್ಕರಿಸಿಕೊಂಡು ಬಂದವರಲ್ಲಿ ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಲಂಕೇಶ್ ಹಾಗೂ ಕೆ.ವಿ. ಸುಬ್ಬಣ್ಣರಂತಹ ಪ್ರಮುಖರು ಸೇರಿದ್ದರು. ಇದಕ್ಕೆ ಪೂರಕವಾಗಿ ಅಡಿಗರು ಬರೆದ 'ಕನ್ನಡ ಸಾಹಿತ್ಯ ಪರಿಷತ್ತು: ಸಂಪ್ರದಾಯ ಜಡತ್ವದ ಸಂಕೇತ', ಸುಬ್ಬಣ್ಣನವರ 'ಕಸಾಪ: ಲಂಘನ ಮದ್ದು?', ಲಂಕೇಶರ `ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು' ಮುಂತಾದ ಬರಹಗಳನ್ನು ನೋಡಬಹುದು. ಕಸಾಪ ಒಂದು ಪ್ರಜಾಸತ್ತಾತ್ಮಕ ಸಂಸ್ಥೆ. ಹಾಗಾಗಿ ಸಾರ್ವಜನಿಕ ಹಣವನ್ನು ಬಳಸಿ, ಸಾಮಾಜಿಕ ನ್ಯಾಯದ ನೆಲೆಯಲ್ಲಿ ಕೆಲಸ ಮಾಡುವ ಬಗ್ಗೆ, ಜನಸಾಮಾನ್ಯರ ಸುಡುವ ಸಮಸ್ಯೆಗಳಿಗೆ ದ್ವನಿಯಾಗದ ಬಗ್ಗೆಯೂ ಸಹಜವಾಗಿ ಟೀಕೆಗಳನ್ನು ಎದುರಿಸಬೇಕಾಗಿದೆ.
ಕಸಾಪ ಪ್ರತಿ ವರ್ಷ ಆಯೋಜಿಸುವ ಸಾಹಿತ್ಯ ಸಮ್ಮೇಳನಕ್ಕೆ ಸೇರಿದ ಜನರ ಜಾತ್ಯಾತೀತತೆಯ ಪ್ರಮಾಣಕ್ಕೆ ಹೋಲಿಸಿದರೆ, ಕಸಾಪದ ಚಟುವಟಿಕೆಗಳಲ್ಲಿ ಜಾತ್ಯಾತೀತತೆಯ ಪ್ರಮಾಣ ಹೊಂದಿಕೆಯಾಗುವುದಿಲ್ಲ. ಜಾತಿವಾರು, ಪ್ರಾದೇಶಿಕವಾರು ಆಯ್ಕೆಯಿಂದಾಗಿ ಉತ್ತಮ ಸಾಹಿತಿ ಕವಿಗಳನ್ನು ಆಯ್ಕೆಮಾಡಲು ಸಾದ್ಯವಿಲ್ಲ ಎಂಬ ವಾದವೊಂದಿದೆ. ಆದರೆ ಜಾತಿ, ಪ್ರಾದೇಶಿಕತೆಯ ಮಾನದಂಡದಲ್ಲಿಯೂ ಉತ್ತಮ ಸಾಹಿತಿಗಳನ್ನೂ, ಒಳ್ಳೆಯ ಕವಿಗಳನ್ನೂ ಆಯ್ಕೆ ಮಾಡುವ ಸಾದ್ಯತೆ ಇದ್ದೇ ಇದೆ. ಆದರೆ ಅಸಾಹಿತಿಗಳ ಆಯ್ಕೆಗೆ ಈ ಕಾರಣವನ್ನೇ ಮುಂದು ಮಾಡಿ ಜಾತಿ, ಪ್ರಾದೇಶಿಕ ನೆಲೆಯ ಆಯ್ಕೆ ವಿಧಾನವನ್ನು ಗೇಲಿ ಮಾಡುವ ಮೇಲು ವರ್ಗವೊಂದು ಸದಾ ಜಾಗ್ರತವಾಗಿದೆ. ಇನ್ನಾದರೂ ಕಸಾಪ ಅಸಾ"ತಿಗಳಿಗೆ ಮಣೆಹಾಕದಿರುವ ಹೆಜ್ಜೆಯನ್ನು ಇಡಬೇಕಿದೆ.
ಕನ್ನಡ ಸಾಹಿತ್ಯ ಪರಿಷತ್ತು ಮತ್ತೆ ಮತ್ತೆ ಚರ್ಚೆಗೆ ಒಳಗಾಗುತ್ತಿರುವುದು ಅದರ ಜಡತೆ ಮತ್ತು ಅಸೂಕ್ಷ್ಮತೆಯ ಕಾರಣಕ್ಕೆ. ಅಂದರೆ ಅದು ವರ್ತಮಾನದ ತಲ್ಲಣಗಳಿಗೆ ಎಂದೂ ಮೊದಲ ಆದ್ಯತೆಯನ್ನು ಕೊಡುವುದಿಲ್ಲ. ಅಥವಾ ವರ್ತಮಾನದ ಸಂಗತಿಗಳನ್ನು ಕಸಾಪ ಆಯೋಜಿಸುವ ಸಮ್ಮೇಳನ ಒಳಗೊಂಡಂತೆ ಇತರೆಲ್ಲಾ ಚರ್ಚೆ ಸಂವಾದಗಳಲ್ಲಿ ಮಾತನಾಡುವವರು ನಿಷ್ಠುರಿಗಳಾಗಿರುವುದಿಲ್ಲ, ಸೂಕ್ಷ್ಮಜ್ಞರಾಗಿರುವುದಿಲ್ಲ. ಬದಲಾಗಿ ಎಲ್ಲವನ್ನೂ ಸಪಾಟುಗೊಳಿಸಿ ಆಕರ್ಷಕವಾಗಿ ನಗೆ ಚಟಾಕಿ ಹಾರಿಸಿ ಗಂಭೀರತೆಯನ್ನು ಹಾಳುಗೆಡವುವರಾಗಿರುತ್ತಾರೆ. ಯಾವಾಗಲೂ ಆಯಾ ಕಾಲದ ಸೂಕ್ಷ್ಮ ಯುವ ಬರಹಗಾರರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವುದು ಕಡಿಮೆಯೆ. ಕಾರಣ ಕಸಾಪ ಜಡಗೊಂಡ ಹಿರಿಯ ಸಾಹಿತಿಗಳಿಗೇ ಮಣಿ ಹಾಕುತ್ತಾ ಬಂದಿದೆ ಎನ್ನುವ ಟೀಕೆಯನ್ನು ಮುಂದೆಯಾದರೂ ಎದುರಾಗಬೇಕಿದೆ. ಕಸಾಪ ಚಲನಶೀಲವಾಗಿ ಯೋಚಿಸುತ್ತಾ, ಯುವ ಸಮುದಾಯವನ್ನು ಒಳಗೊಂಡು ಸೂಕ್ಷ್ಮವಾಗಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡರೆ, ಜಡತೆ ಮತ್ತು ಅಸೂಕ್ಷ್ಮತೆಯ ಕಾರಣಕ್ಕೆ ಹುಟ್ಟಬಹುದಾದ ಟೀಕೆಗಳಿಂದ ಹೊರಬರುವ ಸಾದ್ಯತೆಗಳಿವೆ.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷ ಸದಸ್ಯರನ್ನು ಗಮನಿಸಿದರೆ ಸಾಹಿತಿಗಳಲ್ಲದವರ ಸಂಖ್ಯೆಯೇ ದೊಡ್ಡದಿದೆ. ಇದು ಕಸಾಪ ಎನ್ನುವುದು ಕೇವಲ ಸಾಹಿತಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ಪರೋಕ್ಷವಾಗಿ ದ್ವನಿಸುತ್ತಿದೆ. ಇದರಿಂದಾಗಿ ಸಹಜವಾಗಿ ಜಾತೀಯತೆ, ಮತ್ತು ರಾಜಕೀಯ ಸದ್ದಿಲ್ಲದೆ ನುಸುಳುತ್ತವೆ. ಹಾಗಾಗಿ ಅದು ಆಯೋಜಿಸುವ ಸಾಹಿತ್ಯ ಸಮ್ಮೇಳನದಲ್ಲೂ ಸಹಜವಾಗಿ ಅದರ ನೆರಳಿರುತ್ತದೆ. ಕಸಾಪದ ಜಿಲ್ಲಾಧ್ಯಕ್ಷರು ಮತ್ತು ಇವರುಗಳು ಆಯ್ಕೆ ಮಾಡುವ ತಾಲೂಕು ಹೋಬಳಿಯ ಅಧ್ಯಕ್ಷರುಗಳಲ್ಲಿ ಮೇಲುಜಾತಿಗಳ ಪ್ರಾತಿನಿಧ್ಯ ಹೆಚ್ಚಿರುತ್ತದೆ. ಹಾಗಾಗಿ ಪ್ರಜಾಸತ್ತಾತ್ಮಕ ಗಣರಾಜ್ಯವಿರುವ ಈ ದೇಶದಲ್ಲಿ ಸಂವಿಧಾನಬದ್ಧವಾಗಿ ಎಲ್ಲರಿಗೂ ಅವಕಾಶ ಕೊಡಬೇಕಿದೆ. ಕಸಾಪ ಮುಂದೆಯಾದರೂ ಈ ವಿಷಯದಲ್ಲಿ ಎಚ್ಚರದ ಹೆಜ್ಜೆ ಇಡಬೇಕಿದೆ.
ಕಸಾಪದಲ್ಲಿನ ಬಹುಪಾಲು ಅಸಾಹಿತಿಗಳ ಪ್ರಭಾವದಿಂದಾಗಿಯೇ ಕವಿಗಳಲ್ಲದವರು ಕವಿಗ್ಠೋಯಲ್ಲಿ ಕಿಕ್ಕಿರಿದಿರುತ್ತಾರೆ, ಚಿಂತಕರಲ್ಲದವರು ಚಿಂತಕರ ವೇಷ ಧರಿಸಿರುತ್ತಾರೆ. ಹೀಗಿರುವಾಗ ಜನರನ್ನು ಹಿಡಿದು ನಿಲ್ಲಿಸುವ ಕಾವ್ಯ ಹೊಮ್ಮುವುದಾದರೂ ಹೇಗೆ? ಜನರನ್ನು ಚಿಂತನೆಗೆ ಹಚ್ಚುವ ವೈಚಾರಿಕ ಚಿಂತನೆ ಮೂಡುವುದಾದರೂ ಹೇಗೆ? ಇದರಿಂದಾಗಿ ತನ್ನ ಕಾಲದ ತಲ್ಲಣಗಳಿಗೆ ಗಟ್ಟಿಯಾದ ದ್ವನಿಯಾಗುವುದು ಸಾದ್ಯವೆ? ಹೀಗಿರುವಾಗ ಸಾಹಿತ್ಯದ ಬಗ್ಗೆ ಜನಸಾಮಾನ್ಯರಲ್ಲಿ ಸದಭಿರುಚಿ ಮೂಡಿಸುವ ಬಗೆ ಯಾವುದು?
ಕಸಾಪದಲ್ಲಿ ಕನಿಷ್ಟ ಮಟ್ಟದ ಸಾಹಿತಿಗಳ ಪ್ರಾತಿನಿದ್ಯ ಸಾದ್ಯವಾದರೆ, ಅಥವಾ ಯುವ ಸಾಹಿತಿಗಳ ಅಭಿಪ್ರಾಯ, ಸಲಹೆಗಳಿಗೆ ಕನಿಷ್ಠ ಮಟ್ಟದ ಮನ್ನಣೆ ಸಿಕ್ಕರೆ, ಅಸಾಹಿತಿಗಳೆ ತುಂಬಿ ಜಡವಾಗುವುದನ್ನು ಸ್ವಲ್ಪಮಟ್ಟಿಗಾದರೂ ಸುಧಾರಿಸಲು ಸಾದ್ಯವಿದೆ. ಕಸಾಪ ಪುರುಷಾಧಿಕಾರವನ್ನು ಇಂದಿಗೂ ಬಿಟ್ಟುಕೊಟ್ಟಿಲ್ಲ. ಹಿಂದೆ ಪುಂಡಲೀಕ ಹಾಲಂಬಿ ಅವರು ರಾಜ್ಯ, ಜಿಲ್ಲಾ, ತಾಲೂಕು ಕಸಾಪಗಳ ಉಪಾಧ್ಯಕ್ಷರನ್ನಾಗಿ ಮಹಿಳೆಯರನ್ನು ನೇಮಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಅದು ಚಲಾವಣೆಗೆ ಬರಲೇ ಇಲ್ಲ. ಹೀಗೆ ಮಹಿಳಾ ಪ್ರಾತಿನಿಧ್ಯವನ್ನು ಕಸಾಪ ಹೆಚ್ಚೆಚ್ಚು ಹೊಂದಬೇಕಿದೆ.
ಪ್ರತಿಬಾರಿಯೂ ಕಸಾಪ ರಾಜ್ಯಾಧ್ಯಕ್ಷರುಗಳ ಬಗ್ಗೆ ಜನರು ಸಾಹಿತಿಗಳು ತಮ್ಮದೇ ಆದ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಇಂತಹ ನಿರೀಕ್ಷೆಗಳು ಹುಸಿಯಾಗದಂತೆ ಮನು ಬಳಿಗಾರ ಅವರು ಸೂಕ್ಷ್ಮವಾಗಿ ಕಸಾಪವನ್ನು ಮರು ರೂಪಿಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಜವಬ್ದಾರಿಯನ್ನು ಅರ್ಥಪೂರ್ಣವಾಗಿ ನಿಭಾುಸಲಿ ಎನ್ನುವುದು ನಮ್ಮ ಆಶಯ.
***
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ