ಮಂಗಳವಾರ, ಮೇ 24, 2016

ಊರ ನೆಮ್ಮದಿಗೆ ನೀರ ನಿಲ್ದಾಣಗಳು, ನೀರು ಇಂಗಿಸುವ ದೇಸಿ ಜ್ಞಾನ.

   
-ಪೂರ್ಣಪ್ರಜ್ಞ ಬೇಳೂರು
   ನನ್ನನ್ನು ನೋಡಲು ಬಂದಿರಾ? ಚಾಂದ್ಬೀಬಿಯ ಮುಖದಲ್ಲಿ ಆಶ್ಚರ್ಯ ತುಳುಕುತ್ತಿತ್ತು. ಕಳೆದ ಅನೇಕ ವರ್ಷಗಳಿಂದ ಸಂಪೂರ್ಣ ಬಂಧನದಲ್ಲಿರುವ ನನ್ನನ್ನು ನೋಡಲು ಮೊಟ್ಟಮೊದಲು ಬಂದವರೇ ನೀವು !!  ಹರುಗಟ್ಟಿದ ಆಕೆಯ ನಿಟ್ಟುಸಿರು ಅರೆಕ್ಷಣ ಮಾತ್ರದಲ್ಲಿ ಏದುಸಿರಾಗಿತ್ತು. ಹಸುರು ಪಾಚಿ ಸರಿಸಿ ಕೊಕ್ಕಿನಲ್ಲಿ ನೀರನ್ನು ತುಂಬಿಕೊಂಡ ಪಾರಿವಾಳದ ರೆಕ್ಕೆಯ ಸದ್ದು ಅಲ್ಲಿನ ಮೌನವನ್ನು ಕೆದಕಿತು.  ೪೬೩ವರ್ಷಗಳ ಚಾಂದ್ ಮುಪ್ಪಿನಲ್ಲೂ ಸುಂದರಿ. ವಿಜಾಪುರದ ಶಹರದ ಅಗಸಿಯಿಂದ ಸುಮಾರು ೪೦೦ ಅಡಿಗಳಷ್ಟು ದೂರದಲ್ಲಿರುವ ಈಕೆಗೆ ಈಗ ಗೃಹಬಂಧನ. ಲಕ್ಷಾಂತರ ಜನರ ದಾಹವನ್ನು ತಣಿಸಿದ ಈಕೆ ಅಕೇಲಿ. ೪೦೦ ವರ್ಷಗಳ ಕಾಲ ರಾಣಿಯಂತೆ ಮೆರೆದೆ. ಜನರಿಗೆ ಸ್ವಾತಂತ್ರ್ಯ ಸಿಕ್ಕಿದ್ದೇ ನೆಪ, ನನ್ನನ್ನು ಸೂಳೆಯಾಗಿಸಿಬಿಟ್ಟರು.  ಎಷ್ಟು ಎತ್ತರದ ಕೋಟೆಯೊಳಗಿದ್ದರೇನು, ರೋಗದ ಗೂಡಾದ ಈ ದೇಹವನ್ನು ಸರಿಪಡಿಸಲು ಅಲಿ ಅದಿಲ್ ಷಾ ಮತ್ತೆ ಬರುವನೆಂದು ಕಾದಿದ್ದೇನೆ ಚಾಂದ್ ಇನ್ನೆಷ್ಟು ವರ್ಷ ಕಾಯಬೇಕೇನೊ??

ಚಾಂದ್ಳೇ ತಾಜ್ಳಿಗೂ ಮಾದರಿ. ಮಕ್ಕಾ ಮಹಾದ್ವಾರದ ಪೂರ್ವದಲ್ಲಿ ಬಸ್ಸ್ಟಾಂಡಿನ ಹಿಂಭಾಗದಲ್ಲಿರುವ ಈ ಚಂದದ ಬಾವಡಿಯನ್ನು ಎರಡನೇ ಇಬ್ರಾಹಿಂ ಅದಿಲ್ ಷಾನು ೩೯೨ ವರ್ಷಗಳ ಹಿಂದೆ ಕಟ್ಟಿಸಿದನು. ೩೫ ಅಡಿ ಎತ್ತರದ ಭವ್ಯ ಕಮಾನಿನ ಮಹಾದ್ವಾರ. ಅದರ ಅಕ್ಕಪಕ್ಕ ಅಷ್ಟಕೋನಾಕಾರದ ಗುಮ್ಮಟಗಳು. ಒಳ ಪ್ರವೇಶಿಸುತ್ತಿದ್ದಂತೆ ಒಂದು ನಿಲ್ದಾಣ. ಅಕ್ಕಪಕ್ಕ ಮೆಟ್ಟಿಲುಗಳು.

ಸಾರ್  ಸಾರ್  ನಂದೂಕಿ ಫೋಟೋ ತೆಗಿರಿ ಸಾರ್. . . . .ಬಟ್ಟೆ ತೊಳೆಯುತ್ತಿದ್ದ ಸುಲ್ತಾನಳ ಪಕ್ಕದಿಂದ ದುಡುಮ್ಮನೆ ನೀರಿಗೆ ಹಾರಿದ ಟಿಪ್ಪು ಮೀನಿನಂತೆ ಮೇಲೆ ಬಂದು ಹ¹ರು ಪಾಚಿಯನ್ನು ಸರಿಸುತ್ತಾ ಈಜತೊಡಗಿದ. ದಡದಲ್ಲಿದ್ದ ಆತನ ಗೆಳೆಯ ಸಲೀಂ ಆತನ ಪ್ಲಾಸ್ಟಿಕ್ ಚಪ್ಪಲಿಯನ್ನು ಬಾವಡಿಗೆ ಬಿಸಾಕಿ, ಸಾರ್ ಅಬ್ಬಿ ಕೀಂಚಲೋ, ಸಾಲಾ ಕ ಚಪ್ಪಲ್ ಕ ಫೋಟೋ ಎಂದಾಗ ಟಿಪ್ಪುಗೆ ಪಿಚ್ಚೆನಿಸಿತು.

ಸುತ್ತಲೂ ಚಂದದ ಕುಸುರಿ ಕೆಲಸ ಮಾಡಿದ ಗ್ಯಾಲರಿ. ಸುತ್ತಲೂ ಅಡ್ಡಾಡಲು ಕಾಲುದಾರಿ. ಅಲ್ಲಲ್ಲಿ ವಿಶ್ರಮಿಸಲು ವ್ಯವಸ್ಥೆ. ಅತ್ತರನ್ನು ಪೂಸಿಕೊಂಡು ಸಾರೋಟಿನ ಮೇಲೆ ಬಂದ ತಾಜ್ ಸುಲ್ತಾನ. ಆಕೆಯ ಹಿಂದೆ ಬುಟ್ಟಿಗಳ ತುಂಬಾ ಗುಲಾಬಿ ಪಕಳೆಗಳನ್ನು ಹೊತ್ತು ತಂದ ನೂರಾರು ಸಖಿಯರು. ಬಾವಡಿಯ ಸುತ್ತಲೂ ನಿಂತು ಗುಲಾಬಿಯ ಪಕಳೆಗಳನ್ನೆಲ್ಲಾ ನೀರಿಗೆ ಸುರಿದರು. ಸಖಿಯರೊಂದಿಗೆ ಈಜುತ್ತಾ, ಅದನ್ನೆಲ್ಲಾ ಸರಿಸುತ್ತಾ, ಬೇಸಿಗೆಯ ತಾಪವನ್ನು ಶಮನ ಮಾಡಿಕೊಳ್ಳುತ್ತಾ . . . . . .ಕ್ಯಾಕರಿಸಿದ ಸದ್ದಿಗೆ ತಟ್ಟನೆ ಕಣ್ಣುಬಿಟ್ಟಾಗ ಎದುರಿನಲ್ಲಿ ಐದಾರು ಟೊಣಪರು ನಿಂತಿದ್ದರು. ಬಲಗೈಯಲ್ಲಿ ಇಸ್ಪೀಟ್ ಎಲೆಗಳು. . . ಭಗ್ನ ಕನಸಿನೊಂದಿಗೆ ಹಿಂದಿರುಗಿದೆ. ಸುಲ್ತಾನಳೊಂದಿಗೆ ಇನ್ನಷ್ಟು ಮಹಿಳೆಯರು ಡಿಟರ್ಜಂಟ್ ಹಾಕಿ ಬಟ್ಟೆ ತೊಳೆಯುತ್ತಿದ್ದರು.
ಕ್ರಿಸ್ತಶಕ ೧೮೧೫ರಲ್ಲಿ ಬಿಜಾಪುರಕ್ಕೆ ಭೇಟಿಕೊಟ್ಟಿದ್ದ ಕ್ಯಾಪ್ಟ್ನ್ ಸೈಕ್ ಪ್ರಕಾರ ಕೋಟೆಯೊಳಗೆ ಮೆಟ್ಟಿಲುಗಳಿರುವ ೨೦೦ ಬಾವಡಿಗಳು ಹಾಗೂ ೩೦೦ ನೀರೆಳೆಯುವ ಬಾವಿಗಳು ಇದ್ದವು.  ಇವೆಲ್ಲಾ ಬೇಸಿಗೆಯಲ್ಲೂ ಖಾಲಿಯಾಗದ ನೀರಿನ ತಾಣಗಳು.  ೧೨ ಅಡಿ ಆಳದಿಂದ ೩೫ ಅಡಿ ಆಳದವರೆಗೆ ಇರುವ ಇವುಗಳಿಗೆ ಸುತ್ತಲೂ ಸುಂದರ ವಾಸ್ತು ಕೆತ್ತನೆಗಳಿರುವ ಪ್ರಾಂಗಣವನ್ನು ಕಟ್ಟಲಾಗುತ್ತಿತ್ತು.  ರಾಜರು ಕಟ್ಟಿಸಿದ ಬಾವಡಿಗಳ ಸೌಂದರ್ಯವನ್ನು ನೋಡಿದ ಸಾಮಂತರು, ಇನ್ನಿತರ ಅಧಿಕಾರಿಗಳು ತಮ್ಮ ಮನೆ, ಜಾಗಗಳಲ್ಲಿ ಬಾವಡಿಗಳನ್ನು ಕಟ್ಟಿಸಿರಬಹುದು.  ಅವುಗಳ ಕಾಲಮಾನದ ದಾಖಲೆಗಳು ಸಿಕ್ಕಿಲ್ಲ.

ಇಬ್ರಾಹಿಂಪುರದಲ್ಲಿ ರೈಲ್ವೆ ಗೇಟಿನಾಚೆಯಿರುವ ಇಬ್ರಾಹಿಂ ಬಾವಡಿ, ಇಬ್ರಾಹಿಂ ರೋಜದ ಬಲಭಾಗದ ಹೊಲದಲ್ಲಿರುವ ಲಂಗರ್ ಬಾವಡಿ, ಅಜಗರ್ ಬಾವಡಿಗಳ ನೀರನ್ನು ಕುಡಿಯಲು ಹಾಗೂ ಕೃಷಿಗೆ ಬಳಸುತ್ತಾರೆ.  ಈ ಬಾವಡಿಗಳನ್ನು ನೋಡಲು ಹೋಗುವಾಗ ದಾರಿಯಲ್ಲೊಂದು ತಿಪ್ಪೆ ತುಂಬಿದ ಬಾವಡಿ ಸಿಗುತ್ತದೆ.  ಅದೇ ಅಲಿಖಾನ್ ಬಾವಡಿ. ಇಲ್ಲಿರುವ ಯಾವುದೇ ಬಾವಡಿಗಳ ಹಾಗೂ ಬಾವಿಗಳ ರಕ್ಷಣೆ ನಗರಸಭೆ ಸದಸ್ಯರಿಂದ ಹಿಡಿದು ಉಸ್ತುವಾರಿ ಸಚಿವರವರೆಗೂ ಬೇಕಾಗಿಲ್ಲ ಎಂದು ಅಲ್ಲಿರುವ ರಿಕ್ಷಾ ಚಾಲಕ ಅಸ್ಲಂ ಶಾಬಾದಿ ಹೇಳುತ್ತಾರೆ.  ಮುಬಾರಕ್ ಕಾಲೋನಿಯಲ್ಲಿದ್ದ ಮುಬಾರಕ್ ಬಾವಡಿಯನ್ನು, ಸುತ್ತಲಿನ ಜಾಗವನ್ನೂ ನಗರಸಭೆ ಸದಸ್ಯ ಶಫೀಕ್ ಬೋಗಾದಿ ಕೊಂಡುಕೊಂಡು ಮುಚ್ಚಿದ್ದಾರೆ ಎನ್ನುವುದನ್ನು ತೋರಿಸುತ್ತಾರೆ.  ಇಲ್ಲಿನವರಿಗೆ ನೀರು ಬೇಕು.  ಆದರೆ ನೀರಿನ ಮೂಲಗಳು ಬೇಕಿಲ್ಲ.  ಬಾವಿ-ಬಾವಡಿಗಳಂತೂ ಬೇಡವೇ ಬೇಡ.  ನಳದ ನೀರೇ ಬೇಕಂತಾರ್ರೀ ಸರ್-ಸಂಜೀ ಬರ್ರಿ-ನಳದ ಮುಂದ ನಡೆಯೋ ಜಗಳಾ ನೋಡಬೋದ್ರಿ ಸರ್ರ ಎನ್ನುತಾರೆ ಅಸ್ಲಂ ಅವರೊಂದಿಗಿರುವ ಶಿವಪುತ್ರಪ್ಪ.

ಬಡೇ ಕಮಾನಿನ ಪಕ್ಕದ ನಗರ್ ಬಾವಡಿ, ಪಾತ್ರೆ ಬಟ್ಟೆ ಹಾಗೂ ಕೃಷಿ ಕೆಲಸಕ್ಕೆ ನೀರನ್ನೊದಗಿಸುತ್ತಿದೆ.   ಜುಮ್ಮಾ ಮಸೀದಿಯ ಪ್ರದೇಶದಲ್ಲಿ ಅನೇಕ ಬಾವಡಿಗಳು ಸುಸ್ಥಿತಿಯಲ್ಲಿವೆ.  ಡಾ. ಮುನೀರ್ ಬಾಂಗಿಯವರ ಮನೆಯ ಒಳಗಿನ ಬಾವಡಿಯಲ್ಲಿ ಬೇಸಿಗೆಯಲ್ಲೂ ಸಮೃದ್ಧಿ.  ಉಳಿದಂತೆ ಬಗದಾದಿ ಬಾವಡಿ, ನಾಲಬಂದ ಬಾವಡಿ, ದೌಲತ್ ಕೋಠಿ ಬಾವಡಿ ಇವೆಲ್ಲಾ ಕಸದ ತೊಟ್ಟಿಗಳು.  ಶಾದಿ ಮಹಲ್ ಆವರಣದಲ್ಲಿದ್ದ ಬಾವಡಿಯನ್ನು ಪೂರ್ತಿ ಮುಚ್ಚಲಾಗಿದೆ

ಪೇಠಿ ಬಾವಡಿ, ಬಸ್ತಿ ಬಾವಡಿಗಳು ಸಾಕಷ್ಟು ದೊಡ್ಡದಾಗಿವೆ.  ನೀರೂ ಇದೆ.  ನಗರಸಭೆಯವರು ಅದರಿಂದ ನೀರೆತ್ತುವ ವ್ಯವಸ್ಥೆ ಮಾಡಿದ್ದಾರೆ.  ಸುತ್ತಲಿನ ಜನರಿಗೂ ನೀರನೆಮ್ಮದಿಯಿದೆ.  ತಾಜ್ ಬಾವಡಿಯ ಹಿಂದಿದ್ದ ಸಂದಲ್ ಬಾವಡಿಯನ್ನು ಮುಚ್ಚಲಾಗಿದೆ.  ಕೋಟೆ ಬುರ್ಜಿನ ಬುಡದ ಬಾವಡಿ ಕೊನೆಯ ಉಸಿರನ್ನು ಬಿಡುತ್ತಿದೆ.  ಇನ್ನು ಬರೀದ ಬಾವಡಿ ಬಂದಾಗಿದೆ.  ಅದರ ಪಕ್ಕದ ಸಾತಿ ಬಾವಡಿ ಸಾಯಲು ಸಿದ್ಧವಾಗಿದೆ.  ಸಾಠ್ ಖಬರ್ ಬಳಿಯಿರುವ ಬಾವಡಿ ಸಮಾಧಿಯಾಗಿದೆ.

ಪೋಸ್ಟ್ ಆಫೀಸ್ ಆವರಣದಲ್ಲಿರುವ ಮುಖಾರಿ ಮಸ್ಜಿದ್ ಬಾವಡಿಗೆ ಸೂಕ್ತ ರಕ್ಷಣೆ ನೀಡಿದ್ದಾರೆ.  ಆದರೂ ಪಕ್ಕದ ದೇವಸ್ಥಾನದ ನಿರ್ಮಾಲ್ಯವನ್ನು ಯಾರೂ ಮೆಟ್ಟಬಾರದು ಎಂದು ಬಾವಡಿಗೆ ಎಸೆಯುತ್ತಾರಂತೆ.  ಮಾರ್ಕೆಟ್ ಪ್ರದೇಶದ ಸಂದಲ್ ಮಸ್ಜಿದ್ ಬಾವಡಿ, ಮಂತ್ರಿ ಬಾವಡಿಗಳ ನೀರು ಚೆನ್ನಾಗಿದೆ.  ಜೋಡು ಗುಂಬಜ್ ಬಳಿಯ ಬಾವಡಿ ಪಕ್ಕದ ಹಸಿರು ಹಾಸೂ ಸಹ ಸುಂದರವಾಗಿದೆ.  ಈಗ ಇಲ್ಲೆಲ್ಲಾ ಕೊಳವೆಬಾವಿಗಳನ್ನು ತೆಗೆಯಲಾಗಿದೆ.  ಬಾವಡಿಗಳನ್ನು ಮುಚ್ಚಿದರೆ ಜಾಗ ಸಿಗುತ್ತದೆ.  ಜಾಗದ ಬೆಲೆ ೧೦ ಲಕ್ಷ.  ಕಸಕಡ್ಡಿ ತುಂಬಿದ ಬಾವಡಿಗಳಿಗಿಂತಲೂ ಇದು ಒಳ್ಳೆಯದಲ್ಲವೇ?  ಹಾಳಾದ ಬಾವಡಿಗಳಿಂದ ರೋಗಗಳೂ ಹರಡಬಹುದು ಎನ್ನುವ ಅಭಿಪ್ರಾಯ ಮಾಂಟೆ (ಮಾಲ) ಬಾವಡಿಯನ್ನು ಮುಚ್ಚಿಸಿದ ರಜಾಕ್ ಹೇಳುತ್ತಾರೆ.

ಗೋಲಗುಂಬಜ್ ಹಿಂದಿರುವ ಮಾಸ್ ಬಾವಡಿಯಿಂದ ಗೋಲ್ಗುಂಬಜ್ ಒಳಗಿನ ಗಾರ್ಡನ್ಗೆ ಅದರ ನೀರನ್ನು ಬಳಸುತ್ತಾರೆ.  ಬಿರು ಬೇಸಿಗೆಯಲ್ಲೂ ನೀರಿನ ಕೊರತೆಯಾಗದು ಎನ್ನುತ್ತಾರೆ ಅಲ್ಲಿನ ಕಾವಲುಗಾರ.  ಅದೇ ರಸ್ತೆಯಲ್ಲಿ ಹಾಸಿಮ್ಪೀರ್ ಬಾವಡಿ ಹಾಗೂ ರಿಮ್ಯಾಂಡ್ ಹೋಂ ಒಳಗಿರುವ ಎರಡು ಬಾವಡಿಗಳು ಸುಸ್ಥಿತಿಯಲ್ಲಿವೆಯಂತೆ.   ಜಿಲ್ಲಾಧಿಕಾರಿ ಕಛೇರಿಯೊಳಗಿನ ಬಾವಡಿಯೂ ಚೆನ್ನಾಗಿದೆ.

ಮೀನಾಕ್ಷಿ ಚೌಕ್ನಲ್ಲಿರುವ ಸೋನಾರ್ ಬಾವಡಿ ಹಾಗೂ ಗುಂಡ ಬಾವಡಿಗಳು ವೃತ್ತಾಕಾರದ ಬಾವಡಿಗಳು.  ಉಳಿದ ಎಲ್ಲಾ ಬಾವಡಿಗಳೂ ಆಯತಾಕಾರದಲ್ಲಿವೆ.

ಅವಸಾನ
ಇವುಗಳ ಅವಸಾನಕ್ಕೆ ಮುಖ್ಯ ಕಾರಣಗಳು; ಪಾತ್ರೆ ತೊಳೆಯುವಿಕೆ, ಬಟ್ಟೆ ತೊಳೆಯುವಿಕೆ, ಹೂಳೆತ್ತಿಸದೇ ಇರುವುದು, ಕಸಕಡ್ಡಿಗಳು, ಹೂವು, ಹಾರ, ಗಣಪತಿ ವಿಸರ್ಜನೆ ಇವನ್ನೆಲ್ಲಾ ಬಾವಡಿಗಳಿಗೆ ತುಂಬುವುದು, ಗಟಾರದ ನೀರನ್ನು ಬಾವಡಿಗಳಿಗೆ ಹರಿಸುವುದು, ಖಾಸಗಿ ಆಸ್ತಿಯಾದ ಕೆಲವು ಬಾವಡಿಗಳನ್ನು ಮುಚ್ಚಿ ಸೈಟ್ ಮಾಡಿರುವುದು, ಬಾವಡಿಗಳ ಗೋಡೆಗೆ ಮನೆಗಳ ನಿರ್ಮಾಣ ಹೀಗೆ ವಿಭಿನ್ನ ಕಾರಣಗಳಿವೆ.  ಎಲ್ಲಕ್ಕಿಂತ ಮುಖ್ಯವಾಗಿ ಜನರಿಗೆ, ಜನಪ್ರತಿನಿಧಿಗಳಿಗೆ ಕಳಕಳಿ ಇಲ್ಲದಿರುವುದು.

ಇದೆಲ್ಲದರ ಪರಿಣಾಮ ಬೇಗಂ ತಾಲಾಬ್ ಮೇಲೆ ಒತ್ತಡ ಹೆಚ್ಚಾಗಿದೆ.  ಇದೂ ಸಹ ಕ್ರಿಸ್ತಶಕ ೧೬೫೧ರಲ್ಲಿ ಮಹಮ್ಮದ್ ಅದಿಲ್ಷಾ ಕಟ್ಟಿಸಿದ ಕೆರೆ.  ತೊರವಿಯಿಂದ ತರುತ್ತಿದ್ದ ನೀರು ಸಾಕಾಗದಿದ್ದಾಗ ಈ ತಾಲಾಬನ್ನು ಕಟ್ಟಿಸಬೇಕಾಗಿ ಬಂತು.  ಬಿಜಾಪುರದೊಳಗಿನ ಗಂಜ್ಗಳಲ್ಲಿ ಈಗಲೂ ಬಾಗಲಕೋಟೆ ರಸ್ತೆಯಲ್ಲಿರುವ ಗಂಜ್ ಪಕ್ಕ ನಲ್ಲಿ ಇದೆ.  ಅದರಿಂದ ಹಳೇ ಕೊಳವೆಗಳ ಮೂಲಕ ಬೇಗಂ ತಾಲಾಬ್ ನೀರು ಬರುತ್ತದೆ.

ಅಂದು ೧೦ ಲಕ್ಷ ಜನರಿಗೆ ನೀರಿನ ವ್ಯವಸ್ಥೆಯನ್ನು ಮಾಡಿದ್ದ ಅರಸರ ಮುಂದಾಲೋಚನೆ ಇಂದಿನ ಅರಸರಿಗೂ ಇರಬೇಕೆಂದು ಜನ ಬಯಸುವುದು ಸಹಜ.  ಇಬ್ರಾಹಿಂಪುರದ ಕೆರೆ, ಅಫಜಲಪುರದ ಕೆರೆಗಳು ಫೆಬ್ರವರಿಯಲ್ಲೇ ಬತ್ತಿಹೋಗುತ್ತವೆ.  [ಇದು ಖಾಸಗಿಯವರಿಗೆ ಸೇರಿದ್ದೆಂದು ಅಲ್ಲಿನವರು ಹೇಳಿದರು].  ಕೇವಲ ಬೇಗಂ ತಾಲಾಬ್ ಮೇಲೆ ಎಲ್ಲಾ ಒತ್ತಡ ಹೇರುವುದಕ್ಕಿಂತ ಎತ್ತರದ ಪ್ರದೇಶಗಳಲ್ಲಿ ಇನ್ನಷ್ಟು ಕೆರೆಗಳನ್ನು ಕಟ್ಟಿಸಬೇಕಾದ ಅಗತ್ಯವಿದೆ.

ಎಷ್ಟೆಲ್ಲಾ ಬಾವಡಿಗಳು, ಬಾವಿಗಳಿಂದ ತುಂಬಿದ ಬಿಜಾಪುರ; ನೀರಿಗಾಗಿ ಹಾಹಾಕಾರ ಮಾಡಿದ್ದು; ಬಿಸಿಲಿನ ಬೇಗೆಗೆ ನಲುಗಿದ್ದು; ಜನ ಗುಳೇ ಹೋಗಿದ್ದು; ಕುಡಿಯುವ ನೀರಿನ ಸಮಸ್ಯೆ; ಕೃಷಿ ಸಮಸ್ಯೆ; ಹೀಗೆ ನೀರಿನಿಂದಾದ ಸಮಸ್ಯೆಗಳು ದಾಖಲೆಯಲ್ಲಿ, ಇತಿಹಾಸದಲ್ಲಿ ಕಾಣಸಿಗದು.  ಹಾಗೇ ಕೇವಲ ಬಾವಡಿ-ಬಾವಿಗಳ ಅಧ್ಯಯನ, ಪ್ರವಾಸೋದ್ಯಮ, ಸೌಂದರ್ಯ, ವಿಶೇಷತೆಗಳನ್ನು ನೋಡಲು ಬಂದವರು ಇಲ್ಲವೆಂದೇ ಹೇಳಬೇಕು.  ಇವುಗಳನ್ನು ಇನ್ನಷ್ಟು ಸುಂದರಗೊಳಿಸಿದರೆ, ಪ್ರಚಾರ ಕೈಗೊಂಡರೆ ಅದ್ಭುತ ಪ್ರವಾಸಿತಾಣವಾಗುವುದರಲ್ಲಿ ಸಂಶಯವಿಲ್ಲ.

ಅರೆ ಭೈಯ್ಯಾ, ಇವುಗಳು ಖಂಡಿತಾ ಪ್ರವಾಸಿತಾಣಗಳಾಗುವುದು ಬೇಡ…ಬೇಡ…ಬೇಡ… ಬೇಡ… ಎಂಬ ಪ್ರತಿಧ್ವನಿ ಗೋಲ್ಗುಂಬಜ್ನಿಂದ ಬಂತು.  ಪ್ರವಾಸಿ ತಾಣವಾದ ನಾನು ಶಬ್ದಮಾಲಿನ್ಯದಿಂದ ನಲುಗಿಹೋಗಿದ್ದೇನೆ.  ಅಪಸ್ವರಗಳ ಅಪಸವ್ಯಗಳಿಂದ ಬಳಲಿದ್ದೇನೆ.  ಎಲೆ ಅಡಿಕೆ ತಿಂದು ಉಗುಳುವ ಜನರು, ಹೆಸರು ಕೆತ್ತುವ ಪ್ರೇಮಿಗಳು ಯಾರೆಲ್ಲಾ ನನ್ನ ನೆಮ್ಮದಿಯನ್ನೇ ಹಾಳು ಮಾಡಿದ್ದಾರೆ.  ಈ ಊರಿನ ಜನರಿಗೆ ನನ್ನ ಬಗ್ಗೆ ಕಾಳಜಿಯಿಲ್ಲ.  ಇನ್ನು ಅವುಗಳು ಯಾವ ಲೆಕ್ಕ… ಒಂದು ದನಿ ನಾಲ್ಕಾಯಿತು… ನಾಲ್ಕು ಹದಿನಾರಾಯಿತು… ಬಿಜಾಪುರದ ಸ್ಮಾರಕಗಳೆಲ್ಲಾ ಬೊಬ್ಬಿರಿಯತೊಡಗಿದವು. 

 ಕೆಂಪನೆಯ ಧೂಳು, ಕಪ್ಪನೆಯ ಕೊಳಚೆ, ನೆತ್ತಿಯನ್ನೇ ತಲುಪುವ ದುರ್ಗಂಧ, ಸುಡುಬಿಸಿಲ ತಾಪದೊಳಗೆ ಅವುಗಳ ಆರ್ತನಾದವೂ ಸೇರಿಕೊಂಡಿತು.

ಕಾಮೆಂಟ್‌ಗಳಿಲ್ಲ: