ಗುರುವಾರ, ಜನವರಿ 1, 2015

’ರಾಂಗ್‌ನಂಬರ್’ಗಳ ಸಂತೆಯಲ್ಲಿ ನಿಂತು ರೈಟ್ ನಂಬರ್ ತೋರಿಸುವ ’PK’


ಹರ್ಷಕುಮಾರ್ ಕುಗ್ವೆ
  `ಹಮ್‌ಕಾ ಲಗಾತ್ ಹೈ ಬಗವಾನ್ ಸೆ ಬಾತ್ ಕರೇ ಕಾ ಕಮ್ಮುನಿಕೇಸನ್ ಸಿಸ್ಟಂ ಇಸ್ ಗೋಲಾ ಕಾ ಟೋಟಲ್ ಲುಲ್ ಹೋ ಚುಕಾ ಹೇ (ನಂಗನ್ಸೋ ಪ್ರಕಾರ ಈ ಬೂಮಿ ಮೇಲೆ ದೇವರ ಜೊತೆ ಮಾತಾಡೋ ಕಮ್ಯುನಿಕೇಶನ್ ಸಿಸ್ಟಂ ಪೂರಾ ಎಡವಟ್ಟಾಗಿದೆ)-PKಸಿನಿಮಾದಲ್ಲಿ ಪಿಕೆ (ಅಮೀರ್ ಖಾನ್) ಹೇಳುವ ಮಾತು

  ಏಲಿಯನ್ ಅಂದರೆ ಅನ್ಯಗ್ರಹ ಜೀವಿಯೊಬ್ಬ ಒಂದು ಸಂಶೋಧನೆಗಾಗಿ ಭೂಮಿಯ ಬಂದು ಸೀದಾ ರಾಜಾಸ್ತಾನದ ಹಳ್ಳಿಯೊಂದರಲ್ಲಿ ಇಳಿದು ತಾನು ಬಂದ ಆಕಾಶಬಂಡಿಯ (sಸ್ಪೇಸ್‌ಕ್ರಾಪ್ಟ್) ರಿಮೋಟ್ ಕಂಟ್ರೋಲರ್ ಕಳೆದುಕೊಂಡುಬಿಡುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಈ ಭಾರತ ಭೂಮಿಯ ಮಂದಿ-ಮಂದಿರಗಳ ನಡುವೆ ಅವನ ಪೀಕಲಾಟ. ಹೀಗೊಂದು ಕತೆಯನ್ನು ಹೆಣೆದು ಅದನ್ನೊಂದು ಅದ್ಭುತ ಸಿನಿಮಾ ಮಾಡಿ ಜನರ ಮುಂದಿಟ್ಟಿದೆ ರಾಜ್‌ಕುಮಾರ್ ಹಿರಾನಿ- ಅಭಿಜಿತ್ ಜೋಶಿ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಜೋಡಿ. 

ತ್ರೀ ಈಡಿಯಟ್ಸ್ ಸಿನಿಮಾದ ನಂತರ ಇದೀಗೆ ಅಂತಹದ್ದೇ ಒಂದು ಅದ್ಭುತ ಸಿನಿಮಾವನ್ನು ಹಿರಾನಿ-ಅಮೀರ್ ಜೋಡಿ ನೀಡಿದೆ. ಸಿನಿಮಾಗಳಿಂದ ಬರೀ ಮನರಂಜನೆಯಲ್ಲದೇ ಉತ್ತಮವಾದ ಸಂದೇಶಗಳನ್ನೂ ನಿರೀಕ್ಷಿಸುವವರು ಯಾವಕಾರಣಕ್ಕೂ ತಪ್ಪಿಸಿಕೊಳ್ಳಬಾರದ ಸಿನಿಮಾ PK.

ಭೂಗ್ರಹದ ಮೇಲೆ ಬೆತ್ತಲೆಯಾಗಿ ಇಳಿದ ಸ್ವಲ್ಪ ಹೊತ್ತಿಗೇ ತನ್ನ ರಿಮೋಟ್ ಕಂಟ್ರೋಲರ್ ಕಳವಾಗಿ ಅದಕ್ಕಾಗಿ ಹುಡುಕುತೊಡಗುವ ಈ ಏಲಿಯೆನ್ ಒಬ್ಬ ಹುಚ್ ಗಿರಾಕಿ ಎಂದುಕೊಂಡು ಜನರು ಅವನಿಗಿಡುವ ಹೆಸರೇ PK ಅಂದರೆ ಲೂಸು. ಪಿಕೆ ಇಲ್ಲಿಳಿದಾಗ ಇಲ್ಲಿ ಮನುಶ್ಯರು ಬಟ್ಟೆ ತೊಡುತ್ತಾರೆ ಎಂಬುದು ಅರಿವಾದ ನಂತರ ಪ್ರೇಮಿಗಳು ಬಟ್ಟೆ ಬಿಚ್ಚಿಟ್ಟು ಸರಸ ಸಲ್ಲಾಪ ನಡೆಸುವ ’ಡ್ಯಾನ್ಸಿಂಗ್ ಕಾರ್’ಗಳಿಂದ ಬಟ್ಟೆಗಳನ್ನು ಎಗರಿಸಿಕೊಂಡು ಬಟ್ಟೆ ತೊಡತೊಡಗುತ್ತಾನೆ ಪಿಕೆ. ಆದರೆ ಅವನು ತೊಡುವ ನಾನಾ ರೀತಿಯ ಬಟ್ಟೆಗಳು ಜನರಿಂದ ನಾನಾ ರೀತಿಯ ಪ್ರತಿಕ್ರಿಯೆ ಉಂಟುಮಾಡುತ್ತವೆ.ತನ್ನ ಗ್ರಹದಲ್ಲಿ ಮನಸ್ಸನ್ನೇ ನೇರವಾಗಿ ಓದಿಕೊಂಡು ಬಿಡುವ ಪಿಕೆ ಭೂಮಿಯ ಮೇಲೆ ಜನರನ್ನು ಅರ್ಥಮಾಡಿಕೊಳ್ಳಲು ಪಡಿಪಾಟಲು ಪಡುತ್ತಾನೆ. ಒಮ್ಮೆ ಬೈರನ್ ಸಿಂಗ್ ಎಂಬಾತನ (ಸಂಜಯ್ ದತ್) ಟ್ರಾಕ್ಟರ್‌ಗೆ ಪಿಕೆಡಿಕ್ಕಿ ಹೊಡೆದು ಬಿದ್ದಾಗ ಬೈರನ್ ಸಿಂಗ್ ಪಿಕೆ ಬಗ್ಗೆ ಬಹಳ ಕನಿಕರ ಪಟ್ಟು ಬಹುಶಃ ಅವನಿಗೆ ಮೆದುಳಿಗೆ ಪೆಟ್ಟಾಗಿದೆಯೆಂದು ಅವನ ಸಹಾಯಕ್ಕೆ ನಿಲ್ಲುತ್ತಾನೆ. ’ನಮ್ ಗ್ರಹದಲ್ಲಿ ಒಬ್ಬರ ಜೊತೆ ಮತ್ತೊಬ್ಬರು ಒಡನಾಡುವುದು ಮೈಂಡ್ ರೀಡಿಂಗ್ ಮೂಲಕ. ಇಲ್ಲಿನ ತರ ಒಂದೊಂದು ಮಾತಿಗೆ ಹತ್ತಾರು ಅರ್ಥವಿಲ್ಲ. ಅಲ್ಲಿ ಕನ್ಪೂಜನ್ನೇ ಇರಲ್ಲ್ಲ’ ಎನ್ನುವ ಪಿಕೆ ಮನಸ್ಸನ್ನು ತಿಳಿಯಲು ಮೊದಲಿಗೆ ಬೈರನ್ ಸಿಂಗ್ ಕೈ ಹಿಡಿಯಲು ಹೋದಾಗ ಅವನು ಸೆಕ್ಸ್‌ಗಾಗಿ ಕೈ ಹಿಡಿಯುತ್ತಿದ್ದಾನೆಂದುಕೊಳ್ಳುವ ಬೈರನ್ ಸಿಂಗ್ ತನ್ನ ಐಡಿ ಕಾರ್ಡ್ ತೋರಿಸಿ  ನಾನು ಮೇಲ್, ಹರಾಮೀ, ಕಮೀನಿ ನೋಡಿಲ್ಲಿ ಎಂದು ಎಂದು ಹೇಳಿದಾಗ ಹೆಂಗಸರ ಕೈಹಿಡಿಯಲು ಹೋಗುವ ಪಿಕೆ ಅದ್ವಾನಗಳನ್ನೇ ಮಾಡುತ್ತಾನೆ. ಇದನ್ನು ತಪ್ಪಿಸಲು ಬೈರನ್ ಸಿಂಗ್ ಪಿಕೆಯನ್ನು ಸೂಳೆಗೇರಿಯಲ್ಲಿ ಬಿಟ್ಟುಬರುತ್ತಾನೆ.  ಅಲ್ಲಿ ಸೆಕ್ಸ್ ವರ‍್ಕರ್ ಒಬ್ಬಳ ಕೈಯನ್ನು ಐದಾರು ಗಂಟೆ ಹಿಡಿದುಕೊಂಡ ಪರಿಣಾಮವಾಗಿ ಪಿಕೆಗೆ ಅವಳಾಡುವ ಬೋಜ್ಪುರಿ ಮಿಶ್ರಿತಹಿಂದಿ ಮಾತು  ಬರುತ್ತದೆ!

ಹೀಗೆ ಸೂಳೆಯೊಬ್ಬಳ ಕೈ ಹಿಡಿದು ಭಾಷೆ ಕಲಿಯುವ ಪಿಕೆತನ್ನ ರಿಮೋಟ್ ಕಂಟ್ರೋಲರ್ ಕಳವಾದ ವಿಶಯವನ್ನು ಬೈರನ್ ಸಿಂಗ್’ಭಾಯಾ’ಗೆ ತಿಳಿಸಿದಾಗ ಆತ ಪಿಕೆಯನ್ನು ದೆಹಲಿ ಬಸ್ ಹತ್ತಿಸಿ ಕಳಿಸುತ್ತಾನೆ. ಆ ದೊಡ್ಡ ಊರಿನಲ್ಲಿ ಇವನು ರಿಮೋಟ್ ಕಂಟ್ರೋಲ್ ಬಗ್ಗೆ ಕೇಳಿದರೆ  ಎಲ್ಲರೂ ಹೇಳುವುದು ಆ ’ಭಗವಂತನಿಗೇ’ ಗೊತ್ತು ಎಂದು. ಅಲ್ಲಿಂದ ಶುರುವಾಗುತ್ತದೆ ಪಿಕೆಯ ದೇವರಿಗಾಗಿನ ಹುಡುಕಾಟ. ತನ್ನ ರಿಮೋಟ್ ಕಂಟ್ರೋಲರ್ ಬಗ್ಗೆ ಮಾಹಿತಿ ಇರುವು ಆ ಭಗವಂತ ಎಲ್ಲಿ ಎಂದು ಹುಡುಕಲು ತೊಡಗಿ ನಾನಾ ಪಜೀತಿಗೀಡಾಗುತ್ತಾನೆ.ಅದೂ ಮಾರಿಗೊಂದೊಂದು ಮಂದಿರ, ಮಸೀದಿ, ಚರ‍್ಚುಗಳಿರುವ ಭಾರತ ಭೂಮಿಯಲ್ಲಿ ಪಿಕೆ ಕಕ್ಕಾಬಿಕ್ಕಿಯಾಗುತ್ತಾನೆ.ಈ ದೇವರನ್ನು ಪಿಕೆ ಹುಡುಕುವ ಪರಿಯೇ ಸಕತ್ ಮಜಾ ಇದೆ. ಮಂದಿರದೊಳಗಿಂದ ತಪ್ಪಿಸಿಕೊಂಡು ಹಣ್ಣು ಕಾಯಿ ಹಿಡಿದುಕೊಂಡು ಚರ‍್ಚಿನೊಳಕ್ಕೆ ಹೋಗಿ ಏಸುಗೆ ಕಾಯಿ ಒಡೆಯುವುದು, ಅಲ್ಲಿ ದೇವರಿಗೆ ವೈನ್ ಅರ‍್ಪಿಸಿದ್ದನ್ನು ನೋಡಿ ’ಓಹೋ ದೇವರಿಗೆ ಎಳನೀರು ತೀರ ಬೋರ್ ಆಗಿರಬೇಕು’ ಎಂದುಕೊಳ್ಳುತ್ತಾ ಎರಡು ವೈನ್ ಬಾಟಲ್ ಇಟ್ಟುಕೊಂಡು ಮಸೀದಿಗೆ ಹೋಗುವುದು ಅಲ್ಲಿಂದ ಜನರು ಇವನನ್ನು ಅಟ್ಟಸಿಕೊಂಡು ಬರುವುದು ಹೀಗೆ ಒಂದೊಂದು ದರ‍್ಮದವರಿಗೆ ಒಂದೊಂದು ರೀತಿಯೆಂಬುದು ಪಿಕೆಗೆ ಅರ್ಥವಾಗುತ್ತದೆ. ಬಸ್ಸೊಂದರಲ್ಲಿ ಬಿಳಿಸೀರೆಯುಟ್ಟ ಮಹಿಳೆಯ ಕೈ ಹಿಡಿದಾಗ ವಿಧವೆಯ ಕೈ ಹಿಡಿಯುತ್ತೀಯಾ? ಪ್ರಯಾಣಿಕರಿಂದ ಎಂದು ಬೈಸಿಕೊಳ್ಳುವ ಪಿಕೆ ನಂತರ ಬಿಳಿ ಡ್ರೆಸ್ ಹಾಕಿದ ಹುಡುಗಿಯೊಬ್ಬಳಿಗೆ ನಿಮ್ ಗಂಡ ತೀರಿಕೊಂಡಿದ್ದು ದುಃಖದ ವಿಶಯ’ ಎಂದು ಹೇಳಿ ಅವರಿಂದಲೂ ಬೈಸಿಕೊಳ್ಳುತ್ತಾನೆ. ನಂತರ ಬುರ‍್ಕಾ ದರಿಸಿದವರಿಗೆ ನಿಮ್ಮ ಗಂಡ ತೀರಿಕೊಂಡನಾ ಎಂದಾಗ ಆ ಮಸ್ಲಿಂ ಹೆಂಸರ ಗಂಡ ಪಿಕೆ ಮೇಲೇರಿ ಬರುತ್ತಾನೆ. ಹೀಗೆ ಧರ‍್ಮ ಸಂಪ್ರದಾಯಗಳು ಪಿಕೆಗೆ ಪೀಕಲಾಟ ತಂದರೆ ಈ ದೃಶ್ಯಗಳು ಸಿನಿಮಾ ನೋಡುಗರಿಗೆ ಬಿದ್ದೂ ಬಿದ್ದೂ ನಗುವಂತೆ ಮಾಡುವ ಜೊತೆಗೇ ನಿಜಕ್ಕೂ ನಾವು ಮಾಡಿಕೊಂಡಿರುವ ಈ ದೇವರು-ಧರ‍್ಮ-ಜಾತಿ-ಮತಗಳ ಆದಾರದಲ್ಲಿ ಮಾಡಿಕೊಂಡಿರುವ ಸಂಪ್ರದಾಯಗಳ ಬಗ್ಗೆಯೇ ಯೋಚಿಸುವಂತಾಗುತ್ತದೆ.

ಕೊನೆಗೆ ಶಿವನ ಪಾತ್ರದಾರಿಯೊಬ್ಬನನ್ನು ಅವನೇ ದೇವರು ಅಂದುಕೊಂಡು ಅಟ್ಟಿಸಿಕೊಂಡು ಹೋಗಿ ಆ ’ಶಿವ’ ತಪಸ್ವಿ ಮಹಾರಾಜ್ ಇರುವ ಸಬಾಂಗಣದಲ್ಲಿ ಹೋದಾಗ ಅಲ್ಲಿ ಪಿಕೆಗೆ ತನ್ನ ರಿಮೋಟ್ ಕಂಟ್ರೋಲರ್ ಕಾಣುತ್ತದೆ. ಆದರೆ ಅದು ಹಿಮಾಲಯದಲ್ಲಿ ನನಗೆ ದೇವರು ಕರುಣಿಸಿದ ಶಿವನ ಡಮರುಗದಮಾಣಿಕ್ಯ ಎಂದು ಸುಳ್ಳುಹೇಳಿ ತಪಸ್ವಿ ಪಿಕೆಯನ್ನು ಹೊರದಬ್ಬಿಸಿಬಿಡುತ್ತಾನೆ. 

ಆಗ ದೇವರನ್ನೇ ಕೇಳಲು ಇವನು ಮತ್ತೆ ದೇವರನ್ನು ಹುಡುಕಲಿಕ್ಕಾಗಿ ದೇವರು ’ಕಾಣೆಯಾಗಿದ್ದಾನೆ’ಎಂದು ಪೋಸ್ಟರ್ ಮಾಡಿ ಹಂಚತೊಡಗುತ್ತಾನೆ. ಆಗ ಅವನಿಗೆ ಸಿಗುವುದು ಟಿವಿ ಪತ್ರಕರ‍್ತೆ ಜಗ್ಗು-ಜಗತ್ ಜನನಿ (ಅನುಶ್ಕಾ ಶರ‍್ಮಾ). ಪಿಕೆಯ ’ಹುಡುಕಾಟ’ದ ಬಗ್ಗೆ ತಿಳಿಯುವ ಜಗ್ಗುಗೆ ಈ ಪಿಕೆ ಮೊದಲಿಗೆ ಒಳ್ಳೆ ಕಾಮಿಡಿ ಪೀಸ್ ಅನ್ನಿಸಿ ಅವನ ಬಗ್ಗೆ ತಿಳಿಯಲು ಅವನ್ನು ಕೂಡಿಹಾಕಿದ ಪೋಲೀಸ್ ಸ್ಟೇಶನ್ನಿಗೇ ಹೋಗುತ್ತಾಳೆ. ಅಲ್ಲಿ ಅವನ ಕತೆಯನ್ನು ಕೇಳಿ (ಸಿನಿಮಾದಲ್ಲಿ ಈ ದೃಶ್ಯ ಆರಂಭದಲ್ಲೇ ಬಂದು ಕತೆ ಹೇಳುವ ಪ್ಲಾಶ್‌ಬ್ಯಾಕ್ ತಂತ್ರವಿದೆ) ಅವನ ಬಗ್ಗೆ ತಿಳಿದು ನಂಬಿಕೆ ಬಂದ ಮೇಲೆ ರಿಮೋಟ್‌ಕೊಡಿಸುವ ಭರವಸೆ ನೀಡುತ್ತಾಳೆ. ಠಿಞ ಬಗ್ಗೆ ತಮ್ಮ ಟೀವಿಯಲ್ಲಿ ಶೋ ನಡೆಸಲು ನಡೆಸಲು ತನ್ನ ಬಾಸ್‌ಗೆ (ಬೊಮ್ಮನ್ ಇರಾನಿ) ದುಂಬಾಲು ಬಿದ್ದು ಕೊನೆಗೂ ಯಶಸ್ವಿಯಾಗುತ್ತಾಳೆ.
ಒಮ್ಮೆ ಹೀಗೆ ಯಾವುದೋ ನಂಬರ್‌ನಿಂದ ಜಗ್ಗುಗೆ ಬರುವ ಫೋನ್ ಕರೆಯೊಂದು ರಾಂಗ್ ನಂಬರ್ ಎಂದು ತಿಳಿದಾಗ ಕೂಡಲೇ ಪಿಕೆಗೆ ಒಂದು ವಿಶಯ ಹೊಳೆಯುತ್ತದೆ. ಅದೇ ’ರಾಂಗ್‌ನಂಬರ್’ ಕಾನ್ಸೆಪ್ಟ್. ಪಿಕೆ ತರ‍್ಕಿಸುವುದೇನೆಂದರೆ ಇಲ್ಲಿರುವ ನಾನಾ ಧರ‍್ಮಗಳನ್ನು ಗುತ್ತಿಗೆ ತೆಗೆದುಕೊಂಡವರು, ದೇವತಾ ಮನುಶ್ಯರು ಎಂದು ಕರೆದುಕೊಂಡು ಸಾವಿರಾರು ಹಿಂಬಾಲಕರನ್ನು ಹೊಂದಿರುವವರು,ದೇವರ ವಿಶಯದಲ್ಲಿ ರಾಂಗ್‌ನಂಬರ್‌ಗಳೇ ಎಂಬ ವಿಶಯ ಅವನಿಗೆ ಹೊಳೆಯುತ್ತಿದೆ. ಇದೇ ತರ‍್ಕವನ್ನಿಟ್ಟುಕೊಂಡು ಜಗ್ಗು-ಪಿಕೆ ನಡೆಸುವ ಟಿವಿ ಕಾರ‍್ಯಕ್ರಮ ಭರ‍್ಜರಿ ಯಶಸ್ಸಾಗುತ್ತದೆ. ಇಡೀ ದೇಶದ ಮೂಲೆಮೂಲೆಗಳಿಂದ ಎಲ್ಲಾ ಧರ‍್ಮಗಳ ಇಂತಹ ಸಾವಿರಾರು ರಾಂಗ್‌ನಂಬರ್‌ಗಳ ಬಗ್ಗೆ ಜನಸಮಾನ್ಯರು ವಿಡಿಯೋಗಳನ್ನು ತಮ್ಮ ಮೊಬೈಲುಗಳ ಮೂಲಕ ಕಳುಹಿಸುತ್ತಾರೆ.

’ಯಾರಿಗೆ ಭಯ ಇರುತ್ತೋ ಅವರು ಮಂದಿರಕ್ಕೆ ಹೋಗ್ತಾರೆ’ ಎನ್ನುವುದನ್ನು ಪರೀಕ್ಷಾ ವೇಳೆಯಲ್ಲಿ ಕಾಲೇಜಿನ ಹೊರಗೆ ಕಲ್ಲಿಟ್ಟು ತೋರಿಸುತ್ತಾನೆ. ಆಗ ಜಗ್ಗುನ ತಂದೆ ’ದೇವರ ಬಗ್ಗೆ ಜನರ ವಿಶ್ವಾಸವನ್ನು ನೀವು ಗೇಲಿ ಮಾಡುತ್ತಿದ್ದೀರಿ’ ಎಂದು ಸಿಟ್ಟಾಗುತ್ತಾನೆ. 

ಈ ಹೊತ್ತಿಗೆ ತಪಸ್ವಿ ಮಹಾರಾಜ್‌ನ ಬಿಸ್ನೆಸ್ ಪೂರ‍್ತಿ ಕೆಳಗಿಳಿದಿರುತ್ತದೆ. ಟಿವಿ ಶೋನಲ್ಲಿ ಬಹಿರಂಗವಾಗಿ ಪಿಕೆ ಮರ‍್ಯಾದೆ ಕಳೆಯಲು ಯೋಚಿಸಿ ತಪಸ್ವಿ ಶೋನಲ್ಲಿ ಹಾಜರಾಗಲು ಒಪ್ಪುತ್ತಾನೆ. ಇದೇ ಸಮಯದಲ್ಲಿ ಜಗ್ಗುವಿನ ಬಗ್ಗೆ ಪಿಕೆಯ ಮನಸ್ಸಿನಲ್ಲಿ ಭಾವುಕ ಒಲವು ಬೆಳೆದಿರುತ್ತದೆ. ಈ ಸಮಯದಲ್ಲಿ ಒಮ್ಮೆ ಅವಳ ಕೈ ಹಿಡಿದುಕೊಳ್ಳುವ ಪಿಕೆಗೆ ಅವಳಿಗೂ, ಸರ‍್ಫರಾಜ್‌ಗೂ ನಡುವಿನ ಪ್ರೇಮ ಮತ್ತು ಅವರು ತಪಸ್ವಿ ಮಹಾರಾಜ್ ನುಡಿದಿದ್ದ ಭವಿಶ್ಯವಾಣಿಯಂತೆಯೇ ಮದುವೆ ರಿಜಿಸ್ಟ್ರಾರ್ ಕಚೇರಿಗೆ ಸರ‍್ಫರಾಜ್ ಬರದೇಹೋದ ವಿಶಯ ಎಲ್ಲವೂ ತಿಳಿಯುತ್ತವೆ. ಕೂಡಲೇ ಟಿವಿ ಶೋನಲ್ಲಿ ಭಾಗವಹಿಸಲು ಪಿಕೆ ಕೂಡಾ ಒಪ್ಪಿಕೊಳ್ಳುತ್ತಾನೆ. ಅಲ್ಲಿ ನಡೆಯುವ ತಪಸ್ವಿ ಮಹಾರಾಜ್- ’ಪಿಕೆ’ ನಡುವಿನ ಸಂಭಾಶಣೆ ಅದ್ಭುತವಾದದ್ದು. ಜಗ್ಗು-ಸರ‍್ಫರಾಜ್ ವಿಶಯದಲ್ಲಿ ತನ್ನ ಭವಿಶ್ಯವಾಣಿ ನಿಜವಾಗಿದ್ದು ಅದು ಸುಳ್ಳೆಂದು ಸಾಬೀತುಪಡಿಸಲು ತಪಸ್ವಿ ಸವಾಲು ಹಾಕುತ್ತಾನೆ. ಆ ಸವಾಲನ್ನು ಜಗ್ಗು ಬೇಡ ಎಂದರೂ ಪಿಕೆ ಸ್ವೀಕರಿಸುತ್ತಾನೆ. ಅಲ್ಲಿ ಸತ್ಯ ಹೊರಬಂದು ತಪಸ್ವಿ ಮುಖ ಹುಳ್ಳುಳ್ಳಗಾಗುತ್ತದೆ. ಕೊನೆಯಲ್ಲಿ ತಪಸ್ವಿ ಮಹಾರಾಜ್‌ನ ಪರಮ ಭಕ್ತನಾಗಿದ್ದ ಜಗ್ಗುನ ತಂದೆಯೇ ಪಿಕೆಯ ರಿಮೋಟ್ ಕಂಟ್ರೋಲರನ್ನು ಪಿಕೆಗೆ ನೀಡುತ್ತಾನೆ. ಪಿಕೆ ತನ್ನ ಗ್ರಹಕ್ಕೆ ಹೊರಟು ನಿಲ್ಲುವಾಗ ಪಿಕೆ ಮತ್ತು ಜಗ್ಗು ನಡುವಿನ ಭಾವುಕ ಸನ್ನಿವೇಶ ಪ್ರೇಕ್ಷಕರ ಮನಮೀಟುತ್ತದೆ.

ತನಗೆ ಎಶ್ಟೆಲ್ಲಾ ವಿಶಯಗಳನ್ನು ಕಲಿಸಿ ಕೊನೆಗೆ ತನ್ನ ಪ್ರಿಯಕರನನ್ನೂ ಮರಳಿ ನೀಡಿದ ಪಿಕೆ ಕುರಿತು ಜಗ್ಗು ಪುಸ್ತಕವೊಂದನ್ನು ಬರೆಯುತ್ತಾಳೆ. ’ನಮ್ ಗ್ರಹದಲ್ಲಿ ಯಾರೂ ಸುಳ್ಳು ಹೇಳುವುದಿಲ್ಲ’ ಎನ್ನುತ್ತಿದ್ದ ಪಿಕೆ ಇಲ್ಲಿಂದ ಹೋಗುವಾಗ ಸುಳ್ಳು ಹೇಳುವುದನ್ನು ಕಲಿತುಕೊಂಡು ಹೋದ, ಆದರೆ ಮನುಶ್ಯಮನುಶ್ಯರ ನಡುವೆ ನಿಜವಾದ ಪ್ರೀತಿ ಹೇಗಿರಬೇಕು ಎಂಬುದನ್ನು ಹೇಳಿಕೊಟ್ಟು ಹೋದ’ ಎಂದು ಜಗ್ಗು ನಿಟ್ಟಿಸಿರಿಡುತ್ತಾಳೆ. 

ಇಂತಿಪ್ಪ ಕತಾಹಂದರವಿರುವ ’ಠಿಞ’  ಎರಡೂವರೆಗಂಟೆ ತಾಸೂ ನೋಡುಗರನ್ನು ನಕ್ಕುನಗಿಸುತ್ತಲೇ ಈ ಭೂಮಿಯ ಮೇಲಿನ ಜನರ ಬದುಕನ್ನು ಹಿಂಸಾತ್ಮಕಗೊಳಿಸಿರುವ ಮತ್ತು ಜನರನ್ನು ದೋಚುತ್ತಿರುವ  ವಿಶಯದ ಬಗ್ಗೆ ಗಂಭೀರ ವಿಚಾರವನ್ನು ಹೇಳುತ್ತದೆ. ಆದರೆ ಅದೆಲ್ಲೂ ಒಣಬೋಧನೆ ಮಾಡುವುದಿಲ್ಲ. ಬದಲಿಗೆ ಸಿನಿಮಾದ ನೋಡುಗರಲ್ಲಿ ತಮ್ಮನ್ನು ತಾವೇ ಕೇಳಿಕೊಳ್ಳಲು ಪ್ರೇರೇಪಿಸುತ್ತದೆ.  ಈ ಸಿನಿಮಾದಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತ-ಸಿಖ್ ಎಲ್ಲ ಧರ‍್ಮಗಳ ವಕ್ತಾರರನ್ನೂ ಜನರಿಗೆ ’ರಾಂಗ್‌ನಂಬರ್’ ನೀಡುತ್ತಿರುವವರೆಂದು ಹೇಳಲಾಗಿದೆಯೇ ಹೊರತು ಯಾವ ದೇವರಿಗೂ, ಧರ‍್ಮಕ್ಕೂ ಅಪಚಾರವಾಗುವಂತಹದೇನೂ ಅದರಲ್ಲಿಲ್ಲ. ಇಡೀ ಸಿನಿಮಾದುದ್ದಕ್ಕೂ ಬಿದ್ದುಬಿದ್ದು ನಗುವಂತಹ ಸನ್ನಿವೇಶಗಳು ಮತ್ತು ಡೈಲಾಗ್‌ಗಳೇ ತುಂಬಿವೆ.

’ಅಸ್ಲೀ ಗಾಡ್ ಪರಕ್ ಬನಾತೋ ತಪ್ಪಾ ಲಗಾ ಕೆ ಬೇಜ್ತಾ, ಹೈ ಕೊಯೀ ತಪ್ಪಾ ಬಾಡೀ ಪೆ? ಎಂದು ಕೇಳುವ ಪಿಕೆ ನೀನು ಆ ಧರ‍್ಮದವನು ನಾನು ಈ ಧರ‍್ಮದವನು ಎಂಬುದು ನಾವು ಮಾಡಿಕೊಂಡಿದ್ದೇ ಹೊರತು ದೇವರು ಹುಟ್ಟುವಾಗ ಠಸ್ಸೆ ಹಾಕಿ ಕಳಿಸುವುದಿಲ್ಲ ಎನ್ನುತ್ತಾನೆ. ಈ ಬಗ್ಗೆ ಸಂಶಯ ಪರಿಹರಿಸಿಕೊಳ್ಳಲಿಕ್ಕಾಗಿ ಪಿಕೆ ಆಸ್ಪತ್ರೆಯೊಂದರಲ್ಲಿ ಆಗಶ್ಟೇ ಹುಟ್ಟಿದ ಶಿಶುಗಳ ಮೇಲೆ ಎಲ್ಲಾದರೂ ಠಸ್ಸೆಯಿದೆಯೇ ಎಂದು ಹುಡುಕುವುದು ತಮಾಶೆಯಾಗಿದೆ. ಹಾಗೆಯೇ ಬೇರೆ ಏನನ್ನೇ ಆದರೂ ಇದು ನನ್ನದು ಎಂದು ಬಹಿರಂಗವಾಗಿ ಹೇಳುವ ಜನ ಕಾಂಡೋಮ್ ವಿಶಯದಲ್ಲಿ, ಸೆಕ್ಸ್ ವಿಶಯದಲ್ಲಿ ಬಹಿರಂಗವಾಗಿ ಯಾಕೆ ಮಾತಾಡುವುದಿಲ್ಲ ಎಂದು ತೋರಿಸುವ ಸನ್ನಿವೇಶವೊಂದು ಮಸ್ತಾಗಿದೆ.

ಕೊನೆಯಲ್ಲಿ ತಪಸ್ವಿ ಮತ್ತು ಪಿಕೆ ನಡುವೆ ನಡೆಯುವ ವಾಕ್ಸಮರ ಬಹಳ ಮಜಬೂತಾಗಿದೆ. ನಮ್ಮ ದೇವರನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಹೇಳುವ ತಪಸ್ವಿಯ ಮಾತಿಗೆ ನೀವು ನೀವೇ ದೇವರನ್ನು ರಕ್ಷಣೆ ಮಾಡೋದನ್ನ ಮೊದಲು ಬಂದ್ ಮಾಡಿ. ಇಲ್ಲವಾದರೆ ಇಡೀ ಭೂಮಿಯ ಮೇಲೆ ಮನುಶ್ಯರು ಉಳಿಯುವುದಿಲ್ಲ, ಅತ್ತ ಮನುಶ್ಯರ ಮೆಟ್ಟುಗಳು ಮಾತ್ರ ಉಳಿದಿರುತ್ತವೆ’ (ಅಪ್ನೆ ಅಪ್ನೆ ಬಗವಾನ್ ಕೀ ರಕ್ಷಾ ಬಂದ್ ಕರೋ, ವಾರ‍್ನಾ ಇಜ್ ಗೋಲ್ ಮೇ ಇನ್ಸಾನ್ ನಹಿ, ಬಸ್ ಜೂತಾ ರೆಹ ಜಾಯೇಗಾ) ಎಂದು ’ಭಯೋತ್ಪಾದರಕ ದಾಳಿಯಲ್ಲಿ ಸಾಯುವ ಬೈರನ್ ಸಿಂಗ್‌ನ ಪಾದರಕ್ಷೆಯನ್ನು ತೋರಿಸಿ ಪಿಕೆ ಹೇಳುವ ಮಾತು ನಿಜಕ್ಕೂ ಮಾರ್ಮಿಕವಾಗಿದೆ.

ಯಾವುದೋ ಕಾಯಿಲೆಕಸಾಲೆಯೆಂದು ಬರುವ ಭಕ್ತರಿಗೆ ಸಾದ್ಯವಾದರೆ ಅವರ ಆರಯಿಕೆಗೆ ಏರ‍್ಪಾಡು  ಮಾಡಬೇಕೇ ಹೊರತು ನೂರಾರು-ಸಾವಿರಾರು ಮೈಲಿ ದೂರದಲ್ಲಿರುವ ಮತ್ತೊಂದು ಯಾವುದೋ ಮಂದಿರಕ್ಕೆ ಅಲ್ಲಿ ದೇವರನ್ನು ಪೂಜಿಸಲು ಕಳಿಸುವ ನೀವು ನಿಜವಾಗಿಯೂ ಜನರಿಗೆ  ಮತ್ತೊಂದು ರಾಂಗ್‌ನಂಬರ್ ಕೊಟ್ಟು ತಮಾಶೆ ನೋಡುವ ವಂಚಕರು ಎನ್ನುವ ಪಿಕೆ ಪ್ರಕಾರ’ರೈಟ್ ನಂಬರ್’ ಎಂದರೆ ಬಹಳ ಸಾದಾಸೀದಾ. ನಾವಿರುವಲ್ಲಿಯೇ ದೇವರಿದ್ದಾನೆ. ದೇವರ ಸೇವೆ ಎಂದರೆ ಸಾವಿರಾರು ಲೀಟರ್ ಹಾಲನ್ನು ಕಲ್ಲಿನ ಮೇಲೆ ಹುಯ್ಯುವುವ ಬದಲು ಹೊತ್ತಿನ ಕೂಳಿಲ್ಲದೇ ಅಳುವ ಲಕ್ಷಾಂತರ ಕಂದಮ್ಮಗಳಿಗೆ, ಬಡಬಗ್ಗರಿಗೆ ಅದೇ ಹಾಲನ್ನು ಉಣಿಸಬೇಕು.ಇಲ್ಲಿ ನಮಗೆ ಪಿಕೆ ಸಿನಿಮಾ ಕೇವಲ ಕತೆಯೊಂದನ್ನು ಹೇಳದೇ ತನ್ನದೇ ದಾಟಿಯಲ್ಲಿ ಜಗತ್ತಿನ ಅತ್ಯುತ್ತಮವಾದ ತಾತ್ವಿಕತೆಯೊಂದನ್ನು ಅಚ್ಚುಕಟ್ಟಾಗಿ ಹೇಳುತ್ತದೆ. ಎಲ್ಲಾ ಧರ‍್ಮಗಳ ದಾರ್ಶನಿಕರು, ಸಂತರು ಆಡಿದ ಮಾನವೀಯ ಧರ‍್ಮದಮಾತುಗಳನ್ನೇ PK ಸೊಗಸಾಗಿ ಆಡುತ್ತದೆ. ದೇವರು ಧರ‍್ಮಗಳ ಹೆಸರಲ್ಲಿ ಮತ್ತೊಬ್ಬರನ್ನು ಒಲ್ಲದ ಧರ‍್ಮ ಧರ‍್ಮವೆ ಅಲ್ಲ, ಮನುಶ್ಯರನ್ನು ಮನುಶ್ಯರಾಗಿ ನೋಡುವುದೇ ನಿಜವಾದ ಧರ‍್ಮ ಎನ್ನುವುದನ್ನು ಹೇಳುತ್ತದೆ. ದೇವರು ಧರ‍್ಮಗಳ ಗಡಿ ಮಾತ್ರವಲ್ಲದೇ ಮಾನವೀಯತೆಯನ್ನು ಗುರುತಿಸುವ ನಿಟ್ಟಿನಲ್ಲಿ ಪಿಕೆ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ದೇಶಗಳ ಗಡಿಯನ್ನೂ ದಾಟುವ ಸಂದೇಶ ನೀಡುತ್ತದೆ. ಜಗ್ಗು ಮತ್ತು ಪಾಕಿಸ್ತಾನದ ಸರ‍್ಫರಾಜ್‌ರ ನಡುವೆ ಉಂಟಾಗುವ ಪ್ರೇಮದ ಸನ್ನಿವೇಶ ಈ ಕೆಲಸ ಮಾಡುತ್ತದೆ. ಇಂತಹ ಕತೆಗಳ ಮಾನವೀಯ ಸಂದೇಶಗಳ ತಿರುಳನ್ನು ಅರ್ಥಮಾಡಿಕೊಳ್ಳಲಾಗದವರು PK ಸಿನಿಮಾದ ಬಗ್ಗೆ ಇಲ್ಲದ ಪುಕಾರು ಹಬ್ಬಿಸುತ್ತಿದ್ದಾರೆ. ಅಂತವರು ಈ ಸಿನಿಮಾ ಹೇಳುವ ’ರಾಂಗ್‌ನಂಬರ್’ಗಳು ಮಾತ್ರ ಆಗಿರಲು ಸಾಧ್ಯ. ಅಂತಹ ರಾಂಗ್‌ನಂಬರ್‌ಗಳಿಗೆಠಿಞ ಸರಿಯಾಗಿ ಚುಚ್ಚುವುದರಿಂದಾಗಿ ಅವರು ಹುಯಿಲೆಬ್ಬಿಸಿದ್ದಾರೆ ಅಶ್ಟೆ.

  ಇನ್ನು ಈ ಸಿನಿಮಾ ತಯಾರಿಕೆಯಲ್ಲಿ ಕೆಲವು ವಿಶೇಶತೆಗಳಿವೆ. ಸಿನಿಮಾದ ನಾಯಕ ಪಿಕೆಯ ಕಿವಿ ಭೂಮಿಯ ಮೇಲಿನ ಮನುಶ್ಯರಂತಿಲ್ಲದೆ ಅಗಲವಾಗಿ ಹೊರಕ್ಕೆ ಚಾಚಿದೆ. ಹಾಗೆಯೇ ಇಡೀ ಸಿನಿಮಾದಲ್ಲಿ ಪಿಕೆ ಎರಡು ಸಲ ಮಾತ್ರ ಕಣ್ಣುಮಿಟುಕಿಸುತ್ತಾನೆ. PKಯಾಗಿ ಅಮೀರ್ ಖಾನ್‌ರ ನಟನೆಯನ್ನು ನೋಡಿಯೇ ಅನುಭವಿಸಬೇಕಶ್ಟೆ. ನಿರ‍್ದೇಶಕ ರಾಜ್‌ಕುಮಾರ್ ಹಿರಾನಿಯ  ಅದ್ಭುತ ಕಲ್ಪನೆಯನ್ನು ಅಶ್ಟೇ ಅದ್ಭುತವಾಗಿ ಚಾಚೂತಪ್ಪದೆ ಪರದೆಯ ಮೇಲೆ ತರಬಲ್ಲ ಅದ್ಭುತ ನಟ ಅಮೀರ್ ಎಂಬುದು ಮತ್ತೆ ಪಿಕೆಯಲ್ಲೂ ಸಾಬೀತಾಗಿದೆ. ಸಾಮಾಜಿಕ ಸಂದೇಶಗಳನ್ನು ಅದ್ಭುತವಾದ ರೀತಿಯಲ್ಲಿ ಸಿನಿಮಾ ಮಾದ್ಯಮದ ಮೂಲಕ ನೀಡುವಲ್ಲಿ ರಾಜ್‌ಕುಮಾರ್ ಹಿರಾನಿ ಅತ್ಯಂತ ಯಶಸ್ವಿ ನಿರ‍್ದೇಶಕ. ಇದನ್ನು ಮುನ್ನಾಬಾಯ್ ಎಂ.ಬಿ.ಬಿ.ಎಸ್.ನಲ್ಲಿ ನಂತರ ತ್ರೀ ಇಡಿಯಟ್ಸ್‌ನಲ್ಲಿ ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ.ಮುನ್ನಾಬಾಯಿ ಮುಂದುವರಿಕೆಯಾಗಿ ಮಾಡಿದ ಲಗೇರಹೋ ಮುನ್ನಾಬಾಯಿ ಕೂಡಾ ಸಾಕಶ್ಟು ಪರಿಣಾಮ ಬೀರಿತ್ತು. ಇವೆರಡರಲ್ಲಿ ನಾಯಕ ನಟನಾಗಿದ್ದ ಸಂಜಯ್‌ದತ್ PKಯಲ್ಲಿ ಬೈರನ್ ಸಿಂಗ್ ಆಗಿ ನಟಿಸಿರುವುದು ವಿಶೇಶ.

ದೇವರು ಧರ‍್ಮಗಳನ್ನು ಬಿಸ್ನೆಸ್‌ಗೆ ಬಳಸಿಕೊಳ್ಳುವ ವಿಶಯಗಳನ್ನೇ ಇಟ್ಟುಕೊಂಡು ಅಕ್ಷಯ್ ಕುಮಾರ್ ನಾಯಕನಾಗಿ ನಟಿಸಿದ್ದ ಉತ್ತಮ ಸಿನಿಮಾ ’ಓಹ್ ಮೈ ಗಾಡ್’ ಸಿನಿಮಾ ಕೂಡ ತಯಾರಾಗಿದ್ದರೂ ಸಹ PKಅದಕ್ಕಿಂತ ಬೇರೆಯದೇ ದಾಟಿಯನ್ನು ಹೊಂದಿರುವ ಜೊತೆ ಹೆಚ್ಚಿನ ಕ್ರಿಯೇಟಿವಿಟಿಯನ್ನು ಹೊಂದಿದೆ.ಮಾತ್ರವಲ್ಲ ಮೂಲದಲ್ಲಿ ನಾಟಕವಾಗಿದ್ದ ಕೃತಿಯನ್ನು ಸಿನಿಮಾ ಮಾಡುವಾಗ ಮಾಡಿಕೊಂಡಿದ್ದ ಬದಲಾವಣೆಗಳಿಂದ ಹೇಳಬೇಕಾಗಿದ್ದನ್ನು ಪೂರ‍್ತಿ ಹೇಳಲು ’ಓಹ್ ಮೈ ಗಾಡ್’ ಸೋತಿತ್ತು. ಅಂತಹ ತಾತ್ವಿಕ ಮಿತಿಯನ್ನು PK ಮೀರಿದೆ ಎನ್ನಬಹುದು. 

ಇನ್ನು ಪಿಕೆ ಸಿನಿಮಾದಲ್ಲಿ ತೊಡುವ ಚಿತ್ರವಿಚಿತ್ರ ತರಹೇವಾರಿ ಬಟ್ಟೆಗಳನ್ನು ಕೊಂಡು ತಂದಿಲ್ಲವಂತೆ. ಸಿನಿಮಾ ತಂಡದವರು ಅದರಲ್ಲೂ ವಿಶೇಶವಾಗಿ ಕಾಸ್ಟ್ಯೂಮ್ ಡಿಸೈನರ್ ನಾನಾ ಬಗೆಯ ಜನರಿಗೆ ಏನೇನೋ ಕತೆಗಳನ್ನು ಹೊಡೆದು ಒಟ್ಟುಮಾಡಿದ ಬಟ್ಟೆಗಳನ್ನೇ ಪಿಕೆ/ಅಮೀರ್ ಖಾನ್‌ಗೆ  ತೊಡಿಸಲಾಗಿತ್ತಂತೆ. PK ಯ ಹಾಡುಗಳೂ ವಿಶೇಶವಾಗಿಯೇ ಇವೆ. ’ಲವ್ ಈಸ್ ಎ ವೇಸ್ಟ್ ಆಫ್ ಟೈಮ್’, ತ್ರೀ ಇಡಿಯಟ್ಸ್‌ನಲ್ಲಿನ ’ಜುಬಿಡುಬಿಜುಬಿಡುಬಿ’ನಂತೆಯೇ ಮುದನೀಡುತ್ತದೆ. ಅದರ ಕೊರಿಯೋಗ್ರಫಿಯನ್ನು ಪಿಕೆಯ ಗೋಳದಿಂದಲೇ ನಿರ‍್ದೇಶಕರು ಎರವಲು ತಂದಿದ್ದಾರೇನೋ! ಇನ್ನು ದೇವರನ್ನು ಹುಡುಕಿ ಸುಸ್ತಾದಾಗ ಹೇಳುವ’ಭಗವಾನ್ ಹೇ ಕಂಹಾರೆ ತೂ’, ಮತ್ತು ’ಚಾರ್ ಕದಮ್’ ಹಾಡುಗಳು ಬಹಳ ಇಶ್ಟವಾಗುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ ಇತ್ತೀಚಿನ ಅತ್ಯುತ್ತಮ ಸಿನಿಮಾಗಳಲ್ಲಿ ಪಿಕೆ ಒಂದೆಂದು ಖಚಿತವಾಗಿ ಹೇಳಬಹುದು. 
ಕಾಮೆಂಟ್‌ಗಳಿಲ್ಲ: