ಮಂಗಳವಾರ, ಡಿಸೆಂಬರ್ 30, 2014

ದೊಡ್ಡೋಳಾಗೋದಂದ್ರೆ ...

ದೊಡ್ಡೋಳಾಗೋದಂದ್ರೆ ...


-ಚರಿತಾ
ಚಿತ್ರ - ಚರಿತಾ




   ಟೋಲ್ಗೇಟಲ್ಲಿ ಟಿಕೆಟ್ ಇಶ್ಯು ಮಾಡೋಕಂತ ನಿಂತಿದ್ದ ಬಸ್ಸಿನ ನೀರವತೆಯಲ್ಲಿ ಅನಿರೀಕ್ಷಿತವಾಗಿ 'ಫಟ್ಟ್...' ಅನ್ನೊ ರಭಸದ ಸದ್ದಾಗಿತ್ತು. ಅದರ ಹಿಂದೆಯೇ 'ಲೋಫ಼ರ್..!' ಅಂದಿದ್ದೂ ಕೇಳಿತ್ತು. ಅಲ್ಲಿಗೆ ಅದು ಯಾರು? ಯಾರಿಗೆ? ಯಾಕೆ? ಏನು? ... ಇತ್ಯಾದಿತ್ಯಾದಿ ಪ್ರಶ್ನೆಗಳಿಗೆಲ್ಲ ಥಟ್ಟಂತ ಉತ್ತರ ಹೊಳೆದುಬಿಟ್ಟಿತ್ತು ! ವಿಚಿತ್ರ ಸಿಟ್ಟು, ಖುಶಿ, ವೇದನೆ ಒಟ್ಟೊಟ್ಟಿಗೇ ಆಗಿತ್ತು ...

   ಕಾಲಿಗೆ ಚಕ್ರ ಕಟ್ಟಿಕೊಂಡಹಾಗೆ ಊರೂರು ಸುತ್ತುತ್ತಿದ್ದವಳು ಈಗ ನೈಟ್ ಜರ್ನಿಗೆ ಸುತಾರಾಂ ರಾಜಿಯಿಲ್ಲ. ಒಬ್ಬಳೇ ಹಗಲುಹೊತ್ತು ಓಡಾಡೋದಾದ್ರು ಪಕ್ಕದ ಸೀಟಿಗೆ ಬ್ಯಾಗ್ ಇಟ್ಟು, ಕೇಳಿದವರಿಗೆಲ್ಲ "ಬರ್ತಾರೆ" ಅಂತಂದು, ಯಾವುದಾದ್ರು ಹೆಣ್ಣುಜೀವ ಬಂದು ಕೂರಬಾರದಿತ್ತಾ ಅಂತ ಹಲುಬುವ ಮನಸ್ಸು. (ಬಹುಷಃ 'ದೊಡ್ಡೋಳಾಗೋದಂದ್ರೆ' ಇದೇ ಇರ್ಬೇಕು - ಅಪಾಯಗಳನ್ನು ಎದುರಿಸಲು ಸಜ್ಜುಗೊಳ್ಳೋದು ಅಂತ!)   ಪಕ್ಕ ಕೂರಲು ಹವಣಿಸುವವರ ಕಣ್ತಪ್ಪಿಸುತ್ತ, ಜಾಣಕಿವುಡಳಾಗಿ ಕೂತಾಗಲೂ ಭಂಡತನದಲ್ಲಿ ಒತ್ತರಿಸಿಕೊಳ್ಳುವ ಗಡವರೇ ಬಹುಪಾಲು. ಕಳ್ಳನಿದ್ದೆ ಮಾಡುತ್ತ ಮೈಮೇಲೆ ಬೀಳುವ, ಕುಂಟುನೆಪದಲ್ಲಿ ಮಾತಿಗೆಳಸುವ, ಮೈತಾಕಿಸುವ ಕೀಚಕರಿಗೆ ಬೈಗುಳದ ಟ್ರೀಟ್ಮೆಂಟ್ ರೆಡಿಯಾಗೇ ಇಟ್ಟಿರಬೇಕು. ಕನಿಷ್ಟಪಕ್ಷ ಹರಿತಗಣ್ಣಾದರೂ ಇರಲೇಬೇಕು. ಇನ್ನು, ಸೀಟ್ ಸಂದಿಯಲ್ಲಿ ನುಸುಳಿಬರುವ ಕೈಗಳಿಗೆ 'ಸೇಫ಼್ಟಿಪಿನ್' ಪ್ರಯೋಗ ಇದ್ದೇಇದೆ ! ಅಂತೂ ಆವತ್ತಿನ ಪ್ರಯಾಣದತುಂಬ ಮೈಯೆಲ್ಲ ಕಣ್ಣಾಗಿ-ಕಿವಿಯಾಗಿ(ಕೆಲವೊಮ್ಮೆ ಬಾಯಿಯೂ ಆಗಿ), ರೋಮರೋಮಕ್ಕು ಎಚ್ಚರವಾಗಿ, ಹಾದಿ ವಿಪರೀತ ದೂರವಾದಂತನಿಸುವುದು ಮಾಮೂಲು!

ಬಹುಶಃ ಯಾವ ಮೆಡಿಟೇಶನ್ ಕೋರ್ಸಲ್ಲೂ ಇಷ್ಟು ಎಚ್ಚರದ ಧ್ಯಾನ ಮಾಡಿರಲಿಕ್ಕಿಲ್ಲ ನಾನು! ಹಾಗಾಗಿ ಇಂಥ ಪ್ರಯಾಸಕರ ಪ್ರಯಾಣಗಳೇ ನನ್ನ ಪಾಲಿನ ನಿಜವಾದ 'ಧ್ಯಾನ ಕೇಂದ್ರಗಳು'!

   ಈ ಜನ, ಈ ಪ್ರಯಾಣ ನನಗೆ ಕಲಿಸಿರುವ ಎಚ್ಚರ ಇಲ್ಲೀವರೆಗು ನನ್ನ ಕಾಯುತ್ತ ಬಂದಿದೆ. ಹಾಗೇ ಬದುಕನ್ನು ಮತ್ತಷ್ಟು ಸ್ಪಷ್ಟವಾಗಿ ನೋಡುವುದನ್ನು ಕಲಿಸಿದೆ. ನನ್ನ ಪಾಲಿಗಿರುವ ಸ್ವಾತಂತ್ರ್ಯದ ವ್ಯಾಖ್ಯಾನವೂ ಒಂದು ಮಿತಿಯಲ್ಲಿ ಮಾತ್ರ ಇರಬಹುದಾದ್ದು ಎಂಬುದನ್ನೂ ಮನವರಿಕೆ ಮಾಡಿಸಿದೆ. ಮುಂಜಾನೆ ಒಬ್ಬಳೇ ವಾಕಿಂಗ್ ಹೋಗೋಹಾಗಿಲ್ಲ... ನನಗಾಗಿಯೇ ಈ ಬೆಳಕಾಗಿದೆ ಎನಿಸುವ ಭಾವಕ್ಕೂ, ಪ್ರತೀಸಲದ ವಾಕ್ನಲ್ಲಿ ನಾನು ಕಂಡುಕೊಳ್ಳುತ್ತಿದ್ದ ಆ ಮುದಕ್ಕೂ ಕತ್ತರಿಬಿದ್ದಿದ್ದು ಕೆಲವು ವರ್ಷಗಳ ಹಿಂದೆ, ಒಂದು ಕೆಟ್ಟ ಆತಂಕಹುಟ್ಟಿಸುವ ಘಟನೆಯಿಂದಾಗಿ.  ಕತ್ತಲಾದಮೇಲೆ ಬಸ್ಟಾಪಲ್ಲಿ ನಿಲ್ಲೋಹಾಗಿಲ್ಲ-ಒಂಟಿಯಾಗಿ ತಿರುಗೋಹಾಗಿಲ್ಲ . ಇನ್ನು, ಕಣ್ಣುಕುಕ್ಕುವ ಬೆಳ್ಳಂಬೆಳಕಲ್ಲು ಎಚ್ಚರತಪ್ಪೋಹಾಗಿಲ್ಲ,... ಈ 'ಇಲ್ಲ'ಗಳ ಲಿಸ್ಟು ಮಾತ್ರ ಎಲ್ಲೂ ಬದಲಾಗದೇ ಬೆಳೆಯುತ್ತಲೇ ಇದೆಯಲ್ಲ!

 ಚಿತ್ರ - ಚರಿತಾ



     ನೈಟ್ ಲ್ಯಾಂಡ್ಸ್ಕೇಪ್ ಮಾಡ್ಬೇಕು, ರಾತ್ರಿಕತ್ತಲಲ್ಲಿ ಒಬ್ಬಳೇ ಊರೆಲ್ಲ ತಿರುಗಬೇಕು ಅನ್ನುವ ನನ್ನ ಹುಚ್ಚು ಆಸೆ ಇನ್ನೂ ಆಸೆಯಾಗೇ ಉಳಿದುಬಿಟ್ಟಿದೆ. ಹಾಗನಿಸಿದಾಗೆಲ್ಲ, ನನ್ನ ನಾನು 'ಮಾಯ' ಮಾಡಿಕೊಳ್ಳುವ ಯಾವುದಾದ್ರು ಮ್ಯಾಜಿಕ್ ನನಗೆ ಗೊತ್ತಿರಬೇಕಿತ್ತು ಅನಿಸ್ತಿತ್ತು! ಅಥವಾ ನಾನೊಬ್ಬ ಲೇಡಿ ಫ್ಯಾಂಟಮ್ ಥರ ಯಾರಿಗೂ ಅಂಜದೆ ಬೇಕಾದಲ್ಲಿ ತಿರುಗಾಡಿಕೊಂಡಿರೋಹಾಗಿದ್ರೆ ಎಷ್ಟ್ ಚೆಂದ ಅನಿಸ್ತಿತ್ತು. ಕೆಲವೊಮ್ಮೆ ಇದೇ ಕಾರಣಕ್ಕೆ ನಾನು ಹುಡುಗ ಆಗಿರ್ಬೇಕಿತ್ತು ಅಂತಲೂ ಅನಿಸಿತ್ತು! ಈಗ 'ದೊಡ್ಡೋಳಾಗಿದೀನಿ'.. ಫ್ಯಾಂಟಸಿಗಿಂತ ರಿಯಾಲಿಟಿಯಲ್ಲೆ ಬದುಕಲು ಕಲಿಯುತ್ತಿದ್ದೀನಿ! ಈಗ ನೈಟ್ ಲ್ಯಾಂಡ್ಸ್ಕೇಪ್ ಹಾಗಿರಲಿ, ಹಾಡಹಗಲಲ್ಲೂ ಫೀಲ್ಡ್ ವರ್ಕ್ ಮಾಡೋಕೆ ಲೇಡಿ ಫ್ಯಾಂಟಮ್ಮೇ ಆಗಬೇಕಾಗಿದೆ! ಆದ್ರೆ, ಫ್ಯಾಂಟಮ್ಗೇ ಜಾಸ್ತಿ ಕಷ್ಟ ಅಂತ ತಿಳಿಯೋಕೆ ಇಷ್ಟು ವರ್ಷ ಬೇಕಾಯ್ತು ನಂಗೆ!

   ಆವತ್ತು ನಾನು ಹೊರಟಿದ್ದು ದೂರದ ಊರಿನ ಒಬ್ಬಜ್ಜೀನ ಮಾತಾಡಿಸೋದಕ್ಕೆ. ಅವರು ಜಾನಪದ ಹಾಡುಗಾತರ್ಿ. ಆಗಷ್ಟೆ ಒಂದು ವಿಶೇಷ ಪ್ರಶಸ್ತಿ ಸಂದಿದ್ದರಿಂದ ಅವರನ್ನು ಮಾತಾಡಿಸಿ, ಒಂದಷ್ಟು ಹೊತ್ತು ಕಣ್ತುಂಬಿ, ಮನದುಂಬಿಕೊಳ್ಳುವ ನೆಪ ಸಿಕ್ಕಿತ್ತು. ಮೈಸೂರಿಂದ ಬೆಳಗಿನ ಬಸ್ಸು ಹತ್ತಿದ್ದ ನನಗೆ ಸ್ವಲ್ಪಹೊತ್ತಿಗೆ ಬಸ್ಸಲ್ಲಿದ್ದದ್ದು ಬಹುಷಃ ನಾನೊಬ್ಬಳೇ ಮಹಿಳೆ ಅನಿಸಿ, ಒಂಥರದ ದುಗುಡ, ಆತಂಕ ಆವರಿಸಿಕೊಂಡಿತ್ತು.  ಪಕ್ಕದ ಸೀಟಿಗೆ ನನ್ನ ದೊಡ್ಡ ಬ್ಯಾಗ್ ಇರಿಸಿ, ಹಿಂದಿನ ಸೀಟಲ್ಲಿ ಯಾರಿದಾರೆ ಅಂತ ಗಮನಿಸಿಕೊಂಡಿದ್ದೆ. ಆತ ಒಬ್ಬ ಮಧ್ಯವಯಸ್ಕ. ಒಮ್ಮೆ ನನ್ನ ಸೀಟಿನ ಕಡೆ ಬಾಗಿ ಕೂರೋದು, ಮತ್ತೊಮ್ಮೆ ಕಿಟಕಿ ಗಾಜನ್ನು ಆಚೀಚೆ ಎಳೆದಾಡೋದು ನಡೆದಿತ್ತು. ನನಗೋ ಆತನನ್ನೂ ಒಳಗೊಂಡು ಬಸ್ಸಲ್ಲಿದ್ದ ಆ ಎಲ್ಲಾ ಗಂಡಸರೂ ಎಡೆಬಿಡದೆ ನನ್ನನ್ನೇ ದಿಟ್ಟಿಸುತ್ತಿರೋಹಾಗೆ, ಅವರೆಲ್ಲರ ಕಣ್ಣ ಈಟಿಗಳು ಕಂಡಕಂಡಲ್ಲಿ ತಿವಿಯುತ್ತಿರೋಹಾಗೆ ಅನಿಸಿ, ದುಪಟ್ಟಾವನ್ನು ಮತ್ತಷ್ಟು ಅಗಲ ಮಾಡಿ, ನನ್ನ ಕತ್ತು, ಕೈಯನ್ನೂ ಮುಚ್ಚಿಕೊಂಡು ಕೂತೆ. ಎದೆಬಡಿತ ಮಾತ್ರ ನನಗೆ ಸ್ಪಷ್ಟವಾಗಿ ಕೇಳೋಹಾಗಿತ್ತು! ಆದರೂ ಆತಂಕ ತೋರಿಸುವಂತಿರಲಿಲ್ಲ. ಆರಾಮಾಗೇ ಇದೀನಿ ಅನ್ನೋಹಾಗೆ ಇಯರ್ ಫೋನ್ ಕಿವಿಗಿಟ್ಟುಕೊಂಡ್ರೆ, " ಕಾಂತಾನಿಲ್ಲದಮ್ಯಾಲೆ ಏಕಾಂತವ್ಯಾತಕೆ..." ಅಂತ ರತ್ನಮಾಲಾ ಪ್ರಕಾಶ್ ಹಾಡೋದಕ್ಕೆ ಶುರುಮಾಡಿದ್ರು. ಅವರನ್ನು ಮಧ್ಯದಲ್ಲೆ ತಡೆದು, ನನ್ನ ಕಷ್ಟ ಹೇಳಿಕೊಳ್ಳಬೇಕೆನಿಸಿತು. ಅವರೋ ಈ ಲೋಕದ ಗೊಡವೆಯೇ ತನಗಿಲ್ಲವೆಂಬಂತೆ ಹಾಡುತ್ತಲೇ ಇದ್ರು. ಆ ಹಾಡು ಬರೆದ ಕಂಬಾರರು ಅಲ್ಲೇನಾದ್ರು ಕಾಣಬಹುದಾಂತ ನೋಡಿದರೆ ಕಂಡಿದ್ದು ಆ ಕಂಡಕ್ಟರು. ಯಾಕೋ ಅವನೂ ಕೂಡ ನನ್ನ ಕಡೆಗೆ ಒಂಥರದ ಹುಳ್ಳನಗೆ ನಕ್ಕಂತಾಗಿ, ನನ್ನ ಆತಂಕ ಅವನಿಗೆ ಗೊತ್ತಾಗಿಹೋಯ್ತೇನೊ ಅನಿಸಿ ಮತ್ತಷ್ಟು ದಿಗಿಲಾಯ್ತು.

   'ಎಲ್ಲಿಗೆ ?' ಅನ್ನೋಹಾಗೆ ಎದುರುಬಂದು ನಿಂತ.
ಇಂತಲ್ಲಿಗೆ ಅಂತ ಜೋರಾಗಿ ಹೇಳೋದು ಅಪಾಯ ಅನಿಸಿದ್ದರಿಂದ, ಅವನಿಗೆ ಮಾತ್ರ ಕೇಳೋಹಾಗೆ ಸಣ್ಣದನಿಯಲ್ಲಿ ಹೇಳಿದ್ದೆ...
" ದಾವಣ್ಗೆರೇಗಾ ?" ಅಂತ ಅಷ್ಟು ದೊಡ್ಡದಾಗಿ, ಇಡೀ ಬಸ್ಸಿಗೆ ನನ್ನ 'ಕೊನೆ ನಿಲ್ದಾಣ' ಅನೌನ್ಸ್ ಮಾಡಿದ್ದ ಆತ. ಆ ಕ್ಷಣ, ಯಮ ಅಂದ್ರೆ ಇವನೇ ಇರ್ಬೇಕು ಅನಿಸಿಬಿಟ್ಟಿತ್ತು! ಹೃದಯ ನೇರ ಬಾಯಿಗೇ ಬಂದಂಗಾಗಿತ್ತು! ಹಿಂದಿನ ಸೀಟಿನ ಆಸಾಮಿಗೂ ಈ ಕಂಡಕ್ಟರ್ಗೂ ಏನೊ ಡೀಲಿಂಗ್ ಇರ್ಬೇಕು ಅಂತೆಲ್ಲ ಅನಿಸತೊಡಗಿ ಬಾಯಿ ಮತ್ತಷ್ಟು ಒಣಗತೊಡಗಿತು..
"ಅರಸೀಕೆರೇಲಿ ಇಳ್ಕೊಂಡು ಅಲ್ಲಿಂದ ಟ್ರೇಯ್ನಲ್ಲಿ ಹೋಗಿ, ಒಬ್ರೆ ಬೇರೆ ಇದೀರಿ. ಈ ಬಸ್ಸು ತಲುಪೋದು ತುಂಬ ಲೇಟು" ಅಂತಂದು ಒಂಥರಾ ನಕ್ಕ. ಈಗ ನಿಜಕ್ಕು ದಿಗಿಲು, ಗೊಂದಲ ಒಟ್ಟೊಟ್ಟಿಗೆ ಆಗಿತ್ತು.

   ಬಸ್ ಇಳಿದ ಕೂಡ್ಲೆ, ಹಿಂದೆಯೇ ಇಳಿದು ನನ್ನ ಹಿಂಬಾಲಿಸಿ ಬರಬಹುದಾದ ಮೂರ್ನಾಲ್ಕು ಗಂಡಸರು ನನ್ನ ಹಿಡಿದು ನಿಲ್ಲಿಸ್ಬೌದು,.. ಹೆದರಿಸಿ ಬ್ಯಾಗಲ್ಲಿರೋದೆಲ್ಲ ಕಿತ್ಕೋಬೌದು,.. ಮೈಮೇಲೆ ಕೈಹಾಕ್ಲುಬೌದು ...ಆಗ ನಾನೇನು ಮಾಡ್ಬೇಕು?? ...
ಆದಷ್ಟೂ ಗಾಬರಿಯಾಗದೆ, "ಯಾಕ್ರಪ್ಪ? ಏನು ನಿಮ್ ಪ್ರಾಬ್ಲಮ್ಮು ?" ಅಂತ ಗಂಭೀರವಾಗಿ ಕೇಳ್ಬೇಕು...
ಕ್ಯಾಮರ, ಆಡಿಯೋ ರೆಕಾರ್ಡರ್, ತಮ್ಮ ಕೊಡಿಸಿದ್ದ ರಿಸ್ಟ್ವಾಚು, ತುಂಬ ಇಷ್ಟಪಟ್ಟು ತಕೊಂಡಿದ್ದ ಲೆದರ್ ಪಸರ್ು, ಅದರಲ್ಲಿದ್ದ ಒಂದಷ್ಟು ದುಡ್ಡು-ಫೋಟೋಗಳು, ಬಾಯ್ಫ್ರೆಂಡ್ ಥರ ನನ್ನ ಜೊತೆಗಿರುವ ಮೊಬೈಲು, ಆಂಟಿಯೊಬ್ಬರು ಗಿಫ್ಟ್ ಮಾಡಿದ್ದ ಬಿಳಿಹರಳಿನ ಓಲೆ, ಇತ್ಯಾದಿತ್ಯಾದಿ ದೊಡ್ಡ-ಸಣ್ಣ ನೆನಪುಗಳೆಲ್ಲವನ್ನೂ ನಿರ್ಲಿಪ್ತವಾಗಿ, 'ಕಾಲಜ್ಞಾನಿ'ಯಹಾಗೆ ತೆಗೆದುಕೊಟ್ಟುಬಿಡಲು ತಯಾರಾಗ್ಬೇಕು,.. ಹಾಗೆ ಕೊಡುತ್ತ, "ಎಷ್ಟ್ ದಿನಾಂತ ಇಂಥ ಜೀವ್ನ ನಿಮ್ದು? ಯಾಕೆ ಹೀಗೆಲ್ಲ ತೊಂದ್ರೆ ಕೊಡ್ತೀರಿ?" ಅಂತ ನಿರಾಳವಾಗಿ ಕೇಳ್ಬೇಕು!! ...ಅಷ್ಟು ತಣ್ಣಗಿನ ನನ್ನ ಮಾತು ಕೇಳಿ ಅವರಿಗೆ ತಮ್ಮ ಪ್ಲ್ಯಾನ್ ಎಲ್ಲಾ ಮರೆತುಹೋಗ್ಬೇಕು,...!!
... ಅದ್ಸರಿ, ಅಷ್ಟು ತಣ್ಣಗೆ ನಟಿಸೋಕೆ ನನಗೆ ಸಾಧ್ಯ ಆಗ್ಬಹುದಾ?... ಅಂತೆಲ್ಲ ಯೋಚಿಸುವಷ್ಟರಲ್ಲಿ ಅರಸೀಕೆರೇಲಿ ಬಸ್ ನಿಂತಿತ್ತು.

   ಬಸ್ ಇಳಿದು ಅಷ್ಟು ದೂರದವರೆಗೂ ಯಾರೂ ಹಿಂಬಾಲಿಸ್ತಾಯಿಲ್ಲ ಅನಿಸಿದಮೇಲಷ್ಟೆ ಆ ಕಂಡಕ್ಟರ್ ಬಗ್ಗೆ ಸ್ವಲ್ಪ ನಂಬಿಕೆ ಬಂದಿದ್ದು! ಆದ್ರೆ, ಹಿಂದಿನ ದಿನ ಟೀವೀಲಿ ಕಂಡಿದ್ದ ಆ ಕೇಡಿ ರೇಪಿಸ್ಟ್ ಈ ರೈಲ್ವೆ ಸ್ಟೇಷನ್ನಲ್ಲೆಲ್ಲಾದ್ರು ಹೊಂಚುಹಾಕೊಂಡಿರಬಹುದಾ? ಅನ್ನೋ ಆತಂಕ ಮತ್ತೆ ಬಿಗಿಯಾಗಿ ಉಸಿರುಗಟ್ಟಿಸುವಂತೆ ಆವರಿಸಿಕೊಳ್ಳತೊಡಗಿತ್ತು! ಅಂತೂ ಆ ಟ್ರೇಯ್ನು ನನ್ನನ್ನೂ, ನನ್ನ ಪ್ರೀತಿಯ ಬ್ಯಾಗನ್ನೂ, ನನ್ನ ದುಗುಡ, ಆತಂಕಗಳನ್ನೂ ಇಡಿಯಾಗಿ ದಾವಣಗೆರೆವರೆಗೂ ತಲುಪಿಸಿತು...

   ಪ್ರಯಾಣ ಅನ್ನೋದು ಎಷ್ಟು ಚೇತೋಹಾರಿ! ಹೊಸಜನ, ಹೊಸಜಾಗ ಕಾಣೋದು-ತಿಳಿಯೋದು ಎಷ್ಟ್ ಚೆಂದ! ಅಂತೆಲ್ಲ ಹಾರಾಡುತ್ತಿದ್ದೋಳ ರೆಕ್ಕೆಗಳು ಎಲ್ಲಿ ಕಳೆದುಹೋದವು?! ಆ ಉತ್ಸಾಹದ ಬದಲು ಈ ಆತಂಕ ಜಾಗಪಡೆದಿದ್ದು ಹೇಗೆ? ದಾರಿಹೋಕರೆಲ್ಲ ಕಳ್ಳರಹಾಗೆ, ರೇಪಿಸ್ಟ್ ಗಳ ಹಾಗೆ ಕಾಣೋಕೆ ಶುರುವಾಗಿದ್ಯಾಕೆ? ಆಟೋ ಹತ್ತೋಕೆ ಮುಂಚೆ, ಎಟಿಎಮ್ ಹೊಕ್ಕೋಕೆ ಮುಂಚೆ ಇಪ್ಪತ್ತು ಸರ್ತಿ ಯೋಚಿಸೋಹಾಗೆ ಆಗಿರೋದ್ಯಾಕೆ? ರೆಕ್ಕೆಗಳನ್ನು ಕಳಚಿಟ್ಟು, ಮರೆತುಬಿಟ್ಟಂತೆ ಹೀಗೆಲ್ಲಾ ನಾನು ಬದಲಾದದ್ದಾದರೂ ಯಾಕೆ?...



   ಸ್ವಾತಂತ್ರ್ಯ, ಐಡೆಂಟಿಟಿ, ಸೇಫ಼್ಟಿ - ಇವಕ್ಕೆಲ್ಲ ಇರಬಹುದಾದ ವ್ಯಾಖ್ಯಾನಗಳನ್ನು ಬಹುಷಃ ಇಂಥಾ ಆತಂಕ, ತಲ್ಲಣ, ದಿಗಿಲುಗಳ ಒಳಹರಿವಿನಲ್ಲೇ ಕಟ್ಟಿಕೊಳ್ಳಬೇಕಾಗಿದೆ! 'ನಾನು' ಅಂದರೆ ಕೇವಲ ಸುಂದರ ಕನಸುಗಳ ಮೂಟೆಯಷ್ಟೇ ಅಲ್ಲ ; ಆ ಕನಸುಗಳ ಸುತ್ತ ಕಾವಲುಪಡೆಯಂತೆ ನಿಲ್ಲಬೇಕಾದ ಎಚ್ಚರದ ವೇದನೆಯೂ ಆಗಬೇಕಿದೆ!

   ....ಆ ಭೇಟಿಯ ನಂತರ ಮತ್ತೆ ಮೈಸೂರಿಗೆ ಮರಳುವ ಹಾದಿಯಲ್ಲಿ ನನ್ನ ಕಣ್ಣು-ಕಿವಿ-ಮನಸನ್ನೆಲ್ಲ ಇಡಿಯಾಗಿ ಆವರಿಸಿಕೊಂಡಿದ್ದುದು ಆ ಸುಂದರಿ ಅಜ್ಜಿಯ ಗುಂಗು... ನಗು, ಬೆರಗು, ಶುದ್ಧ ಸಂಭ್ರಮದ ಬೆಡಗು. ದೇವದಾಸಿಯಾಗಿದ್ದವಳು ಆಕೆ ... ನೋವು, ಸಂಕಟ, ರೋಷ, ಕಿಚ್ಚು , ಪ್ರೀತಿ - ಎಲ್ಲವನ್ನೂ ಬಸಿದು ಎದೆಯ ಹಾಡಾಗಿಸಿಕೊಂಡವಳು,... ಕಂಬನಿಯನೆಣ್ಣೆಯಾಗಿಸಿ ಕಣ್ಣದೊಂದಿ ಹೊತ್ತಿಸಿಕೊಂಡವಳು... ಅವಳೇ ನನ್ನೊಳಗಿಳಿದು ಕೂತಿದ್ದರಿಂದಲೋ ಏನೋ ನನಗೆ ಅಕ್ಕಪಕ್ಕದ ಸೀಟಿನ ಗಂಡಸರ್ಯಾರೂ ಕಾಣಲೇ ಇಲ್ಲ...!!

 ಚಿತ್ರ - ಇಂಟರ್ನೆಟ್ ಮೂಲ


   ('ಹೊಸ ಮನುಷ್ಯ' ಮಾಸ ಪತ್ರಿಕೆಯ 'ಸಮಾಜವಾದಿ ಯುವ ಚಿಂತನ ವೇದಿಕೆ'ಯಲ್ಲಿ ಪ್ರಕಟಿತ - ಡಿಸೆಂಬರ್, ೨೦೧೪ )

2 ಕಾಮೆಂಟ್‌ಗಳು:

santhosh shetty ಹೇಳಿದರು...

Nivu hedri mathobrannu yake hedrustira? swalp brama lokadinda hora banni, yaro ello eno madi thappige idi samajavanne hage noduvudu sariyalla

Anil ML ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.