ಮಂಗಳವಾರ, ಡಿಸೆಂಬರ್ 2, 2014

ಎಂಜಲೆಲೆಯ ಮೇಲೆ ಹೊರಳಾಡುವ 'ನಂಬಿಕೆಯ ಬಲಿಪಶುಗಳು'-Koragerna Alipu Oripu
   ಈ ದೇಶದಲ್ಲಿ ಗುಡಿ - ಗುಂಡಾರ, ಮಂದಿರ - ಮಸೀದಿ, ಚರ್ಚು - ಬಸದಿ, ಸ್ತೂಪ - ಧೂಪ, ದರ್ಗ - ಬನಗಳಿಗೆ ಯಾವ ಕೊರತೆಯೂ ಇಲ್ಲ. ಹೀಗಿದ್ದರೂ ಅವುಗಳ ಸಂಖ್ಯಾಸ್ಪೋಟ ಏರುಗತಿಯಲ್ಲಿದೆ. ಅರ್ಚನೆ, ಆರಾಧನೆ, ಪೂಜೆ, ಯಾಗ, ಯಜ್ಙಾದಿ, ಪುರಸ್ಕಾರಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇಷ್ಟಾದರೂ ಈ ಸಮಾಜದಲ್ಲಿ ಧರ್ಮ ಎನ್ನುವುದು ಶೋಕಿಗಾಗಿ ಎಂಬಂತಾಗಿದೆ. 'ಅಧರ್ಮವೇ ಧರ್ಮ'ವೆಂಬಂತೆ ತಾಂಡವವಾಡುತ್ತಿದೆ. ಅರಾಜಕತೆ, ಅನೀತಿ, ಅನ್ಯಾಯಗಳು, ಅಕ್ರಮಗಳು ಅಪಾಯಕಾರಿ ಮಟ್ಟವನ್ನು ದಾಟಿ ಹೋಗಿದೆ. ಧರ್ಮ ಸನ್ನಿಧಿಯಲ್ಲಿ ಅಕೃತ್ಯಗಳ ಸರಮಾಲೆಯೇ ಜರಗುತ್ತಿದೆ.
ಉತ್ಕಟ ಸ್ವಾಭಿಮಾನ ಮತ್ತು ಅಚಲ ಇಚ್ಛಾಶಕ್ತಿ ಇಲ್ಲದ ಮುಗ್ಧರನ್ನು ಯಾರೂ ಬೇಕಾದರೂ ತಮ್ಮ ಗುಲಾಮರನ್ನಾಗಿ ಮಾಡುತ್ತಾರೆ! ಭಕ್ತಿಯ ಪರಾಕಾಯ ಸ್ಥಿತಿಗೆ ಆಹುತಿಯಾಗುವವರು ಕೂಡಾ ಮುಗ್ಧರೆ. ನಂಬಿಕೆಗಿಂತಲೂ - ಮೂಢನಂಬಿಕೆ, ಗಾಢನಂಬಿಕೆ, ಕುರುಡುನಂಬಿಕೆ, ಅಚಲನಂಬಿಕೆಗಳು ಹೆಚ್ಚು ಅಪಾಯಕಾರಿ. ಬೆಳಿಗ್ಗೆ ಏಳುವಲ್ಲಿಂದ (ದೇಹದ ಬಲ ಮಗ್ಗುಲಿನಿಂದ ಏಳಬೇಕು!), ರಾತ್ರಿ ಮಲಗುವವರೆಗೂ (ಇಂತಹ ದಿಕ್ಕಿಗೆ ತಲೆ ಹಾಕಿ ಮಲಗಬಾರದು) ಸಂಪ್ರದಾಯಗಳು, ಕಟ್ಟುಪಾಡುಗಳು ಮುಗ್ಧರನ್ನು ತಮಗರಿವಿಲ್ಲದಂತೆ ಕಟ್ಟಿಹಾಕಿವೆ.
ಮೇಲಾಗಿ, ಅನಾಥ ಹೆಣವನ್ನೂ ಸಂಪ್ರದಾಯವಾಗಿ ಶುಚಿಗೊಳಿಸಿ, ಗೌರವಪೂರ್ವಕ ಅಂತ್ಯ ಕ್ರಿಯಾದಿಗಳ ಸಂಪ್ರದಾಯದ ಉತ್ಕಷ್ಟತೆಯನ್ನು ಪಾಲಿಸಿಕೊಂಡು ಬರುತ್ತೇವೆ. ಆದರೆ, ದೇವರ ಸನ್ನಿಧಿಯಲ್ಲಿ ಎಂಜಲೆಲೆಯ ಮೇಲೆ ಹೊರಳಾಡಿ ದೇಹವನ್ನೆಲ್ಲಾ ನಂಬಿಕೆಯ ಹೆಸರಿನಲ್ಲಿ ಮೈಲಿಗೆ ಮಾಡಿಕೊಳ್ಳತ್ತೇವೆ. ಹೆಣಕ್ಕಿಂತಲೂ ಕಡೆಯಾಗುತ್ತೇವೆ. ಜನರನ್ನು ದೇವರ ಹೆಸರಿನಲ್ಲಿ, ನಂಬಿಕೆಯ ಹೆಸರಿನಲ್ಲಿ ಸುಲಭವಾಗಿ ಶೋಷಿಸುವ ವರ್ಗವೇ ಈ ನಾಡಿನಲ್ಲಿದೆ. ನಾವಿರುವುದು ಯಾವ ಕಾಲದಲ್ಲಿ?
ಮನುವಿನ ಸಿದ್ಧಾಂತ - ಮನದಿಂದ ಹೊರಹಾಕದಿದ್ದರೆ, ಮನುಜನಾಗಿ ಏಳುವುದು ಕಷ್ಟ ಸಾಧ್ಯ. ಕಪಟ ಪುರೋಹಿತರು, ಕಾವಿಧಾರಿಗಳು ಮತ್ತು ರಾಜಕೀಯ ಫುಡಾರಿಗಳ ಮುಂದೆ ಕೈ ಮುಗಿದು ನಿಲ್ಲುವ ಮತ್ತು ಕಾಲಿಗೆರಗುವ ಜನ ಸಾಮಾನ್ಯ ಮುಗ್ಧರಲ್ಲಿ ಸ್ವಾಭಿಮಾನದ ಅರಿವು ಮೂಡಿಸದೆ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಹಾಗಿಲ್ಲದಿದ್ದರೆ ಮಾಡುವ ಹೋರಾಟಗಳು ಹೂಡುವ ಚಳುವಳಿಗಳು ಗರ್ಭಪಾತಕ್ಕೀಡಾಗಬಹುದು.
- ಹೃದಯ
Hrudhaya Mangalore.

ಕಾಮೆಂಟ್‌ಗಳಿಲ್ಲ: