ಇಂದಿನ ಪ್ಯಾಷನ್ ಎನ್ನುವ ಆಧುನಿಕ ರಂಗುರಂಗಿನ ಯುಗದಲ್ಲಿ - ಯುವಕ ಯುವತಿಯರ ಮನ ಗೆದ್ದ 'TATTOO' ಅನ್ನೋ ಅದ್ಭುತ 'ಶೃಂಗಾರ ಕಲೆ' ಮೂಲತಃ ಆದಿವಾಸಿಗಳದ್ದು.
ಆದಿವಾಸಿಗಳು ಶೃಂಗಾರ ಪ್ರೀಯರು. ಪ್ರತೀ ಶೃಂಗಾರವೂ ಆದಿವಾಸಿಗಳ ಸಾಂಸ್ಕೃತಿಕ ಲೋಕದ ಪರಿಯನ್ನು, ಪರಿಕಲ್ಪನೆಯನ್ನು ಈಗಲೂ ಸಾದರಪಡಿಸುತ್ತದೆ. ಆದಿವಾಸಿಗಳು ಆದಿ ಕಾಲದಿಂದಲೂ ತಮ್ಮ ಇಡೀ ದೇಹವನ್ನು ಎಲೆಗಳಿಂದ, ಪ್ರಾಣಿಗಳ ಚರ್ಮಗಳಿಂದ, ಹಕ್ಕಿಗಳ ಗರಿಗಳಿಂದ ಶೃಂಗರಿಸಿಕೊಳ್ಳುತ್ತಿದ್ದರು. ನೈಸರ್ಗಿಕವಾಗಿ ದೊರಕುತ್ತಿದ್ದ ಬಣ್ಣಗಳನ್ನು ಮೈಗೆಲ್ಲಾ ಹಚ್ಚಿ ಸಂತೋಷಪಡುತ್ತಿದ್ದರು. ಮಹಿಳೆಯರು ಕುತ್ತಿಗೆಯಿಂದ ಹೊಟ್ಟೆಯ ಭಾಗದವರೆಗೂ ಎದೆಯನ್ನು ಸಂಪೂರ್ಣ ಮುಚ್ಚಿದಂತೆ ಬಣ್ಣ ಬಣ್ಣದ ಮಣಿಸರಗಳ ಮಾಲೆ, ವಿವಿಧ ಆಕಾರದ ಕಲ್ಲಿನ ಸರಗಳಿಂದ ಮುಚ್ಚಿಕೊಳ್ಳುತ್ತಿದ್ದರು. ತಲೆಗೆ ಬಣ್ಣದ ಗರಿಗಳು, ಮುಳ್ಳುಹಂದಿಯ ಮುಳ್ಳುಗಳನ್ನು ಸಿಕ್ಕಿಸಿಕೊಳ್ಳುತ್ತಿದ್ದರು. ಕೈ ತುಂಬಾ ಮಣ್ಣಿನ ಬಲೆಗಳು, ಬಿದಿರಿನ ಬಲೆಗಳು, ಬಿಳಲಿನ ಬಲೆಗಳನ್ನು ಧರಿಸಿ ಸಂಭ್ರಮಿಸುತ್ತಿದ್ದರು. ಪುರುಷರು ಪ್ರಾಣಿಗಳ ಎಲುಬುಗಳ ಹಾರ, ಪ್ರಾಣಿಗಳ ಹಲ್ಲುಗಳನ್ನು, ಉಗುರುಗಳನ್ನು ಹಾರವಾಗಿ ಧರಿಸುತ್ತಿದ್ದರು. ತಲೆಗೆ ಕೊಂಬುಗಳನ್ನು ಕಟ್ಟಿಕೊಳ್ಳುತ್ತಿದ್ದರು. ಜೊತೆಗೆ ಅದ್ಭುತ ಎನ್ನುವಂತೆ ಮುಖ ಕೈ ಕಾಲಿಗೆ ಹಸಿರು ಅಚ್ಚೆಗಳು!! ಅದುವೇ Tattoo..
ಇಂದಿನ ಯುವ ಜನತೆಯ ಪ್ರತೀ ಶೃಂಗಾರ ಪರಿಕರಗಳು ಕೂಡಾ ಹಿಂದೊಮ್ಮೆ ಆದಿವಾಸಿಗಳ ಬದುಕಿನ ಅಂಗವಾಗಿತ್ತು. ಸಾಂಸ್ಕೃತಿಕ ಪ್ರತೀಕವಾಗಿತ್ತು. ಹಸಿರು ಅಚ್ಚೆ ಅಥವಾ Tattoo ಆದಿವಾಸಿಗಳ ಪ್ರೀತಿ, ಪ್ರೇಮ, ಸುಖ, ದುಃಖ, ಭದ್ರತೆಯನ್ನು ಸಾರುತ್ತಿತ್ತು. ಅಷ್ಟೇ ಅಲ್ಲದೆ ಶಿಸ್ತುಕ್ರಮದ ದ್ಯೋತಕವೂ ಆಗಿತ್ತು! ಪ್ರಾಣಿ ಪಕ್ಷಿಗಳ ಆಕಾರಗಳು ಮತ್ತು ಕೆಲವೊಂದು ರೇಖೆಗಳ ಆಕೃತಿಯ ಅಚ್ಚೆ ಹಾಕಲಾಗುತ್ತಿತ್ತು. ಒಬ್ಬ ಆದಿವಾಸಿ ಬಂಧು ತನ್ನ ಆಚಾರ ವಿಚಾರಗಳಿಗೆ ತಪ್ಪಿ ನಡೆದರೆ ಶಿಸ್ತು ಕ್ರಮವಾಗಿ ಆತನ ಮೈಮೇಲೆ ವಿಕಾರ ರೀತಿಯ ಅಚ್ಚೆ ಹಾಕಲಾಗುತ್ತಿತ್ತು. ಆ ಗುರುತಿನ ಮೂಲಕವೇ ಇತರ ಆದಿವಾಸಿ ಬಂಧುಗಳು ಆತನ ನಡತೆಯನ್ನು ಗುರುತಿಸುವಂತಾಗುತ್ತಿತ್ತು! ದೇಶದ ಬಹುತೇಕ ಬುಡಕಟ್ಟು ಪಂಗಡಗಳು ಅಚ್ಚೆ ಹಾಕುವುದರಲ್ಲಿ ನೈಪುಣ್ಯತೆ ಪಡೆದಿದ್ದಾರೆ. ಕರ್ನಾಟಕದಲ್ಲಿ ಕೊರಚ (ಕೊರಮ) ಬುಡಕಟ್ಟು ಪಂಗಡದವರು ಮಾತ್ರ ಅಚ್ಚೆ ಹಾಕುವುದನ್ನು ತಮ್ಮ ವೃತ್ತಿಯನ್ನಾಗಿ ಪಾಲಿಸುತ್ತಿದ್ದಾರೆ.
ಕಾಲ ಬದಲಾಗಿದೆ. ಆದಿವಾಸಿಗಳ ಬದುಕಿನ ಕಲೆ ಇಂದಿನ ಯುವಜನತೆಯ ಪ್ಯಾಷನ್ ಎಂಬ 'ಕಣ್ಮನಿ'ಯಾಗಿದೆ! ಅಚ್ಚೆಯ ಹಿಂದಿನ ಮಹತ್ವ ಆದಿವಾಸಿಗಳ ಹೊರತಾದ ಯುವಜನತೆಗೆ ಗೊತ್ತಿಲ್ಲ. ಅವರಿಗೆ ಅದು ಪ್ಯಾಷನ್. ಆದಿವಾಸಿಗಳಿಗೆ ಬದುಕು.
- ಹೃದಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ