- ಡಾ. ಜಯಪ್ರಕಾಶ್ ಶೆಟ್ಟಿ ಹೆಚ್
courtesy: http://www.vartamaana.com/
ಇತ್ತೀಚೆಗೆ ಯಾವ ಖಾಸಗಿ ಚಾನಲ್ ನೋಡಿದರೂ ಬೆನ್ನಿಕ್ಕಿ ನಡೆದುಹೋದ ಗಾಂಧೀ ಹೆಜ್ಜೆ, ಬೆಂಗಾಲಿಯ ಒಂದೆರಡು ಭಾಷಿಕ ತುಣುಕುಗಳ ಗೊಣಗಾಟ, ಕೊನೆಗೊಂದಿಷ್ಟು ಕಸಹೊಡೆದು ಕೈಗಾಡಿಯಲ್ಲಿ ತುಂಬಿಸಿ ಕಳುಹಿಸುವ ಶುದ್ಧೀಕರಣದ ದೃಶ್ಯವುಳ್ಳ ಸರ್ಕಾರಿ ಜಾಹೀರಾತು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ! ಪತ್ರಿಕೆಗಳಂತೂ ದಿನಂಪ್ರತಿ ಸ್ವಚ್ಛತೆಯ ಕಾರ್ಯಕ್ರಮಗಳನ್ನು ಬಿತ್ತರಿಸಿ ಪುಣ್ಯಕಟ್ಟಿಕೊಳ್ಳುತ್ತಿವೆ. ಕಸವೊಂದೇ ದೇಶದ ಸಮಸ್ಯೆ ಎನ್ನುವಂತೆ ಸೈಬರ್ ಸುಕುಮಾರ ಸುಕುಮಾರಿಯರು ಹೊಸ ಪೊರಕೆ ಹಿಡಿದು ’ನಗರದ ಬೀದಿ’ ಗುಡಿಸಿ ಕಸ ಎತ್ತಿದ ಸಾಕ್ಷಿಗಳನ್ನು ಮಾಧ್ಯಮಗಳಿಗೆ ಅಪ್ಲೋಡ್ಮಾಡಿ ದೇಶಸೇವೆಯ ಜಾಹೀರಾತು ಪಡೆದುಕೊಳ್ಳುತ್ತಿದ್ದಾರೆ. ರಾಜಕಾರಣಿಗಳೋ, ತಾರೆಯರೋ, ಸೆಲೆಬ್ರಿಟಿಗಳೋ ಆದ ಅಸಾಮಾನ್ಯರು ಕೋಟು ತೊಟ್ಟೇ ಕಸ ಗುಡಿಸುತ್ತಿದ್ದಾರೆ! ಕೈಗವಚ ತೊಟ್ಟು, ಬಟ್ಟೆಯ ಇಸ್ತ್ರಿಕಳೆಯದ ಎಚ್ಚರದಲ್ಲಿ ಉದ್ದನೆ ಹಿಡಿಕೆಯ ಪೊರಕೆ ಹಿಡಿದು ರಸ್ತೆಬದಿಗೆ ನೆಟ್ಟಗೆನಿಂತು ಕಸಹೊಡೆಯುವ ಈ ಅಭಿನಯವಂತೂ ಮಾಧ್ಯಮ ಬಕಾಸುರರ ಹಸಿವಿಂಗಿಸುತ್ತಿದೆ. ಕೆಲವೊಂದೆಡೆ ಕಸವಿಲ್ಲದೆ ಪೇಚಿಗೆಬಿದ್ದವರು ಕಸವನ್ನೇ ಆಮದು ಮಾಡಿಕೊಂಡು, ಗುಡಿಸಿ ಮುಗಿಸಿದ್ದನ್ನೂ ಕೆಲವು ಕಳ್ಳಗಣ್ಣುಗಳು ಸಣ್ಣಗೆ ಸುದ್ದಿಮಾಡಿವೆ. ಹೀಗೆ ಈಗ ಎಲ್ಲೆಡೆ ಕಸದ ಕಾರುಬಾರು. ‘ಕೆರೆಯ ನೀರನು ಕೆರೆಗೆ ಚಲ್ಲಿ ವರವ ಪಡೆದವರಂತೆ ಕಾಣಿರೋ’ ಎಂಬಂತೆ ದೇಶದ ಕಸವನ್ನು ದೇಶದೊಳಕ್ಕೇ ಸುರಿದ ದೇಶಸೇವೆಯದೇ ಸುದ್ದಿ. ಈ ಜಾದೂ ನೋಡಿ ಸಹಸ್ರಮಾನಗಳಿಂದ ಕಸಹೊಡೆಯುತ್ತಿರುವ ತಾಯಂದಿರು, ಕುತ್ತಿಗೆಗೆ ಕಟ್ಟಿಕೊಂಡ ಕರಟದಲ್ಲೇ ತಮ್ಮ ಎಂಜಲು ಬಚ್ಚಿಟ್ಟುಕೊಂಡು ತಮ್ಮನ್ನು ನಿಷೇಧಿಸಿದ ಬೀದಿಯನ್ನೇ ಗುಡಿಸಿದ ಬಹಿಷ್ಕೃತರು, ತಲೆಹೆಗಲುಗಳಲ್ಲಿ ಹುಟ್ಟಿದವರ ’ತಳದ ಕೊಳಕ’ನ್ನು ತಲೆಮೇಲೆ ಹೊತ್ತು ಸಾಗಿಸಿದ ದಲಿತರು, ತಿಪ್ಪೆಗುಂಡಿಯಲ್ಲಿ ಕೊಳೆತ ಕಸವನ್ನೇ ನೆಲದ ಹಸಿವಿಂಗಿಸುವ ಗೊಬ್ಬರವೆಂದು ಸಂಭ್ರಮಿಸಿ ಹೊತ್ತು ಬದುಕಿದ ನೆಲದಮಕ್ಕಳು ಬೆರಗಾಗಿದ್ದಾರೆ! ಶತಮಾನಗಳ ಇತಿಹಾಸದಲ್ಲಿ ಸಮೂಹದ ಎದೆಯ ದಾರಿದ್ರ್ಯದಿಂದ ಅವರ ಮೈಮೇಲಿನ ಬಟ್ಟೆ, ಕೈಯಲ್ಲಿಯ ಪೊರಕೆಗಳು ಹೊಸಮೆರುಗು ಹೊಸಹೆಸರು ಕಂಡಿಲ್ಲ. ಅವರೆತ್ತಿದ ಕಸದಮೇಲೆ ದೇಶಸೇವೆಯ ಫಲಕ ಜೋತಾಡಿಲ್ಲ. ಆದರೆ ಈಗ ಶಿಕ್ಷೆಯನ್ನೇ ಕರ್ತವ್ಯವೆಂದು ಬದುಕಿದ ಈ ಕಸದ ಕರುಳುಬಳ್ಳಿಯ ಒಡನಾಡಿಗಳನ್ನೇ ಕಸದ ಜಾದೂ ಕಿಚಾಯಿಸುತ್ತಿದೆ. ಪಾಪದ ಜೋಳಿಗೆಯಲ್ಲಿ ಪುಣ್ಯದ ಪುತ್ಥಳಿಗಳ ಈ ಹೊಸಕುಣಿದಾಟ ಅವರ ಹಣೆಯೊಳಗಿನ ಹಣೆಬರಹವನ್ನೇ ತಡಕಾಡಿಕೊಳ್ಳುವಂತೆ ಮಾಡಿದೆ.
ಈ ದೇಶದಲ್ಲಿ ಯಾವಾಗಲೂ ಹೀಗೆಯೇ. ಸಾಮಾನ್ಯರನ್ನು ಬದಿಗಿರಿಸಿ ಸಾಮಾನ್ಯವು ಸುದ್ದಿಯಾಗುತ್ತದೆ. ಯಾಕೆಂದರೆ ಪಶ್ಚಿಮದಲ್ಲಿ ಆಡಮ್ ಸ್ಮಿತ್ನ ದುಡಿಮೆಯ ವಿಂಗಡಣೆಸೂತ್ರಕ್ಕೆ ಮೊದಲೇ ಇಲ್ಲಿ ಅಚ್ಚುಕಟ್ಟಾದ ಜಾತಿಸೂತ್ರ ಜಾರಿಗೊಂಡಿತ್ತು. ಸೊಂಟಕ್ಕೆ ಉಡುದಾರ ಕಟ್ಟುವ ಮೊದಲೇ ಮೆದುಳಿಗೆ ಮೆತ್ತುವ ಈ ಜಾತಿಗುರುತು, ಊರಬೀದಿಯ ಕಸ ಎತ್ತುವುದರಿಂದ ಹಿಡಿದು ಕಟ್ಟಿಕೊಂಡ ಬಚ್ಚಲುಗುಂಡಿಯ ಸ್ವಚ್ಚಕ್ಕೆ ಯಾರನ್ನು ಹುಡುಕುವುದೆಂಬ ಪ್ರಶ್ನೆಯನ್ನೇ ನಾಪತ್ತೆಗೊಳಿಸಿತ್ತು. ಹೀಗೆ ಹೊರಬೇಕಾದವರು ಹೊತ್ತು, ಹೊತ್ತವರ ನೆತ್ತಿಮೇಲೆ ಕೂರುವವರು ಗಡದ್ದಾಗಿ ಕೂತು ನಿದ್ರಿಸುವ ನಿರುಮ್ಮಳತೆ ಈ ಧರ್ಮಸಾಮ್ರಾಜ್ಯದ ಸತ್ಯವಾಗಿತ್ತು. ವ್ಯತ್ಯಾಸವಾದರೆ ತಾನೇ ಮತ್ತೆ ಮತ್ತೆ ಬಂದು’ ಇರಬೇಕಾದುದನ್ನು ಇರುವಂತೆಯೇ ವ್ಯವಸ್ಥೆ ಮಾಡುವುದಾಗಿ ಆ ’ಆಚಾರ್ಯ’ನೂ ಹೇಳಿಹೋಗಿದ್ದ! ಇಂತಹ ಧರ್ಮಪಾಲನೆಯಿಂದ ಕಸ-ರಸಗಳೆಲ್ಲ ಸಲ್ಲಬೇಕಾದ ಜಾಗಕ್ಕೆ ಸಂದಾಯವಾಗುತ್ತಾ ಬಂದಿವೆ. ಹಾಗಾಗಿ ಇಲ್ಲಿ ಕಸತೆಗೆಯುವುದು ಸುದ್ದಿಯಲ್ಲ. ಕಸ ತೆಗೆಯುತ್ತೇವೆ ಎನ್ನುವುದೇ ಸುದ್ದಿ. ಗುಡಿಸಬಾರದವರು ಗುಡಿಸುವುದೇ ಸುದ್ದಿ. ಅದು ನಮ್ಮ ಜನಕ್ಕೆ ಸಿಕ್ಕ ತರಬೇತಿ. ಇಲ್ಲಿ ಜನ ತಮ್ಮ ಕಷ್ಟಕ್ಕೆ ತಲೆ ಕೆಡಿಸಿಕೊಂಡವರಲ್ಲ. ರಾಜರಿಗೆ, ಮೇಲ್ಜಾತಿಗೆ ಬೆವರು ಮೂಡಿದರೆ ಜನಕ್ಕೆ ಅದು ತಮ್ಮ ಚಿಂತೆಯಾಗುತ್ತದೆ. ಉದಾಹರಣೆಗೆ ’ಹರಿಶ್ಚಂದ್ರಕಾವ್ಯ’ದಲ್ಲಿ ದಿನವೂ ತಾವು ನಡೆಯುತ್ತಿರುವುದಕ್ಕೆ ಕೊರಗದ ಜನ ವಿಶ್ವಾಮಿತ್ರನಿಗೆ ಎಲ್ಲವನ್ನೂ(ಕೊನೆಗೆ ತಮ್ಮನ್ನೂ) ಧಾರೆಯೆರೆದು ’ತನ್ನ ಸತ್ಯ’ ಉಳಿಸಿಕೊಳ್ಳಲು ಹೊರಟ ಹರಿಶ್ಚಂದ್ರ ಬರಿಗಾಲಿನಿಂದ ಹೇಗೆ ನಡೆದಾನು ಎಂದು ಚಿಂತೆಗೆ ಬೀಳುತ್ತದೆ. ’ಹೂವಿನಂತಹ ಕಾಲಿರುವ ನೀನು ಬರಿಗಾಲಿನಿಂದ ಹೇಗೆ ನಡೆಯುತ್ತೀ’ ಎನ್ನುವುದು ಅವರ ಸಂಕಟವಾಗುತ್ತದೆ. ಹಾಗಾಗಿ ರಾಜಕುಮಾರರು ಜನರ ನಡುವೆ ಬಂದರೆ, ಸಿನಿಮಾ ನಟಿಗೆ ಹೆರಿಗೆಯಾದರೆ, ನಟರು ಕೈಕುಲುಕಿದರೆ, ಯಾರೋ ಮಂತ್ರಿ, ಅಧಿಕಾರಿ ಗುದ್ದಲಿ, ಪೊರಕೆಹಿಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ನಾವು ಸಂಕಟ, ಸಂತೋಷಕ್ಕೆ ಬಿದ್ದುಬಿಡುತ್ತೇವೆ! ದಿನಂಪ್ರತಿ ಪೊರಕೆ, ಗುದ್ದಲಿ ಹಿಡಿದವರನ್ನು ಮರೆತು ಬಿಡುತ್ತೇವೆ. ಪುರಾಣಕಾಲದ ನಮ್ಮೀ ಪ್ರವೃತ್ತಿಗೆ ಜನಾಡಳಿತದಲ್ಲೂ ಬಿಡುಗಡೆ ಸಿಕ್ಕಿಲ್ಲ. ಹೀಗಾಗಿ ಸೊಂಟದಿಂದ ಜಾರುವಂತಿರುವ ಜೀನ್ಸ್ಪ್ಯಾಂಟ್, ತೆಳುವಾದ ಟೀಶರ್ಟ್ ಹಾಕಿದ ಸುಶಿಕ್ಷಿತ(?) ಟೆಕ್ಕಿಗಳು ಕೈಬಾಯಿಗಳಿಗೆ ಮುಸುಕು ಹಾಕಿಕೊಂಡು ಕಪ್ಪನೆಯ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಕಸ ತುಂಬಿಸುವ ಆಟವೂ ನಮಗೆ ದೇಶೋದ್ಧಾರದ ಬ್ರೇಕಿಂಗ್ ನ್ಯೂಸ್ಗಳಾಗುತ್ತವೆ. ಆದರೆ ಮ್ಯಾನ್ ಹೋಲ್ಗಳಲ್ಲಿ ಇಳಿದು ಯಾರೋ ಮಾಡಿದ ಹೊಲಸು ಎತ್ತುವ ಕೈಗಳು ಮುನುಷ್ಯರದ್ದೇ ಅನ್ನುವುದನ್ನು ಖಾತರಿಪಡಿಸಲು ಸಂವಿಧಾನದ ಕಲಂ ಓದಬೇಕಾಗುತ್ತದೆ!?
ಮನ ಮುಟ್ಟಿಕೊಂಡು ಮಲಮುಟ್ಟಲು ಹೇಸದ ಗಾಂಧಿ
ವರ್ತಮಾನದ ಕಸದ ಅಬ್ಬರಕ್ಕೆ ’ದೇಶದ ತಂದೆ’ ಎಂದೇ ಭಾವಿತನಾದ ಗಾಂಧಿಮುದ್ರೆಯೂ ಇದೆ. ಅದಲ್ಲದೆಯೂ ಕಸ, ಕೊಳಕು ಅಂದಾಗ ದೇವಾಲಯಕ್ಕಿಂತ ಶೌಚಾಲಯಕ್ಕೆ ಆದ್ಯತೆ ಎಂದ ಆ ಅರೆಬೆತ್ತಲೆ ಫಕೀರ ನೆನಪಾಗಿಯೇ ತೀರುತ್ತಾನೆ. ಆತನಾದರೋ ಅನಾದಿಯ ಯಾನದಲ್ಲಿ ನಮ್ಮ ನಡುವೆ ಕಾಣಿಸಿಕೊಂಡು ಇಲ್ಲವಾದವನು. ಇಲ್ಲ. ಆ ತಾತನನ್ನು ನಾವೇ ನಿವಾರಿಸಿಕೊಂಡೆವೆನ್ನಿ. ಸಾವಿಗೆ ಹೆದರದ ಈ ಫಕೀರ ಹಾಗೀಗೆಲ್ಲಾ ಸಾಯುವ ಅಸಾಮಿಯಲ್ಲ ಎಂಬುದು ಪುಕ್ಕಲು ಹಿಂಸಾವೀರರಾದ ನಮಗೆ ತಿಳಿದಿತ್ತು. ಹಾಗಾಗಿಯೇ ಆ ಬಡಕಲು ಜೀವದ ಗುಂಡಿಗೆಗೆ ಕಾಡುಪ್ರಾಣಿಗಳಿಗೆ ಗುರಿಯಿಡುವ ತುಪಾಕಿಯ ಸಿಡಿಗುಂಡನ್ನೇ ನುಗ್ಗಿಸುವ ವೀರನಿರ್ಧಾರ ಕೈಗೊಂಡು ಮುಗಿಸಿದ್ದು ಇತಿಹಾಸ. ಆದರೂ ನಮಗೆ ತಾತನನ್ನು ನೇಪಥ್ಯಕ್ಕೆ ಸರಿಸಲಾಗಿಲ್ಲ. ತಾತ ದೇಶದಾಚೆಗೂ ಬೆಳೆದು ನಿಂತುಬಿಟ್ಟಿದ್ದಾನೆ! ಹೋಗಲಿ ತಾತನ ಸಾವಿನ ಮಾತು ಯಾಕೆ? ಬದುಕಿನ ಬಗೆಗೆ ಮಾತಾಡೋಣ. ತಾತನೂ ಈ ಸ್ವಚ್ಚತೆಯ ಬಗೆಗೆ ಬಾರೀ ತಲೆ ಕೆಡಿಸಿಕೊಂಡಾತ. ಅಜ್ಜ ಯಾವುದನ್ನೇ ಆಗಲಿ ಹಚ್ಚಿಕೊಂಡ ಅಂದರೆ ಅದನ್ನು ಯಾವುದೇ ಪ್ರಚಾರವಿಲ್ಲದೆ ತಾನೇ ಮಾಡಲು ಇಳಿದು ಬಿಡುತ್ತಿದ್ದ. ಅಜ್ಜ ಅಲ್ಲವೇ? ಅವನ ವಯೋಮಾನ, ಪ್ರೀತಿ, ಕಕ್ಕುಲತೆಗಳೇ ಹಾಗೆ. ಕಕ್ಕುಲತೆಯೂ ಆತನಿಗೊಂದು ಹುಡುಕಾಟವೇ. ಯಾಕೆಂದರೆ ಆತನಿಗೆ ಬದುಕೇ ಪ್ರಯೋಗ. ಅಷ್ಟೇ ಯಾಕೆ ಕೊನೆಗೆ ಸಾವೂ ಕೂಡ ಆತನಿಗೂ, ದೇಶಕ್ಕೂ ಒಂದು ಪ್ರಯೋಗವೇ ಆಯಿತೆನ್ನಿ. ಈ ಅಜ್ಜನ ಬರಹಗಳನ್ನು ಕಲೆಹಾಕಿ ’ಸೆಲೆಕ್ಟೆಡ್ ರೈಟಿಂಗ್ಸ್ ಆಫ್ ಮಹಾತ್ಮಾಗಾಂಧಿ’ ಎನ್ನುವ ಸಂಕಲನವೊಂದನ್ನು ಹೊರತಂದ ರೋನಾಲ್ಡ್ ಡಂಕನ್, ಅಜ್ಜನ ಸಮಗ್ರವ್ಯಕ್ತಿತ್ವದೊಳಗೇ ಬೆರೆತುಹೋದ ಸ್ಚಚ್ಚತೆಯ ಕಾಳಜಿಗೊಂದು ಸಾಕ್ಷಿ ಒದಗಿಸುತ್ತಾನೆ.
ಡಂಕನ್ ಹೇಳಿರುವುದು ಗಾಂಧಿಯೊಂದಿಗೆ ಭಾಗವಹಿಸಿದ ಹಳ್ಳಿಯೊಂದರ ಸ್ವಚ್ಛತೆಯ ಅಭಿಯಾನದ ಕಥೆ. ಡಂಕನ್ಗೆ ಭಾರತದ ಮತ್ತೊಂದು ರೂಪವನ್ನೇ ಗಾಂಧಿ ತೋರಿದ್ದು ಈ ಹಳ್ಳಿಯಲ್ಲೇ. ಅದಾದರೋ ದಟ್ಟ ದಾರಿದ್ರ್ಯದ ಕುಗ್ರಾಮ. ಗಾಂಧೀಜಿ ಹೇಳುವಂತೆ ಅದು ತಾಜ್ಮಹಲಿನ ಸೌಂದರ್ಯವನ್ನರಸಿ ಬರುವವರು ಎಂದೂ ನೋಡಬಯಸದ ಭಾರತ. ಬಡ್ಡಿಯ ದಂದೆಕೋರರ ಕೈಗೆ ಸಿಕ್ಕಿ ಮುಂದಿನ ಮೂರು ಪೀಳಿಗೆ ತನಕ ಒತ್ತೆಯಾಳುಗಳಾಗಿರುವವರ ಭಾರತ. ಬಿತ್ತಿ ಬೆಳೆದುದೆಲ್ಲವೂ ಸಾಲನೀಡುವವರ, ತೆರಿಗೆ ವಸೂಲಿಕಾರರ ಕೈವಶವಾಗುವುದನ್ನು ಕಾಣುತ್ತಾ ಬದುಕುತ್ತಿರುವ ಮಿಲಿಯಾಂತರ ಜನರ ಪ್ರತಿನಿಧಿಯಾದ ಭಾರತ. ಹೀಗೆ ಕರುಣೆತುಂಬಿದ ತಾಯ್ತನದಲ್ಲಿ ಆ ಗ್ರಾಮಬದುಕಿನ ಧಾರುಣತೆಯನ್ನು ಗಾಂಧಿ ಪರಿಚಯಿಸುತ್ತಿರುವ ಹೊತ್ತಲ್ಲಿಯೇ ನಡೆದ ಘಟನೆಯೊಂದು ಡಂಕನ್ ಪುಸ್ತಕದಲ್ಲಿದೆ. ಅಲ್ಲಿರುವ ಮಾಹಿತಿಯಂತೆ ಆ ಜೋಪಡಿಗಳಿಗೆಲ್ಲಾ ಇದ್ದುದು ಒಂದೇ ಬಾವಿ. ಅಂದು ಈ ಬಾವಿ ಪಕ್ಕದಲ್ಲೇ ನಾಲ್ಕೈದುಮಂದಿ ಕುಕ್ಕರುಗಾಲಲ್ಲಿ ಕೂತು ಬೆಳಗಿನ ದೇಹಬಾಧೆ ತೀರಿಸಿಕೊಳ್ಳುತ್ತಿದ್ದರು. ಅದಕ್ಕಿಂತ ಮುಂಚಿತವಾಗಿ ಹಾಗೆ ಮಾಡಿಟ್ಟುಹೋದವರ ಸಾಕ್ಷಿಗಳೂ ಅಲ್ಲಿದ್ದುವು. ಈ ದೃಶ್ಯದ ಎದುರಿಗೆ ನಿಂತ ಗಾಂಧಿ ಡಂಕನ್ಗೆ ಮಾಮೂಲಿ ಗಾಂಧೀ ಎನಿಸಲಿಲ್ಲ. ಅದನ್ನು ಡಂಕನ್ ಮಾತಿನಲ್ಲಿಯೇ ಹೇಳುವುದಾರೆ, “ಗಾಂಧೀಜಿ ಮಾತಿಲ್ಲದೆ ನಿಂತಿದ್ದರು. ಅವರ ಮುಖದಲ್ಲಿ ಅತೀವ ನಿರಾಸೆ, ಅನುಕಂಪ, ಯಾತನೆ. ಅವರು ಆ ಜನರಿಗೆ ಆರೋಗ್ಯಶಾಸ್ತ್ರದ ಬಗ್ಗೆ, ನೈರ್ಮಲ್ಯದ ಬಗ್ಗೆ ಲೆಕ್ಚರ್ ಕೊಡಲಿಲ್ಲ. ಈ ಜನರ ಹೀನಸ್ಥಿತಿಗೆ ತಾವೊಬ್ಬರೇ ಕಾರಣರೇನೋ ಎನ್ನುವಂತೆ ನಿಂತಿದ್ದವರು ಕೂಡಲೇ ಕೈಹಾಕಿದ್ದು ಇಂದು ನಾವು ನೀವು ಅಸಹ್ಯಪಡುವಂಥ ಕೆಲಸಕ್ಕೆ. ಅವರು ಆ ಹಳ್ಳಿಗರು ವಿಸರ್ಜಿಸಿದ್ದ ಮಲವನ್ನು ತಮ್ಮ ಕೈಯಿಂದಲೇ ತುಸು ದೂರ ಸರಿಸಿ ಮಣ್ಣಿನಿಂದ ಮುಚ್ಚಿದರು” (ಎಸ್. ದಿವಾಕರ, ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ದಿನಾಂಕ:೨೬/೧/೨೦೧೪.ಪು.೨). ಹೀಗೆ ಇದ್ದಕ್ಕಿದ್ದಂತೆ ಗಾಂಧಿ ಕಾರ್ಯಾಚರಣೆಗೆ ಇಳಿದಿದ್ದರು! ಮಹಾತ್ಮರೇ ತೊಡಗಿಕೊಂಡದ್ದನ್ನು ನೋಡಿದ ಡಂಕನ್ ತಾನು ತೊಡಗಿಕೊಂಡ. ಜೊತೆಗಿದ್ದ ಮಿಕ್ಕವರೂ ಸೇರಿಕೊಂಡರು. ಮೂರು ದಿನಗಳ ತನಕ ದೂರದಿಂದಲೇ ನೋಡುತ್ತಿದ್ದ ಹಳ್ಳಿಗರೂ ಸೇರಿಕೊಳ್ಳುವ ಮೂಲಕ ನಾಲ್ಕನೆಯ ದಿನಕ್ಕೆ ಇಡಿಯ ಊರೇ ಭಾಗವಹಿಸುವಂತಾಯ್ತು. ಇದನ್ನು ಕುರಿತು, “ಗಾಂಧೀಜಿಯ ನಿಸ್ವಾರ್ಥ ಸೇವೆ ಒಂದು ಶತಮಾನ ಕಾಲದಲ್ಲಿ ಒತ್ತಾಯವಾಗಲೀ, ಬೋಧನೆಯಾಗಲೀ ಸಾಧಿಸಲಾಗದ್ದನ್ನು ಒಂದು ಕ್ಷಣದಲ್ಲಿ ಸಾಧಿಸಿಬಿಟ್ಟಿತ್ತು” (ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ದಿನಾಂಕ: ೨೬-೧-೧೪, ಪು.೨) ಎಂದು ಬರೆಯುತ್ತಾನೆ ಡಂಕನ್. ಯಾರನ್ನೂ ಕರೆಯದೆ ಯಾವ ಘೋಷಣೆಯನ್ನೂ ಮಾಡದೆ ಗಾಂಧೀ ಪಾಪಕ್ಕೆ ಪ್ರಾಯಶ್ಚಿತ್ತವನ್ನಷ್ಟೇ ಮಾಡಿಕೊಂಡಿದ್ದರು. ಅಲ್ಲಿ ಅಧಿಕಾರವಾಣಿ ಇರಲಿಲ್ಲ. ತಾಯ್ತನದ ಕೊರಗಿತ್ತು. ಗ್ರಾಮ ಬದುಕನ್ನು ಸರಿಪಡಿಸುವ ಆ ಕಾಯಕದಲ್ಲಿ ಭಾರತವನ್ನು ಕುರಿತ ಗ್ರಹಿಕೆಯ ಸ್ಪಷ್ಟತೆಯೂ ಇತ್ತು. ಅದು ಪ್ರವಾಸಿಗಳನ್ನು, ವ್ಯಾಪಾರಿ ದರೋಡೆಕೋರರನ್ನು ಆಕರ್ಷಿಸುವ ವರಸೆಯಾಗಿರಲಿಲ್ಲ. ಕಸ ಅಲ್ಲಿ ಜಾಹೀರಾತಿನ ಸರಕೂ ಅಲ್ಲ. ಅಲ್ಲಿ ಮಡಿಭಾವದ ಜೀವವಿರೋಧಿತನವನ್ನು ದಾಟಿ ಪಾಪದ ಹೊಣೆಹೊತ್ತವನ ಒಳಸಂಕಟವಷ್ಟೇ ಇತ್ತು.
ಗೋರಖ ತಿಪ್ಪೆಸ್ವಾಮಿಯರೂ, ಕತ್ತಲೆಯಲ್ಲಿ ಕರುಳು ತೊಳೆದ ಕನಕನೂ
ಕಸ, ತಿಪ್ಪೆ, ಹೊಲಸುಗಳ ನಿರೂಪಣೆಗೆ ಬೇರೆ ಮುಖಗಳೂ ಇವೆ. ಅವು ಕೇವಲ ಶಬ್ದಗಳಲ್ಲ. ಅಲ್ಲೊಂದು ಮಡಿವಾದಿ ತಾತ್ವಿಕತೆಯ ಒಡನಾಟ ಮತ್ತು ಜಗಳ ಇದೆ. ಎಲ್ಲಿ ಕಸ ಅಶುದ್ಧವೋ ಅಲ್ಲಿ ಕಸದ ಜೊತೆಗಿರುವ ಬೆವರಿನ ಜಗತ್ತು ಅಶುದ್ಧವೆನಿಸಿಕೊಳ್ಳುತ್ತದೆ. ಶುಚಿಯಾದ ಪರ್ಯಾಯವು ಶ್ರೇಷ್ಠರ ಹಕ್ಕಾಗುತ್ತದೆ. ಹೀಗೆ ಮಡಿಮೈಲಿಗೆಯ ಅತಿರೇಕದಲ್ಲಿ ಮಾಲಿನ್ಯದ ಕಣ್ಣೋಟಕ್ಕೆ ಗುರಿಯಾಗುವ ದೊಡ್ಡ ಸಮೂವು ಹೊರಗಿಡುವ ರಾಜಕಾರಣದಲ್ಲಿ ಬಯಲಿಗೆ ತಳ್ಳಲ್ಪಡುತ್ತದೆ. ಆದರೆ ಜನ ಹಾಗೂ ಜನರೇ ಕಟ್ಟಿಕೊಂಡ ನಡೆಕಾರ ಪರಂಪರೆಗಳು ಮಡಿವಾದದ ಅಪವಿತ್ರ ಸಂಕೇತವನ್ನು ಪವಿತ್ರೀಕರಿಸುವ ಮೂಲಕವೇ ಭಗ್ನಗೊಳಿಸಿವೆ. ರಾಜಪ್ರಭುತ್ವ ಮತ್ತು ಜಾತಿಪ್ರಭುತ್ವಗಳ ತಂತ್ರಗಳನ್ನು ಧಿಕ್ಕರಿಸಿವೆ. ಆ ಧಿಕ್ಕಾರದ ಭಾಗವಾಗಿಯೇ ಅಲ್ಲಿ ಕಸ, ತಿಪ್ಪೆಗುಂಡಿಗಳು ತ್ಯಾಜ್ಯವಾಗದೆ ಸೃಜನಶೀಲ ನೆಲೆಯೆನಿಸಿವೆ. ರೋಗಿಷ್ಟಮಡಿಗೆ ಎದುರಾಗಿ ಕಟ್ಟಿಕೊಂಡ ಸಾಂಸ್ಕೃತಿಕ ಪ್ರತಿರೋಧದ ಭಾಗವಾಗಿಯೇ ಈ ಜನಪಂಥಗಳ ಸಾಂಸ್ಕೃತಿಕನಾಯಕರುಗಳ ಹುಟ್ಟು, ಹೆಸರು ಮತ್ತು ಬದುಕುಗಳು ತಿಪ್ಪೆಯೊಂದಿಗೆ ಬೆಸೆದುಕೊಂಡಿವೆ. ಉದಾಹರಣೆಗೆ ಜನಸಮೂಹದ ಸಾಂಸ್ಕೃತಿಕನಾಯಕ ನಾಯಕನಹಟ್ಟಿಯ ತಿಪ್ಪೆಸ್ವಾಮಿಯ ಹೆಸರಲ್ಲೇ ತಿಪ್ಪೆ ಇದ್ದರೆ, ಗೋರಖನಾಥನ ಹುಟ್ಟೇ ಗೊಬ್ಬರದ ಗುಂಡಿಯಲ್ಲಂತೆ. ಇನ್ನು ಮಂಟೇದಲ್ಲಮನಲ್ಲಿ ’ಲಿಂಗ’ವೇ ಸಾವಿರವರ್ಷ ಚರ್ಮ ಹದಮಾಡಿದ ತೊಪ್ಪೆಗುಂಡಿಗೆ ಬಿದ್ದು ಪವಿತ್ರವಾಗುತ್ತದೆ! ತಿಪ್ಪೆ ತೊಪ್ಪೆಗಳು ಅಶುದ್ಧವೆಂಬ ಭಾವನೆಯೇ ಇರದ ನಡೆಕಾರ ಪರಂಪರೆಯ ದೊಡ್ಡಿವೆಂಕಟಗಿರಿಯಂತೂ ಯಾವುದಾದರೂ ತಿಪ್ಪೆಗುಂಡಿಯಲ್ಲೇ ಹಾಯಾಗಿ ನಿದ್ರಿಸುತ್ತಿದ್ದನಂತೆ. ಹೀಗೆ ಅವರು ನೆಲೆಸಿದ, ಅವರ ಲಿಂಗಗಳು ಮಿಂದೆದ್ದ ಈ ತಿಪ್ಪೆ-ತೊಪ್ಪೆಗಳು ನೆಲದ ಪಾಲಿಗೆ ಬಾರವಾಗದ ಗೊಬ್ಬರವೂ ಹೌದು. ಹಾಗಾಗಿಯೇ ಜನಪದ ಮನಸ್ಸು “ಕಸವು ಹೊಡೆದಾ ಕೈ ಕಸ್ತೂರಿ ನಾತವೂ ಬಸವಣ್ಣ ನಿನ್ನ ಸೆಗಣಿಯ ಬಳಿದ ಕೈ ಎಸಳ ಯಾಲಕ್ಕೀ ಗೊನಿನಾತ” ಎಂದೇ ಅದನ್ನು ವಾಸನೆ ಎನ್ನದೆ ಪರಿಮಳದ ಸರಕೆಂದಿದೆ. ಆದರೆ ಅಪವಿತ್ರವಾದುದನ್ನೇ ಪವಿತ್ರೀಕರಿಸುವ ಈ ಜನಪಂಥಗಳೊಳಗಿನ ಪರಿಶುದ್ಧತೆಯ ತಹತಹವೂ ತೀವ್ರತರವಾದುದು. ಈ ಶುದ್ಧತೆಯ ತಹತಹದಲ್ಲೂ ನೆಲದ ನಂಟಿಲ್ಲದ ಮಡಿವಾದಿ ಕೃತಕತೆಯ ಅಣಕವಿತ್ತು. ತಿಪ್ಪೆಯನ್ನು ಹಂಗಿಸಿ ದುಡಿಮೆಯ ಜಗತ್ತನ್ನು ಅಪಮಾನಿಸಿದ ಮಡಿತನಕ್ಕೆ ಎದುರಾಗಿ ತಮಗೆ ತಾವೇ ಪ್ರಾಮಾಣಿಕರಾಗುವ ಮಡಿ ಇತ್ತು. ಲೋಕದ ಕಸವನ್ನು ನೆಲದ ಗೊಬ್ಬರವಾಗಿ ಕಂಡ ಈ ನಡೆಕಾರರು ಒಡಲ ಕಸವನ್ನು ಲೋಕದ ಕೇಡಾಗಿಯೇ ಕಂಡವರು. ಹೀಗಾಗಿ ಒಡಲು ತುಂಬಿಕೊಂಡ ಪಾಪ ತೊಳೆಯದೆ ಬಹಿರಂಗದಲ್ಲಿ ಪೊರಕೆ ಹಿಡಿದು ಕಸರತ್ತು ಮಾಡುವುದು ಅವುಗಳಿಗೆ ಅಸಾಧ್ಯವಿತ್ತು.
ದಾಸನಾಗಿ ಮಡಿವಾದಿಗಳ ನಡುವಿದ್ದ ಕನಕನಿಗೆ ಸಂಬಂಧಿಸಿದಂತೆ ಈ ಅಂತರಂಗದ ಮಡಿಯನ್ನು ಕಥಿಸುವ ಸುಂದರವಾದ ಐತಿಹ್ಯವೊಂದಿದೆ. ಮಡಿಯ ಜಂಜಾಟಕ್ಕೆ ಎದುರಾಗಿ ಲೋಕದ ಸತ್ಯವನ್ನಿಟ್ಟು ತೂಗಿದ ಕನಕನ ಬಗೆಗೆ ಜನ ಕಟ್ಟಿಕೊಂಡ ಐತಿಹ್ಯವೊಂದರ ಮೇರೆಗೆ ಆತ ಪ್ರತಿದಿನ ಊರಮೇಲೆ ಹೋಗುತ್ತಿದ್ದವನು ಕತ್ತಲೆಯ ಹೊತ್ತಿಗೆ ಯಾವುದೋ ಒಂದು ಗೊತ್ತಾದ ನಿರ್ಜನಪ್ರದೇಶವನ್ನು ತಲುಪುತ್ತಿದ್ದ. ಜನಕ್ಕೆ ಸರಿರಾತ್ರಿ ಹೊತ್ತು ಕನಕ ಅಲ್ಲಿ ಏನು ಮಾಡುತ್ತಿರಬಹುದೆಂಬ ಕುತೂಹಲ. ನೋಡಿಯೇ ಬಿಡೋಣ ಎಂದು ತಲಾಷೆಗೆ ಇಳಿದವರು ಕಂಡದ್ದು ಕನಕನ ಅಸಾಧ್ಯ ಮಡಿ! ಅದೇನೆಂದರೆ ಸರಿರಾತ್ರಿಯ ಕತ್ತಲೆಗೆ ಊರೆಲ್ಲ ಮಲಗಿದ ಮೇಲೆ ಬಂದ ಕನಕ ಬಟ್ಟೆ ತೊಳೆಯುವ ಕಲ್ಲಿನ ಮೇಲೆ ತನ್ನ ಹೊಟ್ಟೆಯೊಳಗಿನ ಕರುಳನ್ನೆಲ್ಲಾ ಹೊರಗೆ ಹಾಕಿ ತೊಳೆಯಲು ತೊಡಗಿದ. ಎಲ್ಲಾ ತೊಳೆದಾದ ಮೇಲೆ ಮತ್ತೆ ಒಳಕ್ಕೆ ಹಾಕಿಕೊಂಡು ಏನೂ ಆಗಿಲ್ಲವೆಂಬಂತೆ ಹೊರಟುಬಿಟ್ಟ! ಇಷ್ಟೇ. ಆದರೆ ವಿಚಿತ್ರವಾದ ಈ ಐತಿಹ್ಯದಲ್ಲಿ ಸಂದೇಶಗಳಿವೆ. ಸ್ವಚ್ಛಮಾಡಿಕೊಳ್ಳಬೇಕಾದುದು ನಮ್ಮ ನಮ್ಮ ಒಡಲು ಮತ್ತು ನಮ್ಮ ನಮ್ಮ ಸಮಾಜವನ್ನೇ ಎಂಬ ಸರಳಸತ್ಯವಿದೆ. ವ್ಯಕ್ತಿ ಮತ್ತು ಸಮಾಜ ತನ್ನ ಕರುಳಿಗೆ ಮೆತ್ತಿಕೊಂಡ ಕೊಳೆ ತೊಳಕೊಳ್ಳದೆ ಊರು ತೊಳೆಯುವ ಮಾತಿಗೆ ಅರ್ಥವೂ ಇಲ್ಲ ಎಂಬುದಿದೆ. ನಾವು ಆಚರಿಸುವ ಅಸೃಶ್ಯತೆ, ಜಾತಿ ಪದ್ಧತಿ, ಮಡಿ-ಮೈಲಿಗೆ, ಮೌಢ್ಯ, ಅನಾಚಾರ, ಅಧಿಕಾರಕ್ಕಾಗಿ ಕಂಡುಕೊಂಡ ಒಳದಾರಿಗಳು, ಇನ್ನಾರದೋ ಬದುಕನ್ನೇ ನಾಶಮಾಡಿದ್ದೂ.. ಹೀಗೆ ಬೆಳೆಯುತ್ತಲೇ ಹೋಗುವ ಕಿಲುಬನ್ನು ಹಾಗೆಯೇ ಉಳಿಸಿ ಹೊರಗೆ ಶುದ್ಧವಾಗುವುದು ಆತ್ಮವಂಚನೆಯ ಮಡಿಯಷ್ಟೇ. ತಳಮೂಲದ ಕನಕನಿಗೆ ಮೈತೊಳೆಯುವ ಕರ್ಮಠಮಡಿಗಿಂತ ಕರುಳುತೊಳೆದುಕೊಳ್ಳುವ ನೆಲಮೂಲದ ಸಹಜತೆ ಮುಖ್ಯವಾಗಿತ್ತು. ಯಾಕೆಂದರೆ ಆತ ಬಂದುದು ಬೆವರ ಲೋಕದಿಂದಲ್ಲವೆ?
ಗಾಂಧಿ ಅಸ್ಪೃಶ್ಯತೆಯನ್ನು ಪಾಪ ಎಂದರು. ಅಂಬೇಡ್ಕರ್ ಇದರ ಒಳಹೊರಗನ್ನೆಲ್ಲಾ ತನ್ನ ತೀಕ್ಷ್ಣತರ್ಕದ ಮೂಲಕ ತೆರೆದಿಟ್ಟರು. ಈ ಕಳಂಕವನ್ನು ಮರೆತು ಸ್ವಚ್ಛತೆಯ ಬಗೆಗೆ ಗಾಂಧಿ ಹೇಳಿದ ಮಾತಿನ ಮೇಲುಹೊದಿಕೆಯನ್ನಷ್ಟೇ ಬಳಸಿದರೆ ಗಾಂಧಿಯನ್ನೇ ನಾಪತ್ತೆ ಮಾಡಿದಂತಾಗುತ್ತದೆ. ಇನ್ನು ಗಾಂಧೀ ಕಲ್ಪನೆಯ ಸ್ವಚ್ಛಭಾರತ ಗ್ರಾಮಭಾರತವೂ ಹೌದು. ಆದರೆ ನಾವು ತೆರೆದುಕೊಂಡಿರುವುದು ಮುಕ್ತಮಾರುಕಟ್ಟೆಗೆ. ಕರೆಯುತ್ತಿರುವುದು ನಗರವೆಂಬ ಆಧುನಿಕ ನರಕನಿರ್ಮಾಣದ ಹಣದ ಥೈಲಿಕಾರರನ್ನು. ನಿರ್ಮಿಸಲು ಹೊರಟಿರುವುದು ಸ್ಮಾರ್ಟ್ಸಿಟಿಗಳನ್ನು. ಹಾಗಾಗಿ ನಗರವನ್ನೇ ಗುಡಿಸಿ ಒರೆಸುತ್ತಿರುವ ನಮಗೆ ನಾವು ಕಟ್ಟುವ ಭಾರತದ ಕುರಿತ ಸ್ಪಷ್ಟತೆ ಇದೆಯೇ ಎಂಬುದನ್ನೂ ಕೇಳಿಕೊಳ್ಳಬೇಕಿದೆ. ಇನ್ನು ಶತಮಾನಗಳಿಂದ ಊರಹೊಲಸು ಬಳಿದು ನಮ್ಮ ಉಸಿರು ಸರಾಗಗೊಳಿಸಿದವರು ಹೇಗಿದ್ದಾರೆ? ನ್ಯಾಯ ಕೇಳುವುದಕ್ಕೂ (ಸವಣೂರಿನ ಭಂಗಿ ಕಾರ್ಮಿಕರು)ಮೈಮೇಲೆ ಮಲಸುರಿದುಕೊಳ್ಳುವ ಅವರ ವರ್ತಮಾನದ ಬದುಕಿಗೆ ನಾವೇನು ಮಾಡಿದ್ದೇವೆ? ಈ ಕುರಿತ ಆತ್ಮವಂಚನೆಯಿಲ್ಲದ ತರ್ಕವೂ ನಮಗೆ ಬೇಕಿದೆ. ಆಗ ನಾವು ತೆಗೆಯುವ ಕಸವೂ ಕಸ್ತೂರಿ ನಾತವನ್ನು ಬೀರೀತು.
1 ಕಾಮೆಂಟ್:
"ಕೈಬಾಯಿಗಳಿಗೆ ಮುಸುಕು ಹಾಕಿಕೊಂಡು ಕಪ್ಪನೆಯ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಕಸ ತುಂಬಿಸುವ ಆಟವೂ ನಮಗೆ ದೇಶೋದ್ಧಾರದ ಬ್ರೇಕಿಂಗ್ ನ್ಯೂಸ್ಗಳಾಗುತ್ತವೆ. ಆದರೆ ಮ್ಯಾನ್ ಹೋಲ್ಗಳಲ್ಲಿ ಇಳಿದು ಯಾರೋ ಮಾಡಿದ ಹೊಲಸು ಎತ್ತುವ ಕೈಗಳು ಮುನುಷ್ಯರದ್ದೇ ಅನ್ನುವುದನ್ನು ಖಾತರಿಪಡಿಸಲು ಸಂವಿಧಾನದ ಕಲಂ ಓದಬೇಕಾಗುತ್ತದೆ!?"
ಸರಿಯಾಗಿ ತಾಗಿತು! ಏನು ಮಾಡೊಣ ಇದರಬಗ್ಗೆ??
ಕಾಮೆಂಟ್ ಪೋಸ್ಟ್ ಮಾಡಿ