ಬುಧವಾರ, ಡಿಸೆಂಬರ್ 10, 2014

ಭಯೋತ್ಪಾದಕ ಜ್ಯೋತಿಷಿಗಳ ವಿರುದ್ಧದ ಸಮರ ದೇಶದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ನಾಂದಿಯಾಗಲಿ…

ಸೌಜನ್ಯ: ವರ್ತಮಾನ

- ಪ್ರಶಾಂತ್ ಹುಲ್ಕೋಡು

“…ಈ ದೇಶದ ಸಾಂಸ್ಕೃತಿಕ ಮರುಹುಟ್ಟಿಗಾಗಿ ರಮಣ ಮಹರ್ಷಿಯಂತಹ ಆಧ್ಯಾತ್ಮಿಕ ವ್ಯಕ್ತಿಗಳನ್ನೂ ಸಾರ್ವಜನಿಕ ಜೀವನಕ್ಕೆ ಅಹ್ವಾನಿಸಬೇಕು. ನಂಗೊತ್ತು ಈ ಮಾತುಗಳಿಂದ ನನ್ನ ಯುವ ಸ್ನೇಹಿತರು ಸಿಟ್ಟಿಗೇಳುತ್ತಾರೆ. ಆದರೂ ನಾನು ಅಂತಹದೊಂದು ಅ- ಸಂಪ್ರದಾಯಿಕ ಪ್ರಕ್ರಿಯೆಯನ್ನು ಶುರುಮಾಡಬೇಕಿದೆ. jp-jayaprakash-narayanನಾನು ನಿಮ್ಮನ್ನು ಪ್ರಚೋದಿಸಬೇಕು, ನಿಮ್ಮ ಆಲೋಚನೆಯನ್ನು ತಾಕಬೇಕು. ಹೀಗಾಗಿಯೇ ನಾನು ಇತ್ತೀಚೆಗೆ ರಮಣ ಮಹರ್ಷಿಗಳ ಬಗ್ಗೆ ನಿರಂತರವಾಗಿ ಹಾಗೂ ಪ್ರಜ್ಞಾ ಪೂರ್ವಕವಾಗಿ ಮಾತನಾಡುತ್ತಿದ್ದೇನೆ…’’
ಹೀಗಂತ ಹೇಳುತ್ತಿದ್ದರು ಜಯಪ್ರಕಾಶ್‍ ನಾರಾಯಣ್‍. ನಾನಿಲ್ಲಿ ಅವರು ಪ್ರತಿಪಾದಿಸಿದ ಸಿದ್ಧಾಂತ, ಅವರ ವಿಚಾರಗಳು, ಅವರ ಸಮಾಜ ಬದಲಾವಣೆಯ ಭಿನ್ನ ಕನಸಿನ ಹಾದಿ… ಮತ್ತಿತರ ವಿಚಾರಗಳ ಕುರಿತು ಹೇಳಲು ಹೋಗುವುದಿಲ್ಲ. ಯಾಕೆಂದರೆ, ಜೇಪಿ ಕುರಿತು ಇನ್ನೂ ಅರ್ಥ ಮಾಡಿಕೊಳ್ಳುವ ಹಂತದಲ್ಲಿ ನಾನಿದ್ದೇನೆ. ಆದರೆ, ನನ್ನಂತಹ ಯುವ ಮನಸ್ಸಿಗೂ ಜೇಪಿಯವರ ಈ ಮಾತು ತಾಕುತ್ತಿದೆ. ಒಂದಷ್ಟು ಹೊಳವುಗಳನ್ನು ಇಲ್ಲಿ ಕಾಣಲು ಸಾಧ್ಯವಾಗುತ್ತಿದೆ. ನನ್ನ ಕೆಲವು ಸ್ನೇಹಿತರು ‘ಭಯೋತ್ಪಾದಕ ಜ್ಯೋತಿಷಿಗಳ’ ವಿರುದ್ಧ ಹೋರಾಟವನ್ನು ನಡೆಸಿದರು. ಆ ಮೂಲಕ ಬದಲಾಗುತ್ತಿರುವ ಕಾಲಘಟ್ಟದ ಸಂದರ್ಭದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಲು ಮತ್ತು ತಮ್ಮ ದನಿಯನ್ನು ಜೀವಂತವಾಗಿ ಇಟ್ಟುಕೊಳ್ಳುವ ಬಗೆಯನ್ನು ಅವರು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಂಡುಬಂದರು. ನಾಲ್ಕು ಗೋಡೆಗಳ ನಡುವೆ ಕುಳಿತು ಸಿದ್ಧಾಂತಗಳನ್ನು ಒಣ ಒಣವಾಗಿ ಅರ್ಥಮಾಡಿಕೊಂಡು ಮಾತನಾಡುವವರಿಗಿಂತ ಇವರು ಹೆಚ್ಚು ಆಶಾವಾದಿಗಳಾಗಿ ಕಾಣುತ್ತಾರೆ. ಹೀಗಿದ್ದೂ, ಕೆಲವು ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲೇಬೇಕು ಅನ್ನಿಸುತ್ತಿದೆ.
ನಮ್ಮಲ್ಲಿ ‘ಟಿವಿ ಜ್ಯೋತಿಷ್ಯ’ ಆರಂಭವಾಗಿರುವುದು ಉದಯ ಟೀವಿ ಎಂಬ ದ್ರಾವಿಡ ಚಳವಳಿಯ ನೆರಳಿನಲ್ಲಿ ಹುಟ್ಟಿಕೊಂಡ ಚಾನಲ್‍ ಮೂಲಕ. ನನ್ನದೇ ಬಾಲ್ಯದ ನೆನಪುಗಳನ್ನು ಇಟ್ಟುಕೊಂಡು ಹೇಳುವುದಾದರೆ, ಆ ಹೊತ್ತಿಗೆ ಬೆಳಗ್ಗೆ 7. 30ಕ್ಕೆ ಜೈನ್‍ ಎಂಬಾತ ಉದಯ ಟೀವಿಯಲ್ಲಿ ರಾಶಿ ಭವಿಷ್ಯ ಹೇಳುತ್ತಿದ್ದ. ಬೋರ್ಡಿಂಗ್‍ ಶಾಲೆಯಲ್ಲಿದ್ದ ನಾವುಗಳು ನಮ್ಮ ಕಲ್ಪನೆಯ ರಾಶಿಗಳನ್ನು ಗೊತ್ತು ಮಾಡಿಕೊಂಡು, ಆತ ಹೇಳುತ್ತಿದ್ದ ಭವಿಷ್ಯದ ಮೂಲಕ ದಿನವನ್ನು ಆರಂಭಿಸುತ್ತಿದ್ದೆವು. ಆದರೆ, ಅದು ಯಾವತ್ತೂ ಚಟವಾಗಲಿಲ್ಲ. ನಮ್ಮಲ್ಲಿ ಅನೇಕರು ಆತನ ಮಾತುಗಳ ಆಚೆಗೂ ನಮ್ಮದೇ ಭವಿಷ್ಯವಿದೆ ಎಂಬುದನ್ನು ಕಂಡುಕೊಂಡೆವು. ಆದರೆ, ಕೆಲವರು ಇವತ್ತಿಗೂ ಅವರದ್ದೇ ಆದ ರೀತಿಯಲ್ಲಿ ಭವಿಷ್ಯವನ್ನು ನಂಬಿಕೊಂಡು ಬದುಕುತ್ತಿದ್ದಾರೆ. ಹಾಗಂತ ಅವರು ವೈಯುಕ್ತಿಕವಾಗಿ ಕೆಟ್ಟವರಾಗಿಲ್ಲ. jain-astrologerಜೀವನ ಮೌಲ್ಯಗಳನ್ನು ಹಗುರವಾಗಿಯೂ ತೆಗೆದುಕೊಂಡಿಲ್ಲ. ಆದರೆ, ಏನಾದರೂ ಸಮಸ್ಯೆ ಅಂತ ಬಂದರೆ ಅವರಿಗೆ ತಕ್ಷಣ ನೆನಪಾಗುವುದು ಜ್ಯೋತಿಷ್ಯ ಮತ್ತು ದೇವಸ್ಥಾನಗಳು.
ಅವತ್ತು ಒಂದು ಟೀವಿಯಲ್ಲಿ ಒಬ್ಬ ಜ್ಯೋತಿಷಿ ಒಂದು ಗಂಟೆ ಮಾತನಾಡಿದ ಪರಿಣಾಮವೇ ಇದಾದರೆ, ಇವತ್ತಿನ ಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ. ಮನೋರಂಜನೆ, ಸುದ್ದಿ ಎರಡನ್ನೂ ಸೇರಿಸಿಕೊಂಡರೆ ಸುಮಾರು 15 ಚಾನಲ್‍ಗಳು, ಜತೆಗೆ ಕೇಬಲ್‍ ಟೀವಿಗಳು. ಹೀಗೆ ನಾನಾ ಮೂಲಗಳಿಂದ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿ ಮನೆ ಬಾಗಿಲಿಗೂ ಜ್ಯೋತಿಷ್ಯ ತಲುಪಿದೆ. ಇದು ಅಪಾಯಕಾರಿ ಮತ್ತು ಗಂಭೀರ ಸಂಗತಿ. ಇದನ್ನು ವಿರೋಧಿಸಲು ಹೊರಡುವಾಗ ಒಂದು ಮಟ್ಟಿಗಿನ ಸಿದ್ಧತೆಯೂ ಬೇಕಿದೆ. ಜತೆಗೆ, ನಾವು ಹೇಳುವ ವಿಚಾರದಲ್ಲಿ ಜ್ಯೋತಿಷ್ಯದ ಅಪಾಯಕಾರಿ ನಡೆಗಳನ್ನು ಹೇಳುತ್ತಲೇ, ಅದರ ವ್ಯಾಪ್ತಿ ಒಳಗೆ ಇರುವವರ ಮನಸ್ಥಿತಿಯನ್ನು ಬದಲಾಯಿಸುವ ಬಗ್ಗೆಯೂ ಆಲೋಚನೆ ಮಾಡಬೇಕಿದೆ. ಇಲ್ಲಿ ಮನಸ್ಥಿತಿ ಎಂದರೆ, ಜೇಪಿಯವರ ‘ಇಡೀ ದೇಶದ ಸಾಂಸ್ಕೃತಿಕ ಮರು ಹುಟ್ಟು’ ಅಂತ ಅಂದುಕೊಳ್ಳಬಹುದಾ? ಆಲೋಚಿಸಬೇಕಿದೆ.
ಕಳೆದ ಇಷ್ಟು ವರ್ಷಗಳ ಅಂತರದಲ್ಲಿ ನಮ್ಮಲ್ಲಿ ನಡೆದ ಬಹುತೇಕ ಚಳವಳಿಗಳು ಅಪೂರ್ವ ಅನುಭವದ ಪಾಠಗಳನ್ನು ಬಿಟ್ಟುಹೋಗಿವೆ. ಈ ಪಾಠಗಳಲ್ಲಿ ಗೆಲುವಿಗಿಂತ ಜಾಸ್ತಿ ಸೋಲಿದೆ. ಅದು ರೈತ ಚಳವಳಿ ಇರಲಿ, ದಲಿತ ಚಳವಳಿಯಾಗಲಿ ಅಥವಾ ನಾವೇ ಹಿಂದೆ ಕಟ್ಟಿದ ವಿದ್ಯಾರ್ಥಿ ಚಳವಳಿಯನ್ನು ಇಟ್ಟುಕೊಂಡು ನೋಡಿದರೂ, ಸೋಲಿನ ಪಾಠಗಳು ದಂಡಿಯಾಗಿ ಸಿಗುತ್ತವೆ. ಒಂದು ಚಳವಳಿಯನ್ನು ಅದು ಬಿಡಿಬಿಡಿಯಾಗಿ ಆರಿಸಿಕೊಂಡ ವಿಚಾರಗಳು ಮತ್ತು ಅವುಗಳು ತಲುಪಿದ ತಾರ್ಕಿಕ ಅಂತ್ಯದ ಮೂಲಕ ನೋಡುವುದು ಒಂದು ಕ್ರಮ. ಇನ್ನೊಂದು ಈ ಬಿಡಿ ಬಿಡಿ ವಿಚಾರಗಳ ಮೂಲಕ ಇಡೀ ಚಳವಳಿ ಸಾಮಾಜಿಕವಾಗಿ ಮಾಡಿದ ಪರಿಣಾಮಗಳ ಒಟ್ಟು ಮೊತ್ತವನ್ನು ಅಳೆಯುವುದು ಮತ್ತೊಂದು ಕ್ರಮ. ಈ ಎರಡೂ ವಿಚಾರಗಳಲ್ಲೂ ಪ್ರಗತಿಪರ ಧಾರೆಯ ಚಳವಳಿಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಹಾಗಂತ ಇವು ಸಾಮಾಜಿಕ ಬದಲಾವಣೆ ಮಾಡಿಲ್ಲ ಅನ್ನುವಂತಿಲ್ಲ. ಆದರೆ, ಜನರ ಮನಸ್ಸಿನಲ್ಲಿ ಅವು ಬದಲಾವಣೆ ತರುವಲ್ಲಿ ಯಶಸ್ಸನ್ನು ಕಂಡಿಲ್ಲ tv9-media-astrologerಎಂಬುದನ್ನೂ ಗಮನಿಸಬೇಕಿದೆ.
ಇಲ್ಲಿ ಯಾಕೆ ಈ ವಿಚಾರವನ್ನು ಗಮನಿಸಬೇಕು ಎಂದರೆ, ಟೀವಿ ಜ್ಯೋತಿಷ್ಯಕ್ಕಿಂತ ಜ್ಯೋತಿಷ್ಯ ಹಳೆಯದು ಮತ್ತು ಹೆಚ್ಚು ಆಳವಾಗಿ ಬೇರು ಬಿಟ್ಟಿರುವ ಅಂಶ. ಜಾತಕ, ರಾಶಿಫಲ, ಗ್ರಹಗತಿ, ವಾಸ್ತು, ನಾಡಿ ಮತ್ತಿತರ ಸ್ವರೂಪಗಳಲ್ಲಿ ಜನರ ಅನಿಶ್ಚಿತತೆಗಳಿಗೆ ಪರ್ಯಾಯವಾಗಿ ನಿಂತಿವೆ. ಇಲ್ಲಿ ಅನಿಶ್ಚಿತತೆ ಎಂದರೆ, ಜೀವನದ ಕುರಿತು ಭಯವೂ ಆಗಿರಬಹುದು ಅಥವಾ ಅಂಧಕಾರವೂ ಆಗಿರಬಹುದು. ಇವುಗಳು ಸಾಮಾಜಿಕವಾಗಿ ಪರಿಣಾಮ ಬೀರುವ ಜತೆಗೆ ವೈಯುಕ್ತಿಕವಾಗಿಯೂ ಜನರನ್ನು ಮುಟ್ಟುತ್ತಿವೆ. ಸಾಮಾಜಿಕ, ಆರ್ಥಿಕ ಪಲ್ಲಟಗಳು ಎಂಥವರನ್ನೂ ಒಂದು ಕ್ಷಣಕ್ಕೆ ತಲ್ಲಣಗೊಳಿಸುತ್ತವೆ. ಈ ಸಮಯದಲ್ಲಿ ಸುಲಭವಾಗಿ, ಆ ಕ್ಷಣಕ್ಕೆ ಪರಿಹಾರ ನೀಡುವುದು ಈ ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳು. ಹೀಗಾಗಿ, ಇವುಗಳನ್ನು ಅಷ್ಟು ಸುಲಭವಾಗಿ ಕಿತ್ತೆಸೆಯುವುದು ಕಷ್ಟದ ಕೆಲಸ. ಹಾಗಂತ, ಇದರೊಳಗೂ ತನ್ನವೇ ಆದ ಮಿತಿಗಳಿವೆ. ಜನರನ್ನು ತಮ್ಮ ಬಲೆಯಲ್ಲಿ ಹಿಡಿದಿಟ್ಟುಕೊಳ್ಳಲು ಹೆಣಗುತ್ತಿರುತ್ತವೆ. ಇಂತಹ ಸಮಯದಲ್ಲೇ ಕೆಲವು ಅತಿರೇಕಗಳೂ ನಡೆಯುತ್ತವೆ. ಅದಕ್ಕೆ ವರ್ತಮಾನದ ಉದಾಹರಣೆ, ಸಚ್ಚಿದಾನಂದ ಬಾಬುವಿನ ‘ರೇಪ್ ಸಿದ್ಧಾಂತ’.
ಈ ಟೀವಿ ಜ್ಯೋತಿಷ್ಯಕ್ಕಿರುವ ಮತ್ತೊಂದು ದೊಡ್ಡ ಮಿತಿ ಆರ್ಥಿಕ ಆಯಾಮದ್ದು. ಟೀವಿಗಳಿಗೆ ಗಂಟೆಗೆ ಇಷ್ಟು ಎಂದು ಹಣ ಕಟ್ಟುವ ಜ್ಯೋತಿಷಿಗಳು ಅಂತಿಮವಾಗಿ ಲಾಭ ಮತ್ತು ನಷ್ಟದ ಪರಿಕಲ್ಪನೆ ಒಳಗೇ ಕಾರ್ಯನಿರ್ವಹಿಸಬೇಕಾಗುತ್ತದೆ. ಟೀವಿಗಳಿಂದ ಸಿಗುವ ಜನಪ್ರಿಯತೆಯನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅಂತಿಮವಾಗಿ, ಸಮಸ್ಯೆಯನ್ನು ಹೇಳಿಕೊಂಡು ಬರುವ ಜನರು, ಸರಕುಗಳನ್ನು ಕೊಳ್ಳುವ ಗ್ರಾಹಕರಾಗಿಯೇ ಕಾಣುತ್ತಾರೆ. ಸುಳ್ಳಿನ ಆಸರೆಯಲ್ಲಿ ಯಾವ ಉದ್ಯಮಗಳು ತುಂಬಾ ದಿನ ನಡೆಯುವುದಿಲ್ಲ. ಅಲ್ಲಿಯೂ ಕೂಡ ಬೇಡಿಕೆkickout-astrologersಮತ್ತು ಪೂರೈಕೆ ನೀತಿಗಳು ಕೆಲಸ ಮಾಡುತ್ತವೆ. ಗ್ರಾಹಕ ಮತ್ತೆ ಹೊಸ ಸರಕಿಗಾಗಿ ಮತ್ತು ಕಡಿಮೆ ಬೆಲೆಗಾಗಿ ಹಂಬಲಿಸುತ್ತಾನೆ. ಒಂದು ಹಂತ ದಾಟಿದ ನಂತರ ಜ್ಯೋತಿಷ್ಯೋದ್ಯಮಕ್ಕೂ ಸಂಕಷ್ಟ ಎದುರಾಗುತ್ತದೆ. ಅವತ್ತಿಗೆ ಇದಕ್ಕೊಂದು ಪರ್ಯಾಯ ಹುಡುಕಿ ಇಟ್ಟರೆ, ಖಂಡಿತಾ ಸಮಾಜದ ತಲ್ಲಣಗಳಿಗೆ ವೈಯುಕ್ತಿಕ ನೆಲೆಗಿಂತ ಸಾಮಾಜಿಕ ಆಯಾಮದ ಪರಿಹಾರ ಕಂಡುಕೊಳ್ಳಲು ಪ್ರತಿಯೊಬ್ಬರೂ ಆಲೋಚಿಸುವಷ್ಟು ಪ್ರಬುದ್ಧರಾಗುತ್ತಾರೆ ಎಂಬುದು ನಂಬಿಕೆ ಮತ್ತು ಆಶಯ.
ಇವತ್ತು ಸಾಮಾಜಿಕ ಜಾಲತಾಣದ ಗೋಡೆಗಳನ್ನು ಮೀರಿ, ‘ಭಯೋತ್ಪಾದಕ ಜ್ಯೋತಿಷಿ’ಗಳ ವಿರುದ್ಧ ಬೀದಿ ಸಮರಕ್ಕೆ ಇಳಿದಿರುವ ಕೆಲವು ಸ್ನೇಹಿತರು ಈ ಅಂಶಗಳನ್ನೂ ಒಳಗೊಳ್ಳಲಿ. ಆ ಮೂಲಕ ಅವರ ಹೋರಾಟ ತಾತ್ವಿಕ ಚಳವಳಿಯ ರೂಪ ಪಡೆಯಲಿ. ಅದಕ್ಕೆ ಸಮಾಜದ ಎಲ್ಲಾ ಸ್ಥರಗಳಿಂದ ಬೆಂಬಲ ಹರಿದು ಬರಲಿ. ಈಗಾಗಲೇ ನಿಡುಮಾಮಿಡಿ, ಮುರುಘ ಮಠ, ಸಾಣೇಹಳ್ಳಿಯಂತಹ ಮಠಗಳು ಈ ಹಾದಿಯಲ್ಲಿ ಆಶಯದಾಯಿಕ ಹೆಜ್ಜೆ ಹಾಕುತ್ತಿವೆ. ಈ ನೆಲೆಗೆ ಇನ್ನಷ್ಟು ಧಾರೆಗಳು ಸೇರಿಕೊಂಡರೆ, ಭವಿಷ್ಯದಲ್ಲಿ ‘ದೇಶದ ಸಾಂಸ್ಕೃತಿಕ ಪುನರಜ್ಜೀವನ’ಕ್ಕೆ ವೇದಿಕೆ ಸಿದ್ಧವಾಗುತ್ತದೆ. ಅದು ಇಲ್ಲಿಂದಲೇ ಶುರುವಾಗಲಿ.

ಕಾಮೆಂಟ್‌ಗಳಿಲ್ಲ: