ಬುಧವಾರ, ಡಿಸೆಂಬರ್ 3, 2014

ಕನ್ನಡ: ಮನೆ ಉಳಿಸಿಕೊಂಡೇ ಮಾರು ಗೆಲ್ಲಬೇಕು

-ಹೆಚ್.ಎಸ್.ಶಿವಪ್ರಕಾಶ್

ಸೌಜನ್ಯ-ಪ್ರಜಾವಾಣಿ

ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೊಳಿಸದ ಹೊರತು ತಾವು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ­ವನ್ನು  ಒಪ್ಪಿಕೊಳ್ಳುವುದಿಲ್ಲ ಎಂದು ದೇವನೂರ ಮಹಾ­ದೇವ ಅವರು ಘೋಷಿಸಿರುವುದು ಸ್ವಾಗತಾರ್ಹ. ಅವರ ಈ ಕನ್ನಡ ಪರ ನಿಲುವು ಕೇವಲ ಭಾವುಕವಾಗಲಿ, ಹಳಹಳಿಕೆಯದಾಗಲಿ ಆಗಿರದೆ ನೈತಿಕ ಮತ್ತು ಸಾಂಸ್ಕೃತಿಕ ವಿವೇಕದ ಅಭಿವ್ಯಕ್ತಿಯಾಗಿದೆ. ಕನ್ನಡ ರಾಜ್ಯ ಭಾಷೆಯ ಶಿಕ್ಷಣ ಮಾಧ್ಯಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ದಿಸೆಯಲ್ಲಿ ನಾವು ಆಲೋಚಿ­ಸು­ವಂತೆ, ಪ್ರಯತ್ನಶೀಲರಾಗುವಂತೆ ಮಾಡಿದೆ.
ಆಯಾ ರಾಜ್ಯ ಮತ್ತು ಪ್ರಾದೇಶಿಕ ಭಾಷೆಗಳು ಇಂಗ್ಲಿಷಿನ ಹೇರಿಕೆಯಿಂದ ಕ್ಷೀಣಾವಸ್ಥೆಗೆ ಬರುತ್ತಿರುವ ಇಕ್ಕಟ್ಟಿನ ಸ್ಥಿತಿ
ಕೇವಲ ಕರ್ನಾಟಕ ಅಥವಾ ಭಾರತದ್ದಲ್ಲ. ಗೋಳೀಕರಣದ ಗೆದ್ದೆತ್ತಾದ ಇಂಗ್ಲಿಷಿನ ಬಾಲ ಹಿಡಿದುಕೊಂಡು ಇಡೀ ಜಗತ್ತು ಭವಿಷ್ಯದ ಸ್ವರ್ಗಾರೋಹಣಕ್ಕೆ ಇಂದು ತಯಾರಾಗುತ್ತಿದೆ. ಈ ಗೆದ್ದೆತ್ತು ತನ್ನ ಅಸಹಾಯಕ ಬಾಲಹಿಡುಕರನ್ನು ಸ್ವರ್ಗಕ್ಕೆ ಕೊಂಡೊ­ಯ್ಯುತ್ತದೋ ಅಥವಾ ಸ್ವರ್ಗದ ಬೋರ್ಡು ಹಾಕಿ­ಕೊಂಡಿ­ರುವ ನರಕಕ್ಕೆ ಕೊಂಡೊಯ್ಯುತ್ತದೋ ಗೊತ್ತಿಲ್ಲ. ಆದರೂ ಇಂದಿನ ಇಂಗ್ಲಿಷ್‌ ತೆವಲಿನ ಮೂಲವನ್ನು ರವಷ್ಟು ಕೆದಕಿ ನೋಡೋಣ.
ಇಂಗ್ಲಿಷ್‌ ಮಾಯೆಯ ಮೂಲ ಕಾರಣ ಗೋಳೀಕರಣ ಯುಗದ ಚಾಲಕ ಶಕ್ತಿಯಾದ ಮಾರುಕಟ್ಟೆ.  ಅದರ ಜೊತೆಗೆ ತಳಕು ಹಾಕಿಕೊಂಡಿದೆ ಜಾಗತಿಕ ವಿದ್ವತ್-ಲೋಕದ ಸಂಪರ್ಕ ಭಾಷೆಯಾಗಿ ಬೆಳೆಯುತ್ತಿರುವ ಇಂಗ್ಲಿಷ್. ಭಾಷಾವಾರು ಅಂಕಿ-ಅಂಶಗಳ ವಿಶ್ವಸನೀಯ ಆಧಾರವಾಗಿರುವ ‘ಎಥ್ನಲಾಗ್‌’ನ ೨೦೧೩ರ ಗಣತಿಯ ಪ್ರಕಾರ, ಅತ್ಯಂತ ವ್ಯಾಪಕ ವಿಶ್ವ ಭಾಷೆ­ಗಳಲ್ಲಿ ಮೊದಲನೆಯದು ಚೀನಿ ಭಾಷೆ, ಎರಡನೆಯದು ಸ್ಪ್ಯಾನಿಷ್. ಇಂಗ್ಲಿಷಿಗೆ ಮೂರನೇ ಸ್ಥಾನ. ಆದರೆ ವಿಶ್ವದಾದ್ಯಂತ ಶಿಕ್ಷಣ ಮತ್ತು ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಮೊದಲ ಜಾಗ ಗಿಟ್ಟಿಸಿಕೊಂಡಿದೆ.
ಇಷ್ಟಾದರೂ ೨೦೧೪ರ ಬ್ರಿಟಿಷ್ ಕೌನ್ಸಿಲ್‌ನ ವರದಿಯ ಅನುಸಾರ, ಇಂಗ್ಲಿಷನ್ನು ಶಿಕ್ಷಣ ಮತ್ತು ಸಂಪರ್ಕ ಭಾಷೆ­ಯನ್ನಾಗಿ ಮಾಡಲು ಹೊರಟಿರುವ ರಾಷ್ಟ್ರವಾರು ಪ್ರಯ­ತ್ನ­ಗಳು ಏಕಮುಖವಾಗಿಲ್ಲ. ಈ ಬಗ್ಗೆ ಪರ, ವಿರೋಧಿ ಚರ್ಚೆ­ಗಳೂ ವ್ಯಾಪಕವಾಗಿವೆ. ಇಸ್ರೇಲ್, ವೆನಿಜುವೆಲ, ಇಟಲಿ ದೇಶಗಳ ಒಲವು ಇಂಗ್ಲಿಷಿನ ಪರವಾಗಿಲ್ಲ. ಸಾಂಪ್ರದಾಯಿಕ­ವಾಗಿ ಇಂಗ್ಲಿಷ್‌ ಪರವಲ್ಲದ ಫ್ರಾನ್ಸ್, ಜರ್ಮನಿ, ಸ್ವೀಡನ್, ಚೀನಾ, ಜಪಾನ್ ಮೊದಲಾದ ರಾಷ್ಟ್ರಗಳಲ್ಲಿ ಇಂಗ್ಲಿಷ್‌ಪರತೆ ಹೆಚ್ಚುತ್ತಿರುವುದು ನಿಜ. ಆದರೆ ಇಂಗ್ಲಿಷ್‌ನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವುದು ಖಾಸಗಿ ಸಂಸ್ಥೆಗಳೇ ಹೊರತು ಆಯಾ ಸರ್ಕಾರಗಳಲ್ಲ ಎಂಬ ಮಾಹಿತಿ ನಮಗೆ ಬ್ರಿಟಿಷ್‌ ಕೌನ್ಸಿಲ್ ಆಕರಗಳಲ್ಲಿ ದೊರಕುತ್ತದೆ.
ಇಂಗ್ಲಿಷ್‌ ಶಿಕ್ಷಣ ಮಾಧ್ಯಮದಿಂದ ಕೆಲವು ಅನುಕೂಲಗಳಿವೆ ಎಂಬುದರಲ್ಲಿ ಸ್ವಲ್ಪ ಸತ್ಯವಿದೆ. ಇಂಗ್ಲಿಷ್‌ಪರರ  ಮುಖ್ಯ ಸಮರ್ಥ­ನೆ­ಗಳೇನು? ಜಾಗತಿಕ ಸಂಪರ್ಕ ಭಾಷೆಯಾಗಿ ಶಿಕ್ಷಣ­ದಲ್ಲಿ ಇಂಗ್ಲಿಷನ್ನು ನಿಲ್ಲಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ, ತಂತ್ರಜ್ಞಾನದ ಮಾಹಿತಿ ಸಂಗ್ರಹ, ವಿನಿಮಯ ಮತ್ತು ಪ್ರಸಾರ ಸುಲಭವಾಗುತ್ತದೆ ಎಂಬುದು ಅವರ ವಾದ. ಈ ಆಕರ್ಷಕ ವಾದ ನಿಜವಾಗಿದ್ದಲ್ಲಿ ಸಮಸ್ತ ಜ್ಞಾನರಾಶಿ ಇಂಗ್ಲಿಷಿ­ನಲ್ಲಿ ಭಟ್ಟಿಯಿಳಿದು, ಇಂಗ್ಲಿಷ್ ತನಗೆ ತಾನೇ ಸಮಸ್ತ ಜ್ಞಾನ­ವಾಗಿ ಮಾರ್ಪಟ್ಟು ಜಗತ್ತಿನ ಇತರ ಭಾಷೆಗಳು ತಮ್ಮ ಉಪಯು­ಕ್ತತೆಯನ್ನು ಕಳೆದುಕೊಳ್ಳುತ್ತವೆ.
ಪ್ರಸಿದ್ಧ ಭೌತಶಾಸ್ತ್ರಜ್ಞ ಸಿ.ಪಿ.ಸ್ನೋ ಹೇಳುವ ಪ್ರಕಾರ ಭೌತಿಕ ವಿಜ್ಞಾನ, ತಂತ್ರಜ್ಞಾನಗಳ ಮಾಧ್ಯಮ ಗಣಿತ. ಅದು ತನಗೆ ತಾನೇ ಒಂದು ಭಾಷೆ. ಅದನ್ನು ಯಾವ ಭಾಷೆಯ ಮೂಲಕ­ವಾದರೂ ಅನುಸಂಧಾನ ಮಾಡಬಹುದು. ಅದಕ್ಕೆ ಬೇಕಾಗಿರು­ವುದು ವೈಜ್ಞಾನಿಕ ತರ್ಕ, ವಿಶ್ಲೇಷಣೆಗಳೇ ಹೊರತು ಇಂಗ್ಲಿಷ್‌ ಭಾಷೆಯಲ್ಲ. ಜ್ಞಾನರಾಶಿ­ಯೆಂದರೆ ಬರೀ ಪಡುವಣದ ವಿಜ್ಞಾನ, ತಂತ್ರ­ಜ್ಞಾನ­ಗಳಲ್ಲ. ಇತರ ವಿಜ್ಞಾನಗಳು ಇಂಗ್ಲಿಷೇತರ ಮತ್ತು ಯುರೋಪೇತರ ಪರಂಪರೆಗಳಲ್ಲಿ ವಿಕಾಸ­ಗೊಂಡಿದ್ದವು. ಉದಾಹರಣೆಗೆ ಭಾರತದ ಆಯು­ರ್ವೇದವಾಗಲಿ, ಚೀನಾದ ಆಕ್ಯುಪಂಕ್ಚರ್ ಚಿಕಿತ್ಸೆ­ಯಾಗಲಿ ವಿಜ್ಞಾನ ಅಲ್ಲವೆಂದು ಹೇಳಲು ಬರುವು­ದಿಲ್ಲ. ಈ ವಿಜ್ಞಾನಗಳ ಚಿಂತನ- ಮಂಥನ ನಡೆ­ದದ್ದು ಕ್ರಮವಾಗಿ ಸಂಸ್ಕೃತ ಮತ್ತು ಚೀನಿ ಭಾಷೆಗಳಲ್ಲಿ.
ಯುರೋಪಿನ ಮಧ್ಯಯುಗದ ಕಗ್ಗತ್ತಲ ಕಾಲದಲ್ಲಿ ಗ್ರೀಕರ ವಿಜ್ಞಾನವನ್ನು ಉಳಿಸಿ ಬೆಳೆಸಿದವರು ಅರೇಬಿಯಾದ ವಿದ್ವಾಂಸರು. ರೆನೆಸಾನ್ಸ್ ತರುವಾಯದ ಯುರೋಪಿನಲ್ಲೂ ವಿಜ್ಞಾನ ಇಂಗ್ಲಿಷೇತರ ಭಾಷೆಗಳಲ್ಲೂ ರೂಪುತಾಳಿತು. ಭೌತ­ಶಾಸ್ತ್ರದಲ್ಲಿ ಯುಗಪ್ರವರ್ತಕ ಮಾರ್ಪಾಟನ್ನು ತಂದ ಐನ್‌­ಸ್ಟೀನ್‌ ಆಗಲಿ, ಮನೋವಿಜ್ಞಾನದ ಬುನಾದಿ ಹಾಕಿದ ಫ್ರಾಯ್ಡ್, ಯೂಂಗರಾಗಲಿ ಚಿಂತಿಸಿದ್ದು ಜರ್ಮನ್ ಭಾಷೆ­ಯಲ್ಲಿ.  ಆದ್ದರಿಂದ ಭೌತಿಕ, ಮನೋವಿಜ್ಞಾನಗಳನ್ನು ಇಂಗ್ಲಿಷಿನ ಜೊತೆ ಸಮೀಕರಿಸಲು ಬರುವುದಿಲ್ಲ. ಇನ್ನು ಇತರ ಮಾನವಿಕ ವಿಜ್ಞಾನಗಳ ಚಿಂತನ -ಮಂಥನ ಇಂಗ್ಲಿಷೇತರ ಭಾಷೆಗಳಲ್ಲಿ ದಂಡಿಯಾಗಿ ನಡೆದಿದೆ. ವಿಜ್ಞಾನೇತರ ಜ್ಞಾನ ಶಾಖೆಗಳಾದ ಸಾಹಿತ್ಯ, ಸಂಸ್ಕೃತಿ, ದರ್ಶನಗಳು ಜಗತ್ತಿನ ಎಲ್ಲ ಭಾಷೆಗಳಲ್ಲೂ ವಿವಿಧ ಪ್ರಮಾಣಗಳಲ್ಲಿ ವಿಕಸಿತವಾಗಿ ಮಾನವ ನಾಗರಿಕ­ತೆ­ಯನ್ನು ರಚಿಸಿವೆ. ಭೌತಿಕ ವಿಜ್ಞಾನಕ್ಕಿಂತ ಸಾಹಿತ್ಯ–- ಸಂಸ್ಕೃತಿ– -ದರ್ಶನಗಳು ಹೆಚ್ಚು ಭಾಷಾ ವಿಶಿಷ್ಟವಾಗಿದ್ದು ಅವುಗಳ ತಿರುಳನ್ನು ಪೂರ್ಣ ಪ್ರಮಾಣದಲ್ಲಿ  ಇಂಗ್ಲಿಷ್ ಮೂಲಕ ಗ್ರಹಿ­ಸು­ವುದು ಸುಲಭವಲ್ಲ. ಆಯಾ ಅರಿವಿನ ಸೀಮೆಗಳ ಪೂರ್ಣ ತಿಳಿವಳಿಕೆಗಾಗಿ ಆಯಾ ಭಾಷೆಗಳಿಗೇ  ಮೊರೆಹೋಗಬೇಕಾಗಿದೆ.
ಇತ್ತೀಚಿನವರೆಗೆ ದೇಶ ಭಾಷೆಗಳ ಶಿಕ್ಷಣ ಮಾಧ್ಯಮಕ್ಕೆ ಒತ್ತು ನೀಡಿದ್ದ, ಇನ್ನೂ ಪ್ರಧಾನವಾಗಿ ಅದೇ ಭಾಷಾ ನೀತಿಯನ್ನು ಮುಂದುವರಿಸುತ್ತಿರುವ ಚೀನಾ, ಜಪಾನ್, ದಕ್ಷಿಣ ಕೊರಿಯಾ ಮುಂತಾದ ಕಡೆ ಇಂಗ್ಲಿಷ್‌ನ ದೇಣಿಗೆಯಿಲ್ಲದೇ ವಿಜ್ಞಾನ– -ತಂತ್ರಜ್ಞಾನ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.
ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ನಮ್ಮ ಪ್ರಾದೇಶಿಕ ಭಾಷೆಗಳು ಸಂಸ್ಕೃತದೊಂದಿಗೆ ತಮ್ಮ ಸ್ವಂತಿಕೆಯನ್ನು ಬಿಟ್ಟು­ಕೊಡದೆ ಸಂವಾದವನ್ನು ನಡೆಸುತ್ತಾ ಬಂದಿವೆ. ಇಂಗ್ಲಿಷಿನ ಜೊತೆಗೂ ಇದೇ ಥರದ ಸಮಾನ ವಿನಿಮಯ ಸಾಧ್ಯವಾದರೆ ಇಂಗ್ಲಿಷಿಗೂ ಒಳಿತು, ನಮಗೂ ಒಳಿತು. ಆದರೆ ಇಂಗ್ಲಿಷಿನ ಕಡೆಗಿನ ಏಕಮುಖಿ ಚಲನೆಯ ಸಮರ್ಥಕರ ವಾದ  ಇಂಥ ಸಂವಾ­ದದ, ಸಮಾನ ಹಂಚಿಕೆಯ ಪರವಾ­ಗಿಲ್ಲ. ಯಾಕೆಂದರೆ ಇದರ ಚಾರಿತ್ರಿಕ ಭಿತ್ತಿ ಮತ್ತು ಪ್ರೇರಣೆ ಖಾಸಗೀಕರಣದ ಅಸಮಾನ ಹಂಚಿಕೆಯ ಅರ್ಥ ವ್ಯವಸ್ಥೆ. ಈ ದಿಸೆಯಲ್ಲಿ ಬಲವಾದ ಒತ್ತಡ ಬರುತ್ತಿರುವುದು ಲಾಭ­ಕೋರ ಖಾಸಗಿ ಕಂಪೆನಿಗಳಿಂದಲೇ ಹೊರತು ಜನತೆ ಅಥವಾ ಸರ್ಕಾರದ ಕಡೆಯಿಂದಲ್ಲ. ಆದರೆ ಇಂದು ಸರ್ಕಾರಗಳೂ ಜನರೂ  ಖಾಸಗೀಕರಣದ ಪರವಾದ ಬಿರುಸಿನ ಪ್ರಚಾರಕ್ಕೆ ಬೇಸ್ತು ಬೀಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಯಾವ ರೀತಿಯ ಶಿಕ್ಷಣ ಭಾಷಾ ನೀತಿ ನಮ್ಮ ಸ್ವಕೀಯ ವಿಕಾಸಕ್ಕೆ ಪ್ರೇರಕವಾಗಬಲ್ಲದು?
ಕುರುಡು ಕನ್ನಡ ವಾದವಾಗಲಿ ಪರಂಗಿ ಮೋಹವಾಗಲಿ ಪರಿಹಾರವಲ್ಲ.  ವಸ್ತುನಿಷ್ಠ ವಿವೇಚನೆ ಅಗತ್ಯ. ವಿಶ್ವದ ಪ್ರಬಲ ಸಂಪರ್ಕ ಭಾಷೆಯಾದ ಇಂಗ್ಲಿಷನ್ನು ನಾವು ಚೆನ್ನಾಗಿ ಕಲಿಯ­ಬೇಕು, ನಿಜ. ಅಷ್ಟೇ ಮುಖ್ಯ ನಮ್ಮ ನಮ್ಮ ಭಾಷೆಗಳಲ್ಲಿ ನಮ್ಮ ಬಗ್ಗೆ, ಜಗತ್ತಿನ ಬಗ್ಗೆ ಚಿಂತಿಸುವುದು. ಬದಲಾದ ಪರಿಸರದಲ್ಲಿ ಪರಪುಟ್ಟರಾಗದೆ ಶತಮಾನಗಳ ಕೊಂಡಗಳನ್ನು ಹಾಯ್ದು ಬಂದು ಇನ್ನೂ ಜೀವಂತವಾಗಿರುವ ಭಾಷೆ ಮತ್ತು ಜ್ಞಾನ ಪರಂಪರೆಯಲ್ಲಿ ಮೌಲಿಕವಾದುದನ್ನು ಮೊದಲು ಮರುಗಳಿಸಿ­ಕೊಂಡು, ಉಳಿಸಿಕೊಂಡು ಇಂದಿನ ನಮ್ಮ ವ್ಯಕ್ತಿಗತ ಮತ್ತು ಸಾಮೂ­ಹಿಕ ಹಿತಗಳಿಗಾಗಿ ಬೆಳೆಸಿಕೊಳ್ಳಬೇಕು. ಇಂದಿನ ಅವಕಾಶಗಳಿಂದ ವಂಚಿತರಾಗದಂತೆ ಇಂಗ್ಲಿಷನ್ನು ಕಲಿಯು­ತ್ತಲೇ, ಎಲ್ಲ ಜ್ಞಾನವನ್ನು ನಮ್ಮ ನಮ್ಮ ಭಾಷೆಗಳ ಮೂಲಕವೇ ಪಡೆದುಕೊಳ್ಳಬೇಕು. ಮನೆಯನ್ನು ಉಳಿಸಿಕೊಂಡೇ ಮಾರನ್ನು ಗೆಲ್ಲಬೇಕು.
ಇತ್ತೀಚೆಗೆ ಸುಪ್ರೀಂಕೋರ್ಟ್, ಶಿಕ್ಷಣ ಮಾಧ್ಯಮ ಯಾವುದಿ­ರ­­ಬೇಕೆಂಬ ವಿಷಯದಲ್ಲಿ ಅಂತಿಮ ತೀರ್ಮಾನ ತಂದೆ -ತಾಯಿಯದ್ದಾಗಿರಬೇಕೆಂದು ತೀರ್ಪು ನೀಡಿದ್ದು ಖಾಸಗಿ ಶಿಕ್ಷಣಾ­ಧಿಪತಿಗಳಿಗೆ ಹೊಸ ಹುಮ್ಮಸ್ಸು ತಂದಿದೆ. ಧರಣಿ ಮಂಡಲ ಮಧ್ಯದ ಕರ್ನಾಟಕದಲ್ಲೇ ಇಂಗ್ಲಿಷ್‌ ಮಾಧ್ಯಮ ಶಾಲೆ ತೆರೆ­ಯಲು ೨೦೦೦ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆ­ಯಾಗಿವೆ. ಧನೋ­ನ್ಮತ್ತರಾಗಿರುವ ಖಾಸಗಿ ಶಿಕ್ಷಣಾಧಿಪತಿಗಳು ಇನ್ನೂ ಮುಂದುವರಿಯುವ ಮೊದಲು ಸಾರ್ವಜನಿಕರು ಮತ್ತು ಸರ್ಕಾರ ಕನ್ನಡ ಮಾಧ್ಯಮವನ್ನು ಸ್ಥಾಪಿಸುವ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕಾಗಿದೆ.   ಕರ್ನಾಟಕ, ಗುಜರಾತ್‌ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಮರುಪರಿಶೀಲನೆಗೆ ಕಾನೂನಿನ ಮೊರೆ ಹೋಗಿರುವುದು ಸ್ವಾಗತಾರ್ಹ. ಆದರೆ ಅಷ್ಟು ಸಾಲದು. ಹತ್ತನೇ ತರಗತಿವರೆಗಿನ ಶಿಕ್ಷಣ ಮಾಧ್ಯಮ ರಾಜ್ಯ ಭಾಷೆಗಳಾಗಿರಬೇಕೆಂಬ ಕಾಯ್ದೆಯನ್ನು ಸಂಸತ್ತಿನಲ್ಲಿ ತರುವುದೊಂದೇ ಇಂದು ನಮಗಿರುವ ದಾರಿ.
ಕನ್ನಡದಲ್ಲಿ ವಿಜ್ಞಾನಾದಿ ವಿಷಯಗಳನ್ನು ಕಲಿಸತೊಡಗಿದಾಗ ಮಕ್ಕಳೇನೂ ದಡ್ಡರಾಗಿಬಿಡುವುದಿಲ್ಲ ಎಂಬುದು ಹಿಂದೆ ಚಂದ್ರ­ಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಕುಲಪತಿ­ಗಳಾ­ಗಿದ್ದಾಗ ಮಾಡಿಸಿದ ಪ್ರಯೋಗದಿಂದ ಸಾಬೀತಾಗಿತ್ತು. ಪಿಯುಸಿ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ವಿದ್ಯಾರ್ಥಿ­ಗಳಿಗೆ ಒದಗಿಸಲಾಯಿತು. ಆಗ ಗ್ರಾಮೀಣ ಪ್ರದೇಶದ ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾದರು. ಯಾಕೆಂದರೆ ಆ ಸಲ ಅವರು ಇಂಗ್ಲಿಷ್ ಪಾಠಗಳನ್ನು ಉರು­ಹಚ್ಚಿ ಬರೆದಿರಲಿಲ್ಲ. ಕನ್ನಡದಲ್ಲಿ ನೇರವಾಗಿ ಓದಿ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಉತ್ತಮ ಫಲ ದೊರಕಿದ ಮೇಲೂ ಸರ್ಕಾರದ ಸೋಮಾರಿತನದಿಂದ ಈ ಅರ್ಥಪೂರ್ಣ ಪ್ರಯೋಗ ಮುಂದುವರಿಯಲಿಲ್ಲ.
ರಾಜ್ಯದ ಎಲ್ಲ ಮಕ್ಕಳಿಗೆ ಮೊದಲನೇ ತರಗತಿಯಿಂದ ಇಂಗ್ಲಿಷಿನ ಕಲಿಕೆ ಲಭ್ಯವಾಗಿಸಿ ಇತರ ವಿಷಯಗಳನ್ನು ನೇರವಾಗಿ ರಾಜ್ಯ ಭಾಷಾ ಮಾಧ್ಯಮದಲ್ಲಿ ಕಲಿಸುವ  ವ್ಯವಸ್ಥೆಯನ್ನು ಸಾರ್ವತ್ರೀಕರಿಸಿದರೆ  ಇಂಗ್ಲಿಷ್ ಮಾಧ್ಯಮದವರ ಮೇಲರಿಮೆ ಮತ್ತು ಕನ್ನಡ ಮಾಧ್ಯಮದವರ ಕೀಳರಿಮೆ ಕೊನೆಯಾಗಿ, ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ, ಸಮಪಾಲು ನೆಲೆಸಲು ಅನುವಾಗು­ತ್ತದೆ. ಕನ್ನಡ ಮಾಧ್ಯಮದಿಂದ ನಮ್ಮ ನಾಡು-–ನುಡಿಗಾಗುವ ನಷ್ಟಕ್ಕಿಂತ ಲಾಭವೇ ಹೆಚ್ಚು. ಕವಿ ಕೆ.ಎಸ್‌.ನ ಹೇಳಿದ ಹಾಗೆ, ‘ಕನ್ನಡ ಮಾಧ್ಯಮವಾಗಲೇಬೇಕು ಕನ್ನಡ ಮಕ್ಕಳಿಗೆ...’

ಕಾಮೆಂಟ್‌ಗಳಿಲ್ಲ: