ಗುರುವಾರ, ಜನವರಿ 29, 2015

ಆತ್ಮಸಾಕ್ಷಿಯ ದೀಪ ಆರದಿರಲಿ......     -ಡಾ.ಎಂ.ಡಿ.ಒಕ್ಕುಂದ

          ಗೊಮ್ಮಟನ ನಾಡಿನಲ್ಲಿ ಕನ್ನಡ ನಾಡು ನುಡಿಯ ಮಹಾಜಾತ್ರೆ ಇನ್ನೇನು ಆರಂಭವಾಗುತ್ತದೆ. ಆದರೆ ಕನ್ನಡ ಬದುಕಿನ ಸಾಕ್ಷಿಪ್ರಜ್ಞೆ ದೇವನೂರು ಮಹದೇವ ಅವರ ಆಶಯಕ್ಕೆ ಸಮ್ಮೇಳನ ವೇದಿಕೆಯಾದೀತೇ ಎಂಬ ಪ್ರಶ್ನೆ ಹಾಗೂ ಆಗಲಿಕ್ಕಿಲ್ಲ ಎಂಬ ಆತಂಕ ಕಾಡುತ್ತಿವೆ.

ಹಾಸನ ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಯೋಗವು ಶ್ರವಣಬೆಳಗೊಳದಲ್ಲಿ ನಡೆಯಲಿರುವ ೮೧ನೇ ಅಖಿಲಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟಾಗ ೧೦ನೆಯ ತರಗತಿಯವರೆಗೆ ಮಾತೃಭಾಷಾ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವವರೆಗೆ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿ ಭಾಗವಹಿಸದಿರುವ ತಮ್ಮ ಮೂರು ದಶಕಗಳ ನಿಲುವಿಗೆ ಬದ್ಧತೆಯನ್ನು ಮುಂದುವರಿಸಿ ಆ ಗೌರವದ ಸ್ಥಾನವನ್ನು ದೇವನೂರು ಮಹದೇವ ನಿರಾಕರಿಸಿದರು. ಈ ಹಿಂದೆ ಎರಡು ಬಾರಿ ಇದೇ ಕಾರಣಕ್ಕೆ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನೂ,  ನೃಪತುಂಗ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನೂ ತಿರಸ್ಕರಿಸಿದ್ದರು. ಕರ್ನಾಟಕದ ಪ್ರಮುಖ ಸಾಮಾಜಿಕ ಸಾಂಸ್ಕೃತಿಕ ಚಳುವಳಿಗಳ ನೇತಾರರು ಹಾಗೂ ಅವುಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದ ನಾವು- ತಾವುಗಳೆಲ್ಲ ಕಳೆದ ಎರಡು ದಶಕಗಳಲ್ಲಿ ನಮ್ಮ ನಿಲುವುಗಳಲ್ಲಿ ಮಾಡಿಕೊಂಡ ಬದಲಾವಣೆಗಳು ಹಾಗೂ ರಾಜೀ ಮನೋಭಾವವನ್ನು ನೆನೆಸಿಕೊಂಡರೆ, ಹಾಗೂ ಜೀವನದುದ್ದಕ್ಕೂ ಸಾಹಿತ್ಯ ಪರಿಷತ್ತು, ಅಕಾಡೆಮಿಗಳ ಅಧ್ಯಕ್ಷರಾಗುವ, ಸದಸ್ಯರಾಗುವ, ಪ್ರಶಸ್ತಿಗಳನ್ನು ಸ್ವೀಕರಿಸುವ ಮನೋಭಾವವನ್ನು ತೀವ್ರವಾಗಿ ಖಂಡಿಸಿ ಕೆಲವರಿಂದ ರಾಜೀನಾಮೆ ಕೊಡಿಸಿ, ಪ್ರಶಸ್ತಿಗಳನ್ನು ಹಿಂದಿರುಗಿಸಿಸಿ ಸಂಭ್ರಮಿಸಿದ ನನ್ನ ತಲೆಮಾರಿನ ನಾವು ಕೆಲವರು ಒಂದು ಸಣ್ಣ ಸಾಂಸ್ಕೃತಿಕ ಅಧಿಕಾರ ಕೇಂದ್ರ, ಒಂದು ಪುಟ್ಟ ಪ್ರಶಸ್ತಿ ಬಂದಾಗ ಸಂಭ್ರಮಿಸುತ್ತಿರುವ ವಾಸ್ತವವನ್ನು ನೆನಪಿಸಿಕೊಂಡರೆ ಮಹಾದೇವ ಅವರ ಬದ್ಧತೆ ಮತ್ತು ದೃಢತೆಗಳ ಚಾರಿತ್ರಿಕ ಮಹತ್ವ ಅರಿವಿಗೆ ಬರುತ್ತದೆ.

ರಾಜಕೀಯ ಅಧಿಕಾರಗಳು, ಸಾಂಸ್ಕೃತಿಕ ಅಧಿಕಾರ ಕೇಂದ್ರಗಳು, ಗೌರವ- ಪ್ರಶಸ್ತಿ- ಸನ್ಮಾನಗಳು ಪ್ರತಿಭಟನಾ ಮನೋಭಾವವನ್ನು ನಿಯಂತ್ರಿಸುವ ಸಲಕರಣೆಗಳಾಗಿ ಬಳಕೆಯಾಗುತ್ತ ಸಾಂಸ್ಕೃತಿಕ ವಲಯದಲ್ಲಿ ಮೌನವನ್ನು ಉತ್ಪಾದಿಸತೊಡಗಿವೆ. ಹೀಗಾಗಿ ಪ್ರಭುತ್ವದ ನಿಲುವುಗಳಿಗೆ ಬಹುತೇಕರು ಮೌನವಾಗಿದ್ದೇವೆ. ಇಲ್ಲವೇ ಒಂದು ಸೀಮಿತ ಚೌಕಟ್ಟಿನಲ್ಲಿ ಭಿನ್ನಾಭಿಪ್ರಾಯಗಳನ್ನು ದಾಖಲಿಸಿದಂತೆ ಮಾಡಿ ಮರೆತುಬಿಡುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ.  ಚಳುವಳಿಗಳನ್ನು ಹುಟ್ಟುಹಾಕುವ ನೈತಿಕ ಶಕ್ತಿಯನ್ನೇ ಕಳೆದುಕೊಂಡು ದುರ್ಬಲರಾಗುತ್ತಿದ್ದೇವೆ. ಮಾತೃಭಾಷಾ ಮಾಧ್ಯಮದ ಶಿಕ್ಷಣ ನೀತಿಯನ್ನು ಕುರಿತಂತೆ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸರ್ವೋಚ್ಛ ನ್ಯಾಯಾಲಯದ ತೀರ್ಮಾನವು ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಬಂಡವಾಳಶಾಹಿ ಪ್ರಭುತ್ವಗಳ ಹಿತಾಸಕ್ತಿಯ ಪರವಾಗಿ ಹೊರಬಿದ್ದಾಗ ದಿಗ್ಭ್ರಾಂತರಾದೆವು. ಅಥವಾ ಹಾಗೆ ತೋರಿಸಿಕೊಂಡೆವು. ಜನಾಂದೋಲನವೊಂದು ಏಕಾಏಕಿಯಾಗಿ ಆರಂಭವಾಗಿ ಬಿಡಬೇಕಾದ ಚಾರಿತ್ರಿಕ ಸಂದರ್ಭವದು. ಕರ್ನಾಟಕದ ಶೂದ್ರ, ದಲಿತ, ರೈತ, ಬಂಡಾಯ, ಮಹಿಳಾ, ಪರಸರ ಇತ್ಯಾದಿ ಚಳುವಳಿಗಳು ಒಂದೊಂದು ಸಣ್ಣಪುಟ್ಟ ಕಾರಣಗಳನ್ನು ನೆಪಮಾಡಿಕೊಂಡು ಹೊರಹೊಮ್ಮಿದವು. ಯಾಕೆಂದರೆ ವ್ಯವಸ್ಥೆ ಹಾಗೂ ಮನಸ್ಥಿತಿಗಳಲ್ಲಿ ಒಳಗೇ ಚಳುವಳಿಯ ಕಾವು ಸಿದ್ಧವಾಗಿತ್ತು. ಆದರೆ ಇಲ್ಲಿ, ಚಳುವಳಿ ಹುಟ್ಟಲು ಬಲಾಢ್ಯ ಕಾರಣವಿರುವಾಗಲೂ, ಜಾಗತೀಕರಣದ ಒಪ್ಪಂದದ ನಂತರ ಹಳೆಯ ಹೊಸ ಶೋಷಣೆಗಳು ತೀವ್ರವಾಗಿರುವಾಗಲೂ, ಪ್ರಾದೇಶಿಕ ಭಾಷೆ, ಸಂಸ್ಕೃತಿ ಹಾಗೂ ಬದುಕುಗಳನ್ನು ಸರ್ವನಾಶಗೊಳಿಸುವಷ್ಟು ಆಕ್ರಮಣ ತೀವ್ರವಾಗಿರುವಾಗಲೂ ನಾವೆಲ್ಲ ನೋಯುತ್ತಿದ್ದೇವೆಯೇ ಹೊರತು ಪುಟಿದೇಳುತ್ತಿಲ್ಲ. ಆದರೆ ದೇವನೂರು ಮಹದೇವ ಪುಟಿದೇಳುವ ಚಾರಿತ್ರಿಕ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರು ಮನವೊಲಿಸಲು ಹೋದಾಗ ತಮ್ಮ ನಿಲುವನ್ನು ಬದಲಾಯಿಸದೇ ’ಹಾಲಂಬಿಯವರಿಗೆ ಒಂದು ಬಹಿರಂಗಪತ್ರ’ ಬರೆದರು. ಆ ಪತ್ರ ಕೇವಲ ಹಾಲಂಬಿಯವರಿಗಲ್ಲ- ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೇ ಬರೆದ ಬಹಿರಂಗ ಪತ್ರವಾಗಿತ್ತು. ಇಲ್ಲಿಯವರೆಗೆ ತಮ್ಮಷ್ಟಕ್ಕೆ ತಾವೇ ರಾಜಕೀಯ, ಸಾಂಸ್ಕೃತಿಕ ಅಧಿಕಾರ ಕೇಂದ್ರಗಳನ್ನು, ಪ್ರಶಸ್ತಿಗಳನ್ನು ತಿರಸ್ಕರಿಸಿ ಸಂಚಲನ ಸೃಷ್ಟಿಸಿ ಮೌನವಾಗುತ್ತಿದ್ದವರು ಈ ಬಾರಿ ಸಾಕಷ್ಟು ಹೆಜ್ಜೆ ಮುಂದೆ ಹೋಗಿ ಎಲ್ಲರೂ ಸೇರಿ ಜನಾಂದೋಲನವನ್ನು ಆರಂಭಿಸಬೇಕಾದ ಅಗತ್ಯವನ್ನು ಮಂಡಿಸಿದ್ದರು. ನಾಡು, ನುಡಿ, ಸಂಸ್ಕೃತಿ ಹಾಗೂ ಪ್ರಾದೇಶಿಕ ಬದುಕಿನ ನೆಲೆಗಳು ನಿರ್ನಾಮವಾಗುತ್ತಿರುವ ಇಂಥ ಸಂಕಟದ ಸಂದರ್ಭದಲ್ಲೂ ದೇವನೂರ ಅವರ ಪ್ರಸ್ತಾಪಕ್ಕೆ ತೀರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸತ್ತಂತಿಹರನು ಬಡಿದೆಚ್ಚರಿಸುವುದು, ಕಷ್ಟ ಎನ್ನುವುದು ಸಾಬೀತಾಯಿತು.
ಮಹದೇವ ತಮ್ಮ ಪತ್ರದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ ಸಂಗತಿಗಳೆಂದರೆ- ಮಾತೃಭಾಷಾ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಕುರಿತಾದ ಆಘಾತಕಾರಿ ಬೆಳವಣಿಗೆಗಳು ಕೇವಲ ಕನ್ನಡದ ಪ್ರಶ್ನೆಯಲ್ಲ. ನವಬಂಡವಾಳವಾದದ ಆಕ್ರಮಣಕ್ಕೆ ತುತ್ತಾದ ಈ ದೇಶದ ಹಾಗೂ ಬಡರಾಷ್ಟ್ರಗಳ ಪ್ರಾದೇಶಿಕ ಭಾಷೆ; ಸಂಸ್ಕೃತಿ ಬದುಕುಗಳ ಅಳಿವು ಉಳಿವಿನ ಪ್ರಶ್ನೆ. ಇದಕ್ಕಿರುವ ಏಕೈಕ ದಾರಿಯೆಂದರೆ ತಕ್ಷಣವೇ ದೇಶದ ಪಾರ್ಲಿಮೆಂಟಿನ ಮೇಲೆ ಒತ್ತಡ ಹೇರಬಲ್ಲ ಜನಾಂದೋಲನವನ್ನು ಕರ್ನಾಟಕದಿಂದ ಆರಂಭಿಸುವುದು. ಅದರ ನಾಯಕತ್ವವನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯಪರಿಷತ್ತು ವಹಿಸಿಕೊಂಡು ಮರುಹುಟ್ಟು ಪಡೆಯಬೇಕು. ಕರ್ನಾಟಕದಲ್ಲಿ ಚಳುವಳಿ ಹುಟ್ಟಲು ಪೂರಕವಾದ ರಾಜಕೀಯ ವಾತಾವರಣವೂ ಇದೆ.-  ದೇವನೂರರ ಜನಾಂದೋಲನದ ಕನಸಿಗೆ ಜೀವತುಂಬುವ ನೈತಿಕ ಜವಾಬ್ದಾರಿಯಿಂದ ನಾವೆಲ್ಲ ನುಣುಚಿಕೊಂಡೆವಲ್ಲವೇ?. ಕನಿಷ್ಟಪಕ್ಷ ಆ ಕುರಿತು ತಕರಾರುಗಳಿದ್ದರೆ  ದಾಖಲಿಸದಂತೆ  ಮೌನವಹಿಸಿದೆವು.

ಒಮ್ಮೆ ಹೀಗೆ ಊಹಿಸೋಣ- ಈಗಾಗಲೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿದ ಹಿರಿಯರು ದೇವನೂರ ಅವರನ್ನು ಬೆಂಬಲಿಸಿ ತಾವು ಬೀದಿಗಿಳಿಯುವುದಾಗಿ ಘೋಷಿಸಿದ್ದರೆ, ಮಹಾದೇವ ತಿರಸ್ಕರಿಸಿದ ೮೧ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಇದೇ ಕಾರಣ ನೀಡಿ ಈ ನಾಡಿನ ಯಾವ ಹಿರಿಯ ಸಾಹಿತಿಗಳೂ ಒಪ್ಪಿಕೊಳ್ಳದೇ ಹೋಗಿದ್ದರೆ, ಈ ಸಮ್ಮೇಳನದ ವಿಚಾರ ಸಂಕಿರಣಗಳು, ಕವಿಗೋಷ್ಠಿಗಳು, ಸನ್ಮಾನ ಗೋಷ್ಠಿಗಳಲ್ಲಿ ಭಾಗವಹಿಸಲು ಇದೇ ಕಾರಣಕ್ಕೆ ನಾವು ನೀವೆಲ್ಲ ನಿರಾಕರಿಸಿದ್ದರೆ, ಎಲ್ಲ ಅಕೆಡಮಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ರಾಜೀನಾಮೆ ನೀಡಿ ಈನಾಡಿನ ಸಾಹಿತಿ ಕಲಾವಿದರು ಮಾತೃ ಭಾಷಾಮಾಧ್ಯಮದ ಶಿಕ್ಷಣ ವ್ಯವಸ್ಥೆ ಹಾಗೂ ಸಮಾನ ಶಿಕ್ಷಣ ನೀತಿಗಳು ಜಾರಿಯಾಗುವವರೆಗೆ ಪ್ರಶಸ್ತಿಗಳನ್ನು ಸ್ವೀಕರಿಸಲು ನಿರಾಕರಿಸುವ ತೀರ್ಮಾನವನ್ನು ಪ್ರಕಟಿಸಿದ್ದರೆ, ಕನ್ನಡ ಚಿತ್ರರಂಗವನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಯತ್ನಿಸಿದ್ದರೆ...  ಆಂದೋಲನಕ್ಕೆ ಒಂದು ಸಣ್ಣ ಸಂಚಲನ ಸಿಗಬಹುದಾಗಿತ್ತಲ್ಲವೇ? ಈ ರೇ.. ಪ್ರಪಂಚ ಅತೀ ಆದರ್ಶವಾದಿಯಾಗಿ ತೋರಿದರೂ ಅಸಾಧ್ಯವಾದುದೇನಾಗಿರಲಿಲ್ಲ. ದೇವನೂರರ ತೀರ್ಮಾನ ಅಂಥದೊಂದು ಆತ್ಮಾವಲೋಕನಕ್ಕೆ ತೊಡಗಿಸಿತ್ತು. ನಾವೆಲ್ಲ ಮೌನ ವಹಿಸಿದೆವು. ಇದು ಮಹಾಮೌನ.
ಹಾಗೆ ನೋಡಿದರೆ ದೇವನೂರು ನಿಲುವಿಗೆ ತಕ್ಕಮಟ್ಟಿಗೆ ಘನತೆಯಿಂದ ಸ್ಪಂದಿಸಿದ್ದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು. ಪುಂಡಲೀಕ ಹಾಲಂಬಿಯವರು ಸಮ್ಮೇಳನವನ್ನು ಜನಾಂದೋಲನದ ಕಾರ‍್ಯಾಗಾರವಾಗಿ ರೂಪಿಸುವುದಾಗಿ ಘೋಷಿಸಿದರು. ನಿಯೋಜಿತ ಸರ್ವಾಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯನವರು ದೇವನೂರರ ಆಶಯಗಳು ಮೊದಲ ಆದ್ಯತೆಯಾಗಿ ಚರ್ಚಿಸಿ ಸಮ್ಮೇಳನದ ಮೂಲಕ ಜನಾಂದೋಲನಕ್ಕೆ ನಾಂದಿ ಹಾಡುವುದಾಗಿ ಹೇಳಿಕೊಂಡರು. ಈಗಾಗಲೇ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದೆ. ’ಸಂವಿಧಾನ-ರಾಜ್ಯಭಾಷಾನೀತಿ’, ’ಕನ್ನಡ-ಬದುಕು - ಚಳುವಳಿಗಳು’, ’ಸ್ವಾತಂತ್ರೋತ್ತರ ಕರ್ನಾಟಕ-ವರದಿಗಳ ಅನುಷ್ಠಾನ’ ಎಂಬ ಮೂರು ಪ್ರಮುಖ ಗೋಷ್ಠಿಗಳನ್ನು ರೂಪಿಸಲಾಗಿದೆ. ಮೇಲುನೋಟಕ್ಕೆ ದೇವನೂರರ ಆಶಯಗಳಿಗೆ ಆದ್ಯತೆ ಸಿಕ್ಕಂತೆ  ಭಾಸವಾಗುತ್ತದೆ. ಆದರೆ ಚಳುವಳಿಯನ್ನು ರೂಪಿಸುವ ಉದ್ದೇಶ ಇದ್ದಂತಿಲ್ಲ. ಹಾಗೇನಾದರೂ ಇದ್ದಿದ್ದರೆ ಸರ್ವೋಚ್ಛ ನ್ಯಾಯಾಲಯದ ತೀರ್ಪು-ಚಿಂತನೆಯ ಕೇಂದ್ರವಾಗುತ್ತಿತ್ತು. ಹಳ್ಳಿಯಿಂದ ದಿಲ್ಲಿಯವರೆಗೆ ದೀನ ದಲಿತರಿಂದ ಹಿಡಿದು ಪುರೋಹಿತ ಸಿರಿವಂತರವರೆಗೆ ಇಂಗ್ಲೀಷ್ ವ್ಯಾಮೋಹದಲ್ಲಿ ಮುಳಿಗೇಳುತ್ತಿರುವ ವಾಸ್ತವದ ಬಗ್ಗೆ, ಅದಕ್ಕೆ ಕಾರಣವಾಗಿರುವ ಸಾಮ್ರಾಜ್ಯಶಾಹಿ ರಾಜಕೀಯ ಹಿತಾಸಕ್ತಿಗಳ ಹಾಗೂ ಕಾರ್ಯಾಚರಣೆಗಳ ಬಗ್ಗೆ,  ಚಿಂತನ ಮಂಥನ ನಡೆಯತ್ತಿತ್ತು. ಮುಖ್ಯವಾಗಿ ಪಾರ್ಲಿಮೆಂಟಿನ ಮೇಲೆ ಒತ್ತಡ ಹೇರುವ ಜನಾಂದೋಲನವನ್ನು ರೂಪಿಸುವ ತಾತ್ವಿಕ ಹಾಗೂ ಸಂಘಟನಾತ್ಮಕ ಪ್ರಣಾಳಿಕೆಯನ್ನು ರೂಪಿಸುವುದು ಮೊದಲ ಆದ್ಯತೆಯಾಗುತ್ತಿತ್ತು. ಸಮ್ಮೇಳನವನ್ನು ಭವಿಷ್ಯದ ಆಂದೋಲನದ ನೀಲನಕ್ಷೆಯನ್ನು ತಯಾರಿಸುವ ಕಾರ‍್ಯಾಗಾರವಾಗಿ ರೂಪಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುತುವರ್ಜಿವಹಿಸಿಲ್ಲ. ದೇವನೂರರ ಆಶಯ ಆದ್ಯತೆ ಪಡೆದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಹಾಗಾದರೆ ಮುಂದೇನು? 

   ಮಾತೃಭಾಷಾ ಮಾಧ್ಯಮ ಹಾಗೂ ಸಮಾನ ಶಿಕ್ಷಣ ನೀತಿ ಜಾರಿ ಬರುವವರೆಗೆ ಇನ್ನೊಂದು ಸಮ್ಮೇಳನ ನಡೆಸುವುದಿಲ್ಲವೆಂದೂ ಸಮ್ಮೇಳನ ಮುಗಿದ ಮಾರನೆಯ ದಿನದಿಂದಲೇ ಕರ್ನಾಟಕದ ಸಾಂಸ್ಕತಿಕ ಲೋಕದ ಒಡನಾಟದಲ್ಲಿ ರೂಪು ರೇಷೆಗಳನ್ನು ಸಿದ್ಧಪಡಿಸಿ ಜನಾಂದೋಲನವನ್ನು ಆರಂಭಿಸುವ ಏಕೈಕ ನಿರ್ಣಯವನ್ನು ಪರಿಷತ್ತು ತೆಗೆದುಕೊಳ್ಳಬಹುದೇ? ಹಾಗೆ ಪರಿಷತ್ತು ತೀರ್ಮಾನಿಸದಿದ್ದರೆ ಕರ್ನಾಟಕದ ಸಾಂಸ್ಕೃತಿಕ ಲೋಕ ಒಟ್ಟಾಗಿ ಪರಿಷತ್ತಿನ ಕಣ್ಣೊರೆಸುವ ತಂತ್ರವನ್ನು ಧಿಕ್ಕರಿಸಿ ಜನಾಂದೋಲನಕ್ಕೆ ಚಾಲನೆ ನೀಡೀತೇ? ಅಥವಾ ದೇವನೂರು ಮಹದೇವ ಬೆಳಗಿಸಿದ ಆತ್ಮ ಸಾಕ್ಷಿಯ ದೀಪ ಆರಿ ಹೋದೀತೇ?
                                       

ಕಾಮೆಂಟ್‌ಗಳಿಲ್ಲ: