ಕಾರ ಹುಣ್ಣಿಮೆ ಬಿಸಿ ಬೇಸಿಗೆ ಕಳೆದು ಮುಂಗಾರು ಹೊಸ್ತಿಲಿಗೆ ತಂದ ಹಬ್ಬ. ಮುಂಗಾರು ಆರಂಭದ ರೈತರ ಮೊದಲ ಹಬ್ಬ ಕಾರ ಹುಣ್ಣಿಮೆ. ಇದಾದ ನಂತರ ಪ್ರತಿ ಅಮಾವಾಸ್ಯೆಗೊಂದು ಹಬ್ಬಗಳ ಸಾಲು ಸಾಲು ಶುರುವಾಗುತ್ತವೆ. ಕಾರ ಹುಣ್ಣಿಮೆಗೂ ಮುನ್ನ ಬಿಸಿಲಿಗೆ ಬಾಯ್ದೆರೆದ ನೆಲವನ್ನು ಉತ್ತು ಹದ ಮಾಡಿದ ಎತ್ತುಗಳಿಗೆ ವಿಶ್ರಾಂತಿ ನೀಡುವ ಹಬ್ಬ.
ಹೈದರಾಬಾದ್ ಕರ್ನಾಟಕದಲ್ಲಿ ನೆತ್ತಿ ಸುಡುವ ಬಿರು ಬಿಸಿಲಿನ ಅಬ್ಬರ. ಇಂಥ ಸಂದರ್ಭಗಳಲ್ಲಿ ರಾಸುಗಳು ಅಷ್ಟೇ ಅಲ್ಲ ಮನುಷ್ಯರು ಕೂಡಾ ನೀರಿಗಾಗಿ ಹೈರಾಣಾಗುವ ಸ್ಥಿತಿ. ಕಾರ ಹುಣ್ಣಿಮೆಯ ಅಬ್ಬರದ ಬಿರು ಬಿಸಿಲಿನ ಸಮಯವನ್ನು ನೆನೆಪಿಸಿಕೊಳ್ಳುವ ವರ್ತಮಾನ ಕಾಲ. ಇಂಥ ಸಮಯದಲ್ಲಿ ಕಾರ ಹುಣ್ಣಿಮೆ ಸಂಭ್ರಮವನ್ನು ಮಾಡುವ ಮೂಲಕ ಈ ಭಾಗದ ರೈತ ವಲಯ ಖುಷಿ ಪಡುತ್ತದೆ. ಬಾಣಲೆಯಂಥ ನೆತ್ತಿ ಸುಡುವ ಬಿಸಿಲಿನಲ್ಲಿ ಅನ್ನದಾತನೊಂದಿಗೆ ದುಡಿಯುವ ಈ ಜೀವಗಳಿಗೆ ಧನ್ಯವಾದ ನೀಡಲು ಆಚರಿಸುವ ಸಂಭ್ರಮದ ಹಬ್ಬವಿದು. ರಾಸುಗಳಿಗೆ ಸ್ನಾನ ಮಾಡಿಸಿ ಔಷಧ ಗುಣಗಳುಳ್ಳ ಘೊಟ್ಟ ಕುಡಿಸಿ, ಬಣ್ಣ ಬಳಿದು, ಅಲಂಕಾರ ಮಾಡಿ ಓಡಿಸಿ ಖುಷಿ ಪಡುವ ಮೂಲಕ ರೈತ ಖುಷಿ ಪಡುತ್ತಾನೆ.
ಹೈದರಾಬಾದ್ ಕರ್ನಾಟಕದ ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ ಸೇರಿದಂತೆ ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಪ್ರತಿ ರೈತನ ಮನೆಯಲ್ಲಿ ಅಂದು ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಖಾದ್ಯಗಳನ್ನು ಮಾಡಿ ಭಕ್ತಿ ಸಮರ್ಪಣೆ ಮಾಡುವ ಮೂಲಕ ತಮ್ಮ ಬದುಕಿನ ಉದ್ದಕ್ಕೂ ಕಷ್ಟ ಸುಖಗಳಲ್ಲಿ ಭಾಗಿಯಾಗುವ ರಾಸುಗಳಿಗೆ ನಮಸ್ಕರಿಸುತ್ತಾರೆ. ಬಂಡಿ, ಚಕ್ಕಡಿಗಳನ್ನು ಎತ್ತುಗಳಿಗೆ ಕಟ್ಟಿ ಓಡಿಸುವ ಮೂಲಕ ಸಂಭ್ರಮಿಸುತ್ತಾರೆ.
ಬೀದಿಗಳಲ್ಲಿ ಹಬ್ಬದ ವಾತಾವರಣಕ್ಕೆ ಕಳೆ ಕಟ್ಟುವಂತೆ ಎತ್ತುಗಳ ಅಂದ, ಚಂದದ ಶೃಂಗಾರಕ್ಕೆ ಬೇಕಾಗುವ ವಿವಿಧ ಬಣ್ಣಗಳ ಬಾಸಿಂಗ, ಜತ್ತಿಗೆ, ಹಣೆಕಟ್ಟುಗಳು, ಹಗ್ಗ, ಬಾರಕೋಲು, ಕೊಬ್ಬರಿ, ಗೊಂಡೆ, ಗಾಜುಮಣಿ, ಮಿಂಚು, ಬಣ್ಣ, ಕೊಣಸುಗಳಿಂದ ಎತ್ತುಗಳನ್ನು ಶೃಂಗಾರ ಮಾಡಿ ಸಿಂಗರಿಸಲಾಗುತ್ತದೆ.ಹುಣ್ಣಿಮೆ ದಿನ ಜೋಡೆತ್ತುಗಳನ್ನು ಅಲಂಕಾರ ಮಾಡಿ ಊರಿನ ಪ್ರಮುಖ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಗುತ್ತದೆ. ನಂತರ ರಾಸುಗಳನ್ನು ಓಡಿಸುವ ಸ್ಪರ್ಧೆ ನಡೆಸಲಾಗುತ್ತದೆ. ವೇಗವಾಗಿ ಓಡುವ ರಾಸುಗಳಿಗೆ ಬಹುಮಾನ ನೀಡುವ ಪದ್ಧತಿಯೂ ಇದೆ.
ಇದೆಲ್ಲ ಎತ್ತುಗಳಿಗೆ `ವಾರ್ಮ್ ಅಪ್~ ಮಾಡುವ ಕ್ರಿಯೆ. ಋತು ಬದಲಾವಣೆಯ ಈ ಕಾಲದಲ್ಲಿ ಕಾಲುಗಳು, ಹಾಗೂ ಸ್ನಾಯುಗಳಿಗೆ ಬಲವರ್ಧನೆ ಮಾಡುವಂಥ ಔಷಧಯುಕ್ತ ಘೊಟ್ಟವನ್ನೂ ನೀಡಲಾಗುತ್ತದೆ. ಅಳವಿ, ಅರಿಶಿಣ ಮುಂತಾದ ಮಸಾಲೆಯುಕ್ತ ಔಷಧಿಯದು.
ಮುಂಗಾರು ಬರುವ ಮುಂಚೆಯೇ ಹೊಲದಲ್ಲಿ ಉಳುಮೆ ಮಾಡಿ ಹೈರಾಣಾದ ಎತ್ತುಗಳಿಗೆ ಪುನಃಶ್ಚೇತನ ನೀಡುವ ಹಬ್ಬ ಇದು. ರೈತರಿಗೂ ಈ ಹಬ್ಬದ ಆಚರಣೆ ಮನಕ್ಕೆ ಮುದ ಕೊಡುತ್ತದೆ. ರೈತರು ಕುಣಿದು ಕುಪ್ಪಳಿಸಿ ಸಂಭ್ರಮ ಪಡುತ್ತಾರೆ.ಸಿಹಿಯಾದ ಹೋಳಿಗೆ, ಪಾಯಸ ಖಾದ್ಯಗಳನ್ನು ಮಾಡಿ ಜೋಡೆತ್ತುಗಳಿಗೆ ಪೂಜಿಸಿ ನೈವೇದ್ಯ ಸಮರ್ಪಣೆ ಮಾಡಲಾಗುತ್ತದೆ. ಇದೆಲ್ಲವೂ ಜೋಡಿ ನಂದಿಗೆ ಕೃತಜ್ಞರಾಗಿರುವ ಪರಿ. ಕುಟುಂಬದ ಸದಸ್ಯರೆಲ್ಲ ಜೊತೆಗೂಡಿ ಊಟ ಸವಿಯುವ ಸಂಪ್ರದಾಯ ರೈತರಲ್ಲಿ ಬೆಳೆದು ಬಂದಿದೆ.
ಸಕಾಲದಲ್ಲಿ ಆಗದ ಮಳೆರಾಯ, ಕೈ ಕೊಟ್ಟ ಬೆಳೆ, ಹೆಚ್ಚಿದ ಬೆಲೆ ಇ್ದ್ದದಾಗಲೂ ರೈತರು ವಿಜೃಂಭಣೆಯಿಂದ ಕಾರ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ.ಎತ್ತುಗಳನ್ನು ಅಲಂಕಾರ ಮಾಡಿ ಖುಷಿ ಪಡುವ ರೈತರಿಗೆ ಹುಣ್ಣಿಮೆಯಲ್ಲಿ ಪ್ರವೇಶ ಮಾಡುವ ಮೃಗಶಿರಾ ಮಳೆ ರೈತರ ಹೊಲಗಳನ್ನು ಉತ್ತು ಬಿತ್ತುವ ಚಟುವಟಿಕೆಗೆ ಹಸಿರು ನಿಶಾನೆ ನೀಡುತ್ತದೆ. ಕಾರ ಹುಣ್ಣಿಮೆ ಆಚರಣೆ ಉತ್ತರ ಕರ್ನಾಟಕದ ರೈತರ ನೈಜ ಆಚರಣೆಗೆ ಜೀವಂತಿಕೆ ನೀಡುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ.
ಕೃಪೆ:ಪ್ರಜಾವಾಣಿ ಲೇಖನ: ರಾಸು ಶೃಂಗಾರದ ಕಾರ ಹುಣ್ಣಿಮೆ
Sun, 06/10/2012
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ