ಮಂಗಳವಾರ, ಜೂನ್ 21, 2016

ಇಂಗ್ಲಿಷ್ ಮತ್ತು ಜನನುಡಿಗಳ ಸೆಣಸಾಟದ ಕಥನಗಳು

-ರಂಗನಾಥ ಕಂಟನಕುಂಟೆ


“ನಿನ್ನ ಕಣ್ಣೀರು ನನ್ನ ಕಣ್ಣೀರು
ಕಣ್ಣೀರ ಹಿಂದಿನ ಕಥೆಯೂ ಒಂದೇ
ಒಂಟಿಯಾಗಿ ಕಣ್ಣೀರಿಡುವ
ನನ್ನ ಚಿಕ್ಕ ತಂಗ್ಯಮ್ಮ”
tenkananudi

ಎಂಬ ಮಹಿಳಾ ಹೋರಾಟದ ಹಾಡಿದೆ. ಇದು ಒಂದು ಹೆಣ್ಣು ಮತ್ತೊಂದು ಹೆಣ್ಣಿಗೆ ಸಮಾಧಾನ ಹೇಳುವ ದಾಟಿಯಲ್ಲಿದೆ. ಇಲ್ಲಿ ಸಾಂತ್ವನ ಹೇಳುವ ಮತ್ತು ಕೇಳಿಸಿಕೊಳ್ಳುವ ಇಬ್ಬರೂ ಹೆಣ್ಣುಗಳು ಒಂದೇ ಬಗೆಯ ಕಾರಣಗಳಿಂದ ನೋವಿಗೆ ಒಳಗಾಗಿರುವ ಇಂಗಿತವಿದೆ. ಇಬ್ಬರ ನೋವಿನ ನೆಲೆ ಸ್ಥಾಯಿಯಾಗಿದ್ದು ಸಮಾನವಾಗಿರುವುದು ತಿಳಿಯುತ್ತದೆ. ಹೆಣ್ಣಿನ ನೋವಿನ ಈ ನೆಲೆ ನಮ್ಮ ದೇಶದ, ಇಡೀ ಜಗತ್ತಿನ ಎಲ್ಲ ದೇಶಗಳ ಮಹಿಳೆಯರ ಸಂಕಟದ ನೆಲೆಯು ಒಂದೇ ಆಗಿದೆ. ಇದರಲ್ಲಿ ಕೊಂಚ ಏರುಪೇರಿದ್ದರೂ ಒಟ್ಟಾರೆ ಮಹಿಳೆಯರ ನೋವಿನ, ಅವರ ಮೇಲಿನ ಹಿಂಸೆಯ ನೆಲೆಗಳು ಒಂದೇ ಆಗಿರುವುದನ್ನು ಮೇಲಿನ ಹಾಡು ತಿಳಿಸುತ್ತದೆ.

ಇದು ಮಹಿಳೆಯರ ವಿಚಾರದಲ್ಲಿ ಎಷ್ಟು ನಿಜವೋ ಭಾರತೀಯ ಮತ್ತು ಆಫ್ರಿಕಾದ ಜನಭಾಷೆಗಳ ವಿಚಾರದಲ್ಲಿಯೂ ಅಷ್ಟೇ ನಿಜ. ‘ಹೆಣ್ಣಿನ ಕಣ್ಣೀರಿನ ಹಿಂದಿನ ಕಾರಣಗಳ ಕಥೆ’ ಒಂದೇ ಆಗಿರುವಂತೆ, ಇಂಗ್ಲಿಷ್ ಎದುರು ಸೆಣಸಾಡುತ್ತಿರುವ ಎಲ್ಲ ಜನಭಾಷೆಗಳ ಕಣ್ಣೀರಿನ ಕಥೆಯೂ ಒಂದೇ ಆಗಿದೆ. ಹಾಗೆ ಒಂದೇ ಆಗಿರುವುದನ್ನು ಇದುವರೆಗೆ ನಡೆದಿರುವ ಹಲವು ಅಧ್ಯಯನಗಳೂ ತೋರಿಸಿಕೊಟ್ಟಿವೆ. ಅಂತಹ ಅಧ್ಯಯನಗಳ ಕುರುಹಾಗಿ ಡಾ. ಮೇಟಿ ಮಲ್ಲಿಕಾರ್ಜುನ ಸಂಪಾದಿಸಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಹೊರತಂದಿರುವ ‘ತೆಂಕಣದ ನುಡಿಗಳು ಮತ್ತು ಇಂಗ್ಲಿಷ್’ ಎಂಬ ಕೃತಿ ಈಚೆಗೆ ಪ್ರಕಟವಾಗಿದೆ.

ಇದು ತೆಂಕಣ ಭಾರತದ ನುಡಿಗಳನ್ನು ಒಳಗೊಂಡಂತೆ ಇಡೀ ಭಾರತದ ಎಲ್ಲ ನುಡಿಗಳು ಇಂಗ್ಲಿಷ್ ಎದುರು ನರಳುವ ಕಥೆಯನ್ನೇ ತೆರೆದಿಡುತ್ತಿದೆ. ಮಹಿಳೆಯರ ಸಂಕಟಗಳಂತೆ ಭಾರತದ ಜನಭಾಷೆಗಳ ಸಂಕಟದ ಕಥೆಯೂ ಒಂದೇ ಆಗಿರುವುದನ್ನೂ ಇಲ್ಲಿ ನಿರೂಪಿತವಾಗಿದೆ. ಹೆಣ್ಣು, ಹೆಣ್ಣಿನ ನುಡಿಯು ತುಳಿತಕ್ಕೆ ಒಳಗಾದಂತೆ ಜನಸಮುದಾಯಗಳ ನುಡಿಗಳು ತುಳಿತಕ್ಕೆ ಒಳಗಾಗಿರುವುದನ್ನು ಈ ಕ್ರುತಿ ತೋರಿಸಿಕೊಟ್ಟಿದೆ.

  ಈ ಕ್ರುತಿಯು ತೆಂಕಣ ಭಾರತದ ನುಡಿಗಳು ಇಂಗ್ಲಿಷ್‍ನ ಪ್ರಾಬಲ್ಯದಿಂದ ಎದುರಿಸುತ್ತ್ತಿರುವ ಬೇರೆ ಬೇರೆ ಸವಾಲುಗಳನ್ನು ಚಾರಿತ್ರಿಕವಾಗಿ ಪರಿಶೀಲಿಸಿದೆ. ಮುಖ್ಯವಾಗಿ ಇಂಗ್ಲಿಷ್‍ನ ಎದುರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ತುಳು ಭಾಷೆಗಳು ಎದುರಿಸುತ್ತಿರುವ ಸವಾಲುಗಳನ್ನು ನಿರೂಪಿಸುವ ಕೆಲಸ ಮಾಡಿದೆ. ಇಂಗ್ಲಿಷ್ ಎದುರು ದೇಸೀನುಡಿಗಳು ಸೊರಗಿರುವ, ಸೆಣೆಸಿರುವ ಮತ್ತು ಹೊಂದಾಣಿಕೆ ಮಾಡಿಕೊಂಡಿರುವ ಬಗೆಗಳನ್ನು ಗುರುತಿಸಿದೆ. ಕನ್ನಡದ ಆತಂಕಗಳ ಬಗೆಗೆ ಕೆ. ವಿ. ನಾರಾಯಣ, ಮೇಟಿ ಮಲ್ಲಿಕಾರ್ಜುನ, ಕಿರಣ್ ಕುಮಾರ್, ತಮಿಳಿನ ಬಗೆಗೆ ಖ್ಯಾತ ಭಾಷಾವಿಜ್ಞಾನಿಗಳಾದ ಇ. ಅಣ್ಣಾಮಲೈ, ಎಲ್. ರಾಮಮೂರ್ತಿ, ತುಳು ಬಗೆಗೆ ದುರ್ಗಾಪ್ರವೀಣ್, ತೆಲುಗು ಬಗೆಗೆ ಗಾರಪಾಟಿ ಉಮಾಮಹೇಶ್ವರ್ ರಾವ್, ಅಯಿನವೋಲು ಉಷಾದೇವಿ, ಮಲಯಾಳಂ ಬಗೆಗೆ ಎ. ಶ್ರೀಕುಮಾರ್ ಮತ್ತು ಎ. ಪಿ. ಆಂಡ್ರ್ಯೂಕುಟಿ ಲೇಖನಗಳನ್ನು ಬರೆದಿದ್ದಾರೆ. ತೆಂಕಣದ ಬೇರೆ ಬೇರೆ ಭಾಷೆಗಳಲ್ಲಿ ಬರೆದ ಲೇಖನಗಳನ್ನು ಅಚ್ಚುಕಟ್ಟಾಗಿ ಅನುವಾದಿಸಿ ಪ್ರಕಟಿಸಲಾಗಿದೆ.

ಈ ಕ್ರುತಿಗೆ ತೆಂಕಣ ಭಾರತದ ನುಡಿಗಳು ಇಂಗ್ಲಿಷ್‍ನ ಜೊತೆಗೆ ನಡೆಸಿರುವ ಸೆಣಸಾಟದ ನಂಟನ್ನು ಶೋಧಿಸುವ ಸಾಮಾನ್ಯ ಆಶಯವಿದೆ. ಅಂತಹ ಆಶಯವನ್ನು ಇಟ್ಟುಕೊಂಡೇ ವಸಾಹತುಶಾಹಿ ಭಾಷಾ ರಾಜಕಾರಣದ ಹಲವು ಮಗ್ಗುಲುಗಳನ್ನು ಗುರುತಿಸಿದೆ. ಇದರಿಂದ ಕಳೆದ ಇನ್ನೂರು ವರುಶಗಳಲ್ಲಿ ಭಾರತದಲ್ಲಿ ಇಂಗ್ಲಿಷ್ ನುಡಿಯಾಗಿ ಬೆಳೆದು ಬರದೆ ಅದು ವಸಾಹತುಶಾಹಿ ರಾಜಕಾರಣದ ಒಂದು ಆಯುಧವಾಗಿ ಬೆಳೆದು ಬಂದಿರುವುದು ತಿಳಿಯುತ್ತದೆ. ಈ ದೃಷ್ಟಿಯಿಂದ ನೋಡಿದರೆ ಭಾರತದ ಯಾವುದೇ ನುಡಿ ಎದುರಿಸುತ್ತಿರುವ ಸವಾಲನ್ನು ಕುರಿತು ಅಧ್ಯಯನ ನಡೆಸಿದರೆ ಸಾಕು; ಅದು ಇತರೆ ನುಡಿಗಳಿಗೂ ಸಮನಾಗಿ ಹೊಂದಿಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ಭಾರತೀಯ ಭಾಷೆಗಳ ಸವಾಲುಗಳು ಸಮಸ್ಯೆಗಳು ಸಮನಾಗಿವೆ.

ಮೇಲೆ ಹೇಳಿದಂತೆ ಇಂಗ್ಲಿಷ್ ಕೇವಲ ಒಂದು ಭಾಷೆಯಲ್ಲ. ಅದು ವಸಾಹತುಶಾಹಿಗಳ ಒಂದು ಆಯುಧ. ಮತ್ತು ಅದು ಇಂದಿನ ಮಾರುಕಟ್ಟೆ ಕೇಂದ್ರಿತ ಜಾಗತೀಕರಣದ ಪ್ರಬಲ ಆಯುಧವಾಗಿ ಮತ್ತೂ ಮುಂದುವರೆದಿರುವುದು ತಿಳಿಯುತ್ತದೆ. ಇಂಗ್ಲಿಷ್ ಬಗೆಗೆ ಈಗಾಗಲೇ ಇದ್ದ ಈ ನಂಬಿಕೆಯನ್ನು ಇದು ಇದು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇಂತಹ ಆಯುಧದ ದಾಳಿಯ ಪರಿಣಾಮವಾಗಿ ತೆಂಕಣ ಭಾರತದ ನುಡಿಗಳೂ ಇಂಗ್ಲಿಷ್ ಜೊತೆಗೆ ಸೆಣಸುತ್ತ ಸೊರಗುತ್ತ ಪರದಾಡುತ್ತಲೇ ಬೆಳೆದು ಬರುತ್ತಿರುವುದನ್ನು, ಇಂಗ್ಲಿಷ್‍ನ ಯಜಮಾನಿಕೆಯನ್ನು ದೃಢಪಡಿಸುತ್ತದೆ. ವಸಾಹತುಶಾಹಿ ಆಗಮಿಸಿ ಭಾರತವನ್ನು ಹಿಡಿತಕ್ಕೆ ತೆಗೆದುಕೊಂಡ ಆರಂಭದ ದಿನಗಳಲ್ಲಿ ವಿದೇಶಿ ವಿದ್ವಾಂಸರು ದೇಸೀನುಡಿಗಳ ಬೆಳವಣಿಗೆಗೆ ನೆರವಾಗಿದ್ದಾರೆ. ಇದು ವಸಾಹತುಶಾಹಿಯು ಸ್ಥಳೀಯ ಸಮುದಾಯಗಳನ್ನು ಅರಿತು ಅವುಗಳನ್ನು ನಿಯಂತ್ರಿಸುವ ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡಿರುವ ಸಂಗತಿಯನ್ನು ಇಲ್ಲಿನ ಲೇಖನಗಳು ತಿಳಿಸುತ್ತವೆ. ಇದು ವಿದೇಶಿ ವಿದ್ವಾಂಸರು ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿರುವುದು ದಿಟವಾದರು ವಸಾಹತುಶಾಹಿ ಭಾಷಿಕ ರಾಜಕಾರಣ ಅದನ್ನು ಸಂಶಯಿಸುವಂತೆ ಮಾಡುತ್ತದೆ.

ಅಲ್ಲದೆ ಇಲ್ಲಿ ತಿಳಿಯುವ ಇನ್ನೊಂದು ವಿಚಾರವೆಂದರೆ ಜಾಗತೀಕರಣದ ಈ ದಿನಗಳಲ್ಲಿ ಲಾಭದಾಹಿ ಮಾರುಕಟ್ಟೆಯ ಪ್ರಾಬಲ್ಯವು ತನ್ನ ಸಂವಹನದ ಭಾಷೆಯಾದ ಇಂಗ್ಲಿಷ್‍ನ ಪ್ರಭಾವವನ್ನು ವ್ಯಾಪಕವಾಗಿ ಹೆಚ್ಚಿಸಿರುವುದು. ಇತರೆ ಅನುಭೋಗಿ ಸರಕುಗಳ ಬೇಡಿಕೆಯನ್ನು ಹೆಚ್ಚಿಸಿದಂತೆ ಇಂಗ್ಲಿಷ್‍ಅನ್ನು ಒಂದು ಸರಕಾಗಿಸಿ ಅದರ ಬೇಡಿಕೆಯನ್ನು ಹೆಚ್ಚಿಸಿರುವುದು. ನೇರ ವಸಾಹತುಶಾಹಿಯ ಕಾಲದಲ್ಲಿ ಇಂಗ್ಲಿಷ್‍ಗೆ ಇದ್ದ ಬೇಡಿಕೆಗಿಂತ ಹೆಚ್ಚು ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವುದು. ಅಂದು ಸಮುದಾಯದ ಕೆಲವರು ಇಂಗ್ಲಿಷ್ ಕಲಿಕೆಯ ಬಗೆಗೆ ಆಸಕ್ತಿ ತೋರಿಸುತ್ತಿದ್ದರೆ ಇಂದು ದೇಶದ ಬಹುಸಂಖ್ಯಾತ ಸಮಾಜವೇ ಇಂಗ್ಲಿಷ್ ಕಲಿಕೆಯ ಬೇಡಿಕೆಯನ್ನು ಮುಂದಿಡುತ್ತಿರುವುದು. ಇಎಲ್ ಟಿಯಂತಹ ಕೋರ್ಸುಗಳ ಮಾರಾಟ ವಹಿವಾಟು ಹಲವು ಬಿಲಿಯನ್‍ಗಳ ಮೊತ್ತವನ್ನು ದಾಟಿರುವುದು. ಇಂತಹ ಬೇಡಿಕೆಯನ್ನು ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಕಂಡುಬರುವುದನ್ನು ಕೃತಿಯು ತೆರೆದಿಟ್ಟಿದೆ. ಇದು ತೆಂಕಣ ನುಡಿಗಳು ಮತ್ತು ಇಂಗ್ಲಿಷ್ ಸಂಬಂಧವು ಒಂದೇ ಬಗೆಯಾಗಿರುವುದನ್ನು ಇಲ್ಲಿ ಗುರುತಿಸಲಾಗಿದೆ.

ಅಲ್ಲದೆ ಇದುವರೆಗೂ ಯಾವುದನ್ನು ಕನ್ನಡದ ಸಮಸ್ಯೆ ಮಾತ್ರವೆಂದು ಚರ್ಚಿಸಲಾಗುತ್ತಿತ್ತೋ ಅದನ್ನು ಈ ಕೃತಿಯು ಸುಳ್ಳಾಗಿಸುತ್ತದೆ. ಬದಲಿಗೆ ಕನ್ನಡದಂತೆಯೇ ತೆಂಕಣದ ನುಡಿಗಳು ಅದೇ ಸಮಸ್ಯೆಗಳನ್ನು ಎದುರಿಸುತ್ತಿರುವುದು ತಿಳಿದು ಬರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ನುಡಿಗಳೂ ಒಂದೇ ಬಗೆಯ ಸಮಸ್ಯೆಯನ್ನು ಎದುರಿಸುತ್ತಿರುವುದು ಖಚಿತವಾಗುತ್ತದೆ. ಎಲ್ಲ ನುಡಿಗರಿಗೂ ಇಂಗ್ಲಿಷ್ ಲಾಭದ, ಸಾಮಾಜಿಕ ಮುಂಚಲನೆಯ ನುಡಿಯಾಗಿಯೇ ಕಾಣಿಸಿಕೊಂಡಿದ್ದು ಇಂಗ್ಲಿಷ್‍ನ ಬೇಡಿಕೆ ಹೆಚ್ಚಿರುವುದನ್ನು ತೋರಿಸಿಕೊಟ್ಟಿವೆ. ಜಾಗತಿಕ ಮಾರುಕಟ್ಟೆ ಹೇರಿರುವ ಒತ್ತಡವು ಕನ್ನಡದ ಮೇಲೆ ಮಾತ್ರವಲ್ಲದೆ ಎಲ್ಲ ನುಡಿಗಳ ಮೇಲೆ ಬಿದ್ದಿರುವುದು ತಿಳಿಯುತ್ತದೆ. ಮತ್ತು ಇದರಿಂದ ಬಿಡುಗಡೆಗೊಳ್ಳುವ ಸುಲಭದ ದಾರಿಗಳೂ ಇಲ್ಲದೆ ಪರದಾಡುತ್ತಿರುವುದು ನಿಚ್ಚಳವಾಗಿ ಕಂಡುಬರುತ್ತದೆ.

ಇದು ಎಲ್ಲ ಭಾರತೀಯ ಭಾಷೆಗಳ ವಿಚಾರದಲ್ಲಿಯೂ ದಿಟವಾಗಿದೆ. ಇದುವರೆಗೂ ತಮಿಳರ ತಮಿಳು ಅಭಿಮಾನದ ಮಿತ್ ಬಗೆಗೆ ಹೇರಳವಾಗಿ ಮಾತನಾಡಿದರೂ ಇಂದು ತಮಿಳು ಮಾಧ್ಯಮ ಶಾಲೆಗಳಿಗಿಂತ ಹೆಚ್ಚು ಇಂಗ್ಲಿಷ್ ಮಾಧ್ಯಮ ಶಾಲೆಗಳು ತಮಿಳುನಾಡಿನಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವುದನ್ನು ತೋರಿಸಿಕೊಟ್ಟಿದೆ. ಜಾಗತೀಕರಣದ ಈ ದಿನಗಳಲ್ಲಿ ತಮಿಳರ `ತಮಿಳು ಅಭಿಮಾನ’ವು ಕುಸಿಯುತ್ತಿರುವುದು ಇದರಿಂದ ತಿಳಿಯುತ್ತದೆ. ಇದು ನುಡಿ ಮತ್ತು ರಾಷ್ಟ್ರೀಯತೆಯ ಚಿಂತನೆಗಳು ಸಿಡಿದುಹೋಗಲು ಕಾರಣವಾಗಿರುವುದನ್ನು ಸೂಚ್ಯವಾಗಿ ತಿಳಿಸುತ್ತವೆ.

   ಸಮುದಾಯಗಳಿಗೆ ಇದ್ದ ನುಡಿಯ ಮೇಲಿನ ಅಭಿಮಾನವು ಕುಸಿದು ಇಂಗ್ಲಿಷ್ ಕಲಿಕೆ ಬಗೆಗೆ ವಿಪರೀತ ಬೇಡಿಕೆ ಹುಟ್ಟಿಕೊಂಡಿದೆ. ಈ ಹೊತ್ತಿನಲ್ಲಿ ಅದನ್ನು ಇತರೆ ಸರಕುಗಳಂತೆಯೇ ಖರೀದಿಸದಿದ್ದರೆ ವ್ಯಕ್ತಿ ಮತ್ತು ಸಮಾಜ ಅಭಿವೃದ್ದಿಯನ್ನು ಸಾಧಿಸಲು ಸಾಧ್ಯವಿಲ್ಲ; ಇಂಗ್ಲಿಷ್ ಕಲಿಯದಿರುವುದು ಎಲ್ಲ ಬಗೆಯ ಹಿಂದುಳಿವಿಕೆ ಕಾರಣವಾಗುತ್ತದೆ ಎಂಬ ಭೀತಿ ಎಲ್ಲ ಸಮಾಜದಲ್ಲಿರುವುದನ್ನು ಇದು ತೋರಿಸಿಕೊಡುತ್ತದೆ. ಇಂತಹ ಭೀತಿಯ ಪರಿಣಾಮವಾಗಿ ನೂರು, ಸಾವಿರ, ಹತ್ತು ಸಾವಿರ ಜನರು ಮಾತನಾಡುವ ನುಡಿಗಳಿಂದ ಹಿಡಿದು ಹಲವು ಕೋಟಿ ಜನರು ಮಾತನಾಡುವ ಕನ್ನಡ, ತಮಿಳು, ತೆಲುಗು, ಬಂಗಾಳಿ, ಸ್ವಾಹಿಲಿ, ಗೀಕೂಯುನಂತಹ ಭಾಷೆಗಳನ್ನು ಬಳಸುವ ನುಡಿಸಮುದಾಯಗಳು ತೀವ್ರವಾದ ಆತಂಕವನ್ನು ಎದುರಿಸುವಂತಾಗಿದೆ. ತಮ್ಮ ಭಾಷೆಗಳು ಮುಂದಿನ ದಿನಗಳಲ್ಲಿ ನಶಿಸಿಹೋಗಬಹುದು ಎಂದು ಒಂದು ವರ್ಗ ಆತಂಕಿತಗೊಳ್ಳುವಷ್ಟರ ಮಟ್ಟಿಗೆ ತೀವ್ರವಾಗಿದೆ. ಮೇಲಿನ ಹಾಡಿನ ಆಶಯದಂತೆ ಭಾರತದಲ್ಲಿ, ಆಫ್ರಿಕಾದಲ್ಲಿ ಎಲ್ಲ ಜನನುಡಿಗಳ ಆತಂಕಗಳು; ಹೆಣ್ಣಿನ ನೋವಿನ ಸಮಾನ ಕಾರಣಗಳಂತೆಯೇ ಇರುವುದು ಇಲ್ಲಿ ತಿಳಿಯುತ್ತದೆ.

ಇದಲ್ಲದೆ ಕ್ರುತಿಯು ಇಂಗ್ಲಿಷ್‍ನ ವರ್ಗಸ್ವಭಾವ, ಇಂಗ್ಲಿಷ್ ಭಾಷಾಬೋಧನೆಯಲ್ಲಿರುವ ದೋಷಗಳು, ಇಂಗ್ಲಿಷ್‍ಅನ್ನು ಕಲಿಸಲು ತಾಯ್ನುಡಿಗಳ ಅಗತ್ಯ ನೆರವು. ಎಲ್ಲರಿಗೂ ಇಂಗ್ಲಿಷ್‍ಅನ್ನು ಕಲಿಸಲು ಬೇಕಾದ ಸಂಪನ್ಮೂಲವೇ ದೇಶದಲ್ಲಿ ಇಲ್ಲದಿರುವುದು, ತರಗತಿಗಳಲ್ಲಿ ದ್ವಿಭಾಷಾ ಬೋಧನಾ ವಿಧಾನದ ಅಳವಡಿಕೆ ಅಗತ್ಯ. ಇಂಗ್ಗಿಷ್‍ನ ಭಾರತೀಕರಣದ ಚರ್ಚೆಗಳ ಮುಖಾಮುಖಿ ಹೀಗೆ ಹಲವು ಸಂಗತಿಗಳ ಸುತ್ತ ಚರ್ಚೆಯನ್ನು ಬೆಳೆಸಿವೆ. ಒಟ್ಟಾರೆ ಜನಭಾಷೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ತೆರೆದಿಡುವುದರಿಂದ ಈ ಬಗೆಗೆ ತಿಳಿಯಲು ಬಯಸುವವರಿಗೆ ಅಗತ್ಯ ನೆರವು ನೀಡುವ ಕೃತಿಯಿದು. ಹಾಗಾಗಿ ನುಡಿಯ ಬಗೆಗೆ ಆಸಕ್ತಿಯುಳ್ಳವರಿಗೆ ಉಪಯುಕ್ತ ಹೊತ್ತಗೆಯಿದು.

ಕೊನೆಗೆ ಒಂದು ಮಾತು. ಒಟ್ಟಾರೆ ಕೃತಿಯನ್ನು ಅವಲೋಕಿಸಿದಾಗ ಕೃತಿ ಸಂಯೋಜನೆಗೆ ಇರಿಸಿಕೊಂಡ ವಿಧಾನದ ಪರಿಣಾಮವಾಗಿ ವಿಚಾರಗಳ ಪುನರಾವರ್ತನೆಯ ಸಮಸ್ಯೆ ಕಾಡಿಸಿದೆ. ಒಂದೇ ಬಗೆಯ ಕೇಳ್ವಿಗಳೊಂದಿಗೆ ಎಲ್ಲ ತೆಂಕಣ ನುಡಿಗಳ ಸಮಸ್ಯೆಗಳನ್ನು ಪರಿಶೀಲಸಿ ಇದನ್ನು ಸಿದ್ದಪಡಿಸಲು ಪ್ರಯತ್ನಿಸಿದ್ದರಿಂದ ಹಲವೆಡೆ ಒಂದೇ ವಿಚಾರ ಪುನರಾವರ್ತನೆಯಾಗಿದೆ. ಬೇರೆ ಬೇರೆಯ ಉದಾಹರಣೆಗಳಿಂದ ಒಂದೇ ವಿಷಯವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದಂತೆ ಕಾಣುತ್ತದೆ. ಬೇರೆ ಬೇರೆ ನುಡಿಗಳ ಲೇಖಕರು ಒಂದೇ ವಿಷಯದ ಬಗೆಗೆ ಬರೆದ ಕಾರಣ ಈ ಸಮಸ್ಯೆ ಉಂಟಾಗಿದೆ. ಆದರೂ ಇದರಲ್ಲಿ ತೀರ ವೈರುಧ್ಯಗಳಿಂದ ಕೂಡಿದ ಬರೆಹಗಳೇನೂ ಇಲ್ಲ. ಕಾರಣ ಎಲ್ಲ ನುಡಿಗಳ ಸಮಸ್ಯೆಗಳು ಒಂದೇ ಆದ ಕಾರಣ ಅವುಗಳ ಶೋಧನೆಯ ನೆಲೆಗಳು ಒಂದೇ ಆದ ಕಾರಣ ವಿರುದ್ಧ ನಿಲುವುಗಳು ಹುಟ್ಟಿಲ್ಲ. ಅಣ್ಣಮಲೈ, ಕೆ. ವಿ ನಾರಾಯಣ, ಮೇಟಿ ಮಲ್ಲಿಕಾರ್ಜುನ ಅವರು ತಾತ್ವಿಕವಾದ ಪ್ರಶ್ನೆಗಳನ್ನು ವಿಶ್ಲೇಷಿಸಿದರೆ; ತೆಲುಗು, ತುಳು ಮಲಯಾಳಂ, ತಮಿಳು ನುಡಿಗಳ ಕುರಿತಾದ ಲೇಖನಗಳು ಸಮೀಕ್ಷರೂಪದ ಬರೆಹಗಳು. ಈ ಬರೆಹಗಳು ಚಾರಿತ್ರಿಕ ನಿರೂಪಣೆ ಮತ್ತು ಭಾಷೆಯ ಸಮಸ್ಯೆಗಳನ್ನು ವಿವರಿಸಲು ಆರಿಸಿಕೊಂಡಿರುವ ತಾತ್ವಿಕತೆಯು ಒಂದೇ ಆಗಿರುವುದರಿಂದ ಇಂತಹ ಪುನರಾವರ್ತನೆಯ ಸಮಸ್ಯೆ ಎದುರಾಗಿದೆ. ಈ ಸಂಪುಟದಲ್ಲಿ ಇದನ್ನು ಸುಲಭವಾಗಿ ನಿವಾರಿಸಲು ಸಾಧ್ಯವಾಗದ ಸಮಸ್ಯೆಯು ಆಗಿದ್ದು ಇದನ್ನು ತಾಳಿಕೊಂಡೇ ಓದಬೇಕಾಗುತ್ತದೆ. ಕ್ರುತಿಯ ತಾತ್ವಿಕತೆಯ ಬಗೆಗೆ ಜನನುಡಿಗಳ ಬಗೆಗೆ ಕೊಂಚ ಕಾಳಜಿಯಿದ್ದವರಿಗೆ ಅಂತಹ ತಕರಾರುಗಳೇ ಹುಟ್ಟುವುದಿಲ್ಲ.

ಉಳಿದಂತೆ ಕೃತಿಯ ಆಶಯ ಕಾಳಜಿಗಳು ಕೇವಲ ಬೌದ್ಧಿಕ ಕಸರತ್ತಾಗಿರದೆ ಅದು ಸಮುದಾಯಗಳ ಪರವಾದ ಕಾಳಜಿಗಳಿಂದ ರೂಪುಗೊಂಡಿದೆ. ಕನ್ನಡದ ಸಂದರ್ಭದಲ್ಲಿ ಒಂದು ಮಾತು ಮತ್ತೆ ಮತ್ತೆ ಕೇಳಿಬರುತ್ತದೆ. ಅದೆಂದರೆ ಎಂತಹದೇ ಹೊಸ ವಿಚಾರಗಳು ಸಮಾಜದಲ್ಲಿ ಮೂಡಿಬಂದರೂ ಅವು ಶೈಕ್ಷಣಿಕ ವ್ಯವಸ್ಥೆಯ ಭಾಗವಾಗಿ, ಜನರ ವಿವೇಕವಾಗಿ, ಕ್ರಿಯಾಯೋಜನೆಗಳಾಗಿ ಸಮಾಜ ಬದಲಾವಣೆಗೆ ನೆರವಾಗದೆ ಗ್ರಂಥಾಲಯದಲ್ಲಿ ಪೂಜೆಗೊಳ್ಳುತ್ತವೆ. ಹಾಗೆ ಪೂಜೆಗೊಳ್ಳುವುದರಿಂದ ಯಾವ ವಿಚಾರಗಳಿಗೂ ಬೆಲೆಯಿಲ್ಲ ಎಂಬ ಭಾವನೆಯಿದೆ.

ಇಂತಹ ಅಪಾಯಕ್ಕೆ ಇಲ್ಲಿನ ವಿಚಾರಗಳು ಬಲಿಯಾಗಬಾರದೆಂದರೆ, ಶಿಕ್ಷಣದಲ್ಲಿ ಭಾಷೆಗಳನ್ನು ಅಳವಡಿಸುವ ನೀತಿನಿರೂಪಕರು, ಶೈಕ್ಷಣಿಕ ಕಾನೂನು ರೂಪಿಸುವ ಜನಪ್ರತಿನಿಧಿಗಳು, ಶಿಕ್ಷಣದ ಆಡಳಿತಾಧಿಕಾರಿಗಳು, ಶೈಕ್ಷಣಿಕ ವಲಯದಲ್ಲಿ ಸೇವೆ ಮಾಡುವ ನೆಪದಲ್ಲಿ ನಾಯಿಕೊಡೆಗಳಂತೆ ಆರಂಭಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು, ಇಂಗ್ಲಿಷ್ ಬಗೆಗೆ ಭ್ರಮೆ ಹೊಂದಿರುವ ಪೋಷಕರು, ನ್ಯಾಯಾಲಯಗಳಲ್ಲಿ ಕೆಲಸ ಮಾಡುವವರು, ಇತರೆಲ್ಲರೂ ಈ ಕೃತಿಯನ್ನು ಓದಬೇಕಾಗಿದೆ. ಮತ್ತು ಇಲ್ಲಿ ವಿಚಾರಗಳು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಿಯಾಯೋಜನೆಗಳಾಗಿ ರೂಪುಗೊಳ್ಳಬೇಕಾಗಿದೆ. ಹಾಗಾದಾಗ ಮಾತ್ರ ಇಂತಹ ಕೃತಿಗಳನ್ನು ಸಿದ್ದಪಡಿಸಿದವರ ಶ್ರಮ ಸಾರ್ಥಕವಾಗುವುದು. ಅಂತಹ ಮಹತ್ವ ಈ ಕೃತಿಗೆ ಪ್ರಾಪ್ತವಾಗಲಿ ಎಂಬುದು ಇಲ್ಲಿನ ಅಪೇಕ್ಷೆ.

ಅಂತಹ ಅಪೇಕ್ಷೆ ಸುಲಭವಾಗಿ ಈಡೇರುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮೊದಲಿಗೆ ಉದಾಹರಿಸಿದ ಹಾಡಿನ ಮುಂದಿನ ವಾಕ್ಯವು ‘ಜಂಟಿಯಾಗಿ ಹೋರಾಡುವ ಬಾರೆ ನನ್ನ ಚಿಕ್ಕ ತಂಗ್ಯಮ್ಮ’ ಎಂದು ಕೊನೆಗೊಳ್ಳುತ್ತದೆ. ಅದರ ಆಶಯದಂತೆಯೇ ಇಂದು ಎಲ್ಲ ತೆಂಕಣದ ಸೋದರ ಸೋದರಿ ನುಡಿಗಳು ಮತ್ತು ಭಾರತದ ಎಲ್ಲ ಜನನುಡಿಗಳು ಒಗ್ಗೂಡಿ ಹೋರಾಡದಿದ್ದರೆ ಉಳಿವಿಲ್ಲ. ಅಂತಹ ನುಡಿಹೋರಾಟಕ್ಕೆ ಇಂತಹ ಸಾವಿರಾರು ಹೊತ್ತಗೆಗಳು ಹುಟ್ಟಿ ನೆರವಾಗಲಿ ಎಂದು ಅಪೇಕ್ಷಿಸೋಣ.

(ಪುಸ್ತಕದ ವಿವರಗಳು : ಹೆಸರು : ತೆಂಕಣ ನುಡಿಗಳು ಮತ್ತು ಇಂಗ್ಲಿಷ್ , ಸಂಪಾದನೆ: ಡಾ. ಮೇಟಿ ಮಲ್ಲಿಕಾರ್ಜುನ : ಪ್ರಕಟಣೆ; ಕುವೆಂಪು ಭಾಷಾಭಾರತಿ ಪ್ರಾಧಿಕಾರ ಕರ್ನಾಟಕ ಸರಕಾರ, ಬೆಲೆ-200, ಪ್ರಥಮ ಮುದ್ರಣ:2015)

ಕಾಮೆಂಟ್‌ಗಳಿಲ್ಲ: