ಭಾನುವಾರ, ಜೂನ್ 5, 2016

ಕೇರಳ ಕಥನ : ಬುಡಕಟ್ಟು ಕಲೆಗಳು -ಕೈಕೊಟ್ಟಿಕಳಿ.



-ಡಾ. ಮೋಹನ ಕುಂಟಾರ್
ಕೈಕೊಟ್ಟಿಕಳಿ
 ಕೈಕೊಟ್ಟಿಕಳಿಯು ‘ತಿರುವಾದಿರಕಳಿ’ ಎಂದು ಪಾಟ್ಟ್‌ಪಾಡಿಕಳಿ ಎಂಬ ಹೆಸರುಗಳಿಂದಲೂ ಪ್ರಸಿದ್ಧವಾಗಿದೆ. ತಿರುವಾದಿರ ಎಂದರೆ ‘ಆರ್ದ್ರಾ ನಕ್ಷತ್ರ’. ಆರ್ದ್ರಾ ನಕ್ಷತ್ರದಂದು ಆಡುವ ನೃತ್ಯವಾದುದ್ದರಿಂದ ಇದಕ್ಕೆ ತಿರುವಾದಿರಕಳಿ ಎಂದು ಹೆಸರಾಗಿದೆ. ಓಣಂ ಹಬ್ಬದ ಸಂದರ್ಭಗಳಲ್ಲಿ ಮನೆಗಳ ಅಂಗಳದಲ್ಲಿ ಮಾಡುವ ಸರಳ ಹಾಗೂ ಗೌರವಪೂರ್ಣವಾದ ಕೇರಳದ ನೃತ್ಯವಿದು. ಪಕ್ಕ ವಾದ್ಯಗಳ ನೆರವಿಲ್ಲದೆ ಮಾಡುವ ಸರಳ ಅರೆ ಶಾಸ್ತ್ರೀಯ ಕಲೆಯಿದು.

ಪ್ರಾಯ ಭೇದವಿಲ್ಲದೆ ಎಲ್ಲಾ ಸ್ತ್ರೀಯರೂ ತಿರುವಾದಿರ ಕಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಮಲಬಾರು ಪ್ರದೇಶದಲ್ಲಿ ಪುರಷರೂ ಈ ನೃತ್ಯದಲ್ಲಿ ಭಾಗವಹಿಸುತ್ತಾರೆ. ಕೇರಳದ ವಿಶಿಷ್ಟ ಮುಂಡು ಹಾಗೂ ಜರಿಯುಳ್ಳ ಮೇಲ್ಮುಂಡನ್ನು ಉಟ್ಟುಕೊಡು ಕೂದಲನ್ನು ಮೇಲಕ್ಕೆ ಎತ್ತಿ ಕಟ್ಟಿ ಮಲ್ಲಿಗೆ ಹೂವಿನ ಮಾಲೆಯನ್ನು ಮುಡಿಯುವರು. ಒಂದೇ ಬಣ್ಣದ ಕುಪ್ಪಸವನ್ನು ಬಳಸಿ ತಿರುವಾದಿರದ ಸಮವಸ್ತ್ರ ಧರಿಸಿ ನೃತ್ಯದ ಸೊಗಸು ಹೆಚ್ಚಿಸುತ್ತಾರೆ. ಕೈ ಕಾಲುಗಳಿಗೆ ಮೆಹಂದಿಯಿಂದ ಶೃಂಗರಿಸಿಕೊಳ್ಳುವರು. ಹೀಗೆ ಅಲಂಕರಿಸಿದ ಸ್ತ್ರೀಯರು ವೃತ್ತಾಕಾರದಲ್ಲಿ ನಿಂತು ಹಾಡುತ್ತಾ ಪರಸ್ಪರ ಕೈಚಪ್ಪಾಳೆ ತಟ್ಟುತ್ತ ನರ್ತಿಸುವರು. ಒಬ್ಬಳು ಮೊದಲು ಹಾಡಿ ಅದೇ ಸಾಲನ್ನು ಉಳಿದವರು ಪುನರುಚ್ಚರಿಸುವರು. ಒಮ್ಮೆ ಪ್ರದಕ್ಷಿಣಾಕಾರವಾಗಿ ಇನ್ನೊಮ್ಮೆ ಅಪ್ರದಕ್ಷಿಣಾಕಾರದಲ್ಲಿ ಚಲಿಸುತ್ತಾ ಪಕ್ಕಕ್ಕೆ ಬಾಗಿ ಸುಂದರ ಸಂಜ್ಞೆಗಳನ್ನು ತೋರಿಸುವಂತೆ ಕೈಗಳನ್ನು ಮೇಲಕ್ಕೊಮ್ಮೆ ಕೆಳಕ್ಕೊಮ್ಮೆ ಇರಿಸಿ ಚಪ್ಪಾಳೆ ತಟ್ಟುವರು. ಹಾಡಿಗೆ ಅನುಗುಣವಾಗಿ ತಾಳಬದ್ಧವಾಗಿ ಕಾಲುಗಳನ್ನು ಬಲವಾಗಿ ಊರಿ ಹೆಜ್ಜೆ ಹಾಕುವರು. ಹಾಡು ಸಂಪೂರ್ಣ ಭಾವಪೂರ್ಣವಾದುದು. ಆದರೆ ತಿರುವಾದಿರದಲ್ಲಿ ಭಾವಾಭಿನಯಕ್ಕೆ ಸ್ಥಾನವಿಲ್ಲ.

ಕೈಕೊಟ್ಟಿಕಳಿಯು ಸಂಜೆಯ ಹೊತ್ತಿನಲ್ಲಿ ನಡೆಯುವುದಾದರೆ ನೃತ್ಯವಾಡುವ ಮಧ್ಯದಲ್ಲಿ ದೀಪವನ್ನು ಹಚ್ಚಿಡುತ್ತಾರೆ. ತಿರುವಾದಿರ ದಿನದಂದು ನಡೆಯುವುದಾದರೆ ದೀಪದ ಸಮೀಪ ಭತ್ತ ತುಂಬಿದ ಕಳಸಿಗೆಯನ್ನು ಅದರಲ್ಲಿ ತೆಂಗಿನ ಹೂವನ್ನು ನೆಟ್ಟಗೆ ನಿಲ್ಲಿಸುವರು. ಮಧ್ಯದಲ್ಲಿ ಮಂಗಳ ವಸ್ತುಗಳನ್ನು, ಹೂಗಳನ್ನು ಇರಿಸುವರು. ಹಗಲು ಹೊತ್ತಿನಲ್ಲಿ ನಡೆಯುವುದಾದರೆ ದೀಪ ಹಚ್ಚಿಡುವುದೆಂದಿಲ್ಲ. ಬದಲಿಗೆ ಬಿಂದಿಗೆಯನ್ನು ಕವುಚಿ ಇಡುವ ಪದ್ಧತಿ ಕೆಲವೆಡೆ ರೂಢಿಯಲ್ಲಿದೆ.

ವಿಘ್ನೇಶ್ವರ ಸ್ತುತಿ ಮತ್ತು ವಾಗ್ದೇವಿಯನ್ನು ಸ್ತುತಿಸುವ ಹಾಡುಗಳೊಂದಿಗೆ ತಿರುವಾದಿರ ಕಳಿ ಆರಂಭವಾಗುತ್ತದೆ. ಬಳಿಕ ಆಯಾ ಗ್ರಾಮದೇವತೆಗಳನ್ನು ಸ್ತುತಿಸುವ ಹಾಡುಗಳನ್ನು ಹಾಡುವರು. ಅಷ್ಟಲ್ಲದೆ ನಂತರ ಶಿವಪಾರ್ವತಿಯರನ್ನು ಕುರಿತ ಹಾಡುಗಳು, ದಶಾವತಾರದ ಹಾಡುಗಳು, ಪಾರ್ವತಿ ಸ್ವಯಂವರ, ರುಕ್ಮಿಣೀ ಸ್ವಯಂವರ, ಮೊದಲಾದ ಪೌರಾಣಿಕ ಕಥಾಂಶಗಳನ್ನು ಪ್ರತಿಬಿಂಬಿಸುವ ಹಾಡುಗಳನ್ನು ಹಾಡಲಾಗುತ್ತದೆ. ಅಲ್ಲದೆ ಹಾಸ್ಯರಸವನ್ನು ಬಿಂಬಿಸುವ ಹಾಡುಗಳು, ಸಮಾಜ ವಿಮರ್ಶೆಯ ಹಾಡುಗಳೂ, ಜಾನಪದ ಹಾಡುಗಳನ್ನು ಹಾಡುವುದೂ ಇದೆ. ಹಾಡುಗಳಲ್ಲಿ ಶಾಸ್ತ್ರೀಯ ರಾಗಗಳೂ, ಜಾನಪದ ಶೈಲಿಯ ರಾಗಗಳೂ ಇರುತ್ತವೆ. ಕೀರ್ತನೆಗಳಿಗೆ ಪ್ರಾಧಾನ್ಯವಿದ್ದು ಭಕ್ತಿಯೇ ಮುಖ್ಯ ಭಾವವಾಗಿರುತ್ತದೆ.

ಸಾಮಾನ್ಯವಾಗಿ ತಿರುವಾದಿರ ದಿನದಂದು ರಾತ್ರಿ ನಿದ್ರೆ ಮಾಡಬಾರದು ಎಂಬ ನಂಬಿಕೆಯಿದೆ. ತಿರುವಾದಿರದಂದು ಕಳಿ ಆಡಲು ಶ್ರೀಮಂತರಾದವರು ಅಥವಾ ಆ ವರ್ಷ ಮದುವೆ ನಡೆದ ಮನೆಯವರು, ಅಥವಾ ಹೆಣ್ಣು ಮಕ್ಕಳು ಋತುಮತಿಯಾದವರ ಮನೆಗಳಿಗೆ ತಿರುವಾದಿರಕಳಿ ನಡೆಸುವಂತೆ ಆಹ್ವಾನಿಸುತ್ತಾರೆ. ತಿರುವಾದಿರ ದಿನದಂತೆ ಮುಖ್ಯವಾಗಿ ಆ ಮನೆಯವರು ಮತ್ತು ಕಳಿಯಲ್ಲಿ ಭಾಗವಹಿಸುವ ಸ್ತ್ರೀಯರು ನಿದ್ರೆ ಮಾಡಲೇಬಾರದು. ಆ ಮನೆಯವರಷ್ಟೆ ಅಲ್ಲದೆ ಅಕ್ಕಪಕ್ಕದ ಮನೆಯ ಹೆಣ್ಣು ಮಕ್ಕಳು ತಿರುವಾದಿರಕಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಪ್ರತಿವರ್ಷವೂ ಕಳಿ ನಡೆಯುವುದರಿಂದ ಪ್ರಾಯ -ಪ್ರಬುದ್ಧರಾಗುತ್ತಿದ್ದಂತೆ ಹೆಣ್ಣು ಮಕ್ಕಳೂ ತಿರುವಾದಿರ ಕಳಿ ಕಲಿತುಕೊಳ್ಳುತ್ತಾರೆ. ಶ್ರೀಮಂತರ ಹೆಣ್ಣು ಮಕ್ಕಳಿಗೆ ತಿರುವಾದಿರ ಕಳಿ ಕಲಿಸುವ ವ್ಯವಸ್ಥೆಯೂ ಇರುತ್ತದೆ. ಪ್ರತಿಷ್ಠಿತ ಮನೆಗಳ ಅದರಲ್ಲೂ ಬ್ರಾಹ್ಮಣರ ಮನೆಗಳ ಹೆಣ್ಣು ಮಕ್ಕಳಿಗೆ ಶಾಲಾ, ಕಾಲೇಜು ಶಿಕ್ಷಣ ನಿಷೇಧಿಸಿದ್ದ ಕಾಲದಲ್ಲಿ ಅಂತಃಪುರಗಳಲ್ಲಿಯೇ ಸಂಸ್ಕೃತ, ಸಂಗೀತ,. ಚಿತ್ರರಚನೆ, ತಿರುವಾದಿರಕಳಿಗಳನ್ನು ಕಲಿಸುತ್ತಿದ್ದರು. ಹಿಂದೆ ಅರಮನೆಗಳಲ್ಲಿ ಪ್ರತಿನಿತ್ಯವು ತಿರುವಾದಿರಕಳಿಗಳನ್ನು ಏರ್ಪಡಿ ಸುತ್ತಿದ್ದರು. ಇಂದು ಸಾಂಪ್ರದಾಯಿಕ ಕೈಕೊಟ್ಟಿಕಳಿ ಇಲ್ಲವಾಗಿ ಶಾಲಾ, ಕಾಲೇಜು ಹಾಗೂ ಇನ್ನಿತರ ಸಾಂಸ್ಕೃತಿಕ ವೇದಿಕೆಗಳಲ್ಲಿ ತಿರುವಾದಿರಕಳಿಗೆ ಪ್ರಾಮುಖ್ಯ ಇದೆ.
ಬ್ರಾಹ್ಮಣಿಪಾಟ್ಟು
ಇದು ಮನೆಗಳಲ್ಲಿ ಮದುವೆಗೆ ಸಂಬಂಧಿಸಿ ಹಾಡುವ ಕೀರ್ತನೆಗಳು. ಹಿಂದುಗಳಲ್ಲಿ ಬ್ರಾಹ್ಮಣೀ ಸ್ತ್ರೀಯರು ಅಥವಾ ಪುಷ್ಪಿಣಿಯರು ಹಾಡುವ ಹಾಡುಗಳಿವು. ಹೆಂಗಸರೆಲ್ಲ ವೃತ್ತಾಕಾರವಾಗಿ ನಿಲ್ಲುತ್ತಾರೆ. ಅಲಂಕರಿಸಿದ ಪೀಠದ ಮೇಲೆ ಭಗವತಿಯನ್ನು ಪ್ರತಿಷ್ಠಾಪಿ ಸುತ್ತಾರೆ. ಲಯಬದ್ಧವಾಗಿ ಹಾಡುತ್ತಾ ಕೈಯಲ್ಲಿ ತಾಳವನ್ನು ಹಿಡಿದು ಬಡಿಯುತ್ತಾ ನೃತ್ಯವಾಡುವರು. ಹಾಡಿನ ತೀವ್ರತೆ ಹೆಚ್ಚಿದಂತೆ ಕುಣಿತದ ನಡೆಯು ವೇಗವಾಗುತ್ತದೆ.

ಮುಡಿಯೇಟ್ಟ್
ಭಗವತಿ ಆರಾಧನೆಗೆ ಸಂಬಂಧಿಸಿದ ಹಾಗೂ ಭದ್ರಕಾಳಿಯ ಸುಪ್ರೀತಿಗಾಗಿ ಇರುವ ಒಂದು ಆಚರಣಾ ನೃತ್ಯವಿದು. ದಾರಿಕನೆಂಬ ರಾಕ್ಷಸನನ್ನು ಕೊಲ್ಲುವ ಭಗವತಿಯ ವೈಭವ ಮತ್ತು ವಿಜಯದ ಆಶಯವನ್ನು ಪ್ರಕಟಿಸುವ ಕಲಾರೂಪವಿದು. ಇಲ್ಲಿನ ವೇಷಭೂಷಣ, ಬಣ್ಣಗಾರಿಕೆ, ಕಿರೀಟ ಇತ್ಯಾದಿಗಳಲ್ಲಿ ಆಡಂಬರವಿರುತ್ತದೆ. ಕಥಕಳಿಯ ವೇಷಭೂಷಣಗಳನ್ನು ನೆನಪಿಸುವ ರೀತಿಯ ವೇಷಭೂಷಣಗಳೇ ಮುಡಿಯೇಟ್ಟ್‌ನಲ್ಲಿಯೂ ಇರುತ್ತದೆ. ಕುರುಪ್ಪ್ ಮತ್ತು ಮಾರಾರ್ ಜಾತಿಯವರು ತಮ್ಮ ಜಾತಿಯ ವ್ಯಾಪ್ತಿಯಲ್ಲಿ ಉಳಿಸಿಕೊಂಡ ಕಲೆಯಿದು. ಭದ್ರಕಾಳಿ ದೇವಸ್ಥಾನಗಳಲ್ಲಿ ನಡೆಯುವ ಆರಾಧನಾ ಕಲೆಯಿದು.

ಸೂರ್ಯಾಸ್ತದಿಂದ ಸೂರ್ಯೋದಯದ ನಡುವೆ ನಡೆಯುವ ಇದು ಪೌರಾಣಿಕ ಕತೆಯ ಆಶಯವೊಂದನ್ನು ಪ್ರಕಟಪಡಿಸುವ ರೀತಿಯ ನಾಟಕೀಯ ಕಲಾರೂಪ. ಭೂಲೋಕದಲ್ಲಿ ದಾರಿಕನೆಂಬ ರಾಕ್ಷಸನ ಉಪಟಳ ಅಧಿಕವಾಗಲು ದೇವ ಋಷಿಯಾದ ನಾರದ ಶಿವನಲ್ಲಿ ದೂರಿಕೊಳ್ಳುತ್ತಾನೆ. ಶಿವ ಮೂರನೇ ಕಣ್ಣನ್ನು ತೆರೆದು ಭದ್ರಕಾಳಿಯನ್ನು ಸೃಷ್ಟಿಸಿ ದಾರಿಕನ ವಧೆಗಾಗಿ ಕಳುಹಿಸಿಕೊಡುತ್ತಾನೆ. ಭದ್ರಕಾಳಿ ಮತ್ತು ದಾರಿಕರು ಹೋರಾಡುವ ದೃಶ್ಯವು ದೇವಾಲಯದ ಪರಿಸರವನ್ನು ರಣರಂಗವನ್ನಾಗಿಸುತ್ತದೆ. ದಾರಿಕನ ವಧೆಯಾಗಿ ಶಿವಸ್ತುತಿಯ ದೃಶ್ಯದೊಡನೆ ಮುಡಿಯೇಟ್ಟ್ ಕೊನೆಗೊಳ್ಳುತ್ತದೆ.

ಮುಡಿಯೇಟ್ಟ್ ಆರಂಭದಲ್ಲಿ ಅನೇಕ ಧಾರ್ಮಿಕ ವಿಧಿ ವಿಧಾನಗಳಿವೆ. ಭದ್ರಕಾಳಿಯ ಚಿತ್ರವನ್ನು ನೆಲದಲ್ಲಿ ಬರೆಯುವುದು ‘ಕಳಂಪಾಟ್ಟ್’. ಬಳಿಕ ಚೆಂಡೆ, ಇಲತಾಳ ಮೊದಲಾದ ವಾದ್ಯಗಳನ್ನು ಬಾರಿಸುತ್ತ ದೇವಾಲಯಕ್ಕೆ ಪ್ರದಕ್ಷಿಣೆ ಬರುವುದು ಇತ್ಯಾದಿ ಆಚರಣೆಗಳಿವೆ. ಮುಡಿಯೇಟ್ಟ್ ಆರಂಭವಾದ ಮೇಲೆ ಮುಗಿಯುವ ತನಕ ಅನೇಕ ಹಂತಗಳಲ್ಲಿ ನಡೆಯುತ್ತದೆ. ಇದು ಹೆಚ್ಚು ನಾಟಕೀಯವಾಗಿ ಕಥಕಳಿಯಂತಹ ಶಾಸ್ತ್ರೀಯ ಕಲೆಯ ಪ್ರಾಚೀನ ರೂಪದಂತೆ ಭಾಸವಾಗುತ್ತದೆ. ಇಲ್ಲಿನ ಸನ್ನಿವೇಶಗಳಲ್ಲಿ ಶಿವ, ನಾರದ, ದಾರಿಕ, ಭದ್ರಕಾಳಿ, ಕೂಳಿ, ಕೊಯಿಂಬಿಡಾರ ಎಂಬಿತ್ಯಾದಿ ಪಾತ್ರಗಳು ಬರುತ್ತವೆ. ದೊಂದಿ ಹಿಡಿದು ರಾಳ ಎಸೆಯುತ್ತಾ ಸಭಾ ಮಧ್ಯದಿಂದ ಪಾತ್ರಗಳು ಪ್ರವೇಶಿಸಿ ಅಬ್ಬರದ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಈ ನಾಟಕ ರೂಪದ ಕಲೆಯನ್ನು ಶಿವ ನಾರದರ ಸಂವಾದ, ದಾರಿಕನ ಪ್ರವೇಶ, ಕಾಳಿಯ ಪ್ರವೇಶ, ಕೋಯಿಂಬಿಡಾರರ ಆಗಮನ, ಕೂಳಿಯ ಪ್ರವೇಶ, ಭದ್ರಕಾಳಿ ಮತ್ತು ದಾರಿಕರೊಳಗಿನ ಪಂಥಾಹ್ವಾನ ಮತ್ತು ಯುದ್ಧ, ದಾರಿಕ ವಧೆಯಾದುದರ ಸೂಚನೆಯೆಂಬಂತೆ ‘ಮುಡಿ’ (ಕಿರೀಟ)ಯನ್ನು ಕೆಳಗಿಳಿಸುವುದು, ಬಳಿಕ ಭೂತಗಣಗಳಿಗೆ ಬಲಿ ಕೊಡುವುದು ಹೀಗೆ ಎಂಟು ವಿಭಾಗಗಳಾಗಿ ವಿಂಗಡಿಸಬಹುದು.

ಇಲ್ಲಿನ ಹಾಡುಗಳನ್ನು ಮತ್ತು ಕಲಾರೂಪವನ್ನು ಸಂಪೂರ್ಣ ಜಾನಪದ ಎನ್ನುವಂತೆಯೂ ಇಲ್ಲ. ಇದು ಮುಖ್ಯವಾಗಿ ಆರಾಧನಾ ಹಿನ್ನೆಲೆಯುಳ್ಳ ಕಲೆ. ಆದುದರಿಂದ ಆರಾಧನೆಯ ವಿಧಿ, ವಿಧಾನಗಳನ್ನು ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಕೆಲವೆಡೆ ಮುಡಿಯೇಟ್ಟ್ ಮುಡಿಯೆಡುಪ್ಪ್ ಎಂಬ ಹೆಸರೂ ಇದೆ.

ಕಾಕ್ಕರಿಶ್ಯಿಕಳಿ
ಇದೊಂದು ಜನಪದ ನಾಟಕ ರೂಪದ ಕಲೆ. ತಿರುವನಂತಪುರಂ ಜಿಲ್ಲೆಯ ಕುರುವರು ಅಥವಾ ಕಾಕ್ಕಕುರುವ ಜನರು ಈ ನಾಟಕವನ್ನು ರಾತ್ರಿಯಿಂದ ಬೆಳಗಿನವರೆಗೆ ಆಡುತ್ತಾರೆ. ಇದೊಂದು ಹಾಸ್ಯಮಯ ನಾಟಕ. ಇಲ್ಲಿನ ಹಾಡುಗಳಲ್ಲಿ, ಸಂಭಾಷಣೆಗಳಲ್ಲಿ ವ್ಯಂಗ್ಯ, ಹಾಸ್ಯಗಳೇ ಮುಖ್ಯವಾಗಿವೆ. ಅಲೆಮಾರಿಗ ‘ಕಾಕಾಲನ್’ ಎಂಬ ಜನವರ್ಗವನ್ನು ತಮಾಷೆ ಮಾಡಿಕೊಂಡು ಅಜ್ಞಾತ ಕವಿ ಬರೆದ ನಾಟಕ ರೂಪವಿದು. ಸುಂದರನ್ ಕಾಕ್ಕಾನ್, ತಂಬುರಾನ್, ಕಾಕ್ಕತ್ತಿಮಾರ್, ವೇಡನ್ ಮೊದಲಾದವರು ಈ ನಾಟಕದ ಮುಖ್ಯ ಪಾತ್ರಗಳು.

ಕಾಕ್ಕಾಲನ್‌ಗಳು ಹಿಂದಿನ ಕಾಲದಿಂದಲೇ ಭಿಕ್ಷಾಟನೆಯನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದವರು. ಮನೆಗಳಿಗೆ ಹೋಗಿ ಹಸ್ತ ನೋಡಿ ಶಾಸ್ತ್ರ ಹೇಳುವುದು, ಮುಖ ಲಕ್ಷಣ ಹೇಳುವುದು, ಪಕ್ಷಿ ಶಾಸ್ತ್ರ ಹೇಳುವುದು, ಕಟ್ಟುಕತೆಗಳನ್ನು ಹೇಳಿ ಜನರನ್ನು ಸಂತೋಷ ಪಡಿಸುವುದು, ಪ್ರಾಣಿಗಳನ್ನು ಕೊಂದು ತಿನ್ನುವುದು, ಕಿವಿ ಚುಚ್ಚುವುದು, ಮದುವೆಯ ಮನೆಗಳಿಗೆ ಹೋಗಿ ಊಟ ಕೊಡುವಂತೆ ಕೇಳುವುದು ಇತ್ಯಾದಿ ವೃತ್ತಿಯಿಂದ ಬದುಕುತ್ತಿದ್ದ ಜನವರ್ಗದವರೆ ಕಾಕ್ಕಾಲನ್‌ಗಳು. ಕಾಕ್ಕಾಲನ್‌ರನ್ನು ಅನುಕರಣೆ ಮಾಡಿ ಹಾಸ್ಯ ಮಾಡುವುದೇ ನಾಟಕವಾಗಿದೆ. ಇದನ್ನು ಕಾಕ್ಕಾಲನರು ಅಭಿನಯಿಸುತ್ತಿರಲಿಲ್ಲ. ಅವರ ಸ್ವಭಾವಗಳನ್ನು ಹಾಸ್ಯವಾಗಿ ಅಣಕವಾಡುವ ನಾಯನ್‌ಮಾರರು, ಪಾಣರು ಮತ್ತು ಈಳವರು ಇದರಲ್ಲಿ ಭಾಗವಹಿಸುತ್ತಿದ್ದರು. ಈಗ ಇದು ವ್ಯವಸ್ಥಿತವಾದ ಒಂದು ಜಾನಪದ ನಾಟಕವೇ ಆಗಿದೆ. ಹಳೆಯ ರೀತಿಯ ಪ್ರದರ್ಶನಗಳು ತಿರುವಾಂಕೂರಿನ ಹಳ್ಳಿಗಳಲ್ಲಿ ಇಂದಿಗೂ ಕಾಣಬಹುದು.

ಡಪ್ಪುಕಳಿ
ಮಲಬಾರಿನ ಮಾಪಿಳ್ಳೆಯರ ಒಂದು ಸಮೂಹ ನೃತ್ಯವಿದು. ಹತ್ತರಿಂದ ಇಪ್ಪತ್ತು ಜನರು ಎರಡು ಸಾಲುಗಳಲ್ಲಿ ನಿಂತು ಪ್ರದರ್ಶಿಸುವ ಕಲೆಯಿದು. ಎಲ್ಲರೂ ಎಡ ಕೈಯಲ್ಲಿ ಡಪ್ಪು ಹಿಡಿದುಕೊಂಡು ಬಲಗೈಯಿಂದ ಬಾರಿಸುತ್ತಾ ಸುಂದರವಾಗಿ ಒಂದೇ ಲಯದಲ್ಲಿ ಶರೀರವನ್ನು ಓಲಾಡಿಸುತ್ತಾ ತಾಳದ ಸದ್ದಿಗೆ ಅನುಗುಣವಾಗಿ ಹೆಜ್ಜೆ ಹಾಕುತ್ತಾ ಡಪ್ಪು ಬಡಿಯುತ್ತಾ ನೃತ್ಯವಾಡುವರು.

ಕೋಲ್‌ಕಳಿ
ಇದು ಗಂಡು, ಹೆಣ್ಣುಗಳು ಇಬ್ಬರೂ ಭಾಗವಹಿಸುವ ಮಿಶ್ರ ನೃತ್ಯ. ಕಲಾವಿದರು ವೃತ್ತಾಕಾರವಾಗಿ ಸುತ್ತುತ್ತಾ ಚಿಕ್ಕ ಕೋಲುಗಳನ್ನು ಹಿಡಿದು ಪರಸ್ಪರ ಬಡಿಯುತ್ತಾ ನಿಯತವಾದ ಹೆಜ್ಜೆ ಇರಿಸಿ ನೃತ್ಯವಾಡುವರು. ನೃತ್ಯದ ಗತಿ ತೀವ್ರವಾದಂತೆ ವೃತ್ತವೂ ವಿಸ್ತರಿಸುತ್ತಾ ಬೆಳೆಯುತ್ತದೆ. ಜೊತೆಗೆ ಹಾಡಿನ ಗತಿಯೂ ತೀವ್ರವಾದಂತೆ ನೃತ್ಯದ ನಡೆಗೂ ವೇಗ ಹೆಚ್ಚಿ ಪರಾಕಾಷ್ಠೆಗೆ ತಲುಪುತ್ತದೆ. ಕೆಲವೊಮ್ಮೆ ವಿಶೇಷವಾಗಿ ಸಿದ್ಧಪಡಿಸಿದ ಮರದ ಸ್ಟೇಜಿನ ಮೇಲೆ ನೃತ್ಯವಾಡುವುದೂ ಇದೆ. ಅದಕ್ಕಾಗಿ ಇದಕ್ಕೆ ತಟ್ಟಿನ ಮೇಲ್‌ಕಳಿ ಎಂಬ ಹೆಸರೂ ಇದೆ.
ಮಲಬಾರಿನ ಮುಸಲ್ಮಾನರು ಕುಣಿಯುವ ಒಂದು ಜಾನಪದ ನೃತ್ಯ. ಮಾಪ್ಳಾ ಪಾಟ್ಟುಗಳನ್ನು ರಾಗಬದ್ಧವಾಗಿ ಹಾಡುತ್ತಾ ನೃತ್ಯ ಪ್ರದರ್ಶಿಸಲಾಗುತ್ತದೆ. ನೃತ್ಯವಾಡುವವರು ಹಿಡಿದ ಪುಟ್ಟ ಕೋಲಿನ ತುದಿಗೆ ಪುಟ್ಟ ಗಂಟೆಗಳನ್ನು ಕಟ್ಟಿರುವುದರಿಂದ ಹಿತಕರವಾದ ನಾದ ಹೊರ ಹೊಮ್ಮುತ್ತಿರುತ್ತದೆ.

ವಟ್ಟಕಳಿ
ಇದು ವೇಟ್ಟುವರ್ ಸಮುದಾಯದವರು ಆಡುವ ಅತ್ಯಂತ ಸತ್ವಯುತವಾದ ವರ್ತುಳ ನೃತ್ಯ. ಹೆಂಗಸರು ಮತ್ತು ಗಂಡಸರು ಈ ನೃತ್ಯದಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಹನ್ನೆರಡು ವಿಭಿನ್ನ ರೀತಿಯ ಹೆಜ್ಜೆ ಹಾಕುವ ವಿಧಾನಗಳಿವೆ. ಕಾಲ್‌ಕಡಗದ ಹಾಗೂ ಗಂಟೆಯ ನಾದ ಮತ್ತು ಲಯಬದ್ಧವಾಗಿ ಕೈ ಚಪ್ಪಾಳೆಯ ಶಬ್ದಗಳಿಂದ ಜಟಿಲವಾದ ಹೆಜ್ಜೆಗಳ ನೃತ್ಯಕ್ಕೆ ವಿಶೇಷ ಆಕರ್ಷಣೆಯಿದೆ. ಚಲನೆಯ ವೇಗ ಹೆಚ್ಚಿದಂತೆ ನೃತ್ಯದ ಉಚ್ಛ್ರಾಯ ಸ್ಥಿತಿ ನಿರ್ಮಾಣವಾಗುತ್ತದೆ. ಈ ನೃತ್ಯವನ್ನು ಚವುಡುಕಳಿ ಅಥವಾ ಚವಿಟ್ಟುಕಳಿ ಎಂದೂ ಕರೆಯುತ್ತಾರೆ.

ಪೊಯ್‌ಕಾಲ್‌ಕಳಿ
ಇದನ್ನು ‘ಮರಕಾಲಾಟಮ್’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ದೇವಾಲ ಯದ ಆಚರಣೆಗೆ ಸಂಬಂಧಿಸಿದ ನೃತ್ಯ ಪದ್ಧತಿ. ಹಾಡುವ ಹಾಡಿಗೆ ಅನುಗುಣವಾಗಿ ನೃತ್ಯವಾಡಲಾಗುತ್ತದೆ. ಲಯಕ್ಕೆ ನೆರವಾಗುವಂತೆ ಬಡಿಯುವ ಚರ್ಮ ವಾದ್ಯವನ್ನು ಬಳಸಲಾ ಗುತ್ತದೆ. ಹಾಡುವ ಹಾಡಿನಲ್ಲಿ ಹಾವು, ಚೇಳುಗಳ ರೂಪದಲ್ಲಿ ಬರುವ ಅಸುರರನ್ನು ದುರ್ಗೆಯು ಸಂಹರಿಸುವ ವರ್ಣನೆಯಿರುತ್ತದೆ.

ಪೂರಕಳಿ
ಮಲಬಾರಿನ ತೀಯ ಸಮಾಜದಲ್ಲಿ ರೂಢಿಯಲ್ಲಿರುವ ಜಾನಪದ ನೃತ್ಯವಿದು. ಮೀನ ಮಾಸ (ವಾರ್ಚ್-ಏಪ್ರಿಲ್)ದಲ್ಲಿ ಭಗವತಿ ದೇವಾಲಯಗಳಲ್ಲಿ ಆಚರಣೆ ಮಾಡುವ ನೃತ್ಯವಿದು. ಕಳರಿ ಪಯಟ್ಟ್‌ನ ವರಸೆಗಳನ್ನು ಬಲ್ಲ ವಿಶೇಷ ತರಬೇತಿ ಪಡೆದ ಅನುಭವಸ್ಥ ಕಲಾವಿದರು ಪೂರಕಳಿ ಆಡುತ್ತಾರೆ. ಕಳರಿಪಯಟ್ಟ್ ಕೇರಳದ ದೈಹಿಕ ಪರಿಶ್ರಮವುಳ್ಳ ವೀರಕಲೆ. ಸಾಂಪ್ರದಾಯಿಕ ದೀಪ ಉರಿಸಿಟ್ಟು ಅದರ ಸುತ್ತಲೂ ಹದಿನೆಂಟು ವಿಭಿನ್ನ ಹಂತಗಳಲ್ಲಿ ಮತ್ತು ಲಯಗಳಲ್ಲಿ ಪ್ರದರ್ಶನಗೊಳ್ಳುತ್ತದೆ. ಪ್ರತಿಯೊಂದು ಹಂತವನ್ನು ‘ನಿರಮ್’ ಎಂದು ಹೇಳಲಾಗುತ್ತದೆ. ಪೂರಕಳಿಯಲ್ಲಿ ಅನೇಕ ಪ್ರಕಾರಗಳಿವೆ.

ಪೂರಕಳಿಯನ್ನು ಯುವಕರು ಭಗವತಿ ಸ್ಥಾನಗಳ ಅಂಗಳದಲ್ಲಿ ನಡುವೆ ಕಾಲುದೀಪ ಉರಿಸಿಡುವರು. ಮುಂಡು ಉಟ್ಟು ಸೊಂಟಕ್ಕೆ ಕೆಂಪು ಅಥವಾ ಬಿಳಿ ಪಾಣಿಪಂಚೆಯನ್ನು ಕಟ್ಟಿಕೊಡು ವೃತ್ತಾಕಾರವಾಗಿ ಯುವಕರು ಕೈ ಚಪ್ಪಾಳೆ ತಟ್ಟುತ್ತಾ ಹಾಡುತ್ತಾ ಕುಣಿಯುವರು. ಪೂರಕಳಿಯ ಸಂದರ್ಭದಲ್ಲಿ ಪುರಾಣದ ವಸ್ತುಗಳನ್ನು ಆಧರಿಸಿದ ಹಾಡು ಹಾಡುತ್ತಾರೆ. ಸ್ವರ್ಧೆಯ ಪೂರಕಳಿಯಲ್ಲಿ ಸಾಧಾರಣ ಕಳಿಗಿಂತ ಹೆಚ್ಚು ವಾದ ವಿವಾದಗಳನ್ನು ನಡೆಸುತ್ತಾರೆ. ಆತಿಥೇಯ ಸಂಘದವರು ಮೊದಲು ಆಡುವರು. ಇದನ್ನು ‘ಮುನ್‌ಕಳಿ’ ಎನ್ನುವರು. ಅತಿಥಿ ಸಂಘದವರು ನಂತರ ಆಡುವರು. ಇದನ್ನು ‘ಪಿನ್‌ಕಳಿ’ ಎನ್ನುವರು. ಪೂರಕಳಿ ಆಡುವವರನ್ನು ‘ಪೂರಕಳಿ ಪಣಿಕ್ಕರ್’ ಎಂದು ಕರೆಯಲಾಗುತ್ತದೆ.

ವಿಶೇಷವಾಗಿ ಸಿದ್ಧಪಡಿಸಿದ ಚಪ್ಪರಗಳಲ್ಲಿ ಪಣಿಕ್ಕರರ ನೇತೃತ್ವದಲ್ಲಿ ಪೂರಕಳಿ ನಡೆ ಯುತ್ತದೆ. ನೃತ್ಯ, ಗಾನಗಳಿಂದ ಒಡಗೂಡಿದ ಪೂರಕಳಿ ನಟರಾಜನ ನೃತ್ಯದ ಪ್ರತೀಕವಾಗಿದೆ. ಉರಿಸಿಟ್ಟ ಕಾಲುದೀಪದ ಸುತ್ತಲೂ ಆಡುವವರು ತಾಳ ಲಯಕ್ಕನುಸರಿಸಿ ಹೆಜ್ಜೆ ಹಾಕುತ್ತಾ ಪ್ರದಕ್ಷಿಣೆ ಬರುವರು. ಹಾಡಿಗೂ ನೃತ್ಯಕ್ಕೂ ಕ್ರಮೇಣ ರಭಸವೂ, ಆವೇಶವೂ ಹೆಚ್ಚುತ್ತದೆ. ವಿಶೇಷ ತಾಳ ಹಾಗೂ ಹೆಜ್ಜೆಗಳ ಹದಿನೆಂಟು ಹಂತಗಳು ಪೂರಕಳಿಯಲ್ಲಿದೆ.

ಸ್ಪರ್ಧಾತ್ಮಕ ಮನೋಭಾವದಿಂದ ಆಟದ ಸಂಘಗಳು ಸೇರಿ ನಡೆಸುವ ಪೂರಕಳಿಗೆ ಮರತ್ತ್‌ಕಳಿ ಎಂದು ಹೆಸರು. ಹಾಡು ಹಾಡುವುದಕ್ಕೂ, ಹೆಜ್ಜೆ ಹಾಕುವುದಕ್ಕೂ ಸ್ಪರ್ಧೆಯಿದೆ. ಪ್ರತಿಯೊಂದು ಸಂಘದ ನೇತೃತ್ವವಹಿಸುವ ಪಣಿಕ್ಕರರು. ಆಡುವವರು ಪರಸ್ಪರ ಚರಿತ್ರೆ, ಪುರಾಣ, ವೇದಶಾಸ್ತ್ರ, ವ್ಯಾಕರಣಾದಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಾದ ಪ್ರತಿವಾದಗಳು ನಡೆಯುತ್ತವೆ. ಪೂರಕಳಿಯ ಪಣಿಕ್ಕರರು ಕೂತ್ತಾಟದ ಚಾಕ್ಯಾರರಂತೆ ಎಂದು ಬೇಕಾದರೂ ಹೇಳಬಹುದು. ಪಣಿಕ್ಕರರು ಸಮಕಾಲೀನ ಸಾಮಾಜಿಕ ವಿಷಯಗಳನ್ನು ರಸವತ್ತಾಗಿ ವಿಶ್ಲೇಷಿಸಿ ಪ್ರೇಕ್ಷಕರನ್ನು ರಂಜಿಸುವುದಿದೆ. ಆಟದ ಸ್ಫರ್ಧೆಯಲ್ಲಿ ಜಯಿಸುವ ಸಂಘಕ್ಕೆ ಬಹುಮಾನಗಳನ್ನು ಕೊಡುವ ಸಂಪ್ರದಾಯವಿದೆ.

ಪಾನ
ಇದು ಕಾಳಿದೇವತೆಯನ್ನು ಒಲಿಸಿಕೊಳ್ಳಲು ಮಾಡುವ ಒಂದು ಧಾರ್ಮಿಕ ನೃತ್ಯ. ತಾತ್ಕಾಲಿಕವಾಗಿ ಕಾಳಿ ಪ್ರತಿಮೆಯನ್ನು ಮಾಡಿ ವಿವಿಧ ರೀತಿಯಿಂದ ಅಲಂಕರಿಸಲಾಗುತ್ತದೆ. ಹಾಲೆ ಮರದ ಒಂದು ಕೊಂಬೆಯನ್ನು ಹತ್ತು ಹನ್ನೆರೆಡು ಜನರು ಹಿಡಿದುಕೊಂಡು ತಾಡನ ವಾದ್ಯಗಳ ಶಬ್ದಗಳಿಗೆ ಹೆಜ್ಜೆ ಹಾಕುತ್ತಾ ನೃತ್ಯವಾಡಿಕೊಂಡು ದೇವಾಲಯಕ್ಕೆ ಪ್ರದಕ್ಷಿಣೆ ಬರುವುದು. ನೃತ್ಯದ ಈ ಭಾಗವನ್ನು ‘ಪಾನಪಿಡಿತ್ತಮ್’ ಎನ್ನುವರು. ಹಾಲೆ ಕೊಂಬೆಯನ್ನು ಕಾಳಿ ಪ್ರತಿಮೆಯ ಮೇಲೆ ಇರಿಸಿ ಊರಿನ ಮುಖ್ಯಸ್ಥ ಮೊದಲು ಪೂಜೆ ಸಲ್ಲಿಸುವನು. ಬಳಿಕ ಇತರರು ವನಸ್ಪತಿಗಳನ್ನು ಅರ್ಪಿಸುತ್ತಾ ಪೂಜೆ ಸಲ್ಲಿಸಿ ಕುಣಿದಾಡುತ್ತಾ ದೇವರಿಗೆ ಪ್ರದಕ್ಷಿಣೆ ಬರುವುದು, ನಂತರ ಒಬ್ಬಾತ ದೊಂದಿ ಹಿಡಿದುಕೊಂಡು ದೇವತೆಗೆ ಕುಣಿಯುತ್ತಾ ಪ್ರದಕ್ಷಿಣೆ ಬರುವನು. ಅದರ ಬಳಿಕ ಹತ್ತು ಹನ್ನೆರೆಡು ಜನರು ಕೈಯಲ್ಲಿ ದೊಂದಿ ಹಿಡಿದು ಪ್ರಕ್ಷಿಣೆ ಬರುತ್ತಾ ನೃತ್ಯ ಮಾಡುವರು. ತರುವಾಯದಲ್ಲಿ ಹತ್ತು ಹನ್ನೆರಡು ಜನರೂ ಕೈಯಲ್ಲಿ ಬೆತ್ತವನ್ನು ಹಿಡಿದುಕೊಂಡು ನೃತ್ಯವಾಡುವರು. ಇದಾದ ನಂತರ ದಾರಿಕನನ್ನು ಜಯಿಸಿದ ದುಗೆರ್ಯ ವೈಭವವನ್ನು ವರ್ಣಿಸುವ ಹಾಡನ್ನು ಹಾಡುವರು. ನೃತ್ಯದ ಕೊನೆಯ ಭಾಗ ವೆಳಿಚ್ಚಪಾಡ್ ತುಳ್ಳಲ್.

ಕುರವರ್‌ಕಳಿ
ಕುರವರು ಎಂದರೆ ಹಿಂದೆ ಅಸ್ಪೃಶ್ಯ ವರ್ಗಕ್ಕೆ ಸೇರಿದ ಜನರು. ಅವರಿಗೆ ದೇವಾಲಯಗಳ ಆವರಣದೊಳಗೆ ಪ್ರವೇಶವಿರಲಿಲ್ಲ. ಕುರವರ್‌ಕಳಿಯನ್ನು ಜಾತ್ರೆಯ ಸಂದರ್ಭಗಳಲ್ಲಿ ದೇವಾಲಯಗಳ ಆವರಣದಿಂದ ಹೊರಗೆ ಪ್ರದರ್ಶಿಸಲಾಗುತ್ತಿತ್ತು. ಇದರಲ್ಲಿ ಭಾಗವಹಿಸುವವರು ಕಂಗಿನ ಹಾಳೆಯಿಂದ ತಯಾರಿಸಿದ ಕೋನಾಕೃತಿಯ ಟೊಪ್ಪಿಗೆಯನ್ನು ಧರಿಸುವರು. ಪೂರ್ತಿ ಮೈಗೆ, ಮುಖಕ್ಕೆ ಗಂಧವನ್ನು ಬಳಿದುಕೊಳ್ಳುವರು. ಕೆಂಪು ಮಾಲೆಯನ್ನು ಕೊರಳಲ್ಲಿ ಧರಿಸಿಕೊಳ್ಳುವರು. ಬಳಿಕ ಹಚ್ಚಿದ ಕಂಚಿನ ದೀಪಕ್ಕೆ ಸುತ್ತು ಬರುತ್ತಾ ಉಬ್ಬು ಚೆಂಡೆಯನ್ನು ಬಾರಿಸುತ್ತಾ ಕುಣಿಯುವರು.

ಸರ್ಪಂ ತುಳ್ಳಲ್
ಪ್ರಾಚೀನ ಕೇರಳದ ಅನೇಕ ಕುಟುಂಬಗಳೂ ಸರ್ಪಾರಾಧನೆಯ ಬನಗಳನ್ನು ರಕ್ಷಿಸಿ ಪೂಜಿಸುತ್ತಿದ್ದರು. ಸರ್ಪತುಳ್ಳಲನ್ನು ಸಾಮಾನ್ಯವಾಗಿ ಮನೆಗಳ ಅಂಗಳದಲ್ಲಿ ಸರ್ಪ ಪ್ರತಿಮೆಗಳನ್ನು ರಚಿಸಿ ಏರ್ಪಡಿಸುತ್ತಿದ್ದರು. ಕುಟುಂಬದ ಶ್ರೇಯೋಭಿವೃದ್ದಿಗಾಗಿ ಹರಕೆ ರೂಪದಲ್ಲಿ ಸರ್ಪತುಳ್ಳಲನ್ನು ಸಮರ್ಪಿಸಲಾಗುತ್ತಿತ್ತು. ಸರ್ಪ ನೃತ್ಯವನ್ನು ಪ್ರದರ್ಶಿಸು ತ್ತಿದ್ದವರು ಪುಳ್ಳುವ ಸಮುದಾಯದ ಸದಸ್ಯರಾಗಿದ್ದರು. ಆರಂಭದಲ್ಲಿ ಪುಳ್ಳುವನೊಬ್ಬ ಎರಡಕ್ಕಿಂತ ಹೆಚ್ಚು ಹಾವುಗಳು ಹೊಸೆದುಕೊಂಡಿರುವಂತೆ ರಂಗೋಲಿ (ಕೞಂ)ಯನ್ನು ಅಂಗಳದಲ್ಲಿ ಬರೆಯುವನು. ಒಂದು ಕಾಲುದೀಪ ಮತ್ತು ಭತ್ತ ತುಂಬಿದ ಕಳಸಿಗೆೆ ಅಥವಾ ಪರೆ(ನಿರಪರ)ಯನ್ನು ರಂಗೋಲಿಯ ಮುಂಭಾಗದಲ್ಲಿ ಇರಿಸುವರು. ಎರಡನೆಯ ಹಂತದಲ್ಲಿ ಪಕ್ಕದಲ್ಲಿರುವ ಸರ್ಪ ಬನದಿಂದ ಸರ್ಪದ ಪ್ರತಿಮೆಯನ್ನು ಪಂಚವಾದ್ಯಗಳ ಮೆರವಣಿಗೆ ಯೊಂದಿಗೆ ತರುವ ಕಾರ್ಯಕ್ರಮ ನಡೆಯುತ್ತದೆ. ಇದನ್ನು ‘ತಲಪೊಲಿ’ ಎಂದು ಕರೆಯುವರು. ಹುಡುಗಿಯರು ಕೂದಲನ್ನು ಹಾವಿನ ಹೆಡೆಯಂತೆ ಮೇಲ್ಬಾಗಕ್ಕೆ ಕಟ್ಟಿಕೊಂಡು ನಾಗಕನ್ನಿಕೆ ಯರನ್ನು ನೆನಪಿಸುವಂತೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೆರವಣಿಗೆಯಲ್ಲಿ ತಂದ ನಾಗಪ್ರತಿಮೆಯನ್ನು ರಂಗೋಲಿಯ ನಡುವೆ ಇರಿಸಿ ರಂಗೋಲಿಯ ಇಕ್ಕೆಲಗಳಲ್ಲಿ ಹುಡುಗಿ ಯರನ್ನು ಕುಳಿತುಕೊಳ್ಳಿಸಿ ಪೂಜಾರಿ ಧಾರ್ಮಿಕ ಪೂಜಾ ವಿಧಿಗಳನ್ನು ನೆರವೇರಿಸುತ್ತಾನೆ. ಬಳಿಕ ‘ಪರ’ (ದುಡಿ) ಮತ್ತು ತಾಳದ ನಾದಕ್ಕೆ ಹೆಜ್ಜೆ ಹಾಕುತ್ತಾ ಪೂಜಾರಿ ಕುಣಿಯುವನು. ಎಲ್ಲವೂ ನಡೆಯುತ್ತಿದ್ದಂತೆ ಪುಳ್ಳವ ಮತ್ತು ಪುಳ್ಳವತ್ತಿ (ಪುಳ್ಳುವ ಸಮುದಾಯದ ಹೆಂಗಸು) ನಂದುಣಿ (ವೀಣೆಯ ಮೂಲ ರೂಪವನ್ನು ನೆನಪಿಸುವ ಒಂದು ತಂತಿ ವಾದ್ಯ) ಮತ್ತು ಕುಡಮ್ (ಆಧುನಿಕ ಘಟಮ್‌ನ ಪ್ರಾಥಮಿಕ ರೂಪ)ನ್ನು ಬಾರಿಸಿಕೊಂಡು ದೇವತಾ ಕೀರ್ತನೆಗಳನ್ನು ಹಾಡುವರು. ಹಾಡಿನ ನಡೆ ತೀವ್ರವಾದಾಗ ಹುಡುಗಿಯರು ತನ್ಮಯಾವಸ್ಥೆಗೆ ತಲುಪಿ ನೃತ್ಯವಾಡಲು ಆರಂಭಿಸುವರು. ನಿಧಾನವಾಗಿ ದೇಹವನ್ನು ಓಲಾಡಿಸುತ್ತ ಕ್ರಮೇಣ ತೀವ್ರಗೊಳಿಸುವರು. ತೀವ್ರತರವಾದ ಆವೇಶವನ್ನು ಹೊರಸೂಸುವುದರೊಂದಿಗೆ ನೃತ್ಯ ಕೊನೆಗೊಳ್ಳುತ್ತದೆ.

ವೆಳಿಚ್ಚಪ್ಪಾಡು ತುಳ್ಳಲ್
ಸಾಮಾನ್ಯವಾಗಿ ಭದ್ರಕಾಳಿಪಾಟ್ಟು, ಅಯ್ಯಪ್ಪನ್‌ಪಾಟ್ಟು ಮತ್ತು ವೇಟೆಯ್ ಕೊರುಮಗನ್‌ಪಾಟ್‌ಗಳೊಂದಿಗೆ ಈ ನೃತ್ಯವನ್ನು ಮಾಡಲಾಗುತ್ತದೆ. ಇದರಲ್ಲಿ ಸಮಾಧಿ ಸ್ಥಿತಿಯ ಹಾಗೂ ದುಷ್ಟ ಶಕ್ತಿಯ ಮುದ್ರೆಯಿರುವುದರಿಂದ ಕೆಲವರು ಮಾತ್ರ ಪ್ರದರ್ಶನಕ್ಕೆ ಒಪ್ಪಿಗೆ ಕೊಡುತ್ತಾರೆ. ಸಾಮಾನ್ಯವಾಗಿ ‘ಕಳ್ಳತುಕುರುಪ್ಪನ್’ರು ಮಾತ್ರ ಇದಕ್ಕೆ ಅವಕಾಶವನ್ನು ಮಾಡಿಕೊಡುತ್ತಾರೆ. ಕುಣಿತದ ಆರಂಭದಲ್ಲಿ ಐದು ಬಣ್ಣಗಳ ಪುಡಿಗಳಿಂದ ಕಳಮೆೞುತ್ತ್  (ರಂಗೋಲಿ ಬರೆಯುವುದು)  ಕಾರ್ಯಕ್ರಮ ನಡೆಯುತ್ತದೆ. ಬಳಿಕ ದೇವರ ನಾಮಗಳನ್ನು ನಂದುಣಿಯನ್ನು ನುಡಿಸುತ್ತಾ ಹಾಡಲಾಗುತ್ತದೆ. ಇದಾದ ಬಳಿಕ ಕೆಂಪು ಹೂಗಳುಳ್ಳ ಬಟ್ಟೆ, ಕೆಂಪು ಕಂಠವಸ್ತ್ರ, ಗಂಟೆಗಳಿರುವ ಸೊಂಟಪಟ್ಟಿ ಮತ್ತು ಕೈಯಲ್ಲಿ ಖಡ್ಗವನ್ನು ಧರಿಸಿದ ಬೆಳ್ಚಪ್ಪಾಡ್‌ನ ಪ್ರವೇಶವಾಗುತ್ತದೆ. ಈತ ಕ್ರಮೇಣ ತನ್ಮಯಾವಸ್ಥೆಗೆ ಚಲಿಸುವನು. ಇದನ್ನು ‘ಇಡಮ್‌ಕೊರಮ್ ಚವಿಟ್ಟಲ್’ ಎಂದು ಹೇಳುವರು.

ಅಯ್ಯಪ್ಪನ್ ೞಳಕ್ಕ್
ತೆಂಗಿನ ಎಳೆಗರಿಗಳನ್ನು ಹಾಗೂ ಬಾಳೆಯ ಕಂದುಗಳನ್ನು ಬಳಸಿ ಅನೇಕ ಸಣ್ಣಪುಟ್ಟ ದೇವಾಲಯದ ಆಕೃತಿಗಳನ್ನು ರಚಿಸುವುದು. ಬಳಿಕ ವಾವರ ಮತ್ತು ಅಯ್ಯಪ್ಪನ ಬಗೆಗಿನ ಐತಿಹ್ಯಗಳನ್ನು ಹೇಳುವ ಹಾಡುಗಳನ್ನು ವಿವಿಧ ಧಾಟಿಗಳಲ್ಲಿ ಹಾಡುವರು. ಆಗ ಅಯ್ಯಪ್ಪನ್ ಮತ್ತು ವಾವರನ ವೇಷವನ್ನು ತೊಟ್ಟ ಪಾತ್ರಧಾರಿಗಳು ಖಡ್ಗವನ್ನು ಹಿಡಿದು ಹೋರಾಡುವ ಹಾಗೂ ತೆಂಗಿನ ಗರಿಗಳಿಂದ ರಕ್ಷಿಸಿಕೊಳ್ಳುವ ದೃಶ್ಯವನ್ನು ಪ್ರದರ್ಶಿಸುತ್ತಾ ನೃತ್ಯವಾಡುವರು. ನೃತ್ಯ ಮಾಡುವ ಕಲಾವಿದರು ಅತ್ಯಂತ ಕಠಿಣವಾದ ಕಾಲಿನ ಚಲನೆಗಳನ್ನು ಪ್ರದರ್ಶಿಸುವರು. ಕೊನೆಯ ಹಂತದಲ್ಲಿ ನೃತ್ಯ ಮಾಡುವವರು ‘ಆೞಿ’ ಎಂಬ ಅಗ್ನಿ ರಾಶಿಯನ್ನು ತುಳಿಯುವರು.

ಅಯ್ಯಪ್ಪ ಭಕ್ತರ ಮನೆಗಳಲ್ಲಿ ಅಯ್ಯಪ್ಪನ್ ಪಾಟ್ಟ್, ಅಯ್ಯಪ್ಪನ್ ವಿಳಕ್ಕ್ ಏರ್ಪಡಿ ಸುವರು. ಸಾಮಾನ್ಯವಾಗಿ ಉದಯಾಸ್ತಮಾನದ ಸಮಯಗಳಲ್ಲಿ ಆರಾಧನೆಯ ವಿಧಿ ವಿಧಾನಗಳು ನಡೆಯುತ್ತವೆ. ಗಣಪತಿ, ಸುಬ್ರಹ್ಮಣ್ಯ, ಮಾಳಿಗಪುರತ್ತಮ್ಮಾಳ್, ವಾವರ, ಅಯ್ಯಪ್ಪ ಮೊದಲಾದ ದೇವತಾಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಾಕರ್ಮಗಳನ್ನು ನೆರವೇರಿಸುವರು. ಅಯ್ಯಪ್ಪನ ಹುಟ್ಟಿನಿಂದಾರಂಭಿಸಿ ಶಬರಿಮಲೆಯಲ್ಲಿ ನೆಲೆೆಗೊಳ್ಳುವ ವರೆಗಿನ ಕಥಾಂಶಗಳನ್ನೊಳಗೊಂಡ ಹಾಡುಗಳನ್ನು ಹಾಡುವರು. ಆ ಹಾಡಿನ ನಾಟಕೀಯ ಸನ್ನಿವೇಶಗಳನ್ನು ವಾವರ ಮತ್ತು ಅಯ್ಯಪ್ಪನ್ ವೇಷಗಳನ್ನು ತೊಟ್ಟ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುವರು. ಈ ಅಭಿನಯ ಆರಂಭವಾಗುವುದು ಸಾಮಾನ್ಯವಾಗಿ ಮಧ್ಯರಾತ್ರಿಯ ನಂತರವೇ ಆಗಿರುತ್ತದೆ. ನಾಗಸ್ವರ, ಚೆಂಡೆ, ಪಂಚವಾದ್ಯಗಳನ್ನು ಮೊಳಗಿ ಸುವುದರ ಮೂಲಕ ಅಯ್ಯಪ್ಪವಿಳಕ್ಕ್‌ಗೆ ಕಳೆಯೇರಿಸಲಾಗುತ್ತದೆ.
ಪರಿಚಮುಟ್ಟುಕಳಿ
ಇದೊಂದು ಜಾನಪದ ಯುದ್ಧ ನೃತ್ಯ. ಇದು ಕತ್ತಿ ವರಸೆ ಇತ್ಯಾದಿ ದೈಹಿಕ ಕಸರತ್ತುಗಳನ್ನು ಪ್ರಕಟಪಡಿಸುವ ಕೇರಳದ ಯುದ್ಧ ಕಲೆಯಾದ ಕಳರಿಪಯಟ್ಟ್‌ನ ಮೂಲ ರೂಪ. ಒಂದು ಕೈಯಲ್ಲಿ ಕತ್ತಿಯನ್ನು ಇನ್ನೊಂದು ಕೈಯಲ್ಲಿ ಗುರಾಣಿಯನ್ನು ಹಿಡಿದು ಹಿಂದಕ್ಕೆ, ಮುಂದಕ್ಕೆ, ಎಡಕ್ಕೆ, ಬಲಕ್ಕೆ ಚಲಿಸುತ್ತ ಕತ್ತಿಯಿಂದ ಹೊಡೆಯುವುದು. ಗುರಾಣಿಯಿಂದ ರಕ್ಷಿಸುವುದರ ಚಾಕಚಕ್ಯತೆಯೇ ಈ ಕಲಾರೂಪದ ವೈಶಿಷ್ಟ್ಯ. ಯುದ್ಧದ ಹಾಡುಗಳನ್ನು ಹಾಡುತ್ತ ನಿರ್ದಿಷ್ಟವಾದ ಹೆಜ್ಜೆಗಳನ್ನು, ಸುಸಂಘಟಿತವಾಗಿ ಕತ್ತಿ ಹೊಡೆತ ಹಾಗೂ ರಕ್ಷಣೆಗಳನ್ನು ಮಾಡಿಕೊಳ್ಳಲಾಗುತ್ತದೆ. ಮಲಬಾರ್ ಪ್ರದೇಶದಲ್ಲಿ ತೀಯ ಸಮುದಾಯದವರು ಈ ಕಲಾರೂಪವನ್ನು ಪ್ರದರ್ಶಿಸುತ್ತಾರೆ. ದಕ್ಷಿಣದ ತಿರುವಾಂಕೂರು ಪ್ರದೇಶದಲ್ಲಿ ಕ್ರಿಶ್ಚಿಯನರೂ ಈ ಕಲಾರೂಪವನ್ನು ನಡೆಸುತ್ತಾರೆ.

ಪುಲಯರ್‌ಕಳಿ
ಪುಲಯರು ಹಿಂದೆ ಸಮಾಜದಲ್ಲಿ ಅಸ್ಪೃಶ್ಯತೆಗೊಳಗಾದ ಜನ ಸಮುದಾಯದವರು. ಮುಖ್ಯವಾಗಿ ಇವರು ಕೃಷಿ ಕಾರ್ಮಿಕರು. ಸಂತೋಷ ಆಚರಣೆಯ ಭಾಗವಾದ ಪುಲಯರ್ ಕಳಿಯು ಒಂದು ನಲಿವಿನ ಸಮೂಹ ನೃತ್ಯ. ಅದರ ಲಯ, ಲಾಸ್ಯಗಳಿಂದ ಸುಂದರವಾಗಿದೆ. ಗಂಡು ಹೆಣ್ಣುಗಳು ಸಮಾನವಾಗಿ ಭಾಗವಹಿಸುವ ಈ ಕುಣಿತವನ್ನು ಸಾಮಾನ್ಯವಾಗಿ ಕೊಯಿಲಿನ ಅವಧಿ ಮುಗಿದ ಬಳಿಕ ಆಡುತ್ತಾರೆ. ಇವರು ಹಾಡುವ ಹಾಡುಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಕೆಲವು ಸನ್ನಿವೇಶಗಳೇ ಪ್ರಮುಖ ಆಶಯಗಳಾಗಿ ರುತ್ತವೆ. ದುಡಿ  (ಪರ), ಉಬ್ಬು ಚೆಂಡೆ, ಕವು ಮೊದಲಾದ ವಾದ್ಯಪರಿಕರಗಳನ್ನು ಇವರು ಉಪಯೋಗಿಸುತ್ತಾರೆ.

ಕಾವಡಿಯಾಟ್ಟಮ್
ಇದು ಮುಖ್ಯವಾಗಿ ಸುಬ್ರಹ್ಮಣ್ಯ ದೇವರನ್ನು ಆರಾಧಿಸುವ ಹರಕೆ ರೂಪದ ಒಂದು ಕಲಾ ವಿಶೇಷ. ಅನೇಕ ಮಂದಿ ಭಕ್ತರು ಹಳದಿ ಅಥವಾ ಕಾವಿ ಬಣ್ಣದ ಬಟ್ಟೆಯನ್ನು ತೊಟ್ಟುಕೊಂಡು ಮೈಯಲ್ಲಾ ಭಸ್ಮಲೇಪಿಸಿಕೊಂಡು ಕಾವಡಿಯನ್ನು ಹೆಗಲಲ್ಲಿ ಭುಜದಲ್ಲಿ ಇರಿಸಿಕೊಂಡು ಕುಣಿಯುವರು. ಉಡುಕ್ಕು, ಚೆಂಡೆ ಮೊದಲಾದ ವಾದ್ಯೋಪಕರಣಗಳನ್ನು ಕಾವಡಿಯಾಟ್ಟಮ್‌ನಲ್ಲಿ ಬಳಸುತ್ತಾರೆ. ಕೆಲವೊಮ್ಮೆ ನಾಗಸ್ವರವನ್ನು ಬಳಸುವುದೂ ಇದೆ.

ಭದ್ರಕಾಳಿ ತುಳ್ಳಲ್
ಇದು ‘ಪುಲಯರು’ ಭದ್ರಕಾಳಿ ದೇವತೆಗೆ ಅರ್ಪಿಸುವ ನೃತ್ಯರೂಪದ ಪೂಜೆ. ಕೊಯಿಲು ಮುಗಿದ ತರುವಾಯ ಹೊಲಗಳಲ್ಲಿ ಚಪ್ಪರ ನಿರ್ಮಿಸಿ ಅದರಲ್ಲಿ ನೃತ್ಯವಾಡುತ್ತಾರೆ. ಇದರಲ್ಲಿ ಅಸದೃಶ್ಯವಾದ ಕೆಲವು ಪ್ರತ್ಯೇಕ ಹಂತದ ಬೆಳವಣಿಗೆಗಳಿವೆ. ಪ್ರತಿಯೊಂದು ಹಂತದಲ್ಲಿಯೂ ವಿಭಿನ್ನ ರೀತಿಯ ವೇಷಭೂಷಣಗಳನ್ನು ಧರಿಸುತ್ತಾರೆ. ಭಾಗವಹಿಸುವವರಲ್ಲಿ ಕೆಲವರು ನೃತ್ಯ ಮಾಡುತ್ತಾ ವಾದ್ಯಗಳನ್ನು ಬಾರಿಸುತ್ತಾರೆ.

ಪುರಟ್ಟ್
ಪುರಟ್ಟು ಎಂದರೆ  ‘ಅನುಕರಣೆ ’  ಎಂದರ್ಥ. ಇದು ಒಂದು ಜಾನಪದ ವಿನೋದ ಕಲೆ. ಇದರಲ್ಲಿ ಚೆಟ್ಟಿಯಾರ್, ಚೇಟ್ಟಿಚ್ಚಿ, ಕುರವನ್, ಕುರತ್ತಿ ಮೊದಲಾದ ಪಾತ್ರಗಳು ಮಿಮಿಕ್ರಿ ಅನುಕರಣೆಯ ಮೂಲಕ ವಿನೋದ ಸೃಷ್ಟಿಸುವರು. ಇದರ ಜೊತೆಗೆ ಹಾಡುವ ಹಾಡು ಬಹುತೇಕ ತಮಿಳು. ಇದರಲ್ಲಿ ಈಳವರು ಅಥವಾ ಪುಲಯರು ಭಾಗವಹಿಸುತ್ತಾರೆ.

ಕಂಪದವುಕಳಿ ಅಥವಾ ಕೋಲ್ಕಳಿ
ಹಳೆಯ ಐತಿಹ್ಯವೊಂದನ್ನು ಹೇಳುವ ಒಂದು ಯುದ್ಧ ನೃತ್ಯ. ವೃತ್ತಾಕಾರದಲ್ಲಿ ನಿಂತು ನೃತ್ಯವಾಡುತ್ತಾ ತೀವ್ರವಾದಂತೆ ಯುದ್ಧದ ಕೂಗುಗಳನ್ನು ಹಾಕುವರು. ಬೇರೆ ಬೇರೆ ಗುಂಪುಗಳನ್ನು ರಚಿಸಿಕೊಂಡು ವಿವಿಧ ಲಯದಲ್ಲಿ ಕುಣಿಯುವರು. ಕುಳಿತು, ನಿಂತು, ಜಿಗಿದು ಕೈಯಲ್ಲಿರುವ ಕೋಲುಗಳನ್ನು ನಿರ್ದಿಷ್ಟ ತಾಳಕ್ಕನುಸರಿಸಿ ಬಡಿಯುವರು. ಕೋಲುಗಳ ಬಡಿತವು ಕಾಲುಗಳ ಹೆಜ್ಜೆಗೆ ಸರಿಹೊಂದುವಂತಿರುತ್ತದೆ. ಕೈಯಲ್ಲಿನ  ಕೋಲುಗಳು ಪ್ರಾಚೀನ ದ್ವಂದ್ವ ಯುದ್ಧಗಳಲ್ಲಿ ಬಳಸುತ್ತಿದ್ದ ಖಡ್ಗ, ಗುರಾಣಿಗಳನ್ನು ಸಂಕೇತಿಸುತ್ತವೆ. ಈ ನೃತ್ಯವನ್ನು ಕಂಪಡಿಕಳಿ ಮತ್ತು ಕೋಲಡಿಕಳಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಅಮ್ಮನಾಟ್ಟಮ್
ಇದು ಮಹಿಳೆಯರು ಆಡುವ ಆಟ. ‘ಅಮ್ಮನ’ ಎಂದರೆ ಒಳಗೆ ಲೋಹದ ಚೂರುಗಳನ್ನು ಹಾಕಿದ ಟೊಳ್ಳಾದ ಲೋಹದ ಚೆಂಡು. ಅಮ್ಮನಾಟದ ನೃತ್ಯವಾಡುವ ಮಹಿಳೆಯರು ನಾಲ್ಕರಿಂದ ಇಪ್ಪತ್ನಾಲ್ಕು ‘ಅಮ್ಮನ’ಗಳನ್ನು ಮೇಲಕ್ಕೆಸೆಯುತ್ತಾ ಒಂದನ್ನು ತಪ್ಪಿಸದೆ ಹಿಡಿಯುತ್ತಾರೆ. ಅಮ್ಮನಗಳ ಒಳಗಿರುವ ಲೋಹದ ಚೂರುಗಳು ಝಣಝಣಿಸುವ ಲಯಕ್ಕೆ ಅನುಸರಿಸಿ ಹಾಡುಗಳನ್ನು ಹಾಡುವರು.

ತೂಕ್ಕಮ್
ಇದು ಹರಕೆಯ ರೂಪದಲ್ಲಿ ಭಗವತೀ ದೇವಸ್ಥಾನಗಳಲ್ಲಿ ಪ್ರದರ್ಶಿಸುವ ಕಲೆ. ಇದರ ವೇಷಭೂಷಣಗಳು ವೆಳಿಚ್ಚಪ್ಪಾಡು ತುಳ್ಳಲ್‌ನ ವೇಷಭೂಷಣದಂತೆಯೇ ಇರುತ್ತವೆ. ಅಂದರೆ ಕೆಂಪು ವಸ್ತ್ರವನ್ನು ತಲೆಗೆ ಕಟ್ಟಿಕೊಂಡು ಕೆಂಪು ಹೂಗಳಿರುವ ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಳ್ಳುವರು. ಕಾಲಿಗೆ ಕಡಗವನ್ನು ಕಟ್ಟಿಕೊಳ್ಳುವರು. ಭಾಗವಹಿಸುವ ಕಲಾವಿದರು ದೇವತೆಗೆ ಪ್ರದಕ್ಷಿಣೆ ಬರುತ್ತಾ ಚೆಂಡೆ, ಮದ್ದಳೆ, ತಿಮಿಲ ಮತ್ತು ತಾಳವನ್ನು ಬಾರಿಸುತ್ತಾ ನೃತ್ಯವಾಡುವರು. ಪೂಜೆಯ ತರುವಾಯ ದೇವತೆಯನ್ನು ಒಂದು ಚಕ್ರವಿರುವ ವೇದಿಕೆ ಯೊಂದರಲ್ಲಿರಿಸುವರು. ಅದರ ಸ್ತಂಭದ ಒಂದು ತುದಿಯನ್ನು ಹರಕೆ ಸಲ್ಲಿಸುವವರ ಬೆನ್ನಿನ ಚರ್ಮಕ್ಕೆ ಕೊಂಡಿಯನ್ನು ಹಾಕಿ ಸಿಕ್ಕಿಸಿ ಸಮಾಂತರವಾಗಿ ಕುಣಿಯುತ್ತಾ ಇಡೀ ವೇದಿಕೆಯನ್ನು ಎಳೆದುಕೊಂಡು ದೇವಸ್ಥಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಬರುವರು.

ಕೆಲವೊಮ್ಮೆ ಕುಣಿಯುವವರಿಗೆ ಗರುಡನ ರೂಪದ ವೇಷಭೂಷಣ ತೊಡುವುದೂ ಇದೆ. ಇದನ್ನು ಗರುಡ ತೂಕ್ಕಮ್ ಎಂದು ಹೇಳುವರು. ಕೆಲವು ಪ್ರದೇಶಗಳಲ್ಲಿ ಗರುಡನಂತೆ ರೆಕ್ಕೆಗಳನ್ನು, ತೂಕನ್ನುಕಚ್ಚಿಕೊಂಡು ದೇವಾಲಯದ ಮುಂದೆ ತಿಮಿಲ, ಚಂಡೆ, ಮದ್ದಳೆ, ಮಿಳಾವ್‌ಗಳನ್ನು ಬಾರಿಸುತ್ತಾ ಕುಣಿಯುವರು. ಇದನ್ನು ಗರುಡಪರ್ವ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಗರುಡ ತೂಕದಲ್ಲಿ ವೇಷಧಾರಿ ಮುಖಕ್ಕೆ ಹಸಿರು ಬಳಿದು ಕೊಕ್ಕು ಕಟ್ಟಿಕೊಳ್ಳುವನು. ಗರುಡನ ಭ್ರಮೆ ಹುಟ್ಟಿಸುವಂತೆ ಕೃತಕ ರೆಕ್ಕೆಗಳನ್ನು ಕಟ್ಟಿಕೊಳ್ಳುವನು. ವೇಷಧಾರಿಗಳ ಕೈಯಲ್ಲಿ ಕತ್ತಿ ಗುರಾಣಿಗಳು ಇರುತ್ತವೆ. ವೇಷಧಾರಿಗಳಾದ ಕಲಾವಿದರ ಜೊತೆಗೆ ವ್ರತನಿಷ್ಠರಾದ ಭಕ್ತರು ಕುಣಿಯುವರು. ಚೇರ್ತಲದ ತುರವೂರು, ಚೆಮ್ಮನಾಡ್ ಅಲ್ಲದೆ ಕಣಿಚ್ಚುಕುಟಙರ, ವಾರನಾಡ್, ಕೋಟ್ಟಯಂನ ಪಳ್ಳಿಪುರ ಮೊದಲಾದೆಡೆಗಳಲ್ಲಿನ ಭಗವತೀ ಸ್ಥಾನಗಳಲ್ಲಿ ಗರುಡತೂಕಂ ನಡೆಯುತ್ತದೆ.

ಹೀಗೆ ವಿವಿಧ ಕಲಾರೂಪಗಳ ಮೂಲಕ ಕೇರಳದ ಜನಪದರು, ಪರಂಪರಾಗತ ಸಂಪ್ರದಾಯಗಳನ್ನು ಜೀವಂತವಾಗಿ ಉಳಿಸಿಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ: