ಶುಕ್ರವಾರ, ಜೂನ್ 17, 2016

‘ನೋವಿಗೆ ಮಿಡಿಯುವ ಗುಣ ಜನಪದ ಸಂಗೀತಕ್ಕಿದೆ’ ಸಪ್ತರ್ಷಿ ಮುಖರ್ಜಿ



-ದಯಾನಂದ

ಸೌಜನ್ಯ: ಪ್ರಜಾವಾಣಿ



  ಬಂಗಾಳಿ ಜನಪದ ಸಂಗೀತಕ್ಕೆ ಆಧುನಿಕ ಸ್ಪರ್ಶ ನೀಡಿರುವ ಕಲಾವಿದ ಸಪ್ತರ್ಷಿ ಮುಖರ್ಜಿ. ಓದಿದ್ದು ಅರ್ಥಶಾಸ್ತ್ರವನ್ನಾದರೂ ಅವರನ್ನು ಸೆಳೆದುಕೊಂಡಿದ್ದು ಸಂಗೀತ ಜಗತ್ತು. ಬಾಲ್ಯದಲ್ಲೇ ಬಂಗಾಳಿ ಜನಪದ ಸಂಗೀತದ ಗುಂಗು ಹತ್ತಿಸಿಕೊಂಡ ಸಪ್ತರ್ಷಿ ಅದೇ ಪ್ರಕಾರದಲ್ಲಿ ಬಗೆ ಬಗೆಯ ಪ್ರಯೋಗಗಳನ್ನು ಮಾಡುತ್ತಾ ಬಂದವರು.‘ಎಲ್ಲಾ ಸಂಗೀತ ಪ್ರಕಾರಗಳ ತಾಯಿಬೇರು ಜನಪದ ಸಂಗೀತ’ ಎನ್ನುವ ಸಪ್ತರ್ಷಿ ಮುಖರ್ಜಿ ಕೋಲ್ಕತ್ತದ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಮನೆಯಲ್ಲಿ ಸಂಗೀತದ ಅನುರಣನ ಇತ್ತಾದರೂ ಶಾಸ್ತ್ರೀಯ ಸಂಗೀತದ ಸ್ಪರ್ಶವಿರಲಿಲ್ಲ.

ಬಾಲ್ಯದಲ್ಲಿ ಕೇಳಿದ ಬಂಗಾಳಿ ಜನಪದ ಗೀತೆಗಳನ್ನು ಗುನುಗುತ್ತಿದ್ದ ಹುಡುಗ ಸಪ್ತರ್ಷಿಗೆ ಇದೇ ಪ್ರಕಾರದಲ್ಲಿ ಮುಂದುವರಿಯಬೇಕೆಂಬ ಬಯಕೆಯೂ ಆಗಲೇ ಚಿಗುರಿತ್ತು.ಈ ಮಧ್ಯೆ ಅವರ ಬೆನ್ನುಬಿದ್ದಿದ್ದು ಗಿಟಾರ್‌. ಶಾಲಾ ದಿನಗಳಲ್ಲಿ ಗಿಟಾರ್‌ ಬೆನ್ನಿಗೆ ಹಾಕಿಕೊಂಡು ತಿರುಗುತ್ತಿದ್ದ ಸಪ್ತರ್ಷಿ ಗಿಟಾರ್‌ ಜತೆಗೆ ಬಂಗಾಳಿ ಜನಪದ ಗೀತೆಗಳನ್ನು ಹಾಡುವ ಅಭ್ಯಾಸ ಮಾಡಿದರು. ಮುಂದೆ ಇದೊಂದು ಹೊಸ ಪ್ರಯೋಗ ಎನಿಸುತ್ತದೆ ಎಂದು ಆಗ ಸಪ್ತರ್ಷಿಗೂ ಗೊತ್ತಿರಲಿಲ್ಲ.

‘ಯಾವುದೇ ಆಧುನಿಕ ವಾದ್ಯಕ್ಕೂ ಹೊಂದಿಕೊಳ್ಳುವ ಶಕ್ತಿ ಜನಪದ ಸಂಗೀತಕ್ಕಿದೆ. ಹೀಗಾಗಿಯೇ ಆಧುನಿಕ ಕಾಲದಲ್ಲೂ ಜನಪದ ಸಂಗೀತ ಉಳಿದಿದೆ’ ಎನ್ನುವ ಸಪ್ತರ್ಷಿ ಮೂರು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ. ಅನಿರುದ್ಧ್‌ ಭಟ್ಟಾಚಾರ್ಯ ಅವರ ಬಳಿ ಹಿಂದೂಸ್ತಾನಿ ಸಂಗೀತ ಮತ್ತು ಕಬೀರ್‌ ಸುಮನ್‌ ಅವರ ಬಳಿ ಲಘು ಸಂಗೀತ ಅಭ್ಯಾಸ ಮಾಡಿರುವ ಸಪ್ತರ್ಷಿ ಓದಿನ ಕಾರಣಕ್ಕಾಗಿ ಕೋಲ್ಕತ್ತ ಬಿಡಬೇಕಾಗಿ ಬಂತು. ಕೋಲ್ಕತ್ತದಿಂದ ದೆಹಲಿಗೆ ತೆರಳಿ ‘ದೆಹಲಿ ಸ್ಕೂಲ್‌ ಆಫ್‌ ಎಕಾನಮಿಕ್ಸ್‌’ನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಪ್ತರ್ಷಿ ಅವರ ಸೆಳೆತವೆಲ್ಲಾ ಸಂಗೀತದ ಕಡೆಗೇ ಇತ್ತು. ಹೀಗಾಗಿ ಬ್ಯಾಂಕರ್‌ ಕೆಲಸಕ್ಕಿಂತ ಹೆಚ್ಚಾಗಿ ಸಂಗೀತದ ಆರಾಧನೆಯಲ್ಲೇ ತೊಡಗಿಕೊಂಡರು. ಕೆಲಸದ ನಿಮಿತ್ತ ದೇಶದ ಬೇರೆ ಬೇರೆ ಭಾಗಗಳಲ್ಲಿ ಓಡಾಡಬೇಕಾಗಿ ಬಂದಾಗ ಆಯಾ ಪ್ರದೇಶಗಳ ಜನಪದ ಸಂಗೀತದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾ ಬಂದವರು ಅವರು.

‘ಭಾರತದ ಬೇರೆ ಬೇರೆ ಪ್ರದೇಶಗಳ ಜನಪದ ಸಂಗೀತದಲ್ಲಿ ಭಿನ್ನತೆ ಇದೆ. ವಾದ್ಯ, ಗಾಯನ ಶೈಲಿ, ನಿರೂಪಣಾ ತಂತ್ರಗಳಲ್ಲಿ ಭಿನ್ನತೆ ಇದ್ದರೂ ಒಟ್ಟಾಗಿ ನೋಡಿದಾಗ ಎಲ್ಲವೂ ತಳಸಮುದಾಯದ ದನಿಯಾಗಿ ಬೆಳೆದಿರುವುದನ್ನು ಕಾಣಬಹುದು.ಜನಪದ ಸಂಗೀತ ಸೀಮೆಗಳಿಲ್ಲದೇ ಬೆಳೆದುಬಂದಿರುವಂಥದ್ದು. ಹೀಗಾಗಿ ಆಧುನಿಕ ವಾದ್ಯಗಳನ್ನು ಒಳಗೊಂಡೂ ಜನಪದ ಸಂಗೀತ ತನ್ನತನ ಕಳೆದುಕೊಳ್ಳುವುದಿಲ್ಲ’ ಎನ್ನುವುದು ಸಪ್ತರ್ಷಿ ಅವರ ಜನಪದ ಸಂಗೀತ ವ್ಯಾಖ್ಯೆ.

‘ಭಾರತದ ಸೂಫಿ ಸಂಗೀತ, ಉತ್ತರ ಮತ್ತು ದಕ್ಷಿಣ ಭಾರತದ ಲೋಕ ಸಂಗೀತ ವಿಶಿಷ್ಟವಾದುದು. ಪಾಶ್ಚಿಮಾತ್ಯ ಜನಪದ ಸಂಗೀತಕ್ಕೂ ನಮ್ಮ ಜನಪದ ಸಂಗೀತಕ್ಕೂ ಸಾಮ್ಯತೆ ಇದೆ. ಜಗತ್ತಿನ ಯಾವ ಮೂಲೆಗೇ ಹೋದರೂ ಜನಪದ ಸಂಗೀತ ಜನರಿಗೆ ತೀರಾ ಹತ್ತಿರವಾಗಿರುವ, ಹತ್ತಿರವಾಗುವ ಸಂಗೀತ ಎಂಬುದು ನಿಸ್ಸಂಶಯ’ ಎನ್ನುತ್ತಾರೆ ಸಪ್ತರ್ಷಿ.

‘ನದಿ, ನೀರು, ಗಿಡ, ಮರ, ಬೆಳಕನ್ನು ಒಳಗೊಂಡ ಸುತ್ತಲಿನ ಪರಿಸರವನ್ನು ಆರಾಧಿಸುವುದು ಜನಪದ ಸಂಗೀತದ ಮೂಲಧರ್ಮ. ಮುಂದುವರಿದಂತೆ ಜನಸಾಮಾನ್ಯರ ಕಷ್ಟ, ಸಮಾಜದಲ್ಲಿನ ಅಸಮಾನತೆ, ಮಹಿಳೆಯರ ನೋವಿನ ಬಗ್ಗೆ ಜನಪದ ಸಂಗೀತ ಬೆಳಕು ಚೆಲ್ಲುತ್ತದೆ.ಅದು ಬಂಗಾಳಿ ಜನಪದ ಸಂಗೀತವಿರಲಿ, ಇನ್ನಾವುದೇ ಭಾಗದ ಜನಪದ ಸಂಗೀತವಿರಲಿ, ಮನುಷ್ಯನ ನೋವಿಗೆ ಮಿಡಿಯುವ ಗುಣ ಜನಪದ ಸಂಗೀತಕ್ಕಿದೆ’ ಎನ್ನುತ್ತಾರೆ ಅವರು.

‘ಸಿನಿಮಾ ಸಂಗೀತ ಮಾತ್ರ ಜನಪ್ರಿಯ ಸಂಗೀತವಲ್ಲ. ಸಿನಿಮಾದಿಂದ ಹೊರತಾದ ಸಂಗೀತವೂ ಇಂದು ಜನಪ್ರಿಯವಾಗುತ್ತಿದೆ. ಇಂದಿನ ಜನ ಮಾಧುರ್ಯದ ಕಡೆಗೆ ಹೆಚ್ಚು ಗಮನ ನೀಡುತ್ತಾರೆಯೇ ಹೊರತು ಸ್ಟಾರ್‌ಗಿರಿಯ ಸಂಗೀತಕ್ಕಲ್ಲ’ ಎನ್ನುವ ಸಪ್ತರ್ಷಿ ಕೆಲ ಬಂಗಾಳಿ ಚಿತ್ರಗಳಿಗೆ ಜನಪದ ಮಟ್ಟುಗಳನ್ನು ಕೂಡಿಸಿದ್ದಾರೆ.

‘ಜನಪದ ಸಂಗೀತಕ್ಕೆ ಆಧುನಿಕ ಸ್ಪರ್ಶ ನೀಡಿ ಅದನ್ನು ಇನ್ನೂ ಮಾಧುರ್ಯಗೊಳಿಸುವ ಕೆಲಸವಾಗಬೇಕು. ಅದನ್ನು ಬಿಟ್ಟು ಆಧುನಿಕ ವಾದ್ಯಗಳ ಅಬ್ಬರದಲ್ಲಿ ಜನಪದ ಸಂಗೀತದ ಮೂಲ ಮಟ್ಟುಗಳನ್ನು ಕೆಡಿಸುವುದು ಸರಿಯಲ್ಲ. ನಮ್ಮಲ್ಲಿ ಜನಪದೀಯವಾದ ಸಂಗೀತ ಮಾರ್ಗವೊಂದಿದೆ. ಈ ಮಾರ್ಗದಲ್ಲಿ ಹೇಗೇ ಹೋದರೂ ಆ ದಾರಿ ಬಿಡಬಾರದು’ ಎನ್ನುವುದು ಸಪ್ತರ್ಷಿ ಅವರ ಮಾತು.

‘ಫಕಿರಿ’ಯಲ್ಲಿ ಬಂಗಾಳಿ ಲೋಕಸಂಗೀತದ ಇಂಪು...
ದೇಶದ ಉದ್ದಗಲಕ್ಕೂ ಬಂಗಾಳಿ ಸಂಗೀತದ ನಾದ ಹರಡುವ ಹೆಬ್ಬಯಕೆ ಹೊಂದಿರುವ ಸಪ್ತರ್ಷಿ ಮುಖರ್ಜಿ ವೈಟ್‌ಫೀಲ್ಡ್‌ನ ಫಿನಿಕ್ಸ್‌ ಮಾರ್ಕೆಟ್‌ ಸಿಟಿಯಲ್ಲಿ ನಡೆಯುತ್ತಿರುವ ‘ಫಕಿರಿ’ ಜನಪದ ಸಂಗೀತೋತ್ಸವದಲ್ಲಿ ಭಾನುವಾರ (ಜೂನ್‌ 19) ಬಂಗಾಳಿ ಜನಪದ ಗೀತೆಗಳ ಇಂಪನ್ನು ಉಣಬಡಿಸಲಿದ್ದಾರೆ.

ಕಾಮೆಂಟ್‌ಗಳಿಲ್ಲ: