ಶನಿವಾರ, ಜೂನ್ 18, 2016

ಅವರೆಕಾಯಿ ಕಳ್ಳರು


-ಎಸ್ ಗಂಗಾಧರಯ್ಯ
sgangadharaiah



ಸೌಜನ್ಯ:http://connectkannada.com
ಹೊಲಗಳ ಅಕ್ಕಡಿ ಸಾಲುಗಳ ಅವರೆಗಿಡದ ಕಾಯಿ ಬಲಿಯ ತೊಡಗಿದಂತೆ ಹಳ್ಳಿಯ ಬಹುತೇಕ ಮಕ್ಕಳಿಗೆ ಅವುಗಳನ್ನು ಕಾಯುವ ಕೆಲಸ ಶುರುವಾಗುತ್ತಿತ್ತು. ಬೆಳಿಗ್ಗೆ ಸ್ಕೂಲಿಗೆ ಹೋಗುವುದಕ್ಕೆ ಮುಂಚೆ, ಸಂಜೆ ಸ್ಕೂಲಿನಿಂದ ಬಂದ ನಂತರ, ಈ ಕೆಲಸವಿರುತ್ತಿತ್ತು. ಅದಕ್ಕಾಗಿ ನಾವುಗಳೇ ಹೊಲದ ಬದುವಿನಲ್ಲೊಂದು ಪುಟ್ಟ ಸೋಗೆಯ ಗುಡಿಸಲನ್ನು ಹಾಕಿಕೊಳ್ಳುತ್ತಿದ್ದೆವು. ಸಂಜೆಯಾಗುತ್ತಿದ್ದಂತೆ ಹೊಲದ ಕಡೆ ನಡೆಯುತ್ತಿದ್ದ ನಮಗೆ, ಆ ಹೊತ್ತಿನಲ್ಲಿ ದನಕರುಗಳನ್ನು ಮೇಸಲು ಹೋದವರು ಹೊಲಗಳಿಗೆ ಅವುಗಳ ಬಾಯಾಕಿಸಿ ಲೇವಡಿ ಮಾಡದ ಹಾಗೆ ನೋಡಿಕೊಳ್ಳುತ್ತಿದ್ದುದು ಹಾಗೂ ಸಂಜೆಯನ್ನು ಮೈಗಾಕಿಕೊಂಡು ಕಂಡವರ ಹೊಲಗಳಲ್ಲಿ ಅವರೆಕಾಯಿಗಳನ್ನು ಕದಿಯುತ್ತಿದ್ದವರ ಮೇಲೆ ನಿಗಾ ಇಡುವುದು ಕಡ್ಡಾಯದ ಕೆಲಸವಾಗಿರುತ್ತಿತ್ತು. ಹಾಗೆ ನೋಡಿದರೆ, ಸಾಮಾನ್ಯವಾಗಿ ಈ ಕಳ್ಳತನವನ್ನು ಮಾಡುತ್ತಿದ್ದವರು ಹೊಲಗಳಿದ್ದವರು ಹಾಗೂ ತಾವೂ ಅವರೆಗಿಡಗಳನ್ನು ಬೆಳೆಯುತ್ತಿದ್ದವರೇ. ಜೊತೆಗೆ, ಹೀಗೆ ಕಾಯಲು ಹೋಗುತ್ತಿದ್ದವರೇ, ತಮ್ಮ ತಮ್ಮ ಹೊಲಗಳನ್ನು ಜೋಪಾನ ಮಾಡಿಕೊಂಡು ಅಕ್ಕಪಕ್ಕದ ಹೊಲಗಳಿಗೆ ಮುಗಿ ಬೀಳುತ್ತಿದ್ದೆವು.

ಕಾರಣ, ಹದವಾಗಿ ಬಲಿತ, ಬೆಂಕಿಯಲ್ಲಿ ಸುಟ್ಟ, ಅವರೆಕಾಯಿಯ ರುಚಿ ಹಾಗೆ ಮಾಡುತ್ತಿತ್ತು. ಈ ಅವರೆ ಕಾಯಿಯ ಕಾಲ ಒಳ್ಳೆ ಚಳಿಗಾಲಕ್ಕೆ ಬರುತ್ತಿದ್ದುದರಿಂದ, ಸಂಜೆ ಹೊಲದ ಹತ್ತಿರ ಹೋಗುತ್ತಿದ್ದಂತೆ ಸಣ್ಣಪುಟ್ಟ ಕಡ್ಡಿಗಳನ್ನೆಲ್ಲಾ ಕೂಡಿಸಿ ಸಣ್ಣಗೆ ಬೆಂಕಿ ಹಾಕಿಕೊಳ್ಳುತ್ತಿದ್ದೆವು.ಆ ಬೆಂಕಿ ಕೆಂಡವಾದ ಮೇಲೆ, ಸೊಗಡವರೆಕಾಯಿಗಳನ್ನು ಅದರ ಮೇಲೆ ಕೆಂಡ ಆರದಂತೆ ಇಷ್ಟಿಷ್ಟೇ ಹಾಕಿ, ಹದವಾಗಿ ಬೇಸುತ್ತಿದ್ದೆವು. ಬೆಂದ ಅವರೆಕಾಯಿಗಳನ್ನು ಒಂದೊಂದೇ ತೆಗೆದು ತಿನ್ನುತ್ತಿದ್ದೆವು. ಆಗ ಅದರ ರುಚಿ, ಚಳಿಗೆ ಅದರ ಬಿಸಿ, ಆ ನಾಟಿ ಅವರೆಯ ಸೊಗಡು, ಇನ್ನಿಲ್ಲದ ಖುಷಿಕೊಡುತ್ತಿತ್ತು. ಆದರೆ, ಇದಕ್ಕೆ ನಮ್ಮ ಹೊಲಗಳ ಅವರೆಕಾಯಿಗಳನ್ನು ಬಳಸುತ್ತಿದ್ದುದು ತುಂಬಾ ಅಪರೂಪಕ್ಕೆ. ಆಗಿನ ಅವರೆಕಾಯಿಯ ಸೊಗಡು ಎಷ್ಟಿರುತ್ತಿತ್ತೆಂದರೆ, ಒಮ್ಮೆ ಅವರೆಕಾಯಿಗಳನ್ನು ಮುಟ್ಟಿದರೆ, ಸೋಪು, ಸೀಗೇಪುಡಿಗಳನ್ನು ಹಾಕಿ ತೊಳೆದುಕೊಂಡರೂ, ಅದರ ಘಮಲು ಮತ್ತು ಜಿಡ್ಡು ಹೋಗುತ್ತಿರಲಿಲ್ಲ. ಕೆಲವೊಮ್ಮೆ ಈ ಘಮಲು ಮತ್ತು ಜಿಡ್ಡುಗಳು ನಮ್ಮ ಕಳ್ಳತನವನ್ನು ಎತ್ತಿ ತೋರಿಸಿ ಬಿಡುತ್ತಿದ್ದವು. ಏಕೆಂದರೆ, ಕತ್ತಲಿನಲ್ಲಿ ಕದಿಯಲು ಪ್ರಾರಂಭಿಸುತ್ತಿದ್ದ ನಮಗೆ, ಅವಸರ ಮತ್ತು ಗಾಬರಿಯಲ್ಲಿ, ಅವರೆಗಿಡಗಳ ಮೇಲೆಲ್ಲಾ ರಾಪಾಡುತ್ತಿದ್ದುದರಿಂದ, ಸೊಗಡು ನಮ್ಮ ಕೈಗಳಿಗೆ ಮಾತ್ರವಲ್ಲದೆ, ಬಟ್ಟೆಗಳಿಗೆಲ್ಲಾ ಆಗಿ ಬಿಡುತ್ತಿತ್ತು. ಮಾಲು ಕಳೆದುಕೊಂಡ ಹೊಲದವರಿಗಿಂತ ಮುಂಚೆ, ನಮ್ಮ ಮನೆಯವರುಗಳಿಗೇ ಈ ಕಳ್ಳತನ ಗೊತ್ತಾಗಿ ಬಿಡುತ್ತಿತ್ತು. ಹಾಗಾಗಿ, ಮನೆಯಿಂದ ಹೊರಡುವಾಗ,’ಬೇಕಾದರೆ ನಮ್ಮ ಹೊಲದಲ್ಲೇ ಒಂದಷ್ಟು ಕಿತ್ತುಕೊಳ್ಳಿ, ಕಂಡವರ ಹೊಲಕ್ಕೆ ಕೈ ಕಾಕಿದ್ರೆ ಅಷ್ಟೇ’ ಅನ್ನುವ ಎಚ್ಚರಿಕೆಯ ಮಾತುಗಳು ಸಾಮಾನ್ಯವಾಗಿರುತ್ತಿದ್ದವು. ಆದರೆ, ಅವರ ಮಾತುಗಳಿಗೆ ವಿನಯವಾಗಿರುತ್ತಿದ್ದದ್ದು, ಕದಿಯಲು ಸಾಧ್ಯವಾಗದ ದಿನಗಳಲ್ಲಿ ಮಾತ್ರ.

ನಾನು ಹೈಸ್ಕೂಲು ಓದುವ ದಿನಗಳಲ್ಲಿ ನನ್ನ ಸಂಬಂಧಿಕರ ಮೂರ್ತಿ ಅನ್ನುವ ಹುಡುಗನೊಬ್ಬ ನಮ್ಮ ಮನೆಯಿಂದಲೇ ನನ್ನದೇ ಕ್ಲಾಸಿಗೆ ಸ್ಕೂಲಿಗೆ ಬರುತ್ತಿದ್ದ. ನಾನು ಮತ್ತು ಮೂರ್ತಿ ಸಂಜೆಯಲ್ಲಿ ಚಳಿಗೆಂದು ಟವೆಲ್ಲುಗಳನ್ನು ಹೆಗಲಿಗೇರಿಸಿಕೊಂಡು, ಚೆಡ್ಡಿ ಜೇಬಿನಲ್ಲಿ ಬೆಂಕಿಪೊಟ್ಟಣವಿರುವುದನ್ನು ಖಾತ್ರಿ ಪಡಿಸಿಕೊಂಡು ಹೋದರೆ, ಮತ್ತೆ ಹೆಚ್ಚೂ ಕಡಿಮೆ ಊಟದ ಹೊತ್ತಿಗೆ ಮನೆಗೆ ಬರುತ್ತಿದ್ದೆವು. ಕತ್ತಲಾಗುತ್ತಿದ್ದಂತೆ ನನಗೆ ಪುಕ್ಕಲು ಶುರುವಾಗುತ್ತಿತ್ತು. ಆದರೆ ಮೂರ್ತಿಗೆ ನನಗಿಂತ ಧೈರ್ಯ. ನಮಗೆ ಊರಿನ ಪಕ್ಕದಲ್ಲಿ ಎರಡು ಎಕರೆಯಷ್ಟು ‘ಮಳ್ಳೊಲ’ ಅಂತ ಕರೆಯುತ್ತಿದ್ದ ಹೊಲವಿತ್ತು. ಸಾಮಾನ್ಯವಾಗಿ ಈ ಹೊಲದಲ್ಲಿ ಅವರೆಕಾಯಿಗಿಡವನ್ನು ಹೆಚ್ಚಾಗಿ ಹಾಕುತ್ತಿದ್ದರು. ಅಲ್ಲಿ ಅವರೆಯ ಫಸಲು ಚೆನ್ನಾಗಿ ಬೆಳೆಯುತ್ತಿದ್ದುದು ಒಂದು ಕಾರಣವಾದರೆ, ಜಾಸ್ತಿ ಲೇವಡಿ ಆಗುವುದಿಲ್ಲ, ಅನ್ನುವುದು ಮತ್ತೊಂದು ಕಾರಣವಾಗಿತ್ತು. ಕೊಂಚ ದೂರಲ್ಲಿ ಮನೆಗಳಿದ್ದುದರಿಂದ, ಹೆಚ್ಚುಕಮ್ಮಿ ಆದರೆ ಕೂಗಾಕಿದರೆ ಸಾಕು, ಯಾರಾದರೂ ಬಂದು ಬಿಡುತ್ತಾರೆ ಅನ್ನುವ ಕಾರಣ ಕೂಡ ನಮ್ಮ ಕಾವಲಿಗೆ ಧೈರ್ಯ ತುಂಬುತ್ತಿತ್ತು.

ಹೀಗೆ ಸೊಗಡವರೆಯ ಸವಿಯನ್ನೂ, ಕೆಲವೊಮ್ಮೆ ಸಂಜೆಯ ಚಂದಿರನ ಸೊಬಗನ್ನೂ ಸವಿಯುತ್ತಾ, ಈ ಕಾವಲು ಕೆಲಸ ಅನ್ನುವುದು ವರ್ಷವಿಡೀ ಹೀಗೆ ಇದ್ದರೆ ಎಷ್ಟು ಚಂದ ಅಂದುಕೊಳ್ಳುತ್ತಿದ್ದೆವು. ಇಲ್ಲವಾದಲ್ಲಿ ಕನಿಷ್ಟ ಊಟದ ಹೊತ್ತಿನವರೆಗಾದರೂ ನಾವು ಇಷ್ಟವಿರಲಿ, ಬಿಡಲಿ ಪುಸ್ತಕಗಳ ಮುಂದೆ ಕೂರಬೇಕಿತ್ತು. ಆದರೆ ಹೀಗೆ ನಾವು ಕಾವಲಿಗೆ ಬಂದ ದಿನಗಳಲ್ಲಿಯೂ ಆಗೊಮ್ಮೆ ಈಗೊಮ್ಮೆ ನಮ್ಮ ಹೊಲದಲ್ಲಿಯೇ ಕಳ್ಳತನವಾಗಿ ಬಿಡುತ್ತಿತ್ತು. ಆಗ ಮಾತ್ರ ಮನೆಯವರಿಗೆ ನಮ್ಮ ಕಾವಲಿನ ಮೇಲೆ ಅನುಮಾನ ಬರುತ್ತಿತ್ತು. ಅವತ್ತೊಂದು ದಿನ ಸಂಜೆಗೇ ಕಾವಲಿಗೆಂದು ನಾವಿಬ್ಬರೂ ಹೋಗಿದ್ದರೂ, ಬೆಳಿಗ್ಗೆ ನೋಡಿದರೆ, ನಮ್ಮ ಗುಡಿಸಲಿನ ಎದುರಿಗೆ ಆಚೆ ಬದಿಯ ಬದುವಿನ ಪಕ್ಕದ ಒಂದೆರಡು ಸಾಲುಗಳಲ್ಲಿ ಕಾಯಿ, ಈಚು ಅಂತ ನೋಡದೆ ನುಣ್ಣಗೆ ತರೆದುಕೊಂಡು ಹೋಗಿ ಬಿಟ್ಟಿದ್ದರು. `ನೀವು ಇನ್ನೊಬ್ರುದಾಗೆ ಕದ್ಯಾಕೆ ಹೋದಾಗ, ಅವ್ರು ನಿಂಬುದ್ರಾಗೆ ಎಗರಿಸ್ಕಂಡು ಹೋಗ್ವರೆ ಬಿಡು’ ಅಂದ ಅಜ್ಜನ ಹುಸಿನಗುವಿನ ವಗ್ಗರಣೆಯ ಮಾತುಗಳು ನಮ್ಮನ್ನು ಇನ್ನೂ ಪೇಚಿಗೆ ಸಿಕ್ಕಿಸಿದ್ದವು. ಇದು ಹೇಗಾದರೂ ಮಾಡಿ ಕಳ್ಳನನ್ನು ಹಿಡಿಯಲೇ ಬೇಕು ಅನ್ನುವ ಹಠಕ್ಕೆ ತಳ್ಳಿತ್ತು.

ಅದಾದ ಮೇಲೆ ಕೆಲವು ದಿನ ದಿನ ನಮ್ಮ ಕಾಯುವಿಕೆಯ ತಂತ್ರವನ್ನು ಬದಲಿಸಿಕೊಂಡೆವು. ಹೊಲದ ಬಳಿ ಹೋಗುತ್ತಿದ್ದಂತೆ ಬೆಂಕಿಯನ್ನು ಹಾಕಿ, ಕಾಯಲು ಬಂದಿದ್ದಾರೆ ಅನ್ನುವ ಸೂಚನೆಯನ್ನು ಕೊಟ್ಟು, ಅದರ ಮುಂದೆ ಕೂರದೆ, ಅಲ್ಲೇ ಹೊಲದ ಮತ್ತೊಂದು ತುದಿಯ ಬದುವಿನಲ್ಲಿದ್ದ ಮುರುಕು ಹಲಸಿನ ಮರವನ್ನು ಹತ್ತಿ ಕೂರುತ್ತಿದ್ದೆವು.ಹೀಗೆ ಒಂದು ದಿನ ಕಾಯುತ್ತಿದ್ದಾಗ, ಇನ್ನೇನು ಮನೆಯ ಕಡೆ ಹೊರಡಬೇಕು ಅನ್ನುತ್ತಿರುವಾಗ, ನಾವು ಕೂತಿದ್ದ ಹಲಸಿನ ಮರದ ಎದುರಿಗೆ ಕೊಂಚ ದೂರದಲ್ಲಿ, ಒಂಚೂರು ಮುಖವಷ್ಟೇ ಕಾಣುವಂತೆ, ಮೈ ತುಂಬಾ ರಗ್ಗೊಂದನ್ನು ಹೊದ್ದಿದ್ದ ಆಕೃತಿಯೊಂದು ನಮ್ಮ ಗುಡಿಸಲು ಕಡೆಯಿಂದ ಹೊಲದೊಳಕ್ಕೆ ಪ್ರವೇಶಿಸಿತು. ಅವತ್ತು ಸಂಜೆಗೇ ಚಂದ್ರ ಬಂದಿದ್ದರಿಂದ ಹಲಸಿನ ಮರದ ಕೊಂಬೆಗಳಲ್ಲಿ ಕೂತಿದ್ದ ನಮಗೆ ಚೆನ್ನಾಗಿ ಕಾಣಿಸುತ್ತಿತ್ತು. ಹಾಗೆ ಬಂದ ಆ ಆಕೃತಿ, ಸುತ್ತ ಮುತ್ತ ಕಣ್ಣಾಡಿಸುತ್ತಾ, ಹೆಚ್ಚೂ ಕಡಿಮೆ ಹೊಲದ ನಡೂಮಧ್ಯದವರೆಗೂ ಬರುತ್ತಾ, ಅವಸರ ಅವಸರವಾಗಿ ಕೈಗೆ ಸಿಕ್ಕ ಅವರೆಕಾಯಿಗಳನ್ನು ಕೊಯ್ಯುತ್ತಾ, ಬಗಲಿನಲ್ಲಿದ್ದ ಚೀಲವೊಂದಕ್ಕೆ ಹಾಕಿಕೊಳ್ಳುತ್ತಿತ್ತು. ತಕ್ಷಣಕ್ಕೆ ನಮಗೆ ಏನು ಮಾಡಬೇಕೆಂದು ಹೊಳೆಯಲಿಲ್ಲ. ಒಬ್ಬರ ಮುಖವನ್ನೊಬ್ಬರು ಸುಮ್ಮನೆ ನೋಡಿಕೊಂಡೆವು.

ಕಡೆಗೆ ಮೂರ್ತಿಯೇ ಧೈರ್ಯ ಮಾಡಿ, ನಾನು ಅವನ ಹಿಂದುಗಡೆಯಿಂದ ಬರುತ್ತೇನೆ, ನೀನು ಅವನ ಪಕ್ಕದಲ್ಲಿ ಅಕ್ಕಡಿ ಸಾಲುಗಳ ನಡುವಲ್ಲಿ ಹುದುಗಿಕೊಂಡು ಬಾ, ಅಂತ ಹೇಳಿದವನೇ ಮೆಲ್ಲಗೆ ಮರದಿಂದ ಕೆಳಗಿಳಿದು ಹೋದ. ನಾನೂ ಇಳಿದವನೇ ಹಲಸಿನ ಮರದ ನೆರಳಿನ ಅಕ್ಕಡಿ ಸಾಲುಗಳ ನಡುವೆ ಕೂತುಕೊಂಡು ಹಾಗೇ ಮೆಲ್ಲಗೆ ತೆವಳ ತೊಡಗಿದೆ. ಆ ಕಳ್ಳ ಮಾತ್ರ ಇನ್ನೂ ಕದಿಯುವ ಧಾವಂತದಲ್ಲೇ ಇದ್ದ. ಮೂರ್ತಿ ಕಳ್ಳನ ಹತ್ತಿರತ್ತಿರಕ್ಕೇ, ಅಕ್ಕಡಿ ಸಾಲುಗಳ ನಡುವೆ ಅಡಗಿಕೊಂಡು ಹೋಗುತ್ತಿದ್ದರೆ, ನಾನು ಮಾತ್ರ ಆಮೆಯಂತೆ ಮೆಲ್ಲಗೆ ತೆವಳುತ್ತಿದ್ದೆ. ಇದಕ್ಕೆ ನನ್ನೊಳಗಿನ ಭಯವೂ ಕಾರಣವಾಗಿತ್ತು. ಮೂರ್ತಿ ಇನ್ನೇನು ಹತ್ತಿರಕ್ಕೆ ಹೋಗಿ, ಅವನ ಮೇಲೆ ಹಾರಿ ಹಿಡಿದುಕೊಳ್ಳಬೇಕು ಅನ್ನುವಷ್ಟರಲ್ಲಿ, ಕಳ್ಳನಿಗೆ ಅದು ಹೇಗೆ ಗೊತ್ತಾಯ್ತೋ, ಒಂದೇ ಉಸುರಿಗೆ ಓಡತೊಡಗಿದ. ಮೂರ್ತಿ ಜೋರಾಗಿ ನನ್ನನ್ನು ಆ ಕಡೆಯಿಂದ ಬಾರೋ ಅಂತ ಕೂಗುತ್ತಾ, ಕಳ್ಳನ ಹಿಂದೆ ಬಿದ್ದ. ನಾನು ಕೂತಲ್ಲಿಂದ ಅವರತ್ತ ಓಡತೊಡಗುವ ಹೊತ್ತಿಗೆ ಅವರಿಬ್ಬರೂ ನಮ್ಮ ಹೊಲವನ್ನು ದಾಟಿದ್ದರು. ಪಕ್ಕದ ಹೊಲದಲ್ಲಿ ಮೂರ್ತಿಯ ಕೂಗು ಕೇಳಿಸುತ್ತಿತ್ತು. ನಾನು ನಮ್ಮ ಹೊಲದ ಬದಿಗೆ ಬರುವಷ್ಟರಲ್ಲಿ ಮೂರ್ತಿ ಹಿಂದಿರುಗಿ ಬರುತ್ತಿದ್ದ. ‘ಬಡ್ಡಿ ಮಗ ತಪ್ಪಿಸ್ಕಂಡ್ ಬಿಟ್ಟ’ ಅಂತ ಏದುಸಿರು ಬಿಡುತ್ತಾ, ಕೈಯ್ಯಲ್ಲಿದ್ದ ಕಳ್ಳನ ರಗ್ಗನ್ನು ತೋರಿಸಿದ. ‘ಈ ರಗ್ಗು ಇರಲಿಲ್ಲ ಅಂದಿದ್ರೆ, ಸಿಗಾಕ್ಕಂಡು ಬಿಡ್ತಿದ್ದ, ಕೊನೆ ಪಕ್ಷ ಯಾರು ಅಂತನಾದ್ರೂ ಗೊತ್ತಾಗಿ ಬಿಡ್ತಿತ್ತು’ ಅಂತ ಒಂದೇ ಉಸುರಿಗೆ ಬಡಬಡಿಸಿದ.

ಮಾರನೆಯ ದಿನ, ಆ ರಗ್ಗು ಯಾರದು, ಅದನ್ನು ಹೊದ್ದಿದ್ದ ಕಳ್ಳ ಯಾರು ಎಂಬುದೂ ಗೊತ್ತಾಯ್ತು. ಆದರೆ ಅದನ್ನು ಹೇಳುವ ಧೈರ್ಯ ಮಾತ್ರ ನಮಗಿರಲಿಲ್ಲ. ಏಕೆಂದರೆ, ನಾವು ಆಗಾಗ ನಮ್ಮ `ಸುಟ್ಟವರೆ’ಗಾಗಿ ಕದಿಯುತ್ತಿದ್ದುದು ಅವನ ಹೊಲದಲ್ಲಿಯೇ.

ಕಾಮೆಂಟ್‌ಗಳಿಲ್ಲ: