ಸೌಜನ್ಯ:ಪ್ರಜಾವಾಣಿ
ಗ್ರಾಮವೊಂದರ ಬಳಿಯ ಬನ್ನಿಮರದ ಕೆಳಗೆ ವಿಸ್ತಾರವಾಗಿಯೇ ಕಟ್ಟಲಾದ ಜಗಲಿ. ಅದರ ಮೇಲೆ ಸತಿಕಲ್ಲು. ಕಟ್ಟೆಯ ಕೆಳಗೆ ವೀರಗಲ್ಲು. ಅಂದರೆ ಕೆಳಗೆ ನಿಲ್ಲಿಸಿದ ವೀರನ ಹೆಂಡತಿಯೇ ಕಟ್ಟೆಯ ಮೇಲಿದ್ದವಳಿರಬೇಕು. ಆಕೆ ಆ ಜಾಗದಲ್ಲಿ ಸತಿ ಹೋಗಿದ್ದುದರಿಂದ ಅವಳ ನೆನಪಿನಲ್ಲಿ ಜಗಲಿ ಮತ್ತು ಬನ್ನಿ ಮರವಿದ್ದಿತು. ಈ ಸ್ಮಾರಕದಿಂದ ಐವತ್ತು ಗಜ ದೂರಕ್ಕೆ ಮತ್ತೊಂದು ಸತಿಕಲ್ಲು ನೆರಳಿಲ್ಲದೆ ಅನಾಥವಾಗಿದ್ದಿತು. ವಿಚಾರಿಸಿದಲ್ಲಿ ಆ ಸುತ್ತಿನ ದಾರಿ ಹೋಕರು ಅವಳೂ ಕಟ್ಟೆಯ ಕೆಳಗಿನ ವೀರನ ಹೆಂಡತಿಯೇ ಎಂದರು! ಮೊದಲ ಹೆಂಡಿರೊಡನೆ ಕೆಂಡಕೊಂಡವಾಗಬೇಕಿದ್ದವಳು ಹಿಂದಿನ ರಾತ್ರಿಯೇ ತಪ್ಪಿಸಿಕೊಂಡು ಹೋಗಿಬಿಟ್ಟಳು. ಅದರಿಂದ ಅವಳ ಕಲ್ಲನ್ನು ದೂರದಲ್ಲಿ ಬಿಸಿಲಲ್ಲಿ ನಿಲ್ಲಿಸಲಾಗಿದೆ ಎಂದು ತಿಳಿಸಿದರು. ಬೆಳಗೆರೆ ಕೃಷ್ಣಶಾಸ್ತ್ರಿಗಳು ಇದನ್ನು ಕೇಳಿ ‘ಭೇಷ್ ಇಲ್ಲಿ ಬೆಂಕಿಗೆ ಬಿದ್ದವಳಿಗಿಂತ ಎಲ್ಲಿಯಾದರೂ, ಹೇಗಾದರೂ ಬದುಕಲೇಬೇಕು ಎಂಬ ಛಲದಿಂದ ಊರನ್ನೇ ತೊರೆದು ಹೋದಳಲ್ಲಾ ಅವಳೇ ಗಟ್ಟಿಗಿತ್ತಿ’ ಎಂದರು.
ಮುಂದಿನ ಗ್ರಾಮದಲ್ಲಿ ಇದೇ ಕೆಂಡಕೊಂಡವಾದವರ ಕಥನ ಕೇಳಿಸಿಕೊಳ್ಳಲು ಮೂಡು ದಿಕ್ಕಿನ ಹಾದಿಯಲ್ಲಿರಲು, ಅತ್ತ ಕಡೆಯಿಂದ ಅದೇ ಬಂಡಿ ದಾರಿಯಲ್ಲಿ ಇಬ್ಬರು ಗ್ರಾಮಸ್ಥರು ಎದುರಾದರು. ಒಬ್ಬರ ಬಲ ಹೆಗಲಲ್ಲಿ ಜೋಳಿಗೆಯಂಥ ಬ್ಯಾಗು ನೇತಾಡುತ್ತಿದ್ದರೆ, ಇನ್ನೊಬ್ಬರ ಜೇಬಿನಲ್ಲಿ ನೋಟ್‌ಬುಕ್ಕೊಂದು ಸೇರಿಕೊಂಡಿದ್ದಂತೆ ಹೊರಕ್ಕೇ ಕಾಣಿಸುತ್ತಿತ್ತು. ಕೃಷ್ಣಶಾಸ್ತ್ರಿಗಳು ಹೆಗಲಲ್ಲಿ ಚೀಲ ನೇತಾಡುತ್ತಿದ್ದವರನ್ನು ಪುಸ್ತಕದ ರಾಮಯ್ಯನವರೆಂದೂ, ಜುಬ್ಬಾದಲ್ಲಿ ನೋಟ್‌ಬುಕ್ ತೂರಿಸಿಕೊಂಡಿದ್ದವರನ್ನು ಬುಡೇನ್‌ಸಾಬರೆಂದೂ ಪರಿಚಯಿಸಿದರು.
ಗ್ರಾಮಗಳ ಮೇಲೆ ರಾಮಯ್ಯನವರದೂ, ಬುಡೇನ್ ಸಾಬರದೂ ಒಂದೇ ಕಾಯಕ. ಗಮಕ ವಾಚನ ಮತ್ತು ಭಜನೆ. ರಾಮಯ್ಯನವರ ಜೋಳಿಗೆಯಲ್ಲಿದ್ದುದು ‘ಕರ್ಣಾಟ ಭಾರತ ಕಥಾ ಮಂಜರಿ’, ‘ಹರಿಶ್ಚಂದ್ರ ಕಾವ್ಯ’, ‘ಜೈಮಿನಿ ಭಾರತ’ ಇತ್ಯಾದಿ. ಬುಡೇನ್ ಸಾಬರ ಜೇಬಿನಲ್ಲಿದ್ದುದು ಇನ್ನೂರು ಪುಟದ ನೋಟ್ ಪುಸ್ತಕ. ಅಂಗಡಿಯಲ್ಲಿ ಕೊಂಡ ನೋಟ್‌ಬುಕ್ಕಿಗೆ ಅವರೇ ಕೈಯ್ಯಾರೆ ತತ್ವಪದಗಳನ್ನು ಪ್ರತಿ ಮಾಡಿಕೊಂಡು ಭಜನೆಯ ಮೇಳಗಳಲ್ಲಿ ಹಾಡುತ್ತಿದ್ದುದರಿಂದ ಅವರು ಬುಕ್ಕಿನ ಬುಡೇನ್ ಸಾಬರಾಗಿದ್ದರು. ಹಾಗೆ ನೋಡಿದರೆ ರಾಮಯ್ಯನವರ ಬ್ಯಾಗಿನಲ್ಲಿ ಇದ್ದುದೂ ಪ್ರಿಂಟೆಡ್ ಬುಕ್ಕೇ. ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರರಿಂದ ಸಂಪಾದಿತವಾಗಿ, ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಪ್ರಕಟವಾದದ್ದು. ಆದರೆ ಅದು ರಾಮಯ್ಯನವರ ಲೆಕ್ಕದಲ್ಲಿ ಪುಸ್ತಕವೇ ಆಗಿ, ಬುಡೇನ್ ಸಾಬರದು ಏನೂ ಪ್ರಿಂಟ್ ಆಗದ ರೂಲಿನ ನೋಟ್-ಬುಕ್ ಆಗಿದ್ದಿತು.
ಕೃಷ್ಣಶಾಸ್ತ್ರಿಗಳು ಇಬ್ಬರನ್ನೂ ಯಾವ ಗ್ರಾಮದ ಹಾದಿಯಿಂದ ಬರುತ್ತಿರುವುದು ಎನ್ನುವಲ್ಲಿ, ರಾಮಯ್ಯನವರು ಬಿಟ್ಟು ಬಂದ ಗ್ರಾಮದ ಹೆಸರು ಹೇಳಿ, ‘ಅದೇ ಇನ್ನೇನು ಯುಗಾದಿ ಬಂತಲ್ಲ, ಮಳೆ ಕರೆಯುವುದಕ್ಕೋಸ್ಕರ ವಿರಾಟ ಪರ್ವವನ್ನೂ ಸಾಬರಿಂದ ತತ್ವಪದವನ್ನೂ ಹಾಡಿಸಿದರು’ ಎಂದು ಹೇಳಿದರು. ಕೃಷ್ಣಶಾಸ್ತ್ರಿಗಳು ಪುಸ್ತಕದ ರಾಮಯ್ಯ ನವರನ್ನು ಕೆಣಕಲೆಂದೇ ‘ಮಂತ್ರಕ್ಕೆ ಮಾವಿನ ಕಾಯಿ ಉದುರುವುದುಂಟೇ? ನಿಮ್ಮ ಓದಿಗೆ, ಸಾಬರ ಪದಕ್ಕೆ ಮುಗಿಲು ಕಣ್ಣು ಬಿಟ್ಟು ಕರುಣೆ ತೋರುವುದುಂಟೇ’ ಎಂದರು. ರಾಮಯ್ಯನವರು ಶಾಸ್ತ್ರಿಗಳ ಕೆಣಕಾಟಕ್ಕೆ ಉತ್ತರ ವಿಲ್ಲದವರಂತೆ ‘ನೀವು ಹೇಳುವುದು ಸರಿ. ತೊಗಲಿನ ಮಾನವನೇನು ಬಲ್ಲ, ಮುಗಿಲ ಮಳೆಯ ನಿಜವ’ ಎಂಬ ಕಾವ್ಯಮಯ ಗಾದೆಯ ಮಾತಾಡಿದರು. ಬುಡೇನ್ ಸಾಬರು ‘ಅದು ಹಂಗಲ್ಲ ಬಿಡಿ, ಮಳೆರಾಯ ಬರದಿದ್ದರೆ ರೈತಾಪಿಗಳ ಕಷ್ಟ ಏನು ಅಂತ ಗೊತ್ತಲ್ಲ. ಆ ಬೇಗೆ ತಡೆಯಲು ಪಾಂಡವರ ಅಜ್ಞಾತವಾಸ ಸಂಕಟದ ಮಳೆಯ ಹನಿಯೇ ಸಮಾಧಾನ’ ಎಂದರು.
ಹೀಗೆನ್ನುವಲ್ಲಿ ಮಳೆ ಬರಲಿ, ಬಿಡಲಿ ಜನ ವಿರಾಟ ಪರ್ವ ಓದುವುದರಲ್ಲಿ ಒಂದು ಮರ್ಮವಿದೆ ಎನಿಸಿತು. ರಾಮಯ್ಯನವರು ಭಾರತ ಕಥನವನ್ನು ಗಮಕರೂಪದಲ್ಲಿ ಸುಶ್ರಾವ್ಯವಾಗಿ ವಾಚನ ಮಾಡುವವರಲ್ಲದೆ ಅದಕ್ಕೆ ವ್ಯಾಖ್ಯಾನ ಮಾಡುವುದರ ಅರಿವನ್ನೂ ಅದೇ ಗ್ರಾಮ ಸುತ್ತಿನ ಪೂರ್ವಿಕರಿಂದ ಕಲಿತುಕೊಂಡಿದ್ದರು. ಅವರೊಂದಿಗೆ ನಿರಂತರವಾಗಿ ಓಡಾಡುತ್ತಿದ್ದ ಬುಡೇನ್ ಸಾಬರು ಅಷ್ಟುಹೊತ್ತಿಗೆ ‘ಅದೇ ವಿರಾಟ ಪರ್ವದ ಕಡೆಕಡೇಲೆ ಅಲ್ಲವೆ ಭಾರತದ ಸಂತಾನ ಬೀಜ ಇರುವುದು’ ಎಂದು ನಮ್ಮ ತಲೆಯಲ್ಲಿ ಭಾರತ ಕಥನ ಸ್ವಾರಸ್ಯದ ಬೀಜ ನೆಟ್ಟರು. ರಾಮಯ್ಯನವರು ‘ಭಾರತ ಕಥನದಲ್ಲಿ ಕಡೆಯ ಲಗ್ನವಾಗುವುದು ವಿರಾಟಪರ್ವದಲ್ಲಿ. ಅಲ್ಲಿ ಉತ್ತರೆಗೂ, ಅಭಿಮನ್ಯುವಿಗೂ ಮದುವೆಯಾಗಿ ಪರೀಕ್ಷಿತ್ ರಾಜ ಹುಟ್ಟಿ ಅವನ ಪುತ್ರ ಜನಮೇಜಯನೇ ತಾನೇ ತನ್ನ ತಾತ ಮುತ್ತಾತಂದಿರ ಕಥೆಯನ್ನೆಲ್ಲ ಕೇಳುವುದು. ಆ ಸಂತಾನ ಸಾಯುವುದಿಲ್ಲವಲ್ಲ’ ಎಂದರು.
ನಮ್ಮ ಅನೇಕಾನೇಕ ಕಥನಗಳು ಯುದ್ಧವನ್ನೂ, ರಕ್ತಪಾತವನ್ನೂ, ಸಾವನ್ನೂ ಹೇಳಿದರೆ ರಾಮಯ್ಯನವರೂ, ಬುಡೇನ್ ಸಾಬರೂ ಹಿಂಸೆಯ ನಡುವೆಯೂ ಹೆಣ್ಣು ಗಂಡಿನ ಲಗ್ನ ಸಂಗತಿಯನ್ನೂ, ಸಂತಾನ ಬೀಜ ಮುಂದುವರಿಯುವುದನ್ನೂ ಹುಡುಕುವಂತಿದ್ದರು. ಕೃಷ್ಣಶಾಸ್ತ್ರಿಗಳು ‘ನಿಮ್ಮ ಮಾತು ಸತ್ಯ’ ಎಂದರು. ರಾಮಯ್ಯನವರು ಕೊಂಚ ಉತ್ಸಾಹ ತಾಳಿದವರಂತೆ ‘ಅದಷ್ಟೇ ಆಗಿದ್ದರೆ ನಾವು ಯಾಕೆ ಅದನ್ನ ಓದಾನ, ಪಾಂಡವರು ನಮ್ಮಂಗೆ ದನಾ ಕಾದದ್ದು, ಆಮೇಲೆ ನಡು ಬಗ್ಗಿಸಿ ಕಾಯಕ ಮಾಡಿದ್ದು ಅಲ್ಲೇ ಅಲ್ಲವೇ’ ಎಂದರು. ರಾಮಯ್ಯನವರು, ಅಜ್ಞಾತವಾಸದಲ್ಲಿ ಶ್ರಮಜೀವಿಗಳಾಗಿದ್ದ ಪಾಂಡವರನ್ನು ತಮ್ಮೊಡನೆ ಸಮೀಕರಿಸಿಕೊಳ್ಳುತ್ತಿದ್ದಾರೆಂದೆನಿಸಿತು. ಅಷ್ಟರಲ್ಲಿ ರಾಮಯ್ಯನವರು ‘ಮತ್ತೆ ಆ ಥರದಲ್ಲಿ ಪಾಂಡವರು ವಿರಾಟರಾಯನ ಅರಮನೆಗೆ ಕವಡೆ, ಸೌಟು, ಕೋಲು ಹಿಡಕೊಂಡು ಬಂದರಲ್ಲಾ ಅವರ ಕೈಯ್ಯಾಗಿನ ಆಯುಧಗಳೆಲ್ಲ ಏನಾದವು ಅಂತಗೊತ್ತಲ್ಲ’ ಎಂದರು. ಲಕ್ಷ್ಮೀಶನ ಜೈಮಿನಿ ಭಾರತ, ತೊರವೆ ನರಹರಿ, ಕುಮಾರವ್ಯಾಸನನ್ನು ಸಾಕಷ್ಟು ಚೆನ್ನಾಗಿಯೇ ಓದಿಕೊಂಡಿದ್ದ ಕೃಷ್ಣಶಾಸ್ತ್ರಿಗಳು ಬೇಕೆಂತಲೇ ‘ಪಾಂಡವರ ಕೈಯ್ಯಲ್ಲಿದ್ದ ಆಯುಧಗಳು ಎಲ್ಲಿ ಹೋದವು ಅಂತ ನಿಮ್ಮ ಬಾಯಿಂದಲೇ ಬರಲಿ’ ಎಂಬ ಪ್ರಶ್ನೆ ಹಾಕುವಲ್ಲಿ, ನಿಂತಲ್ಲಿಯೇ ಆರಂಭವಾದ ವಿಚಾರ ಸಂಕಿರಣಕ್ಕೆ ಕಾವು ಹತ್ತತೊಡಗಿತು.
ರಾಮಯ್ಯನವರು ಭೀಮನ ಗದೆ, ಅರ್ಜುನನ ಗಾಂಡೀವ, ಪಾಶುಪತಾಸ್ತ್ರ ಇವೆಲ್ಲ ಬನ್ನಿ ಮರದ ಮೇಲೆ ಹೆಣವಾಗಿ ಮುದುರಿ ಕೂತದ್ದು ವಿರಾಟ ಪರ್ವದ ಮತ್ತೊಂದು ಬೀಜ ಸಂಗತಿಯೆಂದರು. ಲೋಕದ ನರಮಾನವರನ್ನೇ ಒಬ್ಬರಿಗೊಬ್ಬರು ಆಗದವರಂತೆ ಮಾಡಿ ಹೋರಾಟವಿಕ್ಕಿಸಿ, ಹೆಣವನ್ನಾಗಿಸಿಬಿಡುವ ಆಯುಧವೇ ಸತ್ತು ಮುಳ್ಳು ಹಿಡಿದ ಬನ್ನಿ ಮರದಲ್ಲಿ ಶವಗಂಟಾಗಿ ಬಿದ್ದಿತಲ್ಲ ಅದು ತಾನೇ ಲೋಕಕ್ಕೆ ಬೇಕಾದದ್ದು. ಅಂಥ ಆಯುಧಗಳನ್ನು ಗಂಟು ಕಟ್ಟಿ, ಒಬ್ಬೊಬ್ಬರೂ ಒಂದೊಂದು ಕಾಯಕ ಮಾಡಿ ನಮ್ಮಂತೆ ಗ್ರಾಮಸ್ಥರಾದರಲ್ಲ ಅದೇ ಮುಖ್ಯವಾದದ್ದು. ಅಂದು ರಾಮಯ್ಯನವರು ವಿರಾಟ ಪರ್ವದ ಒಳ ಮರ್ಮವನ್ನೂ ಹಳ್ಳಿಯವರು ಆ ಭಾಗವನ್ನು ಯಾಕೆ ಓದುತ್ತಾರೆಂದೂ ಬಿಡಿಸತೊಡಗಿದರು. ಬುಡೇನ್ ಸಾಬರು ಆಯುಧಗಳು ಹೆಣವಾದ ಕಥೆಯಿಂದಲೇ ಅದನ್ನು ನಮ್ಮ ಗ್ರಾಮಸ್ಥರು ಓದುತ್ತಾರೆಂದಲ್ಲ, ಅದಕ್ಕಿಂತ ಬಲವಾಗಿ ‘ಕಂಡವರ ಹೆಂಡಿರ ಮೇಲೆ ಕಣ್ಣು ಮಡುಗುವವರು ಉಡುಗಿ ಬಿದ್ದ ಕಥೆಯೂ ಅಲ್ಲೇ ಸೇರಿಕೊಂಡೈತಲ್ಲ’ ಎಂದು ವಿರಾಟ ಪರ್ವದ ಓದಿನ ಪ್ರಾಮುಖ್ಯತೆಗೆ ಇನ್ನೊಂದು ಕಥನ ಭಾಗವನ್ನು ಸೇರಿಸಿದರು. ತತ್ವ ಪದಗಳ ವಾಕ್ಯ ಮಾದರಿಯಲ್ಲೇ ಬುಡೇನ್ ಸಾಬರು ಕೊಂಚ ಲಯ ಬದ್ಧವಾಗಿಯೇ ಮಾತಾಡುತ್ತಿದ್ದರು. ರಾಮಯ್ಯನವರು ಇದ್ದಕ್ಕಿದ್ದಂತೆಯೇ ನೈತಿಕ ಸಂಗತಿಯ ನೆಲೆಗಟ್ಟಿನಲ್ಲಿ ನಿಂತು ಬಿಟ್ಟವರಂತೆ ‘ಹೌದು, ಆ ಹೆಣ್ಣು ಮಗಳು ಅರ್ಧರಾತ್ರಿ ಹೊತ್ತಲ್ಲಿ ಇವನು ಘನ ಗಂಡಸು ಅಂತ ಬಂದು ಕಾಲಿಡಿದುಕೊಂಡರೆ, ಈ ನರಗುರಿ ಆಡಿದ ಮಾತನ್ನು ನೀವು ಕೇಳಿಸಿಕೊಂಡಿದ್ದೀರಲ್ಲ’ ಎಂದು ತಾವು ಭೀಮ ದ್ರೌಪದಿಯರ ಸಂಭಾಷಣೆಯನ್ನು ಅದಾಗಲೇ ಗುಟ್ಟಾಗಿ ಕೇಳಿಸಿಕೊಂಡವರಂತೆ ಮಾತಾಡಿದರು. ನೀವು ಏನಾದರೂ ಹೇಳಿ, ಕೆಂಡಕೊಂಡವಾಗದೇ ಓಡಿಹೋದಳಲ್ಲ ಆ ಹೆಂಗಸೇ ಸೈ ಎಂದು ನಾವು ಅದಾಗ ತಾನೇ ನೋಡಿ ಬಂದ ಸತಿ ಜಗುಲಿಯ ಕಡೆಗೆ ಕೈ ಮಾಡಿ ತೋರಿಸಿದರು. ಗಂಡಸರು ಸೇರಿಕೊಂಡು ಹೆಣ್ಣು ಹೆಂಗಸನ್ನು ಬೆಂಕಿಗೆ ತಳ್ಳುವವರಂತೆ, ಈ ಭೀಮನು ರಾತ್ರಿಯ ಕತ್ತಲಲ್ಲಿ ‘ಕಾಪಾಡು’ ಅಂತ ಬಂದವಳನ್ನು ‘ಬೇಕಾದರೆ ಬೆಂಕಿಗೆ ಬೀಳು. ನಾನು ನಿನ್ನ ಸೂಳು ಪಾಳೆಯವ ಬಿಟ್ಟವನು’ ಅನ್ನುತ್ತಾನಲ್ಲ, ಹೆಣ್ಣು ಮಕ್ಕಳನ್ನು ಉದ್ಧಾರ ಮಾಡುವ ಮಾತೇ ಇದು ಎಂದು ಆಕ್ಷೇಪಣೆಯ ದನಿ ಎತ್ತಿ ಆ ಭಾಗದ ಪದ್ಯಗಳನ್ನು ಪುಸ್ತಕ ನೋಡದೆಯೇ ವಾಚನ ಮಾಡಿದರು. ತಾವು ಹಾಡಿದ ಪದ್ಯಗಳ ರಾಗದ ಸ್ವಾರಸ್ಯಕ್ಕೆ ನಾವು ತಲೆದೂಗಲಾಗಿ ಭೀಮನ ಮೇಲಿನ ಆಕ್ಷೇಪಣೆಯನ್ನು ಮರೆತು, ಅಯುಧವನ್ನು ಮರದ ಮೇಲೆ ಮಡಗಿದ ಭೀಮ, ಕೀಚಕನನ್ನು ಸುರಗಿ ಹಿಡಿದು ಕೊಲ್ಲಲು ಹೋದ ಎಂದು ಕೆಲವು ಅರ್ಥದಾರಿಗಳು ಹೇಳುವುದುಂಟು, ಅದು ಹಂಗಲ್ಲವೆಂದರು. ಆ ವಾಕ್ಯವನ್ನು ‘ಮೆರೆವ ಗಂಡುಡುಗೆಯನು ರಚಿಸಿದ. ಸೆರಗಿನೊಯ್ಯಾರದಲಿ ಸುರಗಿಯ ತಿರುಹುತಿರುಳೊಬ್ಬನೇ ನಿಜಾಲಯವ ಹೊರವಂಟ’ ಎನ್ನುವಲ್ಲಿ ಸುರಗಿ ಎಂದರೆ ಕತ್ತಿ ಹಿಡಿದು ಬಂದ ಎನ್ನುವುದುಂಟು. ಹಾಗೆಂದರೆ ಕತ್ತಿ ಎಂಬುದು ನಿಜ. ಆದರೆ ಹೆಣ್ಣು ರೂಪದ ಭೀಮ ಕೀಚಕನ ಭೇಟಿಗೆ ಹೋಗುವಲ್ಲಿ ಕತ್ತಿ ಹಿಡಿಯುವುದುಂಟೇ? ಅಷ್ಟೇ ಅಲ್ಲ ಅವರು ಆಯುಧಗಳನ್ನೆಲ್ಲ ಷಂಡಗೊಳಿಸಿದ್ದರಲ್ಲ. ಅಜ್ಞಾತದಲ್ಲಿ ಕತ್ತಿ ಹಿಡಿಯುವಂತಿಲ್ಲ. ಇಷ್ಟರ ಮೇಲೆ ಹೆಣ್ಣು ವೇಷ ಬೇರೆ. ಹೀಗಾಗಿ ಸುರಗಿ ಎಂಬುದೊಂದು ಹೂವು. ಪ್ರಣಯದ ನಾಟಕಕ್ಕೆ ಹೂವು ಹಿಡಿದು ಹೋಗುತ್ತಿದ್ದಾನೆಂದು ರಾಮಯ್ಯನವರು ಇನ್ನಿತರ ಅರ್ಥದಾರಿಗಳ ವ್ಯಾಖ್ಯಾನಕ್ಕೆ ಒಂದು ಪಾಠಾಂತರವನ್ನೂ ಸೂಚಿಸಿದರು.
ರಾಮಯ್ಯನವರು ವಾಕ್ಯವನ್ನೋ ಒಂದು ಪದ್ಯವನ್ನೋ ನಿಂತಲ್ಲೇ ಹಾಡಿ ತೋರಿಸುವಲ್ಲಿ ದೂರ ದೂರದಲ್ಲಿ ಹೊಲದ ಗೆಯ್ಮೆಯಲ್ಲಿದ್ದವರಿಗೆಲ್ಲ ಅವರ ಗಾಯನ ಆ ಬೆಳ್ಳಂಬೆಳಗ್ಗೆಯೇ ತೇಲಿ ತೇಲಿ ಕೇಳಿಸತೊಡಗಿತು. ಪುಸ್ತಕದ ರಾಮಯ್ಯನವರು ಶಾಲಾ ಮಾಸ್ತರರಾಗಿದ್ದುದರಿಂದ ಅವರ ಪದ್ಯದ ಓದು, ಪದಗಳ ಉಚ್ಚಾರ, ಅದಾದ ಮೇಲೆ ಮಾತನಾಡತೊಡಗಿದರೆ ಪ್ರತಿಮಾತು, ವಾಕ್ಯದ ಸ್ಪಷ್ಟತೆ ಕಿವಿಗೆ ಆಪ್ಯಾಯಮಾನವೆನಿಸುತ್ತಿತ್ತು. ಈ ನಿವೃತ್ತ ಮಾಸ್ತರರು ಮಕ್ಕಳಿಗೆ ಕನ್ನಡವನ್ನು ಅದೆಷ್ಟು ಚೆನ್ನಾಗಿ ಬೋಧಿಸಿರಬಹುದು. ಕನ್ನಡದ ಚಂದವೆಂದರೆ ಇದೇ ಅನ್ನಿಸುವಂತಿತ್ತು. ಪರಸ್ತ್ರೀಗೆ ಅಳುಪಿದವನನ್ನು ಭೀಮನು ಸಂಹಾರ ಮಾಡಿದ ಮೇಲೆ ಇದೇ ಸಂಗತಿಗೆ ಆನುಷಂಗಿಕವಾಗಿ, ಅರ್ಜುನ ಕಂಡ ಹೆಂಗಸರನ್ನೆಲ್ಲ ಲಗ್ನವಾಗುತ್ತಿದ್ದನಲ್ಲ, ಹಾಗಿದ್ದವನು ಇದೇ ವಿರಾಟ ಪರ್ವದಲ್ಲಿ ಪಾಠ ಕಲಿಸಿದ ಉತ್ತರೆಯನ್ನು ತಾನು ಲಗ್ನವಾಗಲು ಒಲ್ಲೆ, ಮಗ ಅಭಿಮನ್ಯುವಿಗೆ ಕೊಡಮಾಡಿ ಅಂದನಲ್ಲ ಅದು ನೋಡಿ ಪುರುಷಾಧಿಕ್ಯ, ಕಂಡ ಹೆಣ್ಣು ಮಕ್ಕಳನ್ನು ಲಗ್ನವಾದದ್ದಲ್ಲ ಗಂಡಸುತನ ಎಂದರು. ಭೀಮ, ಅರ್ಜುನರ ಪ್ರಸಂಗದ ಹಿನ್ನೆಲೆಯಲ್ಲಿ ರಾಮಯ್ಯನವರು ಗಂಡಸುತನ ಎಂಬುದಕ್ಕೆ, ಅದು ಹೆಣ್ಣು ಮಕ್ಕಳ ರಕ್ಷಣೆಯಲ್ಲಿ ಅಡಗಿದೆ ಎಂಬಂತೆ ವ್ಯಾಖ್ಯಾನ ನೀಡಿದರು. ಇಷ್ಟರಲ್ಲಿ ಬುಡೇನ್ ಸಾಬರು ತಮ್ಮ ದೊಗಳೆ ಜುಬ್ಬಾದ ಮೊಳದುದ್ದ ಜೇಬಿನಿಂದ ನೋಟು ಬುಕ್ಕನ್ನು ತೆಗೆದು ಈ ರಾಮಯ್ಯನವರು ಇಲ್ಲಿಯತನಕ ಏನೇನು ಹೇಳಿದರೋ ಅದರ ಸಾರಾಂಶವೆಲ್ಲ ಇಲ್ಲಿ ಉಂಟು ನೋಡಿ ಎಂದರು. ಆ ನೋಟು ಬುಕ್ಕಿನ ತುಂಬ ನೂರಾರು ತತ್ವ ಪದಗಳು ಅವರೇ ಕಾಪಿ ಮಾಡಿದವಾಗಿದ್ದವು. ಷರೀಫ್ ಸಾಹೇಬರ ಪದಗಳೊಂದಿಗೆ ಪುರಂದರ ದಾಸರ, ಕನಕದಾಸರ ಕೀರ್ತನೆಗಳೂ ಇದ್ದವು. ಈ ಕೀರ್ತನೆಗಳೊಂದಿಗೆ ಅಕ್ಕಮಹಾದೇವಿಯ ವಚನಗಳೂ ತತ್ವಪದರೂಪ ಪಡೆದು ಅಡಕವಾಗಿದ್ದವು. ಮಹಾಭಾರತ, ರಾಮಾಯಣದ ಸಾರವೇ ತತ್ವಪದಗಳು ಎಂಬ ಮಾತಿನ ಜಾಡನ್ನೇ ಹಿಡಿದು ನಮ್ಮ ಬಯಲಾಟಗಳೂ ಅದೇ ಮಹಾಕಾವ್ಯಗಳ ಭಾಗ ಭಾಗಗಳ ಆಟವಲ್ಲವೇ ಎಂದ ಬುಡೇನ್ ಸಾಬರು ತಾವು ನಾಟಕಗಳ ಹಾಡುಗಾರಿಕೆಯಲ್ಲಿ ಭಾಗವಹಿಸುವುದಾಗಿ ಹೇಳಿದರು.
ಜನಪದ ಸಮೂಹಕ್ಕೆ ಸಾಹಿತ್ಯ ಕಲೆ ಎಂದರೆ ಅದು ಶ್ರವ್ಯ ಮತ್ತು ದೃಶ್ಯವೇ. ದೃಶ್ಯ, ಶ್ರವ್ಯ ರಂಜನೆಯು ಜರುಗುತ್ತಿದ್ದುದು ಹಗಲು ಕಾಯಕದ ನಂತರ ರಾತ್ರಿಯಲ್ಲಿ. ಗ್ರಾಮೀಣ ಓದು, ಬಯಲಾಟ ಯಾವ ಪದವಿಗೂ ಸಂಬಂಧಿಸಿದ್ದಲ್ಲ. ಗ್ರಾಮಸ್ಥರ ಬದುಕಿಗೆ ಮತ್ತು ನೈತಿಕತೆಗೆ ಸಂಬಂಧಿಸಿದ್ದು. ಥಟ್ಟನೆ ಏನೋ ನೆನಪಿಸಿಕೊಂಡವರಂತೆ ರಾಮಯ್ಯನವರು ‘ಅಲಲೇ ಹೊತ್ತು ಏರುತ್ತಿದೆ. ಮಕ್ಕಳು ಮೊಮ್ಮಕ್ಕಳು ಸ್ಕೂಲಿಗೋಗಬೇಕು. ದನಕರು ಆಚೆ ಬಿಡಬೇಕು’ ಎಂದರು. ಕೃಷ್ಣಶಾಸ್ತ್ರಿಗಳು ಮಕ್ಕಳು ಮೊಮ್ಮಕ್ಕಳು ಎಷ್ಟು ಜನ ಎಂದರು. ರಾಮಯ್ಯನವರು ತಮ್ಮ ಕುಟುಂಬದ ಸದಸ್ಯರನ್ನೆಲ್ಲಾ ನೆನೆಯುತ್ತಾ, ‘ದನಕರುಗಳನ್ನೂ ಸೇರಿಸಿ ಹೇಳಲೋ, ಬಿಟ್ಟು ಹೇಳಲೋ ಎಂದು ನಗುತ್ತ ಬುಡೇನ್ ಸಾಬರೊಡನೆ ಮೂಡು ದಿಕ್ಕಿಗೆ ಬಿರ ಬಿರನೆ ನಡೆದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ