ಶುಕ್ರವಾರ, ಜುಲೈ 3, 2015

ಭಸ್ಮಾಸುರರನ್ನು ಸೃಷ್ಟಿಸುವುದು ಸುಲಭ ನಿಯಂತ್ರಿಸುವುದು ಕಷ್ಟ




-ದಿನೇಶ್ ಅಮಿನಮಟ್ಟು
ಘಟನೆ-1

ನಾನಿನ್ನೂ ಆರನೇ ತರಗತಿ ವಿದ್ಯಾರ್ಥಿ, ಉಡುಪಿ ತಾಲ್ಲೂಕಿನ ಹೆಜಮಾಡಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ.ಮುಂಬೈ ನೆಲದಿಂದ ನನ್ನನ್ನು ಕಿತ್ತು ತಂದು ಅಲ್ಲಿ ನೆಟ್ಟಿದ್ದರು. ಇನ್ನೂ ಬೇರು ಬಿಟ್ಟಿರಲಿಲ್ಲ, ಹೊಂದಿಕೊಳ್ಳಲು ಹೆಣಗಾಡುತ್ತಿದ್ದ ಕಾಲ.ಮುಂಬೈನಿಂದ ಬಂದವ ಎನ್ನುವ ಕಾರಣಕ್ಕೆ ನನ್ನ ಸಹಪಾಠಿಗಳ ಒಂದು ಗುಂಪು ನನ್ನನ್ನು ಗೋಳಾಡಿಸುತ್ತಿತ್ತು. ಅವರ ಪ್ರಮುಖ ಅಸ್ತ್ರವೆಂದರೆ ಅಶ್ಲೀಲ ಬೈಗುಳು. ಕುಂಡದ ಹೂವಿನಂತೆ ಬೆಳೆದಿದ್ದ ನಾನು ಅಲ್ಲಿಯ ವರೆಗೆ ಅಂತಹ ಬೈಗುಳಗಳನ್ನೇ ಕೇಳಿರಲಿಲ್ಲ. 


ಯಾರಿಗೂ ಹೇಳಿಕೊಳ್ಳಲಾಗದೆ ಖಿನ್ನತೆಗೊಳಗಾಗಿದ್ದ ನಾನು ಬಿಡುಗಡೆಯ ದಾರಿ ಎಂಬಂತೆ ವಾಪಸು ಕೊಡಲು ನಿರ್ಧರಿಸಿದೆ. ಅವರು ಹೇಳುತ್ತಿರುವ ಬೈಗುಳಗಳನ್ನೆಲ್ಲ ನೋಟ್ ಬುಕ್ ನಲ್ಲಿ ಬರೆದುಕೊಳ್ಳತೊಡಗಿದೆ. (ಹಳ್ಳಿ ಹುಡುಗರ ಬೈಗುಳು ಬಹಳ ಕ್ರಿಯೇಟಿವ್ ಆಗಿರುತ್ತೆ. ಅವುಗಳನ್ನೆಲ್ಲ ಇಲ್ಲಿ ಬರೆಯಲಾರೆ). ಆ ನೋಟ್ಸ್ ಇಟ್ಟುಕೊಂಡು ಹೊಸ ಬೈಗುಳಗಳನ್ನು ನಾನೇ ಸೃಷ್ಟಿ ಮಾಡತೊಡಗಿದೆ.(ಬಹುಷ: ನನ್ನ ಬರವಣಿಗೆಯ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಗಿರಬಹುದೇನೋ). 

ಸಂಪೂರ್ಣ ಸನ್ನದ್ಧನಾದ ನಂತರ ಧೈರ್ಯ ತಂದುಕೊಂಡು ನನಗೆ ಬೈದವರನ್ನು ಕೆಣಕಿ ಕೆಣಕಿ ನಾನೇ ಬೈಯ್ಯತೊಡಗಿದೆ. ಬೈಯ್ಯುತಾ ಹೋದಂತೆ ನನ್ನ ಬೈಗುಳ ಶಬ್ದಕೋಶ ಯಾವ ಪರಿಯಲ್ಲಿ ಬೆಳೆಯಿತೆಂದರೆ ಶಾಲೆಯಲ್ಲಿ ಅತ್ಯಂತ ಕೆಟ್ಟದಾಗಿ ಬೈಯ್ಯುವವರು ಯಾರೆಂದರೆ ಎಲ್ಲರೂ ನನ್ನ ಕಡೆ ತೋರಿಸುತ್ತಿದ್ದರು. ಪ್ರೈಮರಿ ಶಾಲೆ ಬಿಡುವ ಹೊತ್ತಿಗೆ ಆ ಹವ್ಯಾಸವನ್ನು ಬಿಟ್ಟುಬಿಟ್ಟೆ. ಅಷ್ಟರಲ್ಲಿ ನನಗೆ ಬೈಯ್ಯುತ್ತಿದ್ದವರೆಲ್ಲ ನನ್ನ ಗೆಳೆಯರಾಗಿಬಿಟ್ಟಿದ್ದರು.

ಘಟನೆ-2

ವಿವೇಕಾನಂದರ ಕುರಿತ ನನ್ನ ವಿವಾದಾತ್ಮಕ ಅಂಕಣ ಪ್ರಕಟವಾಗಿದ್ದ ಕಾಲ. ಅದು ಪ್ರಕಟವಾದ ದಿನದ ಬೆಳಿಗ್ಗೆ ಎಂಟರಿಂದ ಹೆಚ್ಚು ಕಡಿಮೆ ಮೂರು ದಿನಗಳ ಕಾಲ ನನ್ನ ಮೊಬೈಲ್ ರಿಂಗ್ ಆಗುವುದು ನಿಂತಿರಲಿಲ್ಲ. ಆಫ್ ಮಾಡಿಟ್ಟ ಮೊಬೈಲ್ ಅನ್ನು ರಾತ್ರಿ ಹನ್ನೆರಡು ಗಂಟೆಗೆ ಆನ್ ಮಾಡಿದರೂ ಯಾರಾದರೊಬ್ಬ ಕಾಲ್ ಮಾಡಿ ಬೈಯ್ಯುವವ. ಅಕ್ಕ, ಅಣ್ಣ, ಅಪ್ಪ, ಅಮ್ಮ, ಹೆಂಡತಿ,ಮಗಳು ಎಲ್ಲರನ್ನೂ ಸೇರಿಸಿ ಅಶ್ಲೀಲವಾಗಿ ಬೈಯ್ಯುತ್ತಿದ್ದರು.ಸಹಿಸಿಕೊಳ್ಳಲಿಕ್ಕಾಗದಂತಹ ಬೈಗುಳು. ಬೈಯ್ಯುತ್ತಿದ್ದವರೆಲ್ಲರೂ ಸಂಸ್ಕೃತಿ ಪ್ರಚಾರಕರು. ರೆಗ್ಯುಲರ್ ಆಗಿ ಈ ರೀತಿ ಕಾಲ್ ಮಾಡುತ್ತಿದ್ದ ಕೆಲವರ ನಂಬರ್ ಗಳನ್ನು ‘ಲೋಪರ್-1, -2 ಎಂದೆಲ್ಲ ಸೇವ್ ಮಾಡಿಟ್ಟುಕೊಂಡಿದ್ದೆ. ಅವರಲ್ಲಿ ಒಬ್ಬ ಹುಬ್ಬಳ್ಳಿಯ ಹುಡುಗ. ಬಾಲ್ಯದ ನನ್ನ ಗೆಳೆಯರ ನೆನೆಪಾಗುವ ರೀತಿಯಲ್ಲಿ ಬೈಯ್ಯುತ್ತಿದ್ದ. 

ನಾನು ಅಸಹಾಯಕ. ತಿರುಗಿ ಬೈಯ್ಯಬೇಕೆಂದರೂ ಎಲ್ಲಿ ಕೂತು ಬೈಯ್ಯಲಿ? ಮನೆಯಲ್ಲಿ ಆ ರೀತಿ ಬೈಯ್ಯುತ್ತಾ ಕೂತರೆ ನನ್ನ ಹೆಂಡತಿ ಮತ್ತು ಮಗಳು ‘ಇವರೂ ಹೀಗೇನಾ? ಎಂದು ನನ್ನನ್ನೇ ಸಂಶಯಿಸುತ್ತಿದ್ದರೋ ಏನೋ? ಆಫೀಸಿಗೆ ಹೋಗುವಾಗ ಬಸ್ ನಲ್ಲಿ ಬೈದರೆ ಸಹಪ್ರಯಾಣಿಕರೆಲ್ಲ ಹುಚ್ಚರೆಂದು ಅಂದುಕೊಳ್ಳುತ್ತಿದ್ದರೇನೋ? ಆಫೀಸಿನಲ್ಲಿಯೂ ಇಂತಹ ಕೆಲಸ ಮಾಡುವಂತಿರಲಿಲ್ಲ. ಬೈಯ್ಯುವುದನ್ನು ಏರು ದನಿಯಲ್ಲಿಯೇ ಮಾಡಬೇಕೇ ಹೊರತು ಪಿಸುಗುಟ್ಟುವಂತಿಲ್ಲ. ಬೈಯ್ಯುವುದು ಕೂಡಾ ನಮ್ಮಂತಹವರಿಗೆ ಕಷ್ಟ ಎನ್ನುವುದು ನನಗೆ ಆಗಲೇ ಗೊತ್ತಾಗಿದ್ದು.

ಕೊನೆಗೂ ಆ ಹುಡುಗನ ಕಾಟ ತಾಳಲಾರದೆ ಬೆಳಿಗ್ಗೆ ಆರು ಗಂಟೆಗೆ ವಾಕಿಂಗ್ ಹೊರಡುವವ ನಾಲ್ಕು ಗಂಟೆಗೆ ಹೊರಟೆ. ಅದಕ್ಕಿಂತ ಮೊದಲು ತುಳು,ಕನ್ನಡ,ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಏನೆಲ್ಲಾ ಬೈಯ್ಯಬಹುದು ಮತ್ತು ಹೇಗೆಲ್ಲಾ ಬೈಯ್ಯಬಹುದೆಂದು ನಾನು ಮನನ ಮಾಡಿಕೊಂಡು ತಯರಾಗಿದ್ದೆ. ಆ ದಿನ ನಾನು ವಾಕ್ ಮಾಡುವ ಮೈದಾನದಲ್ಲಿ ಯಾರಿನ್ನೂ ಬಂದಿರಲಿಲ್ಲ. ಮೈದಾನದ ಮಧ್ಯೆನಿಂತು ಹುಬ್ಬಳ್ಳಿಯ ‘ಲೋಫರ್ -1’ಗೆ ಪೋನ್ ಮಾಡಿದೆ. ಆತ ಪೋನ್ ಎತ್ತಿಕೊಂಡ ಕೂಡಲೇ ಆತನಿಗೆ ಮಾತನಾಡಲಿಕ್ಕೆ ಅವಕಾಶವೂ ಕೊಡದ ಹಾಗೆ ಎಲ್ಲ ಕೆಟ್ಟ,ಅಶ್ಲೀಲ ಪದಗಳನ್ನು ಉಗಿದುಬಿಟ್ಟೆ. ಅವನು ಸ್ವಲ್ಪ ಹೊತ್ತು ಪೋನ್ ಕಟ್ ಮಾಡಿ ಆನ್ ಮಾಡುವುದು ಮತ್ತೆ ನಾನು ಪೋನ್ ಮಾಡುವುದು ಸುಮಾರು ಒಂದು ಗಂಟೆ ಕಾಲ ನಡೆಯಿತು. ಅವನು ಹೆದರಿ ಮನೆಯಿಂದ ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿ ಹೊರಟ.( ಆ ಶಬ್ದ ನನಗೆ ಕೇಳಿಸುತ್ತಿತ್ತು) ಯಾರದೋ ಮನೆಮುಂದೆ ಬೈಕ್ ನಿಲ್ಲಿಸಿ ಅವರೊಡನೆ ಮಾತನಾಡಿ ಪೋನ್ ಆಫ್ ಮಾಡಿದ. ಅದರ ನಂತರ ಆತ ನನಗೆ ಬೈದು ಪೋನ್ ಮಾಡಿಲ್ಲ. ಅಷ್ಟೊಂದು ಬೈದ ನಂತರ ನಾನೂ ನಿರಾಳವಾಗಿ ಬಿಟ್ಟೆ. ಆದರೆ ಯಾವುದಕ್ಕೋ ಕಲ್ಲೆಸೆಯಬಾರದು ಅಂತಾರಲ್ಲ, ಅಂತಹದ್ದನ್ನು ನಾನು ಯಾಕೆ ಮಾಡಿದೆ ಎಂದು ನನ್ನ ಬಗ್ಗೆಯೇ ಅಸಹ್ಯವೆನಿಸಿತು.


ನರೇಂದ್ರ ಮೋದಿಯವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಒಂದಕ್ಷರ ಯಾರೇ ಬರೆದರೂ ಹೆಣ್ಣು-ಗಂಡು, ಹಿರಿಯರು-ಕಿರಿಯರು ಯಾವುದನ್ನೂ ಲೆಕ್ಕಿಸದೆ ಅವರ ಭಕ್ತರ ಗುಂಪು ಅಶ್ಲೀಲವಾಗಿ ಬೈಯ್ಯುವುದು,ನಿಂದಿಸುವುದು,ಚಾರಿತ್ರ್ಯಹರಣ ಮಾಡುತ್ತಿರುವುದನ್ನು ನೋಡಿದಾಗ ಈ ಎರಡು ಘಟನೆಗಳು ನೆನಪಾಯಿತು. ಈ ಬೈಗುಳ ವೀರರೆಲ್ಲರೂ ವಿದ್ಯಾವಂತರು. ಇವರು ಭಿನ್ನಾಭಿಪ್ರಾಯಗಳನ್ನು ಸೈದ್ಧಾಂತಿಕವಾಗಿ ಚರ್ಚಿಸಲು ಬರುವುದಿಲ್ಲ. ಬರೀ ಬೈಗುಳು. ತಮಗೊಲ್ಲದವರನ್ನು ಚುಚ್ಚಿ ಸಂತೋಷ ಪಡುವ ವಿಕೃತಾನಂದರು. ಇತ್ತೀಚೆಗೆ ಯಾರಾದರೂ ಬೈದರೆ ಈತ ಮೋದಿ ಅಭಿಮಾನಿ ಇರಬಹುದೇನೋ ಎಂದು ಸಂಶಯ ಪಡುವಷ್ಟು ಮೋದಿ ಭಕ್ತರ ಹಾವಳಿ ಆವರಿಸಿಕೊಂಡುಬಿಟ್ಟಿದೆ. ಇಂತಹವರನ್ನು ಕಾನೂನಿನ ಮೂಲಕವೇ ಸರಿಪಡಿಸಬಹುದೇನೋ ಎಂಬ ಸಣ್ಣ ಆಸೆಯಿಂದ ನಾನು ಪೊಲೀಸರಿಗೆ ದೂರು ನೀಡಿದರೆ ‘ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ’ ಎಂದು ಗುಲ್ಲೆಬ್ಬಿಸಲಾಯಿತು. ಸ್ವತ: ನರೇಂದ್ರ ಮೋದಿಯವರು ಮಾತ್ರವಲ್ಲ, ಸಂಸದ ಪ್ರತಾಪ ಸಿಂಹ ಕೂಡಾ ತಮ್ಮ ವಿರುದ್ದ ಬರೆದವರ ವಿರುದ್ಧ ಸೆಕ್ಷನ್ 66 ಎ ಬಳಸಿಕೊಂಡು ದೂರು ನೀಡಿದ್ದನ್ನು ಅವರು ಮರೆತೇ ಬಿಟ್ಟಿದ್ದರು.

ಆದರೆ ಈ ರೀತಿ ಬರೆಯುವ ಮೂಲಕ ಜಗತ್ತಿನ ಮುಂದೆ ತಾವು ಬೆತ್ತಲಾಗುತ್ತಿದ್ದೇವೆ ಎನ್ನುವ ಅರಿವು ಈ ಮೋದಿ ಭಕ್ತರಿಗಿಲ್ಲ. ಇತ್ತೀಚೆಗೆ ಇವರಲ್ಲಿ ಕೆಲವರನ್ನು ನಾನು ಬ್ಲಾಕ್ ಮಾಡಿದ್ದೇನೆ. ಇನ್ನು ಕೆಲವರನ್ನು ಉಳಿಸಿಕೊಂಡಿದ್ದೇನೆ. ಮೋದಿಯವರಿಗೆ ಎಂತೆಂತಹ ಅಭಿಮಾನಿಗಳಿದ್ದಾರೆನ್ನುವುದು ಜಗತ್ತಿಗೆ ಗೊತ್ತಾಗಲಿ. ಇವರನ್ನೆಲ್ಲ ಬಳಸಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರು ಈಗ ಸೋಷಿಯಲ್ ಮೀಡಿಯಾದಲ್ಲಿರುವ ತನ್ನ ಅಭಿಮಾನಿಗಳಿಗೆ ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದನ್ನು ಓದಿ ಇದನ್ನು ಬರೆಯಬೇಕೆನಿಸಿತು. ತಮ್ಮ ಆರಾಧ್ಯ ದೈವದ ಮಾತಿಗೆ ಭಕ್ತರು ಹೇಗೆ ಪ್ರತಿಕ್ರಿಯಿಸುತ್ತಾರೆನ್ನುವುದನ್ನು ಕಾದು ನೋಡಬೇಕು. ಭಸ್ಮಾಸುರರನ್ನು ಸೃಷ್ಟಿಸುವುದು ಸುಲಭ ನಿಯಂತ್ರಿಸುವುದು ಕಷ್ಟ.

ಕಾಮೆಂಟ್‌ಗಳಿಲ್ಲ: