ಶುಕ್ರವಾರ, ಜುಲೈ 3, 2015

ಕಂಸಾಳೆ-ಕೈಸಾಳೆ ; ಜಾನಪದ ಸಂಸ್ಕೃತಿ ಅನಾವರಣ

- ಹುಣಸೆವಾಡಿ ಶ್ರೀಕಾಂತ್
ಕರ್ನಾಟಕ ಜಾನಪದ ವೈವಿಧ್ಯತೆಗೆ ಹೆಸರಾದ ರಾಜ್ಯ. ಇಲ್ಲಿನ ಜನಪದ ಕಲೆಗೆ ಮಾರುಹೋಗದವರಿಲ್ಲ. ಜಾನಪದ ವೈವಿಧ್ಯತೆಯನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸಲು ಹಲವು ನಿರ್ದೇಶಕರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ವಿಶಾಲ ವ್ಯಾಪ್ತಿಯಿರುವ ಜನಪದವನ್ನು ಕಟ್ಟಿಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ಹಲವು ಜನಪದ ಚಿತ್ರಗಳನ್ನು ಕಟ್ಟಿಕೊಟ್ಟಿರುವ ಯಶಸ್ವಿ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಇದೀಗ ಕಂಸಾಳೆ-ಕೈಸಾಳೆ ಚಿತ್ರದ ಮೂಲಕ ಜನಪದ ಸೊಗಡನ್ನು ಬೆಳ್ಳಿತೆರೆಯ ಮೇಲೆ ತರುತ್ತಿದ್ದಾರೆ.

ಚಿನ್ನಾರಿಮುತ್ತ ನಿರ್ದೇಶಿಸಿ 19 ವರ್ಷಗಳ ನಂತರ ನಿರ್ದೇಶಕ ನಾಗಾಭರಣ ಕಂಸಾಳೆ-ಕೈಸಾಳೆ ಎನ್ನುವ ಮಕ್ಕಳ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಅನೇಕ ಜನಪದ ಪ್ರಾಕಾರಗಳನ್ನು ಮತ್ತು ಅವುಗಳ ಕಲಿಕಾ ವಿಧಾನಗಳನ್ನು ಚಿತ್ರದಲ್ಲಿ ಬಳಸಿಕೊಳ್ಳುವುದರ ಜತೆಗೆ ಜೀವನಶೈಲಿ, ಜೀವನಪ್ರೀತಿಯನ್ನು ಸಾರಲು ಹೊರಟಿದ್ದಾರೆ ಭರಣ. ನಗರದ ಜಂಜಡದ ಬದುಕಿನಲ್ಲಿ ಮಕ್ಕಳಿಗೆ ಜನಪದ ಕಲೆಯ ಅರಿವೇ ಇರುವುದಿಲ್ಲ ಅಂತಹುದರಲ್ಲಿ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಹೋದ ಒಬ್ಬ ನಾಲ್ಕನೇ ತರಗತಿ ಓದುವ ಹುಡುಗ ಉದ್ದೇಶ ಪೂರ್ವಕವಾಗಿಯೇ ತಪ್ಪಿಸಿಕೊಳ್ಳುತ್ತಾನೆ. ಅಲ್ಲಿ ಕಂಸಾಳೆ ತಂಡವೊಂದರ ಜತೆಯಾಗಿ ಆ ಕಲೆಯನ್ನು ರೂಢಿಸಿಕೊಳ್ಳುತ್ತಾನೆ. ಆ ಕಂಸಾಳೆ ತಂಡದಲ್ಲಿ ಒಬ್ಬನಾಗಿ ಆತ ಬೇರೊಂದು ಪ್ರಪಂಚವನ್ನು ನೋಡುತ್ತಾನೆ. ಈ ರೀತಿ ಸಾಗುತ್ತದೆ ಚಿತ್ರದ ಕಥೆ….

 

ಅಪ್ಪು-ಪಪ್ಪು ಚಿತ್ರದ ಮೂಲಕ ಗಮನಸೆಳೆದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ  ಪುತ್ರ ಸ್ನೇಹಿತ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಉಳಿದಂತೆ ನಾಟ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಶ್ರೀಧರ್ ಹಾಗೂ ಪುಟಾಣಿ ಮಕ್ಕಳ ತಂಡ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಕೆ. ಕಲ್ಯಾಣ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆಲವು ಗೀತೆಗಳನ್ನು ಅವರೇ ಬರೆದಿದ್ದಾರೆ. ಇನ್ನು ಕೆಲವು ಗೀತೆಗಳನ್ನು ಮಾದೇಶ್ವರ ಪುಸ್ತಕದಿಂದ ಆಯ್ದುಕೊಂಡಿದ್ದಾರಂತೆ.





ಮೊನ್ನೆ ಈ ಚಿತ್ರದ ಹಾಡುಗಳ ಧ್ವನಿಮುದ್ರಿಕೆ ಸಮಾರಂಭ ನಡೆಯಿತು. ಸಾಮಾನ್ಯವಾಗಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದೊಡ್ಡವರ ಪಾರುಪತ್ಯ ಇರುತ್ತದೆ. ಆದರೆ ಇದು ಮಕ್ಕಳ ಚಿತ್ರವೇ ಆಗಿರುವುದರಿಂದ ಅಲ್ಲಿ ಎಲ್ಲಾ ಉಸ್ತುವಾರಿಯನ್ನು ಮಕ್ಕಳೇ ನೋಡಿಕೊಳ್ಳುತ್ತಿರುವುದು ವಿಭಿನ್ನವಾಗಿತ್ತು. ಚಿತ್ರದಲ್ಲಿ ಅಭಿನಯಿಸಿರುವ ಮಕ್ಕಳೆಲ್ಲ ತಮಗೆ ತೋಚಿದ ರೀತಿ ತಮ್ಮ ಅನುಭವವನ್ನು ಹೇಳಿಕೊಂಡರು.


ಲಹರಿ ಸಂಸ್ಥೆ ಚಿತ್ರದ ಆಡಿಯೋಗಳನ್ನು ಮಾರುಕಟ್ಟೆಗೆ ತಂದಿದೆ. ಬೇಸಿಗೆ ರಜೆಯಲ್ಲಿ ಚಿತ್ರವನ್ನು ತೆರೆಕಾಣಿಸುವ ಆಲೋಚನೆಯಲ್ಲಿರುವ ನಿರ್ದೇಶಕ ನಾಗಾಭರಣ ಅವರು ಚಿತ್ರದ ಕುರಿತಂತೆ ಹೇಳಿದಿಷ್ಟು. ಇಂದು ಶಿಕ್ಷಣ ಯಾಂತ್ರೀಕೃತವಾಗಿದೆ. ಮಕ್ಕಳು ಓದುವುದನ್ನು ಬಿಟ್ಟು, ಬೇರೆ ಆಟ-ಪಾಠ ಕಲೆ ಇವುಗಳ ಬಗ್ಗೆ ಯೋಚಿಸುವುದಕ್ಕೂ ಆಗುತ್ತಿಲ್ಲ. ಅಂತಹ ಮಕ್ಕಳಿಗೆ ಜನಪದ ಕಲೆಯ ಬಗ್ಗೆ ಆಸಕ್ತಿ ಮತ್ತು ಗುರುಶಿಷ್ಯರ ಸಂಬಂಧ ನಮ್ಮ ಕಲಾಲೋಕದ ಅನಾವರಣ ಮತ್ತಿತರ ವಿಷಯಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದರು. ಮೈಸೂರಿನ ಮಹೇಶ್ ಅವರು ಈ ಚಿತ್ರದ ನಿರ್ಮಾಪಕರು. ಚಿತ್ರ ನಿರ್ಮಾಣ ಮಾಡುವ ತಮ್ಮ ಕನಸು ಈ ಚಿತ್ರದ ಮೂಲಕ ನನಸು ಮಾಡಿಕೊಂಡಿದ್ದಾರೆ ಅವರು.

ಕಾಮೆಂಟ್‌ಗಳಿಲ್ಲ: