ಬುಧವಾರ, ಜುಲೈ 22, 2015

‘ನಮ್ಮ ಜಾನಪದ’ದ ಸಂಕ್ರಮಣದಯಾನಂದ
ಸೌಜನ್ಯ:ಪ್ರಜಾವಾಣಿ
ಹೊಸ ನೀರು ಬಂದಾಗ ಹಳೆಯ ನೀರು ಕೊಚ್ಚಿಕೊಂಡು ಹೋಗುತ್ತದೆ ಎನ್ನುವುದೊಂದು ಮಾತಿದೆ. ಈ ಮಾತು ಜಾನಪದಕ್ಕೂ ಅನ್ವಯಿಸುತ್ತದೆಯೇ? ಆಧುನಿಕತೆಯ ನಾಗಾಲೋಟ, ಜಾಗತೀಕರಣದ ಪ್ರಭಾವಳಿಗಳ ಹಿನ್ನೆಲೆಯಲ್ಲಿ ಕೇಳಿಬರುವ ಪ್ರಶ್ನೆ– ‘ನಮ್ಮ ಜಾನಪದ’ದ ಅಸ್ತಿತ್ವಕ್ಕೆ ಧಕ್ಕೆ ಬಂದಿದೆಯೇ?
ಜಾನಪದವನ್ನು ಕಳೆದುಕೊಂಡು ಬಿಡುತ್ತೇವೆ ಎಂಬ ಆತಂಕವೇ ಅನವಶ್ಯಕ. ಇಂದು ನಾವು ಬದುಕುತ್ತಿರುವುದು ‘ಇಂದಿನ ಜಾನಪದ’. ಹಿಂದಿನದ್ದು ‘ಹಿಂದಿನ ಜಾನಪದ’. ಜಾನಪದಕ್ಕೆ ಸಾವಿಲ್ಲ. ಅದು ಅವಿನಾಶಿ ಎನ್ನುವ ತರ್ಕವೂ ಇದೆ. ಜಗತ್ತಿನ ಪ್ರತಿಯೊಂದೂ ಬದಲಾವಣೆಯ ಪ್ರಕ್ರಿಯೆಗೆ ಒಳಗಾಗಲೇಬೇಕು ಎನ್ನುವ ಸತ್ಯವನ್ನು ಪ್ರತಿಪಾದಿಸುವವರೂ ಇದ್ದಾರೆ. ಒಂದಂತೂ ನಿಜ– ಏಕರೂಪ ಆಗುತ್ತಿರುವ ಜೀವನ ವಿಧಾನ, ಪಾಶ್ಚಿಮಾತ್ಯ ಪ್ರಭಾವದ ಹಿನ್ನೆಲೆಯಲ್ಲಿ ‘ನಮ್ಮ ಜಾನಪದ’ ಹೊರಳು ದಾರಿಯಲ್ಲಿದೆ ಎಂಬುದನ್ನು ಒಪ್ಪದೇ ಇರಲು ಸಾಧ್ಯವಿಲ್ಲ.
ನಗರೀಕರಣ ಇಂದು ಹಳ್ಳಿಗಳನ್ನೂ ಬಾಚಿ ಅಪ್ಪಿಕೊಳ್ಳುತ್ತಿದೆ. ಜಾನಪದ ಹಳ್ಳಿಗಳಲ್ಲೇ ಉಳಿಯಬೇಕೆಂಬ ನಿಯಮವೇನೂ ಇಲ್ಲದಿದ್ದರೂ ನಮ್ಮ ಜಾನಪದದ ಬೇರು ಇಂದಿಗೂ ಉಳಿದುಕೊಂಡಿರುವುದು ಹಳ್ಳಿಗಳಲ್ಲೇ. ಹೀಗಾಗಿ ಹಿಂದಿನ ಜನಪದ ಪ್ರಕಾರಗಳಿಗೆ ಆಧುನಿಕತೆ ಕೆಡುಕು ಉಂಟು ಮಾಡುತ್ತದೆ ಎಂಬ ಆತಂಕ ಸಹಜವೂ ಕೂಡ. ಹಾಗೆಂದು ಹಳ್ಳಿಯ ಮಕ್ಕಳಿಗೆ ಆಧುನಿಕತೆಯ ಸ್ವಾತಂತ್ರ್ಯ ಬೇಡವೇ? ಜಾನಪದವನ್ನು ಕೇವಲ ಅನಕ್ಷರಸ್ಥರು, ಹಳ್ಳಿಗರು ಮಾತ್ರ ಉಳಿಸಬೇಕೇ? ಟೀವಿ ನೋಡುವ ಅನುಕೂಲ ಹಳ್ಳಿಗರಿಗೆ ಬೇಡವೇ?– ಇಂಥ ಪ್ರಶ್ನೆಗಳಿಗೆ ಉತ್ತರ ಅಷ್ಟು ಸುಲಭವಿಲ್ಲ.
ಜನಪದ ಆಚರಣೆ, ಕಲೆಗಳನ್ನು ಇಂದಿನ ಸಂದರ್ಭದಲ್ಲಿ ನೋಡಿದರೆ ಅವು ಯಾವುವೂ ತಮ್ಮ ಮೂಲ ಸ್ವರೂಪವನ್ನು ಉಳಿಸಿಕೊಂಡಿಲ್ಲ. ಹಾಗೆ ಮೂಲ ಸ್ವರೂಪ ಉಳಿಸಿಕೊಳ್ಳಲು ಮುಂದಾದರೆ ಜನಪದ ಆಚರಣೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾದ ಅಪಾಯ ಇದ್ದೇ ಇದೆ. ಬದಲಾವಣೆಗೆ ಒಗ್ಗಿಕೊಳ್ಳುತ್ತಲೇ ಆಚರಣೆಗಳು ಉಳಿದುಬಂದಿವೆ. ಇಂದು ಬಹುತೇಕ ಜನಪದ ಆಚರಣೆ, ಕಲೆಗಳು ಹೊಸತನಕ್ಕೆ ತಕ್ಕಂತೆ ಬದಲಾಗಿವೆ, ಬದಲಾಗುತ್ತಿವೆ.
ಧಾರ್ಮಿಕ ಅಂಶಗಳ ಸವಕಳಿ
ಬಹುತೇಕ ಜನಪದ ಆಚರಣೆಗಳಲ್ಲಿ ಇಂದು ಧಾರ್ಮಿಕ ಅಂಶ ಮರೆಯಾಗಿ ಅವು ಕೇವಲ ಜನಪದ ಆಚರಣೆಗಳಾಗಿ ಮಾತ್ರ ಉಳಿದುಕೊಂಡಿವೆ. ವೀರಗಾಸೆ, ಪಟದ ಕುಣಿತ, ಸೋಮನ ಕುಣಿತಗಳು ಧಾರ್ಮಿಕ ಅಂಶಗಳಿಗಿಂತ ಹೆಚ್ಚು ಪಾಲು ಜನಪದ ಆಚರಣೆಗಳಾಗಿ ಪ್ರಚಾರ ಪಡೆಯುತ್ತಿವೆ. ಊರಿನ ಜಾತ್ರೆ, ಹಬ್ಬ, ಮೆರವಣಿಗೆಗೆ ಮೀಸಲಾಗಿದ್ದ ಈ ಆಚರಣೆಗಳು ಈಗ ವೇದಿಕೆಯ ಮೇಲೆ ಪ್ರದರ್ಶನ ಕಾಣುವ ಜನಪದ ಪ್ರದರ್ಶನ ಕಲೆಗಳಾಗಿ ಪರಿವರ್ತನೆ ಹೊಂದಿವೆ.
ಇನ್ನು ಕೆಲವು ಆಚರಣೆಗಳು ಧಾರ್ಮಿಕ ಅಂಶಗಳಿಂದಾಗಿಯೇ ಇನ್ನೂ ಜೀವಂತವಾಗಿವೆ. ಘಟ್ಟದ ಕೆಳಗಿನ ಭೂತದ ಕೋಲ, ನಾಗಮಂಡಲದಂಥ ಆಚರಣೆಗಳು, ಹಳೇ ಮೈಸೂರು ಭಾಗದಲ್ಲಿ ಹರಿಸೇವೆ, ಮಾರಿ ಹಬ್ಬ, ಸಿಡಿ ಸೇವೆ ಮೊದಲಾದ ಆಚರಣೆಗಳು ಧಾರ್ಮಿಕ ನಂಬಿಕೆಯ ಕಾರಣದಿಂದಲೇ ಇಂದಿಗೂ ಉಳಿದುಕೊಂಡಿವೆ. ಜನರಲ್ಲಿ ಧಾರ್ಮಿಕ ನಂಬಿಕೆ ಕಡಿಮೆಯಾಗುತ್ತಾ ಬಂದಂತೆ ಈ ಆಚರಣೆಗಳೂ ಪ್ರದರ್ಶನ ಕಲೆಗಳಾಗಿ ಬದಲಾಗಬೇಕಾಗುತ್ತದೆ. ಇಲ್ಲವೇ ಅವು ಅಸ್ತಿತ್ವ ಕಳೆದುಕೊಳ್ಳುವುದು ಅನಿವಾರ್ಯ. ಜನಪದ ಕಲೆಗಳು ಹೊಸ ಕಾಲಕ್ಕೆ ತಕ್ಕಂತೆ ಬದಲಾಗುತ್ತಿವೆ. ‘ತಿಂಗಳು ಮಾವನ ಪೂಜೆ’ ಮಾಡಿ ಕೋಲಾಟವಾಡುತ್ತಿದ್ದ ಹಳ್ಳಿಗಳು ಇಂದು ಅಪರೂಪವಾಗಿವೆ.
ಕೋಲಾಟದ ಕೆಲವೇ ತಂಡಗಳು ಮಾತ್ರ ಈಗ ಉಳಿದುಕೊಂಡಿವೆ. ಕೋಲಾಟ ಪ್ರದರ್ಶನ ಕಲೆಯಾಗಿ ಮಾತ್ರ ಇಂದು ಉಳಿದುಕೊಂಡಿದೆಯೇ ಹೊರತು ಆಚರಣೆಯ ರೂಪದಲ್ಲಿ ಉಳಿದುಕೊಂಡಿಲ್ಲ. ಹಳ್ಳಿಗಳ ಹೊಸ ತಲೆಮಾರು ಕೋಲಾಟದ ಬಗ್ಗೆ ನಿರಾಸಕ್ತಿ ಹೊಂದಿದೆ. ಇಂಥ ನಿರಾಸಕ್ತಿಗೆ ಇಂದು ಬಹುತೇಕ ಜನಪದ ಕಲೆಗಳು ತುತ್ತಾಗಿವೆ. ನಂದಿಕೋಲಿನ ಕುಣಿತ, ವೀರಗಾಸೆ ಕುಣಿತಗಳು ಮೇಲು ಜಾತಿಯ ಜನಪದ ಕಲೆಗಳಾದ್ದರಿಂದ ಆ ಜಾತಿಗಳ ಹೊಸ ಪೀಳಿಗೆ ಈ ಕಲೆಗಳನ್ನು ಕಲಿಯುವುದು ಜಾತಿಯ ಹೆಗ್ಗುರುತು ಸ್ಥಾಪಿಸಿಕೊಳ್ಳಲು ಎಂಬಂತಾಗಿದೆ. ತಮ್ಮ ಜಾತಿ ಮೇಲಿನದು ಎಂಬುದನ್ನು ತೋರಿಸಿಕೊಳ್ಳುವ ಸಲುವಾಗಿಯಾದರೂ ಈ ಪ್ರದರ್ಶನ ಕಲೆಗಳು ಉಳಿದು ಬರುತ್ತಿರಬಹುದು. ಈ ಊಹೆ ಬಹುತೇಕ ಪಾಲು ನಿಜವೇ ಆಗಿರುತ್ತದೆ. ಏಕೆಂದರೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲು ಜಾತಿಯ ವ್ಯಕ್ತಿ ತನ್ನ ಜಾತಿಯನ್ನು ಮೆರೆಸಲು ಹಿಂದೇಟು ಹಾಕಲಾರ!
ಲಾವಣಿ ಮೇಳ, ಗೊಂದಲಿಗರ ಮೇಳ, ಅಣಿಪಿಣಿ, ಗೀಗೀ ಮೇಳ, ಭಜನೆ ಮನೆ, ಹಂತಿ ಮೇಳ, ದೊಂಬಿದಾಸರ ಮೇಳ, ತಂಬೂರಿ ಮೇಳ, ಚೌಡಿಕೆ ಮೇಳ, ಕಹಳೆ ಮೇಳ, ದುಮ್ಮಾಲಿ ಮೇಳ, ಕರಪಾಲ ಮೇಳ, ಗೊರವರ ಕುಣಿತ, ಹುಲಿವೇಷ, ಚಿಟ್ ಮೇಳ, ಅರೆ ವಾಲಗ, ಜುಂಜಪ್ಪ, ಹಾವಾಡಿಗರಾಟ, ಭೂತ ಪೋತೆ, ಬುಡಬುಡಕಿ, ಕೋಲೆ ಬಸವ, ಹಗಲು ವೇಷಗಳು ಕಾಲ ಕ್ರಮೇಣ ಪಳೆಯುಳಿಕೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ. ಜಾತಿಯಿಂದಲೇ ಬಂದ ಈ ಕಲೆಗಳು ಜಾತಿಯ ಕಾರಣಕ್ಕೇ ಇನ್ನಿಲ್ಲವಾಗುತ್ತಿವೆ. ಈ ಜಾತಿಗಳ ಅಕ್ಷರ ಕಲಿತ ಮಕ್ಕಳಿಗೆ ತಮ್ಮ ಜಾತಿ ಸಂಕೇತವಾದ ಈ ಕಲೆಗಳ ಬಗ್ಗೆ ಉದಾಸೀನ ಮಾತ್ರವಲ್ಲ, ಕೋಪವೂ ಇದೆ. ಹೀಗಾಗಿ ಈ ಕಲೆಗಳನ್ನು ಇತರೆ ಯುವ ಜನರು ಆಸಕ್ತಿಯಿಂದ ಕಲಿಯದೆ ಹೋದರೆ ಇವೆಲ್ಲ ವಸ್ತು ಸಂಗ್ರಹಾಲಯ ಸೇರುವುದಷ್ಟೇ ಇನ್ನು ಹೆಚ್ಚುಗಾರಿಕೆ.
ಮಿತಿಗೊಳ್ಳುತ್ತಿರುವ ಆಚರಣೆಗಳು
ಒಂದು ಕಡೆಗೆ ಜನಪದ ಆಚರಣೆ, ಕಲೆಗಳ ಬಗ್ಗೆ ನಗರಗಳ ಒಂದು ವರ್ಗಕ್ಕೆ ಕುತೂಹಲ ಆಕರ್ಷಣೆಗಳು ಹೆಚ್ಚುತ್ತಿವೆ. ವಿದೇಶಗಳಲ್ಲಿ ಈ ಕಲೆಗಳನ್ನು ಪ್ರಚುರ ಪಡಿಸಬೇಕೆಂಬ ಉತ್ಸಾಹ ಈ ವರ್ಗಕ್ಕಿದೆ. ಆದರೆ, ಜನಪದರಿಗೆ ತಮ್ಮ ಕಲೆಗಳ ಬಗ್ಗೆ ಒಲವು ಕಡಿಮೆಯಾಗುತ್ತಿದೆ. ಶಾಸ್ತ್ರೀಯ ಸಂಗೀತದ ಕಲಾವಿದನೊಬ್ಬ ಅದನ್ನೇ ಉದ್ಯೋಗವಾಗಿ ಮಾಡಿಕೊಳ್ಳುವಂತೆ ಜನಪದ ಕಲಾವಿದ ತನ್ನ ಕಲೆಯನ್ನೇ ನೆಚ್ಚಿಕೊಂಡು ಬದುಕಲು ಸಾಧ್ಯವಿಲ್ಲ. ಹವ್ಯಾಸವಾಗಿಯಷ್ಟೇ ಜನಪದ ಕಲೆಗಳು ಕಲಾವಿದರಲ್ಲಿ ಉಳಿದುಕೊಂಡಿವೆ. ದಸರಾ, ಜಾನಪದ ಹಬ್ಬ, ಊರ ಮೆರವಣಿಗೆಗಳಲ್ಲಿ ಸಿಗುವ ಕೆಲವು ಸಾವಿರ ರೂಪಾಯಿಗಳನ್ನು ನೆಚ್ಚಿಕೊಂಡು ಜನಪದ ಕಲಾವಿದರು ಬದುಕು ನಡೆಸುವುದು ಈಗ ಸಾಧ್ಯವಿಲ್ಲ.
ಜನಪದರಿಗೆ ತಮ್ಮ ಕಲೆಗಳ ಬಗ್ಗೆ ಒಲವು ಕಡಿಮೆಯಾಗುತ್ತಾ ಬಂದಂತೆ ಪ್ರದರ್ಶನದ ಅವಧಿ, ಪ್ರದರ್ಶನದ ರೂಪಗಳೂ ಬದಲಾಗುತ್ತಿವೆ. ವಾರಗಟ್ಟಲೆ, ರಾತ್ರಿ ಇಡೀ ಹಾಡುತ್ತಿದ್ದ ಜನಪದ ಮಹಾಕಾವ್ಯಗಳು ಗಂಟೆಗಳ ಅವಧಿಗೆ ಸೀಮಿತವಾಗಿವೆ. ‘ತತ್ತೋಂ ತದಿಗಿಣ ತೈ ತದಿಗಿಣ ತಾಂ ತದಿಗಿಣ ತೋಂ’ ಮಟ್ಟಿಗೆ ಮುಂಗಾಲ ಮೇಲಿಂದ ಚಿಮ್ಮಿ ಕುಣಿಯುತ್ತಿದ್ದ ಮೂಡಲಪಾಯದ ಕಲಾವಿದರು ಈಗ ಇಲ್ಲವಾಗಿದ್ದಾರೆ. ಸಂತೆ, ಜಾತ್ರೆಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿದ್ದ ಜುಂಜಪ್ಪಗಳು ಕಾಣೆಯಾಗಿದ್ದಾರೆ. ಮನೆ ಮನೆಗೆ ಹಾಡಿಕೊಂಡು ಭಿಕ್ಷೆಗೆ ಬರುತ್ತಿದ್ದ ದೊಂಬಿದಾಸರು ಈ ರೂಢಿ ಬಿಟ್ಟು ಬಹಳ ಕಾಲವಾಗಿದೆ. ಕರಗ, ಜಾತ್ರೆ, ಉತ್ಸವಗಳು ಧಾರ್ಮಿಕ ನಂಬಿಕೆಯ ಕಾರಣದಿಂದಾಗಿ ಮಾತ್ರ ಅಲ್ಲಲ್ಲಿ ನಡೆಯುತ್ತಿವೆ. ಆದರೆ, ಧಾರ್ಮಿಕ ನಂಬಿಕೆಯ ಹೆಸರಲ್ಲಿ ಮೂಢನಂಬಿಕೆಯೂ ಜೀವಂತವಾಗಿ ಉಳಿದುಕೊಳ್ಳುವ ಅಪಾಯವೂ ಇದೆ.
ಸಡಿಲಗೊಂಡ ಜಾತಿಯ ಗೆರೆ
ಜಾತಿಯ ಸಂಕೇತವಾಗಿ ಉಳಿದುಕೊಂಡಿದ್ದ ಆಚರಣೆಗಳನ್ನು ಆಯಾ ಜಾತಿಯವರೇ ಬಿಡಲು ಮನಸ್ಸು ಮಾಡಿ ಬಹಳ ಕಾಲವಾಗಿದೆ. ಊರಿನ ಎಲ್ಲರೂ ಕೂಡಿ ಆಚರಿಸುವ ಜಾತ್ರೆಯಲ್ಲಿ ಮೇಲು ನೋಟಕ್ಕೆ ಜಾತ್ಯತೀತ ಸನ್ನಿವೇಶವನ್ನು ಕಾಣಬಹುದಾದರೂ ಜಾತ್ರೆ ಆಚರಣೆಯ ಆಳದಲ್ಲಿ ಜಾತಿ ಗಟ್ಟಿಯಾಗಿದೆ. ತಮಟೆ ಬಾರಿಸುವ ದಲಿತರು ಅಲ್ಲಿ ಹತ್ತಿರವಿದ್ದರೂ ದೂರ! ನಡೆ ಮುಡಿ ಹಾಸುವ ಅಗಸ ಅಲ್ಲಿ ಕೆಳಗೆ! ಗ್ರಾಮ ದೇವತೆಗೆ ಕೋಣನ ಬಲಿ ಬೇಕು. ಆದರೆ, ಕೋಣವನ್ನು ಕಡಿಯುವವ ಅಲ್ಲಿ ಅಸ್ಪೃಶ್ಯ. ಸೋಮನ ಹೆಜ್ಜೆಗೆ ಅರೆ ವಾಲಗದ ನಾದ ಬೇಕು. ಆದರೆ, ಅವರಿಂದ ದೇವರೂ ದೂರ.
ಗ್ರಾಮ ಜೀವನದ ಈ ಅಸಮಾನತೆಯಿಂದ ರೋಸಿ ಹೋದ ಅದೆಷ್ಟೋ ದಲಿತರು ತಮಟೆ ಬಾರಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಮೈಲಿಗೆ ಬಟ್ಟೆ ಒಗೆಯುವ ಸುಖ ನಿಮಗೇ ಇರಲಿ, ಇನ್ನು ನಡೆಮಡಿ ಹಾಸುವುದಿಲ್ಲ, ಪಂಜು ಹಿಡಿಯುವುದಿಲ್ಲ ಎಂದು ಅಗಸರು ಬೇರೆ ಕೆಲಸ ನೋಡಿಕೊಂಡಿದ್ದಾರೆ. ಅಕ್ಷರಸ್ಥರಾದ ದೊಂಬಿದಾಸರು, ಕಿಳ್ಳೇಕ್ಯಾತರು, ಗೊಂಬೆರಾಮರು ಜಾತಿ ಹೆಸರು ಹೇಳಿಕೊಳ್ಳಲೇ ಹಿಂಜರೆದು ತಮ್ಮ ಕಲೆಗಳನ್ನು ಮರೆತಿದ್ದಾರೆ. ಇನ್ನು ಸಣ್ಣ ಅಲೆಮಾರಿ ಸಮುದಾಯಗಳು ಹಳ್ಳಿ ಬಿಟ್ಟು ನಗರ ಸೇರಿ ತಮ್ಮ ಮೂಲ ವೃತ್ತಿಗೆ ತಿಲಾಂಜಲಿ ಇಟ್ಟು ಬೇರೆಯೇ ಜಾತಿಯವರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕಾಲದ ಕಾರಣಕ್ಕೆ ಜಾತಿಯ ಗೆರೆ ಸಡಿಲಗೊಂಡಿದೆ. ಅದರ ಜತೆಗೇ ಕಳ್ಳುಬಳ್ಳಿಯ ನಂಟು ಹೊಂದಿದ್ದ ಜನಪದ ಆಚರಣೆ, ಕಲೆಗಳೂ ಮಾಯವಾಗಿವೆ, ಆಗುತ್ತಿವೆ.
ಬದಲಾದ ವೇಷ–ಭಾಷೆ
ಕಾಲ ಬದಲಾದಂತೆ ಜನಪದ ಆಚರಣೆಗಳು ತಮ್ಮ ಮೂಲ ಸ್ವರೂಪ ಬದಲಿಸಿಕೊಳ್ಳುತ್ತಿರುವಂತೆ ಇಲ್ಲಿನ ವೇಷ, ಭಾಷೆ, ವಾದ್ಯ, ಪರಿಕರಗಳಲ್ಲೂ ಬದಲಾವಣೆ ಕಂಡುಬರುತ್ತಿದೆ. ಗೊರವರ ಕುಣಿತದ ಹೊಸ ಗುಂಪುಗಳಿಗೆ ಕರಡಿ ತೊಗಲು ಸಿಗುವುದು ಈಗ ಅಷ್ಟು ಸುಲಭವಲ್ಲ. ಹೀಗಾಗಿ ಕರಡಿ–ಹುಲಿ ತುಪ್ಪಟದ ಜಾಗವನ್ನು ವೆಲ್ವೆಟ್ ಬಟ್ಟೆ ತುಂಬುತ್ತಿದೆ. ತೊಗಲು ಗೊಂಬೆಯಾಟಕ್ಕೆ ಚರ್ಮ ಬಳಸುವ ಬದಲು ಫೈಬರ್ ಶೀಟ್‌ಗಳನ್ನು ಬಳಸುವುದು ರೂಢಿಗೆ ಬರುತ್ತಿದೆ. ಜುಂಜಪ್ಪನ ಕೈಯಲ್ಲಿ ಬಿದಿರಿನ ಕೊಳಲಿನ ಬದಲಿಗೆ ಪ್ಲಾಸ್ಟಿಕ್‌ ಪೈಪಿನ ಕೊಳಲು ಬಂದಿದೆ. ಅರೆ ನಗಾರಿಗಳಲ್ಲಿ ಮರ, ಎಮ್ಮೆ ಚರ್ಮದ ಬದಲಿಗೆ ಸ್ಟೀಲ್‌ನ ಒಳವು, ಫೈಬರ್ ಶೀಟ್‌ಗಳು ಬಳಕೆಯಾಗುತ್ತಿವೆ.
ನಮ್ಮ ಭಾಷೆಯಲ್ಲಷ್ಟೇ ಪ್ರದರ್ಶನ ಕಾಣುತ್ತಿದ್ದ ನಮ್ಮ ಕೆಲವು ಜನಪದ ಕಲೆಗಳು ಈಗ ಹಿಂದಿ, ಇಂಗ್ಲಿಷ್, ಜರ್ಮನ್‌ ಭಾಷೆಯಲ್ಲೂ ಜನಪ್ರಿಯವಾಗುತ್ತಿವೆ. ನಮ್ಮ ತೊಗಲು ಗೊಂಬೆ, ಸೂತ್ರದ ಗೊಂಬೆಗಳು ಇಂಗ್ಲಿಷ್ ಸೇರಿದಂತೆ ಪ್ರಪಂಚದ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡುತ್ತಿವೆ. ಜನಪದ ಕಲೆಗಳ ಪ್ರದರ್ಶನದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಉತ್ಸಾಹಿ ಕಲಾ ತಂಡಗಳು ಈ ಜನಪದ ಕಲೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲೂ ಬೆಳೆಸಲು ಪಣ ತೊಟ್ಟ ಪರಿಣಾಮ ಕೆಲವು ಜನಪದ ಕಲೆಗಳಿಗೆ ಜಾಗತಿಕ ಮಾನ್ಯತೆಯೂ ಸಿಗುತ್ತಿದೆ. ಹೀಗಾಗಿ ಜನಪದ ಕಲೆ ಪಳೆಯುಳಿಕೆಯಲ್ಲ, ಪ್ರಯತ್ನವಿದ್ದರೆ ಜನಪದ ಕಲೆಗಳನ್ನು ಬೆಳೆಸಲು ಸಾಕಷ್ಟು ಅವಕಾಶಗಳಿವೆ ಎಂಬ ಆಶಾಕಿರಣವಂತೂ ಕಾಣುತ್ತದೆ.
ನಗರ ವರ್ಸಸ್ ಗ್ರಾಮ
ಅಮೆರಿಕದ ಜಾನಪದ ವಿದ್ವಾಂಸ ಜಾರ್ಜ್ ಹೆರ್ಜಾಗ್ ಹೇಳುವ ‘ನಗರ ವರ್ಸಸ್ ಗ್ರಾಮ’ ವೈರುಧ್ಯದ ಜನಪದ ಮಾದರಿಯ ಪರಿಕಲ್ಪನೆಯೇ ಬಹುತೇಕ ನಮ್ಮಲ್ಲೂ ರೂಢಿಯಲ್ಲಿದೆ. ‘ನಿಜವಾದ ಜನಪದ ಇರುವುದು ಹಳ್ಳಿಯಲ್ಲೇ, ಹಳ್ಳಿಯ ಜನಪದವೇ ನೈಜ ಜನಪದ, ಹಳ್ಳಿಯ ಜನರ ಜೀವನ ವಿಧಾನಕ್ಕೂ ನಗರ ಜನಜೀವನಕ್ಕೂ ಸಾಕಷ್ಟು ಭಿನ್ನತೆ ಇದೆ’ ಎನ್ನುತ್ತಾನೆ ಹೆರ್ಜಾಗ್. ಈ ಮಾತು ಹೆಚ್ಚಿನಂಶ ಸತ್ಯ ಕೂಡ. ಆದರೆ, ಜನಪದ ಎಂದರೆ ಹಳ್ಳಿಯೇ ಎಂಬ ವಾದ ಇಂದಿಗೆ ಗಟ್ಟಿಯಾಗಿಲ್ಲ.
‘ನಗರ ಜಾನಪದ’ ಎಂಬ ಅಧ್ಯಯನ ಮಾದರಿ ನಮ್ಮಲ್ಲಿ ಈಗಾಗಲೇ ರೂಪುಗೊಂಡಿದೆ. ನಗರದಲ್ಲಿ ಜನಪದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ ಎಂಬುದೂ ನಿರೂಪಿತವಾಗಿದೆ. ಆದರೂ ಜನಪದ ಎಂದರೆ ತಕ್ಷಣ ನೆನಪಾಗುವುದು ಹಳ್ಳಿ, ಅಲ್ಲಿನ ಅನಕ್ಷರಸ್ಥರು. ಈ ವೈರುಧ್ಯ, ಅಂತರ ಹೋದಾಗ ಜನಪದಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆ. ನಮ್ಮ ಪಟ್ಟಣ, ನಗರ ಪ್ರದೇಶಗಳಲ್ಲಿನ ಬಹುತೇಕರು ಗ್ರಾಮೀಣ ಹಿನ್ನೆಲೆಯವರೇ ಆಗಿರುವುದರಿಂದ ನಗರಕ್ಕೆ ಬಂದು ಸೇರಿದ ಮಾತ್ರಕ್ಕೆ ಅವರೊಳಗಿನ ಜನಪದ ಮರೆಯಾಗುತ್ತದೆ ಎಂದು ಹೇಳಲು ಬರುವುದಿಲ್ಲ. ನಗರದ ರೆಂಬೆ, ಬಿಳಲು ಎಷ್ಟೇ ದೊಡ್ಡದಾಗಿದ್ದರೂ ಬೇರುಗಳು ಮಾತ್ರ ಗ್ರಾಮಗಳಲ್ಲೇ ಇವೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೊಂದು ಉದಾಹರಣೆ ಎಂದರೆ ನಗರದ ಬಡಾವಣೆಗಳಲ್ಲಿ ಪೌರಾಣಿಕ ನಾಟಕಗಳು ಇಂದಿಗೂ ಜೀವಂತವಾಗಿರುವುದು.
ಬುಡಕಟ್ಟು ಜಾನಪದ
ಬುಡಕಟ್ಟು ಜಾನಪದ ಆದಿಮವಾದ ಜಾನಪದ. ಗ್ರಾಮ ಜಾನಪದಕ್ಕಿಂತ ಹೆಚ್ಚು ಸಂಕೀರ್ಣವಾದ, ಪ್ರಕೃತಿಗೆ ಹತ್ತಿರವಾದ ಆಚರಣೆಗಳು ಬುಡಕಟ್ಟು ಜನಾಂಗಗಳಲ್ಲಿವೆ. ಬಿಳಿಗಿರಿರಂಗನ ಬೆಟ್ಟದ ಸೋಲಿಗರಿಗೆ ಸಂಪಿಗೆ ಮರವೇ ಅವರೊಡೆಯ! ‘ದೊಡ್ಡ ಸಂಪಿಗೆ ನನ್ನೊಡೆಯ’ ಎಂದೇ ಗೊರುಕನ ಪದ ಹಾಡುವ ಸೋಲಿಗರ ಆದಿಮ ಜ್ಞಾನ ಅನನ್ಯ. ಕಾಡು ಕುರುಬರ ಆಚರಣೆಗಳು, ಅವರ ಸಂಪ್ರದಾಯ, ಮದುವೆ, ಹಬ್ಬದ ರೀತಿ ಇತರೆ ಕುರುಬರಿಗಿಂತ ಭಿನ್ನವಾದುದು.
ಬುಡಕಟ್ಟು ಜನರ ಕೃಷಿ ಪದ್ಧತಿ, ವೈವಾಹಿಕ ಪದ್ಧತಿ, ಭಾಷೆ, ಹಾಡು, ಕುಣಿತ, ಆಚರಣೆಗಳು ಸಹ ಕಾಲದ ಕಾರಣಕ್ಕೆ ಬದಲಾವಣೆ ಹೊಂದುತ್ತಿವೆ. ಬದಲಾದ ಕಾಲದಲ್ಲಿ ನಾಗರಿಕ ಜಗತ್ತಿನೊಂದಿಗೆ ಅವರು ಹೊಂದಿರುವ ಸಂಬಂಧ, ಸರ್ಕಾರದ ಕಾನೂನುಗಳ ಕಾರಣವಾಗಿ ಕಾಡಿನಿಂದ ಹೊರಬಂದು ಗ್ರಾಮ ಮಾದರಿಯ ಬದುಕು ಕಟ್ಟಿಕೊಳ್ಳುತ್ತಿರುವ ಅವರ ಹೊಸ ಜೀವನ ಕೂಡ ಆಧುನಿಕತೆಯ ಪ್ರಭಾವವೇ.
ಪಾರಂಪರಿಕ ಜ್ಞಾನ
‘ಹಿತ್ತಲ ಗಿಡ ಮದ್ದಲ್ಲ’ ಎಂದು ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ನಮ್ಮ ಹಿತ್ತಲಿನ ಮದ್ದನ್ನೇ ನಮಗೆ ಮಾರುವ ಜಾಗತಿಕ ಮಾರುಕಟ್ಟೆ ಸೃಷ್ಟಿಯಾಗಿದೆ. ಉಪ್ಪು-ಲವಂಗದ ರಸ ಮುಕ್ಕಳಿಸಿದರೆ ಬಾಯಿಯ ಸಮಸ್ಯೆಗಳು ದೂರಾಗುತ್ತವೆ ಎಂಬ ಪಾರಂಪರಿಕ ಜ್ಞಾನವೇ ಈಗ ದೊಡ್ಡ ಟೂತ್‌ಪೇಸ್ಟ್‌ ಕಂಪೆನಿಯೊಂದರ ಮಾರಾಟದ ಜಾಹೀರಾತು ಶಕ್ತಿಯಾಗಿದೆ.
ಇದ್ದಿಲಿನ ಶಕ್ತಿ ಎಂಥದ್ದು ಎಂಬುದು ಟೂತ್‌ಬ್ರೆಷ್‌ ಕಂಪೆನಿಯೊಂದಕ್ಕೆ ಈಗ ಗೊತ್ತಾಗಿದೆ. ಬೇವಿನ ಎಲೆಯ ರಸದಿಂದ ಹೇನುಗಳು ಕಡಿಮೆಯಾಗುತ್ತವೆ ಎಂಬುದನ್ನು ಶಾಂಪೂ ಕಂಪೆನಿಯೊಂದು ಈಗ ‘ಸಂಶೋಧನೆ’ ನಡೆಸಿ ಪ್ರಚಾರಕ್ಕೆ ತರುತ್ತಿದೆ! ಹುಳಿಯಿಂದ ಪಾತ್ರೆಗಳು ಬೆಳ್ಳಗಾಗುತ್ತವೆ ಎಂಬುದನ್ನು ಪಾತ್ರೆ ತೊಳೆಯುವ ಬಾರ್‌ನ ಕಂಪೆನಿಯೊಂದು ‘ಕಂಡುಹಿಡಿದಿದೆ’.
ಇವು ಒಂದಿಷ್ಟು ಉದಾಹರಣೆಗಳು ಮಾತ್ರ. ಪಾರಂಪರಿಕ ಜ್ಞಾನವನ್ನು ತಮ್ಮ ಮಾರುಕಟ್ಟೆಯ ಸರಕಾಗಿಸಿಕೊಂಡಿರುವ ಕಂಪೆನಿಗಳು ಈಗ ‘ತಾವು ಶೋಧಿಸಿದ ಜ್ಞಾನ’ಕ್ಕೆ ಪೇಟೆಂಟ್ ಪಡೆದುಕೊಳ್ಳುತ್ತಿವೆ. ಪಾರಂಪರಿಕ ವೈದ್ಯ ಪದ್ಧತಿ, ನಾಟಿ ಮದ್ದಿನ ಜ್ಞಾನದ ಶಕ್ತಿಯ ಬಗ್ಗೆ ಗೊತ್ತಾದ ಅಂತರರಾಷ್ಟ್ರೀಯ ಸಂಸ್ಥೆಗಳು ಪಾರಂಪರಿಕ ವೈದ್ಯ ಪದ್ಧತಿಯ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಸ್ಥಾಪಿಸುತ್ತಿವೆ. ಹಳ್ಳಿಯ ಹೊಲ, ಗದ್ದೆಗಳಿಂದ ಆರಿಸಿ ತಂದ ಗಿಡಮೂಲಿಕೆಗಳಿಗೆ ಲಕ್ಷಾಂತರ ರೂಪಾಯಿ ಬಿಲ್ ಮಾಡುವ ಇಂಥ ಆಸ್ಪತ್ರೆಗಳಿಗೆ ನಮ್ಮ ಜನರೇ ದುಡ್ಡು ಕಟ್ಟುತ್ತಿದ್ದಾರೆ.
ಪಾರಂಪರಿಕ ಕೃಷಿ ಪದ್ಧತಿ, ಬೆಳೆ ರೋಗ, ಕೀಟಗಳಿಗೆ ನಾಟಿ ಔಷಧ, ಉಳುಮೆ, ಮಣ್ಣಿನ ಫಲವತ್ತತೆ, ಬಿತ್ತನೆ, ಗೊಬ್ಬರ, ಮಳೆ ಮುನ್ಸೂಚನೆ, ಅಂತರ್ಜಲ, ಕೊಯ್ಲಿಗೆ ಸಂಬಂಧಿಸಿದ ಜ್ಞಾನ, ಪಶುಸಂಗೋಪನೆಯ ಜ್ಞಾನ, ಗಿಡಮೂಲಿಕೆಗಳು, ನಾಟಿ ಮದ್ದು, ಉಳುಕು ತೆಗೆಯುವುದು, ಬಟ್ಟಿ ತೆಗೆಯುವುದು– ಇವೇ ಮುಂತಾದ ಪಾರಂಪರಿಕ ಜ್ಞಾನವನ್ನು ದಾಖಲಿಸುವ ಕೆಲಸ ಅಲ್ಲಲ್ಲಿ ನಡೆಯುತ್ತಿದೆ. ಆದರೆ, ಈಗ ಆಗುತ್ತಿರುವ ಕಾರ್ಯ ಇನ್ನೂ ಹೆಚ್ಚಾಗಬೇಕಿದೆ. ಇಲ್ಲವಾದರೆ ನಮ್ಮ ಪರಂಪರೆಯ ಜ್ಞಾನವನ್ನು ನಾವು ಬಹುರಾಷ್ಟ್ರೀಯ ಕಂಪೆನಿಗಳಿಂದ ಕಲಿಯಬೇಕಾಗುತ್ತದೆ.
ನವ ಮಾಧ್ಯಮದಲ್ಲಿ ಜಾನಪದ
ನವ ಮಾಧ್ಯಮಗಳ ಮೂಲಕ ಜನಪದ ಕಲೆ, ಆಚರಣೆ, ಜ್ಞಾನದ ಪ್ರಸಾರಕ್ಕೆ ಸಾಕಷ್ಟು ಅವಕಾಶಗಳಿವೆ. ಜನಪದ ಆಚರಣೆ, ಕಲಾಪ್ರದರ್ಶನಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವ ಮೂಲಕ ಅದನ್ನು ಲಕ್ಷಾಂತರ ಜನ ವೀಕ್ಷಿಸುವಂತೆ ಮಾಡಬಹುದು. ಅದರ ಲಿಂಕ್ ಅನ್ನು ಫೇಸ್‌ಬುಕ್‌, ಟ್ಟಿಟರ್, ಗೂಗಲ್+, ವಾಟ್ಸ್ ಆಪ್ ಮೂಲಕ ಹರಿಯಬಿಟ್ಟರೆ ಅದು ಇನ್ನಷ್ಟು ಜನರನ್ನು ಸೆಳೆದುಕೊಳ್ಳುತ್ತದೆ. ಜನಪದ ಕಲೆಗಳ ಬಗ್ಗೆ ಫೇಸ್‌ಬುಕ್‌, ಬ್ಲಾಗ್‌ಗಳಲ್ಲಿ ಚರ್ಚಿಸಬಹುದು. ‘ನವ ಜಾನಪದ’ಕ್ಕೆ ಇರುವ ಸಾಧ್ಯತೆಗಳ ಬಗ್ಗೆ ಸಂವಾದಕ್ಕೆ ನವ ಮಾಧ್ಯಮಗಳಿಗಿಂತ ಉತ್ತಮ ವೇದಿಕೆ ಸಿಗಲಾರದು.
ಜನಪದ ಆಚರಣೆ, ಕಲೆಗಳ ಸಂವಹನದ ಸಾಧ್ಯತೆಗಳನ್ನು ಹುಡುಕುವ ಮಾರ್ಗದ ಸಾಧ್ಯತೆಯಾದ ‘ಸಂವಹನ ಜಾನಪದ’ ಅಧ್ಯಯನ ಶಿಸ್ತು ಸಂಶೋಧನಾ ನೆಲೆಯಿಂದ ಮಹತ್ವದ್ದು. ಈ ನಿಟ್ಟಿನಲ್ಲಿ ನವ ಮಾಧ್ಯಮಗಳನ್ನು ಜನಪದ ಕಲಾವಿದರೂ ಬಳಸುವ ಬಗ್ಗೆ ತರಬೇತಿ ನೀಡುವುದು, ತಂತ್ರಜ್ಞಾನವನ್ನು ಅವರ ಅಂಗೈಗೂ ದಾಟಿಸುವುದು ಮುಖ್ಯ. ಇದು ಇಂದಿಗೆ ಕನಸಾದರೂ ಇಂಥ ಕನಸುಗಳನ್ನು ಕಾಣುವುದೂ ಈಗ ಮುಖ್ಯವಾಗುತ್ತದೆ.
ಜಾನಪದದ ಜೀವಂತಿಕೆ ಎಂದರೆ ಜನಪದ ಕಾವ್ಯ, ಕಲೆ, ಆಚರಣೆಗಳ ಸಂಗ್ರಹ, ದಾಖಲೀಕರಣ ಮಾತ್ರವಲ್ಲ. ಅದರ ಜತೆಗೆ ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಜಾನಪದ ಹಾಗೂ ಜನಪದ ಕಲಾವಿದರನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದೂ ಮುಖ್ಯ. ಈ ನಿಟ್ಟಿನಲ್ಲಿ ಸಂಶೋಧಕರು, ಕಲಾವಿದರು, ವಿದ್ವಾಂಸರು ಭಿನ್ನ ಭೇದವಿಲ್ಲದೆ ಒಟ್ಟಿಗೆ ಕೆಲಸ ಮಾಡುವುದು ಅಗತ್ಯ. ಜನಪದ ಕಲಾವಿದ ಉಳಿಯದೆ ನಮ್ಮ ಜಾನಪದ ಉಳಿಯಲಾರದು ಎಂಬ ಅರಿವು ಸರ್ಕಾರದಲ್ಲಿರುವವರೂ ಸೇರಿದಂತೆ ಎಲ್ಲರಿಗೂ ಮೂಡಬೇಕು. ವಿಶ್ವವಿದ್ಯಾಲಯ, ಅಕಾಡೆಮಿಗಳು ಜನಪದರ ಜಗಲಿಗೆ ಹತ್ತಿರವಾಗಬೇಕು. ಕೇವಲ ಸಂಶೋಧನೆ, ದಾಖಲೆ, ಮುದ್ರಣದ ಕಾರ್ಯಕ್ಕೆ ಮಾತ್ರ ಸೀಮಿತವಾದ ಕ್ಷೇತ್ರ ‘ನಮ್ಮ ಜಾನಪದ’ ಆಗಬಾರದು.
*
ದಾಖಲೀಕರಣ ಅಗತ್ಯ
ನಮ್ಮ ಬಹುತೇಕ ಜನಪದ ಆಚರಣೆಗಳು ಆರಾಧನೆಯ ರೂಪದಿಂದ ವ್ಯಾಪಾರಿ ಜಗತ್ತಿಗೆ ಬಂದಿವೆ. ದೈವ ಆರಾಧನೆ, ಸ್ತುತಿಯ ಹಿನ್ನೆಲೆ ಹೊಂದಿದ್ದ ಜನಪದ ಕಲೆಗಳು ವ್ಯಾಪಾರಿ ನೆಲೆಗೆ ಹೊರಳಿವೆ. ಜನಪದ ಸಾಹಿತ್ಯ ಮರೆತು ಹೋಗುತ್ತಿದೆ. ವ್ಯವಸಾಯ ಹಿನ್ನೆಲೆಯಿಂದ ಉಳಿದುಕೊಂಡಿದ್ದ ಗಾದೆಗಳು ಸಾಯುತ್ತಿವೆ. ಕೆಲವು ಆಚರಣೆಗಳು ನಂಬಿಕೆಗಳ ಕಾರಣದಿಂದ ಮಾತ್ರ ಉಳಿದುಕೊಂಡಿವೆ. ಈ ಆಚರಣೆಗಳು ದೈವಗಳು ಇರುವವರೆಗೂ ಉಳಿದಿರುತ್ತವೆ. ಜನಪದ ಸಾಹಿತ್ಯ ರೂಪಗಳನ್ನು ಆಡಿಯೊ–ವಿಡಿಯೊ ಮೂಲಕ ಸಮರ್ಥವಾಗಿ ಉಳಿಸಿಕೊಳ್ಳುವ ಕಾರ್ಯ ಆಗಬೇಕು. ಆಸಕ್ತರಿಗಾಗಿ ಇಂತಹ ದಾಖಲೀಕರಣ ಅಗತ್ಯ.
–ಕೃಷ್ಣಮೂರ್ತಿ ಹನೂರು,
ಕಥೆಗಾರ, ಜಾನಪದ ತಜ್ಞ

ಕಾಮೆಂಟ್‌ಗಳಿಲ್ಲ: