ಬುಧವಾರ, ಜುಲೈ 1, 2015

ಅನ್ನಭಾಗ್ಯದ ಭಾವನಾತ್ಮಕ ವಿರೋಧ, ಬೆಂಬಲಗಳಾಚೆ


-ಅರುಣ್ ಜೋಳದಕೂಡ್ಲಿಗಿ


   ಅನ್ನಭಾಗ್ಯವನ್ನು ವಿರೋಧಿಸುವವರು ಮತ್ತು ಬೆಂಬಲಿಸುವವರು ಭಾವನಾತ್ಮಕವಾಗಿದ್ದಾರೆ. ಕೆಲವು ಜನಪ್ರಿಯ ನುಡಿಗಟ್ಟುಗಳನ್ನು ಅವಿಮರ್ಶಾತ್ಮವಾಗಿ ಬಳಸುತ್ತಿದ್ದಾರೆ. ಆದರೆ ಯೋಜನೆಯ ಆಶಯ, ಯೋಜನೆಯ ಫಲಾನುಭವಿಗಳ ಅರ್ಹತೆ, ಯೋಜನೆಗೆ ಒಳಗಾಗುವ ಕುಟುಂಬ ಮತ್ತು ಜನರ ಸಂಖ್ಯೆಯನ್ನು ಸೂಕ್ಷ್ಮವಾಗಿ ಗಮನಿಸದರೆ ಈ ಯೋಜನೆಯ ವಿರೋಧ ಮತ್ತು ಬೆಂಬಲದ ವಾಸ್ತವ ಸಂಗತಿಗಳು ಕಾಣುತ್ತವೆ.

  ಕೇಂದ್ರ ಸರ್ಕಾರವು ಅತ್ಯಂತ ಕಡು ಬಡವರಿಗಾಗಿ ಜಾರಿಗೆ ತಂದ ಅಂತ್ಯೋದಯ ಅನ್ನ ಯೋಜನೆ ರಾಜ್ಯದಲ್ಲಿ ಆಗಸ್ಟ್ ೨೦೦೨ ರಿಂದ ಜಾರಿಯಲ್ಲಿದೆ. ಬಡತನ ರೇಖೆಯಲ್ಲಿ ಅತ್ಯಂತ ಕೆಳಗಿನ ಸ್ತರದ ಕುಟುಂಬಗಳಾದ ಭೂ ರಹಿತ ಕೃಷಿ ಕಾರ್ಮಿಕರು, ವಿಧವೆಯು  ಮುಖ್ಯಸ್ಥರಾಗಿರುವ ಕುಟುಂಬಗಳು, ಯುವುದೇ ನಿರ್ದಿಷ್ಠ ವರಮಾನವಿಲ್ಲದ ಹೆಚ್.ಐ.ವಿ. ಪೀಡಿತರು/ಬಾಧಿತರು ಇರುವ ಕುಟುಂಬಗಳು, ಯಾವುದೇ ನಿಗದಿತ ವರಮಾನವಿಲ್ಲದ ವೃದ್ಧರು ಮುಖ್ಯಸ್ಥರಾಗಿರುವ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಿರುತ್ತಾರೆ. ಇಂತಹ ಫಲಾನುಭವಿಗಳನ್ನು ಗ್ರಾಮ ಪಂಚಾಯ್ತಿಯವರು ಗ್ರಾಮ ಸಭೆಯಲ್ಲಿ ಗುರುತಿಸಿ ಶಿಫಾರಸ್ಸು ಮಾಡಿರುತ್ತಾರೆ. ಈ ಯೋಜನೆಯಡಿ ಈವರೆಗೆ ಕರ್ನಾಟಕದಲ್ಲಿ ೧೦,೩೪,೮೧೨ ಕುಟುಂಬಗಳನ್ನು ಗುರುತಿಸಲಾಗಿದ್ದು ಆ ಕುಟುಂಬಗಳಿಗೆ ಅನ್ನಭಾಗ್ಯದ ಸೌಲಭ್ಯವಿದೆ.

 ಕರ್ನಾಟಕದಲ್ಲಿ ಜನವರಿ ೨೦೧೫ ರ ವಿತರಣೆಯಂತೆ ಅಂತ್ಯೋದಯ ಅನ್ನ ಯೋಜನೆಯ ಕಾರ್ಡ ಉಳ್ಳವರ ಸಂಖ್ಯೆ ೧೦೧೭೦೩೪ ರಷ್ಟಿದ್ದಾರೆ, ಬಿಪಿಎಲ್ ಕಾರ್ಡದಾರರು ೯೩೨೫೪೯೮ ರಷ್ಟಿದ್ದಾರೆ. ಎಪಿಲ್ ಕಾರ್ಡದಾರರನ್ನೂ ಒಳಗೊಂಡಂತೆ ಒಂದು ಕೋಟಿ ೨೩ ಲಕ್ಷದಷ್ಟಿದ್ದಾರೆ. ೨೦೧೧ ರ ಜನಗಣತಿಯ ಪ್ರಕಾರ ಕರ್ನಾಟಕದ ಈಗಿನ ಒಟ್ಟು ಜನಸಂಖ್ಯೆ ೬,೧೦,೯೫,೨೯೭ ರಷ್ಟಿದೆ. ಜನರನ್ನು ಸರಕಾರ ಸೋಮಾರಿಗಳನ್ನಾಗಿಸುತ್ತಿದೆ ಎನ್ನುವ ಚರ್ಚೆಯನ್ನು ಸೂಕ್ಷ್ಮವಾಗಿ ಗಮನಸಿದರೆ ಕರ್ನಾಟಕದ ಎಲ್ಲಾ ಜನರಿಗೆ ಅನ್ನಭಾಗ್ಯದ ವಿತರಣೆಯಾಗುತ್ತಿದೆ ಎಂಬಲ್ಲಿಗೆ ಲಗತ್ತಾಗುತ್ತಿದೆ. ವಾಸ್ತವವೆಂದರೆ ಅನ್ನಭಾಗ್ಯದ ಚರ್ಚೆ ಕರ್ನಾಟಕದ ಒಂದು ಕೋಟಿ ೨೩ ಲಕ್ಷಜನರಿಗೆ ಅನ್ವಯವಾಗುವ ಚೌಕಟ್ಟಿನಲ್ಲಿ ನಡೆಯಬೇಕಾಗಿದೆ. ಈ ಜನರನ್ನು ಸೋಮಾರಿಗಳು ಎಂದರೆ, ೪ ಕೋಟಿ ೭೭ ಲಕ್ಷದಷ್ಟು ಜನರು ತುಂಬಾ ಕಷ್ಟಪಟ್ಟು ದುಡಿಯುವವರಾ? ಅಥವಾ ಈ ಸಂಖ್ಯೆಯಲ್ಲಿ ಸೋಮಾರಿಗಳು ಇಲ್ಲವೇ? ಎನ್ನುವ ಪ್ರಶ್ನೆಗಳು ಹುಟ್ಟುತ್ತವೆ.

  ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ೨೦೧೩ (ಓಈSಂ) ಮತ್ತು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗಳು ಸಂಯೋಜಿತವಾಗಿ ರಾಜ್ಯದಲ್ಲಿ ಜಾರಿಯಲ್ಲಿವೆ. ಈ ಯೋಜನೆಗೆ ಅರ್ಹತೆ ಪಡೆಯುವ ಫಲಾನುಭವಿಗಳು ಸಾಮಾನ್ಯವಾಗಿ ನಿರ್ದಿಷ್ಠ ವರಮಾನವಿಲ್ಲದ ನಿರ್ಗತಿಕರು, ಭೂರಹಿತ ಕೂಲಿ ಕಾರ್ಮಿಕರು. ಇವರಿಗೆ ನಿರ್ದಿಷ್ಠ ಕೆಲಸವಿಲ್ಲದ ಕಾರಣ ಈ ಯೋಜನೆ ಜಾರಿಯಾಗಿದೆ. ಆದರೆ ಈ ಯೋಜನೆಯ ಆಶಯವನ್ನು ಸರಿಯಾಗಿ ಗ್ರಹಿಸದ ಎಸ್.ಎಲ್.ಭೈರಪ್ಪ, ಕುಂವಿ, ದೇಜಗೌ, ಅವರು ಯಾವ ಕಾರಣಕ್ಕಾಗಿ ಯೋಜನೆ ಆರಂಭವಾಗಿದೆಯೋ, ಅದೇ ಕಾರಣವನ್ನು ಮುಂದು ಮಾಡಿ ವಿರೋಧಿಸುತ್ತಿದ್ದಾರೆ. ಇವರು ನಿರ್ದಿಷ್ಠ ಕೆಲಸವಿಲ್ಲದ ಜನರನ್ನು ಕುರಿತು ‘ಸೋಮಾರಿಗಳು’ ಎಷ್ಟು ಅಮಾನವೀಯ ಎಂಬುದನ್ನು ಗಮನಿಸಿ.

  ಅಷ್ಟಕ್ಕೂ ‘ಸೋಮಾರಿಗಳು’ ಎಂದರೆ ಯಾರು? ಐದು ವರ್ಷ ಪೂರೈಸಿದ ಎಂ.ಪಿ, ಎಂಎಲ್‌ಎ, ಗಳು ತಾವು ಗೆದ್ದ ಕ್ಷೇತ್ರಕ್ಕೆ ಬಿಡಿಗಾಸಿನ ಕೆಲಸ ಮಾಡದಿದ್ದರೂ ಅವರನ್ನು ‘ಸೋಮಾರಿಗಳು’ ಎಂದು ಕರೆಯುವುದಿಲ್ಲ. ಭಕ್ತಾದಿಗಳಿಂದ ಕಾಣಿಕೆ ಸ್ವೀಕರಿಸಿ ಕೋಟಿಗಟ್ಟಲೆ ಗುಡ್ಡೆ ಹಾಕಿಕೊಂಡ ಮಠಗಳನ್ನು ಒಳಗೊಂಡಂತೆ ಎಲ್ಲಾ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರನ್ನು ನಾವೆಂದೂ ಸೋಮಾರಿಗಳೆಂದು ಜರಿಯಲಿಲ್ಲ. ಖೊಟ್ಟಿ ಹಾಜರಿ ಹಾಕಿ ಕೆಲಸವನ್ನೆ ಮಾಡದೆ ಸಂಬಳ ಪಡೆವ ಲಕ್ಷಾಂತರ ಸರಕಾರಿ ನೌಕರರಿದ್ದಾರೆ ಅವರ‍್ಯಾರು ಸೋಮಾರಿಗಳಲ್ಲ. ಒಂದು ಕೆಲಸಕ್ಕೆ ಸಾಕಷ್ಟು ಸಂಬಳವನ್ನು (ಫಲವನ್ನು) ಪಡೆದೂ ಆ ಕೆಲಸಕ್ಕೆ ವಿಮುಖರಾಗಿರುವವರನ್ನು (ಉದಾ: ಯುಜಿಸಿ ವೇತನ ಪಡೆದು ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪಾಠಮಾಡದ ಅಧ್ಯಾಪಕರು) ಸೋಮಾರಿಗಳೆಂದು ಕರೆಯಲಾರೆವು. ಬಂಡವಾಳ ಶಾಹಿಗಳಿಗೆ ಬಿಟ್ಟಿ ನೀರು, ಭೂಮಿ, ವಿದ್ಯುತ್ ಕೊಟ್ಟು ಅವರನ್ನು ಉತ್ಪಾದನೆಗೆ ಆಹ್ವಾನಿಸಿದರೆ ಅವರನ್ನು ಸೋಮಾರಿಗಳನ್ನಾಗಿ ಮಾಡಿದಂತಲ್ಲವೆ ಎಂದು ನಾವೆಂದೂ ಕೇಳಲಿಲ್ಲ. ಆದರೆ ಬಡತನದ ರೇಖೆಯ ಕೆಳಗೆ ಜೀವಿಸುವ ಜನರಿಗೆ ಮಾತ್ರ ‘ಸೋಮಾರಿ’ ಪಟ್ಟ ಕಟ್ಟುತ್ತಿದ್ದೇವೆ.

 ಒಬ್ಬ ಕೂಲಿ ಮಾಡುವ ಗ್ರಾಮೀಣ ರೈತ/ಮಹಿಳೆ, ನಗರದ ದಿನಗೂಲಿ ಕಾರ್ಮಿಕರ ಜೀವನ ಅವರ ದಿನದಿನದ ದುಡಿಮೆಯನ್ನು ಆಶ್ರಯಿಸಿರುತ್ತದೆ. ಒಂದು ದಿನ ಕೂಲಿ ತಪ್ಪಿದರೂ ಕುಟುಂಬ ಏರುಪೇರಾಗುತ್ತದೆ. ಹಾಗಾಗಿ ಕುಟುಂಬದ ಸಮತೋಲನ ಕಾಪಾಡಲು ಆಕೆ/ಆತ ದಿನದಿನದ ಕೂಲಿಯನ್ನು ತಪ್ಪಿಸುವಂತಿಲ್ಲ. ಈ ಮಧ್ಯೆ ತಿಂಗಳಲ್ಲಿ ಒಂದೆರಡು ದಿನ ಬಿಡುವಾಗಿರಲು ಅನ್ನಭಾಗ್ಯದ ವಿತರಣೆ ನೆರವಾಗಬಹುದು.  ಇನ್ನು ಮಳೆಯನ್ನೆ ನಂಬಿ ಬಿತ್ತುವ ರೈತ/ಮಹಿಳೆ ಮಳೆ ಬರದಿದ್ದರೆ ಏನು ಮಾಡಬೇಕು? ಸಾಲ ಮಾಡಿ ಬಿತ್ತಿದ ಹೊಲ ಬಂಜೆಯಾದರೆ ಯಾವ ಕೆಲಸ ಮಾಡಬೇಕು? ತಾನು ಕೆಲಸ ಮಾಡಬೇಕಾದ ಹೊಲವೇ ರೈತರನ್ನು ಹೊರದಬ್ಬುವ ಸನ್ನಿವೇಷ ನಿರ್ಮಾಣವಾಗಿರುವಾಗ ಆತ/ಆಕೆ ಮತ್ಯಾವ ಕೆಲಸ ಮಾಡಬೇಕು? ಹೀಗೆ ಜನರು ತಾತ್ಕಾಲಿಕವಾಗಿ ಕೆಲಸವಿಲ್ಲದೆ ಕಂಗಾಲಾದಾಗ ಅನ್ನಭಾಗ್ಯ ಅಂತಹ ಅಸಹಾಯಕ ಜನರಿಗೆ ನೆರವಾಗಿದೆ. ಇದು ಎಲ್ಲರಿಗೂ ತಿಳಿಯಬಹುದಾದ ತೀರಾ ಸಾಮಾನ್ಯ ಸಂಗತಿ. ಇದರ ಅರಿವಿಲ್ಲದ ಅರಿವುಗೇಡಿಗಳು ಮಾತ್ರ ಈ ಯೋಜನೆ ಜನರನ್ನು ಸೋಮಾರಿಗಳನ್ನಾಗಿಸಿದೆ ಎಂದು ಹೇಳಿಕೆ ಕೊಡುತ್ತಿದ್ದಾರೆ.

  ಕೂಲಿಗಾಗಿ ಬೇಕಾಬಿಟ್ಟಿ ದುಡಿಸಿಕೊಳ್ಳುವವರಿಗೆ ತೀರಾ ಕಡಿಮೆ ಕೂಲಿಗೆ ಆಳುಗಳು ಬೇಕು. ದುಡಿದೇ ತಿನ್ನಬೇಕಾದ ಲಕ್ಷಾಂತರ ಬಡವರು ‘ಊಟ’ಕ್ಕಾಗಿಯಾದರೂ ಕಡಿಮೆ ಕೂಲಿಗೂ ದುಡಿವ ಅನಿವಾರ್ಯಕ್ಕೆ ಕಟ್ಟುಬೀಳುತ್ತಿದ್ದರು. ಅಂತಹ ಅನಿವಾರ್ಯತೆ ಬಡತನದ ರೇಖೆಯ ಕೆಳಗಿರುವ ಜನರಿಗೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಕಾರಣ ಅನ್ನಭಾಗ್ಯ ಯೋಜನೆ. ಹೀಗೆ ಅನಿವಾರ್ಯಕ್ಕೆ ಕಡಿಮೆ ಕೂಲಿಗೆ ಹೋಗದ ಇವರನ್ನು ಕೂಲಿಗೆ ಕರೆವ ಯಜಮಾನರು ‘ಸೋಮಾರಿ’ಗಳೆಂದು ಕರೆಯುತ್ತಾರೆ. ಪ್ರಗತಿಪರ ಎಂದು ಗುರುತಿಸಿಕೊಂಡ ಸ್ವಾಮೀಜಿಯೊಬ್ಬರು ಅನ್ನಭಾಗ್ಯ ಜನರನ್ನು ಸೋಮಾರಿಗಳನ್ನಾಗಿಸಿದೆ ಎಂದು ಟೀಕಿಸಿದ್ದರು. ಇವರ ಜತೆ ಸಾಹಿತಿಯೊಬ್ಬರು ವಾಗ್ವಾದಕ್ಕೆ ಬಿದ್ದು ಜಟಾಪಟಿ ನಡೆದಿತ್ತು. ಆಗ ನನಗೆ ಅನ್ನಿಸಿದ್ದು ತಮ್ಮ ಮಠದ ಉಚಿತ ದಾಸೋಹಕ್ಕೆ ಜನರು ಹೋಗದೆ ಇರುವ ಸಿಟ್ಟಿಗೆ ಈ ಸ್ವಾಮೀಜಿ ಈ ಹೇಳಿಕೆ ನೀಡಿರಬಹುದಾ ಎಂದು.
  ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ಕಲ್ಪಿಸಲು ಮಹಾತ್ಮಗಾಂದಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸಿದೆ. ಈ ಯೋಜನೆಗೆ ಕೋಟ್ಯಾಂತರ ರೂಗಳು ಖರ್ಚಾಗಿರುವ, ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟಿರುವ ಖೊಟ್ಟಿ ಲೆಕ್ಕ ಸಿಗುತ್ತದೆ. ವಾಸ್ತವವಾಗಿ ಈ ಯೋಜನೆ ಎಷ್ಟು ಜನರಿಗೆ ಉದ್ಯೋಗ ನೀಡಿದೆ ಎಂದು ಗ್ರಾಮೀಣ ಭಾಗದಲ್ಲಿ ಸುತ್ತಾಡಿ ಜನರಿಂದ ಮಾಹಿತಿ ಪಡೆದರೆ ವ್ಯಾಪಕ ಬ್ರಷ್ಟಾಚಾರದ ವಾಸನೆ ದಟ್ಟವಾಗಿ ಮೂಗಿಗೆ ಅಡರುತ್ತದೆ. ಬಹುಶ: ಈ ಯೋಜನೆಯ ದುರ್ಬಳಕೆಯು ಜನರಿಗೆ ಉದ್ಯೋಗ ವಂಚಿಸಿದೆ. ನಿಜಕ್ಕೂ ಜನರಿಗೆ ಉದ್ಯೋಗ ಒದಗಿಸಬಲ್ಲ ಇಂತಹ ಯೋಜನೆಗಳ ಸಮರ್ಪಕ ಬಳಕೆಯ ಬಗ್ಗೆ ಸಮಾಜ ವಿಜ್ಞಾನಿಗಳು, ಸಾಹಿತಿಗಳು ಮಾತನಾಡಬೇಕಿದೆ. 

 ‘ಮೀನು ಹಿಡಿಯುವುದನ್ನು ಕಲಿಸಬೇಕು, ಮೀನು ಹಿಡಿದು ಕೊಡಬಾರದು’ ಎಂಬ ಚೀನಿ ಗಾದೆಯೊಂದಿದೆ. ಮೀನು ಹಿಡಿಯುವುದನ್ನು ಕಲಿಸಿದರೆ ಹಸಿದವರು ಹಸಿವಾದಗಲೆಲ್ಲಾ ತಾನೇ ಮೀನು ಹಿಡಿದು ತಿನ್ನಬಹುದು. ಹಿಡಿದ ಮೀನು ಕೊಟ್ಟರೆ, ಹಸಿವಾದಾಗ ಮೀನು ಹಿಡಿಯುವವರಿಗೆ ಕಾಯಬೇಕಾಗುತ್ತದೆ ಎನ್ನುವುದು ಇದರ ಸರಳ ಸತ್ಯ. ಅಂದರೆ ದುಡಿದು ತನ್ನ ಹಸಿವನ್ನು ತಾನೇ ನೀಗಿಸಿಕೊಳ್ಳುವ ವಾತಾವರಣ ನಿರ್ಮಿಸಬೇಕೇ ವಿನಹ, ಹಸಿವನ್ನು ನೀಗಿಸುವ ಸಿದ್ದ ಪರಿಕರಗಳನ್ನು ಕೊಡಬಾರದು ಎನ್ನುವಲ್ಲಿಗೆ ಈ ಮಾತು ಲಗತ್ತಾಗುತ್ತದೆ. ಇದನ್ನು ಕೆಲವರು ಅನ್ನಭಾಗ್ಯಕ್ಕೂ ಅನ್ವಯಿಸಿ ಮಾತನಾಡುವುದನ್ನು ಕೇಳಿದ್ದೇನೆ.

  ಇದನ್ನು ಇನ್ನೊಂದು ಮಗ್ಗಲಿನಿಂದ ನೋಡೋಣ, ಮೀನಿರುವ ಸ್ಥಳ (ಕೆರೆ,ನದಿ,ಹಳ್ಳ ಇತ್ಯಾದಿ) ನೀರಿಲ್ಲದೆ ಒಣಗಿದ್ದರೆ, ನೀರಿದ್ದೂ ಮೀನಿಲ್ಲದಿದ್ದರೆ ? ಈ ಮೇಲಿನ ಮಾತು ಅನ್ವಯವಾಗುವುದಿಲ್ಲ. ಈ ಮಾತು ಅನ್ವಯವಾಗಲು ಮೊದಲು ಬತ್ತಿದ ಕೆರೆ ನದಿಗೆ ನೀರು ತುಂಬುವಂತೆ ವ್ಯವಸ್ಥೆ ಮಾಡಬೇಕು, ನೀರು ತುಂಬಿದ ಮೇಲೆ ಮೀನು ಬಿಡಬೇಕು, ಆ ಮೀನು ಇನ್ನೊಬ್ಬರ ಹಸಿವು ನೀಗಿಸುವಷ್ಟು ದೊಡ್ಡವನ್ನಾಗಿ ಸಾಕಬೇಕಾಗುತ್ತದೆ. 

ಬತ್ತಿದ ಕೆರೆ/ನದಿ/ಹಳ್ಳಕ್ಕೆ ನೀರು ತುಂಬುವ ಕೆಲಸ ಆಗುವವರೆಗೂ, ನೀರು ತುಂಬಿದ ನಂತರ ಮೀನು ಸಾಕುವ ವರೆಗೂ ಈ ಸ್ಥಳವನ್ನೇ ನಂಬಿರುವ ಜನರ ಹಸಿವೆಗೆ ಪರ್ಯಾಯವನ್ನು ಕೊಡಬೇಕಲ್ಲವೆ? ಈ ಕೆಲಸವನ್ನು ಜನಪರವಾದ ಆಳುವ ಪ್ರಭುತ್ವ ಮಾಡಬೇಕಾಗುತ್ತದೆ. ಹೀಗೆ ಪರ್ಯಾಯ ಒದಗಿಸುವ ಸಂದರ್ಭದಲ್ಲೇ ‘ಮೀನು ಹಿಡಿಯುವುದನ್ನು ಕಲಿಸಬೇಕೇ ಹೊರತು, ಮೀನು ಹಿಡಿದು ಕೊಡಬಾರದು’ ಎಂಬ ಮಾತನ್ನು ಹೇಳಿದರೆ ಹೇಗೆ ಹಾಸ್ಯಾಸ್ಪದವಾಗುತ್ತದೆ ಎಂಬುದನ್ನು ಗಮನಿಸಿ. ಅನ್ನಭಾಗ್ಯದ ಬಗೆಗಿನ ಟೀಕೆಗೂ ಈ ಕಥೆ ಅನ್ವಯವಾಗುತ್ತದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ.




ಕಾಮೆಂಟ್‌ಗಳಿಲ್ಲ: