ಮಂಗಳವಾರ, ಜನವರಿ 10, 2017

ಗೆಂಡಗಯ್ಯ- ಜೀವ ಸೆಲೆಯ ಮೂಲ ತಂತು



ಪ್ರೊ.ಕಿಕ್ಕೇರಿ ನಾರಾಯಣ
profile

ಸೌಜನ್ಯ: http://kikkerinarayana.in/


‘ಗೆಂಡಗಯ್ಯ’, ಇದು ಗೆಳೆಯ ಶಿವತೀರ್ಥನ್ ರವರ ‘ಗೆರೆಗಳು’ ಕವನ ಸಂಕಲನದ ವಿಶಿಷ್ಟ ಕವನ.. ಈ ಇಹದ ಪರಿಪಾಟಲನ್ನು ಕಂಡು ಉಂಡು, ಕಾಣದಂತೆ ತನ್ನ ಕಾಯಕವನ್ನು ನಡೆಸುತ್ತಿರುವ, ಒಳಗಣ್ಣನ್ನು ಸದಾ ತೆರೆದುಕೊಂಡು

ಎಸೆದು ಗಾಳ ಬೀಸಿ ಬಲೆ

ಕಾಯ್ತು ಕುಂತವ್ನೆ ಸಂತ

ಎಂಬ ‘ಇರ’ವಿನ  ‘ಅರಿವ’ನ್ನು ತೆರದಿಡುವ ಕವನ

ಈ ಸಂತನಿಗೆ ತನ್ನ ಸುತ್ತೆಲ್ಲ ಇರುವ ಪ್ರಪಂಚ ‘ಅಭಾವದ’ ಪ್ರಪಂಚವೆಂದು ಗೊತ್ತು. ನೋವು, ಯಸನ, ತಳಮಳ, ಬಯಕೆ, ಹಸಿವು ಮತ್ತು ದಾವಿನಿಂದ ಪರಿತಪಿಸುಸುತ್ತಿರುವ ಪ್ರಪಂಚ. ಕವನದ ಪಾರಂಭವೇ ಹೀಗಾಗುತ್ತದೆ : ತನ್ನ ಜನರ ಯಾ೦ತ್ರಿಕ ಪ್ರಾರಂಭವಾಗುವುದೇ ‘ಅಲಾರಾಂ ಕೋಳಿ ಕೂಗ್ತು !’ ಆದರೆ ಇಹದ ಕಷ್ಟವನ್ನು ಮರೆತು ತನ್ನಷ್ಟಕ್ಕೆ ತಾನೇ ಕುಂತ ಸಂತನಲ್ಲ ಇವ. ತನ್ನ ಜನತೆಯ ದೈನಂದಿನ ಪರದಾಟಗಳ ಅನುಭವದ ಮೊತ್ತವಾಗಿ ‘ನೆಪ್ಪಾ ಗಿ ಕುಂತವ್ನೆ ಈ ಸಂತ’. ತನ್ನ ಮನೋಮಯ ಜಗತ್ತಿನಲ್ಲಿ ಅವು ಜೀವಂತ.

ಜನಾಂಗದ ಕಾಯಕದ ಮೂಲ ದ್ರವ್ಯದ ಅಭಾವ : ಮನಸಿನ ಅಭಾವ, ಕನಸಿನ ಅಭಾವ, ಅನ್ನದ ಅಭಾವ

ಮೀನು ಸೀಗಡಿ ನಳ್ಳಿ ಸಿಕ್ತೇ

ಇತ್ತು ಸೊಪ್ಪು ಅಂಬ್ಲೀ ದಕ್ತೆ

ವೊತ್ತು ಕಂತೋಯ್ತು

ಉಳಿದಿರುವುದು ,

ಬರಿಗಣ್ಣು ಬರಿಬಾಯಿ ಬರಿಗೈ

ಬರಿಕುಕ್ಕೆ ಬರಿ ಬರಿದೆ

ಕೆಲಸಮಾಡುವವರ ಕೈ ಬರಿದಾದರೂ

ತಿಪ್ಪೆ ಕಸ ಕೊಚ್ಚೆ ನೀರು

ಯೆಕ್ಕಿ ಏರೆ ಉಳ ಗಾಳಕ್ಕೆ

ಎಸೆದು ಗಾಳ ಬೀಸಿ ಬಲೇ

ಕಾಯ್ತ ಕುಂತವ್ನೆ ಸಂತ

ಇಹದ-ಅಧಾತ್ಮದ ಶಕ್ತಿಯ ಮಾಧ್ಯಮವಾಗಿ, ಕರ್ಮಯೋಗಿಯಾಗಿ ಬರಿ ಬಲೆಯನ್ನು ಮಾತ್ರ ಕಾಯ್ತು ಕುಂತವನು ಈತ ಸಂತ. ಇವೆಲ್ಲ ನೆಪ್ಪಾಗಿ ಕುಂತವ್ನೆ ಸಂತ

ಎಲ್ಲ ಬರಿಬರಿಯಾಗಿರುವಾಗ ಈತನು ‘ಬರೀದೆ ಕುಂತವ್ನೆ ಸಂತ’.

ಇಟ್ಟಂಗೆ ಇರ್ತೀವಿ ಸಾಪಾಳ್ಸ್ ಬ್ಯಾಡ

ಸಂತೆ ಮಾಡಾಕೆ ದಮ್ಮೂಡೀನೇ ಸೊನ್ನೆ

ಸೊನ್ನೆ ಕುಂತವ್ನೆ ಸಂತ

ಎಲ್ಲರಲ್ಲೂ ದೈನ್ಯ, ಎಲ್ಲೆಲೂ ಶೂನ್ಯ. ಈ ಸಂತ ಕುಂತಿರುವುದು ಈ ಶೂನ್ಯವನ್ನೇ ಸಂಪಾದಿಸಿಕೊಂಡಂತೆ.

ಓದುಗರ ಮನದಲ್ಲಿ ಈ ಸಂತ , ಬೆಳೆದುಕೊಂಡು ಹೋಗುವ ರೀತಿ ವಿಶಿಷ್ಟ. ಈತನಿಗೆ ಅನೇಕ ಮುಖಗಳು ಮೂಡಲಾರಂಭಿಸುತ್ತವೆ .

ಬೆಸ್ತ ಜನಾಂಗದ ಜೀವನಾಡಿಗೆ ಮೂಲಧಾರೆಯಾದ ಗಂಗೆ ತೋರ ತೋರ ಮಾಪುರವಾಗಿ ಇಳಿದರೆ ಜೀವರಾಶಿಗಳಿಗೆ ಜೀವವಾಗುತ್ತದೆ . ಅಭಾವವೆಲ್ಲ ಸಮೃದ್ಧಿಯಾಗುವುದರ ಜೊತೆಗೆ ಜೀವಿಗಳ ಜೀವಕ್ಕೆ ಚಾಲನಶಕ್ತಿ ಉಂಟಾಗುತ್ತದೆ. ಪ್ರಕೃತಿ ತುಂಬಿ ಸೆಲೆಯಾಡಲು ಪ್ರಾರಂಭಿಸುತ್ತದೆ. ‘ನಳ್ಳಿ ,ಸೀಗಡಿ ಮೀನಹೊಳೆ’ ಜೀವದ ಹೊಳೆಯನ್ನು ಹರಿಸುತ್ತವೆ. ತನ್ನ ಜನಾಂಗಕ್ಕೂ ಮಿಕ್ಕಿ ಉಳಿದವರಿಗೂ ಅದನ್ನು ಹಂಚಿ ಬಿಡುತ್ತದೆ. ಈಗ ಸಂತನಿಗೆ ಮತ್ತೊಂದು ಮುಖ.

ಉಂಡ್ರೂ ಕುಂತವ್ನೆ ಸಂತ

ಇಲ್ಲಿ ಕಷ್ಟಸುಖಗಳು ಒಟ್ಟಿಗೆ ತೆಗೆದುಕೊಳ್ಳುವ ಸಂತನಾಗಿ ಬೆಳೆಯುತ್ತಾನೆ. ಆದರೂ ಈ ಸಂತ ಮೌನಿ – ಈ ಮೌನ ಹಿಂದಿನ ಮೌನದಂತಲ್ಲ. ‘ತಾಪ ತಪಿಸಿ ಒಡಮೂಡಿದ್ದು ‘ ಆ ಮೌನವೇ ಜನತೆಗೆ ಮಾತಾಗುತ್ತದೆ. ತನಗೆ ತಾನೇ ಮಾತಾಗುತ್ತದೆ. ಈಗ ಜನತೆಯ ನೆಲೆ ಪ್ರಕೃತಿಯ ಜೀವಾಧಾರಿತ ಸೆಲೆಯಾಗುತ್ತದೆ. ಪ್ರಕೃತಿ ಮೂಲ ಗಂಗೆ ಕೊಟ್ಟದ್ದನ್ನು ಸಂಸ್ಕೃತಿಯನ್ನಾಗಿ ಪರಿವರ್ತಿಸಿಕೊಳ್ಳುತ್ತದೆ . ಇದಿಷ್ಟು ಇಹದ ಚರಿತೆ .

ಎರಡನೇ ಭಾಗದ ಕವನ ‘ಈಡುಗಾಯಿ ಮತ್ತೊಂದು ‘. ಈ ಭಾಗ ಇಹದ ಚರಿತೆಯಿಂದ ಪುರಾಣದ ಚರಿತೆಗೆಸರಿಯುವ ಕ್ರಮದಲ್ಲಿದೆ. ಇಲ್ಲಿ ಬೆಸ್ತ ಜನಾಂಗದ ಆದಿ ಅಯ್ಯನ ಪಿರ್ಕವಾಗಿ ಗುರುತಿಸಿಕೊಳ್ಳುವ ಕ್ರಮವಿದೆ. ಗೆಂಡಗಯ್ಯ ಈ ಜನಾಂಗದ ಮೂಲ ಪುರುಷಮಾತ್ರವಲ್ಲ ‘ಮಾಬಾರತದ ಮೂಲ ಯಾಸ, ಸತ್ಪತಿ ಅವ್ವ, ಪರಾಸರ ಅಯ್ಯ. ಇಲ್ಲಿ ಕುಂತ ಸಂತನೂ ಅಯ್ಯ’ – ವಂಶದ ಮೂಲ ಪುರುಷನ ಮೈಯನ್ನು ಪಡೆದವ. ಅದರೂ ಕಣ್ಣಿಗೆ ಕಾಣಿಸುವ ಮೂರ್ತ .

ಇಹದ ಜೀವವನ್ನೂ, ತನ್ನ ಹುಟ್ಟಿನ ಮೂಲವನ್ನೂ ಬಂಧಿಸುವ ಸೇತು. ಇವೆರಡಕ್ಕೂ ಮಾಧ್ಯಮವಾಗಿ ಈ ಸಂತ ಬೆಳೆಯುತ್ತಾನೆ. ಈ ಜಗತ್ತಿನಲ್ಲಿ ಎಲ್ಲವೂ ಲೀಲೆ. ತನಗೆ ತಾನೇ ಆಗುವ ಲೀಲೆ.

ತನಗೆ ತಾನೇ ಆಡ್ತ

ಬಲೆ ಬೀಸ್ತ

ಗಾಳ ಆಕ್ತ

ತಪಿಸ್ತ ಕುಂತವ್ನೆ ಸಂತ

ಇಲ್ಲಿ ಈ ಸಂತ ಪೌರಾಣಿಕ ಕಾಲಕ್ಕೆ ಜಿಗಿಯುವ ಸಂತ. ಈತ ಜನಾಂಗದ ಮೂಲಕ್ಕೆ ಗಾಳ ಹಾಕ್ತಾ, ‘ಆ ಕಾಲವನ್ನು’ ಈ ಕಾಲಕ್ಕೆ ಕೂಡಿಸಾಡುವ ಮಾಧ್ಯಮವಾಗಿ “ಈ ಸಂತ ತಪಿಸ್ತ ಕುಂತ.”

ಇಲ್ಲಿ ಮೊದಲ ಭಾಗದ ದೈನಂದಿನ ಚರಿತ್ರೆ, ಜನಾಂಗದ ಚರಿತೆಯಾಗಿ , ಕ್ರಿಯಾವಿಧಿಯಾಗಿ ಪುರಾಣವಾಗಿ ಪರಿವರ್ತಿತವಾಗುತ್ತದೆ. ಜನಪದರು ತಮ್ಮ ಜನಾಂಗವನ್ನು ಕೈಹಿಡಿದು ನಡೆಸಿಕೊಂಡು ಹೋಗುವ ತಮ್ಮ ಮೂಲಪುರುಷನ  ಶಕ್ತಿ, ಸಾಮರ್ಥ್ಯ ಕಾಣುವುದರ ಜೊತೆಗೆ ಅನಾದಿಯಿಂದ ಇಲ್ಲಿಯವರೆವಿಗೂ ತಲೆ ತಲಾಂತದಿಂದ ಜೀವಿಗಳ ವಂಶಮಾಲೆಯನ್ನು ಪೋಣಿಸುವ, ಸೇರಿಸುವ ಶಕ್ತಿಯ ಈ ಸಂತ ಮಹಾಂತನಾಗುತ್ತಾನೆ. ಆದ್ದರಿಂದಲೇ

ನೀ ಯಾ ಲೋಕ ಕಂತೆ

ನೀ ಯಾ ಪಾಕ ಉಂಡೆಯೊ

ಅದನ್ನು ನಾನೂ ಕಾಣ್ತೀನಿ

ಅನ್ನುವ ಛಲ ಸೆಳೆತ ಈ ಜನಾಂಗಕ್ಕೆ ಮೂಡುತ್ತದೆ.

ಗಂಗಾಮತಸ್ಥರ ಮೂಲ ಮಾತೃ ಪ್ರಧಾನ ಮೂಲ. ಇವರ ಸಾಂಸ್ಕೃತಿಕ ಲೋಕವೆಲ್ಲ ಡುಂಡಿಮಾದವ್ವ, ವಳಗೆರೆ ವುಚ್ಚಿ , ಪಟ್ಟಲದಮ್ಮ ಇವರೆಲ್ಲ ಸ್ಥಳೀಯ ದೇವರುಗಳು . ಇಂಥ ಹೆಣ್ಣು ದೇವತೆಗಳನ್ನೇ ಇವರು ಕರೆಯುವುದು . ಇಲ್ಲಿ ಪುರಾಣ ritual ಆಗಿ ಪರಿವರ್ತಿತವಾಗುತ್ತದೆ. ritual ನ ಕೆಲಸವೇ ಪುರಾಣವನ್ನು ಆಗಮಾಡಿಕೊಡುವ ಕೆಲಸ. ಅದಕ್ಕೆ

ಜಗ್ಗು ಜಗ್ಗು ಜಗ್ಗು ಜಗ್ಗು

ಜಗ್ಗುಣಕ್ಕಣ್ ಜಗ್ಗುಣಕ್ಕಣ್

ಭಾವ ಅಭಿನಯವಾಗುತ್ತದೆ.
ಪೂಜೆವೊತ್ತು ಪೂಜೆ ಕುಣಿ
ಪಿಪೊಜೆ ಬಳ್ಸಿ ಪೂಜೆ ಕುಣಿ
ನಾ ತಡೀಲಾರೆ ನಾ ಕುಣೀಲಾರೆ
ನಾ ಕುಣೀತೀನಿ ನಾ ತಡೀತೀನಿ
ಉಕ್ಕಿ ಬರುವ ಜೀವನೋತ್ಸಾಹ. ‘ನಡೀತೀನಿ’ ಎಂಬ ನಿರ್ಧಾರ ಕಾಣುತ್ತದೆ. ಇಡೀ ಜನಾಂಗದ ಶಕ್ತಿಯಾಗುತ್ತದೆ. ಅಲ್ಲದೆ ಜೀವನವನ್ನು ಕೊಂಡೊಯ್ಯುವ ಶಕ್ತಿಯೂ ಆಗುತ್ತದೆ.
ಈ ಲೋಕ ಅಬೂ(ಭೂ)ತವಾಗುತ್ತದೆ. ವರ್ತಮಾನ ಭವಿಷ್ಯವಾಗುತ್ತದೆ. ಇಹದ ಮನುಷ್ಯನ ಕಾಲದ ಪರಿಕಲ್ಪನೆಯನ್ನು ಮೀರುತ್ತದೆ. ಇಲ್ಲಿ ಭೂತ-ವರ್ತಮಾನ-ಭವಿಷ್ಯದ ಕಾಲಗಳಿಲ್ಲ. ಇವೆಲ್ಲ ಕಾಲಗಳ ಸಂಯೋಜನೆಯಾಗಿ ‘ಪುರಾಣ ಕಾಲ’ದ ಪ್ರಜ್ಞೆಯಾಗುತ್ತದೆ.
ಈ ಕಾಲದ ‘ಕೋಡೀಲೆ ಮಗ್ನ ಕುಂತವ್ನೆ ಸಂತ’
ಈ ಕವನ ಮುಂದುವರೆಯುತ್ತಾ ಗಂಗೆಯ ಧರಿಸಿದ ‘ಮಾದಯ್ಯ’ನ ಪ್ರಪಂಚಕ್ಕೆ. ಈ ಜನಾಂಗದ ಮೂಲ ಪ್ರಪುರುಷ ಗೆಂಡಗಯ್ಯನನ್ನು ಸೃಷಿಸಿದ ಪ್ರಪಂಚಕ್ಕೆ (ಮಲೆ ಮಾದೇಶ್ವರನ ಪುರಾಣದಲ್ಲಿ ಬರುವಂತೆ) ಗಾಳ  ಹಾಕಿ ಸಿಕ್ಕಿಸುತ್ತದೆ. ಈ ‘ಮಾದಯ್ಯ’ನೋ ಬಹಳ ಮೂರ್ತನಾದವನು
ಸುತ್ತೇಳು ಮಲೆ ಮಾದಯ್ಯ
ಮುತ್ತಿರುವ ಕಾಡು ಮಾದಯ್ಯ
ವೂಲಿವಾನ ಮಾದಯ್ಯ
ಅಕ್ಕಿ ಚಿಲಿಮಿಲಿ ಮಾದಯ್ಯ
ಕಾವಿ ಕೌಪೀನ ಮಾದಯ್ಯ
……………………..
ಕೆಂದೂಳಿ ಬಟ್ಟು ಮಾದಯ್ಯ
ಅವನ ದೇಹ ಮಾತ್ರ ‘ಮಾಟ ಚೆಮ್ಬೊನ್ನು ಮಾದಯ್ಯ ‘, ಪ್ರ್ರಾಯಶಃ ಜನಾಂಗದ ಮನದಲ್ಲಿ ಕುಂತಿರುವ ಸಂತನೂ ಇಂಥವನೇ.
ಈ ಲೋಕದಲ್ಲಿ ಅದು ಬೇರೆ ಇದು ಬೇರೆ ಇಲ್ಲ.
ಮಂದಿ ದೊಂದಿಕುಣಿತ

ದೊಂದಿ ಮಂದಿ ಕುಣಿತ

ಮಂದಿ ದೊಂದಿಯಾಗಿ ದೊಂದಿ ಮಂದಿಯಾಗಿ ಕುಣೀತಾರೆ. ಎರಡು ಒಂದಾಗಿ ಒಂದು ಎರಡಾಗಿ ಕೊನೆಗೆ ಒಂದೇ ಆಗುವಂತಹ ಪ್ರಪಂಚ. ಭೇದಭಾವಕ್ಕೆ ಎಡೆಯಿಲ್ಲ. ಇಂಥ ಜೀವ ತಂತು ಒಂದನ್ನು ಇನ್ನೊಂದು ಅಖಂಡವಾಗಿ ಹಿಡಿಯುವಂಥದ್ದು. ಅದಕ್ಕಾಗಿ

ಒಕ್ಕಳ ಕುಡಿಕಾಯೊ

ಒಡ್ಲು ಗುಡ್ಲು ಕಾಯೊ

ಮಾನ ಮರ್ವಾದಿ ಕಾಯೊ

ಎಂಬ ಪ್ರ್ರಾರ್ಥನೆ . ಇದು ವ್ಯಕ್ತಿಯ ಪ್ರಾರ್ಥನೆಯಲ್ಲ. ಸಮಷ್ಟಿಯ ಪ್ರಾರ್ಥನೆ. ಇಲ್ಲೂ ಸಹ ‘ಅಂಗಂಗೆ ಕುಂತವ್ನೆ ಸಂತ’.

ಆದ್ದರಿಂದಲೇ ಈ ಮೂಲ ಪುರುಷ ಈ ಗೆಂಡಗಯ್ಯ

ಬಿತ್ತನೆ ಬೀಜ, ರತ್ನ ಸಾಜ.

ಈ ಮೂಲ ಬಿತ್ತನೆಯಿಂದಲೇ ಹೊಸ ಸೃಷ್ಟಿ, ಹೊಸ ಧ್ವನಿ ಹೊಸ ಉತ್ಸಾಹ, ಹೊಸ ಹೂವು, ಹೊಸ ಹಣ್ಣು -ಕಾಯಿ-ಹೀಗೆ ಬಿತ್ತನೆಯೊದಗಿಸಿದ ಸಂತ ‘ಮಾಗಿ ಕುಂತ ಸಂತ’ನಾಗಿ ಬೆಳೆಯುತ್ತಾನೆ , ಅನಾದಿಯಾಗಿದ್ದಾನೆ. ಇಲ್ಲೆಲ್ಲವೂ ಪ್ರಕೃತಿ -ಸಂಸ್ಕೃತಿಯಾಗುತ್ತಿದೆ, ಸಂ-ವೃದ್ಧಿಯಾಗುತ್ತಿದೆ. ಅಲ್ಲದೆ ಈ ಜನಾಂಗ ಯಾವುದರ ಕಡೆ ತುಡಿಯಬೇಕು , ಯಾವುದು ಜೀವವನ್ನು ನಡೆಸುವ ಚಾಲಕ ಶಕ್ತಿ (driving force) ಆಗುತ್ತದೆ ಎಂಬುದನ್ನು ನಿರ್ದೇಶಿಸುತ್ತದೆ.

ಎಲೆಬಾಳೆ ವೂವು ವೊಂಬಾಳೆ

ಎಳನೀರು ತಳಿಗೆ ತಂಬಿಟ್ಟು

ತುಪ್ಪಾದ ಕಜ್ಜಾಯ ಕಪ್ಪೂರ ಜೋತಿ

ಎತ್ತಿ ಮಾಡ್ತೀವಿ ತಂಪು

ಇದಕ್ಕಾಗಿಯೇ ಗೆಂಡಗಯ್ಯ ಜೀವಂತವಾಗಿದ್ದಾನೆ. ಸಂತನಾಗಿದ್ದಾನೆ. ಈ ಪುರುಷನ ತಳಿ ಬೆಳೆಯುತ್ತಿದೆ. ಇದನ್ನು ಗಮನಿಸುತ್ತಾ ”ತದೇಕ ಕುಂತವ್ನೆ ಸಂತ-ಮಹಂತ. ಹಿಂಗೆ ಕುಂತ ಸಂತನ ಇರ’ವು ಅವನು ಮೌನವಾಗಿದ್ದರೂ

ತಾಪ ತಪಿಸಿ ಒಡಮೂಡಿದ್ದೇ ಮಾತು

‘ಆಗು’ತ್ತದೆ.

ಹೀಗೆ ಉದ್ದಕ್ಕೂ ಮಾತನಾಡದೆ ಕುಂತ ಸಂತ ಈ ಪ್ರಾಪಂಚಿಕವಾದ ಭೌತದ ನೆಲೆಯಿಂದ ಮೂಲ ನೆಲೆಗೆ ಕರೆದೊಯ್ಯುವವನಾಗುತ್ತಾನೆ, ಸಾರ್ವತ್ರಿಕವಾಗುತ್ತಾನೆ.

ಈ ‘ಗೆಂಡಗಯ್ಯ’ ಕವನ ಪ್ರಸ್ತುತವಾಗುವುದು ಈ ರೀತಿ ಬೆಳೆಯುವುದರಿಂದ. ಈ ಮೂಲಕ ಸ್ವಾತಂತ್ರೋತ್ರರ ಭಾರತದ ‘ಇರವು’ (State) ಅನ್ನು ಪರಿಕಿಸುವ ರೀತಿ ಭಿನ್ನವಾಗುತ್ತದೆ, ಮುಖ್ಯವಾಗುತ್ತದೆ. ಈ ಕಾವ್ಯ ಪ್ರಪಂಚದ ಧ್ವನಿ (voice) ಭೌತಿಕ ಪ್ರಪಂಚದಲ್ಲಿದ್ದಂತೆ ವಸ್ತು ನಿರ್ದೇಶಕಗಳಾಗುವುದಿಲ್ಲ , ಕಾವ್ಯಧ್ವನಿಯಾಗುತ್ತದೆ. ಇವೆಲ್ಲ ‘ಆಗು’ವುದು ಈ ಕವನದಲ್ಲಿ ಕುಂತ ಸಂತನಂತೆ, ಸಾಕ್ಷೀ ಪ್ರಜ್ಞೆಯಲ್ಲಿ. ಸ್ವಾತಂತ್ರಪೂರ್ವದಲ್ಲಿ ನಮ್ಮ ನಾಡಿನ ಜನತೆಯ ಈ ಸಾಕ್ಷ್ಮೀ ಪ್ರಜ್ಞೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡ ಸಂತ ಗಾಂಧೀ, ಇದನ್ನು ಒಂದು ಧನಾತ್ಮಕ ‘ಶಕ್ತಿ’ಯಾಗುವಂತೆ ಮಾಡಿದವರು ಗಾಂಧೀ . ಸ್ವಾತಂತ್ರ್ಯಾನಂತರ ಈ ಜನತಂತ್ರದಲ್ಲಿ ಇಡೀ ಇಡಿಯಾದಾದೆಲ್ಲ ಬಿಡಿಬಿಡಿಯಾಯ್ತು. ಶಕ್ತಿ ರಾಜಕೀಯ(power politics)ನಲ್ಲಿ ಚೆಲ್ಲಾಪಿಲ್ಲಿಯಾಯ್ತು. ಈ ದೇಶದ ಅವಕಾಶ (Space) ಒಂದಾದರೂ, ಪ್ರಜ್ಞೆಯಲ್ಲಿ ಮಾನಸಿಕವಾಗಿ ಒಂದಾಗಲಿಲ್ಲ. ಈ ಸ್ಥಿತಿಯಲ್ಲಿ ಸಾಂಸ್ಕೃತಿಕ ಅವಕಾಶ (cultural Space) ಈ ದೇಶವನ್ನು ಕಲ್ಪಿಸಿಕೊಳ್ಳುವ ಶಕ್ತಿಯಾಗುವುದು ಇಂಥ ‘ಚಾಲಕ ಶಕ್ತಿ’ಯನ್ನು ಪ್ರತಿಯೊಂದು ಜನಾಂಗವೂ ಧನಾತ್ಮಕವಾಗಿ ರೂಪಿಸಿಕೊಳ್ಳುವುದರ ಮೂಲಕ. ಆದ್ದರಿಂದಲೇ ಈ ಕವನದಲ್ಲೆಲ್ಲಾ ಇನ್ನೊಂದು ಜನಾಂಗದ ಬಗ್ಗೆ ಮೌನವೇ ಕಾಣುತಿದೆ. ಅವರವರು ತಮ್ಮ ಮಾನಸಿಕ ಅವಕಾಶ (mental Space) ಸೃಷ್ಟಿಸಿಕೊಳ್ಳಲುಜಾಗ ಮಾಡಿಕೊಡುತ್ತದೆ. ಈ ಪ್ರತ್ಯೇಕತೆ ಮತ್ತು ಏಕತೆ “ಮಂದಿದೊಂದಿ ಕುಣಿತ /ದೊಂದಿಮಂದಿ ಕುಣಿತವಾಗುತ್ತದೆ.” ಏಕಕಾಲದಲ್ಲಿ ಭಿನಾಭಿನ್ನತೆಗಳೆರಡೂ ಇರುತ್ತದೆ ಎಂಬುದನ್ನು ತಂದುಕೊಡುವುದರ ಜೊತೆಗೆ ಧನಾತ್ಮಕ ಶಕ್ತಿಯಾಗಿ ಬೆಳೆಯುವ ಪರಿಯನ್ನು ಈ ಸಾಂಸ್ಕೃತಿಕ ಪಠ್ಯ ಸೃಷ್ಟಿಸಿಕೊಡುತ್ತದೆ.

ಅಂತೆಯೇ ಒಂದು ಜನಾಂಗವನ್ನು ಒಗ್ಗೂಡಿಸುವುದು, ಬಡತನವನ್ನು ಸಾಂಸ್ಕೃತಿಕ ಶ್ರೀಮಂತಿಕೆಯಾಗಿ ಪರಿವರ್ತಿಸುವುದು , ಒಂದೆಡೆ ಎಲ್ಲರನ್ನೂ ಹಿಡಿದಿಡುವುದು, ಇವೆಲ್ಲವೂ ಪೌರಾಣಿಕ ಮತ್ತು ಕ್ರಿಯಾವಿಧಿ(ritual)ಗಳ ಪ್ರಜ್ಞೆಯಾಗುವುದು ಈ ಕವನದ ಮೂಲಕ ನಮಗೆ ದೊರೆಯುತ್ತದೆ. ಈ ಪೌರಾಣಿಕ ಪ್ರಜ್ಞೆ ‘ಅಭೂತ’ವಾಗುವುದು, ಅಖಂಡ ಕಾಲವಾಗಿ ಬೆಳೆಯುವುದು . ಇಂಥ ಜನಾಂಗ ಈ ದೇಶದ ಚರಿತ್ರೆಯಲ್ಲಿ , ಮೌಖಿಕ ಸಂಪ್ರದಾಯದ ಸಮುದಾಯದ ಭಾಷೆಯಿಂದ ಪಡೆದುಕೊಂಡದ್ದು , ಮೂರ್ತವಾದದ್ದನು ಈ ಕವನ ಬೆಳೆಯುವ ರೀತಿಯೇ ನಿರ್ದೇಶಿಸುತ್ತದೆ. ಇದು ದೇಶಿಯಾಗುತ್ತದೆ.

ಇಲ್ಲಿ ದಿನ ದಿನದ ಜನಸಾಮಾನ್ಯರ ಚರಿತ್ರೆ, ಚರಿತೆಯಾಗಿ, ಪುರಾಣವಾಗಿ, ಪರಿವರ್ತಿತವಾಗಿ-ಜನಪದರು ತಮ್ಮ ತಮ್ಮ ಮೌಖಿಕ ಸಂಪ್ರದಾಯದ ಚರಿತ್ರೆಯನ್ನು ಸೃಷ್ಟಿಸಿಕೊಳ್ಳುವ ಮನಸ್ಸನ್ನು ನಮ್ಮ ಮುಂದೆ ಕವಿ ತೆರಿದಿಟ್ಟಿದ್ದಾರೆ. ಇಲ್ಲಿ ಅಲಿಖಿತ ಚರಿತ್ರೆ ಲಿಖಿತವಾಗುತ್ತದೆ. ತಲೆ ತಲಾಂತರದಿಂದ ಬದುಕಿ , ಬಾಳಿ ಬಂದ ಜೀವತಂತುವನ್ನು- ಗೆಂಡಗಯ್ಯನನ್ನು-ಈ ಜೀವ ಮೂಲವನ್ನು ಅರಸುವ ಚಿತ್ರವನ್ನು ಕಟ್ಟಿ ಕೊಡುವುದರ ಮೂಲಕ ಶಿವತೀರ್ಥನ್ ಅವರ ಸಾಮುದಾಯಕ ಚಿತ್ರಣ ಒಳ್ಳೆಯ ಮನಸ್ಸಿನ ತುಡಿತವಾಗುತ್ತದೆ. ಈ ದೇಶದ ಪ್ರತಿಯೊಂದು ಸಮುದಾಯವು ತನ್ನಲ್ಲಿ ಅಡಗಿರುವ ಜೀವಶಕ್ತಿಯನ್ನು ಹೊರಹಾಕುವ, ಸಹಬಾಳ್ವೆಯ ಚಿತ್ರಣವಾಗುತ್ತದೆ. subaltern ಚರಿತ್ರೆಯಾಗುತ್ತದೆ . ಈ ಸಂತನ ‘ಸರ್ವಸಾಕ್ಷಿ ಪ್ರಜ್ಞೆ’ಯನ್ನು ಕುಂತು ನೋಡುವ ಮನಸ್ಸು, ನಮ್ಮ ಸಮಾಜಕ್ಕೆ ಬೇಕಾಗಿದೆ. ಈ ದೃಷ್ಟಿಯಿಂದ ಈ ಕವನ ಪ್ರತ್ಯೇಕವಾದ ಮನೋ ಕೋಶವನ್ನು ತೆರೆಯುತ್ತದೆ . ಅದಕ್ಕಾಗಿಯೇ ಇದು ಶಕ್ತಿ ರಾಜಕೀಯವಾಗದೆ ‘ಸಾಂಸ್ಕೃತಿಕ ಚರಿತ್ರೆ’ಯಾಗಿದೆ ತಿಳಿ ನೀರಾಗಿದೆ. ಈ ಕದಡಿದ ಸಮಾಜಕ್ಕೆ ತಿಳಿವನ್ನು ಕೊಡುವ ಮಾದರಿಯಾಗಿದೆ.

ಆದ್ದರಿಂದಲೇ `ಗೆಂಡಗಯ್ಯ’ನ ಪುರಾಣ ಪ್ರಜ್ಞೆ ಈ ಬಹು ಜನಾಂಗಗಳು ಬದುಕುವ ನಮ್ಮ ದೇಶದಲ್ಲಿ “ಮೂಲಭೂತವಾದಿ’ಗಳನ್ನು ಸೃಷ್ಟಿಸುವ ಪ್ರಜ್ಞೆ ಆಗುವುದಿಲ್ಲ. ಇಲ್ಲಿಯ ಸಂತನಾಗಲೀ, ಗೆಂಡಗಯ್ಯನಾಗಲಿ, ಸಕಲ ಜೀವಿಗಳನ್ನು ಸೃಷ್ಟಿಸುವ ‘ಗಂಗೆ’ ಯಾಗಲೀ ಪ್ರತ್ಯಕ್ಷವಾಗುವುದು ಅವುಗಳ ಅವತರಣಿಕೆಗಳಿಂದ.

ಇಂಥ ಪುರಾಣಗಳ ಪ್ರಜ್ಞೆ ಸಮಾಜವನ್ನು ಸ್ಥಗಿತಮಾಡಲು ಬಿಡುವುದಿಲ್ಲ. ಈ ಪ್ರಜ್ಞೆ ಜನಾಂಗದ ಶಕ್ತಿಯನ್ನು ಧನಾತ್ಮಕವಾಗಿ ಮುಂದುವರೆಸಿಕೊಂಡು ಹೋಗುವ ಸಾಧನವಾಗಿ ಇರುತ್ತದೆ. ಈ ಪ್ರಜ್ಞೆ ಈ ಪ್ರಪಂಚದ ತಾರ್ಕಿಕ ಅನುಭವದ್ದಲ್ಲ. ಇಲ್ಲಿ ಚರಿತ್ರೆ ಚರಿತೆಯಾಗಿ ಕಾಣುತ್ತದೆ. ಇಂಥವು ಜೀವನಕ್ಕೆ ಒಂದು ಉದ್ದೇಶವನ್ನೂ ಬದುಕಿಗೆ ಇಚ್ಛಾಶಕ್ತಿಯನ್ನು ತುಂಬುತ್ತವೆ. ಅಲ್ಲದೆ ಜನಸಮುದಾಯದ ಭಾಷೆ ಎಂದರೇನು ಎಂಬುದನ್ನು ಕಂಡುಕೊಳ್ಳುವಂತೆ ಮಾಡುತ್ತದೆ. ದೇವನೂರು ಮಹಾದೇವರ ‘ಕುಸುಮಬಾಲೆ’ಯಾ ನಂತರ ಬಂದ ಸಮಷ್ಟಿ ಪ್ರಜ್ಞೆಯ ಕವನವಾಗುತ್ತದೆ.

ಕಾಮೆಂಟ್‌ಗಳಿಲ್ಲ: