ಮಂಗಳವಾರ, ಜನವರಿ 10, 2017

ಜಾನಪದ ಮತ್ತು ಅರ್ಥ


ಪ್ರೊ.ಕಿಕ್ಕೇರಿ ನಾರಾಯಣ
profile
ಸೌಜನ್ಯ: http://kikkerinarayana.in/
ಪುಸ್ತಕ: ಸುವರ್ಣ ಜಾನಪದ
ಲೆವಿಸ್ತ್ರಾಸ್ ನ ಪ್ರಕಾರ ಮಿಥ್ ನ ಅರ್ಥ ಸೃಷ್ಟಿಯಾಗಿವುದು ಅವುಗಳ ಆಂತರಿಕ ವ್ಯವಸ್ಥೆಯಲ್ಲಿರುವ ದ್ವಿಧಾವೃತ್ತಿಯಲ್ಲಿ(binary opposition) (ಲೆವಿಸ್ತ್ರಾಸ್ ೧೯೭೮) ಈ ದ್ವಿಧಾವೃತ್ತಿಗಳು ಮಿಥ್ ನ ಆಂತರಿಕ ವ್ಯವಸ್ಥೆಯನ್ನು ವಿವರಿಸುತ್ತವೆ. ಭಾಷೆಯಲ್ಲಿ ಧ್ವನಿಗಳು ಹೇಗೋ ಜಾನಪದ ಪಠ್ಯಗಳಲ್ಲಿ ದ್ವಿಧಾವೃತ್ತಿಗಳು ಹಾಗೆ ವರ್ತಿಸುತ್ತಿರುತ್ತವೆ. ಈ ದ್ವಿಧಾವೃತ್ತಿಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತವೆ ಎಂಬುದನ್ನು ಅರಿತುಕೊಳ್ಳುವುದೇ ಸಾಂಸ್ಕೃತಿಕ ಪದ್ಯಗಳ ರಚನೆಯನ್ನು ಅರಿಯುವ ವಿಧಾನ. ಈ ದ್ವಿಧಾವೃತ್ತಿಗಳು ಸಂಧಿಸುವಲ್ಲೇ ಅರ್ಥ ಅಡಗಿ ಕುಳಿತ್ತಿರುತ್ತದೆ. ಇದನ್ನು ಲೆವಿಸ್ತ್ರಾಸ್ ಗುರುತಿಸುತ್ತಾನೆ.
ಆದರೆ, ದ್ವಿಧಾವೃತ್ತಿಗಳು ಯಾವುದೇ ಕಥಾನಕದಲ್ಲೂ ಒಂದರ ಮೇಲೊಂದು ಆಡುತ್ತಿರುತ್ತದೆ.ಈ ರೀತಿ ಆಡುವ ಕ್ರಿಯೆಯೇ ದ್ವಿಧಾವೃತ್ತಿಗಳು ಸಂಧಿಸುವ ತಾಣ. ದ್ವಿಧಾವೃತ್ತಿಗಳು ಒಂದರ ಮೇಲೊಂದು ಆಡುವುದರಿಂದ ರಚನೆಗೆ ಚಾಲನೆ ಸಿಗುತ್ತದೆ. ಈ ಚಲನೆಯಿಂದ ಅರ್ಥಗಳು ರೂಪಾಂತರಕ್ಕೆ ಒಳಗಾಗುತ್ತಿರುತ್ತವೆ. ಇದನು ಲೆವಿಸ್ತ್ರಾಸ್  ಹೇಳಲಿಲ್ಲ.
ಏಕೆಂದರೆ, ರಚನೆಗೆ ಕೆಲವು ಆಂತರಿಕ ಗುಣಗಳಿರುತ್ತವೆ. ಮೊದಲನೆಯದಾಗಿ, ಪ್ರತಿಯೊಂದು ರಚನೆಯೂ ಸ್ವಯಂಪರಿಪೂರ್ಣ ಘಟಕ. ಇದು ಬೇರೆ ಬೇರೆ ಮೂಲರೂಪಗಳ ಸಂಯೋಜನೆ ಅಲ್ಲ. ಎರಡನೆಯದಾಗಿ, ರಚನೆ ಸ್ಥಗಿತವಾಗಿರುವುದಿಲ್ಲ, ಯಾವಾಗಲೂ ಚಲನಶೀಲವಾಗಿರುತ್ತದೆ. ಆಂತರಿಕ ಗುಣಗಳಲ್ಲಿ ಬದಲಾವಣೆಯನ್ನು ಹೊಂದುತ್ತಿರುತ್ತದೆ.
ಈ ಪರಿಯೇ ಮಾನವ ಪ್ರಕೃತಿಯನ್ನು ಸಂಸ್ಕ್ರುತಿಯನ್ನಾಗಿ  ಪರಿವರ್ತಿಸಲು ಪ್ರಾರಂಭಿಸಿದಾಗಿನಿಂದಲೂ ಮುಂದುವರಿಸಿಕೊಂಡು ಬರುತ್ತಿರುವ ಬೆಳವಣಿಗೆಯ ಕ್ರಮ. ಮಾನವನಲ್ಲಿ ಪರಿಕಲ್ಪನೆಗಳು ಮೂಡುವುದೇ ಈ ದ್ವಿಧಾವೃತ್ತಿಗಳು ಒಂದರ ಮೇಲೊಂದು ಆಡುವುದರಿಂದ, ನಿರಂತರ ‘ಲೀಲೆಗೆ’ ತೆಗೆದುಕೊಳ್ಳುವುದರಿಂದ. ಉದಾಹರಣೆಗೆ – ಮೈ-ಮನಸ್ಸು, ಆತ್ಮ-ದೇಹ, ಹಗಲು-ರಾತ್ರಿ , ಒಳ್ಳೆಯ-ಕೆಟ್ಟದ್ದು ಇತ್ಯಾದಿ. ಈ ರೀತಿಯ ದ್ವಿಧಾವೃತ್ತಿಗಳು ಒಂದಕ್ಕೊಂದು ಮುಖಾಮುಖಿಯಾದಾಗ ಸಂಘರ್ಷಕ್ಕೆ ಒಳಗಾಗುತ್ತವೆ.
ಈ ಸಂಘರ್ಷ ದ್ವಿಧಾವೃತ್ತಿಯ ಪರಿಕಲ್ಪನೆಗಳಿಗೆ ಚಾಲನೆ ಕೊಡುತ್ತದೆ. ಹೀಗೆ ಪಡೆಯುವ ಚಾಲನೆಯೇ ಮನುಷ್ಯನ ಗ್ರಹಿಕೆಯ ಅನುಭವದ ಆಳವನ್ನು ವಿಸ್ತರಿಸುತ್ತದೆ. ಹೊಸ ಹೊಸ ಅರ್ಥಗಳನ್ನು ಸೃಷ್ಟಿಸುತ್ತದೆ.
ಇನ್ನಷ್ಟು ಸ್ಪಷ್ಟಪಡಿಸುವುದಾದರೆ ಬಯಲು ಮತ್ತು ಆಲಯ ಎಂಬ ಎರಡು ದ್ವಿಧಾವೃತ್ತಿ ಪರಿಕಲ್ಪನೆಗಳನ್ನು ನೋಡಬಹುದು.
‘ಬಯಲು’ ಎನ್ನುವ ಪರಿಕಲ್ಪನೆ ಉಂಟಾಗಬೇಕಾದರೆ ‘ಆಲಯ’ದ ಕಲ್ಪನೆಯೂ ಇರಬೇಕಾಗುತ್ತದೆ. ‘ಆಲಯ’ವನ್ನು ಅರ್ಥೈಸಿಕೊಳ್ಳಲು  ‘ಬಯಲೂ’,’ಬಯಲ’ನ್ನು ಅರ್ಥಮಾಡಿಕೊಳ್ಳಲು ‘ಆಲಯ’ದ ಪರಿಕಲ್ಪನೆಯೂ ಪೂರಕವಾಗಿರುತ್ತದೆ.
‘ಬಯಲು ಆಲಯದೊಳಗೊ ಆಲಯವು ಬಯಲೊಳಗೋ’ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದರ ಮೂಲಕ ಬಯಲು ಎಂಬ ಪರಿಕಲ್ಪನೆಗೆ ಚಾಲನೆ ಸಿಗುತ್ತದೆ.
ಮನುಷ್ಯನಲ್ಲಿ ಪರಿಕಲ್ಪನೆಯ ಸಂಜ್ಞೆಗಳು ಮೂಡುವುದು ಭಾಷ್ಯ ಮೂಲಕವೂ ಆಗಿರಬಹುದು ಅಥವಾ ಭಾಷೇತರ ಸಂಜ್ಞೆಗಳು ಮೂಲಕವೂ ಆಗಿರಬಹುದು. ಇಲ್ಲಿ ‘ಬಯಲು’ ಪ್ರಕೃತಿಗೆ ಸೇರಿದ. ಪರಿಕಲ್ಪನೆಯಾದರೆ ‘ಆಲಯ’ ಮಾನವ ನಿರ್ಮಿತ ವಸ್ತುವಿನ ಪರಿಕಲ್ಪನೆ. ಇಲ್ಲಿ ‘ಪ್ರಕೃತಿ; ಮತ್ತು ‘ಸಂಸ್ಕೃತಿ’ಯ ಮಿಲನವಾಗುತ್ತದೆ. ಈ ರೀತಿಯ ಮಿಲನದಲ್ಲಿ ಅರ್ಥ ಸೃಷ್ಟಿಯಾಗುತ್ತದೆ. ಪ್ರಕೃತಿಯನ್ನು ಸಂಸ್ಕ್ರುತಿಯನ್ನಾಗಿ ಪರಿವರ್ತಿಸುವುದೇ ಮಾನವನ ಮನಸ್ಸು. ಈ ರೀತಿಯ ಚಲನೆಯನ್ನು ಅರಿಯುವುದು ಪ್ರಾಪ್(೧೯೬೫) ಅಥವಾ ಲೆವಿಸ್ತ್ರಾಸ್ ರ ಮಾದರಿಗಳಿಂದ ಸಾಧ್ಯವಿಲ್ಲ.
ಈ ರೀತಿ ರಚನಾವಾದದ ಇನ್ನೊಂದು ಪ್ರಮುಖ ಮಿತಿಯೆಂದರೆ ಎಲ್ಲಾ ಜಾನಪದ ಪಠ್ಯಗಳೂ ಸಾರ್ವತ್ರಿಕ ಅರ್ಥಕ್ಕಾಗಿ(universal meaning) ದುಡಿಯುವ ಅವತರಣಿಕೆಗಳಾಗಿ ಮಾತ್ರ ಕಾಣುತ್ತಿರುವುದು. ಇಂತಹ ವಿಶ್ಲೇಷಣೆಯಲ್ಲಿ ವ್ಯಕ್ತಿಗತವಾದ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲ. ಸಮಾಜದ ಲೋಕದೃಷ್ಟಿ ಗೊತ್ತಾಗುವುದಿಲ್ಲ. ಜಾನಪದ ಪಠ್ಯಗಳನ್ನು ಸದ್ಯದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ದೃಷ್ಟಿಕೋನಗಳ ಅಭಿವ್ಯಕ್ತಿಯಾಗಿ ನೋಡಲು ಸಾಧ್ಯವಿಲ್ಲ.
ರಚನಾವಾದಿಗಳು ಅರ್ಥವನ್ನು ಹುಡುಕುವುದು ಚಾರಿತ್ರಿಕ ಕಾಲದಲ್ಲಲ್ಲವಾದ್ದರಿಂದ ಅವರಿಗೆ ಅರ್ಥದ ಮಜಲುಗಳು ದಕ್ಕುವುದು ಸಾಧ್ಯವಿಲ್ಲ. ( ಈ ಕಾರಣದಿಂದಲೇ ಡಿಸೆಂಬರ್ 6, ೧೯೯೨ರ ಬಾಬರಿ ಮಸೀದಿ ಘಟನೆಗೆ ಜಾನಪದೀಯವಾಗಿ ಥಟ್ಟನೆ ಪ್ರತಿಕ್ರಿಯಿಸಲು ಜಾನಪದ ವಿದ್ವಾಂಸರಿಗೆ ಸಾಧ್ಯವಾಗಲೇ ಇಲ್ಲ.)
ಹಾಗಾದರೆ ಜಾನಪದ ಚರಿತ್ರೆ ಎಂದರೇನು ಎಂಬುದನ್ನು ಗಮನಿಸೋಣ.
ಸಾಮಾನ್ಯವಾಗಿ ಚರಿತ್ರಕಾರರು ಬರೆಯುವ ಚರಿತ್ರೆ ಘಟನಾವಳಿಗಳ ಕಾರ್ಯ-ಕಾರಣ-ಪರಿಣಾಮದ್ದು. ಕಾಲಕ್ರಮಣಿಕೆಯಲ್ಲಿ ಆ ಚರಿತ್ರೆ ಬೆಳೆದಿರುತ್ತದೆ. ಅಂದರೆ ಭವಿಷ್ಯತ್ತಿನ ಕಡೆಗೆ ಮುಖಮಾಡಿರುವ ಭೂತದ ವಿಶ್ಲೇಷಣೆಯಾಗಿ ಬರೆಯಲ್ಪಟ್ತಿರುತ್ತದೆ.
ಜಾನಪದದಲ್ಲಿ ಮನುಷ್ಯನನ್ನು ಅರ್ಥಮಾಡಿಕೂಳುವ ಚಾರಿತ್ರಿಕ ಸನ್ನಿವೇಶ ಭಿನ್ನ ದೃಷ್ಟಿಯಿಂದಲೇ ಕೂಡಿರುತ್ತದೆ. ಅಂದರೆ ಇದು ಚರಿತ್ರಕಾರ ಬರೆಯುವ ಘಟನಾವಳಿಗಳ ಚರಿತ್ರೆಯಲ್ಲ. ಘಟನಾವಳಿ ಚರಿತ್ರೆಯ ಹಿಂದೆ ಆಗಿಹೋದ ದೊಡ್ಡ ವ್ಯಕ್ತಿಗಳ, ಸಂಸ್ಥೆಗಳ , ರಾಜಮಹಾರಾಜರ ಯುದ್ಧಗಳ ಪಂಚಾಂಗವಾಗಿರುತ್ತದೆ. ಇದು ಹೊರಡಿಸುವ ಅರ್ಥ ಒಂದು ಕಾಲ ಕ್ಷಣದಲ್ಲಿ ಒಬ್ಬ ವ್ಯಕ್ತಿ ಹೇಗೆ ವರ್ತಿಸಿದ ಎನ್ನುವುದಕ್ಕೆ ಒತ್ತು ಕೊಡುತ್ತಿರುತ್ತದೆ. ಈ ವಿಧಾನದಲ್ಲಿ ಆ ವ್ಯಕ್ತಿ ಆ ರೀತಿ ವರ್ತಿಸಲು ಅನುವು ಮಾಡಿಕೊಟ್ಟ ಸಮಾಜದ, ಜನಪದರ, ಚಾರಿತ್ರಿಕ ನೋಟ ಇರುವಿದಿಲ್ಲ. ಈ ರೀತಿಯ ಚರಿತ್ರೆಯಲ್ಲ ಸಾಮಾಜಿಕವಾದ, ಜನಪದವಾದ ಮನಸ್ಸನ್ನು ಅರ್ಥೈಸಲು ಸಾಧ್ಯವಿಲ್ಲ. ಇದಕ್ಕೆ ವಿರುದ್ದವಾಗಿ ಬನಾರಸಿ ಎಂಬ ಜೈನವರ್ತಕ ಬರೆದ ‘ಅರ್ಥ ಕಥಾನಕ’ ಒಂದು ಅಪೂರ್ವ ದಾಖಲೆಯಾಗಿದೆ.
“ಅರ್ಥ ಕಥಾನಕ, ಮಧ್ಯಮ ವರ್ಗದವನೊಬ್ಬನ ಕಥೆ. ಮೊಗಲರ ಕಾಲದ ಪಟ್ಟಣಗಳಲ್ಲಿ ಅಷ್ಟೇನೂ ಶ್ರೀಮಂತನಲ್ಲದ ವರ್ತಕನೊಬ್ಬನ ಬದುಕಿನ ಬಗೆಯನ್ನು ಸೂಕ್ಷ್ಮವಾಗಿ ಹೇಳುವ ಕಥೆ ಇದು. ಮೊಗಲ್ ಮಾರುಕಟ್ಟೆಗಳಲ್ಲಿ ನಡೆಯುತ್ತಿದ್ದ ಮಾರುವ ಕೊಳ್ಳುವ ಕ್ರಮಗಳು, ಮೊಗಲ್ ಹೆದ್ದಾರಿಗಳಲ್ಲಿ ಸಾಗುವಾಗಿನ ಸಾಹಸಮಯ ಅನುಭವಗಳು. ಭ್ರಷ್ಟಾಚಾರಿಗಳಾದ ಮೊಗಲ್ ಅಧಿಕಾರಿಗಳ ಮನಸ್ವೀ ವರ್ತನೆಯಿಂದ ಉಂಟಾಗುತಿದ್ದ ಹಠಾತ್ ಲಾಭ ನಷ್ಟಗಳು,ಇವೆಲ್ಲದರ ಬಗ್ಗೆಯೂ ನಮಗೆ ಬನಾರಸಿಯಿಂದ ಮಹತ್ವದ ವಿಷಯಗಳು ತಿಳಿಯುತ್ತವೆ.
ರಾಜಕೀಯ ಸ್ಥಿತಿಯ ಬಗ್ಗೆ ಬನಾರಸಿಯ ನಿರ್ಲಿಪ್ತ ಧೋರಣೆ ನಮಗೆ ಅತ್ಯಂತ ಕುತೂಹಲಕಾರಿ ಸಂಗತಿಯಾಗಿದೆ”.
(ಅನಂತಮೂರ್ತಿ.ಯು.ಅರ. ೧೯೯೦ ಪುಟ ೧೧)
ಜನಪದ ಪಠ್ಯಗಳನ್ನು ಅರ್ಥೈಸ್ವುವಾಗ ಒಬ್ಬ ಮನುಷ್ಯ ಚರಿತ್ರಯನ್ನು ಸೃಷ್ಟಿಸುತ್ತಾನೆ ಎಂಬ ಅರ್ಥ ಸಾಧ್ಯವಿಲ್ಲ. ಇಲ್ಲಿ ಚರಿತ್ರೆ ಮನುಷ್ಯನನ್ನು ಸೃಷ್ಟಿಸುತ್ತದೆ. ಚರಿತ್ರೆಕಾರ ಘಟನೆಗಳ ಕಡೆ ದೃಷ್ಟಿ ಬೀರಿದರೆ ಜಾನಪದ ಪಠ್ಯ ಒಂದು ಕಾಲದ ಯಾವುದಾದರೂ ಘಟನೆ ನಡೆಗಾಗ ಆ ಘಟನೆಯ ರಾಚನೀಯ ಸಂವಿಧಾನವನ್ನು ತನ್ನದೇ ರೀತಿಯಲ್ಲಿ ಗಮನಿಸಿ ಮಿಥ್, ಪುರಾಣ ಮತ್ತು ಅವುಗಳ ಅವತರಣಿಗಳ ಮೂಲಕ ಸಾಮಾಜಿಕ ಸತ್ಯಗಳನ್ನು ಆರುಸುವುದು ಜಾನಪದ ಪಠ್ಯಗಳ ಚರಿತ್ರೆಯಾಗಿರುತ್ತದೆ.
ಚರಿತ್ರೆಕಾರರು ಬರೆಯುವ ಘಟನಾಪ್ರಧಾನ ಚರಿತ್ರೆಗಿಂತ ಭಿನ್ನವಾಗಿ ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಬರೆಯುವ ಇನ್ನೊಂದು ಬಗೆಯ ಚರಿತ್ರೆ ಡಾರ್ವಿನ್ನನ ವಿಕಾಸವಾದವನ್ನು ಮುಂದಿಟ್ಟುಕೊಂಡು ಬರೆಯುವ ಚರಿತ್ರೆ. ಈ ವಿಧಾನವನ್ನು ಅನುಸರಿಸಿ ಬರೆಯುವವರಿಗೆ ಚರಿತ್ರೆ ಸರಳರೇಖಾತ್ಮಕವಾದ ಸಮಾಜದ ಬೆಳವಣಿಗೆಯಾಗಿ ಕಾಣುತ್ತಿರುತ್ತದೆ. ಇವರ ಪ್ರಕಾರ ಮೌಢ್ಯ,
ಮೂಢನಂಬಿಕೆಗಳ ಅಗರವಾಗಿದ್ದವನು ಆದಿಮಾನವ. ಕಾಲಕ್ರಮಣಿಕೆಯಲ್ಲಿ ಈತ ಹಂತ ಹಂತವಾಗಿ ಈಗಿನ ‘ವೈಜ್ಞಾನಿಕ’ ಅಂದರೆ, ಭೌತವಾದಿ (materialist) ನೆಲೆಯನ್ನು ಮುಟ್ಟಿದವನು. ಇವರು ಒಂದು ಜನಾಂಗದಲ್ಲಿರುವ ಕ್ರಿಯಾವಿಧಾನ, ಮಿಥ್ ,ಪುರಾಣ, ಧರ್ಮ ಎಲ್ಲವನ್ನು ಅವೈಜ್ಞಾನಿಕವೆಂದು ತಳ್ಳಿ ಹಾಕುತ್ತಾರೆ. ಇವೆಲ್ಲವೂ ಮನುಷ್ಯನ ಮನಸ್ಸನ್ನು ಅರಿಯುವ ಪ್ರತೀಕಗಳೆಂಬುದೇ ಅರ್ಥವಾಗುವುದಿಲ್ಲ. ಜನಾಂಗದ ಮೌಖಿಕ ಚರಿತ್ರೆ ಈ ಮನಸ್ಸಿನ ಹಿಂದೆ ಕೆಲಸ ಮಾಡುತ್ತಿರುತ್ತದೆ ಎಂಬ ಅರಿವೂ ಇರುವುದಿಲ್ಲ.
ಈ ವಿಕಾಸವಾದಿ ಚರಿತ್ರಕಾರರು (rationalist) ಮಾನವನ ವಿಕಸನವನ್ನು ಬಹಳ ಸರಳೀಕೃತಗೊಳಿಸುತ್ತಾರೆ. ತಾಂತ್ರಿಕತೆ(technolog) ಧರ್ಮ , ವಿಜ್ಞಾನ ಇವುಗಳ ಮಾನದಂಡದಿಂದ ಚರಿತ್ರೆಯನ್ನು ಕಟ್ಟುತ್ತಿರುತ್ತಾರೆ. ಇವರ ಪ್ರಕಾರ ಒಂದು ಸಮಾಜ ಭೌತಿಕವಾಗಿ ಯಾವುದೋ ಒಂದು ವಿಷಯದಲ್ಲಿ ಹಿಂದೆ ಬಿದ್ದಿದ್ದರೆ ಉಳಿದೆಲ್ಲ ವಿಷಯಗಳಲ್ಲೂ ಆದಿಮವಾಗಿಯೇ ಇರುತ್ತದೆ ಎಂದು ನಂಬಿರುತ್ತಾರೆ. ಇವರಿಗೆ ಯೂರೋಕೇಂದ್ರಿತ(eurocentric)ವಾದ ಪರಿಕಲ್ಪನೆ ಉಳಿದ ಸಾಮಾಜಗಳನ್ನು ಅಳೆಯುವ, ಅರ್ಥೈಸುವ ಮಾನದಂಡವಾಗಿರುತ್ತದೆ. ಆದರೆ, ಭಾರತದಂತಹ ಕೈಗಾರೀಕರಣಕ್ಕೂ ಒಳಗಾದ ಸಮಾಜವೂ ಬದುಕುತ್ತಿರುವ ಕಾಲದಲ್ಲೇ ಅತಿ ಆದಿಮವಾದ ಜನಾಂಗಗಳು ಬದುಕುತ್ತಿರುತ್ತವೆ. ಅಂತೆಯೇ ಅತಿ ಆಧುನಿಕರ ಒಳಗೆ ಅತಿ ಅದಿಮವಾದ ಭಾವನೆಗಳು ಏಕಕಾಲದಲ್ಲಿ ಕಂಡು ಬರುತ್ತವೆ. ಈ ರೀತಿಯಾದ ಬಹುಮುಖೀ ಸಮಾಜವೂ ಒಂದೇ ಕಾಲದಲ್ಲಿ ಒಂದೇ ದೇಶದಲ್ಲಿ ಬದುಕುತ್ತಿರುವುದನ್ನು ಗ್ರಹಿಸಿಕೊಳ್ಳುವ ಅಭ್ಯಾಸದ ವಿಧಾನ ನಮ್ಮದಾಗಬೇಕು. ಲೆವಿಸ್ತ್ರಾಸ್ ನ ರಚನಾವಾದದ ರೀತಿಯಿಂದ ಪಠ್ಯವನ್ನು ಏಕಕಾಲಿಕ (synchronic) ದೃಷ್ಟಿಯಿಂದ ಮಾತ್ರ ನೋಡಬೇಕಾಗಿಲ್ಲ ಎಂಬುದು ವಿದಿತವಾಗುತ್ತದೆ. ಹೀಗೆ ನೋಡುವುದರಿಂದ ಸದ್ಯದ ‘ಈಗ’ ಮತ್ತು ‘ಇಲ್ಲಿ’ಯಾ ಘಟನೆಗಳಿಗೂ ಚಾರಿತ್ರಿಕವಾಗಿಯೂ ಸದ್ಯಕ್ಕೂ ಸ್ಪಂದಿಸುವ ಗುಣ ಒದಗಿ ಬರುತ್ತದೆ.
ಅಂದರೆ, ಯಾವುದೇ ಜಾನಪದ ಪಠ್ಯದ ಅರ್ಥ ಸ್ತಗಿತವಾಗಿರುವುದಿಲ್ಲ. ಕ್ಷಣ ಕ್ಷಣಕ್ಕೂ ಅದು ತನ್ನನ್ನು ತಾನು ಪ್ರತಿಷ್ಠಾಪಿಸಲು ಪ್ರಯತ್ನಿಸುತ್ತಿರುತ್ತದೆ. ಪ್ರತಿ ಸಂಜ್ಞೆ (sign)ಯು ಪ್ರತಿಬಾರಿಯೂ ತನ್ನನ್ನು ತಾನು ಅವತಾರಕ್ಕೆ (realization) ಒಡ್ಡಿಕೊಳ್ಳುತ್ತಿರುತ್ತಾರೆ. ನಿಘಂಟಿನಲ್ಲಿ ಮಾತ್ರ ಅರ್ಥ ಹೂತು ಹೋಗಿರುತ್ತದೆ. ಭಾಷೆಯಲ್ಲಿ ಪ್ರತಿಬಾರಿಯೂ ಪದಗಳು ಪ್ರಯೋಗಕ್ಕೆ ಒಡ್ಡಿಕೊಂಡಾಗ ಸಂದರ್ಭಕ್ಕೆ ತಕ್ಕಂತೆ ಅವತಾರವೆತ್ತುತ್ತಿರುತ್ತದೆ. ಅಂತೆಯೇ ಜಾನಪದ ಪಠ್ಯಗಳು ಪ್ರತಿಬಾರಿಯೂ ಅರ್ಥ ಭಾಷೆಯಲ್ಲಿ ಹಾಜರಾಗುವಂತೆ ಜಾನಪದ/ಸಾಂಸ್ಕೃತಿಕ ಪಠ್ಯದಲ್ಲೂ ಹಾಜರಾಗುತ್ತಿರುತ್ತದೆ. ಈ ಜಾನಪದ ಪಠ್ಯ ಭಾಷಾ ಪಠ್ಯವಾಗಿರಬಹುದು (ಕಥೆ , ಕವನ ಇತ್ಯಾದಿ) ಅಥವಾ ಕ್ರಿಯೆವಿಧಿಗಳಾಗಿರಬಹುದು.
ಯಾವುದೇ ಪಠ್ಯದ ಅರ್ಥವನ್ನು ‘ಈ ಕ್ಷಣದ ಅರ್ಥ’ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಪಠ್ಯದಲ್ಲಿ ಅರ್ಥ ಸಾಪೇಕ್ಷವಾಗಿರುತ್ತದೆ. ಪ್ರತಿಬಾರಿಯೂ ಪಠ್ಯ ಸೃಷ್ಟಿಯಾದಾಗ ಆ ಕ್ಷಣದ ಅರ್ಥ ಸೃಷ್ಟಿಯಾಗುತ್ತದೆ. ಆದ್ದರಿಂದ ಪಠ್ಯ ತಾನು ಸೃಜನವಾಗಿರುವಾಗಿನ ಅರ್ಥ ಮಾತ್ರ ದಕ್ಕುತ್ತದೆ. ಪಠ್ಯ ಪುನರಾವರ್ತನೆಗೊಂಡಂತೆಲ್ಲ ಅರ್ಥದ ವಿವಿಧ ಛಾಯೆಗಳು ಮಾತ್ರ ನಮಗೆ ಗೋಚರವಾಗುತ್ತದೆ. ಅಂದರೆ ಏಕಕಾಲಿಕವಾಗಿ ಕಂಡುಬಂದರೂ ಚಾರಿತ್ರಿಕವಾಗಿಯೂ ಇರುತ್ತದೆ. ಅಂತೆಯೇ ಈ ಛಾಯೆಗಳೇ ಅರ್ಥವೂ ಜೀವಂತವಾಗಿದೆ ಎಂಬುದನ್ನು ಸೂಚಿಸುವುದು. ಆದ್ದರಿಂದ ಪಠ್ಯದ ಅರ್ಥಕ್ಕೆ ಯಾವಾಗಲೂ ಚಾಲನೆ ಇರುತ್ತದೆ. ಅದು ಅಲ್ಲೇ ಹೂತು ಹೋಗುವುದಿಲ್ಲ. ಅನಂತವಾಗಿ ಮುಂದುವರಿಯುತ್ತಲೇ ಇರುತ್ತದೆ. ಪಠ್ಯವೂ ಅನಂತವಾಗಿ ಹುಟ್ಟುತ್ತಲೇ ಇರುವುದರಿಂದ ಪ್ರತಿಬಾರಿಯೂ ಅರ್ಥ ಮುಂದೂಡಲ್ಪಡುತ್ತಿರುತ್ತದೆ. ವ್ಯತ್ಯಾಸವನ್ನು ಸೂಚಿಸುತ್ತಲೇ ಇರುತ್ತಾ ಮುಂದುವರಿಯುತ್ತಿರುತ್ತದೆ. ಜಾನಪದ ಪಠ್ಯದಲ್ಲಿ ಅವತರಣಿಕೆಗಳು(versions) ಇರುವಂತೆ ಅರ್ಥದಲ್ಲೂ ಅವತರಣಿಕೆಗಳು ಉಂಟಾಗುತ್ತಿರುತ್ತವೆ ಅಥವಾ ಅರ್ಥ ಅವತರಿಸುತ್ತಿರುತ್ತದೆ.
ಜಾನಪದದಲ್ಲಿ, ಅಂದರೆ ನುಡಿಸಂಪ್ರದಾಯದಲ್ಲಿ ಕಾಲದಿಂದ ಅರ್ಥವನ್ನು ಅಮೂರ್ತದಲ್ಲಿ ಹಿಡಿದಿಡಲಾಗುವುದಿಲ್ಲ. ಶಿಷ್ಟ ಸಾಹಿತ್ಯದಲ್ಲಿ ಮಾತ್ರ ಅರ್ಥದ ಕಾಲ ಅವಕಾಶ (space)ವಾಗಿ ಪರಿವರ್ತನೆಗೊಳ್ಳುತ್ತಿರುತ್ತದೆ. ನುಡಿಸಂಪ್ರದಾಯದಲ್ಲಿ ಪಠ್ಯ ಕಾಲಕ್ರಮದ ಸರಣಿಯಲ್ಲಿ ಮಾತ್ರ ತನ್ನನು ತಾನು ತೆರೆದುಕೊಳ್ಳುತ್ತಿರುತದೆ. ಈ ಭಾಷಾ ಕಾಲವನ್ನು ಅವಕಾಶವಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಸಂಗ್ರಹಕಾರರು ಅದನ್ನು ಪರಿವರ್ತಿಸಿದರೂ ಅದು ಇನ್ನೊಂದು ಅವತರಣಿಕೆಯಾಗಿ ಮಾತ್ರ ಇರುತ್ತದೆ.
ಯಾವುದೇ ಜಾನಪದ ಪಠ್ಯದಲ್ಲೂ ಒಂದು ರಚನೆ ಇದೆ ಎಂದು ಹೇಳಿ, ಇದೇ ಅದರ ಅರ್ಥವೆಂದು ತೋರಿಸುವುದು ಬಹಳ ಸುಲಭ. ಸಂರಚನಾವಾದಿಗಳು ರಚನೆಯಲ್ಲೇ ಅರ್ಥವಿದೆ ಎಂದು ನಂಬಿದ್ದವರು. ಹೀಗೆ ತೋರಿಸಿಕೊಡುವುದರಿಂದ ಅರ್ಥವೂ ನಾವು ಪಠ್ಯವನ್ನು ‘ಓದು’ವುದಕ್ಕಿಂತ ಮುಂಚೆಯೇ ಅಲ್ಲಿ ಕುಳಿತಿದೆ ಎಂದು ಹೇಳಿದಂತಾಗುತ್ತದೆ. ಒಂದು ಮಟ್ಟದ ತನಕ ಪಠ್ಯ ಮೊದಲೇ ನಿರ್ಧರಿತವಾಗಿರುತ್ತದೆ ಎಂದು ಹೇಳಿದರೂ ಪಠ್ಯ ಬೆಳೆದಂತೆಲ್ಲ ಪಠ್ಯ ಸೃಜಿಸುವವನ ಕೈ ಮೀರಿ ಅರ್ಥ ಬೆಳೆದುಕೊಂಡು ಬಿಡುತ್ತದೆ. ಅರ್ಥ ಉಕ್ಕಿ ಹೋಗುತ್ತದೆ. ಆದ್ದರಿಂದ ಪದ್ಯ ಸೃಜನವಾಗುವ ಮುಂಚೆ ಅದರಲ್ಲಿ ಅರ್ಥವಿರುವುದಿಲ್ಲ. ಪಠ್ಯವೂ ಅರ್ಥಕ್ಕಾಗಿ ಕಾಯುತ್ತಿರಬೇಕಾಗುತ್ತದೆ. ಆದ್ದರಿಂದ ರಚನೆಯಲ್ಲಿ ಅರ್ಥ ಹುಡುಕುವುದಕ್ಕಿಂತ ರಚನಾಪ್ರಕ್ರಿಯೆಯಲ್ಲಿ (structuration) ಅರ್ಥವನ್ನು ಕಾಣಬೇಕು. ಜಾನಪದ ಪಠ್ಯ ಸೃಷ್ಟಿಸುವವನೂ ಸೃಷ್ಟಿಸಮಯದಲ್ಲಿ ತನ್ನ ಮನಸ್ಸಿನಲ್ಲೇ ಅರ್ಥವನ್ನು ಸೃಷ್ಟಿಸಿಕೊಳ್ಳುತ್ತಿರುತ್ತಾನೆ. ತನ್ನನು ತಾನೇ ಓದಿಕೊಳ್ಳುತ್ತಿರುತ್ತಾನೆ.
ಯಾವುದೇ ಸಾಂಸ್ಕೃತಿಕ ಪಠ್ಯದ ‘ಓದೂ’ ಪಠ್ಯವನ್ನು ಸೃಷ್ಟಿಸುವವನ ‘ಓದೇ’ ಆಗಬೇಕಾಗಿಲ್ಲ. ಜಾನಪದ ಪಠ್ಯಗಳು ನುಡಿಯಲ್ಲಿ ಮಾತ್ರ ಇರುವುದರಿಂದ ಪ್ರತಿ ಬಾರಿಯೂ ಸೃಷ್ಟಿಯಾಗುತ್ತಿರಬೇಕಾಗುತ್ತದೆ. ಪ್ರತಿಬಾರಿ ಸೃಷ್ಟಿಯಾದಾಗಲೂ ಹಿಂದಿನ ಅರ್ಥವನ್ನೇ ಹೊಂದಿರುವುದಿಲ್ಲ. ಹಿಂದಿನ ಪಠ್ಯಕ್ಕೆ ಪ್ರತಿಕ್ರಿಯೆಯಾಗಿ ಇಂದಿನ ಪಠ್ಯ ಸೃಷ್ಟಿಯಾಗಬಹುದು, ಪ್ರತಿಬಾರಿ ಈ ಪಠ್ಯವನ್ನು ಕೇಳುವಾಗಲೂ ‘ಓದು’ವಾಗಲೂ ಪಠ್ಯ ಸೃಷ್ಟಿಸುವವನ ಓದೇ ಆಗಬೇಕಾಗಿಲ್ಲ. ಈ ಅರ್ಥದಲ್ಲಿ ಜಾನಪದ ಪಠ್ಯಗಳು ದೃಷ್ಟಿಯಲ್ಲಿ ಮತ್ತು ಅರ್ಥದಲ್ಲಿ ಪ್ರತಿಬಾರಿಯೂ ಅಭಿನಯಕ್ಕೆ ಒಳಗಾಗುತ್ತಲೇ ಇರುತ್ತವೆ. ಅವತಾರಗಳನ್ನು ತಳೆಯುತ್ತಿರುತ್ತದೆ. ಬರಹದಲ್ಲಿರುವ ಪಠ್ಯದ(ಸಾಹಿತ್ಯ) ಓದಿಗಿಂತ ಜಾನಪದ ಪಠ್ಯದ ಓದು ಈ ರೀತಿಯಲ್ಲಿ ಭಿನ್ನವಾಗಿರುತ್ತದೆ. ಬರಹದಲ್ಲಿ ಪಠ್ಯ ಅಚ್ಚಾಗಿರುತ್ತದೆ. ಒಂದು ಕಾಲದಲ್ಲಿ ಹೂತು ಹೋಗಿರುತ್ತದೆ. ಓದುಗರಲ್ಲಿ ಮಾತ್ರ ಮಾತ್ರ ಅರ್ಥ ಬೇರೆ ಬೇರೆಯಾಗಿ ಕಾಣಬಹುದು. ಜಾನಪದದಲ್ಲಿ ಪಠ್ಯ ಸೃಷ್ಟಿಸುವವನ ಓದೂ ಅದರೊಳಗೆ ಪ್ರತಿಬಾರಿಯೂ ಬಂದು ಸೇರಿಕೊಳ್ಳುತ್ತಿರುತ್ತದೆ. ಈ ದೃಷ್ಟಿಯಲ್ಲಿ ನಮ ಜಾನಪದ ಪಠ್ಯಗಳ ಅಧ್ಯಯನವಾಗಿಲ್ಲ. ಒಬ್ಬ ಒಂದು ಕಾಲದಲ್ಲಿ ಹೇಳಿದ ಒಂದು ಜಾನಪದ ಕಥಾನಕವನ್ನು ಮತ್ತೆ ಕೆಲವು ಕಾಲಾಂತರದಲ್ಲಿ ಅವನಿಂದಲೇ ಹೇಳಿಸಿದರೆ ಹಿಂದೆ ಹೇಳಿದ ಅರ್ಥವೇ ನೂರಕ್ಕೆ ನೂರು ಇರುತ್ತದೆಂದು ಹೇಳಲು ಸಾಧ್ಯವಿಲ್ಲ. ಹೇಳಿಕೆಯ ಧಾಟಿ, ಲಯ, ವಕ್ರೋಕ್ತಿ ಬದಲಾದ ಲೋಕದೃಷ್ಟಿ – ಬಂದು ಸೇರಿಕೊಂಡು ಬಿಡಬಹುದು. ಭಾಷೆಯನ್ನೂ ಬಳಸುವವರ ಕೈ(ಬಾಯಿ) ಮೀರಿಬಿಡುವ ಶಕ್ತಿ ಅರ್ಥಕ್ಕಿರುತ್ತದೆ. ಭಾಷೆಯನ್ನೂ ಬಳಸುವವನಿಗೆ ಎದಿರೇಟು ಕೊಡಬಹುದು.
ಇಷ್ಟಾದರೂ ಪಠ್ಯ ಸೃಷ್ಟಿಸುವವನ ಅರ್ಥ ಮತ್ತು ‘ಓದು’ಗಳ ಅರ್ಥಗಳ ನಡುವೆ ಇನ್ನು ಕೆಲವು ಅರ್ಥಗಳು ಉಳಿದುಹೋಗುವ ಸಾಧ್ಯತೆಗಳಿವೆ. ನಾನು ಒಮ್ಮೆ ಜೇನು ಕುರುಬ ರಾಮಾಯಣವನ್ನು ಸಂಗ್ರಹಿಸುವಾಗಿನ ಒಂದು ಪ್ರಸಂಗ ಜ್ಞಾಪಕಕ್ಕೆ ಬರುತ್ತದೆ. ಆ ಪಠ್ಯಕಾರ್ತಿ , ‘ಕೋತಿ ಕಾಡಿನಲ್ಲಿ ತಾಕಸಿಯ ಗುಡಿಸಲಿಗೆ ಬೆಂಕಿ ಇಡುತ್ತದೆ’ ಎಂದು ಹೇಳಿ ತಕ್ಷಣ ‘ಆಗಿನ ಕಾಲದಲ್ಲಿ ಕಾಡಿನಲ್ಲಿ ಯಾವ ಪ್ರಾಣಿ ಪಕ್ಷಿಗಳು ಇರಲಿಲ್ಲ’ ಎಂದು ಸೇರಿಸಿಬಿಟ್ಟಳು. ಹಾಗೆ ಸೇರಿಸಿದ ಉದ್ದೇಶ ನನಗೆ ಅರಿವಾಯಿತು. ಆ ಹಾದಿಯ ಜನರನ್ನು ಕಾಡಿನಿಂದ ಹೊರಹಾಕಿದ್ದರು. ಆ ಸರಕಾರ ಅವರು ಕಾಡನ್ನು ನಾಶಮಾಡುವರೆಂಬ ಕಾರಣದಿಂದ ಕಾಡಿನ ಒಳಕ್ಕೆ ಹೋಗಲು ತಡೆಯುವ ಕ್ರಮಕ್ಕೆ ಪ್ರತಿಕ್ರಿಯೆಯಾಗಿತ್ತು.
ಇನ್ನು, ಸಾಂಸ್ಕೃತಿಕ ಪಠ್ಯಗಳು ಭಾಷಾ ಮಾಧ್ಯಮದಲ್ಲೂ ಇರಬಹುದು. ಭಾಷೇತರ ಮಾಧ್ಯಮದಲ್ಲೂ ಇರಬಹುದು ಅಥವಾ ಅವೆರಡೂ ಸೇರಿ ಇರಬಹುದು. ಜೇನು ಕುರುಬರ ‘ಬುಂಡೆ ಕರೆ’ಯುವ ಸಾಂಸ್ಕೃತಿಕ ಪಠ್ಯದಲ್ಲಿ ಭಾಷಾ ಮತ್ತು ಭಾಷೇತರ ಪಠ್ಯಗಳು ಬೆರೆತ್ತಿರುತ್ತವೆ. ಹಾಡಿಯಲ್ಲಿ ಯಾರಿಗಾದರೂ ಸಮಸ್ಯೆ ಬಂದಾಗ ಅವರು ಬುಂಡೆ ಕರೆಸುತ್ತಾರೆ. ಬುಂಡೆ ಕರೆಯುವವನ ಮೈಮೇಲೆ ‘ಗಾಳಿ’ ಬುಂಡೆ ಕರಸುವವನ/ಳ ಪುರಾತನನಾಗಿರುತ್ತಾನೆ. ಆಟ ಮೈಮೇಲೆ ಬಂದು ಏತಕ್ಕಾಗಿ ಕಷ್ಟ ಬಂದಿದೆ, ಅದಕ್ಕೆ ಪರಿಹಾರವೇನು ಎಂದು ಹೇಳುತ್ತಾನೆ. ಈ ಕ್ರಿಯಾವಿಧಿಯಲ್ಲಿ ಅರ್ಥವೂ ಕೆಲಸ ಮಾಡುವ ರೀತಿ ವಿಚಿತ್ರವಾಗಿರುತ್ತದೆ . ಗಾಳಿ ಮೈಮೇಲೆ ಬಂದಾಗ ಬುಂಡೆ ಕರಸುವವನು ‘ಉ ಹು ಹು ಹು ….’ ಎಂದು ಶಬ್ದವನ್ನು ಹೊರಡಿಸುತ್ತಿರುತ್ತಾನೆ. ಬುಂಡೆ ಬಾರಿಸುವಾಗ ಬರುವ ಶಬ್ದವನ್ನು ಆಗಾಗ್ಗೆ ಆಲಿಸುತ್ತಿರುತ್ತಾನೆ . ಅವನ ಹಿಂದೆ ಕುಳಿತ ನಾಲ್ಕಾರು ಹೆಂಗಸರು ‘ಸೊಲ್ಲು’ ಎಂಬ ರಾಗವನ್ನು ಎಳೆಯುತ್ತಿರುತ್ತಾರೆ. ಇಲ್ಲಿ ಭಾಷೆ ಇರುವುದೇ ಇಲ್ಲ. ಬರೀ ಶಬ್ದಗಳಿರುತ್ತವೆ. ಈ ಶಬ್ದಗಳನ್ನು ಆಲಿಸಿಕೊಂಡು ಸಹಾಯಕನೊಬ್ಬ ಸಮಸ್ಯೆಯನ್ನು ತಂದ ವ್ಯಕ್ತಿಗೆ ಗಾಳಿ ಏನು ಹೇಳಿತು ಎಂಬುದನ್ನು ಪರಿಹಾರವನ್ನು ಹೇಳುತ್ತಿರುತ್ತಾನೆ. ಇಲ್ಲಿ ಪಠ್ಯ ಎಲ್ಲಿ ಹುಟ್ಟುತ್ತದೆ? ಬುಂಡೆಯಲ್ಲೋ? ಬುಂಡೆ ಕರೆಯುವವನಲ್ಲೋ? ಪರಿಹಾರ ಹೇಳುವ ಮಧ್ಯವರ್ತಿಯಲ್ಲೋ? ಅಥವಾ ಪರಿಹಾರ ಕೇಳಿಸಿಕೊಳ್ಳುವ ವ್ಯಕ್ತಿಯಲ್ಲೋ?
ಇಂತಹ ಸಂದರ್ಭಗಳಲ್ಲಿ ಕೇವಲ ಬುಂಡೆ ಕರೆಯುವವನ ಶಬ್ದದಲ್ಲೇ ಭಾಷೆಯನ್ನೂ ಸಂದರ್ಭಕ್ಕೆ ತಕ್ಕಂತೆ ಕಂಡುಕೊಳ್ಳುವ ಮಧ್ಯವರ್ತಿಯು ಸೃಷ್ಟಿಸುವ ಪಠ್ಯವಾಗಿಯೂ ಇರುತದೆ. ಈ ಪಠ್ಯವನ್ನು ಕೇಳುಗ ತನ್ನ ಸಂದರ್ಭಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುತ್ತಾನೆ. ಅರ್ಥ ಸೃಷ್ಟಿಯಾಗುವ ಕ್ರಿಯೆ ಇಲ್ಲಿ ಸಂಕೀರ್ಣವಾಗಿರುತ್ತದೆ. ಇಲ್ಲೂ ಸಹ ಒಮ್ಮೆ ಬುಂಡೆ ಕರೆದಾಗಿನ ಸಾಂಸ್ಕೃತಿಕ ಪಠ್ಯ ಇನ್ನೊಮ್ಮೆ ಕರೆದಾಗ ಇರುವುದಿಲ್ಲ.
ಹೀಗೆ ಸಾಂಸ್ಕೃತಿಕ ಪಠ್ಯಗಳ ಅರ್ಥ ಸಂಕೀರ್ಣವಾಗಿರುವಾಗ ಪ್ರಾಪ್ ಅಥವಾ ಲೆವಿಸ್ತ್ರಾಸ್ ರಂತೆ ವಿಶ್ಲೇಷಣೆಗಾಗಿ ಕಥಾನಕಗಳನ್ನು ಸಂಕುಚಿತಗೊಳಿಸಿಕೊಂಡು ಅಥವಾ motif index ನ ಆಧಾರದ ಮೇಲೆ ಕಥಾನಕಗಳನ್ನು ಸಂಗ್ರಹಿಸಿಕೊಂಡು ವರ್ಗೀಕರಿಸಿಕೊಂಡಾಗ ಅವಕ್ಕೆ ಅರ್ಥಮಾಡುವಾಗ ಮೇಲೆ ಹೇಳಿದ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಪ್ರಜ್ಞಾಪೂರ್ವಕವಾಗಿಯೇ , ಅಪ್ರಜ್ಞಾಪೂರ್ವಕವಾಗಿಯೋ ಕಥಾನಕದ ಅನೇಕ ಅರ್ಥಗಳು ನಾಶಗೊಂಡಿರುತ್ತವೆ. ಆದ್ದರಿಂದ ಪಠ್ಯದ ಅರ್ಥವನ್ನು ಸಾರಾಂಶ ರೂಪದಲ್ಲಿ ಹೇಳಿದಾಗ ಕಥಾನಕಗಳು ಸೊರಗಿ ಹೋಗಿರುತ್ತವೆ. ಒಂದು ರೀತಿಯಲ್ಲಿ ಕಥಾನಕದ ಪಠ್ಯದ ಆಧಾರದಲ್ಲಿ ಸೃಷ್ಟಿಸಿದ ಇನ್ನೊಂದು ಪಠ್ಯವಾಗಿರುತ್ತದೆ.
ಆದ್ದರಿಂದ, ರಚನಾವಾದಿಗಳು ತಿಳಿದಂತೆ ಪಠ್ಯದ ರಚನೆಯಲ್ಲೇ ಅದರ ಕೇಂದ್ರ ಅಡಗಿರುತ್ತದೆ ಎಂಬುದು ಮಿಥ್ಯೆ. ಭಾಷೆಗೆ ಕೇಂದ್ರ ಯಾವುದು? ಕೇಂದ್ರವು ಪ್ರತಿ ಬಾರಿಯೂ ಜಾನಪದ ಪಠ್ಯ ಸೃಸ್ತಿಸುವವನ ಮತ್ತು ಅದನ್ನು ‘ಓದುವವನ’ ದೃಷ್ಟಿಕೋನಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತವೆ. ಇದನ್ನೇ ‘ಲೀಲೆ’ ಎಂದು ಕರೆಯಬಹುದು. ಕೆಲವು ತಂಬೂರಿ ಜಾನಪದ ಸಂಪ್ರದಾಯದವರು ತಮ್ಮನ್ನು ತಾವೇ ಲೀಲೆಗಾರರೆಂದು ಕರೆದುಕೊಂಡಿರುವುದು ಬಹಳ ಅರ್ಥವತ್ತಾಗಿದೆ.
ಹೀಗೆಂದಾಕ್ಷಣ ಜಾನಪದ ಪಠ್ಯ ಗಳನ್ನೂ ಅರ್ಥಮಾಡಿಕೊಳ್ಳುವಾಗ ಅಥವಾ ಓದುವಾಗ ಎಷ್ಟೆಷ್ಟು ಅರ್ಥಗಳು ಆ ಪಠ್ಯದಲ್ಲಿವೆ ಎಂದು ನಾವು ಪಟ್ಟಿಮಾಡಬೇಕಾಗಿಲ್ಲ. ಇದರ ಉದ್ದೇಶ, ಪಠ್ಯವೂ ಎಲ್ಲೆಲ್ಲಿ ತನ್ನಿಂದ ತಾನು ಚೆಲ್ಲಿಕೊಳ್ಳುತ್ತದೆ, ಪಠ್ಯದಲ್ಲಿನ ಅರ್ಥ ಸಂಯೋಜನೆಯಾಗುತ್ತದೆ ಅಥಾವಾ ಆಗುವುದಿಲ್ಲ. ಎಲ್ಲಿ ಪಠ್ಯವೂ ಪಠ್ಯಕಾರಣ ಹಿಡಿತವನ್ನು ಮೀರಿ ಚೆಲ್ಲಿಕೊಳ್ಳುತ್ತದೆ ಎಂಬುದನ್ನು ಮನಗಾಣಬೇಕು. ಪಠ್ಯಗಳಿಗೆ ಈ ರೀತಿ ಅರ್ಥ ಕಂಡುಕೊಳ್ಳುವ ಓದುಗ ಪಠ್ಯದ ಬಾಯಿಯಾಗುತ್ತಾನೆ.
ಜಾನಪದ ಪಠ್ಯದ ಅವತರಣಿಕೆಗಳನ್ನು ಲೆವಿಸ್ತ್ರಾಸ್ ಅಥವಾ ಪ್ರಾಪ್ ಅವರು ತಮ್ಮ ವಿಶ್ಲೇಷಣೆಗಾಗಿ gap fillers   ನಂತೆ ಉಪಯೋಗಿಸಿಕೊಂಡರು. ಆದರೆ ಬೇರೆ ಬೇರೆ ಕಾಲ-ದೇಶಗಳಲ್ಲಿ ಒಂದೇ ಪಠ್ಯದ ನಾಲ್ಕಾರು ಅವತರಣಿಕೆಗಳು ಸಿಕ್ಕಿದಾಗ ಅವನ್ನು ಬೇರೆ ಬೇರೆ ಧ್ವನಿಗಳಾಗಿ (voices) ಪರಿಗಣಿಸಬೇಕು. ಬಹುಮುಖ ಅರ್ಥಗಳನ್ನು ಹೊರಡಿಸುವ ಪಠ್ಯವೆಂದು ಓದಿಕೊಳ್ಳಬೇಕು. ಉದಾಹರಣೆಗೆ, ಮಾರಿಯಮ್ಮನ ಜಾನಪದ ಕಥೆಯಲ್ಲಿ ಮಾರಿಯಾಗುವ ಬ್ರಾಹ್ಮಣ ಹುಡುಗಿ ಕೇಂದ್ರವಾಗಬಹುದು. ಮತ್ತೊಮ್ಮೆ ಅವಳ ಗಂಡ, ಮಾದಿಗ, ಕೇಂದ್ರವಾಗಬಹುದು. ಅಂತೆಯೇ ಮಾಂಸವನ್ನು ಬಯಸಿದ ಮಾದಿಗನ ತಾಯಿ ಕೇಂದ್ರವಾಗಬಹುದು. ಬೇರೆ ಬೇರೆ ಅವತರಣಿಕೆಗಳು ಬೇರೆ ಬೇರೆ ವ್ಯಕ್ತಿಗಳ ದೃಷ್ಟಿಯನ್ನು ಕೇಂದ್ರ ಮಾಡಿಕೊಳ್ಳಬಹುದು. ಈ ರೀತಿಯಲ್ಲಿ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ದೃಷ್ಟಿಕೋನಗಳ ಅವತರಣಿಕೆಗಳಾಗಿ ಬೇರೆ ಬೇರೆ ಒತ್ತುಗಳನ್ನು ಗಳಿಸಬಹುದು . ಈ ರೀತಿ ನೋಡುವುದರಿಂದ ಯಾವ ಪಠ್ಯಕ್ಕೂ ಅರ್ಥ ಸಂಕುಚಿತತೆಯ ಸೋಂಕು ತಟ್ಟುವುದಿಲ್ಲ. ಭಾಷೆ ಎಲ್ಲಿ ನಿಲ್ಲುತ್ತದೆಯೋ ಅರ್ಥ ಅಲ್ಲಿಂದ ಆಚೆಗೂ ಚಾಚಿಕೊಂಡಿರುತ್ತದೆ. ಏಕಕಾಲಿಕ ಓದು ಇಲ್ಲಿ ಸಾಧ್ಯವಾಗುವುದಿಲ್ಲ. ಯಾವುದೇ ಮಿಥ್ ನ , ಕ್ರಿಯಾವಿಧಿಯ , ಕಥಾನಕಗಳ ವಿವಿಧ ಸ್ತರದಲ್ಲಿ ಪಠ್ಯವನ್ನು ನೋಡುವಂತಾಗಬೇಕು. ಇಲ್ಲಿ ಪಠ್ಯದ ‘ಓದು’ ಅಚಾರಿತ್ರಿಕವಾಗಿರುವುದಿಲ್ಲ . ಪಠ್ಯ ಸೃಷ್ಟಿಸಿದ ಸಮಾಜದ ವಿವಿಧಕಾಲಗಳ ಮನಸ್ಸು ಇಂತಹ ಓದಿನಿಂದ ತೆರೆದುಕೊಳ್ಳುತ್ತದೆ. ಹೀಗೆ ಜಾನಪದ ಅವತರಣಿಕೆಗಳು ಸೃಷ್ಟಿಸುವ ambivalance , ಜಾನಪದ ಪಠ್ಯದ ಅರ್ಥಗಳನ್ನು ಮುಕ್ಕಳಿಸುವ ಗುಣವನ್ನು ಹೊಂದಿರುತ್ತದೆ.
ಸಂರಚನಾವಾದಿಗಳು ಪಠ್ಯಗಳಲ್ಲಿ ಸಾರ್ವರ್ತಿಕ ಅರ್ಥವನ್ನು (universal meaning) ಕಂಡುಕೊಳ್ಳಲು ಮಾತ್ರ ಬಳಸುತ್ತಾರೆ. ಪಠ್ಯ ಸಾರ್ವತ್ರಿಕ ಅರ್ಥವನ್ನು ಹೊಂದಿರುವುದರ ಜೊತೆಗೇ, ಸ್ಥಳೀಯ ಅರ್ಥವನನ್ನೂ, ಪಠ್ಯ ಸೃಷ್ಟಿಸುವವನ ದೃಷ್ಟಿಕೋನವನ್ನು ಮೇಲೆ ವಿಶ್ಲೇಷಿಸಿದಂತೆ – ಹೊಂದಿರುತ್ತದೆ ಎಂಬುದೂ ಮುಖ್ಯ. ಈ ರೀತಿ ಓದಿನಿಂದ ಪಠ್ಯದಲ್ಲಿ ಮನುಷ್ಯ ಸ್ತಾಪಿತನಾಗುತ್ತಾನೆ. ಸಂಸ್ಕೃತಿಯ ಒಳಗಿನ – ಹೊರಗಿನವ ಎಂಬ ದ್ವಂದ್ವವಿರುವುದಿಲ್ಲ . ಸಂರಚನವಾದಿಗಳು ಕಂಡಂತೆ ಸಾಂಸ್ಕೃತಿಕ ಪಠ್ಯವೂ ಭಾಷಾ ಮಾದರಿಯ ಪಠ್ಯವಾಗಿ ಕಾಣಬೇಕಾಗಿಲ್ಲ. ಇಲ್ಲಿ ಭಾಷೆಯೇ ಪಠ್ಯ.
ಜಾನಪದ ಪಠ್ಯಗಳು ಯಾವಾಗಲೂ ಪರಿಪೂರ್ಣವಾಗಿರಬೇಕಾಗಿಲ್ಲ. ಇಲ್ಲಿ ‘ಖಾಲಿಜಾಗ’ಗಳಿಗೂ ಎಡೆ ಇರುತ್ತದೆ. ಮಧ್ಯೆ ಮಧ್ಯೆ ಕಾರ್ಯಕಾರೀ ಪರಿಣಾಮಗಳ ಕೊಂಡಿ ಕಳಚಿಕೊಂಡಿರಬಹುದು. ಖಾಲಿಜಾಗಗಳನ್ನು ಓದುಗ/ಕೇಳುಗ ತುಂಬಿಕೊಳ್ಳುತ್ತಾನೆ. ಕೊಂಡಿಗಳನ್ನು ಸೃಷ್ಟಿಸಿಕೊಳ್ಳುತ್ತಾನೆ . ಅರ್ಥ ವಿನಿಯೋಗಕ್ಕಾಗಿ ಕಾಯುತ್ತಿರುತ್ತಾನೆ. ಈ ದೃಷ್ಟಿಯಿಂದ ನೋಡಿದಾಗ ಪಠ್ಯಗಳಲ್ಲಿ ಅರ್ಥ ಬಾಯಿ ಕಟ್ಟಿಕೊಂಡಿರಲು ಸಾಧ್ಯವಿಲ್ಲ. ಎಲ್ಲಿ ಭಾಷೆ ಕಟ್ಟಿಹೊಗುತ್ತದೋ ಅಲ್ಲಿ ‘ಸಾವು’ ಇರುತ್ತದೆ. ಭಾಷೆಗಾಗಿ ಆಕಾಂಕ್ಷಿ (desire) ಪಡುವಾಗ ಜೀವ ತುಳುಕಾಡುತ್ತಿರುತ್ತದೆ. ಈ ಜೀವನವನ್ನು ಹಿಡಿಯುವುದು ಜಾನಪದ ಅಧ್ಯಯನದ ಗುರಿಯಾಗಬೇಕು. ಇದಕ್ಕೆ ಅತ್ಯುತ್ತಮ ಉದಾಹರಣೆ “ಮುಳ್ಳು ಬಿದ್ದಾವೆ ಮುಗುಲುದ್ದ” ಎಂಬ ಜಾನಪದ ಗೀತೆಯನ್ನು ನೋಡಬಹುದು(ಕಾಳೇಗೌಡ ನಾಗವಾರ(೧೯೭೩)

ಮುಳ್ಳು ಬಿದ್ದಾವೆ ಮುಗುಲುದ್ದ
ನವಿಲೇ ದುಂಬಕ್ಕಯ್ಯ ನವಿಲೇ ದುಂಬಿ
ನವಿಲೇ ದುಂಬವ್ವ ಜಾನಿ ನವಲೇ ದುಂಬಿ
ಅತ್ತಮ್ಮ ಅತ್ತಮ್ಮ
ಹಿತಳುಗೊಂದ್ಹಾವು ಬತ್ತು
ಹಾವಲ್ಲ ಕಾನಮ್ಮಿ
ಅದೊಂದು ಜಾತಿ ಮೀನು
ಅದ ಹಿಡಕೊಂಡೆ ಬಾರಮ್ಮಿ
ಹೆಡೆಗೇಲಿ ಕೌಚಮ್ಮಿ
ಅದರ ಕಣ್ಣಾನೆ ಮೀಟಮ್ಮಿ
ಕಡಿಯಳಕೆ ಮಾಡಮ್ಮಿ
ಅದರ ನಾಲಿಗೆಯ ಎಳಿಯಮ್ಮಿ
ಚಿಗುರೆಲೆ ಮಾಡಮ್ಮಿ
ಅದರ ವಿದುಲೇಯ ತಗಿಯಮ್ಮಿ
ಕೆನೆಸುಣ್ಣ ಮಾಡಮ್ಮಿ
ಅದ ತಕ್ಕೊಂಡು ಬಾರಮ್ಮಿ
ಕಡಿಯಾನೆ ಕುಯ್ಯಮ್ಮಿ
ಅಡಗೇಯ ಮಾಡಮ್ಮಿ
ಕಡಿಯಾನೆ ಕೂದಾಳು
ಎಸರಾನೆ ಮಾಡಾಳು
ಅತ್ತಮ್ಮ ಅತ್ತಮ್ಮ
ನೀವು ಉಣಬನ್ನಿ ಈಗ
ನನಗೆ ಆಯ್ತಾರದೊಪ್ಪತ್ತು
ನಿನ್ನ ಮಾವಯ್ಯ ಕರಡಿಕ್ಕೆ
ಮಾವಯ್ಯ ಮಾವಯ್ಯ
ಊಟಾನೆ ಮಾಡಬನ್ನಿ
ನನಗೆ ಮಂಗ್ಲಾರ್ದ ಒಪ್ಪತ್ತು
ನಾನು ಊಟ ಮಾಡುದಿಲ್ಲ
ನಿನ್ನ ಮೈದಾಳ 
ಮೈದಾಳೆ ಮೈದಾಳೆ
ನೀವು ಊಟಾನೇ ಮಾಡಬನ್ನಿ
ನನಗೆ ಸ್ವಾಮಾರ್ದ ಒಪ್ಪತ್ತು
ನಾವು ಊಟಾನೆ ಮಾಡೂದಿಲ್ಲ
ಅತ್ತಮ್ಮ ಅತ್ತಮ್ಮ
ಯಾರಿಗೆ ಉಣಿಲಿಕ್ಕಾಲಿ
ಯಾರೀಗೂ ಬ್ಯಾಡಮ್ಮ
ನೀನರಾ ಉಣ್ಣೋಗೆ
ನೀನರಾ ಉಣ್ಣೋಗೆ
ಅಂಗಂತ ಹೇಳುತಾಳೆ
ಯಾರಿಗೂ ಬೇಕಿಲ್ಲ
ನಿನ್ನೆಳೂರ ಗೌಡರಿಗಕ್ಕೆ
ಏಳೂರಗೌಡರಿಗೆ ಉಣಿಲಿಕ್ಕೆ ಬುಟ ತಾವು
ಮುಳ್ಳು ಬಿದ್ದವೆ ಮುಗುಲುದ್ದ/ಆ ಮುಳ್ಳು
ಮುಂದೆ ಬಾಕಳಿಗೆ ಕದವಾದೋ / ನಿಲುವಾದೋ
ಮುಂದಳಬಾಕಳಿಗೆ ಚಿಲುಕಾದೋ /ಮಾಶಿವನೆ
ಕುಚ್ಚಿನ ಮೀನಾಗಿ ಕುಣಿದಾವೋ
ತಂಬುಲ ಕೋಡಿ ಹೋಳಿಯಾಗಿ ಹರದಾವೋ
ಕತ್ತರಿಸಿ ಮಾರಿದೋ ಕಳಿಯಡಿಕೆ / ಆತಾವು
ಬಿತ್ತರಿಸಿ ಮಾರಿದೋ 
ಸುವ್ವು ಮಾರಿದೋ ಕೆನೆಸುಣ್ಣ ಆತಾವು
ಕಟ್ಟಿ ಮಾರಿದೋ ಹೊಗೆಸೊಪ್ಪು



ಗ್ರಂಥಸೂಚಿ
ಅನಂತಮೂರ್ತಿ.ಯು.ಆರ್(೧೯೯೦) ‘ರಾಜಭೀತಿ ರಾಜನಿಲ್ಲದ ಭೀತಿ; ಪೂರ್ವಾಪರ ಅಕ್ಷರ ಪ್ರಕಾಶನ ಹೆಗ್ಗೋಡು, ಸಾಗರ, ಕರ್ನಾಟಕ
ಲೆವಿಸ್ತ್ರಾಸ್ ಕ್ಲಾಡ್(೧೯೭೮)  Myth and Meaning: University of Toronto Press, Canada.
ಪ್ರಾಪ್ ವ್ಲಾಡಮೀರ್(೧೯೬೫)  Morphology of Folk Tales, University of Texas , Ostin
ಕಾಳೇಗೌಡ ನಾಗವಾರ (೧೯೭೩) ಬಯಲು ಸೀಮೆಯ ಲಾವಣಿಗಳು , ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಕಾಮೆಂಟ್‌ಗಳಿಲ್ಲ: