ಮಂಗಳವಾರ, ಜನವರಿ 10, 2017

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ಪ್ರೊ.ಕಿಕ್ಕೇರಿ ನಾರಾಯಣ
profile
ಸೌಜನ್ಯ: http://kikkerinarayana.in/
21
ನಾವಾಗಲೇ ಮಾನವ ಜನಾಂಗದ ಚರಿತ್ರೆಯನ್ನು ಅರಿಯಲು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ರಾಜ-ಮಹಾರಾಜರ ಚರಿತ್ರೆ ಕಾರಣ- ಕದನ-ಫಲಿತಾಂಶವನ್ನು ಮುಂದಿಟ್ಟುಕೊಂಡು ಬರೆದ ಚರಿತ್ರೆ, ಡಾರ್ವಿನ್ನಿನ ವಿಕಾಸವಾದವನ್ನು ಆಧರಿಸಿ ಬರೆದ ಚರಿತ್ರೆ ಮಾರ್ಕ್ಸ್ ವಾದವನ್ನು ಆಧರಿಸಿದ ಚರಿತ್ರೆ ಇತ್ಯಾದಿ. ಅಲ್ಲದೆ ಇವುಗಳ ಒಳಪದರಗಳಿಂದ ಮೂಡಿಬಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಕಂಡಿದ್ದೇನೆ. ಜನಾಂಗೀಯ, ವರ್ಣನೀತಿಯಿಂದ ರಚಿತವಾದ ಚರಿತ್ರೆಗಳನ್ನ ನಾವು ಕಂಡಿದ್ದೇವೆ. ಈ ನಮ್ಮ ಬಹುಪಾಲು ಚರಿತ್ರೆಗಳು ಲಿಖಿತ ಆಧಾರಗಳ ಮೇಲೆ ನಿಂತಿವೆ. ಅಂದರೆ ಸುಮಾರು ಮೂರು ಸಾವಿರ ವರ್ಷಗಳ ಚರಿತ್ರೆ ಮಾತ್ರ ದಕ್ಕಿದೆ. ಮನುಷ್ಯ ಬರವಣಿಗೆ ಕಂಡುಹಿಡಿದಿದ್ದು ಆ ಕಾಲದಲ್ಲಿ; ಆದರೆ ಅವನು ಸುಮಾರು ೭ ಮಿಲಿಯ ವರ್ಷಗಳಿಂದ ಈ ಭೂಮಿಯ ಮೇಲೆ ಬದುಕುತ್ತಾ ಬಂದಿದ್ದಾನೆ. ಇದಕ್ಕೆ ಹೋಲಿಸಿದರೆ ಬರವಣಿಗೆ ಅತ್ಯಂತ ಈಚಿನದೆಂದು ಕಂಡು ಬರುತ್ತದೆ. ಅಲ್ಲದೆ ಪ್ರಪಂಚದ ಬೇರೆ ಬೇರೆ ಖಂಡಗಳಲ್ಲಿ ಬದುಕಿರುವ ಅನೇಕ ಸಮಾಜದಲ್ಲಿ ಇನ್ನು ತಮ್ಮ ಭಾಷೆಯನ್ನೂ ಬರವಣಿಗೆಗೆ ಅಳವಡಿಸಿಕೊಂಡಿಲ್ಲ . ಅಂದರೆ ನಮ್ಮ ಇತಿಹಾಸ ರಚನೆ ಕೇವಲ ಪಾರ್ಶ್ವಿಕವಾದದ್ದು.
ಮೇಲೆ ಹೇಳಿದ ಎಲ್ಲಾ ರೀತಿಯ ಚರಿತ್ರೆಗಳನ್ನೂ ಬದಿಗಿರಿಸಿ ಇಡೀ ನಮ್ಮ ಜಗತ್ತನ್ನು ಒಂದು ಘಾತಕವೆಂದು ಪರಿಗಣಿಸಿ ವಿವಿಧ ಜ್ಞಾನ ಶಾಖೆಗಳಾದ ಪುರಾತತ್ವಶಾಸ್ತ್ರ , ಮಾನವಶಾಸ್ತ್ರ, ಭಾಷಾಶಾಸ್ತ್ರ, ಪ್ರಾಣಿಶಾಸ್ತ್ರ , ವಿಕಸನ ಜೀವಶಾಸ್ತ್ರ , ಭೂಗರ್ಭಶಾಸ್ತ್ರ ಇವೆಲ್ಲದರ ಹದವಾದ ಪಾಕದಿಂದ ಜೇರ್ಡ್ ಡೈಮಂಡ್ ಗನ್ಸ್, ಜರ್ನ್ಸ್, ಸ್ಟೀವ್, ದೇ ಫೇಟ್ಸ್ ಆಫ್ ಹ್ಯೂಮನ್ ಸೊಸೈಟಿ ಎಂಬ ಪುಸ್ತಕವನ್ನು ೧೯೯೭ರಲ್ಲಿ ರಚಿಸಿಕೊಟ್ಟಿದ್ದಾನೆ. ಐದು ನೂರು ಪುಟಗಳ ಈ ಪುಸ್ತಕದ ಹರವು ಅಪಾರವಾದದ್ದು.
ನಮ್ಮ ವಿಶ್ವವಿದ್ಯಾಲಯಗಳಲ್ಲಿ ಚರಿತ್ರೆಯನ್ನು ಇನ್ನೂ ವಿಜ್ಞಾನವೆಂದು ಪರಿಗಣಿಸಿಲ್ಲ. ಅದನ್ನು ಸಾಮಾಜಿಕ ಅಧ್ಯಯನದ ಒಂದು ಭಾಗವೆಂದೇ ಪರಿಗಣಿಸಲಾಗಿದೆ. ಅಲ್ಲದೆ ಚರಿತ್ರೆಕಾರರೆ ಅದನ್ನು ವಿಜ್ಞಾನವೆಂದು ಪರಿಗಣಿಸಿಲ್ಲ. ಚರಿತ್ರೆಯೆಂದರೆ ಕೆಲವು ವಿಷಯಗಳ ವಿಸ್ತಾರವಾದ ಮಂಡನೆ ಎಂದೂ ಒಂದಾದನಂತರ ಮತ್ತೊಂದು ಸಂಗತಿಯನ್ನು ಪೇರಿಸಿಡುವುದು ಎಂದು ಭಾವಿಸಿದ್ದಾರೆ ಎಂಬುದು ಜೇರ್ಡ್ ನ ಕೊರಗು, ಇದಕ್ಕಾಗಿಯೇ ಈತ ಚರಿತ್ರೆಗೆ ಸಂಬಂಧಪಟ್ಟ ಅಂತರರಾಷ್ಟ್ರೀಯ ಅಧ್ಯಯನಗಳನ್ನು ತನ್ನ ಸಾಧನವಾಗಿ ಬಳಸಿಕೊಂಡಿದ್ದಾನೆ.
ಈ ಜೇರ್ಡ್ ಡೈಮಂಡ್ ಮೂಲತಃ ಚರಿತ್ರೆಕಾರನಲ್ಲ. ತನ್ನ ತಂದೆಯಂತೆ ತಾನೂ ಡಾಕ್ಟರ್ ಆಗ ಬಯಸಿದವನು . ಅದಕ್ಕಾಗಿ ಎಳವೆಯಿಂದಲೇ ತಯಾರಿ ನಡೆಸಿದ್ದ. ಇವನ ಇನ್ನೊಂದು ಹವ್ಯಾಸವೆಂದರೆ ಹಕ್ಕಿಗಳ ವೀಕ್ಷಣೆ. ಈ ಚಟ ಎಲ್ಲಿಯವರೆಗೆ ಹೋಯಿತೆಂದರೆ ಔಷಧಶಾಸ್ತ್ರದ ಓದನ್ನು ಬಿಟ್ಟು ತನ್ನ ಕಾಲೇಜಿನ ವಿಧ್ಯಾಭ್ಯಾಸಕ್ಕೆ ಪ್ರಾಣಿಶಾಸ್ತ್ರವನ್ನು ಆರಿಸಿಕೊಂಡ. ಅತ್ಯಂತ ಪ್ರತಿಭಾನ್ವಿತ ವಿಧ್ಯಾರ್ಥಿಯಾಗಿದ್ದ ಈತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದ. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಸೇರಿ ಮಾಲಿಕ್ಯುಲಾರ್ ಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ(೧೯೨೧). ನಂತರ ಜೀವವಿಕಾಸವಾದ ಮತ್ತು ಮಾಲಿಕ್ಯುಲಾರ್ ಜೀವಶಾಸ್ತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಆಶಿಸಿದ. ಅದೇ ಸಮಯಕ್ಕೆ ಸರಿಯಾಗಿ ಆಸ್ಟ್ರೇಲಿಯಾ ಖಂಡ ಮೇಲ್ಭಾಗದಲ್ಲಿರುವ ಪಾಪುವಾ ನ್ಯುಗಿನಿಯಾ ದ್ವೀಪದಲ್ಲಿ ಅತ್ಯಂತ ಹಳೆಯ ಹಕ್ಕಿಯ ಪಳೆಯುಳಿಕೆ ಕಂಡು ಬಂದಿದೆ ಎಂಬ ಸುದ್ದಿ ಇವನನ್ನು ತಲುಪಿತು. ಈತ ಆ ದ್ವೀಪಕ್ಕೆ ಅತ್ಯಂತ ಉತ್ಶಾಹದಿಂದ ಹೋದ. ಆ ದ್ವೀಪದಲ್ಲಿರುವವರು ಮೂಲನಿವಾಸಿಗಳು ಬುಡಕಟ್ಟು ಸಂಸ್ಕೃತಿಗೆ ಸೇರಿದವರು. ಹೋದ ಮಾರನೆ ದಿನವೇ ಸಮುದ್ರ ದಂಡೆಯಲ್ಲಿ ವಾಕ್ ಮಾಡುತ್ತಿದ್ದಾಗ ಬುಡಕಟ್ಟು ಜನಾಂಗದ ಯಾಲಿ ಎಂಬುವವನ ಭೇಟಿಯಾಯಿತು. ಆತ ಕುತೂಹಲದಿಂದ ಜೇರ್ಡ್ ನನ್ನು ಪರಿಚಯ ಮಾಡಿಕೊಂಡು ಆತ ಅಲ್ಲಿಗೆ ಬಂದ ಕಾರಣ ಕೇಳಿದ. ಅದಕ್ಕೆ ಜೇರ್ಡ್ ‘ಒಂದು ಕಾಲದಲ್ಲಿ ಬದುಕ್ಕಿದ್ದು ಈಗ ಇಲ್ಲವಾಗಿರುವ ಪಕ್ಷಿಯ ಪಳೆಯುಳಿಕೆಯ ಬಗ್ಗೆ ಅಧ್ಯಯನ ಮಾಡಲು ಬಂದಿದ್ದೇನೆ’ ಎಂದ. ಆಶ್ಚರ್ಯಚಕಿತನಾದ ಯಾಲಿ, ‘ಅಲ್ಲಾ ಸ್ವಾಮಿ, ಯಾವುದೋ ಒಂದು ಕಾಲದಲ್ಲಿದ್ದ ಹಕ್ಕಿಯ ಬಗ್ಗೆ ಸಂಶೋಧನೆಗೆ ಬಂದಿದ್ದೀರಲ್ಲ, ಅದೂ ಅಮೆರಿಕಾದಿಂದ, ಇಲ್ಲಿ ಇನ್ನು ನಾವು ಬದುಕಿದ್ದೆವಲ್ಲ, ನಾವು ಯಾವ ಕಾಲದಿಂದ ಇಲ್ಲಿ ಇದ್ದೇವೆ(ಬಿಳಿಯರು ಏಕೆ ನಮ್ಮನ್ನು ಆಳುತ್ತಿದ್ದಾರೆ?) ಹೇಳಿ’ ಎಂದು ಕೇಳಿದ. ಈ ಪ್ರಶ್ನೆ ಜೇರ್ಡ್ ನನ್ನು ಅಚ್ಚರಿಗೊಳಿಸಿದ್ದೆ ಅಲ್ಲದೆ ತಲ್ಲಣಕ್ಕೂ ಈಡುಮಾಡಿತು. ಹೌದಲ್ಲ ಸತ್ತ ಹಕ್ಕಿಯ ಚರಿತ್ರೆಯನ್ನು ಹುಡುಕಿಕೊಂಡು ಬಂದವ ನಾನು. ಆದರೆ ಮಾನವನ ಚರಿತ್ರೆಯನ್ನೇ ತಿಳಿದಿಲ್ಲವಲ್ಲ ನಾನು’ ಎಂಬ ಅರಿವು ಜೇರ್ಡ್ ನಿಗಾಯಿತು.
22ಯಾಲಿ ಹಾಕಿದ ಈ ಪ್ರಶ್ನೆಗೆ ಉತ್ತರ ಕಂಡುಹಿಡಿದುಕೊಳ್ಳಲು ಹತ್ತು ವರ್ಷಗಳ ನಂತರ ಮಾನವ ಜನಾಂಗದ ಇತಿಹಾಸವನ್ನು ಕಂಡುಹಿಡಿಯಲು ಸರ್ವಸಿದ್ದತೆಗಳನ್ನು ಮಾಡಿಕೊಂಡು ೧೯೭೨ ರಲ್ಲಿ ಮತ್ತೆ ಪಾಪುವಾ ನ್ಯುಗಿನಿಯಾಗೆ ಬಂದ. ಆ ದ್ವೀಪದೇಶ ಆಸ್ಟ್ರೇಲಿಯಾದ ಬಿಳಿಯರ ವಸಾಹತುವಿನಿಂದ ಬಿಡುಗಡೆ ಪಡೆಯುವ ಸಿದ್ದತೆ ನಡೆಸಿತ್ತು. ಅಷ್ಟು ಹೊತ್ತಿಗಾಗಲೇ ಯಾಲಿ ಬುಡಕಟ್ಟು ಜನಾಂಗದ ನಾಯಕನಾಗಿ ಹೊರಹೊಮ್ಮಿದ್ದ.
ಜೇರ್ಡ್ ನ ಚರಿತ್ರೆಯ ದಾರಿ ಭಿನ್ನವಾಗಿತ್ತು. ಚರಿತ್ರೆಯ ಪುನಾಃರಚನೆ ಎಂದರೆ ವಿವಿಧ ವಿಜ್ಞಾನ ಶಾಖೆಗಳ ಜ್ಞಾನದ ಅನಿರ್ವಾರ್ಯತೆ ಇದೆಯೆಂದು ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಭಾಷಾಶಾಸ್ತ್ರಗಳ ಆಧಾರ ಒಂದು ಕಡೆಯಾದರೆ ಇನ್ನೊಂದು ಕಡೆ ಜೀವವಿಕಾಸವಾದ, ಪರ್ಯಾವರಣ ಅಧ್ಯಯನ, ಭೂಗರ್ಭಶಾಸ್ತ್ರದ ಅರಿವು ಇವೆಲ್ಲದರ ಜ್ಞಾನವನ್ನು ಹೊತ್ತು ನಡೆಸಿದ್ದ. ಆದರೆ ಜೇರ್ಡ್ ನ ಇತಿಹಾಸ ರಚನೆ ಪ್ರಾರಂಭವಾಗುವುದು ಇಂದಿನಿಂದ ಹದಿಮೂರು ಸಾವಿರ ವರ್ಷಗಳಿಂದ ಮಾತ್ರ. ಏಕೆಂದರೆ ಭೂಗರ್ಭಶಾಸ್ತ್ರದ ಪ್ರಕಾರ ಈ ಕಾಲದಲ್ಲಿ ಹಿಮಯುಗವು ಸರಿದು ‘ಇತ್ತೀಚಿನ’ ಯುಗ ಪ್ರಾರಂಭವಾಯಿತು. ಅಂದರೆ ಆಹಾರಕ್ಕಾಗಿ ಬೇಟೆಯಾಡಿ ಮತ್ತು ಅದರ ಜೊತೆ ತಿನ್ನಬಹುದಾದ ಸಸ್ಯಗಳ ಅನ್ವೇಷಣೆ ಮಾಡುತ್ತಿದ್ದ ಮನುಷ್ಯ ಒಂದು ಕಡೆ ತಳ ಊರಲು ಅಭ್ಯಾಸ ಮಾಡಿಕೊಳ್ಳುತ್ತಿದ್ದ ಕಾಲ. ಯಾವ ಬೆಳೆಗಳನ್ನು ಬಿತ್ತಿ ಬೆಳೆಯಬಹುದು, ಅದಕ್ಕಾಗಿ ಭೂಮಿಯನ್ನು ಹೇಗೆ ಉಪಯೋಗಿಸಬಹುದು, ಒಂದು ಕಡೆ ತಳ ಊರಿದರೆ ಆಹಾರಕ್ಕೆ ಯಾವ ಪ್ರಾಣಿಗಳನ್ನು ಪಳಗಿಸಿ ಸಾಕಬಹುದು ಅದರಿಂದ ಬೇಸಾಯಕ್ಕೆ ಏನಾದರು ನೆರವಾದೀತೇ ಎಂಬುದನ್ನು ಪರೀಶೀಲಿಸುತ್ತಿದ್ದ ಕಾಲ. ಒಂದು ರೀತಿಯಲ್ಲಿ ‘ಹೊಸ ತಾಂತ್ರಿಕತೆ’ಗೆ ಮನುಷ್ಯ ಸಿದ್ಧನಾಗುತ್ತಿದ್ದ ಕಾಲ. ಇದಕ್ಕೆ ಮುಂಚೆ ಏಳು ಮಿಲಯನ್ ವರ್ಷಗಳ  ಹಿಂದೆ ಮೂಲ ಮಾನವನ ನೆಲೆ ಆಫ್ರಿಕ ಖಂಡ ಎಂದು ಗುರುತಿಸಲಾಗಿದೆ. ಅಲ್ಲಿಂದ ಹಿಮಯುಗ ಮುಗಿಯುವವರೆಗೆ ಆತ ಭೂಮಿಯ ಬೇರೆ ಬೇರೆ ಕಡೆಗೆ ಪಸರಿಸಿದ ಎಂಬ ಸಿದ್ದಾಂತ ಪುರಾತತ್ವ ಮತ್ತು ಮಾನವಶಾಸ್ತ್ರಗಳಿಂದ ರೂಪುಗೊಂಡಿದೆ. ಅಂದರೆ ಕಳೆದ ಹದಿಮ್ಮೊರು ಸಾವಿರ ವರ್ಷಗಳಿಂದ ಆತ ಅಲೆಮಾರಿಯೇ ಆಗಿದ್ದ.
ಮಾನವ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ಬೇಸಾಯ ಸಂಸ್ಕೃತಿ ಪ್ರಾರಂಭವಾದದ್ದು ಪಶ್ಚಿಮ ಏಷ್ಯಾದಲ್ಲಿ. ಇಲ್ಲಿ ಕ್ರಿ.ಪೂ.ಏಳು ಸಾವಿರ ವರ್ಷಗಳ ಹಿಂದೆ ಆಹಾರ ಉತ್ಪಾದನೆ ಪ್ರಾರಂಭವಾಯಿತು. ಈಗಿನ ಜೋರ್ಡಾನ್ , ಸಿರಿಯಾ,ಇರಾಕ್, ಟರ್ಕಿ ಈ ಭಾಗದಲ್ಲಿ. (ಇಲ್ಲಿಯೇ ಮೊದಲ ಬಾರಿಗೆ ಪಟ್ಟಣಗಳು, ಬರವಣಿಗೆ, ರಾಜ್ಯ, ನಾಗರೀಕತೆ ಪ್ರಾರಂಭವಾದದ್ದು) ಇಲ್ಲಿಂದ ಭೂಮಿಯ ಪಶ್ಚಿಮ ಮತ್ತು ಪೂರ್ವಾಭಿಮುಖವಾಗಿ ಈ ಬೆಳೆಗಳು , ಪ್ರಯಾಣ ಮಾಡಿದವು. ಜೇರ್ಡ್ ನ ಪ್ರಕಾರ ಈ ಭೂಭಾಗದಲ್ಲಿ ಆಹಾರ ಉತ್ಪಾದನೆ ಪ್ರಾರಂಭವಾದರೂ ಅದು ಸಮೃದ್ಧವಾಗಿ  ಬೆಳೆದದ್ದು ಯುರೋಪಿನಲ್ಲಿ. ಜೇರ್ಡ್ ನ ಪ್ರಮುಖವಾದ ವಾದವೆಂದರೆ ಮನುಷ್ಯನ ಅಭಿವೃದ್ಧಿಗೆ ಮುಖ್ಯಕಾರಣ ಆತ ಬದುಕುವ ಭೂಪ್ರದೇಶ; ಅಲ್ಲಿಯ ಪರ್ಯಾವರಣ; ಅದರಿಂದ ಆತ ಅಭಿವೃದ್ಧಿ ಹೊಂದುತ್ತಾನೆ ಎಂಬುದು.
23ಯಾವಾಗ ಮನುಷ್ಯ ಬೇಸಾಯ ಪ್ರಾರಂಭಿಸಿದನೋ ಆಗಿನಿಂದ ಆತನ ಬದುಕು ಬದಲಾಗಲು ಪ್ರಾರಂಭಿಸಿತು. ಬೇಸಾಯ ಯೋಗ್ಯ ಸಸ್ಯಗಳನ್ನು ಬೇಸಾಯಕ್ಕೆ ಒಗ್ಗಿಸಿಕೊಂಡ. ತಳ ಊರಿ ಬದುಕಲಾರಂಭಿಸಿದ . ಈ ಆಹಾರ ಉತ್ಪಾದನಾ ಸಂಸ್ಕೃತಿ ಬುಡಕಟ್ಟು ಜನಾಂಗದಲ್ಲಿ ಇಲ್ಲದ ಅನೇಕ ಖಾಯಿಲೆಗಳನ್ನು ಹುಟ್ಟು ಹಾಕಿತು. ಮನುಷ್ಯನ ಬಹುಪಾಲು ಖಾಯಿಲೆಗಳು ಸಾಕು ಪ್ರಾಣಿಜನ್ಯ ಎಂದು ಜೇರ್ಡ್ ಹೇಳುತ್ತಾನೆ. ಪ್ರಮುಖ ಖಾಯಿಲೆಗಳಾದ ಸಿಡುಬು,ಇನ್ಫುಎನ್ಜ , ಟಿಬಿ, ಮಲೇರಿಯ,ಪ್ಲೇಗ್, ದಡಾರ, ಕಾಲರಾ ಈ ಎಲ್ಲಾ ಖಾಯಿಲೆಗಳು ಮನುಷ್ಯನ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪ್ರಾತ್ರವನ್ನೇ ವಹಿಸಿವೆ. ಎರಡನೇ ವಿಶ್ವ ಸಮರದ ತನಕ ಜನರು ಯುದ್ಧಗಳಲ್ಲಿ ಸತ್ತದ್ದಕ್ಕಿಂತ ಮಾರ್ಕ್ ರೋಗಗಳಿಗೆ ತುತ್ತಾದವರ ಸಂಖ್ಯೆ ಜಾಸ್ತಿ. ಹಿಂದಿನ ಅನೇಕ ಯುದ್ದಗಳನ್ನು ಗೆದ್ದವರು ಸೈನಿಕರಲ್ಲ. ಸೈನ್ಕರು ಹೊತ್ತು ತಂದ ಖಾಯಿಲೆಯ. ಯುರೋಪಿಯನ್ನರು ಮೊದಲು ಅಮೆರಿಕಾವನ್ನು ಗೆದ್ದಾಗ ಸ್ತಳೀಯ ಅಮೇರಿಕನ್ ಬುಡಕಟ್ಟು ಜನಾಂಗದವರು ಸತ್ತಿದ್ದು ಈ ಫಿರಂಗಿಯವರ ಖಾಯಿಲೆಯಿಂದ. ಆಫ್ರಿಕಾ ಮತ್ತು ಏಷ್ಯಾದಲ್ಲೂ ಇದೇ ರೀತಿಯಾಯಿತು. ತಲೆತಲಾಂತರದಿಂದ ಬಂದ ಖಾಯಿಲೆಯನ್ನು ತಡೆಯುವ ದೇಹಶಕ್ತಿ ಇಲ್ಲದ ಇತರರಿಗೆ ಇವರು ಸುಲಭವಾಗಿ ಬಳುವಳಿಕೊಟ್ಟರು. ಅಲಾಸ್ಕಾದ ಒಂದು ಇಡೀ ಬುಡಕಟ್ಟು ಜನಾಂಗ ಇದರಿಂದ ನಿರ್ನಾಮವಾಯಿತಂತೆ.
ಬೇಸಾಯ ಸಂಸ್ಕೃತಿ ಜನಸಂಖ್ಯೆ ವೃದ್ಧಿಯಲ್ಲಿ ಪಾತ್ರವಹಿಸಿತು. ಪಟ್ಟಣಗಳು ಹುಟ್ಟಿಕೊಂಡವು . ಪಟ್ಟಣಗಳಲ್ಲಿ ಒಟ್ಟೊಟ್ಟಿಗೆ ವಾಸಮಾಡುವ ಮನುಷ್ಯ ತಾನೇ ಈ ಖಾಯಿಲೆಗಳನ್ನು ಹರಡುವ ಮಾಧ್ಯಮವಾದ. ರೋಮನ್ನರ ವ್ಯಾಪಾರ ಮಾರ್ಗದಲೆಲ್ಲ ಈ ಖಾಯಿಲೆಗಳು ಹಬ್ಬಿದವು. ಕ್ರಿ.ಶ.೧೬೫ ರಲ್ಲಿ ಮಿಲಿಯಾಂತರ ರೋಮನ್ ಪ್ರಜೆಗಳು ಸಿಡುನಿಂದ ಸತ್ತರು. ಇದೆಲ್ಲ ಆದದ್ದು ಯೂರೋಪಿನ ಕೊಡುಗೆ ಎಂದು ಜೇರ್ಡ್ ನ ಸಂಶೋಧನೆ ತಿಳಿಸುತ್ತದೆ.
ಬೇಸಾಯ ಸಂಸ್ಕೃತಿಯ ಮತ್ತೊಂದು ಕೊಡುಗೆಯೆಂದರೆ ಬರಹ ಕಂಡುಹಿಡಿದಿದ್ದು. ಬರಹ ಚಾರಿತ್ರಿಕ ಕಾಲದ ಸಮಾಜದಲ್ಲಿ ಶಕ್ತಿಯುತವಾದ ಆಯುಧವಾಗಿ ಉಪಯೋಗಿಸಿಕೊಳ್ಳಲ್ಪಟ್ಟಿತು. ಶಾಸ್ತ್ರಗಳ ಜೊತೆ ಖಾಯಿಲೆ ತರುವ ಸೂಕ್ಷ್ಮಾಣು ಜೀವಿಗಳ ಜೊತೆಗೆ ಬರಹವೂ ತನ್ನ ಕೊಡುಗೆಯನ್ನು ಕೊಟ್ಟಿದೆ. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಕಂಡು ಹಿಡಿದ ಬರಹ ಮಾಧ್ಯಮ ಇತ್ತೀಚಿನವರೆಗೂ ಚಕ್ರವರ್ತಿಗಳು ಮತ್ತು ವ್ಯಾಪಾರಿಗಳು ತಮ್ಮ ಜ್ಞಾನಕ್ಕೆ ಬೇಕಾದಾದ್ದನ್ನೆಲ್ಲ ಬರಹದಲ್ಲಿ ಮೂಡಿಸುತ್ತಿದ್ದರು. ಇದು ಕೆಲವೇ ವರ್ಗದ ಕೆಲವೇ ಜನರಲ್ಲಿ ಕೇಂದ್ರಿಕೃತವಾಗಿತ್ತು. ಬರಹ ಮಾಧ್ಯಮ ಇದ್ದದ್ದೇ ಗುಲಾಮರನ್ನು ಸೃಷ್ಟಿಸುವುದಕ್ಕಾಗಿ ಎಂಬ ಲೆವಿಸ್ತ್ರಾಸ್ ನ ವಾದವನ್ನು ಜೇರ್ಡ್ ಸಮರ್ಥಿಸುತ್ತಾನೆ.ಇತ್ತೀಚಿನವರೆಗೂ ಬರವಣಿಗೆ ಬುಡಕಟ್ಟು ಜನಾಂಗಕ್ಕೆ ಬೇಕಾಗಿರಲಿಲ್ಲ. ಏಕೆಂದರೆ ಅಲ್ಲಿ ಕೇಂದ್ರಿಕೃತ ಆಡಳಿತವಿರಲಿಲ್ಲ. ಆಯಾ ದಿನದ ಬದುಕು ಅಂದೇ ಚುಕ್ತವಾಗುತ್ತಿತ್ತು . ಆದರೆ ಬೇಸಾಯ ಸಂಸ್ಕೃತಿ ಸ್ತರೀಕೃತ ಸಮಾಜವನ್ನು ಸೃಷ್ಟಿಸಿತು . ವರ್ಷಪೂರ್ತ ದುಡಿಯ ಬೇಕಾಗಿರಲಿಲ್ಲ. ಆಹಾರ ಶೇಖರಣೆ ಬಿಡುವನ್ನು ಕೊಟ್ಟಿತು. ಅಲ್ಲದೆ ಸಂಕೀರ್ಣ ರಾಜಕೀಯ ಕೇಂದ್ರಗಳನ್ನು ಸೃಷ್ಟಿಸಿತು . ತಮ್ಮ ತಮ್ಮ ಭೂಮಿಯನ್ನು ತಾವು ಕಾಪಾಡಿಕೊಳ್ಳಲು ಯುಧ, ಯುದ್ಧಕ್ಕೆ ಆಯುಧಗಳು ಇತ್ಯಾದಿ ತಾಂತ್ರಿಕತೆ ಈ ಸ್ತರೀಕೃತ ಸಮಾಜದ ಮೂಲ ವೃತ್ತಿಗಳಾದವು. ಇವುಗಳ ಲೆಕ್ಕವನ್ನಿಡಲು ಬರಹ ಬೇಕಾಯಿತು.
ಈ ರೀತಿಯ ಆಯುಧಗಳೆಲ್ಲ ಯುರೋಪಿನಲ್ಲೇ ಏಕೆ ಬಂತು ? ಯುರೋಪ್ ಏಕೆ ಪ್ರಪಂಚದ ಇತರ ದೇಶಗಳನ್ನು ಗೆಲ್ಲಲು ಹೊರಟಿತು? ತಾಂತ್ರಿಕತೆ ಏಕೆ ಇಲ್ಲಿ ಅಭಿವೃದ್ಧಿ ಹೊಂದಿತು? ಆಫ್ರಿಕಾ, ಏಷ್ಯಾ ಖಂಡಗಳೇಕೆ ಯೂರೋಪನ್ನು ಗೆಲ್ಲಲಿಲ್ಲ? ಇವಕ್ಕೆಲ್ಲ ಆಯಾ ದೇಶಗಳ ರಾಜಕೀಯ ನಿಲುವುಗಳೇ  ಕಾರಣ ಎಂಬುದು ಜೇರ್ಡ್ ನ ವಾದ. ಯೂರೋಪಿಗೆ ಸೆಡ್ಡು ಹೊಡೆಯಬಹುದಾಗಿದ್ದ ರಾಷ್ಟ್ರ ಚರಿತ್ರೆಯಲ್ಲಿ ಚೀನಾ, ೧೪ನೆ ಶತಮಾನದಲ್ಲೇ ಸಮುದ್ರಯಾನದಲ್ಲಿ , ಸಿಡಿಮದ್ದಿನ ತಯಾರಿಕೆಯಲ್ಲಿ , ಯುದ್ಧ ಕಲೆಯಲ್ಲಿ ಯುರೋಪಿಗಿಂತ ಎಷ್ಟೋ ಶತಮಾನಗಳ ಹಿಂದೆಯೇ ಈ ತಾಂತ್ರಿಕತೆಯನ್ನು ಕರಗತ ಮಾಡಿಕೊಂಡಿತ್ತು. ಚೀನಾದ ಯುದ್ಧದ ಹಡಗು ಒಮ್ಮೆ ಆಫ್ರಿಕ ದೇಶವನ್ನು ತಲುಪಿತ್ತು. ಆದರೆ ಚೀನಾದ ರಾಜಕೀಯ ನಿಲುವು ಯುದ್ಧವನ್ನು ನಿಯಂತ್ರಿಸುವುದಾಗಿತ್ತು ಮತ್ತು ಬೇರೆ ಬೇರೆ ದೇಶಗಳನ್ನು ಗೆಲ್ಲುವುದು ಆಗಿನ ಚೀನಾದ ರಾಜಕೀಯ ನಿಲುವಾಗಿರಲಿಲ್ಲ. ಅವರೇನಾದರೂ ತಮ್ಮ ನಿರ್ಧಾರವನ್ನು ವಿರುದ್ದ ರೀತಿಯಲ್ಲಿ ನಿರ್ಣಯಿಸಿದ್ದಾರೆ ಪ್ರಾಯಶಃ ಪ್ರಪಂಚದ ಇತಿಹಾಸ ಬೇರೆಯೇ ತರಹದ್ದಾಗಿರುತ್ತಿತ್ತು ಎಂಬುದು ಜೇರ್ಡ್ ನ ವಾದ.
ಅಂತೆಯೇ ಮಧ್ಯಯುಗದಲ್ಲಿ ಪ್ರಭಾವಶಾಲಿಯಾಗಿದುದ್ದು  ಅರಬ್ ದೇಶಗಳು. ಯುದ್ದ ಸಾಮಗ್ರಿಗಳ ತಾಂತ್ರಿಕತೆ ಇಲ್ಲೂ ಬೆಳೆದಿತ್ತು. ಆದರೆ ಧರ್ಮದ ಕೈ ಮೇಲಾದಾಗ ತಾಂತ್ರಿಕತೆ ಜ್ಞಾನ ಹಿಂದೆ ಬಿಟ್ಟು. ಅತ್ಯಂತ ಹೆಚ್ಚಿನ ಸಾಕ್ಷರತೆ ಇದ್ದ ಅರಬ್ ದೇಶಗಳು ಹಿಮ್ಮುಖ ಚಲನೆ ಪಡೆದವು ಎಂಬುದನ್ನು ಜೇರ್ಡ್ ವಿಶ್ಲೇಷಿಸುತ್ತಾನೆ.
ಆದ್ದರಿಂದ ಜೇರ್ಡ್ ನ ಪ್ರಾಕಾರ ಯುರೋ ಕೇಂದ್ರಿತ ರಾಜ್ಯಗಳ ರಾಜಕೀಯ ನಿಲುವು ಅಲ್ಲಿಯ ವಿಜ್ಞಾನ, ತಾಂತ್ರಿಕತೆ ಮತ್ತು ಸಮಾಜವನ್ನು ನಿಯಂತ್ರಿಸುತ್ತದೆ. ಮತ್ತೆ ಇದರ ಮೂಲ ಸ್ತಂಭ ಆಹಾರ ಉತ್ಪಾದನೆ.
ಜೇರ್ಡ್ ಪ್ರಪಂಚದ ಯಾವುದೇ ಜನಾಂಗವು ಬುದ್ದಿ ಮಾತ್ತೆಯಲ್ಲಿ ಹಿಂದೂ-ಮುಂದು ಎಂಬುದಿಲ್ಲ. ಬುದ್ದಿವಂತಿಕೆ ಎಲ್ಲಾ ಮಾನವರಲ್ಲೂ ಒಂದೇ ಸಮನಾಗಿರುತ್ತದೆ. ಇದು ವರ್ಗ, ವರ್ಣ, ಇದನ್ನು ಅವಲಂಬಿಸಿಲ್ಲ. ವೈವಿಧ್ಯ ಬದುಕು ಬುದ್ದಿವಂತಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿರುತ್ತದೆ . ಅದು ಅಮೆರಿಕಾದವರಿರಬಹುದು ಅಥವಾ ಬುಡಕಟ್ಟು ಜನಾಂಗದವರಿರಬಹುದು, ಎಲ್ಲರಲ್ಲೂ ಬುದ್ದಿಮತ್ತೆ ಅಷ್ಟೇ ತೀಕ್ಷ್ಣವಾಗಿರುತ್ತದೆ ಎಂಬುದನ್ನು ವಿವರಿಸಿ ಹೇಳುವುದು ಬಹಳ ಮುಖ್ಯವಾದ ಅಂಶ.
ಮಾನವನ ಇತಿಹಾಸದಲ್ಲಿ ಅತ್ಯಂತ ವೇಗದ ಬದಲಾವಣೆ ಕಂಡು ಬಂದದ್ದು ಕ್ರಿ.ಶ.೧೫ನೆ ಶತಮಾನದಿಂದ ಈಚೆಗೆ. ಅಲ್ಲಿಯವರೆಗೆ ಆತನ ಸಾಧನಗಳು ಮತ್ತು ಅವುಗಳ ಬದಲಾವಣೆ ನಡೆದದ್ದು. ಬಹಳ ನಿಧಾವಾಗಿ ಕಲ್ಲಿನ ಆಯುಧದಿಂದ ಆಧುನಿಕ ಅಣು ಬಾಂಬ್ ಗೆ ಬೆಳೆದು ಬಂದ ತಾಂತ್ರಿಕತೆಯ ಕಾರಿತ್ರೆ ಇವನ್ನು ಸ್ಪಷ್ಟಪಡಿಸುತ್ತದೆ. ಆಫ್ರಿಕ, ಆಸ್ಟ್ರೇಲಿಯಾ ಖಂಡಗಳಲ್ಲಿ ಖನಿಜಗಳಿಗೆ ಕೊರತೆ ಇಲ್ಲದಿದ್ದರೂ ಸುಮಾರು ಹದಿನೆಂಟನೆಯ ಶತಮಾನದವರೆಗೆ ಅದರ ಬಳಕೆ ನಲವತ್ತಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿಗೆ ಗೊತ್ತೇ ಇರಲಿಲ್ಲ. ಅದೆಲ್ಲ ಬಿಳಿಯರ ಪಾಲಾಯಿತು, ನಂತರದಲ್ಲಿ.
ಜೇರ್ಡ್ ಡೈಮಂಡ್ ನ ವಾದವೆಂದರೆ ಮನುಷ್ಯನ ಅಸಮಾನತೆಗೆ ಭೂಗುಣ, ಆಹಾರ ಉತ್ಪಾದನಾ , ಹವಾಮಾನ ಮೂಲ ಸೂತ್ರ. ಇದರ ಫಲಿತಾಂಶವೇ ಬಂದೂಕುಗಳು, ಖಾಯಿಲೆಯ ಸೂಕ್ಷ್ಮಾಣು ಜೀವಿಗಳೂ ಮತ್ತು ಉಕ್ಕು. ಈ ಮೂರು ಯೂರೋಪಿಯನ್ನರ ಪ್ರಮುಖ ಅಸ್ತ್ರಗಳಾದವು.
ಈ ರೀತಿಯ ನಿಲುವಿಗೆ ಆತ ಬರಲು ಪ್ರಮುಖ ಕಾರಣ ಪಾಪುವಾ ನೂಗಿನಿಯಾದ ಬುಡಕಟ್ಟು ಜನಾಂಗದ ಯಾಲಿ. ಈ ಪುಸ್ತಕ ರಚನೆಗೆ ಜೇರ್ಡ್ ಮೂವತ್ತು24 ಮೂರು ವರ್ಷಗಳನ್ನು ಮುಡುಪಾಗಿಡಬೇಕಾಯಿತು. ಅಲ್ಲದೆ ಇಡೀ ಪ್ರಪಂಚವನ್ನು ಸುತ್ತಿ ವಿವಿಧ ಜನಾಂಗಗಳ ಅಧ್ಯಯನವನ್ನು ವಿವಿಧಶಾಸ್ತ್ರಗಳ ಅಂತರಶಾಸ್ತ್ರೀಯ ಜ್ಞಾನದಿಂದ ಪುರಾವೆ ಸಮೇತ ಮುಂದಿಟ್ಟ. ಈ ಕೃತಿಗೆ ಅನೇಕ ಬಹುಮಾನಗಳನ್ನು ಪಡೆದ ಜೇರ್ಡ್ ಡೈಮಂಡ್ ಈಗ ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೂಗೊಳಶಾಸ್ತ್ರದ ಪ್ರಾಧ್ಯಾಪಕನಾಗಿದ್ದಾನೆ. ಈ ಕೃತಿಗೆ ಬಂದ ಪ್ರುಮುಖ ಬಹುಮಾನವೆಂದರೆ ಪ್ರತಿಷ್ಟಿತವಾದ ಪುಲ್ತ್ಜರ್ ಅವಾರ್ಡ್. ಈತನ ಇನ್ನೊಂದು ಪ್ರಮುಖ ಕೃತಿ ಎಂದರೆ ದಿ ಥರ್ಡ್ ಚಿಂಪಾಂಜಿ(೨೦೦೪). ಇದಕ್ಕೆ ಮೆಕಾರ್ಥರ್ ಬಹುಮಾನ ಬಂದಿದೆ. ಈ  ಕೃತಿಗಳನ್ನು ಈತ ಅತ್ಯಂತ ಕಳಕಳಿಯಿಂದ ರೇಸಿಸ್ಟ್ ಚರಿತ್ರೆಯನ್ನು ತಿರಸ್ಕರಿಸಿ ಸಾಮಾನ್ಯ ಮನುಷ್ಯನ ಚರಿತ್ರೆಯನ್ನೂ ಕೇಂದ್ರ ಮಾಡಿಕೊಂಡು ರಚಿಸಿದ್ದಾನೆ . ಚರಿತ್ರೆಗ್ ಒಂದು ವೈಜ್ಞಾನಿಕ ತಿರುವನ್ನು ನೀಡಿದ್ದಾನೆ.

ಕಾಮೆಂಟ್‌ಗಳಿಲ್ಲ: