ಮಂಗಳವಾರ, ಜನವರಿ 10, 2017

ಚದುರಂಗರ ಉಯ್ಯಾಲೆ- ತಂತ್ರ ನಿರ್ವಹಣೆ


ಪ್ರೊ.ಕಿಕ್ಕೇರಿ ನಾರಾಯಣ
profile

ಸೌಜನ್ಯ:http://kikkerinarayana.in/



ಪುಸ್ತಕ :ಚದುರಂಗ- ವ್ಯಕ್ತಿ ,ಅಭಿವ್ಯಕ್ತಿ

ಯಾವುದೇ ಒಂದು ಕೃತಿ ಮೈದಾಳುವುದು ಓದುಗ ಕೃತಿಯೊಡನೆ ಸಂವಾದ ನಡೆಸಲು ಪಾರಂಭಿಸಿದಾಗ ಮಾತ್ರ. ಕೃತಿಕಾರ ತನ್ನ ಕೃತಿ ರಚನೆಯೆ ಸಂದರ್ಭದಲ್ಲಿ ತನ್ನ ಸಮಾಜ ಇದುವರೆವಿಗೂ ಕಂಡಿರದ ಹೊಸ ಅನುಭವವನ್ನು ಭಾಷೆಯು ಮೂಲಕ ಹಿಡಿದುಕೊಡಲು ಯತ್ನಿಸುತ್ತಾ ನೆ. ಇದುವರೆವಿಗೂ ಭಾಷೆಯು ಮೂಲಕ ಕಂಡರಿಯದ ಅನುಭವವನ್ನೂ ತನ್ನ ಸಮಾಜ ಸಂಸ್ಕೃತಿಗೆ ಅಂದರೆ ‘ಸಂಭವನೀಯ ಓದುಗನಿಗೆ ‘ ಕೊಡಲು ಕೃತಿಕಾರ ಪ್ರಯತ್ನಿಸುತ್ತಾನೆ. ಕೃತಿಕಾರ ಕಂಡ ಹೊಸಕಾಣ್ಕೆ , ಕೃತಿಯ ಮೂಲಕವಾದುದರಿಂದ -ಅಂದರೆ, ಭಾಷೆಯ ಮೂಲಕವಾದುದರಿಂದ – ಈ ಕಾಣ್ಕೆಯನ್ನು ಭಾಷೆಯಲ್ಲಿಯೂ ತುಂಬಿಕೊಡಲು ಯತ್ನಿಸುತ್ತಾನೆ. ಆದ್ದರಿಂದ ಭಾಷೆಯು ಯಾವಾಗಲು ಬರಹಗಾರನಿಗೆ ಸವಾಲಾಗಿಯೇ ಉಳಿಯುತ್ತದೆ. ಒಂದು ಹೊಸ ಕೃತಿಯನ್ನು ರಚಿಸುವಾಗ ಲೇಖಕ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾಪಿತವಾಗಿರುವ ಕೆಲವು ನಿಯಮಗಳನ್ನು ಮುರಿಯುತ್ತಾನೆ. ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ವಿಷಯ ವಸ್ತುಗಳನ್ನು ಕೂಡಿಸಾಡುತ್ತಾನೆ. ಹೊಸ ರೀತಿಯಲ್ಲಿ ಜೋಡಿಸಲು ಪ್ರಯತ್ನಿಸುತ್ತಾನೆ. ಕೃತಿಗೆ ಹೊಸ ಬಂಧ ಕೊಡುತ್ತಾನೆ. ಹೀಗೆ ಹೊಸ ಕೃತಿ ಸೃಷ್ಟಿಯಾಗುವುದೆಂದರೆ ಹೊಸ ದಿಗಂತದ ನಿರಂತರ ಹುಡುಕಾಟವಾಗುತ್ತದೆ.

ಅಂತೆಯೇ ಒಂದು ಕೃತಿಯೊಡನೆ ಓದುಗ ಸಂವಾದ ನಡೆಸುವಾಗ ಆ ಕೃತಿ ತಂದುಕೊಡುವ ಹೊಸ ಅನುಭವ, ಹೊಸ ಲೋಕ ‘ದೃಷ್ಟಿ’ಯನ್ನು ಪಡೆದುಕೊಳ್ಳುವುದೇ ಆಗಿರುತ್ತದೆ. ಕೃತಿಕಾರ ಒಂದು ಕಡೆಯಿಂದ ಕೃತಿಯನ್ನು ಕಟ್ಟಿಕೊಂಡು (encode) ಬಂದರೆ ಓದುಗ ಕೃತಿಯನ್ನು ಓದುವುದರ ಮೂಲಕ ಬಿಚ್ಚಿಕೊಂಡು (decode) ಹೋಗಲು ಪ್ರಯತ್ನಿಸುತ್ತಾನೆ. ಕೃತಿಕಾರ ಕೃತಿಯನ್ನು ಕಟ್ಟಿಕೊಂಡು ಹೋಗುವಾಗ ‘ವ್ಯಕ್ತಿನಿಷ್ಟ’ವಾಗಿದ್ದು ಓದುಗ ಅದನ್ನು ಬಿಚ್ಚಿಕೊಂಡು ಹೋಗುವುದರ ಮೂಲಕ ಆ ಕೃತಿ ವಸ್ತುನಿಷ್ಟವಾಗುತ್ತಾ ಬರುತ್ತದೆ, ಸಾರ್ವತ್ರಿಕವಾಗುತ್ತಿರುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಇಡೀ ಕೃತಿಯೇ ಆಳದಲ್ಲಿ ಒಂದು ಹೊಸ ಅನುಭವ ವನ್ನು ಹೇಳುವ ತಂತ್ರವಾಗಿ ಮಾರ್ಪಡುತ್ತದೆ. ಉಳಿದೆಲ್ಲ ತಂತ್ರಗಳೂ ಮೇಲ್ಮೈ ಲಕ್ಷಣಗಳಾಗಿ ಕೆಲಸ ಮಾಡುತ್ತಿರುತ್ತವೆ.

ಒಂದು ಕೃತಿಯ ಸ್ಥಾನ  ಕೃತಿಯನ್ನು ಓದು ಸಮಾಜ, ಸಂಸ್ಕೃತಿ ಅದಕ್ಕೆ  ಇರುವ ಸಾಹಿತ್ಯಕ ಚರಿತ್ರೆಯ ಹಿನ್ನೆಲೆ, ಕೃತಿ ಮೂಡಿಸಿದ ಕಾಣ್ಕೆ ಇವುಗಳ ಮೂಲಕ ನಿರ್ಧಾರಿತವಾಗುತ್ತದೆ.

ಮೇಲಿನ ಕೆಲವು ಮಾತುಗಳನ್ನು ಗಮನದಲ್ಲಿಟ್ಟುಕೊಂಡು ‘ಉಯ್ಯಾಲೆ ‘ಯ ತಂತ್ರ ನಿರ್ವಹಣೆಯನ್ನು ಈ ಲೇಖನದಲ್ಲಿ ಗಮನಿಸಲಾಗಿದೆ. ಈ ವಿಶ್ಲೇಷಣೆಯ ಉದ್ದೇಶ ಕೇವಲ ಕೃತಿಯಲ್ಲಿ ಇರುವ ರಚನೆಯನ್ನು ಮಾತ್ರ ಬಿಡಿಸಿ ತೋರಿಸುವುದಿಲ್ಲ. ಏಕೆಂದರೆ ಪ್ರತಿಯೊಂದು ‘ವಸ್ತು’ವಿನಲ್ಲೂ ರಚನೆ ಒಂದಿಲ್ಲೊಂದು ರೀತಿಯಲ್ಲಿ ಇದ್ದೇ ಇರುತ್ತದೆ. ರಚನೆಯನ್ನು ತೋರಿಸಿಕೊಡುವುದರ ಜೊತೆಗೇ ಈ ರಚನೆ ಕಲಾಕೃತಿಯಲ್ಲಿ ಮೂಡಿದಾಗ ಅದು ಉಂಟುಮಾಡುವ ಕರ್ಷಣೆ ಮತ್ತು ಈ ಕರ್ಷಣೆಯಿಂದ ಕೃತಿ ಚಾಲನೆ ಪಡೆಯುವ ರೀತಿ ಮುಖ್ಯ ಎಂದು ಪರಿಗಣಿಸಲಾಗಿದೆ.

ಉಯಾಲೆ ಕಾದಂಬರಿಯ ಬಂಧ (structure ) ವಸ್ತು , ಪಾತ್ರ, ಚಿತ್ರಣ ಕಾದಂಬರಿಯಲ್ಲಿ ಬಳಸಿಕೊಂಡಿರುವ ಕಾಲ ಉಯ್ಯಾಲೆಯ ಸಂಕೇತ ಇವೆಲ್ಲವೂ ಕಾದಂಬರಿಯ ಕೇಂದ್ರ ಪ್ರಜ್ಞೆಯ ಕಡೆಗೆ ಯಾವ ರೀತಿಯಲ್ಲಿ ದುಡಿಯುತ್ತವೆ ಎಂಬದನ್ನು ಗಮನದಲ್ಲಿಟ್ಟುಕೊಂಡು ಕಾದಂಬರಿಯ ತಂತ್ರ ನಿರ್ವಹಣೆಯ ಬಗ್ಗೆ ವಿಶ್ಲೇ ಷಣೆ ಮಾಡುವುದು ಈ ಲೇಖನದ ಉದ್ದೇಶ. ಹೀಗೆ ಮಾಡುವುದರ ಮೂಲಕ ಈ ಕಾದಂಬರಿ ಪಡೆಯುವ ಯಶಸ್ಸನ್ನು ಚರ್ಚೆಗೆ ಒಳಪಡಿಸುವುದು ಈ ಲೇಖನದ ಹಂಬಲ.

ಉಯ್ಯಾಲೆ ಕಾದಂಬರಿಯ ಪ್ರಮುಖ ಆಶಯವನ್ನು ಈ ವಾಕ್ಯಗಳು ಪ್ರತಿನಿಧಿಸುತ್ತವೆ:

‘ರಾಧೆಯ ಜೀವನವೇ ಒಂದು ಉಯ್ಯಾಲೆ……. ಇಡೀ ಸ್ತ್ರೀವರ್ಗವೇ ಒಂದು ಉಯ್ಯಾಲೆ…… ರಾಧೆಯೇ ಉಯಾಲೆ…….. ಅವಳ ಮನಸ್ಸು – ಅತ್ತ – ಇತ್ತ-ಎರಡು ದಂಡೆ : ಉಯ್ಯಾಲೆಯ ತೂಗಾಟದ ಎರಡು ದಂಡೆ. ಒಂದು ದಂಡೆಯಲ್ಲಿ ವೈವಾಹಿಕ ಜೀವನದ ಮಡಿವಂತಿಕೆ, ಗೌರವ, ಸನ್ಮಾನಿತ ಪ್ರತಿಷ್ಮೆ ; ಇನ್ನೊಂದರಲ್ಲಿ ವಿವಾಹದ ಹೊರಗೆ ಕಣ್ಣು ಮಿಟುಕಿಸುವ ಆಕರ್ಷಣೆ-ಪ್ರೇಮ. ಒಂದರಲ್ಲಿ ವೈವಾಹಿಕ ಪ್ರೇಮದ ಆದರ್ಶ ಜೋಡಿ, ರಾಮ -ಸೀತೆ. ಇನ್ನೊಂದರಲ್ಲಿ ಅವಿವಾಹಿತ ಅನುರಾಗದ ಅಮರ ಸಂಕೇತ :ರಾಧಾ-ಕೃಷ್ಣ . ಒಂದು ಪರಂಪರೆಯೊಡನೆ ಹೊಂದಾಣಿಕೆ , ಇನ್ನೊಂದು ಪರಂಪರೆಯೊಡನೆ ಎದ್ದ ದಂಗೆ “(ಪುಟ 287)*

ಹೀಗೆ ಕಾದಂಬರಿ ಎರಡು ವೈರುಧ್ಯಗಳ ಅತಿಯ ನಡುವೆ ತೂಗಾಡುವ ನಾಯಕಿಯ ತೊಳಲಾಟವನ್ನು ಚಿತ್ರಿಸುತ್ತದೆ. ಈ ತೊಳಲಾಟದ ಆಶಯವನ್ನು ಹೊಂದಿರುವ ಕಾದಂಬರಿಯ ತಂತ್ರ ನಿರ್ವಹಣೆ ಕಾದಂಬರಿಯ ಉದ್ದಕ್ಕೂ ಹರಡಿಕೊಂಡಿದೆ. ಇದು ಕಾದಂಬರಿಯ ಮೂಲ ದ್ರವ್ಯಗಳಾದ ವಸ್ತು, ಪಾತ್ರ, ಚಿತ್ರಣ, ಕಾದಂಬರಿಯ ಕಾಲ ಮತ್ತು ‘ಉಯ್ಯಾಲೆ ‘ಯ ಸಂಕೇತ ಈ ಎಲ್ಲ ಮಟ್ಟಗಳಲ್ಲಿಯೂ ನಡೆಯುವುದನ್ನು ಗಮನಿಸಬಹುದು. ವರಿದುಧ್ಯದ ತುತ್ತ ತುಟಿಗಳಾಗಿ ಚಿತ್ರಿತವಾದ ಈ ಅಂಶಗಳು ಈ ಕಾದಂಬರಿಯ ಆಶಯದ ಬಗ್ಗೆ ದುಡಿಯುತ್ತವೆ. ಈ ವೈರುಧ್ಯ ಗಳ ನಡುವೆ ನಡೆಯುವ ತೊಳಲಾಟ ‘ ಉಯ್ಯಾಲೆ’ಯಾಗುತ್ತದೆ. ಆದ್ದರಿಂದ ಈ  ನಾಲ್ಕು ವಾಕ್ಯಗಳಂತೆ ಪರಸ್ಪರ ವೈರುಧ್ಯಗಳ ಮಾಲೆಯಾಗಿ ಕಾದಂಬರಿಯ ಉದ್ದಕ್ಕೂ ಕಂಡುಬರುತ್ತವೆ.

ವಸ್ತುವಿನಲ್ಲಿ ವೈರುಧ್ಯ : ಮದುವೆ ಇಲ್ಲದ ಪ್ರೀತಿ-ಪ್ರೀತಿ ಇಲ್ಲದ ಮದುವೆ

ಉಯ್ಯಾಲೆ ಕಾದಂಬರಿಯ ಮುಖ್ಯ ವಸ್ತು ‘ಮದುವೆಯಿಲ್ಲದ ಪ್ರೀತಿ—ಪ್ರೀತಿಯಿಲ್ಲದ ಮದುವೆ’ಯ ಬಗ್ಗೆಯಾದ್ದರಿಂದ ಇದು ಈ ಕಾದಂಬರಿಯ ಪ್ರಮುಖ ಪರಿಕಲ್ಪನೆಯಾಗುತ್ತದೆ. ಈ ಎರಡೂ ರೀತಿಯ ಪ್ರೀತಿಗಳನ್ನು ಮುಖಾಮುಖಿಯಾಗಿಸಿಕೊಂಡು ಆ ಮೂಲಕ ಒಂದು ಕಾಲ-ದೇಶ-ಸಮಾಜದ ಚೌಕಟ್ಟಿನೊಳಗೇಳುವೆ ಘರ್ಷಣೆಯನು ಉಯ್ಯಾಲೆ ಚಿತ್ರಿಸುತ್ತದೆ.

ರಾಧೆ ಕಾಲೇಜಿನಲ್ಲಿ ಕಲಿಯುವಾಗ ಟೆನ್ಸಿಸ್ ಆಟಗಾರ, ಸಹಪಾಠಿ ನಾರಾಯಣನನ್ನ ಮನಸಾರೆ ಪ್ರೀತಿಸುತ್ತಾಳೆ. ನಾರಾಯಣನೂ ಇವಳನ್ನು ಪ್ರೀತಿಸುತ್ತಾನೆ. ಆದರೆ ನಾರಾಯಣ ಆಗಲೇ ಮದುವೆಯಾಗಿರುವ ಕಾರಣಕ್ಕಾಗಿ ರಾಧೆ ಆವವನ್ನು ಮದುವೆಯಾಗಲು ಸಾಧ್ಯವಾಗುವುದಿಲ್ಲ.

ರಾಧೆ ಸವಾಜದ ಕಟ್ಟುಕಟ್ಟಳೆ ಗನುಸಾರವಾಗಿ, ಕೆಲವು ಒತ್ತಡಗಳಿಗಾಗಿ ಆಗಲೇ ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡ ಶೇಷಗಿರಿರಾಯನನ್ನು ಮದುವೆಯಾಗುತ್ತಾಳೆ. ಆದರೆ ಶೇಷಗಿರಿರಾಯನಿಂದ ರಾಧೆಗೆ ಯಾವ ಪ್ರೀತಿಯೂ ದಕ್ಕುವುದಿಲ್ಲ.

ರಾಧೆ ಮದುವೆಯಾದ ನಂತರ ಶೇಷಗಿರಿರಾಯನ ಸ್ನೇಹಿತ ಮತ್ತು ಒಂದು ಕಾಲಕ್ಕೆ ಸಹಪಾಠಿಯಾಗಿದ್ದ ಕೃಷ್ಟೇಗೌಡ ತಾನು ನಿಲ್ಲಿಸಿದ ಓದನ್ನು ಮುಂದುವರೆಸಲು ಇವರ ಮನೆಯಲ್ಲೇ ನಿಲ್ಲುತ್ತಾನೆ. ಈ ಮದುವೆಯಾಗಿರದ ಕೃಷ್ಟೇಗೌಡ ರಾಧೆಯ ಮನಸ್ಸನ್ನು ತನ್ನ ನಡವಳಿಕೆಯಿಂದ, ರೂಪಿನಿಂದ ಆಕರ್ಷಿಸುತ್ತಾನೆ. ಈ ಸಂದರ್ಭದಲ್ಲಿ ರಾಧೆ ಮತ್ತೊಮ್ಮೆ ‘ಮದುವೆಯಿಲ್ಲದ ಪ್ರೀತಿ’ಗೆ ಒಳಗಾಗುತ್ತಾಳೆ. ಹೀಗೆ ‘ಮಾಡುವೆ ಇಲ್ಲದ ಪ್ರೀತಿ- ಪ್ರೀತಿ ಇಲ್ಲದ ಮದುವೆ’ಗಳ ವೈರುಧ್ಯದ ನಡುವೆ ನಡೆಯುವ ಮಾನಸಿಕ ಸಂಘರ್ಷ ಅಥವಾ ಹೊಯ್ದಾಟ ಕಥೆಯ ಮುಖ್ಯ ವಸ್ತುವಾಗುತ್ತದೆ.

ಸಾತಂತ್ರ -ಸ್ವೇಚಾಚಾರ

ರಾಧೆ ನಾರಾಯಣನೊಡನೆ ಪ್ರೀತಿಯನ್ನು ಬೆಳೆಸಿಕೊಂಡಾಗ ಕಾಲೇಜಿನ ಹುಡುಗ ಹುಡುಗಿಯರಿಗೆ, ಅವಳ ಭಾವನಿಗೆ, ಕೊನೆಗೆ ತಾಯಿಗೂ ಅವಳ ಪ್ರೀತಿ ಸ್ವೇಚ್ಛ್ರಚಾರವಾಗಿ ಕಂಡುಬರುತ್ತದೆ. ಅಂತೆಯೇ ಕೃಷ್ಣೇಗೌಡನ ತಾಯಿ ಮತ್ತು ತಂಗಿಯರಿಗೆ ಸ್ವೇಚ್ಛಾಚಾರದಂತೆ ಕಂಡುಬರುತ್ತದೆ .

ರಾಧೆಯ ಮದುವೆಗೆ ಮುನ್ನ ಬರುವ ಪಾತ್ರವಾದ ಆಂಗ್ಲೋ-ಇಂಡಿಯನ್ ಯುವತಿ ಸ್ವೇಚ್ಚಾಚಾರಕ್ಕೆ ನಿದರ್ಶನವಾದರೆ, ಅವಳ ಮದುವೆಯ ನಂತರ ಬರುವ ಕನಕನ ಪಾತ್ರ ಸ್ವೇಚಾಚಾರದ ಪ್ರೀತಿಗೆ ಉದಾಹರಣೆಯಾಗಿ ನಿಲ್ಲುತ್ತದೆ. “ಕನಕ ತನ್ನ ಮಾತೆಂದು ವಿವೇಕದ ನುಡಿಯನ್ನು ಮರೆತವಳು, ಹೈಸ್ಕೂಲಿನ ಗಡಿ ದಾಟುವಷ್ಟರಲ್ಲಿ ಕನಕ ಸಾಕಷ್ಟ ಹೆಸರು ಸಂಪಾದನೆ ಮಾಡಿದ್ದಳು. ಇಂಟರ್ ವಿಡಿಯೆಟ್ ಕಾಲೇಜಿನಲ್ಲಂತೂ ಅವಳು ಯಾರಿಗೋ ಗರ್ಭಧಾರಣೆ ಮಾಡಿ ಅದನ್ನು ನಿವಾರಿಸಿಕೊಂಡಿದ್ದಳು”.

ಆದರೆ ರಾಧೆಯ ಪ್ರೀತಿ ಅಂತಹುದಲ್ಲ. “ಪರಸ್ತ್ರೀಯರನ್ನು ಇನ್ನಿಬ್ಬರು ಮಾನಿನಿಯರೆದುರು ಸರಸವಾಡುತ್ತ ಮುಟುವುದೆಂದರೇನು ?… .ಹೀಗೆ ಮಾನ ಬಿಟ್ಟು ನಡೆಯಬೇಕೆ ?” (ಪುಟ 4.8) ಈ ರೀತಿಯ ಮನೋಭಾವಕ್ಕೆ ರಾಧೆ ಬೆಚ್ಚುತಾಳೆ? ಉಸಿರು ಕಟ್ಟಿದಂತೆ ಚಡಪಡಿಸುತಾಳೆ.

ರಾಧೆಗೆ ಪ್ರೀತಿಯ ವಿಷಯದಲ್ಲಿ ತನ್ನದೇ ಆದ ಒಂದು ಪರಿಕಲ್ಪನೆ ಇರುತ್ತದೆ. “ವಿವಾಹದಲ್ಲಿ ಮುಕ್ತಾಯವಾಗದ ಪ್ರೇಮ” ರಾಧೆಗೆ ಇಷ್ಟವಿಲ್ಲ (ಪುಟ 30), “… ಸ್ತ್ರೀಪುರುಷರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ವರಿಸುವುದರಲ್ಲಿ ಎಂತಹ ಸುಖವಿದೆ – ಪರಸ್ಪರರಲ್ಲಿ ಅನ್ಯೋನ್ಯತೆ ಬೆಳೆದು ದಾಂಪತ್ಯವನ್ನೂ ಸಾಮರಸ್ಯ ಸಾಧಿಸುತ್ತದೆ. ಬಾಳು ಹಸನಾಗುತ್ತದೆ. ಮದುವೆ ಎಂಬ ಸಂಬಂಧ ಸಾರ್ಥಕ್ಯ ಪಡೆಯುತ್ತದೆ.” (ಪುಟ 38) ಎಂಬುದು ರಾಧೆಯು ಪ್ರೀತಿಯು ಪರಿಕಲ್ಪನೆಯಾಗುತ್ತದೆ. ಹೀಗೆ ಸ್ವತಂತ್ರವಾದ ಪ್ರೀತಿಯ ಕಲ್ಪನೆಯನ್ನು ಕಾರ್ಯಗತಗೊಳಿಸುವದಕ್ಕೆ ನಡೆಸುವ ಹೋರಾಟ, ತೊಳಲಾಟ, ರಾಧೆಯ ಪ್ರೀತಿಯ ಬಗ್ಗೆ ಬೆಳೆಸಿಕೊಂಡಿರುವ ಅದನ್ನು ಕಾಪಾಡಿಕೊಳ್ಳಲು ಪಡುವ ಪಾಡು ಉಯ್ಯಾಲೆಯಾಗಿ ತೂಗುತ್ತಿರುತ್ತದೆ.

ರೂಪ-ಕುರೂಪ : ಶಿಖರ -ಪ್ರಪಾತ

ರಾಧೆ ಒಬ್ಬ ಸುಂದರ ಯುವತಿಯಾಗಿದ್ದೂ, ತನ್ನ ಕಲ್ಪನೆಯ ಪ್ರೀತಿಯನ್ನು ಪಡೆಯುವುದಕ್ಕೆ ಒದ್ದಾಡುವುದನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಇದಕ್ಕೆ ಉದಾಹರಣೆಯಾಗಿ ಕಾದಂಬರಿ ತೆರೆದುಕೊಳ್ಳುವುದೇ ಈ ಚಿತ್ರವನ್ನು ಮನಗಾಣಿಸುವ ವಾಕ್ಯಗಳಲ್ಲಿ :

“ಮೇಲೆ ಮೇಲೆ ಎತ್ತರ ಎತ್ತರ ಏರಿದಂತೆ ನಮ್ಮ ಪತನವೂ ಅಷ್ಟೇ ದೂರ ಮತ್ತು ಮಹತ್ತರವಾಗುತ್ತದೆ. ಕೇವಲ ನೆಲದ ಮೇಲೆ ನಿಂತವರು ಅಥವಾ ಒಂದೆರಡು ಮೆಟ್ಟಿಲು ಹತ್ತಿದವರು ಕೆಳಗುರುಳಿದರೆ ಅವರಿಗೆ ಬೀಳುವ ಪೆಟ್ಟು ಅಂತಹ ಮಹತ್ವದ್ದೇನೂ ಅಲ್ಲ. ಆದರೆ ಎತ್ತರದಿಂದ ಬಿದ್ದವರು ಮಾತ್ರ ಮೇಲೇಳುವುದೇ ಕಷ್ಟ…ಸುಂದರಿಯರಿಗೆ ವಿಶೇಷ ಆಕರ್ಷಣೆಯನ್ನಿತ್ತು ಅವರನ್ನು ಜೀವನದ ಏಣಿಯ ಮೇಲಿರಿಸಿದ್ದಾನೆ ದೇವರು. ಆ ಎತ್ತರದಿಂದ ಉರುಳಿಬಿದ್ದರೆ ಹಿಂದಿರುಗಲಾಗದ ಸಂಕಟದ ಪ್ರಪಾತಕ್ಕೆ ಅವರು ಹೋಗಬೇಕು. ಆದರೆ ಕುರೂಪಿಗಳು ಮಾತ್ರ ಈ ಪ್ರಮಾಣದಲ್ಲಿ ಅಪಘಾತಕ್ಕೀಡಾಗುವುದು ಅಪರೂಪ.” (ಪುಟ 1)

ಆಂಗ್ಲೋ ಇಂಡಿಯನ್ ಹುಡುಗಿಯಾಗಲೀ, ಸ್ವಲ್ಪ ಬಣ ಕಪ್ಪಾದ ಸ್ಥೂಲ ಕಾಯದ ಸುಂದರಾ೦ಬಾಳ್ ಆಗಲೀ, ಕಾಲೇಜಿನ ಚೆಲ್ಲು ಹುಡುಗಿ ಕನಕ ಆಗಲಿ – ಪ್ರೇಮದ ಪ್ರಪಾತದಲ್ಲಿ ಬಿದ್ದರೂ ಅಂತಹ ಗಹನವಾದ ವಿಷಯವಲ್ಲ ಎಂಬುದನ್ನು ಚಿತ್ರಿಸುತಾ, ಸುಂದರಿ ರಾಧೆಯ ತೊಳಲಾಟವನ್ನು ಕಾದಂಬರಿಕಾರರು ಕೃತಿಯಲ್ಲಿ ಹೆಚ್ಚಿಸುತಾರೆ.

ಉತ್ಸಾಹ, ಸಂಭ್ರಮ-ಶೋಕ, ಸಂಕಟ

ರಾಧೆಯು ತಂದೆ ಸಂಪ್ರದಾಯಬದ್ದವಾಗಿ ಮದುವೆಗೆ ಗೊತ್ತುಮಾಡಿದ ಗಂಡಿನ ಬಗ್ಗೆ ರಾಧೆ ಉತ್ಸಾಹ ವ್ಯಕ್ತಪಡಿಸುತಾಳೆ. ಆದರೆ ಮದುವೆಮನೆಯಲ್ಲಿ ರಾಧೆಯ ತಂದೆಯ ಅನಿರೀಕ್ಷಿತ ಸಾವಿನಿಂದ ಉತಾಹ, ಸಂಭ್ರಮಗಳನ್ನು ಕಳೆದುಕೊಂಡು ಸ್ಮಶಾಣಸದೃಶವಾಗಿ ಪರಿಣಮಿಸುತ್ತದೆ.

ರಾಧೆ ನಾರಾಯಣನೊಡನೆ ಟೆನ್ಸಿಸ್ ಆಟದಲ್ಲಿ ಸಿಕ್ಕ ಸಾಹಚರ್ಯೆಯಿಂದ ಪುರುಷಾಧರದ ಸ್ಪರ್ಶದ ಸವಿಯನ್ನು ಪ್ರಥಮಬಾರಿಗೆ ಪಡೆದು ಪುನಃ ಉತ್ಸಾಹ ಸಂಭ್ರಮಗಳನ್ನು ಪಡೆಯುತ್ತಾಳೆ. ಅವನ ಮದುವೆಯಾಗಿದೆ ಎಂದು ತಿಳಿದ ಬಳಿಕ “ರಾಧೆಯ ಹೃದಯ ಶರಾಘಾತದಂತೆ ಗಡಗಡ ನಡುಗುತ್ತದೆ. ಅವಳ ಮನಸ್ಸಿನಲ್ಲಿ ಶಾಂತಿ ಉಳಿಯುವುದಿಲ್ಲ”.

ಶೇಷಗಿರಿರಾಯನನ್ನು ಮದುವೆಯಾದ ಮೇಲೆ ರಾಧೆಯು ಉತ್ಸಾಹ ಮತ್ತೆ ಕುಂಠಿತವಾಗುತ್ತದೆ. “ಪತಿಗಾಗಿ ಅರಳಿದ ಪುಷ್ಪ’ ಪತಿಗೇ ಬೇಡವಾಗಿ ಮುದುಡಿಕೊಂಡು ಸಂಕಟವನ್ನು ಅನುಭವಿಸುತ್ತದೆ.

ಕೃಷ್ಣೇಗೌಡನ ಸ್ನೇಹವಾದ ಮೇಲೆ ಅವಳಲ್ಲಿ ಮತ್ತೊಮ್ಮೆ ಉತ್ಸಾಹ ಸಂಭ್ರಮಗಳು ತುಂಬಿಕೊಳ್ಳುತ್ತವೆ. ಆದರೆ ಅದನ್ನು ಪಡೆಯಲು ಬರುವ ಅಡ್ಡಿ ಆತಂಕಗಳು ಶೋಕವಾಗಿ, ಸಂಕಟವಾಗಿ ಮಾರ್ಪಡುತ್ತವೆ . ಹೀಗೆ ಉತಾಹ, ಸಂಭ್ರಮ,ಶೋಕ, ಸಂಕಟಗಳ ಉಯ್ಯಾಲೆಯಲ್ಲಿ ರಾಧೆ ದೇಕುತಾಳೆ.

ಮುಗ್ದತೆ -ಅರಿವು

ಮುಗ್ದತೆ ಮತ್ತು ಅರಿವಿನಲ್ಲಿ ಬೆಳೆಯುವ ಪ್ರೇಮಗಳ ನಡುವೆ ರಾಧೆ ತೊಳಲಾಡುತ್ತಾಳೆ. ಅಪ್ಪ ಗೊತ್ತು ಮಾಡಿದ ಗಂಡನನ್ನು ಮುಗ್ದವಾಗಿಯೇ ಒಪ್ಪಿಕೊಳ್ಳುತ್ತಾಳೆ. ಸಹಪಾಠಿ ನಾರಾಯಣನನ್ನು ಮುಗ್ದವಾಗಿಯೇ ಪ್ರೀತಿಸಿರುತ್ತಾಳೆ. (“ಆತನಿಗಾಗಲೇ ವಿವಾಹವಾಗಿದೆ ಎನ್ನುವ ಮಾತು ದಿಟವಾಗಿದ್ದರೆ ತನ್ನಂತಹ ಮುಗ್ಧಳಾದ … ಕಪಟವರಿಯದ ತರಳೆಯನ್ನು ಮೋಸಗೊಳಿಸುವುದು ಮಹಾ ಅಪರಾಧ.” ಪುಟ 40).

ಶೇಷಗಿರಿರಾಯನನ್ನು ಮದುವೆಯಾದಾಗ ಅವಳ ಮುಗ್ದತೆ ಮಾಯವಾಗುತ್ತದೆ. “ತನ್ನ ಸೌಂದರ್ಯ ತನ್ನ ಪತಿಗಾಗಿ, ತನ್ನ ಪತಿಗೆಂದೇ ಅರಳಿದ ಪುಷ್ಪ. ಉಳಿದ ಗಂಡಸರು ಅದನ್ನು ಮೆಚ್ಚಿದರೆಷ್ಟು ಬಿಟ್ಟರೆಷ್ಟು ?” (ಪುಟ ೬) ಎಂಬ ಅರಿವಿರುತ್ತದೆ

ಈ ಅರಿವಿದಸ್ಸೂ, ಕೃಷ್ಟೆಗೌಡನನ್ನು ಪ್ರೀತಿಸುವಾಗ, ಅದು ಮುಗ್ದವಾಗದೆ, ತಾನೊಬ್ಬ ವಿವಾಹಿತಳು, ಮಗುವಿನ ತಾಯಿ, ಎಂಬ ತಿಳಿವಿದ್ದೂ ಪ್ರೀತಿಯ ಆಕರ್ಷಣೆಗೆ ಒಳಗಾಗುತ್ತಾಳೆ.

ಸಂಪ್ರದಾಯ-ಹೊಸ ಮೌಲ್ಯ

ರಾಧೆ ಒಂದು ಸಂಪ್ರದಾಯಸ್ಥ ಮನೆತನದಿಂದ ಬಂದ ಹುಡುಗಿ. ಅವಳು ಸಂಪ್ರದಾಯಬದ್ದವಾಗಿಯೇ ತನ್ನ ಉಳಿದ ಅಕ್ಕಂದಿರಂತೆ ಮದುವೆಯಾಗಿ ಗಂಡನ ಮನೆಯಲ್ಲಿ ಜೀವನಸಾಗಿಸಿಕೊಂಡು ಹೋಗಬೇಕೆಂಬುದೇ ಅವಳ ತಂದೆ, ತಾಯಿ ಅಕ್ಕಂದಿರು ಮತ್ತೆ ನೆಂಟರ ಆಸೆ. ಹೆಣುಮಕ್ಕಳು ಕಾಲೇಜು ವೆುಟ್ಟಿಲು ಹತ್ತುವುದೇ ಸಂಪ್ರದಾಯವನ್ನು ಮುರಿದಂತೆ. ಜನ ಏನಾದರೊಂದು ಆಡಿಬಿಡುತಾರೆ. ಇನ್ನು ಓದುವುದು ಬೇಡ ಎಂದು ರಾಧೆಯು ತಾಯಿ. ಆದರೆ ರಾಧೆ ಗಂಡಸಿನ ಸಮಕ್ಕೂ ಟೆನ್ನಿಸ್ ಆಡುತ್ತಾಳೆ,ಓದುತ್ತಾಳೆ. ಮಾಡುವೆ ಎಂಬ ಸಂಪ್ರದಾಯಬದ್ಧವಾದ ಸಂಸ್ಥೆಯ ಬಗ್ಗೆ ಸಿಡಿದೇಳಬೇಕು. ಮದುವೆ, ಗಂಡು-ಹೆಣ್ಣಿನ ಪರಸ್ಪರ ಅರಿವಿನ ಕೂಟವಾಗಬೇಕೆಂಬುದೇ ರಾಧೆಯ ಆಶಯ. ಅದಕ್ಕಾಗಿ ಮದುವೆಯಾದ ಗಂಡನನ್ನ ಬಿಡಲು ರಾಧೆಯ ಮನಸ್ಸು ನಿರ್ಧರಿಸುತ್ತದೆ. ಪ್ರೀತಿಯ ಹೊಸ ಮೌಲ್ಯದ ಬಗ್ಗೆ ಹುಡುಕಾಟದ ಪ್ರತೀಕವಾಗಿ ರಾಧೆ ತೊಳಲಾಡುತ್ತಾಳೆ.

ಬ್ರಾಹ್ಮಣ-ಶೂದ್ರ

ರಾಧೆ ಪುತು ಕೃಷ್ಟೇಗೌಡರ ಪ್ರೀತಿಯು ಸಂದರ್ಭದಲ್ಲಿ ಜಾತಿ ಅಡ್ಡ ಬರುವದಿಲ್ಲ. ಕೃಷ್ಣೇಗೌಡ ರಾಧೆಗೆ ಮೊದಲ ಪರಿಚಯದಲ್ಲೇ “ಥೇಟ್ ಬ್ರಹ್ಮಣನಂತೆ” ಕಾಣುತ್ತಾನೆ. ಅದೇ ರೀತಿ ಕೃಷ್ಟೇಗೌಡನಿಗೂ ಸಹ ರಾಧೆ “ಬ್ರಾಹ್ಮಣರು ಒಕ್ಕಲಿಗನಾದ ತನ್ನನ್ನು ಶೂದ್ರನೆಂದು ಕನಿಷ್ಠವಾಗಿ ಕಾಣುತ್ತಾರೆ. ಈಕೆ ಬ್ರಾಹ್ಮಣ ಕುಲದಲ್ಲಿ ಜನಿಸಿದವಳು. ಹಾಗಿದ್ದುವು ಭೇದ ತೋರಿಸದೆ” ಇರುವಂತೆ ಕಾಣುತ್ತಾಳೆ. ಆದರೆ ಕಾದಂಬರಿಯಲ್ಲಿ ರಾಧೇ ಈ ರೀತಿ ವರ್ತಿಸುವುದು ಕೃಷ್ಣೇಗೌಡನ ಜೊತೆ ಮಾತ್ತ್ರ. “ಶೇಷಗಿರಿರಾಯನ ಇತರ ಕಾಲೇಜಿನ ಬ್ರಾಹ್ಮಣೇತರ ಮಿತ್ರರ ಎಂಜಲೆಲೆ ಎತ್ತುವ ತಂಟೆಗೆ ಹೋಗುವುದಿಲ್ಲ” (ಪುಟ ೮೭)

ಪಾತ್ರಗಳ ಚಿತ್ರಣದಲ್ಲಿ ವೈರುಧ್ಯ : ರಾಧೇ-ಶೇಷಗಿರಿರಾಯ

ರಾಧೇ ಅನುಪಮ ಸುಂದರಿಯಾದರೆ ಶೇಷಗಿರಿರಾಯ ಅಷ್ಟು ಸುರೂಪಿಯಲ್ಲದಿದ್ದರೂ ಕುರೂಪಿನವನಲ್ಲ. ಆದರೆ ಅವನ ಹಣೆಯ ಮೇಲೆ ಎಡಭಾಗದಲ್ಲಿದ್ದ ಮೂರು ಕಾಸಿನಗಲದ ಸುಟ್ಟ ಗುರುತಿನ ಕಲೆ ಅವನ ಮುಖವನನ್ನು ಸ್ವಲ್ಪ ಮಟ್ಟಿಗೆ ವಿಕಾರಗೊಳಿಸಿತ್ತು. ಅವನು ಕೋಪಾವಿಷ್ಟನಾದಾಗ ಇಲ್ಲವೆ ದುಃಖಭಾರದಿಂದ ಪರಿತಪಿಸಿದಾಗ ಶೇಷಗಿರಿರಾಯನ ಹಣೆಯ ಮೇಲಿನ ಸುಟ್ಟ ಗಾಯದ ಗುರುತು ಇನ್ನೂ ಅಗಲವಾಗಿ ಇನ್ನೂ ವಿಕಾರವಾಗಿ ಕಾಣುತ್ತಿತ್ತು, ರಾಧೆಯು ದೃಷ್ಟಿಗೆ.

ರಾಧೆ ಮದುವೆಗೆ ಮುನ್ನ ತಾನು ಪ್ರೀತಿಸಿದವನ ಪ್ರೀತಿಯಿಂದ ವಂಚಿತಳಾದರೆ ಶೇಷಗಿರಿರಾಯು ಆಗಲೆ ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡಿದ್ದವನು. ಶೇಷಗಿರಿಗೆ ಸಿನೆಮಾ ನಾಟಕಗಳೆಂದರೆ ತಲೆ ಚಿಟ್ಟು. ಅವು ಆಧುನಿಕ ಯುಗದ ಪಾಪ ಕೂಪಗಳೆಂದು ಅವನ ಕಲ್ಪನೆ. ರಾಧೆಗಾದರೋ ಸಿನೆಮಾ ನಾಟಕಗಳೆಂದರೆ ಪಾಣ. ಶೇಷಗಿರಿರಾಯ ಎಂದೂ ರಾಧೆಯ ಅಲಂಕಾರದಲ್ಲಿ ಆಸ್ಥೆ ವಹಿಸಿದವನಲ್ಲ. “ಅಂತೂ. ಆ ದಂಪತಿಗಳನ್ನು ನೋಡಿದ ಯಾರಿಗಾದರೂ ಪ್ರಥಮ ಪರಿಚಯದಲ್ಲೆ -ರಾಧೆ ಶೇಷಗಿರಿರಾಯ ಪರಸ್ಪರ ವಿರುದ್ಧ ಗುಣವುಳ್ಳವರು, ಇವರ ಜೊತೆ ಸರಿಯಲ್ಲ ಎಂದು ಹೇಳಿಬಿಡುವಂತಿತ್ತು. ಅವರ ಸಂಸಾರದ ಜೋಡಿಗೆ ಅವೆರಡು ಇಜ್ಯೋಡಿ ಎತ್ತು ಗಳನ್ನು ಕುರುಡು ದೈವ ಕಾಣದೆ ಕಟ್ಟಿದೆ ಎನಿಸುವಂತಿತ್ತು .” (ಪುಟ 54)

ರಾಧೆ-ನಾರಾಯಣ

ನಾರಾಯಣ ರಾಧೆಯು ಹೃದಯವನ್ನೂ ತನ್ನ ‘ಸಭ್ಯ’ತನದಿಂದ ಗೆದ್ದಿದ್ದ. ಅವಳ ಹೃದಯದಲ್ಲಿ ಅವನ ಬಗ್ಗೆ ಕೃತಜ್ಞತೆ ತುಂಬಿ ಬಂದಿತ್ತು. ಅವಳಿಗೆ ನಾರಾಯಣನನ್ನು ನೋಯಿಸುವ ಮನಸ್ಸಿರಲಿಲ್ಲ. ನಾರಾಯಣನಿಗೆ ಅಸಂತುಷ್ಟಿಯಾದರೆ ರಾಧೆಗೆ ತೀವ್ರ ಯಾತನೆಯಾಗುತ್ತಿತ್ತು. ನಾರಾಯಣನ ಮೂಖದಲ್ಲಿ ನಗು ಬೆಳಗುವುದನ್ನು ಕಾಣಲು ಅವಳ ಹೃದಯ ಆಶಿಸುತ್ತಿತ್ತು. ಅವರ ಜೋಡಿ ಹೇಗಿತ್ತೆಂದರೆ ಅವರು “ಮಿಶ್ರಿತ ಜೋಡಿಗಳ ಟೆನ್ನಿಸ್ ” ಆಟದಲ್ಲಿನ ವಿವರಣೆಯಲ್ಲಿ ಬರುವ ಭಾಷೆಯನ್ನೇ ನೋಡಬಹುದು. “ನಾರಾಯಣನೂ ರಾಧೆಯ ಆಟವನ್ನು ಅನುಸರಿಸಿ ಕೌಶಲದಿಂದ ಆಡಿದ್ದನು. “ಅವರಿಬ್ಬರ ಆಟದ ರೀತಿಯೂ ಅಷ್ಟೆ. ಸಮಪ೯ಕವಾಗಿ ಹೊಂದಿಕೊಂಡು ಅವರಿಗೆ ಜಯಗಳಿಸಿಕೊಡುವುದರಲ್ಲಿ ತುಂಬ ನೆರವಾಗಿತ್ತು”.  “ಒಳೆಯ ಜೊತೆ ಎತ್ತುಗಳಂತೆ ಅವರು ಒಬ್ಬರನೊಬ್ಬರು ಅರ್ಥಮಾಡಿಕೊಂಡು ಆಡಿದ್ದರು”. ಪ್ರೇಕ್ಷಕರಾಗಿ ನೋಡುತ್ತಿದ್ದ ಕಾಲೇಜಿನ ಇತರ ಆಟಗಾರ ಮಿತ್ರರು “ಕಂಗ್ರಾಚ್ಯುಲೇಷನ್ಸ್ ನಿಮ್ಮಿಬ್ಬರದೂ ಒಳ್ಳೇ ಜೋಡಿ” ಎಂದು ಹೊಗಳಿದರು. (ಪುಟ 27) ಹೀಗೆ ಕಾಣಿಸಿಕೊಂಡ ನಾರಾಯಣ ‘ಕಪಟವನ್ನರಿಯದ ತರಲೆ, ಮುಗ್ದೆಯಾದ ರಾಧೆ’ಗೆ ವಂಚನೆ ಕ್ಷತ್ರಿಮ ಸಂಧಾನ ಮಾಡಿ ಮೋಸ ಗೊಳಿಸುತ್ತಾನೆ.

ರಾಧೆ-ಕ್ಕಷ್ಟೇಗೌಡ

ಕೃಷ್ಣೇಗೌಡ ‘ಮೈ ತೆಳುವಾಗಿದ್ದರೂ ಅವನ ನಿಲುವು ನೇರವಾಗಿ ಶಕ್ತಿ ಸೂಚಕವಾಗಿತ್ತು’.  “ತುಟಿಗಳಲ್ಲಿ ಸದಾ ಹುಸಿನಗು ಆಡುತ್ತಿದ್ದ ಅವನ ಮುಖ ಯಾವ ಹೆಣ್ಮನವನ್ನಾದರೂ ಒಂದು ನೋಟದಲ್ಲಿಯೇ ಆಕರ್ಷಿಸಿಬಿಡುವಂತಿತ್ತು” ಥೇಟ್ ಬ್ರಾಹ್ಮಣನಂತೆಯೇ ಇದ್ದ ಇವನ ಗುಣವನ್ನೂ ನೋಡಿ ರಾಧೆ “ಎಂತಹ ಸುಗುಣಿ ಈತ” ಎಂದು ಚಕಿತಳಾಗುತ್ತಾಳೆ. ನಾರಾಯಣನೆಂಬ ವಿವಾಹಿತ ತರುಣ ಇವಳೊಡನೆ ಕ್ರುತಿಮದಿಂದ ನಡೆದುಕೊಂಡ ರೀತಿಗೂ ಕೃಷ್ಟೇಗೌಡನ ಘನವರ್ತನೆಗೂ ಅಂತರವನ್ನು ಕಾಣುತ್ತಾಳೆ. ಶೇಷಗಿರಿಗಿಂತ ಕೃಷ್ಟೇಗೌಡನಿಗೆ ರಾಧೆಯು ವ್ಯಕ್ತಿತ್ವದಲ್ಲಿ ಆಸಕ್ತಿ ಕೇಂದ್ರಿಕೃತವಾಗಿತ್ತು. ರಾಧೆಯ ಒಂದೊಂದು ನುಡಿಯಲ್ಲೂ ಕೃಷ್ಟೇಗೌಡನನ್ನೂ ಮುಗ್ದ ಗೊಳಿಸುತ್ತಿತ್ತು.

ಪತಿ ಶೇಷಗಿರಿರಾಯನಲ್ಲಿ ದೊರೆಯದ ಸರಸ ಮಾತುಕತೆ ಕೃಷ್ಟೇಗೌಡನಲ್ಲಿ ದೊರೆಯುತ್ತಿದ್ದರಿಂದ ಅವನೊಡನೆ ಸಂಭಾಷಿಸುವ ಸದಾವಕಾಶಕ್ಕಾಗಿ ಯಾವಾಗಲೂ ಅವಳು ಕಾತರಗೊಂಡು ನಿರೀಕ್ಷಿಸುತ್ತಿದ್ದಳು. ಕೃಷ್ಟೇಗೌಡ ರಾಧೆಯ ದೃಷ್ಟಿಗೆ ಸಹೃದಯ. “ತಾನು ಕಷ್ಟಪಡುತ್ತಾಳೆಂದು ಪರಕೀಯನಾದ ಈತನಿಗೆಷ್ಟು ಮರುಕ ? ಅದೇ ತನ್ನ ಪತಿ ಎನಿಸಿಕೊಂಡ ಪ್ರಭೃತಿಯು ವರ್ತನೆಯಲ್ಲಿ ಅದೆಷ್ಟು ಕಾಠಿಣ್ಯ” ಎಂದು ಕೊಳ್ಳುತ್ತಾಳೆ ರಾಧೆ.

ಹೀಗೆ ರಾಧೆಯ ಪ್ರೇಮ ಜೀವನದಲ್ಲಿ ಬರುವ ಮೂವರು ಪುರುಷರನ್ನು ಕಥೆಗಾರ ಪಾತ್ರ ಚಿತ್ರಣದಲ್ಲಿ ಮುಖಾಮುಖಿಯಾಗಿಸಿ, ರಾಧೆಯು ಪ್ರೇಮ ಜೀವನದ ತೂಗುಯ್ಯಾಲೆಯಾಡಿಸುತ್ತಾರೆ. ನಾರಾಯಣ ತೂಗುಯ್ಯಾಲೆಯ ಒಂದು ದಂಡೆಯಾದರೆ, ಕೃಷ್ಟೇಗೌಡ ಮತ್ತೊಂದು ದಂಡೆಯಾಗುತ್ತಾನೆ. ಇವೆರಡು ದಂಡೆಗಳ ಮಧ್ಯದಲ್ಲಿ ಗಂಡ ಶೇಷಗಿರಿರಾಯ ಪ್ರೇಮದ ಪರಿಯನ್ನು ಅರಿಯಲು ಮೀಟು ಗೋಲಾಗಿ ನಿಲ್ಲುತ್ತಾನೆ.

ರಾಧೆ-ಪ್ರಭಾವತಿ

ರಾಧೆಯ ಮಗಳು ಪ್ರಭಾವತಿ ರಾಧೆಯು ಮನಸ್ಸಿನ ಉಯ್ಯಾಲೆಯನ್ನು ತಡೆದು ನಿಲ್ಲಿಸುವ ಸಾಧನೆ (ರಾಧೆಯು ತೂಗುಯ್ಯಾಲೆಯಲ್ಲಿ ಕುಳಿತುಕೊಂಡು ತೂಗಿ ಕೊಳ್ಳುತ್ತಿದಾಗ ಬಂದ ಪ್ರಭಾವತಿ, ರಾಧೆ ತನ್ನ ಪಾದಗಳನ್ನು ನೆಲದ ಮೇಲೆ ಊರಿ ತೂಗುವ ಉಯ್ಯಾಲೆಯನ್ನು ತಡೆದು ನಿಲ್ಲಿಸುವಂತೆ ಮಾಡುತ್ತಾಳೆ. (ಪುಟ ) ಅಂತೆಯೇ ಕ್ಷಣಕಾಲವಾದರೂ ಪ್ರಭಾವತಿ ರಾಧೆಯ ಪುನದ ಉಯ್ಯಾಲೆಯನ್ನು ನಿಲ್ಲಿಸುವ ಸಾಧನವಾಗಿರುತ್ತಾಳೆ. ಪ್ರಭಾವತಿ ತಾಯಿಯಂತೆ ದ್ವಂದ್ವಚಿತ್ತಳಾಗದೆ ಬೆಳೆಯುವ ಸೂಚನೆ ಕೊಡುವ ಪಾತ್ರ. ಈ ಪುಟ್ಟ ಹುಡುಗಿಗೆ ಸ್ವಾಭಾವಿಕವಾಗಿ ಬಂದಂಥ ಗುಣವೆಂದರೆ ಯಾವುದೇ ಹಾಡಿಗೆ ಸ್ವೇಚ್ಛೆಯಾಗಿ,  ಯಾವುದೋ ಚಿತ್ತಾಕರ್ಷಕ ಪ್ರೇರಣೆಗೆ ಮಣಿದು ಕುಣಿಯುವ ಗುಣ. ಏಕೆಂದರೆ ಯಾವ ನಾಟಾಚಾರ್ಯನೂ ಶೇಷಗಿರಿರಾಯನ ಗೃಹವನ್ನು ಹೊಕ್ಕದಿಲ್ಲ. ಇಲ್ಲ, ಅವಳನ್ನು ಶಿಕ್ಷಣಕಾಗಿ ಯಾವ ನಾಟ್ಯಪಟುವಿನ ಬಳಿಗೂ ಕಳುಹಿದ್ದಿಲ್ಲ. ಆದರೂ ಪ್ರಭೆ ಯಾವ ಪ್ರೇಕ್ಷಕನೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ನರ್ತಿಸುತ್ತಿದ್ದಳು. (ಪುಟ. 149). ಹೀಗೆ ಸ್ವಾಭಾವಿಕವಾಗಿ ತನ್ನಿಚ್ಛೆಯಂತೆ ಯಾವ ಹೊಯ್ದಾಟವೂ ಇಲ್ಲದೆ ತಾಯಿ ರಾಧೆಗಿಂತ ಭಿನ್ನವಾಗಿ ಬೆಳೆಯಬೇಕಾದ ಪಾತ್ರ ಅಕಾಲಮೃತ್ಯುವಿಗೆ ತುತಾಗುತ್ತದೆ.

ಕಾಲದ ವೈರುಧ್ಯ

ಒಂದು ಕೃತಿಯಲ್ಲಿ ಬರುವ ಕಾಲವನ್ನು ನಾಲ್ಕ ವಿಭಾಗಗಳಾಗಿ ವಿಂಗಡಿಸಿಕೊಳ್ಳಬಹುದು : (1) ಕೃತಿ ರಚನೆಯ ಕಾಲ, (2) ನಿರೂಪಕನ ಕಾಲ, (3) ಪಾತ್ರದ ಕಾಲ, (4) ಭಾಷಾಕಾಲ. ಇವು ಪಠ್ಯದ ಜೊತೆ ನಡೆಸುವ ಸಂವಾದಕ್ಕೆ ಪೂರಕವಾಗಿ ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳನ್ನು ದೊರಕಿಸಿಕೊಟ್ಟ ಕೃತಿಯ ಜೊತೆ ಓದುಗ ಇನ್ನಷ್ಟು ಆಳವಾಗಿ ಅರ್ಥಪೂರ್ಣವಾಗಿ ಸಂವಾದ ನಡೆಸಲು ಸಹಕಾರಿಯಾಗುತ್ತದೆ.

ಕೃತಿಕಾರ ‘ಉಯ್ಯಾಲೆ’ಯನ್ನು 1960ರಲ್ಲಿ ರಚಿಸಿದರೂ ನಿರೂಪಕನ ಕಾಲ (ಈ ಕಾದಂಬರಿಯಲ್ಲಿ ನಿರೂಪಕನ ಕಾಲ(ರಾಧೆ) ಇಬ್ಬರೂ ಒಬ್ಬರೇ ಆದ್ದರಿಂದ) ಪಾತ್ರದ ಕಾಲ ಕಾದಂಬರಿಯು ಒಂದು ಭಾಗದಲ್ಲಿ ಬರುವ ವಿವರಣೆಯಿಂದ ಎರಡನೆ ಮಹಾಯುದ್ಧದ ಕಾಲ ಎಂದು ತಿಳಿಯಬಹುದು. “ಅಷ್ಟರಲ್ಲಿ ಖಾಕಿ ಬಟ್ಟೆ ಧರಿಸಿದ ಪೊಲೀಸ್ ಇನ್ಸ್ಪೆಕ್ಟರನೊಬ್ಬ ದರ್ಪದಿಂದ ಬಂದು ರಾಧೆಯು ಪಕ್ಕದಲ್ಲಿ ಕುಳಿತು ಬಿಟ್ಟ. ಯುದ್ಧದ ದಿನಗಳಲ್ಲವೇ ? ಸೈನಿಕರಂತೆ ಪೋಷಾಕು ಧರಿಸಿದ ಪೊಲೀಸರಿಗೂ ಕೋಡು ಮೂಡಿದ್ದ ಕಾಲ ಅದು. ತಾತ್ಕಾಲಿಕವಾಗಿ ನಮ್ಮ ದೇಶದಲ್ಲಿ ಬಿಡಾರಬಿಟ್ಟ ಅಮೆರಿಕನ್ ಮತ್ತು ಬ್ರಿಟಿಷ್ ಸೈನಿಕರ ದುರ್ಗುಣಗಳನ್ನೆಲ್ಲಾ ನಮ್ಮ ಪೊಲೀಸಿನವರೂ ಸ್ವಲ್ಪ ಸ್ವಲ್ಪ ಕಲಿಯುತ್ತಿದ್ದರು.” (ಪುಟ 125)

ಪಾತ್ರದ ಕಾಲ: ವರ್ತಮಾನ – ಭೂತಗಳು ಮತ್ತು ವರ್ತಮಾನ – ಭವಿಷ್ಯತ್

ವರ್ತಮಾನ ಮತ್ತು ಭೂತಗಳ ನಡುವೆ ನಡೆಯುವ ಸಂಘರ್ಷ ಉಯ್ಯಾಲೆಯಾಗಿ ಪಾತ್ರದ ಕಾಲ ಕಾದಂಬರಿಯ ಒಂದನೇ ಭಾಗದಿಂದ ನಾಲ್ಕನೇ ಭಾಗದವೆರೆಗೆ ಚಿತ್ರಿತವಾಗಿದೆ. ಇಲ್ಲಿಯವರೆಗೆ ರಾಧೆಯು ಶೇಷಗಿರಿರಾಯನನ್ನು ಮದುವೆಯಾಗಿ ಅವಳಿಗೊಂದು ಎರಡು ವರ್ಷದ ಮಗುವಾಗಿ ,ಕೃಷ್ಣೇಗೌಡನ ಪರಿಚಯವಾಗುವವರೆಗಿನ ಕಾಲ. ರಾಧೆಯ ದೇಹವು ಉಯ್ಯಾಲೆಯ ಮೇಲೆ ಕುಳಿತು ಉಯ್ಯಾಲೆ ಮೀಟುತ್ತಾ ಅವಳ ಇಂದಿನ ಸ್ಥಿತಿ ಮತ್ತು ಹಿಂದಿನ ಸ್ಥಿತಿಯ ವೈರುಧ್ಯದ ಉಯ್ಯಾಲೆಯಾಡುತ್ತಿರುವುದನ್ನು ಸೂಚಿಸುವುದರ ಮೂಲಕ ರಾಧೆಯ ವರ್ತಮಾನ ಮತ್ತು ಭೂತದ ಮನಸ್ಸಿನ ತೂಗಾಟವನ್ನು ಕಾದಂಬರಿಕಾರರು ಚಿತ್ರಿಸುತ್ತಾರೆ.

ರಾಧೆಯು ಕೃಷ್ಣೇಗೌಡನನ್ನು ಸಂಧಿಸಿದಾಗಿನಿಂದ ಅವಳ ಮನಸ್ಸು ಭೂತದ ಕಡೆಗೆ ಚಲಿಸದೆ ವರ್ತಮಾನದಲ್ಲಿ ಕೃಷ್ಟೇಗೌಡನನ್ನು ಪಡೆದು ಬದುಕನನ್ನು ನಿರೂಪಿಸಿಕೊಳ್ಳುವ ಭವಿಷ್ಯದ ಕಡೆಗೆ ತುಡಿಯುತ್ತ ನಿರಂತರವಾಗುತ್ತದೆ. ಕಥೆಗಾರರು ವರ್ತಮಾನ – ಭೂತ, ವರ್ತಮಾನ-ಭವಿಷ್ಯತ್ಗಳ ವೈರುಧ್ಯದ ಆಧಾರದ ಮೇಲೆ ಕಥಾ ನಾಯಕಿಯ ಮನಸ್ಸು ಉಯ್ಯಾಲೆಯಾಡುವುದನ್ನು ಚಿತ್ರಿಸಿರುವುದರ ಕಡೆ ಗಮನ ಹರಿಸಬಹುದು. ಹೀಗೆ ಉಯ್ಯಾಲೆ ಕಾಲದ ಹೊಯ್ದಾಟದ ಉಯ್ಯಾಲೆಯಾಗಿ ಕಾದಂಬರಿಯ ಉದ್ದಕ್ಕೂ ತೂಗಾಡುತ್ತಿರುತ್ತದೆ.

ಆದರೆ, ಈ ಕಾದಂಬರಿಯಲ್ಲಿ ಬರುವ ಶೇಷಗಿರಿರಾಯನ ಗತ ಜೀವನವೇ ಆಗಲೀ, ಕೃಷ್ಣೇಗೌಡನ ಗತ ಜೀವನವೇ ಆಗಲೀ ಚಿತ್ರಣವಾಗಿರುವುದು ‘ಉಯ್ಯಾಲೆ’ಯ ಮೂಲಕ ಅಲ್ಲ. ಆದ್ದರಿಂದ ಕಾದಂಬರಿಕಾರರು ರಾಧೆಯ ಪಾತ್ರದ ಕಾಲದ ಮೂಲಕ ‘ಉಯ್ಯಾಲೆ’ಯನ್ನು ಧ್ವನಿಸುತ್ತಿರುವುದು ಹೆಚ್ಚು ಅರ್ಥವತ್ತಾಗುತ್ತದೆ.

ಭಾಷಾಕಾಲ

ರಾಧೆಯ ಮನಸ್ಸಿನ ಆಳದಲ್ಲಿರುವ ಉಯ್ಯಾಲೆಯನ್ನು ಚಿತ್ರಿಸಿರುವಾಗ ಆ ಮನಸ್ಸಿನ ಮೇಲ್ಮೈ ಲಕ್ಷಣವನ್ನು ಚಿತ್ರಿಸುವ ಭಾಷೆಯ ಕಾಲದ ಬಳಕೆಯೂ ಇಲ್ಲಿ  ಕಾದಂಬರಿಯ ಧ್ವನಿಯ ಕಡೆಗೆ ತುಡಿಯುವುದನ್ನೂ ಗಮನಿಸಬಹುದು.

ರಾಧೆಯು ವರ್ತಮಾನದಿಂದ ಗತಕಾಲಕ್ಕೆ ಹೋಗುತ್ತಿರುವುದೆಲ್ಲವೂ ಭೂತಕಾಲ ಪ್ರತ್ಯಯದಿಂದ ವ್ಯಕ್ತವಾಗುವ ವಾಕ್ಯಗಳಾಗಿವೆ.

ರಾಧೆಯು ಕೃಷ್ಟೇಗೌಡನ ಬಗ್ಗೆ ಯೋಚಿಸುವಾಗ ನಡೆಯುವ ಹೋರಾಟ ವರ್ತಮಾನ ಕಾಲದಲ್ಲಿ ಸೂಚಿತವಾಗಿದೆ. ಆದರೆ ರಾಧೆಯ ಈ ಉಯ್ಯಾಲೆಯಾಟ ನಿರಂತರವಾಗಿ ಸಾಗತ್ತದೆ ಎಂದು ಸೂಚಿಸುವಾಗ (ಕಾದಂಬರಿಯ ಕೊನೆಯಲ್ಲಿ) ನಿರಂತರ ಕಾಲು ಸೂಚಿ ಪ್ರತ್ಯಯದಿಂದ ಕೊನೆಗೊಂಡಿದೆ. (ಇವುಗಳ ಉದಾಹರಣೆಯನ್ನು ‘ಉಯ್ಯಾಲೆ’ಯ ‘ಸಂಕೇತ’ದ ಭಾಗದಲ್ಲಿ ದಪ್ಪ ಅಕ್ಷರಗಳಲ್ಲಿ ಕೊಟ್ಟಿರುವ ಪದಗಳನ್ನು ಗಮನಿಸಿದರೆ ಗೊತಾಗುತ್ತದೆ.

ಹೀಗೆ ವರ್ತಮಾನ-ಭೂತ, ವರ್ತಮಾನ-ಭವಿಷ್ಮತ್ ಗಳ ವೈರುಧ್ಯವನ್ನು ಕಾದಂಬರಿಕಾರ ಕಾದಂಬರಿಯ ಕೇಂದ್ರಪ್ರಜ್ಞೆಯಾದ ಹೊಯ್ದಾಟವನ್ನು ಸೂಚಿಸುವ ಕಡೆಗೆ ಧ್ವನಿಪೂರ್ಣವಾಗಿ ಬಳಸಿಕೊಂಡಿರುವುದು ಕಂಡುಬರುತ್ತದೆ.

‘ಉಯ್ಯಾಲೆ’ ಕಾದಂಬರಿಯಲ್ಲಿ ಪಡೆದುಕೊಳ್ಳುವ ಸಂಕೇತಾರ್ಥಗಳು

೧. ಉಯ್ಯಾಲೆ ಕೇವಲ ಉಯ್ಯಾಲೆಯಾಗಿ:

“ಅವಳ ಉಂಗುಷ್ಥ ನೆಲವನ್ನು ಮೃದುವಾಗಿ ಮೀಟಿತು. ಅದರ ಮಿಡಿತಕ್ಕೆ ಉಯ್ಯಾಲೆ ಮೆಲ್ಲನೆ ತೂಗಲಾರಂಭಿಸಿತು” (ಪುಟ ೭)

“ರಾಧೆಯು ಉಯ್ಯಾಲೆಯಾ ಮೇಲೆ ಕುಳಿತು ಯೋಚಿಸುತ್ತಿದ್ದಳು” (ಪುಟ ೧೨)

“ತೂಗುಯ್ಯಾಲೆ ತಡೆದು ತಡೆದು ನಿಧಾನವಾಗಿ ತೂಗುತ್ತಿತ್ತು”(ಪುಟ ೧೪)

೨. ಉಯ್ಯಾಲೆ ಗತಕಾಲಕ್ಕೆ ಹೋಗುವುದರ ಸಂಕೇತವಾಗಿ:

“ಉಯ್ಯಾಲೆ ಮೃದುವಾಗಿ ತೂಗುತ್ತಲೇ ಇತ್ತು. ರಾಧೆಯ ಚಿತ್ತ ಗತಕಾಲಕ್ಕೆ ಸರಿದು ಯೋಚಿಸಲಾರಂಭಿಸಿತು” (ಪುಟ ೭)

“ರಾಧೆ ಬಲಗಾಲಿನ ಉಂಗುಷ್ಹದಿಂದ ಬಿರುಸಾಗಿ ನೆಲವನ್ನೊಮ್ಮೆ ಮೀಟಿದಳು…. ಅದರ ವೇಗಕ್ಕೆ ಅವಳ ಮನಸ್ಸು ವಿವಾಹ ಪೂರ್ವದ ಸುಖದ ದಿನಗಳನ್ನು ಸಂಕಟದಿಂದ ಸ್ಮರಿಸತೊಡಗಿತು” (ಪುಟ ೯)

“ರಾಧೆ ಉಯ್ಯಾಲೆಯಲ್ಲಿ ಕುಳಿತು ತಾಯಿ ಅಂದು ಮಾಡಿದ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಳು”(ಪುಟ ೧೭)

“ಹಿಂದಿನ ಕಥೆಯನ್ನೆಲ್ಲ ಉಯ್ಯಾಲೆಯಲ್ಲೇ ಕುಳಿತು ರಾಧೆ ಚಿಂತಿಸುತ್ತಿದ್ದಳು” (ಪುಟ ೪೩)

“ಉಯ್ಯಾಲೆಯಲ್ಲಿ ಕುಳಿತ ರಾಧೆಗೆ ನಡೆದು ಹೋದ ಮದುವೆಯ ನೆನಪು ಕಹಿ ಔಷಧ ಕುಡಿದಂತಾಗಿತ್ತು” (ಪುಟ ೫೨)

(ಇಲ್ಲಿಯವರೆಗೂ ಪ್ರಯೋಗಿಸಿರುವ ಕಾಲ ಭೂತಕಾಲ ಪ್ರತ್ಯಯದಿಂದ ಕೂಡಿದೆ)

“ರಾಧೆ ಅಡುಗೆಕೋಣೆಯಿಂದ ಬಂದು ಹಜಾರದ ತೂಗುವ ಮಂಚದ ಮೇಲೆ ಕುಳಿತು ಉಂಗುಷ್ಟದಿಂದ ನೆಲವನ್ನು ಮೀಟಿದಳು. ಉಯ್ಯಾಲೆ ಮೆಲ್ಲನೆ ತೂಗಲಾರಂಭಿಸಿತು”(ವರ್ತಮಾನ)

“—ಕಣ್ಣೀರು ಸುರಿಯುತ್ತಲೇ ಇತ್ತು. ಉಯ್ಯಾಲೆ ತೂಗುತ್ತಲೇ ಇತ್ತು”(ನಿರಂತರ ಕಾಲ ಸೂಚಕ)

೩. ಉಯ್ಯಾಲೆ ತೂಗುತಕ್ಕಡಿಯಾಗಿ ಬದಲಾಗುವುದು:

ಉಯ್ಯಾಲೆಯ ಮೇಲೆ ಕಾದಂಬರಿಯ ಉದ್ದಕ್ಕೂ ಕುಳಿತುಕೊಳ್ಳುವ ವ್ಯಕ್ತಿ ರಾಧೆ. ಆದರೆ ಒಮ್ಮೆ ಮಾತ್ರ ಕುಳಿತುಕೊಳ್ಳುವ ವ್ಯಕ್ತಿಗಳು ಶೇಷಗಿರಿರಾಯ ಮತ್ತು ಕೃಷ್ಣೇಗೌಡ – ಜೊತೆಯಾಗಿ”ಸ್ನೇಹಿತರಿಬ್ಬರೂ ಹಜಾರಕ್ಕೆ ಬಂದು ಉಯ್ಯಾಲೆಯಾ ಮೇಲೆ ಕುಳಿತರು. ರಾಧೆ ಕೆಲ ನಿಮಿಷಗಳಲ್ಲಿ ತಟ್ಟೆಯಲ್ಲಿ ವೀಲ್ಯವಿಟ್ಟು ತಂದಳು. ಅದನ್ನವಳಿಂದ ತೆಗೆದುಕೊಂಡು ಶೇಷಗಿರಿ ತಮ್ಮಿಬ್ಬರ ನಡುವೆ ಮಣೆಯ ಮೇಲೆ ಇರಿಸಿದ. ರಾಧೆ ಯಾರನ್ನೂ ನಿರ್ದಿಷ್ಟವಾಗಿ ಉದ್ದೇಶಿಸದೆ ಹೇಳಿದಳು:

“ಅಬ್ಬಾ, ಇಷ್ಟು ದಿವಸಕ್ಕೆ ಈವತ್ತೇ ಇವರು ಉಯ್ಯಾಲೆಯಲ್ಲಿ ಕೂತಿರೋದು, ಉಯ್ಯಾಲೆ ಇಲ್ಲಿರುವುದೇ ಮರೆತುಹೋದಂತಿತ್ತು, ಇವರಿಗೆ. ಹೋಗಲಿ ಸ್ನೇಹಿತರ ಜೊತೆಯಲ್ಲಾದರೂ ಕುಲಿತರಲ್ಲ – ಅಷ್ಟೇ ಸಂತೋಷ”.

ಹೀಗೆ ಹೇಳುವ ಕ್ಷಣದಿಂದ ರಾಧೆ ಶೇಷಗಿರಿರಾಯನನ್ನೂ , ಕೃಷ್ಣೇಗೌಡನನ್ನೂ ತೂಗಿ ನೋಡಲು ಪ್ರಾರಂಭಿಸುತ್ತಾಳೆ.

೪. ರಾಧೆಯ ‘ಉಯ್ಯಾಲೆ’ ಕೃಷ್ಣೇಗೌಡನಿಗೆ ವರ್ಗಾವಣೆಯಗುವುದು:

ಮೇಲಿನ ಘಟನೆ ನಡೆದ ನಂತರವೇ, ಅಂದರೆ, ಕೃಷ್ಣೇಗೌಡ ಉಯ್ಯಾಲೆಯಾ ಮೇಲೆ ಕುಳಿತ ನಂತರ ಮಾತ್ರ ಕೃಷ್ಣೇಗೌಡನ ಮನಸ್ಸು ರಾಧೆಯ ಮನಸ್ಸಿನಂತೆ ಚಂಚಲವಾಗತೊಡಗುತ್ತದೆ. ಅಲ್ಲಿಯವರೆಗೂ ಅವನು ಕಾದಂಬರಿಯಲ್ಲಿ ಚಂಚಲಚಿತ್ತನಾಗಿ ಚಿತ್ರಿತನಾಗಿಲ್ಲ. ಈ ಘಟನೆಯಾದ ಮಾರನೆ ದಿನದಿಂದಲೇ ಕೃಷ್ಣೇಗೌಡನ ಮನಸ್ಸು “ಸ್ತ್ರೀ ರೂಪು ಎಂತಹ ಉಗ್ರ ತಪಸ್ವಿಯನ್ನಾದರೂ ತನ್ನ ಸೆಲೆಯಲ್ಲಿ ಸಿಕ್ಕಿಸಿಕೊಂಡು ನಿರಾಯಾಸವಾಗಿ ತೂಗುಯ್ಯಾಲೆಯಾಡಿಸುವಂತಿತ್ತು” ಎಂದು ಅಂದುಕೊಳ್ಳುತ್ತದೆ. ಇಲ್ಲಿಂದ ಮುಂದೆ ರಾಧೆಯಿಂದ ಆಕರ್ಷಿತ – ವಿಕರ್ಷಿತಗೊಳ್ಳುವ ಉಯ್ಯಾಲೆಯಾಗಿ ಕೃಷ್ಣೇಗೌಡನ ಮನಸ್ಸು ರಾಧೆಯನ್ನು ಮಾಡುವೆ ಮಾಡಿಕೊಳ್ಳುವುದೇ. ಸನ್ಯಾಸ ತೆಗೆದುಕೊಳ್ಳುವುದೇ ಎನ್ನುವವರೆಗೂ ಹೊಯ್ದಾಡುತ್ತದೆ.

ಉಯ್ಯಾಲೆ ಅಸ್ತವ್ಯಸ್ತ ಮನಸ್ಸಿನ ಸಂಕೇತವಾಗುವುದು:
ರಾಧೆಯ ಮಗಳು ಪ್ರಭಾವತಿ ಸತ್ತ ಮೇಲೆ ಕೃಷ್ಣೇಗೌಡನ ಕಡೆಗೆ ಮನಸ್ಸು ಸಂಪೂರ್ಣವಾಲಿದಾಗ, ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾಗದಾಗ ಖಾಯಿಲೆ ಬಂದಾಗ ರಾಧೆಯ ಅಸ್ತವ್ಯಸ್ತ ಮನಸ್ಸಿನ ಸಂಕೇತವಾಗಿ ಉಯ್ಯಾಲೆ ಮಾರ್ಪಡುತ್ತದೆ.

ಉಯ್ಯಾಲೆಯ ಚಲನೆ ಭಾವದ ಚಲನೆಯ ಸಂಕೇತವಾಗುವುದು:
ಕುದುರೆ ಗಾಡಿಯಲ್ಲಿ, ರೈಲಿನಲ್ಲಿ ಪ್ರಯಾಣ ಮಾಡುವಾಗ (ಕೃಷ್ಣೇಗೌಡನ ಜೊತೆ) ರಾಧೆಯ ಮನಸ್ಸು ತೂಗುಯ್ಯಾಲೆಯಾದುವುದರ ಸಂಕೇತವಾಗುತ್ತದೆ.(ಪುಟ ೧೨೭)

೭. ಉಯ್ಯಾಲೆ ಇತ್ಯಾತ್ಮಕ ಮತ್ತು ನೇತ್ಯಾತ್ಮಕ ನಿರ್ಧಾರಗಳ ನಡುವೆ ‘ತೂಗುಯ್ಯಾಲೆ’ಯಾಗುವುದು:

ಕೃಷ್ಣೇಗೌಡನ ಸಂಗದ ಹೋಗಿ ಬದುಕುವುದೇ ಅಥವಾ ಬಿಡುವುದೇ ಎಂಬ ನಿರ್ಧಾರ ತೆಗೆದುಕೊಳ್ಳುವಾಗ ಇತ್ಯಾತ್ಮಕ ಮತ್ತು ನೇತ್ಯಾತ್ಮಕ ನಡುವಿನ ತೂಗುಯ್ಯಾಲೆಯಾಗುತ್ತದೆ.

“ಪರಪುರುಷನಾದ ಕೃಷ್ಣೇಗೌಡನ ಬಗೆಗೆ ತನ್ನಲ್ಲಿ ಅನುರಾಗ ಉದಯಿಸಿದಂತಿದೆ. ಆದರೆ ಸಮಾಜದ ಘೋರ ಸರಪಳಿಗಳಿಂದ ಬಂಧಿತಳಾದ ತನಗೆ ಇದನ್ನೊಪ್ಪುವುದೂ ಶಕ್ಯವಿಲ್ಲ. ಸಂಪ್ರದಾಯದ ಕರಾಳಮೇಘ ಈ ಪ್ರಣಯಾರುಣವನ್ನು ಯಶಸ್ವಿಯಾಗಿ ಕವಿದು ಮರೆಮಾಡಬಲ್ಲದು”(ಪುಟ ೧೪೧)

“ಸಂಸಾರ – ಇಷ್ಟ ಬಂದಾಗ ಕಳಚಿ ಇಡುವ, ಬೇಕಾದಾಗ ಕೈಗೆ ತೊಡುವ ಅಂದದ ಬಳೆಯಲ್ಲ, ಅದು ಜನ್ಮಜನ್ಮಾಂತರದ ವೈಶಿಷ್ಟ್ಯಪೂರ್ಣ ಸಂಬಂಧ. ಅದರಲ್ಲಿ ಎಷ್ಟೇ ಒಡಕಿದ್ದರೂ, ಅದರ ಬೆಚ್ಚಗಿನ ಆಶ್ರಯದಲ್ಲಿ ಹೇಗೋ ಕಾಲ ಹಾಕುವುದು ಶ್ರೇಯಸ್ಸು”(ಪುಟ ೨೫೦)

“ತಟ್ಟನೆ ಇನ್ನೊಂದು ವಿಚಾರ ಸುಳಿಯಿತು.

ಹೌದ ಕೃಷ್ಣೇಗೌಡನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆಯೇ?…ಹೇಗೆ ಹೇಳಲಿ?- ನನ್ನ ಚೇತನದಲ್ಲಿಯೇ ತನಗರಿವಿಲ್ಲದೆ ಅನೇಕ ವಿಷಯಗಳು ಸುಪ್ತವಾಗಿದ್ದು ಆಗಾಗ ಹೊರಗಿಣುಕಿ ನನ್ನನ್ನು ಸೋಜಿಗಗೊಳಿಸುತ್ತವೆ. ಹೀಗಿರುವಾಗ ಆತನನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳುವುದು ಹೇಗೆ? ಅಂದರೆ – ಒಂದು ಪಕ್ಷ ಅವನ ಜೊತೆಗೆ ನಾನು ಹೊರಟುಬಿಟ್ಟರೆ ನನಗೆ ಒಳ್ಳೆಯದೇ ಆಗುತ್ತದೆಂದು ಯಾವ ಭರವಸೆ ಇದೆ”(ಪುಟ ೨೮೪)

“ಏನಾದರೂ ಆಗಲಿ – ಎಷ್ಟು ಕಷ್ಟವಾದರೂ ಬರಲಿ – ಪ್ರೀತಿ ದೊಡ್ಡದು – ಆತನ ಜೊತೆಗೆ ಹೊರಟುಹೋಗಿ ಪ್ರತ್ಯೇಕವಾಗಿ ಬೇರೆ ಒಂದು ಮನೆ ಮಾಡಿಕೊಳ್ಳುವುದು.. ಹಾಗೆನಿಸಿದೊಡನೆಯೇ ಕೃಷ್ಣನ ರೂಮಿನತ್ತ ಗಕ್ಕನೆ ತಿರುಗಿದಳು. ಉಯ್ಯಾಲೆಯಲ್ಲಿ ಕುಳಿತಂತೆಯೇ….

ಆಗ ಮೂರು ತಿಂಗಳ ಗರ್ಭ – ತನ್ನ ಪತಿಯ ಪ್ರತಿರೂಪ”(ಪುಟ ೨೮೫)

ಕಾದಂಬರಿಯಲ್ಲಿ ಮೊದಲ ನೋಟಕ್ಕೆ ಎದ್ದು ಕಾಣುವ ಗುಣವೆಂದರೆ ಪಾತ್ರಗಳು ತಾವಾಗಿಯೇ ಬೆಳೆದು ಓದುಗನ ಮನಸ್ಸಿನಲ್ಲಿ ಒಂದು ನಿರ್ಣಯ ಮೂಡುವ ವೇಳೆಯಲ್ಲಿ ಬರಹಗಾರ ಹೊರಗಿನಿಂದ ಬಂದು ಪಾತ್ರಗಳ ಮೇಲೆ ತನ್ನ ಅನಿಸಿಕೆಗಳನ್ನು ಹೇರಿ ಹೋಗುವುದು. ಕಾದಂಬರಿಕಾರನ ಈ ಕ್ರಿಯೆ ಓದುಗರು ಮೂಡಿಸಿಕೊಳ್ಳಬಹುದಾದ ಚಿತ್ರಣವನ್ನು ಮೊಟಕುಗೊಳಿಸಿಬಿಡುತ್ತದೆ. ಉದಾಹರಣೆಗೆ–ರಾಧೆ ಮತ್ತು ಶೇಷಗಿರಿರಾಯರ ಪಾತ್ರ ಚಿತ್ರಣಗಳು ಓದುಗನ ಮನಸ್ಸಿನಲ್ಲಿ ಮೂಡುತ್ತಿರುವ ವೇಳೆಯಲ್ಲೇ ಲೇಖಕ ಪ್ರವೇಶವಾಗುವುದನ್ನು ಈ ಸಾಲುಗಳು ಸೂಚಿಸುತ್ತವೆ. “ಅಂತಲೂ ಈ ದಂಪತಿಗಳನ್ನು ನೋಡಿದ ಯಾರಾದರೂ ಪ್ರಥಮ ಪರಿಚಯದಲ್ಲೇ ರಾಧೆ – ಶೇಷಗಿರಿರಾಯ ಇಬ್ಬರೂ ಪರಸ್ಪರ ವಿರುದ್ಧ ಗುಣವುಳ್ಳವರು. ಇವರ ಜೊತೆ ಸರಿಯಲ್ಲ ಎಂದು ಹೇಳಿಬಿಡುವಂತಿತ್ತು. ಅವರ ಸಂಸಾರದ ಗಾಡಿಗೆ ಅವೆರಡು ಇಜ್ಜೋಡಿ ಎತ್ತುಗಳನ್ನು ಕುರುಡು ದೈವ ಕಾಣದೆ ಕಟ್ಟಿರಬೇಕು, ಎನಿಸುವಂತಿತು.” (ಪುಟ 54) ಇದರಿಂದ ಲೇಖಕರೇ ಪಾತ್ರ ಬೆಳವಣಿಗೆಯನ್ನು ‘ಟೈಪ್’ ಮಾಡಿ ತಮ್ಮ ತೀರ್ಮಾನವನ್ನು ಸೂತ್ರ ರೂಪದಲ್ಲಿ ಕೊಟ್ಟುಬಿಡುತ್ತಾರೆ. ಈ ರೀತಿ ಲೇಖಕರು ಹೊರಗಿನಿಂದ ಆಗಮಿಸಿ “ಉಯ್ಯಾಲೆ” ಸಂಕೇತವನ್ನು ಆಗಾಗ್ಗೆ ಓದುಗರಿಗೆ ಜ್ಞಾಪಿಸಿ ಕೊಡುತ್ತಾರೆ.

ಕಾದಂಬರಿಯ ಪಾತ್ರ ತನಗೆ ತಾನೇ ಸಾಭಾವಿಕವಾಗಿ ಬೆಳೆದುಕೊಂಡು ಹೋಗುವಾಗ ಅವು ಲೇಖಕನಿಗೆ ಅನೇಕ ರೀತಿಯ ಸವಾಲುಗಳನ್ನು ಒಡ್ಡುತ್ತವೆ. ಲೇಖಕನನ್ನು ಕಾಡಿಸುತ್ತವೆ. ಉಯ್ಯಾಲೆ ಕಾದಂಬರಿಯಲ್ಲಿ ಕಾದಂಬರಿಕಾರರಿಗೆ ಸವಾಲೊಡ್ಡಬೇಕಾದ ಸಮಸ್ಯೆಗಳು ಮತು ಪಾತ್ರಗಳು ಬಂದಾಗ ಲೇಖಕರು ಅವುಗಳನ್ನು ಸುಲಭದಲ್ಲಿ ನಿವಾರಿಸಿಕೊಂಡುಬಿಡುತ್ತಾರೆ. ಅಂದರೆ ಕಾದಂಬರಿಯ ಬೆಳವಣಿಗೆಯನ್ನು ಲೇಖಕರೇ ತಮ್ಮ ಹಿತಕ್ಕೆ ತೆಗೆದುಕೊಂಡುಬಿಡುತ್ತಾರೆ. ಉದಾಹರಣೆಗೆ ನಿಜವಾಗಿಯೂ ಸವಾಲೊಡ್ಡಬೇಕಾಗಿದ್ದ, ರಾಧೆಯಂತೆ ತೊಳಲಾಟವಿಲ್ಲದ, ಸ್ವತಂತ್ರವಾಗಿ, ಸ್ವಚ್ಛಂದವಾಗಿ ಬೆಳೆಯುವ ಸೂಚನೆಗಳನ್ನು ಬಲವಾಗಿ ಹೊಂದಿದ್ದ ರಾಧೆಯ ಮಗಳು-ಪ್ರಭಾವತಿಯನ್ನು-ಅಕಾಲಮರಣಕ್ಕೆ ತುತ್ತಾಗಿಸುವುದು.

ಈ ಪಾತ್ರವನ್ನಂತೂ ಕಥೆಗಾರರು ಬೇಂದ್ರೆಯವರ ‘ಕುಣಿಯೋಣು ಬಾರ? ಕವನದ ಸಹಾಯದಿಂದ ಅನ್ಯಪಠ್ಯ (intertextuals) ಸಾಂದರ್ಭಿಕತೆಯನ್ನು ಸೃಷ್ಟಿಸಿ ಬಹಳ ಚೆನ್ನಾಗಿ ಬೆಳೆಸಿರುತ್ತಾರೆ. ಆದರೆ ಈ ಪಾತ್ರ ಇನ್ನೂ ಬೆಳೆದಿದ್ದರೆ ಲೇಖಕರಿಗೆ ನಿಜವಾದ ಸವಾಲನ್ನೊಡುತ್ತಿತು. ಈ ಪಾತ್ರವನ್ನೂ ಸಾಯಿಸಿಬಿಡುವುದರಿಂದ ಲೇಖಕರು ಬಹಳ ಸಲೀಸಾಗಿ ಸವಾಲನ್ನು ನಿವಾರಿಸಿಕೊಂಡುಬಿಡುತ್ತಾರೆ. ಏಕೆಂದರೆ ಕಾದಂಬರಿಕಾರರು ಉಯ್ಯಾಲೆ” ಸಂಕೇತವನ್ನು ಕಾದಂಬರಿಯ ಕೊನೆಯವರೆಗೂ ಬಳಸಿಕೊಳ್ಳಬೇಕಾಗಿದೆ. ಮತ್ತು ಅದು ನಿರಂತರ ಎಂಬ ಸೂಚನೆಯನ್ನು ಕೊಡಬೇಕಾಗಿದೆ. ಈ ಪಾತ್ರ ನಿವಾರಣೆಗೆ ಇನ್ನೂ ಒಂದು ಕಾರಣ ಈ ರೀತಿ ಇದೆ. ಅದು, ರಾಧೆ ಕೃಷ್ಣೇಗೌಡರ ಪ್ರೀತಿಯ ಉತ್ಕಟತೆಗೆ ಮಗಳು ಅಡ್ಡ ಬರದಂತೆ ನೋಡಿಕೊಳ್ಳುವುದು ಲೇಖಕರ ಆಶಯವಾದಂತಿದೆ.

ಕಾದಂಬರಿಯ ಕೊನೆಯಲ್ಲಿ ಕೃಷ್ಟೇಗೌಡನ ಜೊತೆಯಲ್ಲಿ ಹೋಗಿಬಿಡಬೇಕೆ-ಬೇಡವೆ ಎಂಬ ಇತ್ಯಾತ್ಮಕ ಮತ್ತು ನೇತಾತ್ಮಕ ಹೊಯ್ದಾಟಗಳ ನಡುವೆ ಇದ್ದಾಗ ಮತ್ತೆ ರಾಧೆ ಶೇಷಗಿರಿರಾಯನಿಂದ ಎರಡು ತಿಂಗಳ ಗರ್ಭವತಿಯನ್ನಾಗಿಸಿಬಿಡುತ್ತಾರೆ. ಹೆಣ್ಣುಗಂಡಿನ ಪ್ರೀತಿಯ ಸಮಸ್ಯೆ ಸಾರ್ವಕಾಲಿಕ ಎಂಬುದನ್ನು ಸೂಚಿಸಲು ಬಹುಬೇಗ ಸುಲಭದಲ್ಲಿ ಈ ಸಮಸ್ಯೆಯನ್ನು ಪುನಃ ಆಹ್ವಾನಿಸಿಬಿಡುತ್ತಾರೆ. ‘ಉಯ್ಯಾಲೆ’ಯನ್ನೇ ಸಂಕೇತವಾಗಿ ನಿಲ್ಲಿಸಿಬಿಡುತಾರೆ. ಆದ್ದರಿಂದ ಈ ಕೃತಿಯಲ್ಲಿ ‘ಸಂಕೇತ’ವನ್ನು ಆಳವಾಗಿ ನೋಡಿದಾಗ ಒಂದು ತಂತ್ರವಾಗಿಯೇ ಉಳಿದುಬಿಡುತ್ತದೆ. ಕಾದಂಬರಿಯು ಬೆಳೆಯದೆ ಪ್ರಾರಂಭದಲ್ಲಿ ಯಾವ ರೀತಿ ಇರುತ್ತದೆಯೋ ಕೊನೆಯಲ್ಲೂ ಅದೇ ಜಾಗದಲ್ಲಿ ಉಳಿದುಬಿಡುತ್ತದೆ. “ಪ್ರೀತಿ ಇಲ್ಲದ ಮದುವೆ—ಮದುವೆ ಇಲ್ಲದ ಪ್ರೀತಿಯ” ಸಮಸ್ಯೆಯುಳ್ಳ ಟಾಲ್ಸಾಯ್ ಅವರ ‘ಅನ್ನಾಕರನೀನ’ (ಇದಕ್ಕೆ ಇನ್ನೂ ಬೇರೆ ಬೇರೆ ಆಯಾಮಗಳಿವೆ) ಕಾದಂಬರಿಯಲ್ಲಿ ಅನ್ನಾ ಮದುವೆಯ ನಂತರ ಪ್ರೀತಿಗೆ ಒಳಗಾಗಿ ಎದುರಿಸುವ ಸಮಸ್ಯೆ (ಇಲ್ಲಿಯಂತೆ ಗಂಡ-ಮಕ್ಕಳಿದ್ದು ) ಕೊನೆಗೆ ಸಾರ್ವತ್ರಿಕವಾಗುತ್ತ ಸಂಕೇತವೂ ಆಗುತ್ತಾ ಉತ್ತಮವಾಗಿ ಬೆಳೆಯುವುದನ್ನು ಗಮನಿಸಬಹುದು. ಉಯ್ಯಾಲೆ ಕಾದಂಬರಿಯಲ್ಲಿ ಸಂಕೇತವೇ ದೈತ್ಯವಾಗಿ ಬೆಳೆದು ಕಾದಂಬರಿಯ ಬೆಳವಣಿಗೆಯನ್ನು ತನ್ನ ಕಬಂಧಬಾಹುಗಳಿಂದ ಅದುಮಿ ಹಿಡಿದು ಕುಂಠಿತಗೊಳಿಸಿಯೂ ಬಿಡಬಹುದು ಎಂಬುದನ್ನು ಗಮನಿಸಬಹುದು.

ಇದಕ್ಕೆ ವಿರುದ್ಧವಾಗಿ ಇದೇ ಕಾದಂಬರಿಯಲ್ಲಿ ಲೇಖಕರು ಕೊಡುವ ಒಂದು ಪ್ರತಿಮೆ ಬೆಳೆಯುವ ರೀತಿಯನ್ನು ಗಮನಿಸಬಹುದು. “ಶೇಷಗಿರಿರಾಯ ಅಷ್ಟೇನೂ ಎತ್ತರವಿಲ್ಲದಿದ್ದರೂ, ದೃಢಕಾಯ, ಅಂತಹ ಸುರೂಪವೇನಲ್ಲದಿದ್ದರೂ ಕುರೂಪಿಯೇನಲ್ಲ, ಆದರೆ ಅವನ ಹಣೆಯಮೇಲೆ ಎಡಭಾಗದಲ್ಲಿದ್ದ ಮೂರುಕಾಸಿನಗಲದ ಸುಟ್ಟಗುರುತಿನ ಕಲೆ ಅವನ ಮುಖವನ್ನು ಸ್ವಲ್ಪಮಟ್ಟಿಗೆ ವಿಕಾರಗೊಳಿಸಿತ್ತು. ಅವನು ಕೋಪಾವಿಷ್ಟನಾದಾಗ ಇಲ್ಲವೆ ದುಃಖಭಾರದಿಂದ ಪರಿತಪಿಸಿದಾಗ ಶೇಷಗಿರಿರಾಯನ ಹಣೆಯ ಮೇಲಿನ ಸುಟ್ಟ ಗಾಯದ ಗುರುತು ಇನ್ನೂ ಅಗಲವಾಗಿ ಇನ್ನೂ ವಿಕಾರ ವಾಗಿ ಕಾಣುತ್ತಿತು-ರಾಧೆಯು ದೃಷ್ಟಿಗೆ.”

ಶೇಷಗಿರಿರಾಯನ “ಮೂರು ಕಾಸಿನಗಲದ ಸುಟ್ಟ ಗುರುತಿನ ಕಲೆ” ರಾಧೆ ಯೊಡನೆ, ಕೃಷ್ಟೇಗೌಡನೊಡನೆ, ಮಗಳು ಪ್ರಭಾವತಿಯೊಡನೆ ಪ್ರತಿಕ್ರಿಯಿಸುವಾಗಲೆಲ್ಲ ಹೇಗಾಗುತ್ತಿರಬಹುದೆಂದು ಓದುಗನಿಗೆ ಅನ್ನಿಸುತ್ತಲೇ ಶೇಷಗಿರಿರಾಯನ ಪಾತ್ರ ಹೆಚ್ಚುವರಿ ಪಡೆಯುವುದರಲ್ಲಿ, ಓದುಗನ ಗಮನ ಸೆಳೆಯುವುದರಲ್ಲಿ ಯಶಸ್ವಿಯಾದಂತೆ, ಈ ಕಾದಂಬರಿಯಲ್ಲಿ ಬರುವ ಸಂಕೇತ ಒಮ್ಮೆ ಒಗಟು ಬಿಡಿಸಿ ಓದುಗನಿಗೆ ಅರ್ಥವಾದಾಕ್ಷಣ ಮಾಯವಾಗಿ ಬಿಡುತ್ತದೆ ಎನಿಸುತ್ತದೆ. ಇಲ್ಲಿ ಒಂದು ಪ್ರತಿಮೆ ಪಡೆಯುವ ವೈಶಾಲ್ಯತೆಯನ್ನು, ಶಕ್ತಿಯನ್ನು ಕಾದಂಬರಿಯ ಸಂಕೇತ ಪಡೆಯುವುದರಲ್ಲಿ ಸೋಲುತ್ತದೆಯಲ್ಲವೇ?

ಕಾದಂಬರಿಯೊಳಗೆ ಲೇಖಕರಿಗೆ ಅಡ್ಡಬರಬೇಕಾಗಿದ್ದ ಮತ್ತೊಂದು ಸಮಸ್ಯೆ ಜಾತಿಪದ್ದತಿಯದು, ಇದನ್ನು ಕೂಡ ಲೇಖಕರು ಸುಲಭವಾಗಿ ಪರಿಹರಿಸಿಕೊಂಡುಬಿಟ್ಟಿದ್ದಾರೆ. ರಾಧೇ ಒಬ್ಬ ಶೂದ್ರನನ್ನು ತನ್ನೊಳಗೆ ಬರಮಾಡಿಕೊಳ್ಳುವ ಮೊದಲು ಆ ಪಾತ್ರ ಎಷ್ಟರಮಟ್ಟಿಗೆ ತಯಾರಿ ಮಾಡಿಕೊಂಡಿದೆ ಎಂಬುದು ಕಾದಂಬರಿಯಲ್ಲಿ ಇಲ್ಲ. ಕೃಷ್ಣೇಗೌಡನ ಪರಿಚಯವಾಗುವುದಕ್ಕೆ ಮುಂಚೆ ಶೂದ್ರರ ಬಗ್ಗೆ ರಾಧೆಗಿದ್ದ ಪ್ರಜ್ಞೆ ಕಾದಂಬರಿಯಲ್ಲಿ ಕಾಣುತ್ತದೆ. “ಶೇಷಗಿರಿರಾಯನ ಇತರ ಕಾಲೇಜಿನ ಬ್ರಾಹ್ಮಣೇತರ ಮಿತ್ರರ ಎಂಜಲೆಲೆ ಎತ್ತುವ ತಂಟೆಗೇ ಹೋಗುವುದಿಲ್ಲ .” (ಪುಟ ೮೫) ಎಂದು ಲೇಖಕರೇ ಕಾದಂಬರಿಯಲ್ಲಿ ಬಂದು ಹೇಳಿಬಿಡುತ್ತಾರೆ. ಕೃಷ್ಣೇಗೌಡನನ್ನು ಕಂಡಕೂಡಲೇ ಅವಳ ಭಾವ “ಥೇಟ್ ಬ್ರಾಹ್ಮಣನಂತೆಯೇ ಕಾಣುತ್ತಿರುವನಲ್ಲ” (ಪುಟ 84) ಎಂಬುದು. ಈ ಎರಡೂ ಅನಿಸಿಕೆಗಳು ಕಾದಂಬರಿಯಲ್ಲಿ ಪಕ್ಕಪಕ್ಕದಲ್ಲೇ ಬರುತ್ತವೆ. ಇದೇ ರೀತಿ ರಾಧೆ ಕೃಷ್ಟೇಗೌಡನ ಮನಸ್ಸಿನಲ್ಲಿಯೂ ಜಾತಿಯ ಭೇದಭಾವವಿಲ್ಲ ಎಂಬುದನ್ನು ತಕ್ಷಣ ಮೂಡಿಸುವುದರಲ್ಲಿ ಯಶಸ್ವಿಯಾಗಿ ಬಿಡುತ್ತಾಳೆ. “ಬ್ರಾಹ್ಮಣರು ಒಕ್ಕಲಿಗನಾದ ತನ್ನನ್ನು ಶೂದ್ರನೆಂದು ಕನಿಷ್ಟವಾಗಿ ಕಾಣುತ್ತಾರೆ. ಈಕೆ ಬ್ರಾಹ್ಮಣ ಕುಲದಲ್ಲಿ ಜನಿಸಿದವಳು. ಹಾಗಿದ್ದೂ ಭೇದ ತೋರಿಸದೆ ತನ್ನ ಎಂಜಲೆಲೆ ಎತ್ತುವಳಲ್ಲ.” (ಪುಟ 84)

ಅಂತೆಯೇ ರಾಧೆ ಕೃಷ್ಟೇಗೌಡನ ಮನೆಗೆ (ಶ್ರೀರಂಗಪಟ್ಟಣದಲ್ಲಿ) ಹೋದಾಗ ಬಹಳ ಸಲೀಸಾಗಿ ಅವರ ಮನೆಯಲ್ಲಿ ಒಂದಾಗಿಬಿಡುತ್ತಾಳೆ, ಎರಡನೇ ಬಾರಿ ಹೋದಾಗ ತಿರಸ್ಕೃತಳಾಗುವುದು (ಕೃಪ್ಲೇಗೌಡನ ತಾಯಿ ಮತ್ತು ತಂಗಿಯಿಂದ) ಬ್ರಾಹ್ಮಣ ಹೆಣ್ಣಾಗಿ ಅಲ್ಲ, ಕೃಷ್ಟೇಗೌಡನನ್ನು ಮರುಳು ಮಾಡಿದ ಹೆಣ್ಣಾಗಿ. ಇವೆಲ್ಲ ನಡೆಯುವುದು ಸ್ವಾತಂತ್ರಾಪೂರ್ವ ಸಮಾಜದಲ್ಲಿ ಎಂಬುದನ್ನು ಗಮನದಲ್ಲಿಡಬೇಕಾಗಿದೆ.

ಮೇಲೆ ಚರ್ಚಿಸಲಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡರೆ ಪ್ರಗತಿಶೀಲ ಪಂಥದ ಬರಹಗಾರರ ಗುಣ ಈ ಕಾದಂಬರಿಯಲ್ಲೂ ಎದು ಕಾಣುತ್ತದೆ. ಅದೆಂದರೆ ಕೃತಿಕಾರ ಪಾತ್ರಗಳ ಜಗತ್ತನ್ನು ಹೊಕ್ಕು ಅವುಗಳ ಜೀವನವನ್ನು ಕಾಣದೆ ಅವುಗಳನ್ನೂ ಕೃತಿಕಾರನ ಜಗತ್ತಿನಿಂದ ಹೊರಗೆ ನಿಂತು ಕಾಣುವುದು ಮತ್ತು ಮೇಲೆ ಚರ್ಚಿಸಿದ ಕಡೆಗಳಲ್ಲಿ ಅನುಭವದ ಸರಳೀಕರಣವೂ ಆಗಿಬಿಟ್ಟಿದೆ ಎನ್ನುವದು.

ಈ ಅಂಶಗಳನ್ನೊಳಗೊಂಡಿದ್ದೂ ಈ ಕಾದಂಬರಿ ಪ್ರಗತಿಶೀಲ ಬರಹಗಾರರ ಕೃತಿಗಳಿಗಿಂತ ಭಿನ್ನವಾಗಿದೆ ಎಂದು ಅನ್ನಿಸದೆ ಇರುವುದಿಲ್ಲ. ಪ್ರಗತಿಶೀಲರ ಕೃತಿಯಲ್ಲಾಗಿದ್ದರೆ ಇಲ್ಲಿಯ ಪಾತ್ರಗಳು ಸಂಪೂರ್ಣ ‘ಟೈಪ್’ ಆಗಿ ಬಂದುಬಿಡಬಹುದಾಗಿತ್ತು. ರಾಧೆಯು ಯಾವ ಅಡೆತಡೆ, ತೊಳಲಾಟಗಳು ಇಲ್ಲದೆ ಕೃಷ್ಣೇಗೌಡನ ಜೊತೆ ಓಡಿ ಹೋಗಿಬಿಡಬಹುದಾಗಿತ್ತು. ಆದರೆ ಚದುರಂಗರ ಕೈಯಲ್ಲಿ ರಾಧೆಯ ಪಾತ್ರ ಹೆಚ್ಚು ಸೂಕ್ಷ್ಮವಾಗಿಯೇ ಚಿತ್ರಿತವಾಗಿದೆ , ತೊಳಲಾಟವಾಗಿಯೇ ಉಳಿದುಕೊಂಡಿದೆ.

ನವ್ಯ ಸಾಹಿತ್ಯದ ಪ್ರಮುಖ ಧೋರಣೆಯಾದ ‘ವ್ಯಕ್ತಿ ಮುಖ್ಯ’ ಚಿತ್ರಣ ಈ ಕಾದಂಬರಿಯ ಉದ್ದಕ್ಕೂ ಕೆಲಸ ಮಾಡುತ್ತದೆ. ಪ್ರಶ್ನೆಗೆ ಪರಿಹಾರ ಒದಗಿಸಿ ಬಿಡದೆ ಪ್ರಶ್ನೆಯನ್ನು ತನ್ನ ಎಲ್ಲ ಕ್ಲಿಷ್ಟತೆಯ ಆಯಾಮಗಳಲ್ಲಿಯೂ ತೂಗಿನೋಡುವ ಗುಣ ಈ ಕಾದಂಬರಿಯಲ್ಲಿದೆ. 1960ರ ವರೆಗೆ ಬಂದಿದ್ದ ನವ್ಯ ಕಾವ್ಯ ಮತ್ತು ನವ್ಯದ ಸಣ್ಣಕಥೆಗಳಲ್ಲಿ ಪ್ರಯೋಗಿಸಲ್ಪಟ್ಟಂತಹ ಸಂಕೇತ ಪ್ರಾಧಾನ್ಯತೆಯನ್ನು ಕಾದಂಬರಿಗೆ, ಪ್ರಾಯಶಃ ಮೊದಲಿಗೆ ಅಳವಡಿಸಿದ್ದು , ಉಯ್ಯಾಲೆಯ ಕೆಲವು ಪ್ರಮುಖ ಗುಣಗಳಾದಂತೆಯೇ ನವ್ಯ ಕಾದಂಬರಿಯ ಪ್ರಕಾರಕ್ಕೆ ಓದುಗರನ್ನು ಬರಮಾಡಿಕೊಳ್ಳುವ , ಸಿದ್ದಪಡಿಸುವ ಕೆಲಸವನ್ನು ಮಾಡುತ್ತದೆ. ಇದನ್ನು ಈಕಾದಂಬರಿಯ ವಿಶ್ಲೇಷಣೆ ಸಿದ್ಧಪಡಿಸುತ್ತದೆ ಎಂದುಕೊಂಡಿದ್ದೇನೆ. ಏಕೆಂದರೆ ಉಯ್ಯಾಲೆಯ ಸಂಕೇತದ ಮೂಲಕ ಕಾದಂಬರಿಕಾರರ ಪ್ರಜ್ಞೆ ವಿವಿಧ ಸ್ತರಗಳಲ್ಲಿ ಕೆಲಸಮಾಡುವುದನ್ನು ಗಮನಿಸಬಹುದು.

ಈ ವಿಷಯದಲ್ಲಿ ಚದುರಂಗರು ಆ ಕಾಲಕ್ಕೆ ಕಾದಂಬರಿ ಓದುಗರಿಗಿದ್ದ ಅಭಿರುಚಿಗಿಂತ ಭಿನ್ನವಾದ ಅಭಿರುಚಿಯನನ್ನು ಬೆಳೆಸಿಕೊಳ್ಳುವಂತೆ ,ಆಗಲೇ ಕಾದಂಬರಿಯಲ್ಲಿ ಸ್ಥಾಪಿತವಾದ ಕೆಲವು ನಿಶ್ಚಿತ ಧೋರಣೆ ಮತ್ತು ಅನಿಸಿಕೆಗಳನ್ನು ಕಲಕಿರುವುದರಲ್ಲಿ ಅನುವಾನವಿಲ್ಲ ಮತ್ತು ಮುಂದೆ ಹುಟ್ಟಿದ ಸಾಂಕೇತಿಕ ನವ್ಯ ಕಾದಂಬರಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಲ್ಲಿ ಒಂದು ಭೂಮಿಕೆ ಸೃಷ್ಟಿಸಿರುವ ಪ್ರಮುಖ ‘ಮೈನರ್’ ಬರಹಗಾರರಾಗಿ ಕಾಣುತ್ತಾರೆ.

ಕಾಮೆಂಟ್‌ಗಳಿಲ್ಲ: