ಸೌಜನ್ಯ: ಪ್ರಜಾವಾಣಿ
ಕೆಪಿಎಸ್‌ಸಿ ನೇಮಕಾತಿ ಪಟ್ಟಿಯಲ್ಲಾಗಿರುವ ಭ್ರಷ್ಟಾಚಾರದ ಹಿಂದೆ ಅನೇಕರ ಕೈವಾಡ ಇದೆ ಎಂಬುದು ಸಾಬೀತಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಬೇಕು. ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ನಿರ್ಧಾರ ಪ್ರಕಟಿಸಿ ಭ್ರಷ್ಟಾಚಾರದ ವಿರುದ್ಧ ಕ್ರಿಯಾಶೀಲವಾಗಿರುವಾಗ ಜೆಡಿಎಸ್ ನಾಯಕರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಸುರಿಸುತ್ತಿರುವ ಕಣ್ಣೀರು ಅತ್ಯಂತ ಅಪಾಯಕಾರಿ.
ಅದು ನಾಳಿನ ಕರ್ನಾಟಕವನ್ನು ಬಲಿತೆಗೆದುಕೊಳ್ಳುವಂತಹ ಕಣ್ಣೀರು. ದೇವೇಗೌಡ ಹಾಗೂ ಅವರ ಮಗ ಕುಮಾರಸ್ವಾಮಿ ತಮ್ಮ ತಪ್ಪಿನಿಂದಾಗಿರುವ ಅನೇಕ ಪ್ರಕರಣಗಳ ಪಶ್ಚಾತ್ತಾಪದಿಂದ ಕಣ್ಣೀರು ಸುರಿಸಿದ್ದರೆ ಕರ್ನಾಟಕದ ಮತದಾರರು ಅವರನ್ನು ಕ್ಷಮಿಸುತ್ತಿದ್ದರು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಅವರ ಪಕ್ಷಕ್ಕೆ ಜನತೆ ಕೊಟ್ಟಿರುವ ತೀರ್ಪನ್ನು ತಂದೆ, ಮಕ್ಕಳು ಇಷ್ಟು ಬೇಗ ಮರೆಯುವ ನತದೃಷ್ಟ ಪರಿಸ್ಥಿತಿಗೆ ತಲುಪಿರುವುದು ವಿಷಾದನೀಯ.
ದೇವೇಗೌಡರ ಕುಟುಂಬದ ಜಾಣ ಅವ್ಯವಹಾರಗಳ ಸಮಗ್ರ ತನಿಖೆ ಆಗಬೇಕಾಗಿದೆ. ಇಪ್ಪತ್ತು ವರ್ಷಗಳ ಹಿಂದಿನಿಂದಲೂ ಕೆಪಿಎಸ್‌ಸಿ ನೇಮಕಾತಿಗಳಲ್ಲಿ ಈ ಕುಟುಂಬ ಎಷ್ಟೊಂದು ಸ್ವಜನ ಪಕ್ಷಪಾತವನ್ನು ಮಾಡಿದೆ ಎಂಬುದು ಬಯಲಾಗಬೇಕಾಗಿದೆ. ಪರೋಕ್ಷವಾಗಿ ಒಂದು ಜಾತಿ ಬಣವನ್ನು ಕೆಪಿಎಸ್‌ಸಿ ಮೂಲಕ ಅಧಿಕಾರಶಾಹಿಯಾಗಿ ರೂಪಾಂತರಿಸಿ ಆಡಳಿತ ವ್ಯವಸ್ಥೆಯಲ್ಲಿ ಪ್ರತಿಷ್ಠಾಪಿಸುವುದರ ಹಿಂದೆ ಗೌಡರ ಕುಟುಂಬದ ಕೈವಾಡ ಎಷ್ಟಿದೆ? ಮಧ್ಯಕಾಲೀನ ಭೂಮಾಲೀಕ ಪಾಳೇಗಾರಿಕೆ ರಾಜಕಾರಣವು ಇಪ್ಪತ್ತನೇ ಶತಮಾನದಲ್ಲಿ ಅವರ ಕುಟುಂಬದಿಂದಲೇ ಅತ್ಯಂತ ಚಾಣಾಕ್ಷತೆಯಿಂದ ಸಾಧ್ಯವಾಗಿದೆ. ಅದಕ್ಕಾಗಿ ‘ಬಡ ಬೋರೇಗೌಡನನ್ನು ಇವರು ಬಳಸಿಕೊಂಡಿದ್ದಾರೆ.
ವಿಪರ್ಯಾಸ ಎಂದರೆ ಬಡ ಬೋರೇಗೌಡರಿಗಾಗಲಿ ಅವರ ಮಕ್ಕಳಿಗಾಗಲೀ ‘ತಮ್ಮ ಜಾತಿಯನ್ನು ಜಾತ್ಯತೀತ ಸಂವಿಧಾನದ ನಡುವೆಯೂ ಇಷ್ಟೊಂದು ಅಧರ್ಮವಾಗಿ ಬಳಸುತ್ತಿರುವ ಬಗ್ಗೆ ಅನೇಕ ಅಮಾಯಕರಿಗೆ ಗೊತ್ತೇ ಇಲ್ಲ. ಬಡತನ, ದಯನೀಯ ಸ್ಥಿತಿಗಳಿಗೆ ತುತ್ತಾಗಿರುವವರಿಗೆ, ನಿರುದ್ಯೋಗಿ ಯುವಸಮೂಹಕ್ಕೆ, ಅಂಗನವಾಡಿ ಕಾರ್ಯಕರ್ತೆಯರ ಬವಣೆಗೆ ಸುರಿಸಲು ಇವರ ಬಳಿ ಕಣ್ಣೀರು ಇಲ್ಲ. ಅನ್ಯಾಯಕ್ಕೆ ಒಳಗಾದ ದಿಟ್ಟೆ ಮೈತ್ರಿ ಅವರ ಬಗ್ಗೆ ಅಪಸ್ವರ ಎತ್ತಿರುವುದರ ಹಿಂದೆ ಗೌಡರ ಕುಟುಂಬದ ದಲಿತ ವಿರೋಧಿ ನೀತಿಯೂ ಪ್ರತಿಧ್ವನಿತವಾಗಿದೆ.
ಕುಮಾರಸ್ವಾಮಿಯವರು ಮತ್ತು ದೇವೇಗೌಡರು ಭ್ರಷ್ಟಾಚಾರದ ಪರವಾಗಿ ಕಣ್ಣೀರು ಹಾಕಿ ಸರ್ಕಾರದ ಈ ಕುರಿತ ತೀರ್ಮಾನಕ್ಕೆ ಪ್ರತಿ ಸವಾಲು ಹಾಕಬಾರದಿತ್ತು. ಇದು ದುಷ್ಟ ರಾಜಕಾರಣವಲ್ಲದೆ ಬೇರೇನೂ ಅಲ್ಲ.
–ಡಾ.ಮೊಗಳ್ಳಿ ಗಣೇಶ್, ಪ್ರೊ. ಮಂಜುನಾಥ ಬೇವಿನಕಟ್ಟಿ, ಪ್ರೊ. ಸಿ. ಮಹದೇವ, ರಮೇಶ್ ನಾಯಕ, ಡಾ. ವಾಸುದೇವ ಬಡಿಗೇರ, ಡಾ. ಹೆಬ್ಬಾಲೆ ನಾಗೇಶ್, ಡಾ. ಚಿನ್ನಸ್ವಾಮಿ ಸೋಸಲೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ
–ಡಾ.ಮೊಗಳ್ಳಿ ಗಣೇಶ್, ಪ್ರೊ. ಮಂಜುನಾಥ ಬೇವಿನಕಟ್ಟಿ, ಪ್ರೊ. ಸಿ. ಮಹದೇವ, ರಮೇಶ್ ನಾಯಕ, ಡಾ. ವಾಸುದೇವ ಬಡಿಗೇರ, ಡಾ. ಹೆಬ್ಬಾಲೆ ನಾಗೇಶ್, ಡಾ. ಚಿನ್ನಸ್ವಾಮಿ ಸೋಸಲೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ