ಡೋಲಿನ ಟಕ್ಕುಗಳು..
ಈ ದೇಶದಲ್ಲಿ 600ಕ್ಕೂ ಹೆಚ್ಚು ಆದಿವಾಸಿ ಬುಡಕಟ್ಟು ಪಂಗಡಗಳಿವೆ. ಈ ಎಲ್ಲಾ ಆದಿವಾಸಿ ಪಂಗಡಗಳಲ್ಲೂ ಒಟ್ಟು 600ಕ್ಕೂ ಹೆಚ್ಚು ಪ್ರಕಾರದ ಡೋಲುಗಳಿವೆ! ಅದರಲ್ಲಿ 'ಕೊರ್ರೆ ಕಡ್ಡಾಯಿ' (ಕೊರಗರ ಡೋಲು) ಕೂಡಾ ಒಂದು. ಇತರ ಎಲ್ಲಾ ಆದಿವಾಸಿ ಸಮುದಾಯಗಳ ಡೋಲಿನ 'ಟಕ್ಕು' (ಹೊಡೆತದ ಶೈಲಿ) ಗಿಂತಲೂ, ಕೊರಗರ ಟಕ್ಕುಗಳು ಭಿನ್ನ. ಕೊರಗರ ಡೋಲಿನ ಲಯಬದ್ಧ ಹೊಡೆತಕ್ಕೆ, ಅದರ ಜೊತೆಗೆ ಇಂಪಾದ ಕೊಳಲಿನ ಧ್ವನಿಗೆ ಮನಸೋಲದವರಿಲ್ಲ.
ಕೊರಗರ ಡೋಲಿನ ಟಕ್ಕುಗಳ ಒಂದು ಪರಿಚಯ ನಿಮಗಾಗಿ...
> ನಡತೆದ ಟಕ್ಕು : ನಡೆದು ಹೋಗುವ ಸಂದರ್ಭ ಆಯಾಸ ನೀಗಿಸಿಕೊಳ್ಳಲು ಹೊಡೆಯುವ ಟಕ್ಕು.
> ದಿಬ್ಬಣದ ಕೊರಳ್ : ಹಿಂದೆ ಕೊರಗರಲ್ಲಿ - ಮದುಮಗನ ದಿಬ್ಬಣ, ಮದುಮಗಳ ಮನೆಗೆ ಬರಬತ್ತಿದ್ದುದು ರೂಢಿ. ಹಾಗೆ ಬರುವಾಗ ಕಡ್ಡಾಯಿ ಬಡಿಯುವ ಶೈಲಿ.
> ದಾರೆದ ಟಕ್ಕು : ಮದುವೆ ಸಂದರ್ಭ ಧಾರೆ ಎರೆಯುವಾಗ ಕಡ್ಡಾಯಿ ಬಡಿಯುವ ಶೈಲಿ.
> ಜಾಪಿಡ ಕೊರುನ ಟಕ್ಕು : ಮಗಳನ್ನು ಬೀಳ್ಕೊಡುವಾಗ ಟಕ್ಕು.
> ಕೊನ್ಕೆದ ಟಕ್ಕು : ಕುಣಿತದ ಟಕ್ಕು/ಮನೊರಂಜನೆಯ ಟಕ್ಕು. ಈ ಪ್ರಕಾರದಲ್ಲಿ ಸುಮಾರು 120ಕ್ಕೂ ಹೆಚ್ಚು ರೀತಿಯ ಟಕ್ಕುಗಳಿವೆ.
ಇವೆಲ್ಲವೂ ಕೊರಗರ ಬದುಕಿಗೆ, ರೀತಿ ರಿವಾಜಿಗೆ ಮಾತ್ರ ಸಂಬಂಧಪಟ್ಟ ಸಂಪ್ರದಾಯಬದ್ಧ ಟಕ್ಕುಗಳು. ಇತರ ಸಮುದಾಯದ ಬಿಟ್ಟಿ ಸೇವೆಗೆ - ಈ ಟಕ್ಕುಗಳನ್ನು ಕೊರಗರು ಬಡಿಯುತ್ತಲೇ ಇರಲಿಲ್ಲ!
ಈ ತುಳುನಾಡಿನಲ್ಲಿ 'ಅಜಲು ಚಾಕರಿ' ಎಂಬ 'ಬಿಟ್ಟಿ ಸೇವೆ'ಗೆ ಒಳಗಾದ ಕೊರಗ ಸಮುದಾಯ, ಇಲ್ಲಿನ ಇತರ ಜನವರ್ಗದ ಕಾರ್ಯಕ್ರಮಗಳಿಗೆ ತಮ್ಮ ಕಡ್ಡಾಯಿ ಬಳಸಬೇಕಾಗಿ ಬಂತು. ಆ ಸಂದರ್ಭದಲ್ಲಿನ ಟಕ್ಕುಗಳು ಈ ರೀತಿ ಇವೆ..
> ಕಂಬಳದ ಟಕ್ಕು : ತುಳುನಾಡಿನ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ಕೊರಗರು 'ಫನಿ ಕಲ್ಲುನು' ಎಂಬ ಅನಿಷ್ಟ ಸಂಪ್ರದಾಯ ಪಾಲಿಸಬೇಕಾದ ಸಂದರ್ಭದಲ್ಲಿ ಬಡಿತದ ಶೈಲಿ.
> ಸಾವುದ ಟಕ್ಕು : ತಮ್ಮ ಅಜಲು ಸೇವೆಗೆ ಒಳಪಟ್ಟ ವ್ಯಾಪ್ತಿಯಲ್ಲಿ ಯಾರಾದರು ಸಾವಿಗೀಡಾದರೆ, ಆ ಸಂದರ್ಭ ಬಿಡಿಯುವ ಶೋಕದ ಅಥವಾ ಸೂತಕದ ಛಾಯೆ ಮೂಡಿಸುವ ಶೈಲಿ.
ಇನ್ನು ಊರ ಜಾತ್ರೆ, ಕೋಲ, ನೇಮದ ಸಂದರ್ಭದಲ್ಲಿ ಕೆಲವೊಂದು 'ಕೊನ್ಕೆದ ಟಕ್ಕು'ಗಳನ್ನು ಬಡಿಯುತ್ತಿದ್ದರು.
ಕಡ್ಡಾಯಿಯ (ಡೋಲು) ಅಬ್ಬರದ ಶಬ್ಧಕ್ಕೆ ಕಂರ್ಡೆ (ಚೆಂಡೆ) ಧ್ವನಿ, ಕೊರಲ್ (ಕೊಳಲಿ)ನ ಇಂಪು, ಚಾವಲ (ಕೈತಾಳ)ದ ಸೇರಿದರೆ ಅದರ ಇಂಪೇ ಬೇರೆ!
ಇತರ ಆದಿವಾಸಿ ಸಮುದಾಯದಲ್ಲಿ ಹೆಚ್ಚೆಂದರೆ ಮೂವತ್ತು ಟಕ್ಕುಗಳನ್ನು ಮೀರುವುದಿಲ್ಲ. ಆದರೆ, ಬರೇ ಕೊರಗ ಸಮುದಾಯದಲ್ಲೇ 200ಕ್ಕೂ ಹೆಚ್ಚು ಪ್ರಕಾರದ ಟಕ್ಕುಗಳಿರುವುದು ವಿಶೇಷ!
- ಹೃದಯ
ಅಜಲು ಎಂದರೆ...
- ಬಾಬು ಕೊರಗ, ಪಾಂಗಾಲ
'ಅಜಲು' ಎಂಬ ಪದವನ್ನು - 'ಹಕ್ಕು', 'ಹಕ್ಕಿನ ಪ್ರದೇಶ', 'ಮೀಸಲು ಪ್ರದೇಶ', 'ತುಂಡು', 'ಭಾಗ' ಎಂಬುದಾಗಿ ಅರ್ಥೈಸಿಕೊಳ್ಳಬಹುದು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ - ಉಡುಪಿ ಇವರ 'ತುಳು ನಿಘಂಟು' ಸಂಪುಟ ಒಂದರ ಪ್ರಕಾರ 'ಅಜಲು ಎಂದರೆ ಧಾರ್ಮಿಕ ಸಮಾಜಿಕ ಆಚರಣೆಗಳಲ್ಲಿ, ವಿಶಿಷ್ಟ ಕರ್ತವ್ಯಗಳನ್ನು ಮಾಡುವ ವಂಶಪಾರಂಪರ್ಯದಿಂದ ಬಂದ ಅಧಿಕಾರ ವಲಯ' (Juridiction of One's Occupation; Service in Shrines and Other Social Ceremonies) ಎಂದಿದೆ. ಅಜಲು ಎಂಬುದು ಸೇವಾ ನಿಬಂಧನಾ ಪ್ರದೇಶವಾಗಿದೆ. ಒಂದು ಪ್ರದೇಶದಲ್ಲಿ ನಿರ್ದಿಷ್ಟ ಪಂಗಡ ಯಾ ಗುಂಪಿನವರ ಸೇವೆಯ ಹಕ್ಕು ಅಥವಾ ಹೊಣೆಗಾರಿಕೆ.
ಕೊರಗರ ಅಜಲು ಎಂದರೇನು?
ಕೊರಗ ಜನಾಂಗವು ಅನುಭೋಗಿಸುವ 'ಅಜಲು ಪದ್ಧತಿ'ಯನ್ನು ವ್ಯಾಖ್ಯಾನಿಸುವುದು ಅಥವಾ ಅರ್ಥೈಸುವುದು ಸುಲಭವಲ್ಲ. ಅಜಲು ಚಾಕರಿಯನ್ನು ಮಾಡಿ ಸ್ವ ಅನುಭವ ಪಡೆದು ಕೊನೆಗೆ ಅದನ್ನು ಧಿಕ್ಕರಿಸಿ, ಶಿಕ್ಷಣಕ್ಕೆ ಮೊರೆ ಹೋದ ನಂದಿಕೂರಿನ ಮೋಹನ ಅಡ್ವೆ (ಬಿ.ಇ) ಯವರ ಪ್ರಕಾರ, 'ಕೊರಗರ ಆತ್ಮಗೌರವ, ಸ್ವಾಭಿಮಾನ ಸ್ವಾವಲಂಬನೆಯನ್ನು ಬಲಿತೆಗೆದುಕೊಂಡು ಅವರಲ್ಲಿ - ಪರಾವಲಂಬನೆ, ಕೀಳರಿಮೆ, ಮೂಢನಂಬಿಕೆ, ಜಡತ್ವ, ನಿಷ್ಕ್ರಿಯತೆ, ಭೀತಿ ಹುಟ್ಟಿಸಿ, ಬೆಳೆಸಿ ಅವರನ್ನು ಅಂತರ್ ಮುಖಿಗಳನ್ನಾಗಿ ಮಾಡಿ, ತಮ್ಮ ಬಗೆಗೆ ನಕರಾತ್ಮಕ ಧೋರಣೆ ಮತ್ತು ದುಶ್ಚಟಗಳಿಗೆ ಒಲವು ಮೂಡಿಸಿ, ಸಾಮಾಜಿಕ ಅಂತರವನ್ನು ಹೆಚ್ಚಿಸಿರುವ ಒಂದು ಅಮಾನವೀಯ, ಅವಮಾನಕರ ಕಾರ್ಯನಿಬಂಧನಾ ವ್ಯವಸ್ಥೆಯೇ - ಕೊರಗರ ಅಜಲು.'
ಸಮಾಜ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಮತ್ತಡಿ ಕಾಯರಪಲ್ಕೆ (ಎಂ.ಎ.ಎಂ.ಫಿಲ್) ಯವರ ಪ್ರಕಾರ, 'ಮನುಷ್ಯರನ್ನು ಪ್ರಾಣಿಗಳನ್ನಾಗಿಸಿ ಜಡತ್ವ, ಅಪನಂಬಿಕೆ, ಅಗೌರವವನ್ನು ತುಂಬಿಸಿ, ಆತ್ಮಗೌರವ ನಿರತ ಸ್ವಾಭಿಮಾನವನ್ನು ಕಳೆದು, ಇತರರ ಹಿತಕ್ಕಾಗಿ ತಮ್ಮ ಸುಖವನ್ನು ಮರೆತು, ನಂಬಿಕೆ, ದಬ್ಬಾಳಿಕೆ, ದೌರ್ಜನ್ಯಗಳಿಗಾಗಿ ತನ್ನ ಮೈಮರೆತು, ಅಪಾಯದ ಅವಹೇಳನದ ಊರಿನ ಚಾಕರಿ ಮಾಡಿಸುವ ಪದ್ಧತಿಯನ್ನು ಕೊರಗರ ಅಜಲು ಎನ್ನಬಹುದು.'
ಬಹುಸಂಖ್ಯಾತ ಸಮಾಜಗಳು ಊರಿನ ನೈರ್ಮಲ್ಯದ ಕೆಲಸಗಳಿಗಾಗಿ ಹಾಗೂ ಸ್ವಪ್ರತಿಷ್ಟೆಗಾಗಿ - ಅಸ್ಪೃಶ್ಯತೆ ಮತ್ತು ಧಾರ್ಮಿಕ ಕಟ್ಟುಪಾಡುಗಳ ಚೌಕಟ್ಟಿನೊಳಗೆ ಮುಗ್ಥ ಕೊರಗ ಜನಾಂಗವನ್ನು ಪೂರ್ಣ ಗುಲಾಮರನ್ನಾಗಿಯೇ ಉಳಿಸಿಕೊಂಡ ನಿರ್ದಿಷ್ಟವಾದ ಪ್ರದೇಶವನ್ನು 'ಕೊರಗರ ಅಜಲು' ಎನ್ನಬಹುದು.
ಬಹುಸಂಖ್ಯಾತ ಬಲಿಷ್ಠ ವರ್ಗಗಳು ತಮ್ಮ ಊರಿನ ನೈರ್ಮಲ್ಯದ ಕೆಲಸಗಳಾದ - ಗ್ರಾಮ ಸ್ವಚ್ಛತೆ, ಸತ್ತ ಪ್ರಾಣಿಗಳನ್ನು ತೆಗೆಯುವುದು, ಎಂಜಲೆಲೆ ತೆಗೆಯುವುದು ಇತ್ಯಾದಿಗಳನ್ನು ಕೊರಗರಿಂದ ಮಾಡಿಸುತ್ತಾರೆ. ಪ್ರತಿಷ್ಠೆಗಾಗಿ - ಸತ್ತವರ ಹೆಣ ಸುಡುವಾಗ, ಭೂತದ ನೇಮ, ಜಾತ್ರೆ, ಕಂಬಳ ಮುಂತಾದ ಧಾರ್ಮಿಕ ಸಾಂಸ್ಕೃತಿಕ ಕೆಲಸಗಳಲ್ಲಿ ಕೊರಗರಿಂದ ಪುಕ್ಕಟೆಯಾಗಿ ಡೋಲುವಾದನ ಮಾಡಿಸಿಕೊಂಡು, ಮನೋರಂಜನೆ ಪಡೆಯುತ್ತಾರೆ. ಧಾರ್ಮಿಕ ಕೇಂದ್ರಗಳೇ ಅಜಲಿನ ಮುಖ್ಯ ಭಾಗಗಳಾಗಿದ್ದರೂ, ಕೊರಗರು ಒಳಗೆ ಪ್ರವೇಶಿಸುವಂತಿಲ್ಲ. ಅಜಲಿನ ಎಲ್ಲಾ ಆಯಾಮಗಳಲ್ಲೂ ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಿಕೊಳ್ಳಲಾಗಿದೆ. ಶುದ್ಧಾಚಾರ, ಮೈಲಿಗೆ ಎಂಬ ಧಾರ್ಮಿಕ ಕಲ್ಪನೆಗಳನ್ನು ಸೃಷ್ಠಿಸಲಾಗಿದೆ. ಈ ಚೌಕಟ್ಟಿನೊಳಗೇ ಕೊರಗರನ್ನು ಸಂಪೂರ್ಣವಾಗಿ ಅಂತರ್ಮುಖಿಗಳನ್ನಾಗಿಸುವ, ಬದುಕಿನ ಧನಾತ್ಮಕ ಬದಲಾವಣೆಗೆ ಒಗ್ಗದಂತೆ ಪ್ರೇರೇಪಿಸುವ ಕ್ರಿಯೆಯು ನಿರಂತರವಾಗಿ ನಡೆಯುತ್ತಿರುತ್ತದೆ...
ಕೊರಗರ ಅಜಲಿನಲ್ಲಿ ಏನಿದೆ?
1. ಅಜಲಿನಲ್ಲಿ ಅಸ್ಪೃಶ್ಯತೆಯ ಬಹಿರಂಗ ಪ್ರದರ್ಶನವಿದೆ.
2. ಜೀತದ ಪ್ರತ್ಯಕ್ಷ ರೂಪವಿದೆ.
3. ಬೇಡಿಯೇ ತಿನ್ನಬೇಕಾದ ಶರ್ತವಿದೆ.
4. ಜಾತಿ ಆಧಾರಿತ ಮೇಲು - ಕೀಲು ಪ್ರತಿಪಾದಿಸಲಾಗುತ್ತದೆ.
5. ಪುರೋಹಿತಶಾಹಿಯ ಪಂಚಮರು ಎಂಬ ಆರೋಪವಿದೆ.
6. ಮೃಗೀಯ ವರ್ತನೆಗೆ ತಳ್ಳುವ ಪಾತ್ರವಿದೆ.
7. ಮಕ್ಕಳನ್ನು ಬಿಕಾರಿಗಳಾಗಿಸುವ ಅಂಶವಿದೆ.
8. ಕೊರಗರು ಇತರರೊಂದಿಗೆ ಬೆರೆಯುವಂತಿಲ್ಲ.
9. ದೇಹದ ಕಲ್ಮಶಗಳನ್ನು ತಿನ್ನಿಸುವ ವ್ಯವಸ್ಥೆ ಇದೆ (ಪಂಚಮ ದಾನ).
10. ಮಕ್ಕಳಿಗೆ ಶಿಕ್ಷಣ ಒಗ್ಗದಂತೆ ಮಾಡುವ ಚಮತ್ಕಾರವಿದೆ.
11. ಮದ್ಯಪಾನವನ್ನು ಅತಿಯಾಗಿ ಪ್ರೇರೇಪಿಸುತ್ತದೆ.
12. ಒಟ್ಟಾರೆಯಾಗಿ ಮನುಷ್ಯ ಬದುಕಿನ ಪರಿಕಲ್ಪನೆಯನ್ನು ಗೃಹಿಸಲು ಅವಕಾಶವೇ ಇರದ ಒಂದು ವ್ಯವಸ್ಥೆ ಈ ಅಜಲು ಪದ್ಧತಿ.
ಪಂಚಮ ದಾನ..
ಹಿಂದೂ ಜಾತಿ ಪದ್ಧತಿಯ ಚತುವರ್ಣಗಳಲ್ಲಿ ಕೊರಗರು ಸೇರದಿರುವುದರಿಂದ, ಅವರನ್ನು 'ಪಂಚಮರು' ಎಂದು ಆರೋಪಿಸಲಾಗಿದೆ! ಊರಲ್ಲಿ ಯಾರಾದರೂ ಕಾಯಿಲೆಗೆ ಬಿದ್ದಾಗ ಜ್ಯೋತಿಷ್ಯರ (ಬಲಿಮೆಯವರ) ಆದೇಶದಂತೆ, ಕೊರಗರಿಗೆ ಈ ಪಂಚಮ ದಾನವನ್ನು ನೀಡಲಾಗುತ್ತದೆ. ರೋಗಿಯನ್ನು ಅಂಗಳದಲ್ಲಿ ಪೂರ್ವಾಭಿಮುಖವಾಗಿ ಕುಳ್ಳಿರಿಸಿ, ಆತನ ಎದುರು ಗೆರಸೆಯಲ್ಲಿ ಬಾಳೆಎಲೆಯನ್ನು ಹಾಕಿ, ಅರೆಬೆಂದ ಅನ್ನವನ್ನು ಬಡಿಸುತ್ತಾರೆ. ಅದಕ್ಕೆ ಬೂದುಕುಂಬಳದ ನೀರು ಸಾರನ್ನು ಸುರಿದು ಬಳಿಕ ರೋಗಿಯ ಕೆಲವು ತಲೆಗೂದಲು ಹಾಗೂ ಉಗುರುಗಳನ್ನು ಕತ್ತರಿಸಿ ಅನ್ನಕ್ಕೆ ಬೆರೆಸುತ್ತಾರೆ. ಕೊನೆಗೆ ದಾನ ಪಡೆಯುವುದಕ್ಕಾಗಿ ಕರೆಸಲಾದ ಕೊರಗ ಹೆಂಗಸು ಅಂಗಳಕ್ಕೆ ಬಂದು, ಅನ್ನ ಸಮೇತ ಗೆರಸೆಯನ್ನು ಎತ್ತಿ ರೋಗಿಯ ತಲೆಗೆ ನೀವಾಳಿಸಿ, ಅದನ್ನು ತನ್ನ ವಶಕ್ಕೆ ಪಡೆಯುತ್ತಾಳೆ. ಜೊತೆಗೆ ಆ ಹೆಂಗಸಿನ ತಲೆಗೆ ಎಣ್ಣೆಯನ್ನು ಸುರಿಸುತ್ತಾರೆ. ರೋಗಿಯ ಚಿಂದಿ ಜಟ್ಟೆಗಳನ್ನು ಆಕೆಗೆ ಕೊಡುತ್ತಾರೆ. ಇಲ್ಲಿ ಜನರ ನಂಬಿಕೆಯಂತೆ, ರೋಗಿಯ ಕಾಯಿಲೆಯನ್ನು ಆ ಕೊರಗ ಹೆಂಗಸಿಗೆ ವರ್ಗಾಯಿಸುವುದಾಗಿದೆ! ಆದರೆ ಅನ್ನ, ಬಟ್ಟೆ, ಎಣ್ಣೆ ಇತ್ಯಾದಿಗಳನ್ನು ದಾನವಾಗಿ ನೀಡುವುದರೊಂದಿಗೆ, ಆ ನಂಬಿಕೆಯನ್ನು ಬಹಳ ನಾಜೂಕಾಗಿಯೇ ಬಳಸಿಕೊಳ್ಳಲಾಗಿದೆ. ಅದರ ವಿಮರ್ಶೆಯ ಗೋಜಿಗೆ ಹೋಗದ ಕೊರಗರು ಇಲ್ಲಿ ಬಲಿಪಶುಗಳು.
ಇಲ್ಲಿ ಗಂಭೀರವಾಗಿ ಚಿಂತಿಸಬೇಕಾದ ವಿಷಯವೆಂದರೆ, ಮಾನವ ದೇಹದ ಕಶ್ಮಲಗಳಾದ ತಲೆಕೂದಲು ಹಾಗೂ ಉಗುರುಗಳನ್ನು ಪ್ರಜ್ಙೆ ಇರುವ ಯಾರೊಬ್ಬನೂ ತನ್ನ ಮನೆಯೊಳಗೆ ತಪ್ಪಿಯೂ ಇರಗೊಡಲಾರನು. ಆದರೆ, ಕೊರಗರು ಉಣ್ಣಬೇಕಾದ ಅನ್ನಕ್ಕೆ ಅವುಗಳನ್ನು ಆ ಪ್ರಜ್ಙಾವಂತರು ಹಾಕುತ್ತಾರೆ. ಇದು ಊರವರು ಕೊರಗರೊಂದಿಗೆ ವರ್ತಿಸುವ ರೀತಿಯಾಗಿದೆ. ಇಲ್ಲಿ ಕೊರಗರು 'ಮನುಷ್ಯರೇ ಅಲ್ಲ' ಅನ್ನುವಂತೆ ನಡೆಸಿಕೊಳ್ಳುವ ಜನರು, ತಮ್ಮ ಕ್ರೂರ ಮುಖವನ್ನು ಬಹಿರಂಗಪಡಿಸುತ್ತಾರೆ.
ರೋಗಿಗಳು ಸಣ್ಣ ಮಕ್ಕಳಾದಲ್ಲಿ, ಕೊರಗ ಮಹಿಳೆಯ ಎದೆಹಾಲನ್ನು ಕುಡಿಸಲಾಗುತ್ತದೆ ಹಾಗೂ ಆಕೆಯಿಂದ ಮರುನಾಮಕರಣ ಮಾಡಿಸಲಾಗುತ್ತದೆ. ಕಾಯಿಲೆ ವಾಸಿಯಾಗಲು ಕೊರಗರ ಜಾತಿ, ಕುಲ ಯಾವುದೂ ಅಡ್ಡಿಯಾಗುವುದಿಲ್ಲ! ಆದರೆ, ಆ ಮಗುವನ್ನು ಮನೆಯೊಳಗೆ ಸೇರಿಸಿಕೊಳ್ಳುವುದಕ್ಕೆ ಮುನ್ನ ತಣ್ಣೀರಿನಿಂದ ಸ್ನಾನ ಮಾಡಿಸುತ್ತಾರೆ. ಯಾಕೆಂದರೆ, ಕೊರಗರು ಮುಟ್ಟಿದ ಮಗುವು ಮೈಲಿಕೆಯಾಗಿರುತ್ತದೆ!!
ಹಿಂದೂ ಜಾತಿ ಪದ್ಧತಿಯ ಚತುವರ್ಣಗಳಲ್ಲಿ ಕೊರಗರು ಸೇರದಿರುವುದರಿಂದ, ಅವರನ್ನು 'ಪಂಚಮರು' ಎಂದು ಆರೋಪಿಸಲಾಗಿದೆ! ಊರಲ್ಲಿ ಯಾರಾದರೂ ಕಾಯಿಲೆಗೆ ಬಿದ್ದಾಗ ಜ್ಯೋತಿಷ್ಯರ (ಬಲಿಮೆಯವರ) ಆದೇಶದಂತೆ, ಕೊರಗರಿಗೆ ಈ ಪಂಚಮ ದಾನವನ್ನು ನೀಡಲಾಗುತ್ತದೆ. ರೋಗಿಯನ್ನು ಅಂಗಳದಲ್ಲಿ ಪೂರ್ವಾಭಿಮುಖವಾಗಿ ಕುಳ್ಳಿರಿಸಿ, ಆತನ ಎದುರು ಗೆರಸೆಯಲ್ಲಿ ಬಾಳೆಎಲೆಯನ್ನು ಹಾಕಿ, ಅರೆಬೆಂದ ಅನ್ನವನ್ನು ಬಡಿಸುತ್ತಾರೆ. ಅದಕ್ಕೆ ಬೂದುಕುಂಬಳದ ನೀರು ಸಾರನ್ನು ಸುರಿದು ಬಳಿಕ ರೋಗಿಯ ಕೆಲವು ತಲೆಗೂದಲು ಹಾಗೂ ಉಗುರುಗಳನ್ನು ಕತ್ತರಿಸಿ ಅನ್ನಕ್ಕೆ ಬೆರೆಸುತ್ತಾರೆ. ಕೊನೆಗೆ ದಾನ ಪಡೆಯುವುದಕ್ಕಾಗಿ ಕರೆಸಲಾದ ಕೊರಗ ಹೆಂಗಸು ಅಂಗಳಕ್ಕೆ ಬಂದು, ಅನ್ನ ಸಮೇತ ಗೆರಸೆಯನ್ನು ಎತ್ತಿ ರೋಗಿಯ ತಲೆಗೆ ನೀವಾಳಿಸಿ, ಅದನ್ನು ತನ್ನ ವಶಕ್ಕೆ ಪಡೆಯುತ್ತಾಳೆ. ಜೊತೆಗೆ ಆ ಹೆಂಗಸಿನ ತಲೆಗೆ ಎಣ್ಣೆಯನ್ನು ಸುರಿಸುತ್ತಾರೆ. ರೋಗಿಯ ಚಿಂದಿ ಜಟ್ಟೆಗಳನ್ನು ಆಕೆಗೆ ಕೊಡುತ್ತಾರೆ. ಇಲ್ಲಿ ಜನರ ನಂಬಿಕೆಯಂತೆ, ರೋಗಿಯ ಕಾಯಿಲೆಯನ್ನು ಆ ಕೊರಗ ಹೆಂಗಸಿಗೆ ವರ್ಗಾಯಿಸುವುದಾಗಿದೆ! ಆದರೆ ಅನ್ನ, ಬಟ್ಟೆ, ಎಣ್ಣೆ ಇತ್ಯಾದಿಗಳನ್ನು ದಾನವಾಗಿ ನೀಡುವುದರೊಂದಿಗೆ, ಆ ನಂಬಿಕೆಯನ್ನು ಬಹಳ ನಾಜೂಕಾಗಿಯೇ ಬಳಸಿಕೊಳ್ಳಲಾಗಿದೆ. ಅದರ ವಿಮರ್ಶೆಯ ಗೋಜಿಗೆ ಹೋಗದ ಕೊರಗರು ಇಲ್ಲಿ ಬಲಿಪಶುಗಳು.
ಇಲ್ಲಿ ಗಂಭೀರವಾಗಿ ಚಿಂತಿಸಬೇಕಾದ ವಿಷಯವೆಂದರೆ, ಮಾನವ ದೇಹದ ಕಶ್ಮಲಗಳಾದ ತಲೆಕೂದಲು ಹಾಗೂ ಉಗುರುಗಳನ್ನು ಪ್ರಜ್ಙೆ ಇರುವ ಯಾರೊಬ್ಬನೂ ತನ್ನ ಮನೆಯೊಳಗೆ ತಪ್ಪಿಯೂ ಇರಗೊಡಲಾರನು. ಆದರೆ, ಕೊರಗರು ಉಣ್ಣಬೇಕಾದ ಅನ್ನಕ್ಕೆ ಅವುಗಳನ್ನು ಆ ಪ್ರಜ್ಙಾವಂತರು ಹಾಕುತ್ತಾರೆ. ಇದು ಊರವರು ಕೊರಗರೊಂದಿಗೆ ವರ್ತಿಸುವ ರೀತಿಯಾಗಿದೆ. ಇಲ್ಲಿ ಕೊರಗರು 'ಮನುಷ್ಯರೇ ಅಲ್ಲ' ಅನ್ನುವಂತೆ ನಡೆಸಿಕೊಳ್ಳುವ ಜನರು, ತಮ್ಮ ಕ್ರೂರ ಮುಖವನ್ನು ಬಹಿರಂಗಪಡಿಸುತ್ತಾರೆ.
ರೋಗಿಗಳು ಸಣ್ಣ ಮಕ್ಕಳಾದಲ್ಲಿ, ಕೊರಗ ಮಹಿಳೆಯ ಎದೆಹಾಲನ್ನು ಕುಡಿಸಲಾಗುತ್ತದೆ ಹಾಗೂ ಆಕೆಯಿಂದ ಮರುನಾಮಕರಣ ಮಾಡಿಸಲಾಗುತ್ತದೆ. ಕಾಯಿಲೆ ವಾಸಿಯಾಗಲು ಕೊರಗರ ಜಾತಿ, ಕುಲ ಯಾವುದೂ ಅಡ್ಡಿಯಾಗುವುದಿಲ್ಲ! ಆದರೆ, ಆ ಮಗುವನ್ನು ಮನೆಯೊಳಗೆ ಸೇರಿಸಿಕೊಳ್ಳುವುದಕ್ಕೆ ಮುನ್ನ ತಣ್ಣೀರಿನಿಂದ ಸ್ನಾನ ಮಾಡಿಸುತ್ತಾರೆ. ಯಾಕೆಂದರೆ, ಕೊರಗರು ಮುಟ್ಟಿದ ಮಗುವು ಮೈಲಿಕೆಯಾಗಿರುತ್ತದೆ!!
ಮಾರಿ ಹಬ್ಬದಲ್ಲಿ ಕೊರಗರ ಶೋಷಣೆ
'ಮಾರಿ ಹಬ್ಬ' ಎಂದರೆ ಅನಿಷ್ಟ ಪೀಡೆಗಳನ್ನು ಊರಿನಿಂದ ಹೊರಗೆ ಓಡಿಸುವ ಹಬ್ಬ. ಊರಿಗೆ ಗಂಡಾಂತರಗಳು ಬಾರದಂತೆ ಭೂತಾದಿ ಗಣಗಳನ್ನು ಸಂತೃಪ್ತಿಪಡಿಸುವ ಕಾರ್ಯವಾಗಿದೆ. ಮಾರಿ ಓಡಿಸುವಾಗ ಕೊರಗರು ಎಲ್ಲರಿಗಿಂತಲೂ ಮುಂದೆ ಡೋಲು ಬಾರಿಸುತ್ತಾ ಓಡಬೇಕಾಗುತ್ತದೆ. ಕೆಲವೊಮ್ಮೆ 2 - 3 ಕಿಲೋ ಮೀಟರ್ ಗಳಷ್ಟು ದೂರದವರೆಗೂ ಓಡಬೇಕಾಗಬಹುದು. ಕೊರಗರ ಡೋಲಿನ ಧ್ವನಿಗೆ ಅಲೌಕಿಕ ದುಷ್ಟಶಕ್ತಿಗಳು ದೂರಸರಿಯುತ್ತವೆ ಎಂಬ ನಂಬಿಕೆ (ಆರೋಪ) ಇದೆ. ವಾಸ್ತವವಾಗಿ ಹಿಂದಿನ ಕಾಲದಲ್ಲಿ ಕಾಡುಗಳೇ ಹೆಚ್ಚಾಗಿದ್ದಾಗ ರಾತ್ರಿ ವೇಳೆ ಕಾಡು ಪ್ರಾಣಿಗಳ ಭಯವಿದ್ದಿರಬೇಕು. ಕೊರಗರು ಡೋಲು ಬಾರಿಸುತ್ತಾ ಮುಂದಿನಿಂದ ಹೋದರೆ, ಹಿಂದಿನಿಂದ ಬರುವ ಜನರು ಸುರಕ್ಷಿತವಾಗಿರುತ್ತಾರೆ. ತಮ್ಮ ಸುರಕ್ಷತೆಗಾಗಿ ಡೋಲಿಗೆ 'ಬ್ಲ್ಯಾಕ್ ಮ್ಯಾಜಿಕ್' ಆರೋಪ ಹೊರಿಸಲಾಗಿದೆ. ಇದನ್ನು ಮುಗ್ಧ ಕೊರಗರು ನಂಬಿದ್ದರು. ಮಾರಿಗೆ ಅನ್ನ ಬಡಿಸುವ 'ಗಡು' (ಸ್ಥಳ)ವನ್ನು ತಲುಪಿದ ಕೂಡಲೇ, ಕೊರಗರು ದೂರ ಸರಿದು ನಿಲ್ಲಬೇಕು. ಏಕೆಂದರೆ ಮಾರಿಗೂ ಕೊರಗರು ಅಸ್ಪೃಶ್ಯರು!!
ಗಣ (ಭೂತ)ಗಳಿಗೆ ಬಡಿಸಿದ ಅನ್ನಕ್ಕೆ, ಕೋಳಿ ಕೊಯ್ದು ರಕ್ತವನ್ನು ಹರಿಯಬಿಡುತ್ತಾರೆ. ಮಳೆಗಾಲವಾದರೆ ಅದರ ಮೇಲೆಯೇ ನೀರು ಹರಿದುಹೋಗುತ್ತದೆ. (ಹೆಚ್ಚಾಗಿ ಮಾರಿಗಳು ಮಳೆಗಾಲದಲ್ಲಿಯೇ ನಡೆಯುತ್ತವೆ) ಕೊನೆಗೆ, ಅದೇ ಕಲ್ಲು ಮಿಶ್ರಿತ, ಅರೆಬೆಂದ, ರಕ್ತಪೂರಿತ ಅನ್ನವನ್ನು ದೇವರ ಪ್ರಸಾದವೆಂದು ಕೊರಗರು ಪಡೆಯಬೇಕು! ದಿನವಿಡೀ ಕೊರಗರು ಡೋಲಿನೊಂದಿಗೆ ಒದ್ದಾಡಿರುವುದಕ್ಕೆ ಅವರಿಗೆ ದರೆಯುವ ಪ್ರತಿಫಲವಿದು!
ಕೊರಗರ ಮೇಲೆ ಊರವರ ಅಧಿಕಾರ
ಅಜಲಿನ ಸೇವೆಗೆ ಒಳಪಟ್ಟ ಕೊರಗರು - ಸದ್ರಿ ಅಜಲು ವ್ಯಾಪ್ತಿಯಲ್ಲಿ ವಿಧೇಯರಾಗಿಯೇ ಇರಬೇಕಾಗಿದೆ. ಊರವರು ಹೇಳಿದಷ್ಟೇ ಮಾಡುವುದು ಇವರ ಕರ್ತವ್ಯ. ತಾವು ಮಾಡಿದ ಕೆಲಸಕ್ಕೆ ಸಂಭಾವನೆ ಕೇಳುವಂತೆಯೂ ಇಲ್ಲ. ಕೊಟ್ಟಷ್ಟು ಪಡೆಯುವುದು ಮಾತ್ರ ಅವರ ಕರ್ತವ್ಯ. ಯಾವ ಕೆಲಸವನ್ನೂ 'ಆಗುವುದಿಲ್ಲ' ಎನ್ನುವಂತಿಲ್ಲ. ದಾರಿಯಲ್ಲಿ ಹೋಗುತ್ತಿರುವಾಗ ಯಾರಾದರು ಎದುರಿಗೆ ಬಂದರೆ ಇವರು ದೂರ ಸರಿದು ನಿಲ್ಲಬೇಕು. ನಡುಬಗ್ಗಿಸಿ ಕೈಜೋಡಿಸಿ ಊರವರನ್ನು ಗೌರವಿಸಬೇಕು. ಊರಿನ ಹಾಲುಗಲ್ಲದ ಹಸುಳೆಯನ್ನೂ ಏಕವಚನದಲ್ಲಿ ಸಂಬೋಧಿಸುವಂತಿಲ್ಲ. ಆದರೆ, ತೊದಲು ನುಡಿಯುವ ಮಗು ಕೂಡಾ ಎಷ್ಟೇ ಪ್ರಾಯದ ಕೊರಗರ ಬಗ್ಗೆ ಬಹುವಚನ ಉಪಯೋಗಿಸುವುದಿಲ್ಲ!
ಊರಿನ ಮಾರಿ, ಕೋಲ, ಕಂಬಳ ಮುಂತಾದ ಯಾವುದೇ ಆಚರಣೆಗಳ ಹಿಂದಿನ ದಿನ ಕೊರಗರು ಊರಿಡೀ ಡೋಲು ಬಾರಿಸುತ್ತಾ ಅಧಿಕೃತವಾಗಿ ತಿಳಿಸಬೇಕು. ಆಗ ಪ್ರತೀ ಮನೆಗಳಲ್ಲಿ ಕೊಡುವ ಹಿಡಿಭತ್ತ ಇಲ್ಲವೇ ಅಕ್ಕಿ ಇವರಿಗೆ ಅಂದಿನ ಪಥ್ಯಕ್ಕೆ ಕಚ್ಛಾ ಸಾಮಾಗ್ರಿ. ಊರಿನ ಪ್ರತೀ ಧಾರ್ಮಿಕ ಆಚರಣೆಗಳಿಗೂ ಅಜಲಿನ ಕೊರಗರು ಒಂದೋ ಎರಡೋ ಬುಟ್ಟಿಗಳನ್ನು ಉಚಿತವಾಗಿಯೇ ನೀಡಬೇಕು.
ಅಜಲಿನಲ್ಲಿ ಅಸ್ಪೃಶ್ಯತೆ
ಕೊರಗರ ಅಜಲು ಚಾಕ್ರಿ ಎಂಬುವುದೇ ಒಂದು ಅಸ್ಪೃಶ್ಯತೆಯ ಕ್ರಿಯೆ. ಅಜಲಿನ ಯಾವ ಕೆಲಸಗಳೂ ಅಸ್ಪೃಶ್ಯತೆಯಿಂದ ಮುಕ್ತವಾಗಿಲ್ಲ. ಯಾವುದೇ ಧಾರ್ಮಿಕ, ಸಂಸ್ಕೃತಿಕ ಕಾರ್ಯಗಳಲ್ಲಿ ಇವರಿಗೆ ಪ್ರವೇಶವಿರುವುದಿಲ್ಲ. ದಾನ ಸ್ವೀಕರಿಸುವಾಗಲೂ ಕೊರಗ ಮಹಿಳೆ ದೂರವೇ ನಿಂತು, ಅನ್ನ ತುಂಬಿದಗೆರಸೆಯನ್ನು ಎತ್ತಿ ನೀವಾಳಿಸಬೇಕು. ಜಾತ್ರೆ, ನೇಮಗಳಲ್ಲಿ ಕೊರಗರು ಅರ್ಧ ಕಿಲೋ ಮೀಟರ್ನಷ್ಟು ದೂರ ನಿಂತು ಚಾಕರಿ ಮಾಡಬೇಕು. ಸತ್ತವರ ಹೆಣದ ಹತ್ತಿರವೂ ಇವರು ಸುಳಿಯುವಂತಿಲ್ಲ. ದೇವಸ್ಥಾನಗಳ ಎದುರಿನ ಗದ್ದೆಗಳಿಗೆ ಇಳಿಯುವಂತಿಲ್ಲ. ಊರವರು ದಾರಿಯಲ್ಲಿ ಹೋಗುತ್ತಿರುವಾಗ ಎದುರಾದರೆ, ಇವರು ದಾರಿಬಿಟ್ಟು ದೂರ ಸರಿದು ನಿಲ್ಲಬೇಕು. ನಡುಬಗ್ಗಿಸಿ, ಕೈ ಜೋಡಿಸಿ ಊರವರನ್ನು ಗೌರವಿಸಬೇಕು. ಈಗ ಅಸ್ಪೃಶ್ಯತೆ ಇಲ್ಲ ಎನ್ನುವ ಮಂದಿಯೂ ಇದನ್ನೆಲ್ಲಾ ಪ್ರತಿದಿನ ಎಂಬಂತೆ ಕಣ್ಣಾರೆ ಕಾಣುತ್ತಿರುವುದು ನಿತ್ಯ ಸತ್ಯ.
ಕೊರಗರಲ್ಲಿ ಸಾಮಾಜಿಕ ಕೀಳರಿಮೆ
ಶತಮಾನಗಳಿಂದ ಈ ಅಜಲು ಎಂಬ ವ್ಯವಸ್ಥೆಯಲ್ಲಿ ಶೋಷಣೆಗೊಳಪಟ್ಟ ಈ ಜನಾಂಗವು ಇಂದು ಸಾಮಾಜಿಕ ಕೀಳರಿಮೆಯನ್ನು ಮೈಗೂಡಿಸಿಕೊಂಡಿದೆ. ಸಮಾಜದಲ್ಲಿ ತಾನು ತಲೆಯೆತ್ತಿ ನಡೆಯಲಾಗದವನು ಎಂಬ ಅವ್ಯಕ್ತ ಭಾವನೆ ಅಜಲು ಕೆಲಸ ನಿರ್ವಹಿಸುವ ಕೊರಗರಲ್ಲಿ ಅಂತರ್ಗತವಾಗಿರುತ್ತದೆ. ಊರಿನ ಅನಿಷ್ಟಗಳನ್ನು ಹೊರುವುದು, ನೈರ್ಮಲ್ಯದ ಕೆಲಸಗಳನ್ನು ನಿರ್ವಹಿಸುವುದು ಹಾಗೂ ಊರವರಿಗೆ ವಿಧೇಯನಾಗಿರುವುದೇ ತನ್ನ ಧರ್ಮ ಎಂಬ ವಿಚಾರಗಳು ಆತನ ರಕ್ತದ ಕಣಕಣಗಳಲ್ಲೂ ಬೆರೆತು ಹೋಗಿದೆ.
ಇವರನ್ನು ಸದಾ ತಿರಸ್ಕಾರ ದೃಷ್ಟಿಯಿಂದ ನೋಡುವುದು ಹಾಗು ಅತ್ಯಂತ ಕೆಳದರ್ಜೆಯ ಕೆಲಸಗಳನ್ನು ಬಲತ್ಕಾರವಾಗಿ ಮಾಡಿಸುವುದರಿಂದ ಇವರು ಮಾನಸಿಕವಾಗಿ ಅಂತರ್ಮುಖಿಗಳಾಗಿದ್ದಾರೆ. ದೇವರ ಹೆಸರು ಹೇಳಿ ಹೆದರಿಸುವುದು ಈ ಮೂಲಕ ದೂರದಲ್ಲೇ ಉಳಿಯುವಂತೆ ಮಾಡುವುದು ಹಾಗೂ ಯಾವುದೇ ಬೇಡಿಕೆಗಳನ್ನು ಮುಂದೊಡ್ಡದಂತೆ ತಡೆಯುವುದರಿಂದ ಇವರು ಅನಿವಾರ್ಯವಾಗಿ ಅದಕ್ಕೆ ಒಗ್ಗಿಕೊಂಡಿದ್ದಾರೆ. ಅಜಲಿನಿಂದ ಹೊರ ಪ್ರಪಂಚದ ಬಗ್ಗೆ ಆಲೋಚಿಸುವುದಕ್ಕೂ ಅವಕಾಶ ನೀಡದ ಸಮಾಜ ಇವರನ್ನು ಬದಲಾವಣೆಗಳಿಗೆ ಒಗ್ಗದಂತೆ ತರಬೇತುಗೊಳಿಸಿದೆ. ಆದುದರಿಂದ ಮಂದಮತಿಗಳಂತೆ ವರ್ತಿಸುವ ಕೊರಗರು ಇಂದು ಯಾವ ಸರಕಾರದಿಂದಲೂ ಬದಲಾವಣೆಗೆ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ
ಕೊರಗರಲ್ಲಿ ಆರ್ಥಿಕ ಮುಗ್ಗಟ್ಟು
ಅಜಲು ಚಾಕ್ರಿ ಮಾಡುವ ಕೊರಗರು ಅತಿಯಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಾರೆ. ಚಾಕ್ರಿಯು ಉಚಿತಸೇವೆಯಾಗಿದ್ದು ಯಾವುದೇ ಮೂಲದಿಂದ ಸಂಪಾದನೆ ಅಸಾಧ್ಯವಾಗಿರುತ್ತದೆ. ನಡುಬಗ್ಗಿಸಿ ಬೇಡಿ ಪಡೆದ ಭಿಕ್ಷೆಯೇ ಇವರ ಸಂಪಾದನೆ. ಸದ್ರಿ ಚಾಕ್ರಿ ನಿರ್ವಹಿಸಿ ನೊಂದ ಮನಸ್ಸಿಗೆ ಕ್ಷಣಕಾಲಕ್ಕಾದರೂ ತಂಪೆರೆಯಬಹುದಾದ ಅಮಲು ಸೇವನೆಗೆ ಆತ ಅದನ್ನು ಸರಿದೂಗಿಸುತ್ತಾನೆ. ಈತನ ಕುಟುಂಬ ನಿರ್ವಹಣೆಯು ಊರವರು ಕನಿಕರದಿಂದ ನೀಡುವ ಜುಜುಬಿ ಭಿಕ್ಷೆಯಿಂದಲೇ ಸಾಗುಬೇಕಾಗುತ್ತದೆ. ಇದರಿಂದಾಗಿ ಎಲ್ಲಾ ತರದ ಆರ್ಥಿಕ ಮುಗ್ಗಟ್ಟುಗಳು ಉಂಟಾಗುತ್ತದೆ. ಕೆಲವೊಂದು ಗಂಭಿರ ಪರಿಣಾಮಗಳನ್ನು ಕೊರಗರು ಈ ಅಜಲು ಚಾಕ್ರಿಯ ಕ್ಷಣಕ್ಷಣವೂ ಅನುಭವಿಸುತ್ತಾರೆ. ಇವರ ಪಾಲಿಗೆ ಸ್ವತಂತ್ರ ಬದುಕು ಎನ್ನುವುದು ಕೇವಲ ಗಾಳಿಯೊಡನೆ ಗುದ್ದಾಡಿದ ಅನುಭವ ಮಾತ್ರ.
'ಅಜಲು ನಿಷೇಧ ಚಳುವಳಿ'ಯ ಪ್ರಮುಖಾಂಶಗಳು
1997-1998
* ಸೂರಾಲು ಹಬ್ಬದಲ್ಲಿ ಕದನಿ ನಿಲ್ಲಿಸಲಾಯಿತು.
* ಸೂರಾಲು ಹಬ್ಬಕ್ಕೆ ಅರಸರನ್ನು ಊರ ಧನಿ ಡೋಲು ಮೇಳದೊಂದಿಗೆ ಕರೆತಂದು, ಪುನಃ ಅವರ ಮನೆಗೆ ಬಿಟ್ಟು ಬರುವುದನ್ನು ನಿಲ್ಲಿಸಿರುವುದು.
* ಸೂರಾಲು ಹಬ್ಬದ ದಿನ ಊರ ಹೋಟೇಲಿನವರು - ಕೊರಗರಿಗೆ ಹಾಕಿದ ಪ್ರತ್ಯೇಕ ಚಪ್ಪರವನ್ನು ಹಬ್ಬದ ದಿನ ಕಿತ್ತು ಬಿಸಾಡಲಾಯಿತು
* ಇದುವರೆಗಿನ ಸಂಪ್ರದಾಯದಂತೆ ನೂತನ ವಧುವರರು ಮದುವೆಯ ದಿನ ಮನೆಗೆ ಬರುವ ಮುನ್ನ, ಧನಿಯವರ ಕಾಲು ಹಿಡಿಯಲು ಹೋಗಬೇಕಿತ್ತು. ಅದನ್ನು ನಿಲ್ಲಿಸಲಾಯಿತು.
* ಮದುವೆಯಲ್ಲಿ ಕುಡಿತವನ್ನು ಕಡ್ಡಾಯವಾಗಿ ನಿಲ್ಲಿಸಲಾಯಿತು.
* ಪಾದೆಮಠ ಹಬ್ಬದಲ್ಲಿ ವೇಷ ಹಾಕಿ ಬೇಡುವುದನ್ನು ನಿಲ್ಲಿಸಲಾಯಿತು.
* ಸೂರಾಲು, ಪಾದೆಮಠ, ಕೊಕ್ಕರ್ಣೆ, ಚೆಗ್ರಿಬೆಟ್ಟು, ಮೊಗೇರಪೇಟೆ, ರಂಗನಕೆರೆ, ಬಂಡೀಮಠ, ಕೂರಾಡಿ, ನಿಂಜೂರು ಮುಂತಾದ ಕಡೆಗಳಲ್ಲಿ ಮಾರಿ ಹಬ್ಬದ ದಿನ ಊರ ಮನೆ ಮನೆಗೆ ಹೋಗಿ ಬೇಡುವುದನ್ನು ನಿಲ್ಲಿಸಲಾಯಿತು.
* ಬಾರ್ಕೂರು ಮಾರಿ ಹಬ್ಬದಂದು ಸಂಬಳರಹಿತ ಡೋಲು ಸೇವೆಗೆ ವಿರೋಧ ವ್ಯಕ್ತಪಡಿಸಲಾಯಿತು. ಆ ಮೂಲಕ ಬಾರ್ಕೂರಿನಲ್ಲಿ ಮೊದಲ ಬಾರಿಗೆ ಕೊರಗರು ಡೋಲಿನ ಕೆಲಸಕ್ಕೆ ಸಂಭಾವನೆ ಪಡೆದುಕೊಂಡರು.
* ಬೈದಬೆಟ್ಟಿನಲ್ಲಿ ಪಾಯಿಖಾನೆ ಸ್ವಚ್ಛಗೊಳಿಸುವುದಕ್ಕೆ ಕೊರಗರಿಂದ ವಿರೋಧ. ಇನ್ನು ಮುಂದೆ ಸ್ವಚ್ಛತೆಯ ಕೆಲಸಗಳಿಗೆ ಅನಿಷ್ಟ ಚಾಕರಿಗಳಿಗೆ ಹೋಗುವುದಿಲ್ಲವೆಂಬ ತೀರ್ಮಾಣ.
* ಹೆಜಮಾಡಿ ನೇಮೋತ್ಸವದಲ್ಲಿ ಡೋಲು ಚಾಕ್ರಿಯ ವಿರುದ್ಧ ಪೋಲೀಸರಿಗೆ ದೂರು ನೀಡಲಾಯಿತು.
1998-99
* ಕೊರಗರಿಂದ ಯಾವುದೇ ರೀತಿಯ ಅಜಲು ಕೆಲಸಗಳಿಗೆ ಹೋಗುವುದಿಲ್ಲವೆಂಬ ತೀರ್ಮಾನ.
* ವಡ್ಡಬೆಟ್ಟು ಕಂಬಳದಲ್ಲಿ ಅಜಲು ಚಾಕರಿ ನಿಲ್ಲಿಸಲಾಯಿತು.
* ಕೆಂಜೂರು ಕಂಬಳದಲ್ಲಿ ಅಜಲು ಚಾಕರಿಯನ್ನು ನಿಲ್ಲಿಸಲಾಯಿತು. ಊರ ಮಂದಿಯಿಂದ ತೀವ್ರ ಪ್ರತಿರೋಧ.
* ಬಾರ್ಕೂರಿನಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಪಾದಯಾತ್ರೆ. ಅಜಲು ನಿಷೇಧಿಸುವಂತೆ ಮನವಿ.
* ಬಾರ್ಕೂರು ಮೂರು ಮಾಗಣಿಯ ಮಾರಿಯಲ್ಲಿ ಅಜಲು ಚಾಕರಿಯನ್ನು ನಿಲ್ಲಿಸಲಾಯಿತು.
* ವಂಡಾರು ಕಂಬಳದಲ್ಲಿ ಸುಮಾರು 200ರಷ್ಟಿದ್ದ ಕೊರಗರ ವೇಷಗಳಿಗೆ ಈ ವರ್ಷ ಪೂರ್ಣವಿರಾಮ.
* ಶಿಬರೂರು ಜಾತ್ರೆಯಲ್ಲಿ ಅಜಲು ಚಾಕ್ರಿಗೆ ಬಳಸಿದ ಡೋಲುಗಳನ್ನು ಪೋಲೀಸರಿಂದ ಮುಟ್ಟುಗೋಲು ಹಾಕಿಸಲಾಯಿತು.
* ಮುಲ್ಕಿ ಅರಸು ಕಂಬಳದಲ್ಲಿ ಕಂಬಳದ ಗದ್ದೆಯ ಸುತ್ತ ನೂರಾರು ಸಂಖ್ಯೆಯಲ್ಲಿ ಸೇರಿ ಅಜಲು ಚಾಕ್ರಿಯನ್ನು ವಿರೋಧಿಸಲಾಯಿತು.
* ಕಟಪಾಡಿ ಕಂಬಳದ ದಿನ ಅಜಲು ಚಾಕ್ರಿಯನ್ನು ವಿರೋಧಿಸಿ ಮಾನವ ಸರಪಳಿ ರಚಿಸಲಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ