ಗುರುವಾರ, ಆಗಸ್ಟ್ 14, 2014

ಆಗಸ್ಟ್ ಹದಿನೈದರ ಚಿತ್ರಗಳು

ಅರುಣ್ ಜೋಳದಕೂಡ್ಲಿಗಿ
ಚಿತ್ರ: 1
ಬಹಳ ದಿನದ ನಂತರ ಮೊನ್ನೆ ನನ್ನ ಬಾಲ್ಯದ ಮಿತ್ರ ಕೊಟ್ರೇಶ್ ಸಿಕ್ಕಿದ್ದ. ಹೀಗೇ ಲೋಕಾಭಿರಾಮವಾಗಿ ಮಾತಿಗೆ ಕೂತೆವು. ಮಾತಿನ ನಡುವೆ ಆಗಷ್ಟ ಹದಿನೈದರ ಚಿತ್ರಗಳು ಕಣ್ಣಮುಂದೆ ಬಂದವು. ಕೊಟ್ರೇಶ್ ಆಗಷ್ಟ ಹದಿನೈದರ ಹೊತ್ತಿಗೆ ಸರಿಯಾಗಿ ತಲೆ ಕೂದಲು ಬೋಳಿಸಿ, ತಲೆಗೆ ಸಿಲ್ವರ್ ಬಣ್ಣ ಹಚ್ಚಿಕೊಂಡು, ಗೋಲಿಯಾಕಾರದ ಕನ್ನಡಕ ಹಾಕಿ, ಕಚ್ಚೆ ಉಟ್ಟು, ಉದ್ದನೆ ಕೋಲು ಹಿಡಿದು ಥೇಟ್ ಗಾಂಧಿಯೇ ಆಗಿ ಪ್ಲಾಗ್ ಹಾಯಿಸ್ಟಿಂಗ್ ಹೊತ್ತಿಗೆ ಶಾಲೆಯ ಆವರಣಕ್ಕೆ ಹಾಜರಾಗುತ್ತಿದ್ದ. ನಮಗೆಲ್ಲಾ ಖುಷಿಯೋ ಖುಷಿ. ನಾವೆಲ್ಲಾ ಗಾಂಧಿ ಬಂದ, ಗಾಂಧಿ ಬಂದ ಎಂದು ಕೇಕೆ ಹೊಡೆಯುತ್ತಿದ್ದೆವು. ಅಷ್ಟರ ಮಟ್ಟಿಗೆ ಗಾಂಧಿ ನಮ್ಮ ಸ್ನೇಹಿತನೇ ಆಗಿರುತ್ತಿದ್ದ.
ಫೋಟೋದ ಗಾಂಧಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವುದು, ವೇಷದಾರಿ ಗಾಂಧಿಯ ಚಿವುಟಿ ಕಿಚಾಯಿಸುವುದು ಎರಡೂ ನಡೆಯುತ್ತಿತ್ತು.boy-as-gandhiಕೊಟ್ರ ಮಹಾನ್ ಕಿಲಾಡಿ, ಅವ ಗಾಂಧಿ ಉಡುಪು ತೊಟ್ಟಾಗಲೂ ತನ್ನ ಕಿಡಗೇಡಿ ತನವ ಮರೆಯುತ್ತಿರಲಿಲ್ಲ. ಸಾಲಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ವೇಷದಾರಿ ಸವಿತಾಳ ಜಡೆ ಜಗ್ಗಿ ಗೊತ್ತಾಗದಂತೆ ನಿಂತು ಒಳಗೊಳಗೇ ನಗುತ್ತಿದ್ದ. ಅವ ಊರಲ್ಲಿ ಪ್ರಭಾತ್ ಪೇರಿ ಹೊರಟಾಗ ಕೆಲವು ಮನೆಯವು ಗಾಂಧಿ ಕಾಲಿಗೆ ನೀರು ಹಾಕಿ ಪೂಜಿಸಿ ದಕ್ಷಿಣಿಯನ್ನು ಕೈಲಿಡುತ್ತಿದ್ದರು. ಇದೂ ಸಹ ಅವ ಗಾಂಧಿ ವೇಷ ಹಾಕಲು ಪ್ರೇರಣೆಯಾಗುತ್ತಿತ್ತು. ಊರಲ್ಲಿ ಇವನನ್ನು ಗಾಂಧಿಕೊಟ್ರ ಎಂದೇ ಕರೆಯುತ್ತಿದ್ದೆವು. ಈ ವೇಷವನ್ನು ಶಾಲೆಯ ಮಾಸ್ತರರು ಹೇಳಿ ಹಾಕಿಸುತ್ತಿರಲಿಲ್ಲ. ಕೊಟ್ರೇಶಿಯ ಅಜ್ಜ ಬೋರಯ್ಯ ಗಾಂಧಿ ಮೇಲಿನ ಭಯ ಭಕ್ತಿ ಪ್ರೀತಿಯನ್ನು ಹೀಗೆ ಕೊಟ್ರನಿಗೆ ವೇಷ ಧರಿಸುವ ಮೂಲಕ ತೋರುತ್ತಿದ್ದನು.
ಕೊಟ್ರ ಒಮ್ಮೆ ಗಾಂಧಿ ವೇಷ ತೊಟ್ಟು ಶಾಲೆಯ ಆವರಣಕ್ಕೆ ಬಂದಿದ್ದ, ಇನ್ನೇನು ಧ್ವಜ ಹಾರಿಸಬೇಕೆಂದಾಗ ಗಾಂಧಿ ಮಾಯವಾಗಿದ್ದ. ವಿಚಾರಿಸಿ ನೋಡಲಾಗಿ ಶಾಲೆಯ ಹಿಂದಿರುವ ಜೋಳದ ಹೊಲದಲ್ಲಿ ಗಾಂಧಿ ನಂಬರ್ ಎರಡಕ್ಕೆ ಹೋಗಿದ್ದಾನೆಂದು ತಿಳಿಯಿತು. ಇದ ತಿಳಿದ ಮೇಷ್ಟ್ರು ಅವನನ್ನು ಕರೆತರಲು ಹುಡುಗರನ್ನು ಕಳಿಸಿದರು. ಜೋಳದ ಹೊಲದಲ್ಲಿ ಉಚ್ಚಿದ ಕಚ್ಚಿಯನ್ನು ಮತ್ತೆ ಕಟ್ಟಿಕೊಳ್ಳಲು ಆಗದೆ ಕೊಟ್ರ ಪಂಚೆಯನ್ನು ಕೈಲಿಡುದು ಶಾಲೆಯ ಆವರಣಕ್ಕೆ ಬಂದ. ಆಗ ಎಲ್ಲಾ ಹುಡುಗ OLYMPUS DIGITAL CAMERAಹುಡುಗಿಯರು ಗಾಂಧಿ ನೋಡ್ರೋ ಚಡ್ಡೀಲೆ ಬಂದವ್ನೇ ಎಂದು ಕೂಗತೊಡಗಿದರು. ಪಿ.ಟಿ ಮೇಷ್ಟ್ರ ಕರಿಯಪ್ಪ ಒಮ್ಮೆ ಸಿಟ್ಟಿನಿಂದ ಗುರಾಯಿಸುತ್ತಲೂ ಮಕ್ಕಳು ಗಪ್ ಚುಪ್ ಆಗಿ ಮೊದಲಿನಂತೆಯೇ ನಿಂತರು. ಕೊಟ್ರೇಶ ಸಪ್ಪೆ ಮೋರೆ ಹಾಕಿ ಮೌನವಾದ. ಈ ಸಮಾರಂಭಕ್ಕೆ ಬಂದ ಭರಮನ ಗೌಡರು ಹುಡುಗರ ಮುಂದೆಯೇ ಕಚ್ಚಿ ತೊಡಿಸಿ ಗಾಂಧಿಯನ್ನು ತಯಾರು ಮಾಡಿದ್ದರು. ಆ ದಿನ ಕೊಟ್ರ ತುಂಬಾ ಡಲ್ಲಾಗಿಯೇ ಊರಲ್ಲಿ ಸುತ್ತಿದ್ದನು. ಇದಾದ ನಂತರವೂ ಹುಡುಗರು ಇವನನ್ನು ಗಾಂಧಿ ಕಚ್ಚಿ ಉಚ್ಚಿತ್ರೋ ಎಂದು ಗೇಲಿ ಮಾಡುತ್ತಿದ್ದರು.
ಇದನ್ನು ನೆನಪಿಸಿಕೊಂಡ ಕೊಟ್ರೇಶ್ ಬಿದ್ದು ಬಿದ್ದು ನಕ್ಕರು. ಮತ್ತೆ ಒಂದಷ್ಟು ಮಾತಾಡಿ ನಂತರ ಟೀ ಕುಡಿದೆವು. ಕೊಟ್ರೇಶ್ ಕೃಷಿ ಮಾಡುತ್ತಾ ಸ್ವಲ್ಪ ಹೈರಾಣಾದಂತೆ ಕಾಣುತ್ತಿದ್ದರು. ‘ಗಾಂಧಿ ಈಗ ಬಂದ್ರ ಇದು ನಮ್ಮ ದೇಶ ಅಲ್ಲ ಅಂತ ವಾಪಾಸ ವಕ್ಕಾನ ನೋಡ ಅರುಣ್’ ಅಂದರು.. ನಾನು ‘ಇಲ್ಲ ಇಲ್ಲ ಈ ದೇಶ ನೋಡಿ ವಾಪಸ್ ಹೋಗೋ ತ್ರಾಣನೂ ಕಳಕೊಂಡಿರ್‍ತಾನ..ಇನ್ನು ವಾಪಸ್ ಹೋಗೋ ಮಾತೆಲ್ಲಿ’ ಅಂದೆ ಆಗ ಕೊಟ್ರೇಶ್ ನಕ್ಕರು. ಹೀಗೆ ಗಾಂಧಿ ನಮ್ಮೊಳಗೂ, ನಮ್ಮೊಳಗೆ ಗಾಂಧಿಯೂ ಕಳೆದು ಹೋಗುವ ಪರಿಯನ್ನು ನೆನಪಿಸಿಕೊಂಡರೆ ಈಗಲೂ ಅಚ್ಚರಿಯಾಗುತ್ತದೆ.
ಚಿತ್ರ: 2
ಒಮ್ಮೆ ನಮ್ಮ ಶಾಲೆಗೆ ಹೊಸದಾಗಿ ಬಂದ ಟೀಚರ್ ಸಿದ್ದಮ್ಮ ಈ ವರ್ಷ ಆಗಷ್ಟ ಹದಿನೈದಕ್ಕೆ ಏನಾದರು ಹೊಸದನ್ನು ಮಾಡಬೇಕೆಂದು ತಯಾರಿ ನೆಡೆಸಿದರು. ಅದೇನಂದರೆ ಇನ್ನು ಹದಿನೈದನೇ ತಾರೀಕಿಗೆ ಹತ್ತು ದಿನ ಮೊದಲೇ ಭಾರತದ ನಕ್ಷೆಯ ಆಕಾರದಲ್ಲಿ ರಾಗಿ ಬೆಳೆಸಿ ಭಾರತವನ್ನು ಹಸಿರಾಗಿಸಬೇಕೆಂಬುದು. ಈ ಕನಸು ಕಾರ್ಯರೂಪಕ್ಕೂ ಬಂತು. ಭಾರತವನ್ನು ಹೋಲುವ ಒಂದು ರೇಖಾ ಚಿತ್ರವನ್ನು ಬಿಡಿಸಲಾಯಿತು. ಅದು ದಷ್ಟಪುಷ್ಟ ಭಾರತದಂತಿರದೆ ಬಡಕಲು ಭಾರತದಂತ್ತಿತ್ತು. ಆ ರೇಖಾ ಚಿತ್ರದ ಒಳಗೇ ಗುದ್ದಲಿಯಿಂದ ಅಗೆದು ಮಣ್ಣನ್ನು ಅದಲುಬದಲು ಮಾಡಿದೆವು. ಶಾಲೆಗೆ ಹೊಂದಿಕೊಂಡಂತಿದ್ದ ಜಗ್ಗೋ ಬೋರಿನಿಂದ(ಕೈ ಪಂಪು) ನೀರುತಂದು ಭಾರತವನ್ನು ನೆನೆಸಿದೆವು. ನಂತರ ದುರುಗಜ್ಜಿ ಮನೆಯಲ್ಲಿ ಎರಡು ಹಿಡಿ ರಾಗಿ ಕಾಳನ್ನು ತಂದು ಭಾರತದ ತುಂಬೆಲ್ಲಾ ಚೆಲ್ಲಿದೆವು. ಒಂದೆರಡು ಕಳ್ಳಿ ಜಾಲಿ ಮುಳ್ಳುಗಳನ್ನು ಕಡಿದುಕೊಂಡು ಬಂದು ಭಾರತದ ಮೇಲೆಲ್ಲಾ ಹರಡಿ ದೇಶಕ್ಕೆ ಮುಳ್ಳು ಬಡಿದೆವು. ಆಗ ಟೀಚರ್ ಭಾರತವನ್ನು ದನಗಳು ತುಳಿಯದಂತೆ, ಸಣ್ಣ ಮಕ್ಕಳು ಕೆಡಿಸದಂತೆ ಕಾಯಲು ಒಬ್ಬರು ತಪ್ಪುತ್ತಲು ಒಬ್ಬರಂತೆ ಹತ್ತು ಹುಡುಗ ಹುಡುಗಿಯರನ್ನು ನೇಮಿಸಿದರು. ಈಪಾಳೆಯದಲ್ಲಿ ನನ್ನದೂ ಸರತಿ ಇತ್ತು. ನಾವು ಭಾರತದ ಗಡಿಯನ್ನು ಕಾಯುವ ಯೋಧರಂತೆ ಈ ನೆಲದಲ್ಲಿನ ಭಾರತವನ್ನು ಕಾಯುತ್ತಿದ್ದೆವು.
ನನ್ನದು ಬೆಳಗ್ಗೆ ಆರಕ್ಕೆ ಕಾಯುವ ಸರದಿಯಿತ್ತು. ನಾನು ಬೆಳಗ್ಗೆ ಎದ್ದವನೇ ಎದ್ದೆನೋ ಬಿದ್ದೆನೋ ಎಂಬಂತೆ ಶಾಲೆಯ ಮುಂದೆ ಓಡಿ ಭಾರತ ಸುರಕ್ಷಿತವಾಗಿರುವ ಬಗ್ಗೆ ಖಾತರಿ ಮಾಡಿಕೊಂಡು ನಿರಾಳವಾಗುತ್ತಿದ್ದೆ. ಒಮ್ಮೆ ದನಗಳ ಹಿಂಡೊಂದು ತುಳಿದು ಹೋಗಿತ್ತು. ನಾನು ಭಾರತಾಂಬೆಗೆ ನೋವಾದಂತೆ ಮಮ್ಮಲ ಮರುಗಿದೆನು. ಹೊಡೆಯೋಣವೆಂದರೆ ಯಾವ ದನ ತುಳಿದಿರಬಹುದು ಎನ್ನುವುದು ಗೊತ್ತಾಗಲಿಲ್ಲ. ಆಗ ಇಡೀ ಊರಿನ ಎಮ್ಮೆಗಳೆಲ್ಲಾ ನನ್ನ ಅಸಹಾಯಕತೆ ನೋಡಿ ನಕ್ಕಂತಾಯಿತು.
ಒಮ್ಮೆ ಹಸಿ ಆರದಿರಲಿ ಎಂದು ಮುಳ್ಳು ತೆಗೆದು ಗೋಣಿ ಚೀಲವನ್ನು ಹಾಸಿದ್ದೆವು. grass-map-indiaಮರುದಿನ ಬೆಳಗ್ಗೆ ಆ ಗೋಣಿಯ ಮೇಲೆ ನಾಯಿಯೊಂದು ಮಲಗಿ ಸಂಪು ನಿದ್ದೆ ಮಾಡುತ್ತಿತ್ತು. ಅದನ್ನು ನೋಡಿದಾಕ್ಷಣ ನಖಶಿಖಾಂತ ಸಿಟ್ಟು ಬಂದು ನಾಯಿಯನ್ನು ಕಯ್ಯಯ್ಯೋ.. ಕಯ್ಯಯ್ಯೋ ಎಂದು ಕಿರುಚುತ್ತಾ ಓಡುವಂತೆ ಹೊಡೆದೆವು. ಪಾಪ ಭಾರತಾಂಬೆಯ ಮೇಲೆ ನೀಧಾನಕ್ಕೆ ಮೊಳಕೆ ಹೊಡೆದ ರಾಗಿಯ ಕಾಳುಗಳು ನಡ ಮುರಿದ ಮುದುಕಿಯಂತೆ ಬಾಗಿ ಮುದುಡಿಕೊಂಡಿದ್ದವು. ಆ ನಂತರ ಮತ್ತೆ ನೀರು ಹಾಕಿ ಮುದುಡಿಕೊಂಡ ಜೀವಗಳಿಗೆ ಮರುಜೀವ ತರಲು ನಾವೆಲ್ಲಾ ತುಂಬಾ ಶ್ರಮಿಸಿದ್ದೆವು.
ಭಾರತವನ್ನು ದನಗಳಿಂದಲೂ, ನಾಯಿಗಳಿಂದಲೂ, ಕಿಡಗೇಡಿ ಮಕ್ಕಳಿಂದಲೂ ಕಾಯುವುದು ತುಂಬಾ ಕಷ್ಟವೇ ಆಗಿತ್ತು. ಮೊಳಕೆಯೊಡೆದ ರಾಗಿಯ ಸಸಿಗಳು ನಿಧಾನಕ್ಕೆ ದಿನಕ್ಕೊಂದು ಚೆಂದದಂತೆ ಬೆಳೆಯುತ್ತಿದ್ದರೆ, ಭಾರತಾಂಬೆ ಹಸಿರಾಗುವ ಬಗ್ಗೆ ನಾವುಗಳೆಲ್ಲಾ ಖುಷಿಗೊಳ್ಳುತ್ತಿದ್ದೆವು. ಇದನ್ನು ನೋಡಿದ ಟೀಚರ್ ಮುಖದಲ್ಲಿ ಸಂತಸದ ಗೆರೆಗಳು ಕಾಣುತ್ತಿದ್ದವು. ಎಲ್ಲಾ ಬಗೆಯ ಅಡೆತಡೆಗಳ ಮಧ್ಯೆಯೂ ಮೊದಲು ಬಡಕಲು ಕಾಣುತ್ತಿದ್ದ ಭಾರತ ಮಾತೆ ಹಸಿರಿನಿಂದ ಮೈದುಂಬಿಕೊಳ್ಳತೊಡಗಿದ್ದಳು. ಆಗಷ್ಟ ಹದಿನೈದರ ದಿನ ನಮಗೆಲ್ಲಾ ಖುಷಿಯೋ ಖುಷಿ. ಕಾರಣ ಭಾರತ ಮಾತೆಯನ್ನು ಸಾಕಿ ಸಲಹಿದವರು ನಾವೆ ಎಂಬ ಉತ್ಸಾಹ ನಮ್ಮಲ್ಲಿ ಚಿಮ್ಮುತ್ತಿತ್ತು.
ಹೀಗೆ ರಾಗಿಯ ಹಸಿರು ಮೊಳಕೆಯ ಭಾರತವನ್ನು ನೋಡಿದ ಊರವರು ಟೀಚರಮ್ಮನನ್ನು ಬಾಯಿತುಂಬಿ ಹೊಗಳಿದರು. ಆ ವರ್ಷ ಆಗಷ್ಟ ಹದಿನೈದರ ದೊಡ್ಡ ಆಕರ್ಷಣೆ ಈ ಹಸಿರು ಭಾರತ ಮಾತೆಯೇ ಆಗಿದ್ದಳು. ಈಗ ನೆನಪಿಸಿಕೊಂಡರೆ ಈ ದೇಶದ ಬಹುಪಾಲು ಕೆಳಸಮುದಾಯಗಳು ಉಣ್ಣುವ ಜೀವಧಾತು ರಾಗಿ ಭಾರತದ ನಕ್ಷೆಯಲ್ಲಿ ಬೆಳೆದದ್ದು ಒಂದು ರೂಪಕವೇ ಆದಂತಿತ್ತು. ಕನಕದಾಸರ ರಾಮಧ್ಯಾನ ಚರಿತೆ ಕಾವ್ಯವೂ ನೆನಪಾಗಿ ಭತ್ತದ ಮುಂದೆ ಗೆದ್ದ ರಾಗಿಯು ಕಣ್ಣಮುಂದೆ ನಿಂತಿತು.
ಚಿತ್ರ: 3
ಈಚೆಗೆ ಮೂರು ವರ್ಷದ ಹಿಂದೆ ಆಗಷ್ಟ ಹದಿನೈದಕ್ಕೆ ಸರಿಯಾಗಿ ನಮ್ಮೂರು ಜೋಳದ ಕೂಡ್ಲಿಗಿಗೆ ಬಂದಿದ್ದೆ. ಈ ವಿಷಯ ಹೇಗೋ ನಮ್ಮೂರಿನ ಶಾಲಾ ಮಾಸ್ತರಿಗೆ ತಿಳಿದಿತ್ತು. ನನ್ನ ಹೆಸರ ಜತೆ ಊರ ಹೆಸರು ಸೇರಿಸಿ ಬರೆಯುತ್ತಿದ್ದರಿಂದ, ಅದು ಯಾವಾಗಲಾದರೊಮ್ಮೆ ಪತ್ರಿಕೆಯಲ್ಲಿ ಕಾಣುತ್ತಿದ್ದರಿಂದ, ಮಾಸ್ತರರಿಗೆ ನನ್ನನ್ನು ಆಗಷ್ಟ ಹದಿನೈದರ ಅಥಿತಿಯಾಗಿ ಮಾಡಬೇಕೆಂದೆನ್ನಿಸಿ ಕರೆದರು. ನಾನು ಮೊದಲು ಇಲ್ಲ ಎಂದೆನಾದರೂ ಪೂರ್ತಿ ನಿರಾಕರಿಸಲಾಗದೆ ಒಪ್ಪಿಕೊಂಡು ಶಾಲೆಯ ಆವರಣಕ್ಕೆ ಹೋದೆ. ಆಗಷ್ಟ ಹದಿನೈದರ ಅಥಿತಿಯಾಗಿ ವೇದಿಕೆಯ ಮೇಲೆ ಕೂತದ್ದು ಇದು ಮೊದಲ ಅನುಭವ.
ಶಾಲೆಯ ಮುಂದೆ ದೊಡ್ಡದಾದ ಅಂಗಳಕ್ಕೆ ಸೆಗಣಿ ಸಾರಿಸಿ, ತರಾವರಿ ರಂಗೋಲಿ ಬಿಟ್ಟಿದ್ದರು. ಆ ರಂಗೋಲಿಗಳಲ್ಲಿ ಮಕ್ಕಳ ಮುಗ್ಧತೆ ಇತ್ತು. independence-day-at-schoolಭಾರತದ ನಕ್ಷೆ, ಸ್ವಂತಂತ್ರ್ಯ ದಿನಾಚರಣೆಯ ಶುಭಾಷಯಗಳು, ಜೈ ಭಾರತ ಮಾತಾಕಿ ಜೈ ಮುಂತಾದ ಬರಹಗಳು ರಂಗೋಲಿಯಲ್ಲಿ ಎದ್ದು ಕಾಣುತ್ತಿದ್ದವು. ಮಕ್ಕಳು ಸಮವಸ್ತ್ರ ಧರಿಸಿ ಹಬ್ಬದ ಸಂಭ್ರಮದಲ್ಲಿ ಕೂತಿದ್ದರು. ಕೆಲವರು ಬರೆದುಕೊಂಡು ಬಂದಿದ್ದ ಭಾಷಣವನ್ನು ಓದಲು ತಯಾರಿ ಮಾಡಿಕೊಳ್ಳುತ್ತಿದ್ದರು. ನಮ್ಮ ಓಣಿಯ ಮಕ್ಕಳು ನನ್ನನ್ನು ನೋಡಿ ಕಣ್ಣ ಸನ್ನೆಯಲ್ಲೇ ಹುಬ್ಬುಹಾರಿಸಿ ಖುಷಿಪಟ್ಟರು. ಮಾಸ್ತರುಗಳು ಮಾಸ್ತರಮ್ಮಂದಿರು ಕಾರ್ಯಕ್ರಮವನ್ನು ನಡೆಸುವ ಬಗ್ಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಲವಲವಿಕೆಯಿಂದ ಓಡಾಡಿಕೊಂಡಿದ್ದ ಹೊಸ ಹುರುಪಿನ ಇನ್ನೂ ಮದುವೆಯಾಗಿರದ ಚೆಂದದ ಟೀಚರಮ್ಮನನ್ನು ಬಂದ ಅಥಿತಿಗಳು ಕದ್ದು ನೋಡುತ್ತಾ ನೋಡದಂತೆ ನಟಿಸುತ್ತಿದ್ದರು. ಇದು ನನ್ನ ಅನುಭವಕ್ಕೂ ಬಂತು. ಎಸ್.ಡಿ.ಎಂ.ಸಿ ಸದಸ್ಯರು, ಊರಿನ ಕೆಲವು ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಹೀಗೆ ಕಾರ್ಯಕ್ರಮ ಆರಂಭವಾಯಿತು. ಸ್ವಾಗತ, ಧ್ವಜಾರೋಹಣ, ರಾಷ್ಟ್ರಗೀತೆ ಒಂದರ ಹಿಂದೆ ಒಂದರಂತೆ ಅಚ್ಚುಕಟ್ಟಾಗಿ ನಡೆಯಿತು.
ಬಾಯಿಪಾಠ ಮಾಡಿದ ಭಾಷಣವನ್ನು ಕೆಲಮಕ್ಕಳು ಹೆದರುತ್ತಾ, ಕೆಲವರು ತಪ್ಪು ತಪ್ಪು ಓದಿ ತಡವರಿಸುತ್ತಾ, ಮತ್ತೆ ಕೆಲವರು ಗಟ್ಟಿಯಾಗಿ ದೈರ್ಯವಾಗಿ ಓದಿ ಶಬ್ಬಾಷ್‌ಗಿರಿ ಪಡೆಯುತ್ತಾ ಗಾಂಧಿ ಮುಂತಾದ ಸ್ವಾತಂತ್ರ ಹೋರಾಟಗಾರರನ್ನು ನೆನಪಿಸಿಕೊಂಡರು. ಈಗ ಮುಖ್ಯ ಅಥಿತಿಯಾಗಿ ಮಾತನಾಡುವ ಸರದಿ ನನಗೆ ಬಂತು. ಏನು ಮಾತನಾಡುವುದು ಎನ್ನುವ ಗೊಂದಲದಲ್ಲೇ ನಮ್ಮೂರಿನ ಸಂಗತಿಗಳನ್ನು ಬಳಸಿಕೊಂಡೇ ಸ್ವಾತಂತ್ರವನ್ನು ಬೇರೆಯದೇ ರೀತಿಯಲ್ಲಿ ಹೇಳಬೇಕೆನಿಸಿ ಒಂದಷ್ಟು ಮಾತನಾಡಿದೆ.
ಅದರ ಸಾರಾಂಶ ಹೀಗಿತ್ತು: ಸ್ವಾತಂತ್ರ್ಯ ಎಂದರೆ ಬ್ರಿಟೀಷರು ಬಿಟ್ಟುಕೊಟ್ಟದ್ದು ಎಂದೇ ಇನ್ನೆಷ್ಟು ದಿನ ಮಾತಾಡೋದು? ಮೊದಲು ನಮ್ಮ ನಮ್ಮ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಹೇಗಿದೆ ಎಂದು ನೋಡೋಣ. ನಮ್ಮ ಊರಿನ ಕೇರಿಯ ಹರಿಜನರನ್ನು ಎಷ್ಟು ಜನ ನಮ್ಮ ಮನೆಯ ಒಳಗೆ ಕರ್‍ಕೊಂಡು ಊಟ ಹಾಕ್ತೀವಿ? ಅಥವಾ ಮೇಲ್ಜಾತಿಯವ್ರು ಹರಿಜನರ ಕೇರಿಗೆ ಹೋಗಿ ಅವರ ಮನೆಯಾಗ ಕೂತ್ಕೊಂಡು ಎಷ್ಟು ಜನ ಊಟ ಮಾಡ್ತಾರೆ? ಅವರನ್ನು ಒಳ್ಳೆಯ ಮನಸ್ಸಿನಿಂದ ಗುಡಿ ಒಳಗ ಬಿಟ್ಕಳ್ಳಾಕ ಎಷ್ಟ ಜನ ತಯಾರಿದಿವಿ? ಹಾಗಾದರೆ ಈ ಊರಿನ ಹರಿಜನರಿಗೆ ನಮ್ಮೂರಿನವರಿಂದ ಸ್ವಾತಂತ್ರ್ಯ ಸಿಕ್ಕಿದೆಯೇ?
ನಾವು ನಮ್ಮೂರಿನ ಹೆಣ್ಣುಮಕ್ಕಳಿಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಕೊಟ್ಟೀವಿ? ಗಂಡುಹುಡುಗರ್‍ನ ಓದ್ಸಾಕ ಇಷ್ಟಪಡೋ ನಾವು ಹೆಣ್ಣು ಹುಡುಗಿಯರನ್ನ independence-dayಹೆಚ್ಚು ಓದಿಸ್ದೆ ಅವರನ್ನು ಬಂಧನದಲ್ಲಿಟ್ಟಿಲ್ಲವಾ? ಮಕ್ಕಳನ್ನು ಓದಿಸದೆ ನಮ್ಮ ಮನೆ ಕೆಲಸಗಳಿಗೆ ಹಚ್ಚಿಕೊಂಡು ಮಕ್ಕಳನ್ನು ಅಜ್ಞಾನದ ಕೂಪಕ್ಕೆ ದೂಡೋದು ಸಹಾ ಅವರನ್ನು ಸ್ವಾಂತಂತ್ರ್ಯವಾಗಿ ಬೆಳೆಯುವ ಅವಕಾಶವನ್ನು ಕಸಿದುಕೊಂಡಂತಲ್ಲವೆ?
ಸರಕಾರದ ಇಲಾಖೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಇಲಾಖೆಗಳಲ್ಲಿ ಜಗಳ ತೆಗೆದರೆ, ಅಥವಾ ಹಲವರು ಸೇರಿ ಮುತ್ತಿಗೆ ಹಾಕಿದರೆ ಪೋಲಿಸ್ ಬಂಧನವಾಗಿ ಬೆದರಿಕೆ ಹಾಕ್ತಾರೆ? ಹಾಗಾದರೆ ನಮ್ಮ ಹಕ್ಕುಗಳ ಚಲಾವಣೆ ಮಾಡೋದಾದ್ರೂ ಹೇಗೆ? ನಮ್ಮ ಭೂಮಿಯನ್ನು ಸರಕಾರ ಕೊಡು ಎಂದಾಕ್ಷಣ ಕೊಡಲು ನಾವು ತಯಾರಾಗ್ತೀವಿ, ಅದನ್ನು ವಿರೋಧಿಸುವ ಸ್ವಾತಂತ್ರ್ಯ ನಮಗಿಲ್ಲವೇ?
ಇಂತದೇ ಕೆಲವು ಮಾತುಗಳನ್ನು ಹೇಳಿದೆ. ಈ ಮಾತುಗಳನ್ನು ಮಕ್ಕಳನ್ನು ಒಳಗೊಂಡಂತೆ ಹೆಚ್ಚಾಗಿ ದೊಡ್ಡವರನ್ನು ಕೇಂದ್ರೀಕರಿಸಿ ಮಾತನಾಡಿದ್ದೆ. ಈ ಮಾತುಗಳಿಗೆ ಕೆಲವು ಮಿತಿಗಳು ಇವೆಯಾದರೂ ಗಮನಸೆಳೆಯಲೆಂದು ಉದ್ದೇಶಪೂರ್ವಕವಾಗಿಯೇ ಮಾತನಾಡಿದ್ದೆ. ಕೆಲವು ಮಾತುಗಳಿಗೆ ಚಪ್ಪಾಳೆ ಬಿದ್ದವಾದರೂ ಊರಿನ ಹಿರಿಯರಿಗೆ ನನ್ನ ಮಾತುಗಳು ಅಷ್ಟಾಗಿ ಇಷ್ಟವಾದಂತಾಗಲಿಲ್ಲ. ಕೆಲವರು ಗಾಂಧಿ, ಲಜಪತ್ ರಾಯರ ಹೆಸರೇ ಹೇಳಲಿಲ್ಲ ಎಂದರು. ಕೆಲವರು ‘ಇವು ಹೇಳಕ ಚೆಂದ ಊರಾಗ ಅನುಸರಿಸಾಕಲ್ಲ ಎಂದರು. ಹೀಗೆ ತರಾವರಿ ಅಭಿಪ್ರಾಯಗಳು ಬಂದವು.

ಕಾಮೆಂಟ್‌ಗಳಿಲ್ಲ: