ಸೌಜನ್ಯ: ಪ್ರವಾವಾಣಿ
ಕಾರ್ಯ-ಕಾರಣ ಸಂಬಂಧಗಳಲ್ಲದೇ ಇರುವ ಯಾವುದನ್ನೂ ವೈಜ್ಞಾನಿಕ ಚಿಂತನಾ ವಿಧಾನ ಒಪ್ಪುವುದಿಲ್ಲ. ಧಾರ್ಮಿಕ ನಂಬಿಕೆಗಳನ್ನು ಆಧಾರವಾಗಿಟ್ಟುಕೊಂಡ ಅನೇಕ ಆಚರಣೆಗಳನ್ನು ಈ ಕಾರ್ಯ-ಕಾರಣದ ತರ್ಕದ ಮೂಲಕ ನೋಡಿದರೆ ಅವೆಲ್ಲವೂ ಅರ್ಥಹೀನ ಕ್ರಿಯೆಗಳಾಗಿ ಕಾಣಿಸುತ್ತವೆ. ಹಾಗೆಯೇ ಈ ಆಚರಣೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಹೊರಟರೆ ಅವುಗಳಿಂದ ಆರ್ಥಿಕ ಅಥವಾ ಸಾಮಾಜಿಕ ಲಾಭ ಪಡೆಯುವ ಒಂದು ವರ್ಗ ಕಾಣಬಹುದು. ಇದು ಎಲ್ಲಾ ದೇಶ, ಧರ್ಮಗಳ ವಿಷಯದಲ್ಲೂ ಸತ್ಯವೇ. ವೈಜ್ಞಾನಿಕ ಚಿಂತನಾಕ್ರಮವನ್ನು ಬೆಳೆಸುವುದನ್ನು ಉದ್ದೇಶವಾಗಿಟ್ಟುಕೊಂಡಿರುವ ಭಾರತ ಜ್ಞಾನ ವಿಜ್ಞಾನ ಸಮಿತಿಯ ಪದಾಧಿಕಾರಿಗಳಲ್ಲಿ ಒಬ್ಬರಾದ ಪ್ರಭಾ ಎನ್ ಬೆಳವಂಗಲ ಧಾರ್ಮಿಕ ಆಚರಣೆಗಳ ಲಾಭ ಪಡೆಯುವ ‘ಪುರೋಹಿತಶಾಹಿ’ಯನ್ನು ಖಂಡಿಸುವ ಹೇಳಿಕೆಯೊಂದನ್ನು ಜುಲೈ 27ರಂದು ತಮ್ಮ ಫೇಸ್‌ಬುಕ್ ಸ್ಟೇಟಸ್ ಆಗಿ ಹಾಕಿಕೊಂಡಿದ್ದರು. ಈ ಸ್ಟೇಟಸ್ ಅನ್ನು ಈ ಲೇಖನ ಬರೆಯುವ ಹೊತ್ತಿನ ತನಕ 83 ಜನ ಮರುಹಂಚಿಕೊಂಡಿದ್ದಾರೆ. ಹಾಗೆಯೇ ಇದರ ಅಡಿಯಲ್ಲಿ 103 ಪ್ರತಿಕ್ರಿಯೆಗಳಿವೆ.
ಪುರೋಹಿತಶಾಹಿಯನ್ನು ಖಂಡಿಸಿ ಮಾತನಾಡುವುದು ಇಂದು ನಿನ್ನೆಯ ಸಂಗತಿ ಏನಲ್ಲ. ವೇದಗಳನ್ನು ಪ್ರಮಾಣ ಎಂದು ಒಪ್ಪದ ಚಾರ್ವಾಕನೂ ಖಂಡಿಸಿದ್ದಾನೆ. ಅಲ್ಲಿಂದೀಚೆಗೆ ಬುದ್ಧ, ಬಸವಾದಿಗಳೆಲ್ಲರೂ ಪುರೋಹಿತಶಾಹಿಯನ್ನು ಗುರಿಯಾಗಿಸಿಕೊಂಡವರೇ. ಹಾಗೆಯೇ ಆಧುನಿಕ ಕಾಲಘಟ್ಟದಲ್ಲಿ ಕೇರಳದ ನಾರಾಯಣ ಗುರು, ಸ್ವಾಮಿ ವಿವೇಕಾನಂದರು ಹೀಗೆ ಅನೇಕರು ಪುರೋಹಿತ ಶಾಹಿಯನ್ನು ತಮ್ಮದೇ ಆದ ರೀತಿಯಲ್ಲಿ ಖಂಡಿಸಿದ್ದಾರೆ, ಟೀಕಿಸಿದ್ದಾರೆ ಮತ್ತು ವಿಮರ್ಶಿಸಿದ್ದಾರೆ. ಆದರೆ ಪ್ರಭಾ ಅವರ ಫೇಸ್‌ಬುಕ್ ಗೆಳೆಯರ ಪಟ್ಟಿಯಲ್ಲಿದ್ದ ಕೆಲವರಿಗೆ ಈ ಪುರೋಹಿತಶಾಹಿಯ ಖಂಡನೆ ನಿರ್ದಿಷ್ಟ ಜಾತಿಯ ಟೀಕೆಯಂತೆ ಕಂಡಿತು. ವಿ.ಆರ್.ಭಟ್ ಎಂಬುವವರಿಗೆ ಇದು ಸನಾತನ ಧರ್ಮದ ಟೀಕೆಯಂತೆ ಕಂಡಿತು. ಅವರು ಮರು ಟೀಕೆಗೆ ಮುಂದಾದರು. ಅವರ ಸಿಟ್ಟು ಎಷ್ಟರ ಮಟ್ಟಿಗೆ ಇತ್ತೆಂದರೆ ‘ಜುಟ್ಟು ಹಿಡಿದು ಅತ್ಯಾಚಾರ ಮಾಡಿದರೆ ನಿಮಗೆ ಗೊತ್ತಾದೀತು’ ಎಂದೂ ಬರೆದುಬಿಟ್ಟರು. ಈಗ ವಿ.ಆರ್.ಭಟ್ ಪೊಲೀಸರ ಅತಿಥಿ. ಭಾರತೀಯ ದಂಡ ಸಂಹಿತೆಯ ಹಲವು ಕಲಮುಗಳ ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ಪ್ರಕಾರವೂ ಅವರ ಮೇಲೆ ಕೇಸು ದಾಖಲಿಸಲಾಗಿದೆ. ಗೂಂಡಾ ಕಾಯ್ದೆಯನ್ನೂ ಅನ್ವಯಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.
ಪ್ರಭಾ ಅವರ ಸ್ಟೇಟಸ್‌ಗೆ ವಿ.ಆರ್.ಭಟ್ ಕೆಟ್ಟದಾಗಿ ಪ್ರತಿಕ್ರಿಯಿಸುವ ಹೊತ್ತಿಗೆ ವಿಬ್ಗಯೊರ್ ಶಾಲೆಯಲ್ಲಿ ಮಗುವೊಂದರ ಮೇಲೆ ಅತ್ಯಾಚಾರ ನಡೆದ ವಿಚಾರ ಸಾರ್ವಜನಿಕ ಚರ್ಚೆಯಲ್ಲಿ ಇಲ್ಲದೇ ಇದ್ದಿದ್ದರೆ ಈ ಪ್ರಕರಣಕ್ಕೆ ಇಂಥದ್ದೊಂದು ತಿರುವು ಬರುತ್ತಿತ್ತೇ? ಬಹುಶಃ ಇಲ್ಲ. ಸಾರ್ವಜನಿಕ ವೇದಿಕೆಯೊಂದರಲ್ಲಿ ಇಂಥ ಮಾತುಗಳನ್ನು ಬರೆಯುವಾತ ಯಾರೋ ಮಾನಸಿಕ ಅಸ್ವಸ್ಥನಿರಬೇಕು ಎಂದು ಎಲ್ಲರೂ ನಿರ್ಲಕ್ಷಿಸಿಬಿಡುತ್ತಿದ್ದರೇನೋ? ಸ್ವತಃ ಪ್ರಭಾ ಅವರು ತಮ್ಮ ಖಾತೆಯಲ್ಲಿ ಕಾಣಿಸಿಕೊಳ್ಳುವ ಈ ಪ್ರತಿಕ್ರಿಯೆಯನ್ನು ತೆಗೆದು ಹಾಕುತ್ತಿದ್ದರೇನೋ?
ಈ ಪ್ರಕರಣದ ಕುರಿತಂತೆ ಫೇಸ್‌ಬುಕ್‌ನಲ್ಲಿ ಇನ್ನೂ ಚರ್ಚೆಗಳು ಮುಂದುವರಿಯುತ್ತಿವೆ. ಇಲ್ಲಿಯೂ ಪ್ರಭಾ ಮತ್ತು ವಿ.ಆರ್.ಭಟ್ ಪರವಾದ ಗುಂಪುಗಳು ರೂಪುಗೊಂಡಿವೆ. ಪ್ರಭಾ ಅವರ ಬೆಂಬಲಕ್ಕೆ ನಿಂತಿರುವವರು ಹೇಳುವಂತೆ ಪ್ರಭಾ ಸೋಷಿಯಲ್ ಮೀಡಿಯಾದ ಕೊಳೆ ತೊಳೆಯುವ ಕೆಲಸ ಆರಂಭಿಸಿದ್ದಾರೆ. ಚಿಂತನೆಯ ಬಹುತ್ವವನ್ನು ಒಪ್ಪದ ಅನೇಕರು ಪ್ರಗತಿಪರವಾದ ಎಲ್ಲವುಗಳ ವಿರುದ್ಧವೂ ಕೆಟ್ಟ ಭಾಷೆಯಲ್ಲಿ ದಾಳಿ ನಡೆಸುತ್ತಾರೆ. ಇಂಥವರಿಗೆಲ್ಲಾ ಪಾಠ ಕಲಿಸುವ ಹೊತ್ತು ಬಂದಿದೆ. ಅದು ವಿ.ಆರ್.ಭಟ್ ಬಂಧನದೊಂದಿಗೆ ಆರಂಭವಾಗಿದೆ. ಇದಕ್ಕೆ ಪ್ರತಿಯಾಗಿ ವಿ.ಆರ್. ಭಟ್ ಅವರನ್ನು ಬೆಂಬಲಿಸುವವರು ಕೆಟ್ಟ ಭಾಷೆ ಬಳಸಿರುವುದು ಸರಿಯಲ್ಲ. ಸಿಟ್ಟಿನಿಂದ ಬೈಯ್ಯುವಾಗ ಹೇಳುವಂತೆ ಈ ಮಾತನ್ನು ಹೇಳಿದ್ದಾರೆಯೇ ಹೊರತು ಅತ್ಯಾಚಾರಕ್ಕೆ ಪ್ರಚೋದನೆ ನೀಡುವುದು ವಿ.ಆರ್.ಭಟ್ ಉದ್ದೇಶವಾಗಿರಲಿಲ್ಲ ಎಂದು ವಾದಿಸುತ್ತಿದ್ದಾರೆ.
ಪ್ರತಿಕ್ರಿಯೆಯಲ್ಲಿ ಕೆಟ್ಟ ಭಾಷೆಯ ಬಳಕೆಯಾಗಿದೆ ಎಂಬುದನ್ನು ಎರಡೂ ಗುಂಪಿನವರು ಒಪ್ಪುತ್ತಿದ್ದಾರೆ. ಇಂಟರ್‌ನೆಟ್ ಬರುವ ತನಕ ಸಮೂಹ ಸಂವಹನ ಎಂಬುದು ಸಂಪಾದಕೀಯ ನಿಯಂತ್ರಣಕ್ಕೆ ಒಳಪಟ್ಟು ನಡೆಯುತ್ತಿತ್ತು. ಸೋಷಿಯಲ್ ಮೀಡಿಯಾಗಳಂತೂ ಸಮೂಹ ಸಂವಹನದ ಸ್ವರೂಪವನ್ನೇ ಬದಲಾಯಿಸಿಬಿಟ್ಟಿವೆ. ಪ್ರತಿಯೊಬ್ಬ ಓದುಗನಲ್ಲೂ ಇರುವ ಬರಹಗಾರನನ್ನು ಶೋಧಿಸಿ ವಿಶ್ವದ ಮುಂದಿಡುತ್ತಿದೆ. ಅಂದರೆ ಯಾರು ಬೇಕಾದರೂ ಏನನ್ನಾದರೂ ಹೇಗೆ ಬೇಕಾದರೂ ಪ್ರಕಟಿಸಬಹುದಾದ ಬಹುದೊಡ್ಡ ಸ್ವಾತಂತ್ರ್ಯವನ್ನು ಈ ಮಾಧ್ಯಮ ಒದಗಿಸಿದೆ. ಈ ಸ್ವಾತಂತ್ರ್ಯ ಇದೆ ಎಂಬ ಕಾರಣಕ್ಕೆ ಸೋಷಿಯಲ್ ಮೀಡಿಯಾ ಒದಗಿಸಿರುವ ಸಾರ್ವಜನಿಕ ವೇದಿಕೆಗಳಲ್ಲಿ ಏನನ್ನು ಬೇಕಾದರೂ ಬರೆಯಬಹುದೇ?
ಸಿಟ್ಟಿನಿಂದ ಬೈಯ್ಯುವಾಗ ಕೆಟ್ಟ ಮಾತು ಬಂದುಬಿಡುತ್ತದೆ ಎಂಬ ವಾದವನ್ನು ಒಪ್ಪಿಕೊಂಡೇ ಯೋಚಿಸಿದರೂ ಸಾರ್ವಜನಿಕವಾಗಿ ಕೆಟ್ಟ ಭಾಷೆ ಬಳಸುವುದು ಬಹಳ ಸುಲಭ ಎನ್ನಲಾಗದು. ಏಕೆಂದರೆ ಫೇಸ್‌ಬುಕ್ ನಂತಹ ವೇದಿಕೆಗಳಿಗೆ ಒಂದು ಔಪಚಾರಿಕ ಸ್ವರೂಪವಿದೆ. ಎದುರಿಗೆ ಇರುವ ವ್ಯಕ್ತಿಯೊಬ್ಬನ ಮೇಲೆ ರೇಗುವಂಥ ವಾತಾವರಣ ಇಲ್ಲಿರುವುದಿಲ್ಲ. ಇದು ಕನಿಷ್ಠ ವ್ಯಕ್ತಿಯೊಬ್ಬರಿಗೆ ಇ–ಮೇಲ್ ಅಥವಾ ವೈಯಕ್ತಿಕ ಸಂದೇಶ ಕಳುಹಿಸುವ ಕ್ರಿಯೆಯಲ್ಲ. ಇಡೀ ಗೆಳೆಯರ ಬಳಗದಲ್ಲಿರುವ ನೂರಾರು ಜನರು ಓದುತ್ತಾರೆಂಬ ಅರಿವಿನೊಂದಿಗೇ ಇಲ್ಲಿ ಪ್ರತಿಕ್ರಿಯಿಸಬೇಕಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಎಲ್ಲರಿಗೂ ಇದು ತಿಳಿದಿದೆ. ಇಷ್ಟಾಗಿಯೂ ಕೆಟ್ಟ ಭಾಷೆಯನ್ನು ಯಾರಾದರೂ ಬಳಸುತ್ತಾರೆಂದರೆ ಅವರು ಬೀದಿಯಲ್ಲಿ ನಿಂತು ಕೆಟ್ಟ ಮಾತುಗಳಲ್ಲಿ ಬೈಯ್ಯುವ ಧೈರ್ಯವಿರುವರೇ ಆಗಿರಬೇಕು. ಈ ಧೀರರ ಸಂಖ್ಯೆ ಫೇಸ್‌ಬುಕ್, ಟ್ವಿಟ್ಟರ್‌ನಂಥ ವೇದಿಕೆಗಳಲ್ಲಿ ಭಾರೀ ಪ್ರಮಾಣದಲ್ಲಿಯೇ ಇದೆ. ನಿರ್ದಿಷ್ಟ ವೈಚಾರಿಕ ನಿಲುವುಗಳನ್ನು ಹೊಂದಿರುವವರನ್ನು ಹುಡುಕಿ ಬೇಟೆಯಾಡುವಲ್ಲಿ ಇವರು ನಿಸ್ಸೀಮರು. ಇವರಲ್ಲಿರುವ ದೊಡ್ಡ ಅಸ್ತ್ರವೇ ಕೆಟ್ಟ ಭಾಷೆ.
ಅವಾಚ್ಯ ಶಬ್ದಗಳು ಮತ್ತು ಕೆಟ್ಟ ಭಾಷೆಯನ್ನು ಕೆಲವರು ಸಾರ್ವಜನಿಕ ವೇದಿಕೆಗಳಲ್ಲಿ ಏಕೆ ಬಳಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಈ ತನಕ ನಡೆದಿರುವ ಅಧ್ಯಯನಗಳು ಒಂದು ಅಂಶವನ್ನು ಸ್ಪಷ್ಟಪಡಿಸುತ್ತಿವೆ. ಈ ಬಗೆಯ ನಿಂದನೆಗಳಲ್ಲಿ ತೊಡಗುವವರು ಸಾಮಾನ್ಯವಾಗಿ ತೀವ್ರ ಬಲಪಂಥೀಯ ರಾಜಕಾರಣ ಅಥವಾ ತೀವ್ರ ಎಡಪಂಥೀಯ ರಾಜಕಾರಣಗಳ ಬೆಂಬಲಿಗರಾಗಿರುತ್ತಾರೆ. ಭಾರತದ ಸಂದರ್ಭದಲ್ಲಿಯೂ ಇದು ಬಹುತೇಕ ನಿಜ. ಸದ್ಯದ ಮಟ್ಟಿಗೆ ತೀವ್ರ ಬಲಪಂಥೀಯ ಧೋರಣೆ ಇಲ್ಲಿ ಮೇಲುಗೈ ಪಡೆದಿದೆ. ಪ್ರಭಾ ಅವರ ಮೇಲಿನ ವಾಗ್ದಾಳಿಯಲ್ಲೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ವೈಜ್ಞಾನಿಕ ಮನೋಭಾವ, ಅಲ್ಪಸಂಖ್ಯಾತರ ಹಕ್ಕುಗಳು, ಬಹುಸಂಸ್ಕೃತಿ ಇತ್ಯಾದಿಗಳ ಪರವಾಗಿ ಅನಿಸಿಕೆಗಳನ್ನು ಹಂಚಿಕೊಳ್ಳುವ ಎಲ್ಲರೂ ಒಂದಲ್ಲಾ ಒಂದು ಹಂತದಲ್ಲಿ ಇಂಥ ದಾಳಿಗಳನ್ನು ಎದುರಿಸಲೇಬೇಕಾಗುತ್ತದೆ ಎಂಬ ಸ್ಥಿತಿ ಸದ್ಯ ಭಾರತದಲ್ಲಿದೆ. ಈ ಏಕಪಕ್ಷೀಯ ಅಸಹನೆಗೆ ಸಾಮಾಜಿಕ ನಿಯಂತ್ರಣಗಳ್ಯಾವೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಹಾಗಾಗಿ ಇದರ ನಿಯಂತ್ರಣಕ್ಕೆ ಕಾನೂನು ಸೂಕ್ತ ಎಂದು ಅನೇಕರು ಭಾವಿಸುತ್ತಿದ್ದಾರೆ. ಆದರೆ ಇದು ಎರಡಲಗಿನ ಕತ್ತಿ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ‘66ಎ’ ಸೆಕ್ಷನ್’ ಈ ತನಕ ಬಳಕೆಯಾಗಿರುವುದನ್ನು ನೋಡಿದರೆ ಇದು ಹೆಚ್ಚು ಸರಿಯಾಗಿ ಅರ್ಥವಾಗುತ್ತದೆ. ಬಾಳಾ ಠಾಕ್ರೆಯವರ ನಿಧನಾನಂತರ ಮುಂಬೈ ಬಂದ್ ಆದದ್ದು ಗೌರವಕ್ಕಿಂತ ಹೆಚ್ಚು ಭಯದಲ್ಲಿ ಎಂದು ಫೇಸ್‌ಬುಕ್ ಸ್ಟೇಟಸ್ ಹಾಕಿದ್ದ ಯುವತಿ ಮತ್ತು ಆ ಸ್ಟೇಟಸ್ ಅನ್ನು ಲೈಕ್ ಮಾಡಿದ್ದ ಮತ್ತೊಬ್ಬ ಯುವತಿಯನ್ನು ಬಂಧಿಸಲಾಗಿತ್ತು. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯೊಬ್ಬರ ವಿರುದ್ಧ ಪತ್ರಿಕೆಗೆ ಲೇಖನವೊಂದನ್ನು ಬರೆದಿದ್ದ ಪಿಯುಸಿಎಲ್‌ನ ಪದಾಧಿಕಾರಿಯೊಬ್ಬರು ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ತಕ್ಷಣ ಅವರನ್ನು ಬಂಧಿಸಲಾಗಿತ್ತು. ಮಮತಾ ಬ್ಯಾನರ್ಜಿಯವರನ್ನು ಟೀಕಿಸುವ ಕಾರ್ಟೂನ್ ಒಂದನ್ನು ಹಂಚಿಕೊಂಡಿದ್ದ ಅಧ್ಯಾಪಕರೊಬ್ಬರನ್ನೂ ಇದೇ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಕಿರಿಕಿರಿ ಉಂಟುಮಾಡುವುದು, ಮುಜುಗರವನ್ನುಂಟು ಮಾಡುವುದು, ಅಪಾಯವನ್ನುಂಟು ಮಾಡುವುದು, ಅವಮಾನಿಸುವುದು ಹೀಗೆ ‘66ಎ’ ಅನ್ವಯ ಶಿಕ್ಷಿಸಬಹುದಾದ ಅಪರಾಧಗಳನ್ನು ನಿರ್ವಚಿಸಲಾಗಿದೆ. ಆದರೆ ಈ ಅಪಾಯ, ಮುಜುಗರ, ಕಿರಿಕಿರಿ ಮತ್ತು ಅವಮಾನ ಎಂಬುದಕ್ಕೆ ಯಾವುದೇ ಸ್ಪಷ್ಟ ವ್ಯಾಖ್ಯೆಗಳಿಲ್ಲ. ದೂರು ಸ್ವೀಕರಿಸುವ ಪೊಲೀಸ್ ಅಧಿಕಾರಿಗೆ ದೂರಿನಲ್ಲಿರುವುದು ನಿಜ ಅನ್ನಿಸಿದರೆ ಸಾಕಾಗುತ್ತದೆ. ಇದನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ತಮ್ಮ ಟೀಕಾಕಾರರ ವಿರುದ್ಧವೂ ಬಳಸುವ ಸಾಧ್ಯತೆ ಇದೆ.
ಆಂಧ್ರಪ್ರದೇಶದ ಪ್ರಕರಣ ಇದನ್ನೇ ಹೇಳುತ್ತದೆ. ಅಲ್ಲಿನ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಲೇಖನವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ತಕ್ಷಣ ಬರೆದಾಕೆಯನ್ನು ಬಂಧಿಸಲಾಯಿತು. ಹಾಗೆಯೇ ಇದಕ್ಕೆ ಮತ್ತೊಂದು ಮುಖವೂ ಇದೆ. ಅತ್ಯಾಚಾರದ ಬೆದರಿಕೆಯನ್ನು ಇನ್ನೂ ಸಾರ್ವಜನಿಕ ಜೀವನದಲ್ಲಿರುವ ಅನೇಕ ಮಹಿಳೆಯರು ಎದುರಿಸಿದ್ದಾರೆ. ಕವಯಿತ್ರಿ ಮೀನಾ ಕಂದಸಾಮಿ ಮತ್ತು ಪತ್ರಕರ್ತೆ ಸಾಗರಿಕಾ ಘೋಷ್ ಅವರು ಈ ಕುರಿತಂತೆ ಬರೆದುಕೊಂಡಿದ್ದರು. ಹೀಗೆ ಬೆದರಿಕೆ ಒಡ್ಡಿದವರನ್ನು ಈ ತನಕ ಬಂಧಿಸಲಾಗಿಲ್ಲ ಎಂಬ ವಾಸ್ತವವೂ ನಮ್ಮ ಮುಂದಿದೆ.
ಮಹಿಳೆಯೊಬ್ಬರಿಗೆ ಅತ್ಯಾಚಾರದ ಬೆದರಿಕೆಯೊಡ್ಡಿದವನನ್ನು ಬಂಧಿಸುವುದಕ್ಕೆ ಈ ಕಾಯ್ದೆ ಬಳಕೆಯಾದ ತಕ್ಷಣ ಅದು ಇದ್ದು ಬಿಡಲಿ ಎಂದುಕೊಳ್ಳುವಂತಿಲ್ಲ. ಒಂದು ವೇಳೆ ಬೆದರಿಕೆಯೊಡ್ಡಿದಾತ ಅಮೆರಿಕದಲ್ಲೋ ಆಸ್ಟ್ರೇಲಿಯಾದಲ್ಲೋ ಅಥವಾ ದುಬೈಯಲ್ಲೋ ಇದ್ದರೆ ಆತ ಭಾರತೀಯ ಪ್ರಜೆಯೇ ಆಗಿದ್ದರೂ ಈ ಕಾನೂನಿಗೆ ಏನನ್ನೂ ಮಾಡಲಾಗುತ್ತಿರಲಿಲ್ಲ. ಅಥವಾ ಪ್ರಭಾ ಅವರ ಸ್ಟೇಟಸ್ ತಮಗೆ ಕಿರಿಕಿರಿ ಉಂಟು ಮಾಡಿದೆ, ಅವಮಾನಿಸಿದೆ ಮುಂತಾಗಿ ಆರೋಪಿಸಿ ದೂರು ನೀಡಿದ್ದರೆ ಪ್ರಕರಣವೇ ಮತ್ತೊಂದು ಸ್ವರೂಪ ಪಡೆಯುವ ಸಾಧ್ಯತೆ ಇತ್ತು. ಈಗಲೂ ಅಂಥದ್ದೊಂದು ಪ್ರಯತ್ನ ಚಾಲನೆಯಲ್ಲಿರುವುದರ ಸೂಚನೆಗಳು ಫೇಸ್‌ಬುಕ್‌ನ ಕೆಲವು ಗುಂಪುಗಳ ಚರ್ಚೆಯಲ್ಲಿ ಕಾಣಸಿಗುತ್ತದೆ. ಪ್ರಭಾ ಅವರು ಮರು ಹಂಚಿಕೊಂಡ ಸ್ಟೇಟಸ್ ಒಂದರಲ್ಲಿ ‘ದಲಿತ ನಿಂದನೆ’ ಇದೆ ಎಂದು ಆರೋಪಿಸಿ ದೂರು ದಾಖಲಿಸಲು ಕೆಲವರು ಮುಂದಾಗಿದ್ದಾರೆ.
ಜನಸಾಮಾನ್ಯರಿಗೆ ಅಭಿವ್ಯಕ್ತಿಗೆ ಅವಕಾಶ ಒದಗಿಸಿಕೊಟ್ಟಿರುವ ಸೋಷಿಯಲ್ ಮೀಡಿಯಾವನ್ನು ಹೇಗಾದರೂ ಮಾಡಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಎಲ್ಲಾ ಪ್ರಭುತ್ವಗಳೂ ಪ್ರಯತ್ನಿಸುತ್ತವೆ. ಸರ್ವಾಧಿಕಾರಿ ಪ್ರಭುತ್ವಗಳಾದರೆ ಇಂಥ ಮಾಧ್ಯಮಗಳನ್ನು ಜನರಿಗೆ ತಲುಪದಂತೆ ನೋಡಿಕೊಳ್ಳುತ್ತವೆ. ಪ್ರಜಾಪ್ರಭುತ್ವವಿರುವ ದೇಶಗಳಲ್ಲಿ ವಿವಿಧ ಕಾನೂನುಗಳ ಮೂಲಕ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತದೆ. ಇಂಥ ಕಾನೂನುಗಳನ್ನು ತರುವುದಕ್ಕೆ ಎಲ್ಲಾ ಪ್ರಭುತ್ವಗಳೂ ನೆಪಗಳಿಗಾಗಿ ಕಾಯುತ್ತಿರುತ್ತವೆ. ಈಗಾಗಲೇ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಇಡೀ ದೇಶವನ್ನೇ ‘ಬಿಗ್ ಬಾಸ್ ಮನೆ’ಯನ್ನಾಗಿಸಲಾಗಿದೆ. ನಮ್ಮ ಎಲ್ಲಾ ಅಂತರ್ಜಾಲ ಸಂವಹನದ ಮೇಲೆ ಕಣ್ಣಿಡುವ ‘ನೇತ್ರ’ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇನ್ನು ಕೆಟ್ಟ ಭಾಷೆ ಬಳಕೆಯ ನೆಪದಲ್ಲಿ ಬೇರೇನಾದರೂ ಜಾರಿಗೆ ಬರಬಹುದು ಎಂಬ ಎಚ್ಚರ ಎಡ–ಬಲಗಳಲ್ಲಿರುವ ಹಂಚಿ ಹೋಗಿರುವ ನಮಗೆ ಬೇಕಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ