ಭಾನುವಾರ, ಆಗಸ್ಟ್ 24, 2014

ಆಗಸ್ಟ್ 18 ಕೊರಗರ ಸ್ವಾತಂತ್ರ್ಯ ದಿನ- ಭೂಮಿ ಹಬ್ಬ

ಆಗಸ್ಟ್ 18 ಕೊರಗರಿಗೆ ಸ್ವಾತಂತ್ರ್ಯದ ದಿನ 
ಕೊರಗರಿಗೆ ಭೂಮಿ ಹಬ್ಬದ ಸಂಭ್ರಮ 



'ಜಲ್ ಜಂಗಲ್ ಜಮೀನ್ ಹಮಾರ ಹೈ' ಎಂದು ಜಾರ್ಖಂಡದ ಆದಿವಾಸಿ ಬುಡಕಟ್ಟು ಪಂಗಡದ ನಾಯಕ 'ಬಿರ್ಸಾ ಮುಂಡಾ' ಘೋಷಿಸಿದ ಮಾತು ನಿಜವಾಗುತ್ತಿದೆ. ಶತಶತಮಾನಗಳಿಂದ ಕಾಡಿನ ಮಕ್ಕಳಾಗಿ, ಕಾಡನ್ನೇ ಬದುಕಾಗಿಸಿದ ಆದಿವಾಸಿಗಳ ಸ್ವಚ್ಛಂದ ಕಾಡಿನ ಹಕ್ಕನ್ನು, ತುಂಡರಸರ ಕಾಲದಲ್ಲಿಯೇ ಕಸಿದುಕೊಳ್ಳಲಾಗಿತ್ತು. ಬ್ರಿಟೀಷ್ ಆಡಳಿತದಲ್ಲಿಯೂ ಇದು ನಿರಂತರವಾಗಿ ಮುಂದುವರಿಯಿತು. ಸ್ವಾತಂತ್ರ್ಯ ಭಾರತದಲ್ಲಿಯೂ ಇದೇ ಶೋಷಣೆ ಎಗ್ಗಿಲ್ಲದೇ ನಡೆಯಿತು. ಇದೀಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಆರು ದಶಕಗಳ ನಂತರ, ಈ ನಾಡಿನ ಮೂಲನಿವಾಸಿಗಳಾದ 'ಕೊರಗ'ರಿಗೆ ಸ್ವಾತಂತ್ರ್ಯದ ಸವಿ ಸಿಕ್ಕಿದೆ. ಹೌದು! ಬದುಕಲು ನೆಲೆ ಸಿಕ್ಕಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು - ಅನಾದಿ ಕಾಲದಿಂದಲೂ ಕಾಡಿನಲ್ಲಿಯೇ, ಕಾಡಿನ ತಪ್ಪಲಿನ ಪ್ರದೇಶದಲ್ಲಿಯೇ ವಾಸಿಸುತ್ತಿದ್ದವರು. ಪ್ರಾಚೀನ ಕಾಲದಿಂದಲೂ 'ಊಳಿಗಮಾನ್ಯ ಪದ್ಧತಿ' (ಪ್ರಾದೇಶಿಕವಾಗಿ 'ಅಜಲು ಚಾಕರಿ' ಎನ್ನಲಾಗುತ್ತಿತ್ತು), ಮಡಿ - ಮೈಲಿಗೆ, ಅಸ್ಪ್ರಶ್ಯತೆ, ಜಾತಿ ಪದ್ಧತಿ ಮತ್ತು ಸಾಮಾಜಿಕ ದಬ್ಬಾಳಿಕೆಗಳಿಗೆ ಗುರಿಯಾಗಿದ್ದ ಕೊರಗರನ್ನು, ಮಾನವ ಘನತೆಗೆ ಕುಂದುಂಟುಮಾಡುವ ಹೀನ ಕಸುಬುಗಳಿಗೆ ಉಪಯೋಗಿಸುತ್ತಿದ್ದರು. ಕಸ ಗುಡಿಸುವುದು, ಮಲ ಹೊರುವುದು, ಚರಂಡಿ ಮ್ಯಾನ್ ಹೋಲ್ ಗಿಳಿದು ಸ್ವಚ್ಛಗೊಳಿಸುವುದು ಸತ್ತ ಪ್ರಾಣಿಗಳ ಕಳೇಬರ ಎತ್ತುವುದು ... ಈ ಸಮಾಜ ಕೊರಗರಿಗಾಗಿಯೇ ಮೀಸಲಿಟ್ಟಿದ್ದ ಕಸುಬುಗಳಾಗಿದ್ದವು. ಅಜಲು ಚಾಕರಿ, ರೋಗಿಯ ಕೂದಲು ಮತ್ತು ಉಗುರು ಮಿಶ್ರಿತ ಅನ್ನವನ್ನು ದಾನವಾಗಿ (ಪಂಚಮ ದಾನ ಎನ್ನಲಾಗುತ್ತದೆ) ಪಡೆಯುವುದು, ಊರ ಜಾತ್ರೆಗಳಲ್ಲಿ ವ್ಯಾಪ್ತಿಗಿಂತ ದೂರದಲ್ಲಿ ನಿಂತು ಡೋಲು ಬಾರಿಸುವುದು, ಜಾತ್ರೆಗಳಲ್ಲಿ ಕದನಿ (ಒಂದು ರೀತಿಯ ಸ್ಪೋಟಕ) ಸಿಡಿಸುವುದು, ಕಂಬಳದ ಮುನ್ನಾ ದಿನ ಕಂಬಳ ಕೆರೆ ಕಾಯುವುದು (ಪನಿ ಕುಲ್ಲುನು ಎನ್ನುತ್ತಿದ್ದರು) ಮತ್ತು ಅದರಲ್ಲಿ ಕಲ್ಲು ಗಾಜು ಇದೆಯೇ ಎಂದು ಪರೀಕ್ಷಿಸಲು ಕೊರಗರನ್ನು ಓಡಿಸುವುದು ಹಾಗೂ ಊರ ಧಣಿಗಳ ಬಿಟ್ಟಿ ಚಾಕರಿಯೇ ದೈನಂದಿನ ಬದುಕಾಗಿತ್ತು. ಸುಶ್ರಾವ್ಯವಾಗಿ ಡೋಲು - ಚೆಂಡೆ ಬಾರಿಸುವುದು, ಕೊಳಲು ಊದುವುದು ಕೊರಗರ ಸಾಂಸ್ಕೃತಿಕ ಮತ್ತು ಮನೊರಂಜನಾತ್ಮಕ ಬದುಕಾಗಿತ್ತು. ಬುಟ್ಟಿ ಹೆಣೆಯುವುದು, ಕಾಡುತ್ಪತ್ತಿ ಸಂಗ್ರಹಿಸುವುದು ಕುಲ ಕಸುಬಾಗಿತ್ತು. ಆಮೆ, ಗೋಮಾಂಸ ಪ್ರಿಯವಾದ ಭಕ್ಷಣೆಯಾಗಿತ್ತು. ತಮ್ಮದೇ ಆದ ವಿಶಿಷ್ಟ 'ಕೊರ್ರೆ' ಭಾಷೆ, ವೇಷ - ಭೂಷಣ, ಸಭ್ಯತೆಯನ್ನು ಮೈಗೂಡಿಸಿಕೊಂಡಿದ್ದರು. ಶಿಕ್ಷಣ ಪಡೆಯುವುದನ್ನು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿತ್ತು. ಆ ಮೂಲಕ ಸಮಾಜದಿಂದಲೇ ಕೊರಗರನ್ನು ದೂರವಿಡಲಾಗಿತ್ತು. ಈಗಲೂ ನಗರದ ಹೊರವಲಯದಲ್ಲೋ, ಕಾಡು ಪ್ರದೇಶದ ತಪ್ಪಲಿನಲ್ಲೋ ಇರುವ ಕೊರಗರ ಕೇರಿಗಳಿಗೆ - 'ಕೊರಗರ ಕಾಲೋನಿಗೆ ಹೋಗುವ ರಸ್ತೆ' ಎಂದು ಸರಕಾರವೇ ಅಧಿಕೃತವಾಗಿ ಬೋರ್ಡುಗಳನ್ನು ನೆಟ್ಟಿರುವುದನ್ನು ಗಮನಿಸಬಹುದು! 



ಶತಮಾನಗಳಿಂದ ಗುಲಾಮ ಸಂಸ್ಕೃತಿಯಲ್ಲಿಯೇ ಬೆಂದು ಬಸವಳಿದಿದ್ದ ಕೊರಗರ ಜೀವನದಲ್ಲಿಯೂ ಪರಿವರ್ತನೆಯ ಹುಮ್ಮಸ್ಸು ಹರಿಯತೊಡಗಿತು. ನಿಧಾನವಾಗಿ ಕೊರಗರು ಸಂಘಟಿತರಾಗ ತೊಡಗಿದರು. 1987 ರಲ್ಲಿ ಕಾಪು ದೇವದಾಸ ಶೆಟ್ಟಿ ಎಂಬ 'ಸಮಾಜ ಪರಿವರ್ತನಕಾರ'ನ ನೇತೃತ್ವದಲ್ಲಿ, ಪಡುಬಿದ್ರಿ ಸಮೀಪದ ಕಾಪು ಎಂಬಲ್ಲಿ ಪ್ರಪ್ರಥಮವಾಗಿ' ಕಾಪು ಕೊರಗರ ಸಂಘ 'ಎಂಬ ಸಂಸ್ಥೆ ಅಸ್ಥಿತ್ವಕ್ಕೆ ಬಂತು. ಅವಿಭಜಿತ ಜಿಲ್ಲೆಯ ಎಲ್ಲಾ ಮೂಲೆಗಳಿಂದಲೂ ಕೊರಗರು ಸಂಘಟನೆಗೆ ಬಲ ತುಂಬಲು ಅವಿರತ ಪ್ರಯತ್ನಿಸಿದರು. ಪ್ರಗತಿ ಹೊಂದುವುದು ನಿಧಾನಗತಿಯ ಪ್ರಕ್ರಿಯೆ, ಅದರೊಂದಿಗೆ ನಾವು ಸಂಘರ್ಷಕ್ಕೆ ಇಳಿಯಬೇಕು ಎಂದು ಮನಗಂಡ ಕೊರಗರು, ಸರಕಾರದೊಂದಿಗೆ ಸೌಮ್ಯ ಸಂಘರ್ಷಕ್ಕೆ ಇಳಿಯತೊಡಗಿದರು. ತಮ್ಮ ಮೂಲಭೂತ ಹಕ್ಕುಗಳಿಗಾಗಿ, ತಮ್ಮ ಅಸ್ಥಿತ್ವದ ಉಳಿವಿಗಾಗಿ ಜೀವನವನ್ನೇ ಹೋರಾಟದ ಪಣಕ್ಕಿಟ್ಟರು.

ಆಗಸ್ಟ್ 18 1993 ಕೊರಗ ಜನಾಂಗದ ಇತಿಹಾಸದಲ್ಲೊಂದು ಮೈಲುಗಲ್ಲಾದ ಸ್ವರ್ಣದಿನ. ಶತಮಾನಗಳಿಂದ ಬದುಕುಪೂರ್ತಿ ಬವಣೆ, ಬೇಗುದಿ, ನೋವು, ಹಸಿವು, ಅವಮಾನಗಳನ್ನೇ ಉಂಡು, ಮೇಲ್ವರ್ಗದವರ ದೌರ್ಜನ್ಯಕ್ಕೆ ಬಲಿಯಾದ ಕೊರಗ ಸಮುದಾಯವು ಸರಕಾರದ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ದಿನ. ಮಂಗಳೂರು ಬಾವುಟಗುಡ್ಡೆಯಿಂದ ಆರಂಭವಾಗಿ - ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆಯಲ್ಲಿಯೇ ಸಾಗಿ, ಮಳೆಯನ್ನೂ ಲೆಕ್ಕಿಸದೆ, ಕೊರಗ ಜನಾಂಗದ ಮಹಿಳೆಯರು - ಮಕ್ಕಳೂ ಸೇರಿ, ರಾಜ ಬೀದಿಗಿಳಿದು ಪ್ರತಿಭಟಿಸಿದ ದಿನ. 'ನಮ್ಮ ಜನಾಂಗದ ಅಭಿವೃದ್ಧಿಗೆ ಯೋಜನೆಗಳನ್ನು ತಯಾರಿಸುವ ಮೊದಲು, ನಮ್ಮ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ' ಎಂದು ಸರಕಾರದ ಮುಂದೆ ಒಕ್ಕೊರಳ ಬೇಡಿಕೆಯಿಟ್ಟ ದಿನ. ಅಂದಿನ ಆ ಹೋರಾಟದ ಫಲವಾಗಿಯೇ ಜಿಲ್ಲಾಡಳಿತವು, ಆದಿವಾಸಿ ಬುಡಕಟ್ಟು ಪಂಗಡದ ಕೊರಗ ಜನಾಂಗದ ಸಮಗ್ರ ಅಧ್ಯಯನಕ್ಕಾಗಿ - ಡಾ ಮಹಮ್ಮದ್ ಪೀರ್ (ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದವರು) ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಅದೇ ವರ್ಷ ಉಡುಪಿ ಜಿಲ್ಲೆಯ ಕೊಕ್ಕರ್ಣೆ ಸಮೀಪದ 'ಸೂರಾಲ್ ಮೀಸಲು ಅರಣ್ಟ ಪ್ರದೇಶ'ದ 600 ಎಕ್ರೆ ಜಾಗದಲ್ಲಿ ಭೂಮಿಯ ಹಕ್ಕು ಪ್ರತಿಪಾದಿಸಲು 2000 ಕೊರಗ ಬಂಧುಗಳು ಸನ್ನದ್ಧರಾಗಿದ್ದರು. ಆಗಿನ ಶಾಸಕರಾಗಿದ್ದ ಜಯಪ್ರಕಾಶ ಹೆಗ್ಡೆಯವರು ಮಧ್ಯಪ್ರವೇಶಿಸಿ, ಜಿಲ್ಲಾ ಪಂಚಾಯತ್ ವತಿಯಿಂದ ಭೂಮಿ ಕೊಡಿಸುವ ಭರವಸೆ ನೀಡಿದ ನಂತರ ಅಭಿಯಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

1994 ರಲ್ಲಿ ಹದಿಮೂರು ಪ್ರಮುಖ ಅಂಶಗಳನ್ನೊಳಗೊಂಡ ಅಧ್ಯಯನ ವರದಿಯನ್ನು ಸಮಿತಿ ಸರ್ಕಾರದ ಸುಪರ್ದಿಗೆ ಒಪ್ಪಿಸಿತು. ಈ ವರದಿಯಲ್ಲಿ - '' ಪ್ರತಿಯೊಂದು ಕೊರಗ ಕುಟುಂಬಕ್ಕೂ ಎರಡುವರೆ ಎಕರೆ ಭೂಮಿ ನೀಡಬೇಕು ಹಾಗೂ ಪುನರ್ವಸತಿಗೊಳಿಸಬೇಕು 'ಎಂದು ಶಿಫಾರಸು ಮಾಡಲಾಗಿತ್ತು. ಈ ವರದಿಯ ಸಮಗ್ರ ಅನುಷ್ಟಾನದ ಬೇಡಿಕೆಯನ್ನು ಮುಂದಿಟ್ಟುಕೊಂಡು 'ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ'ವು ನಿರಂತರ ಹೋರಾಟಕ್ಕಿಳಿಯಿತು. ಆದರೆ, ಬೇಡಿಕೆಗಳಿಗೆ ಚಿಕ್ಕಾಸು ಬೆಲೆ ಕೊಡದ ವರಿಷ್ಟ ಅಧಿಕಾರಿಗಳು ಕೆಂಪು ಪಟ್ಟಿಯನ್ನು ಸಡಿಲಿಸದೆ ಮತ್ತಷ್ಟು ಬಿಗು ನಿಲುವಿನಲ್ಲಿಯೇ ಮುಂದುವರಿದರು.

ಕೃಷಿಯನ್ನು ವೃತ್ತಿಯಾಗಿಸಿಕೊಳ್ಳದೆ, ಕುಲಕಸುಬುಗಳಿಗೆ ಜೋತು ಬಿದ್ದ ಕೊರಗ ಕುಟುಂಬಗಳಿಗೆ, ಕೃಷಿ ಭೂಮಿ ಸದುಪಯೋಗಗೊಳ್ಳಬಹುದೆ ಎಂಬ ಅಧಿಕಾರಿಗಳ ಅನುಮಾನದಿಂದ - ದುರ್ಬಲರ ಗಟ್ಟಿ ಧ್ವನಿಯೂ, ಅಧಿಕಾರಿಗಳಿಗೆ ಕೀರಲು ಧ್ವನಿಯಾಗಿ ಪರಿಣಮಿಸಿದ ಹಿನ್ನಲೆಯಲ್ಲಿ ಕೊರಗ ಬಂಧುಗಳ ಬೇಡಿಕೆಗಳಿಗೆ ಅಷ್ಟೊಂದು ಮಹತ್ವ ಲಭಿಸಿರಲಿಲ್ಲ.

ಇದರಿಂದ ವಿಚಲಿತರಾಗದ ಕೊರಗರಲ್ಲಿ - ತಮಗೂ ಕೃಷಿ ಭೂಮಿ ಬೇಕು, ಅದರಲ್ಲೇ ಒಂದಿಷ್ಟು ಉತ್ಪನ್ನ ತೆಗೆದು ಸುಧಾರಣೆ ಮಾಡಿಕೊಳ್ಳಬೇಕೆಂಬ ತುಡಿತ ಹೆಚ್ಚಾಗತೊಡಗಿತು. ಈ ಹಿನ್ನಲೆಯಲ್ಲಿ ಚಳುವಳಿಗಳ ಮೇಲೆ ಚಳುವಳಿ ನಡೆಸುತ್ತಾ, ಸರಕಾರದ ಗಮನ ಸೆಳೆಯಲು ಕೊರಗ ಸಂಘಟನೆಗಳು ಮತ್ತೆ ಮತ್ತೆ ಪ್ರಯತ್ನಿಸಿದವು. ಆ ಪ್ರಯತ್ನಗಳೆಲ್ಲವೂ ಆಳುವ ಸರಕಾರದ ಮುಂದೆ ನಿರುಪಯುಕ್ತವೆನಿಸಿದಾಗ, ಕೊರಗ ಸಮುದಾಯದ ಗೌರವಾಧ್ಯಕ್ಷ ಪಿ. ಗೋಕುಲದಾಸ್ ನೇತೃತ್ವದಲ್ಲಿ 2000 ನೇ ಇಸವಿಯಲ್ಲೇ 'ಭೂಮಿ ಚಳುವಳಿ' ಮತ್ತೆ ಆರಂಭಿಸಲಾಯಿತು.

ಕಳತ್ತೂರು ಚಲೋ: ಪಿ ಗೋಕುಲದಾಸ್ ಸಾರಥ್ಯದಲ್ಲಿ ಜುಲೈ 17 ರಂದು ಕಾಪು ಸಂಘ ವ್ಯಾಪ್ತಿಯಿಂದ ಪಾದಯಾತ್ರೆ ಆರಂಭವಾಗಿ, ಅವಿಭಜಿತ ಜಿಲ್ಲೆಯ ಪ್ರಮುಖ ಕೊರಗರ ಕಾಲೋನಿಗಳಿಗೆ ಸುತ್ತಿ, ಕೊರಗ ಬಂಧುಗಳನ್ನು ಹುರಿದುಂಬಿಸುತ್ತಾ, ತಮ್ಮ ಮೂಲಭೂತ ಹಕ್ಕಿನ ಕುರಿತು ಬಂಧುಗಳನ್ನು ಪ್ರೇರೇಪಿಸುತ್ತಾ, ಭೂಮಿ ಪ್ರತಿಪಾದನೆಯ ಆಧ್ಯತೆಯನ್ನು ಮನಗಾಣಿಸುತ್ತಾ, ಆಗಸ್ಟ್ 18 ರಂದು ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಕಳತ್ತೂರಿನ ಅರಣ್ಯ ಭೂಮಿ ಆಕ್ರಮಿಸಿ, 'ಭೂಮಿ ಹಕ್ಕು ಪ್ರತಿಪಾದನೆ 'ಚಳುವಳಿ ಹೂಡಿದರು. ಈ ಸಂದರ್ಭದಲ್ಲಿ ಕಠಿಣ ನಿಲುವು ತಳೆದ ಅರಣ್ಯ ಇಲಾಖೆಯವರು, ಪಾರ್ವತಿ ಕೆಂಜೂರು ಎಂಬ ತುಂಬು ಗರ್ಭಿಣಿ ಮಹಿಳೆ ಹಾಗೂ 2 ವರ್ಷದ ಮಗು ಕು. ರಕ್ಷಾ (ಡಿ / ಒ ಗೌರಿ ಕೊಕ್ಕರ್ಣೆ) ಸೇರಿದಂತೆ 28 ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು. 28 ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡರು. ಆದರೆ, ಇದ್ಯಾವುದಕ್ಕೂ ಜಗ್ಗದ ಕೊರಗರು - ತಮ್ಮ ಬೇಡಿಕೆ ಈಡೇರಿಕೆಗೆ ಕಾನೂನು ಭಂಗವನ್ನು ಮಾಡದೆ ಅಹಿಂಸೆಯ ಹಾದಿಯಲ್ಲಿಯೇ ಧರಣಿ ಮುಂದುವರಿಸಿದರು. ಚಳುವಳಿ ತೀವ್ರ ಸ್ವರೂಪ ಪಡೆದುದನ್ನು ಗಮನಿಸಿದ ಜಿಲ್ಲಾಧಿಕಾರಿ ಹಾಗು ಇತರ ಅಧಿಕಾರಿಗಳು ಕೊರಗ ಮುಖಂಡರೊಂದಿಗೆ ಮಾತುಕತೆ ನಡೆಸಿ, ಸುಮಾರು 300 ಎಕ್ರೆ ಜಾಗವನ್ನು ಗುರುತಿಸಿ, 270 ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮೂಲಕ 'ಕೊರಗರ ಭೂಮಿ ಹಕ್ಕು ಅಭಿಯಾನ'ದ ಯಶಸ್ಸಿಗೆ ಮೇಲ್ಪಂಕ್ತಿಯನ್ನು ಹಾಕಿದರು.

ಪಾಲಡ್ಕ ಚಲೋ: ಕಳತ್ತೂರು ಚಲೋ ಯಶಸ್ಸಿನ ಹಿನ್ನಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ 600 ಕೊರಗ ಕುಟುಂಬಗಳು 'ಭೂಮಿಯ ಹಕ್ಕು'ಗಾಗಿ ಮನವಿಯನ್ನು ಸಲ್ಲಿಸಿದರು.

ಅಕ್ಟೋಬರ್ 2, 2005 ಗಾಂಧೀ ಜಯಂತಿಯಂದು ಮೂಡಬಿದಿರೆಯ ಸ್ವರಾಜ್ಯ ಮೈದಾನದಿಂದ ಹದಿಮೂರು ಕಿಲೋ ಮೀಟರ್ ದೂರದಲ್ಲಿರುವ, ಕಡಂದಲೆ ಗ್ರಾಮದ ಸರಹದ್ದಿನಲ್ಲಿರುವ 'ಪಾಲಡ್ಕ ಸಾಮಾಜಿಕ ಅರಣ್ಯ ಭೂಮಿ'ಯಲ್ಲಿ, ತಮ್ಮ ಹಕ್ಕು ಪ್ರತಿಪಾದಿಸಲು ಸುಡು ಬಿಸಿಲಿನಲ್ಲಿ ಪಾದಯಾತ್ರೆಯಲ್ಲಿ ಬಂದ ಸುಮಾರು 800 ಕ್ಕೂ ಹೆಚ್ಚು ಕೊರಗ ಬಂಧುಗಳು ಸ್ಥಳದಲ್ಲಿಯೇ ಅನಿದೃಷ್ಟಾವಧಿ ಚಳುವಳಿ ಹೂಡುವ ನಿರ್ಧಾರಕ್ಕೆ ಬಂದರು. ಅಹೋ ರಾತ್ರಿ ಸ್ಥಳಕ್ಕೆ ಭೇಟಿನೀಡಿದ ಪ್ರಭಾರ ಜಿಲ್ಲಾಧಿಕಾರಿ, ತಹಶೀಲ್ದಾರ್, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ತಾಲೂಕು ಪಂಚಾಯತ್ ಸದಸ್ಯರು - ತಿಂಗಳೊಳಗಾಗಿ ಬೇಡಿಕೆ ಈಡೇರಿಕೆಗೆ ಸರ್ವಸಮ್ಮದ ನಿಲುವು ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಚಳುವಳಿಯನ್ನು ತಾತ್ಕಲಿಕವಾಗಿ ಹಿಂಪಡೆದು ಕೊಳ್ಳಲಾಯಿತು. ತಿಂಗಳೊಳಗಾಗಿ ತಾರ್ಕಿಕ ಅಂತ್ಯ ಕಾಣದಿದ್ದರೆ - 'ಈ ಅರಣ್ಯ ಭೂಮಿಯಲ್ಲಿ ನಮ್ಮ ಬದುಕಿನ ಹಕ್ಕನ್ನು ಪ್ರತಿಪಾದಿಸಿಯೇ ಸಿದ್ಧ' ಎಂಬ ಎಚ್ಚರಿಕೆಯನ್ನು ಆ ಸ್ಥಳದಿಂದಲೇ ಆಳುವ ಸರಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯ ತೀವ್ರ ಕಾವಿನಿಂದಾಗಿ 'ಭೂಮಿ ಹಕ್ಕು ಪ್ರತಿಪಾದನಾ ಅಭಿಯಾನ' ಯಶಸ್ವಿಯೂ ಆಯಿತು.

1993 ರಂದು ಆರಂಭಗೊಂಡ 'ಭೂವಿ ಹಕ್ಕು ಪ್ರತಿಪಾದನಾ ಅಭಿಯಾನ'ದ ಫಲವಾಗಿ ಇಂದು ಅವಿಭಜಿತ ಜಿಲ್ಲೆಯಲ್ಲಿಂದು ಸುಮಾರು 450 ಕ್ಕೂ ಹೆಚ್ಚು ಕುಟುಂಬಗಳು 490 ಎಕ್ರೆ ಜಮೀನು ಹಕ್ಕು ಪತ್ರವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಆಗಸ್ಟ್ 18 ಕೊರಗರ ಸ್ವಾತಂತ್ರ್ಯದ ದಿನ!
2000 ನೇ ಇಸವಿಯ ಆಗಸ್ಟ್ 17 ರ ಸಂಜೆ 3 ಗಂಟೆಗೆ, ಕರ್ನಾಟಕದ ಆಗಿನ ರಾಜ್ಯಪಾಲರಾಗಿದ್ದ ವಿ ಎಸ್ ರಮಾದೇವಿಯವರು 'ಅಜಲು ನಿಷೇದ ಕಾಯಿದೆ'ಗೆ ಅಂತಿಮ ಅಂಕಿತ ಹಾಕಿದ ದಿನ. ಶತಶತಮಾನಗಳ ಬದುಕುವ ಹಕ್ಕನ್ನು ಕಸಿದುಕೊಂಡ, ಬದುಕನ್ನು ಶೋಷಣೆಯ ಅಗ್ನಿಕುಂಡದಲ್ಲಿ ಹಿಂಡಿ ಹಿಪ್ಪೆ ಮಾಡಿದ - ಅವಮಾನವೀಯ 'ಅಜಲು ಪದ್ಧತಿ'ಯನ್ನು ನಿಷೇದಿಸಬೇಕೆಂಬ ಸುಮಾರು ಎಂಟು ವರ್ಷಗಳ ಅವಿರತ ಹೋರಾಟಕ್ಕೆ ಜಯ ಸಿಕ್ಕಿದ ದಿನ. ಆಗಸ್ಟ್ 17 ರ ಮುಸ್ಸಂಜೆ ಸಿಕ್ಕ ಬದುಕಿನ ಸ್ವಾತಂತ್ರ್ಯದ ಸಂಭ್ರಮಾಚರಣೆಯನ್ನೂ, ಸ್ವಾತಂತ್ರ್ಯದ ದಿನವಾಗಿ ಆಗಸ್ಟ್ 18 ರಂದೇ ಆಚರಿಸಲಾಗುತ್ತಿದೆ!

ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ - ಎಲ್ಲಾ ಸ್ಥರಗಳಲ್ಲೂ ತುಳಿತಕ್ಕೊಳಗಾದ, ಶೋಷಣೆಯ ನಿಕೃಷ್ಠ ಸ್ಥಿತಿಗೆ ದೂಡಲ್ಪಟ್ಟ, ಅಸ್ಪ್ರಶ್ಯರಲ್ಲಿಯೂ ಅಸ್ಯ್ರಶ್ಯರಾದ ಸಮುದಾಯವೊಂದು, ತನ್ನ ಇರುವಿಕೆಯನ್ನು ಜಗತ್ತಿಗೆ ಸಾದರಪಡಿಸಿದ ದಿನ ಆಗಸ್ಟ್ 18.
'ಅಜಲು' ಎಂಬ ಜೀವನದ ಹೀನಾಯ ಸ್ಥರದಿಂದ ಬಂಧಮುಕ್ತಗೊಂಡು, ಜೀವನದ ಹೊಸ ಮಜಲನ್ನು ಮೆಟ್ಟಿದ ದಿನ ಆಗಸ್ಟ್ 18.
ಆದ್ದರಿಂದಲೇ ಈ ದಿನವನ್ನು ಆದಿವಾಸಿ ಬುಡಕಟ್ಟು ಸಮುದಾಯದ ಕೊರಗ ಜನಾಂಗ - ಸ್ವಾತಂತ್ರ್ಯ ಮತ್ತು ಭೂಮಿ ಹಕ್ಕಿನ ಯಶಸ್ಸಿನ ಒಟ್ಟು ಸಂಭ್ರಮದ ಹಿನ್ನಲೆಯೊಂದಿಗೆ 'ಭೂಮಿ ಹಬ್ಬ' ವೆಂದು ಆಚರಿಸುತ್ತಿದೆ. 


- ಬಿ ಎಸ್ ಹೃದಯ

ಕಾಮೆಂಟ್‌ಗಳಿಲ್ಲ: