ಮಂಗಳವಾರ, ಜನವರಿ 23, 2018

ಶ್ರೇಯಾಂಕಗಳ ದಬ್ಬಾಳಿಕೆ



ಅನುಶಿವಸುಂದರ್ 
ಸುಲಭವಾಗಿ ವ್ಯವಹಾರೋದ್ಯಮ ಮಾಡಬಲ್ಲ ಸೂಚ್ಯಂಕವು (ಈಸ್ ಆಫ್ ಡೂಯಿಂಗ್ ಬಿಸಿನೆಸ್- ಇಡಿಬಿ) ಏಕೆ ಇನ್ನೂ ಅಸ್ಥಿತ್ವದಲ್ಲಿದೆ?
Image result for survey

ವಿಶ್ವಬ್ಯಾಂಕು ಪ್ರಕಟಿಸುವ ಜನಪ್ರಿಯವಾದ  ಆದರೆ ಗಟ್ಟಿತರ್ಕವಿಲ್ಲದ ಸುಲಭವಾಗಿ ಉದ್ಯಮ ಮಾಡಬಲ್ಲ ಸೂಚ್ಯಂ (ಈಸ್ ಆಫ ಡೂಯಿಂಗ್ ಬಿಸಿನೆಸ್ ಇಂಡೆಕ್ಸ್- ಇಡಿಬಿ)ವು ಮತ್ತೊಮ್ಮೆ ತೀವ್ರವಾದ ವಿಮರ್ಶೆಗೆ ಗುರಿಯಾಗಿದೆ. ವಿಶ್ವಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ನ ಪಾಲ್ ರೋಮೆರ್ ಅವರು ಇಡಿಬಿ ಸೂಚ್ಯಂಕವನ್ನು ಒಳಗೊಂಡಂತೆ ವಿಶ್ವಬ್ಯಾಂಕು ಹೊರತರುವ ವ್ಯವಹಾರೋದ್ಯಮ ನಿರ್ವಹಣೆ (ಡೂಯಿಂಗ್ ಬಿಸಿನೆಸ್)ವರದಿಯ ಬಗ್ಗೆ ತೀವ್ರವಾದ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅವರು ವಿಶೇಷವಾಗಿ ಸೂಚ್ಯಂಕದಲ್ಲಿ ಚಿಲಿಯ ಸ್ಥಾನಮಾನ ಕುಸಿದಿರುವ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಒಂದಷ್ಟು ಕಾರಣ ಕಳೆದ ಕೆಲವು ವರ್ಷಗಳಲ್ಲಿ ಸೂಚ್ಯಂಕವನ್ನು ತಯಾರು ಮಾಡುವ ವಿಧಾನದಲ್ಲಿ ಬಂದಿರುವ ಬದಲಾವಣೆಗಳು. ೨೦೦೬ರಿಂದ ಸೂಚ್ಯಂಕದಲ್ಲಿ ಚಿಲಿಯ ಸ್ಥಾವು ೨೫-೫೭ರ ನಡುವೆ ಹೊಯ್ದಾಡುತ್ತಿದೆ. ಚಿಲಿಯ ಸಮಾಜವಾದಿ ಪಕ್ಷದ ಮಿಚೆಲ್ ಬ್ಯಾಷೆಲಿಯ ಅಧಿಕಾರವಿದ್ದಾಗ ಸೂಚ್ಯಂಕವು ಕುಸಿದಿದ್ದು, ಸಾಂಪ್ರದಾಯಿಕ ಪಕ್ಷದ ಸೆಬಾಸ್ಟಿನ್ ಪಿನೇರಾದ ಆಡಳಿತದಲ್ಲಿ ಸೂಚ್ಯಂಕವು ಸುಧಾರಣೆಯನ್ನು ತೋರಿಸಿದೆ. ರೋಮೆರ್ ನಿರೀಕ್ಷಿತವಾದದ್ದನ್ನೇ ಪ್ರತಿಪಾದಿಸಿದ್ದಾರೆ: ಒಂದು ಸೂಚ್ಯಂಕದ ಲೆಕ್ಕಾಚಾರವನ್ನು ಮಾಡುವ ಅಂಶಗಳು ಬದಲಾದರೆ ಅಂದರೆ ಗಣನೆ ಮಾಡುವ ವಿಧಾನವು ಬದಲಾದರೆ ಅಂಥಾ ಶ್ರೇಯಾಂಕವನ್ನು ಹಳೆಯ ಪದ್ಧತಿಯನ್ನು ಆಧರಿಸಿರುವ ಹಿಂದಿನ ವರ್ಷಗಳ ಶ್ರೇಯಾಂಕಗಳ ಜೊತೆ ಹೋಲಿಸಲು ಸಾಧ್ಯವಿಲ್ಲ. ಆದ್ದರಿಂದ ವಿಶ್ವಬ್ಯಾಂಕು ಒಂದು ನಿರ್ದಿಷ್ಟ ಪದ್ಧತಿಯನ್ನೇ ಅನುಸರಿಸಿ ಕಳೆದ ನಾಲ್ಕು ವರ್ಷಗಳ ಸೂಚ್ಯಂಕಗಳನು ತಯಾರಿಸಿ ಆಯಾ ದೇಶಗಳ ನಾಲ್ಕು ವರ್ಷಗಳ ಶ್ರೇಯಾಂಕಗಳನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದಾರೆ. ರೋಮರ್ ಅವರು ವ್ಯಕ್ತಪಡಿಸಿರುವ ಅನುಮಾನವು ಸ್ವಾಗತಾರ್ಹವಾದುದಾಗಿದೆ. ಆದರೂ ವಿಶ್ವಬ್ಯಾಂಕ್ ಹೊರತರುವ ವರದಿಯ ಬಗ್ಗೆ  ಮತ್ತು ಅದರಲ್ಲೂ ನಿರ್ದಿಷ್ಟವಾಗಿ ಇಡಿಬಿ ಸೂಚ್ಯಂಕದ ಲೆಕ್ಕಾಚಾರದಲ್ಲಿ ಗಂಭೀರವಾದ ಸಮಸ್ಯೆಗಳಿರುವ ಬಗ್ಗೆ ಈಗಾಗಲೇ ಸಾಕಷ್ಟು ಸಂಶೋಧನೆಗಳು ನಡೆದಿವೆ.

ವ್ಯವಹಾರೋದ್ಯಮ ನಿರ್ವಹಣೆ (ಡೂಯಿಂಗ್ ಬಿಸಿನೆಸ್) ವರದಿಯನ್ನು ವಿಶ್ವಬ್ಯಾಂಕು ಮೊಟ್ಟಮೊದಲು ಪ್ರಕಟಿಸಿದ್ದು ೨೦೦೩ರಲ್ಲಿ. ಒಂದು ದೇಶzಲ್ಲಿ ಉದ್ಯಮ ನಡೆಸಲು ಸೂಕ್ತವಾದ ಸನ್ನಿವೇಶವಿದೆಯೇ ಎಂಬುದನ್ನು ಅಳೆಯಲು ಅದು ಆಯಾ ದೇಶಗಳ ಉದ್ಯಮಗಳ ಬಗೆಗಿನ ಕಾನೂನುಗಳು ಮತ್ತು ಇತರ ಪ್ರಕ್ರಿಯೆಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಒಂದು ದೇಶದಲ್ಲಿನ ಅತಿದೊಡ್ಡ ಅಥವಾ ಎರಡನೇ ಅತಿದೊಡ್ಡ ಉದ್ಯಮ ನಗರಿಯಲ್ಲಿ ಒಂದು ಮಧ್ಯಮ ಗಾತ್ರದ ಉದ್ಯಮವೊಂದಕ್ಕೆ ಅನ್ವಯವಾಗುವ ನೀತಿ ನಿಯಮಗಳನ್ನು ವರದಿಯು ಗಣನೆಗೆ ತೆಗೆದುಕೊಳ್ಳುತ್ತದೆ. ಅದು ಸಂಘಟಿತ ಕ್ಷೇತ್ರದ ಬಗ್ಗೆ ಘೋಷಿತವಾದ ನೀತಿಗಳನ್ನು ಅಭ್ಯಸಿಸುತ್ತದೆಯೇ ವಿನಃ ದೇಶ-ದೇಶಗಳ ನಡುವೆ ಇರುವ ಭಿನ್ನತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನೀತಿಗಳ ಅನುಷ್ಠಾನದ ಪರಿಯನ್ನೂ ಅಥವಾ  ಉದ್ಯಮಗಳ ದೈನಂದಿ ರೂಢಿಪದ್ಧತಿಯನ್ನು ಪರಿಗಣಿಸುವುದಿಲ್ಲ. ಎಲ್ಲಾ ಸೂಚ್ಯಂಕಗಳನ್ನು ಒಟ್ಟುಮಾಡಿ ಪ್ರತಿದೇಶಕ್ಕೆ ಸುಲಭವಾಗಿ ವ್ಯವಹಾರೋದ್ಯಮ ನಡೆಸಬಲ್ಲ - ಇಡಿಬಿ- ಶ್ರೇಯಾಂಕಗಳನ್ನು ಕೊಡುವುದನ್ನು  ವಿಶ್ವಬ್ಯಾಂಕು ೨೦೦೬ರಿಂದ ಪ್ರಾರಂಭಿಸಿತು. ತಾನು ವಿವಿಧ ದೇಶಗಳಿಗೆ ಕೊಡುತ್ತಿದ್ದ ಶರತ್ತಿನ ಸಾಲ ಸಹಕಾರಕ್ಕೂ ವಿಶ್ವಬ್ಯಾಂಕು ಶ್ರೇಯಾಂಕಗಳನ್ನೇ ಆಧರಿಸಲು ಪ್ರಾರಂಭಿಸಿತು. ಆದರೆ ಇದರ ಬಗ್ಗೆ ತೀವ್ರವಾದ ವಿಮರ್ಶೆಗಳು ಪ್ರಾರಂಭವಾದ ಮೇಲೆ ೨೦೦೯ರಿಂದ ಪದ್ಧತಿಯನ್ನು ನಿಲ್ಲಿಸಿತು. ವಾಸ್ತವವಾಗಿ ೨೦೧೩ರಲ್ಲಿ ವಿಶ್ವಬ್ಯಾಂಕಿನ ಆಗಿನ ಅಧ್ಯಕ್ಷರಾದ ಜಿಮ್ ಯಾಂಗ್ ಕಿಮ್ ಅವರು ವ್ಯವಹಾರ ನಿರ್ವಹಣಾ ವರದಿಯ ಕ್ಷಮತೆಯ ಬಗ್ಗೆ ಅಧ್ಯಯನ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ನೇಮಿಸಿದರು ಮತ್ತು ಇನ್ನುಮುಂದೆ ಡೂಯಿಂಗ್ ಬಿಸಿನೆಸ್ವರದಿಯನ್ನು ಪ್ರಕಟಿಸಬಾರದೆಂದೂ ಹೇಳಿದ್ದರು. ಬಗೆಯ ಸೂಚ್ಯಂಕಗಳು ದೇಶಗಳ ನಡುವಿನ ಪರಿಸ್ಥಿಗಳನ್ನು ತುಲನಾತ್ಮಕವಾಗಿ ಅಧ್ಯಯನ ನಡೆಸಲು ಸಹಕಾರಿಯಾಗಬಲ್ಲದೇ ವಿನಃ, ಎಲ್ಲಾ ಸೂಚ್ಯಂಕಗಳನ್ನು ಒಟ್ಟುರಾಶಿಮಾಡಿ ಯಾವುದೇ ಶ್ರೇಯಾಂಕ ಕೊಡುವುದು ಸರಿಯಾದುದಲ್ಲ ಎಂದು ಸ್ವತಂತ್ರ ವರದಿಯು ಸ್ಪಷ್ಟವಾಗಿ ಹೇಳಿತ್ತು. ಆದರೂ ಶ್ರೇಯಾಂಕಗಳನ್ನು ಕೊಡುವ ಪದ್ಧತಿ ಮುಂದುವರೆಯಿತು.

ಅರ್ಥಶಾಸ್ತ್ರದಲ್ಲಿ ಮತ್ತು ಅಂಕಿಅಂಶ ಶಾಸ್ತ್ರದಲ್ಲಿ ಸೂಚ್ಯಂಕಗಳನ್ನು ರೂಪಿಸುವುದು ಒಂದು ಬಗೆಯ ಜಾಣತಂತ್ರವಾಗಿದೆ. ವಿಭಿನ್ನ ಬಗೆಯ ಗುಣಾಂಶಗಳುಳ್ಳ ವಿದ್ಯಮಾನದ ಬಗ್ಗೆ ಒಟ್ಟಂದದ ಚಿತ್ರಣವನ್ನು ಶ್ರೇಯಾಂಕಗಳು ನೀಡುತ್ತವೆ. ಪ್ರತಿಯೊಂದು ಗುಣಾಂಶದ ಆಯಾಮ ಮತ್ತು ತೂಕಗಳ ಬಗ್ಗೆ ಭಿನ್ನಭಿನ್ನ ಅಂದಾಜುಗಳು ಸಾಧ್ಯವಿರುವುದರಿಂದ ಎರಡು ಅಂಶಗಳ ಹೋಲಿಕೆಯಲ್ಲಿ ವಸ್ತುನಿಷ್ಟತೆ ಕಷ್ಟವಾಗುತ್ತದೆ. ಹಾಗೆಂದ ಮಾತ್ರಕ್ಕೆ ಎರಡು ಭಿನ್ನ ಅಂಶಗಳನ್ನು ಹೋಲಿಸುವ ಉತ್ತಮ ಹಾದಿಯಿಲ್ಲವೆಂದಲ್ಲ. ಆದರೂ ವ್ಯಕ್ತಿಯ ಮನೋನಿಷ್ಟ ಧೋರಣೆಗಳು ಪರಿಣಾಮಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಅದೇನೇ ಇದ್ದರೂ ಸೂಚ್ಯಂಕಗಳ ಶಕ್ತಿಯೇನೆಂದರೆ ಒಂದು ಸಂಕೀರ್ಣ ವಿದ್ಯಮಾನವನ್ನು ಅದು ತುಲನಾತ್ಮಕವಾಗಿ ಹೋಲಿಸಬಹುದಾದ ಸಂಖ್ಯೆಗಳಾಗಿ ಸರಳೀಕರಿಸುತ್ತದೆ. ಇದರ ಸರಳತೆಯೇ ಅದನ್ನು ಜನಪ್ರಿಯಗೊಳಿಸಿದೆ ಮತ್ತು ಶಕ್ತಿಶಾಲಿಯಾಗಿಸಿದೆ. ಆದರೆ ಅದೇ ವೇಳೆಯಲ್ಲಿ ಅಪಾಯಕಾರಿಯೂ ಆಗಿದೆ ಮತ್ತು ಹಲವೊಮ್ಮೆ ನೀತಿನಿರ್ಣಯಗಳನ್ನು ಕೈಗೊಳ್ಳುವ ಸಮಯದಲ್ಲಿ ತಪ್ಪಾದ ಉಪಕರಣವಾಗಿಯೂ ಬಳಸಲ್ಪಡುತ್ತಿದೆ. ಇದರರ್ಥ ಸಂಬಂಧಪ್ಪಟ್ಟವರೆಲ್ಲಾ ಶ್ರೇಯಾಂಕಗಳನ್ನು ನಂಬುತ್ತಾರೆಂದೇನೂ ಅಲ್ಲ. ಆದರೂ ಇದನ್ನು ಎಷ್ಟು ವಿಸ್ತೃತವಾಗಿ ಪ್ರಚಾರ ಮಾಡಲಾಗುತ್ತದೆಯೆಂದರೆ ಅದನ್ನು ಉಪೇಕ್ಷೆ ಮಾಡಲು ಸಾಧ್ಯವೇ ಆಗುವುದಿಲ್ಲ. ಶ್ರೇಯಾಂಕಗಳಲ್ಲಿ  ಆಗುವ ಅರ್ಥರಹಿತ ಬದಲಾವಣೆಗಳು ಎಷ್ಟು ಪ್ರಚಾರವನ್ನು ಪಡೆದುಕೊಳ್ಳುತ್ತವೋ ಅಷ್ಟು ಪ್ರಚಾರವನ್ನು ಶ್ರೇಯಾಂಕಗಳನ್ನು ನಿರ್ಧರಿಸುವ ಪದ್ಧತಿಯ ಬಗ್ಗೆ ನಡೆಯುವ ಚರ್ಚೆಗಳು ಪಡೆದುಕೊಳ್ಳುವುದಿಲ್ಲ.

ಶ್ರೇಯಾಂಕಗಳಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಲು ಸರ್ಕಾರಗಳು ತಮ್ಮನೀತಿಗಳಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಇವೆಲ್ಲಕ್ಕಿಂತ ಆತಂಕಕಾರಿ ಸಂಗತಿಯಾಗಿದೆ. ಭಾರತ ಸರ್ಕಾರವು ತನ್ನ ೨೦೧೭-೧೮ರ ಕೈಗಾರಿಕಾ ನೀತಿ ಮತ್ತು ಪ್ರಚಾರದ ದಸ್ತಾವೇಜಿನಲ್ಲಿ ತನ್ನ ಮುಖ್ಯ ಗುರಿಯು ಇಡಿಬಿ ಸೂಚ್ಯಂಕದಲ್ಲಿ ೨೦೧೭-೧೮ರಲ್ಲಿ ೯೦ನೇ ಸ್ಥಾನವನ್ನು ಮತ್ತು ೨೦೨೦ರ ವೇಳೆಗೆ ೩೦ನೇ ಸ್ಥಾನವನ್ನೂ ಪಡೆಯುವುದಾಗಿದೆ ಎಂದು ಘೋಷಿಸಿಕೊಂಡಿದೆ. ಶ್ರೇಯಾಂಕದಲ್ಲಿ ಕಳೆದ ವರ್ಷ ಭಾರತದ ಸ್ಥಾನ ೧೩೦ ಇತ್ತು. ಈಗಾಗಲೇ ವರದಿಯಾಗಿರುವಂತೆ ವರ್ಷ ಭಾರತ  ೧೦೦ನೇ ಸ್ಥಾನಕ್ಕೆ ಬಡ್ತಿಯನ್ನು ಪಡೆದುಕೊಂಡಿದೆ. ಈಗ ಉದಾಹರಣೆಗೆ  ಉದ್ಯಮ ವ್ಯವಹಾರ ನಿರ್ವಹಣೆ ವರದಿಯಲ್ಲಿ ಉದ್ಯಮಿಗಳು ಸಾಲವನ್ನು ಸಲೀಸಾಗಿ ಪಡೆದುಕೊಳ್ಳುವ ಸೂಚ್ಯಂಕದಲ್ಲಿ ಭಾರತದ ಸ್ಥಾನ ೨೯ನೆಯದು. ಸೂಚ್ಯಂಕವು ಭಾರತದಲ್ಲಿ ಉದ್ಯಮಗಳಿಗೆ ಸುಲಭವಾಗಿ ಸಾಲ ದೊರೆಯುತ್ತದೆಂಬ ಅಭಿಪ್ರಾಯವನ್ನು ಮೂಡಿಸುತ್ತದೆ. ಆದರೆ ವ್ಯವಹಾರೋದ್ಯಮಿಗಳ  ಸಮೀಕ್ಷೆಯಲ್ಲಿ ಮತ್ತು ಸಂಶೋಧನಾತ್ಮಕ ಅಧ್ಯಯನಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಸಂಗತಿ ಕಂಡುಬಂದಿದೆ. ವಾಸ್ತವವಾಗಿ ಸೂಚ್ಯಂಕವು ಸಾಲದ ಲಭ್ಯತೆಯನ್ನು ಮಾಪನ ಮಾಡುವ ಸೂಚ್ಯಂಕವೇ ಅಲ್ಲ. ಅದು ಸಾಲ ನೀತಿಗಳ ವರದಿಗಾರಿಕಾ ವ್ಯವಸ್ಥೆಗಳ ಮತ್ತು ಸಾಲವನ್ನು ನೀಡುವಲ್ಲಿ ಸಹಪ್ರಮಾಣದ ಮತ್ತು ದಿವಾಳಿತನಕ್ಕೆ ಸಂಬಂಧಪಟ್ಟ ಕಾನೂನುಗಳ ಮಾಪನವನ್ನಷ್ಟೇ ಮಾಡುತ್ತದೆ. ವರದಿಯ ಬಗ್ಗೆ ನಡೆದ ಸ್ವತಂತ್ರ ಅಧ್ಯಯನವೂ ಸಹ ಅದು ದಾರಿತಪ್ಪಿಸುವಂಥ ಶೀರ್ಷಿಕಗಳನ್ನು ಬಳಸುವ ಮೂಲಕ ಆರ್ಥಿಕತೆಗಳ ಬಗ್ಗೆ ಜನರಲ್ಲಿ ತಪಾದ ಅಭಿಪ್ರಾಯವನ್ನು ಮೂಡಿಸುತ್ತಿದೆ ಎಂದು ದೂರಿದೆ ವರದಿಯಲ್ಲಿ ಬಳಸಲಾಗಿರುವ ಶೀರ್ಷಿಕೆಗಳನ್ನು ನೋಡಿದರೆ ಅವು ಆಯಾ ದೇಶಗಳ ಉದ್ಯಮ ಸಂಬಂಧೀ ವಾತಾವರಣದ ಬಗ್ಗೆ ಸಮಗ್ರ ಚಿತ್ರಣವನ್ನು ಕೊಡುತ್ತದೆಂಬ ಅಭಿಪ್ರಾಯವನ್ನು ಮೂಡಿಸುತ್ತದೆ. ಆದರೆ ವಾಸ್ತವದಲ್ಲಿ ಅದು ಆಯಾ ದೇಶಗಳ ಅಧಿಕೃತ ನೀತಿನಿಯಮಗಳ ಬಗ್ಗೆಯಷ್ಟೇ ಹೇಳುತ್ತದೆ. ಶ್ರೇಯಾಂಕಗಳಲ್ಲಿ ಮೇಲ್ಚಲನೆಯನ್ನು ಪಡೆಯಬೇಕೆಂಬ ಉಮೇದಿನಲ್ಲಿ ಸರ್ಕಾರಗಳು ತಮ್ಮ ದೇಶದ ಜನತೆಯ ಆರ್ಥಿಕ ಅಗತ್ಯಗಳನ್ನು ಮರೆತು ಶ್ರೇಯಾಂಕದ ಸೂಚ್ಯಂಕಗನ್ನು ಉತ್ತಮಗೊಳಿಸಿಕೊಳ್ಳುವ ಕಡೆ ಮಾತ್ರ ಗಮನ ನೀಡುತ್ತವೆ. ಉತ್ತಮ ಶ್ರೇಯಾಂಕವಿದ್ದರೆ ಸುಲಭವಾಗಿ ವಿದೇಶಿ ನೇರ ಹೂಡಿಕೆಗಳು ಹರಿದು ಬರುತ್ತವೆ ಎಂಬ ತಿಳವಳಿಕೆಯೂ ಸಹ ಬಗೆಯ ಶ್ರೇಯಾಂಕದ ಅಡ್ಡಪರಿಣಾಮವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ದೇಶದಲ್ಲಿ ಸುಲಭವಾಗಿ ವ್ಯವಹಾರ ಉದ್ಯಮ ನಡೆಸಲು ಜಗತ್ತಿನಾದ್ಯಂತ ಒಂದೇ ನಿರ್ದಿಷ್ಟ ಬಗೆಯ ನೀತಿಯಿರಬೇಕು ಎಂಬ ತಿಳವಳಿಕೆಯು ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಬಗೆಯ ಅಭಿವೃದ್ಧಿ ಸನ್ನಿವೇಶಗಳಿರುತ್ತವೆ ಎಂಬುದನ್ನು ಕಡೆಗಣಿಸುತ್ತದೆ. ಒಂದು ವೇಳೆ ದೇಶಗಳು ತಮ್ಮ ದೇಶಗಳ ಅಗತ್ಯವನ್ನು, ಅಭಿವೃದ್ಧಿ ಮಾದರಿಯನ್ನೂ ಮರೆತು ಸೂಚ್ಯಂಕಗಳ ಅಗತ್ಯವನ್ನು ಪೂರಸಿದರೆ ಉತ್ತಮ ಶ್ರೇಯಾಂಕವು ದೊರೆಯಬಹುದು. ಇದು ಒಂದು ಫೂಟ್ಬಾಲ್ ಪಂದ್ಯದಲ್ಲಿ ಜಗತ್ತಿನ ಎಲ್ಲಾ ದೇಶಗಳು ಒಂದೇ ಬಗೆಯ ನಿಯಮವನ್ನು ಪಾಲಿಸಬೇಕು ಎಂದು ಕಡ್ಡಾಯ ಮಾಡಿದಂತಿದೆ. ವ್ಯವಹಾರ ಉದ್ಯಮ ನಿರ್ವಹಣೆ ವರದಿಯು ನೀತಿಗಳು ಒಂದು ದೇಶದ ನೀತಿ ಹೀಗೆ ಇರಬೇಕೆಂದಾಗಲೀ, ಮತ್ತು ಒಟ್ಟಾರೆ ಧೋರಣೆಯನ್ನಾಗಲೀ ಕಡ್ಡಾಯ ಮಾಡುವುದಿಲ್ಲವಾದರೂ ಶ್ರೇಯಾಂಕಗಳು ಮಾತ್ರ ನಿರ್ದಿಷ್ಟವಾಗಿ ಅದನ್ನೇ ಮಾಡುತ್ತವೆ. ಈಗ ಹುಟ್ಟಿಕೊಂಡಿರುವ ಹೊಸ ವಿವಾದದಿಂದಾಗಿ ವಿಶ್ವಬ್ಯಾಂಕು ತನ್ನ ಪದ್ಧತಿಯ ಬಗ್ಗೆ ಮತ್ತೊಮ್ಮೆ ಪುನರಾವಲೋಕನಮಾಡಿ ಇಡಿಬಿ ಸೂಚ್ಯಂಕವನ್ನೇ ಸಾರಾಸಗಟಾಗಿ ಕೈಬಿಡುವಂತಾಗಬೇಕು.

 ಕೃಪೆ: Economic and Political WeeklyJan 20,  2018. Vol. 53. No. 3
     (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )









ಕಾಮೆಂಟ್‌ಗಳಿಲ್ಲ: