ಬುಧವಾರ, ಜನವರಿ 17, 2018

ಕುಲಕಸುಬು: ವಾದ್ಯದ ಹುಡುಗರೋ ನಾವು ಅರೆವಾದ್ಯದವರೋ...


ಡಿ.ಎಂ.ಕುರ್ಕೆ ಪ್ರಶಾಂತ
ಸೌಜನ್ಯ: ಕಾಮನಬಿಲ್ಲು ಪುರವಣಿ, ಪ್ರಜಾವಾಣಿ.
18 Jan, 2018

ಬೇವಿನಹಳ್ಳಿಯ ಈ ಹುಡುಗರು ಅರೆ ಬಡಿಯಲು ಆರಂಭಿಸಿದರೆ ಊರಿಗೇ ಊರೇ ಸೇರುತ್ತದೆ, ವಾದ್ಯದೊಂದಿಗೆ ಅವರ ಜೈಕಾರವೂ ಜೊತೆಯಾಗುತ್ತದೆ. ಈ ನಾದದಲ್ಲಿ ಅಂತಹ ಶಕ್ತಿ ಏನಿದೆ?

ಬೇವಿನಹಳ್ಳಿ ಅರೆವಾದ್ಯದ ತಂಡ


ಅಲೆಲೆಲೆಲೆ...
ಓಡುಬರ್ರೋ...ಓಡುಬರ್ರೋ...
ನಿಂತೈತೆ ಕುಂತೈತೆ ಬಗ್ಗೈತೆ ಬಾಗೈತೆ ತೋಲಾಡ್ತೈತೆ ತೂಗಾಡ್ತೈತೆ
ದೊಡ್ಡವನೊರಟವ್ನೊ ಹುಲಿದುರಿಗೆ
ಹುಲಿಕುಂಟೆಗೆ ಎದ್ದು ಬದ್ದು ಅರೆಬಡಿಯೊ ಕದುರು ಮಾವೋ 

...ಹೀಗೆ ಪದಗಾರರು ಪದ ನುಡಿಯುತ್ತಿದ್ದರೆ ಆ ಹುಡುಗರ ಉತ್ಸಾಹ ಇಮ್ಮಡಿಸುತ್ತದೆ. ರ‍್ರವ್ ರ‍್ರವ್ ರ‍್ರವ್...ಎಂದು ವಾದ್ಯ ಮೊಳಗುತ್ತದೆ. ಸುತ್ತಲಿನ ಜನರು ಕೇಕೆ ಹಾಕಿ ವಾತಾವರಣ ಮತ್ತಷ್ಟು ಕಳೆಗಟ್ಟಿಸಿದರೆ, ವಾದ್ಯದ ‘ಚಿಗುರಿ’ಗೆ (ನಾದ) ಚರ್ಮ ಸುಕ್ಕುಗಟ್ಟಿದ ಹಿರಿಯರು ಪ್ರಾಯದ ಮಕ್ಕಳಂತೆ ಹೆಜ್ಜೆ ಹಾಕುತ್ತಾರೆ. ಆ ಹುಡುಗರು ಮಗದಷ್ಟು ಹುರುಪಿನಲ್ಲಿ ವಾದ್ಯ ನುಡಿಸುತ್ತಾರೆ.

ಹೌದು, ಬೇವಿನಹಳ್ಳಿ ಹುಡುಗರು ಅರೆ ಬಡಿಯಲು ಬರುವರು ಎಂದರೆ ಶಿರಾ ತಾಲ್ಲೂಕಿನ ಹಳ್ಳಿಗಳಲ್ಲಿ ಜನರು ಕಿಕ್ಕಿರಿಯುವರು. ಈ ಯುವಕರ ಅರೆವಾದ್ಯದ ತಂಡಕ್ಕೆ ನಾಡಿನ ಹಲವು ಭಾಗಗಳಲ್ಲಿ ಅಭಿಮಾನಿಗಳಿದ್ದಾರೆ. ‘ಕೈ ಸೋಲು ಬಂದಾರೂ ಬಿಡನೂ ಮಾವ....’ ಎಂದು ಪದಗಾರರು ಹುಡುಗರನ್ನು ವ್ಯಂಗ್ಯವಾಗಿ ರೇಗಿಸಿದರೆ ಅರೆಯ ಆರ್ಭಟ ಮತ್ತಷ್ಟು ಜೋರಾಗುತ್ತದೆ.

ಅರೆ, ಆದಿಮ ವಾದ್ಯ ಪ್ರಕಾರಗಳಲ್ಲಿ ಒಂದು. ದಲಿತ ಸಮುದಾಯದವರು ಹೆಚ್ಚು ನುಡಿಸುವರು. ದೇವತೆಗಳ (ಅಮ್ಮ) ಉತ್ಸವ, ದೇವರ ಪರಿಷೆ, ಮಣೀವು ಕುಣಿತ, ಸೋಮನಕುಣಿತ, ಹಲಗು ಕುಣಿತ, ಜಾತ್ರೆ ಹೀಗೆ ದೇವರ ಕೆಲಸಗಳಲ್ಲಿ ಅರೆ ಬಡಿಯಲಾಗುತ್ತದೆ. ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಮೈಸೂರಿನ ಕೆಲವು ಭಾಗಗಳಲ್ಲಿ ಅರೆವಾದ್ಯ ಹೆಚ್ಚು ಚಾಲ್ತಿಯಲ್ಲಿ ಇದೆ.

ಸಾಮಾನ್ಯವಾಗಿ ದಲಿತ ಸಮುದಾಯದ ಹಿರಿಯರೇ ಈಗಲೂ ಅರೆಯನ್ನು ಹೆಚ್ಚು ನುಡಿಸುವರು. ಆದರೆ ಬೇವಿನಹಳ್ಳಿಯಲ್ಲಿ ಈ ಮಾತು ಅಪವಾದ. ಅಪ್ಪಂದಿರನ್ನು ಮೀರಿಸಿದ ಮಕ್ಕಳು ಎನ್ನುವಂತೆ ಇಲ್ಲಿನ ಹುಡುಗರು ಅರೆಯ ಕೋಲು ಹಿಡಿದರೆ ಹಿರಿಯರು ಮನತುಂಬ ಮೆಚ್ಚುವರು. ಪ್ರಾಯದ ಕಸುವು ಮೈ ತುಂಬಿಕೊಂಡು ಅರೆ ಬಡಿಯುವರು.

ಹತ್ತು ಮಂದಿ ಯುವಕರು ಸೇರಿ ‘ಬೇವು ಬೆಲ್ಲ’ ಕಲಾ ಟ್ರಸ್ಟ್ ಎಂಬ ಸಂಘ ಮಾಡಿಕೊಂಡು ನೋಂದಾಯಿಸಿಕೊಂಡಿದ್ದಾರೆ. ಬಿ.ಕೆ.ನರಸಿಂಹರಾಜು, ಹೇಮಂತ್ ಕುಮಾರ್, ಬಿ.ಎಲ್.ನರಸಿಂಹರಾಜು, ಗುರು ಮೂರ್ತಿ, ರವಿಕುಮಾರ್, ಸುಧಾಕರ್, ತಿಪ್ಪೇಸ್ವಾಮಿ, ಕುಮಾರ ಸ್ವಾಮಿ, ಓಂಕಾರೇಶ್ವರ, ವನ್ನೇಶಪ್ಪ, ರಂಗನಾಥ ಅರೆ ವಾದ್ಯ ತಂಡದ ಸಮಾನ ಮನಸ್ಕ ಗೆಳೆಯರು.

ಅಂದಹಾಗೆ ಈ ತಂಡದಲ್ಲಿರುವ ಎಲ್ಲರೂ ವಿದ್ಯಾವಂತರು. ಕೆಲವರು ಸರ್ಕಾರಿ ಉದ್ಯೋಗಗಳಲ್ಲಿ ಸಹ ಇದ್ದಾರೆ. ಆರ್ಥಿಕವಾಗಿಯೂ ಉತ್ತಮವಾಗಿದ್ದಾರೆ. ತಲೆ ತಲಾಂತರಗಳಿಂದ ಕುಲಕಸುಬಾಗಿ ಬಂದಿ ರುವ ಅರೆವಾದ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಪ್ರತಿನಿಧಿಗಳಾಗಿ ಗೋಚರಿಸುತ್ತಾರೆ.
–ನರಸಿಂಹರಾಜು

ಹಂಪಿ ಉತ್ಸವದಲ್ಲಿ ಅರೆವಾದ್ಯದ ಕಾರ್ಯಕ್ರಮ ನೀಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅರೆ ಮೊಳಗಿಸಿದ್ದಾರೆ. ಚಿತ್ರದುರ್ಗ, ರಾಮನಗರ, ಮಂಡ್ಯ, ಹಾಗೂ ಕರ್ನಾಟಕದ ಗಡಿಭಾಗದ ಆಂಧ್ರಪ್ರದೇಶ ಹಳ್ಳಿಗಳಲ್ಲಿಯೂ ಅರೆಯ ಆರ್ಭಟ ಕೇಳಿಸಿದ್ದಾರೆ.

‘ಕಾಡುಗೊಲ್ಲ ಸಮುದಾಯದ ಸಾಂಸ್ಕೃತಿಕ ನಾಯಕ ಹಾಗೂ ದೈವ ಜುಂಜಪ್ಪನಿಗೆ ಅರೆ ಬಡಿಯಬೇಕು ಎಂದು ನಮ್ಮ ಮುತ್ತಜ್ಜನನ್ನು ಶಿರಾ ತಾಲ್ಲೂಕು ಪಂಜಿಗಾನಹಳ್ಳಿಯಿಂದ ಕರೆದುಕೊಂಡು ಬಂದರಂತೆ. ತೋಟ, ತುಡಿಕೆ ಬಿಟ್ಟು ಅರೆ ಬಡಿಯೋಕೆ ಇಲ್ಲಿಗೆ ಬಂದವರು ಕಣ್ಲಾ ಎಂದು ನಮ್ಮ ಅಜ್ಜಿ ಹೇಳುತ್ತಿದ್ದಳು. ಅಂದು ಬೇವಿನಹಳ್ಳಿಗೆ ಬಂದ ಒಂದು ಕುಟುಂಬ ಇಂದು ಹತ್ತಾರು ಕುಟುಂಬಗಳಾಗಿವೆ’ ಎನ್ನುವರು ಅರೆವಾದ್ಯ ತಂಡದ ನೇತೃತ್ವ ವಹಿಸಿರುವ ಬಿ.ಕೆ.ನರಸಿಂಹರಾಜು. ಅವರು ಎಂ.ಎ ಪದವೀಧರ.

‘ಮಕ್ಕಳು ಅರೆ ಬಡಿಯುವುದು ಬೇಡ. ನಾವು ಬಡಿದಿದ್ದೇ ಸಾಕು. ಅವರು ಓದಿ ವಿದ್ಯಾವಂತರಾಗಲಿ ಎನ್ನುವುದು ನನ್ನ ಅಪ್ಪ ಸೇರಿದಂತೆ ತಂಡದ ಎಲ್ಲ ಹುಡುಗರ ಪೋಷಕರ ಆಶಯವಾಗಿತ್ತು. ನಮ್ಮ ಹಿರಿಯರು ಅನುಭವಿಸಿದ ಕಷ್ಟ, ನೋವು, ಅವಮಾನವೇ ಅವರು ಈ ನಿರ್ಧಾರ ಮಾಡಲು ಕಾರಣ. ನಾನು ಓಲಗ (ನಾದಸ್ವರ) ಮತ್ತು ಅರೆ ಮುಟ್ಟಲು ಅಪ್ಪ ಬಿಡುತ್ತಿರಲಿಲ್ಲ’ ಎಂದು ಅವರು ಹೇಳುವರು.

‘ಒಮ್ಮೆ ಪಕ್ಷದ ಗ್ರಾಮದಲ್ಲಿ ದೇವರ ಉತ್ಸವವಿತ್ತು. ಅರೆ ಬಡಿಯುವವರು ಬೆರಳೆಣಿಕೆಯಷ್ಟು ಜನರು ಇದ್ದರು. ಎಲ್ಲರೂ ಬೇರೆ ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದರು. ಅಪ್ಪನಿಗೆ ಅಲ್ಲಿ ಅರೆ ಬಡಿಯಲು ಆಹ್ವಾನ ಸಿಕ್ಕಿತು. ನಮ್ಮಲ್ಲಿ ಒಂದು ಸಂಪ್ರದಾಯ ಇದೆ. ದೇವರಿಗೆ ಒಂಟಿ ಅರೆ ಬಡಿಯುವುದಿಲ್ಲ. ಇಬ್ಬರು ಬೇಕು. ನಾನು ಐದು ವರ್ಷದ ಹುಡುಗ. ಬಾರಲಾ ಹೋಗುವ. ನೀನು ಇದನ್ನು ಸುಮ್ಮನೆ ಕೊರಳಿಗೆ ನೇತು ಹಾಕ್ಕ ಎಂದು ಕರೆದುಕೊಂಡು ಹೋದರು. ಅದಾಗಲೇ ಅಪ್ಪ ನುಡಿಸುತ್ತಿದ್ದ ಅರೆಯನ್ನು ನಾನು ನೋಡಿದ್ದೆ, ಕೇಳಿದ್ದೆ. ಕಾರ್ಯಕ್ರಮ ನಡೆಯುವುದು ಸ್ವಲ್ಪ ಸಮಯ ಆಗುತ್ತದೆ ಎಂದು ಅಪ್ಪ ಟೀ ಕುಡಿಯಲು ಹೋದರು. ಅಷ್ಟರಲ್ಲಿ ‘ಪೂಜೆ ಮಾಡಿ, ಪೂಜೆ ಮಾಡಿ’ ಎಂದರು. ‘ಏ ಅದ್ಯಾರಪ್ಪ ಅರೆ, ಬಡಿ...ಬಡಿ’ ಎಂದರು. ನಾನು ಬಡಿದೆ. ಅದೇ ನನ್ನ ಮೊದಲ ಅರೆವಾದ್ಯದ ಕಾರ‍್ಯಕ್ರಮ’ ಎಂದು ನೆನಪಿಸಿಕೊಳ್ಳುವರು.

ಶ್ರೇಷ್ಠತೆಯ ಅರೆವಾದ್ಯ: ‘ಯುವಕರು ಅರೆ ನುಡಿಸುತ್ತಿರುವುದು ತುಂಬಾ ಕಡಿಮೆ. ಮೂರ್ತಿಗಳನ್ನು ರೂಪಿಸುವುದರಲ್ಲಿ ವಿಶ್ವಕರ್ಮ ಸಮುದಾಯ ಪ್ರಮುಖವಾಗಿದೆ. ಇದನ್ನು ಆ ಸಮುದಾಯ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಅರೆವಾದ್ಯವನ್ನು ನಮ್ಮ ಸಮುದಾಯದವರು ಬಿಟ್ಟರೆ ಬೇರೆಯವರು ನುಡಿಸುವುದು ವಿರಳ. ಅಂದಮೇಲೆ ಇದು ನಮಗೆ ಸಿದ್ಧಿಸಿರುವ ವಿದ್ಯೆ. ನಮ್ಮನ್ನು ಓದಿಸಲು ನೆರವಾಗಿದ್ದು, ಅನ್ನ ನೀಡಿದ್ದು ಇದೇ ಅರೆವಾದ್ಯ. ಇದನ್ನೇಕೆ ಹೆಮ್ಮೆಯಿಂದ ನೋಡಬಾರದು. ನಮ್ಮ ಹಿರಿಯರು ಕೊಟ್ಟ ಶ್ರೇಷ್ಠ ಬಳುವಳಿ ಎನ್ನುವಂತೆ ಮುಂದುವರಿಕೊಂಡು ಹೋಗುತ್ತಿದ್ದೇವೆ. ಮತ್ತಷ್ಟು ಬೆಳೆಸುವುದು ನಮ್ಮ ಆಸೆ’ ಎಂದು ತಂಡದ ಸದಸ್ಯರು ಒಕ್ಕೊರಲಿನಿಂದ ನುಡಿಯುವರು.

ಜಾತಿ ಮೀರಿದ ಪ್ರೀತಿ ಮತ್ತು ಸ್ನೇಹದ ಸಂಬಂಧ ಮೂಡಲು ಅರೆವಾದ್ಯ ಸೇತುವೆಯಾದುದನ್ನು ನರಸಿಂಹರಾಜು ಸ್ಮರಿಸುವರು. ‘ಕಾಡುಗೊಲ್ಲ ಸಮುದಾಯದವರು ಜಂಜಪ್ಪನ ಕಾವ್ಯ ಹಾಡಿದರೆ ನಾವು ಅದಕ್ಕೆ ಅರೆ ಬಡಿಯುತ್ತೇವೆ. ಆ ಸಮುದಾಯದ ಕುಂಬಾರಹಳ್ಳಿಯ ಈರಣ್ಣ ಹಾಗೂ ಬೇವಿನಹಳ್ಳಿಯ ಈರಣ್ಣ ಅರೆ ಬಡಿಯುವುದನ್ನು ಕಲಿತ್ತಿದ್ದಾರೆ. ದೇವರ ಉತ್ಸವ ಮತ್ತಿತರ ಸಮಯದಲ್ಲಿ ಗೊಲ್ಲರು, ದಲಿತರು ಮತ್ತು ಕುಂಚಿಟಿಗ ಒಕ್ಕಲಿಗರು ಪರಸ್ಪರ ಸ್ನೇಹ ಸಂಬಂಧಗಳು ಮೊಳೆಯುತ್ತವೆ’ ಎನ್ನುವರು.

‘ಕರ್ನಾಟಕ ಹಾಗೂ ಗಡಿಯ ಆಂಧ್ರಪ್ರದೇಶದ 80 ರಿಂದ 82 ಹಳ್ಳಿಗಳ ಜನರು ಜುಂಜಪ್ಪನ ಒಕ್ಕಲಿನವರು ಇದ್ದಾರೆ. ಈ ಹಳ್ಳಿಗಳ ಕಾರ್ಯಕ್ರಮಗಳಲ್ಲಿ ಅರೆಬಡಿಯುವವರು ಬೇವಿನಹಳ್ಳಿಯವರು. ಇಂತಹವರು ಈ ಗ್ರಾಮದಲ್ಲಿ ಅರೆ ಬಡಿಯಬೇಕು ಎಂದು ನಿಯಮ ಮಾಡಿಕೊಂಡಿದ್ದೇವೆ. ಆ ಹಳ್ಳಿ ಜನರು ಅರೆಬಡಿಯುವವರಿಗೆ ಪ್ರತಿ ವರ್ಷ ಇಂತಿಷ್ಟು ಎಂದು ದವಸ ಧಾನ್ಯ ನೀಡುವರು. ಕುರಿ, ಮೇಕೆಗಳನ್ನೂ ಕೊಡುವರು. ನಮ್ಮ ತಂದೆಯ ಕಾಲದಲ್ಲಿ, ಅರೆಬಡಿಯುವವರ ಮನೆಗಳಲ್ಲಿ ವಿವಾಹ ನಡೆದರೆ ಜಾತಿ ನೋಡದೆ ಆ ಹಳ್ಳಿಯ ಜನರು ಬಂದು ಸೌದೆ ತಂದು ಹಾಕುತ್ತಿದ್ದರಂತೆ. ತಮ್ಮ ಮನೆಯ ಮದುವೆ ಎನ್ನುವಂತೆ ಮುಂದೆ ನಿಂತು ನಡೆಸಿಕೊಡುತ್ತಿದ್ದರಂತೆ’ ಎಂದು ನರಸಿಂಹರಾಜು ಹೇಳುವರು.

ಜಾತಿ ವ್ಯವಸ್ಥೆಯ ನಡುವೆಯೇ ಅರೆ, ಬೇವಿನಹಳ್ಳಿ ಹಾಗೂ ಸುತ್ತಮುತ್ತ ಸಾಮರಸ್ಯವನ್ನು ಮೂಡಿಸಿರುವ ವಾದ್ಯ ಪರಿಕರವಾಗಿ ಕಾಣುತ್ತದೆ. ಆರ್ಥಿಕ ಸುಧಾರಣೆಗೂ ದಲಿತ ಸಮುದಾಯಕ್ಕೆ ಆಸರೆಯಾಗುತ್ತದೆ ಎನ್ನುವ ಆಶಾವಾದ ವ್ಯಕ್ತವಾಗುತ್ತದೆ. ಗೊಲ್ಲ ಸಮುದಾಯದ ಶ್ರೀನಿವಾಸ್ ಅವರಂತಹ ಯುವಕರು ಪದ ಹಾಡುತ್ತಿದ್ದಾರೆ. ಹಿರಿಯರ ಪದ, ವಾದ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಅಪೇಕ್ಷೆ ಬೇವಿನಹಳ್ಳಿಯ ಈ ಯುವಸಮುದಾಯದಲ್ಲಿ ಇಣುಕುತ್ತದೆ.

‘ಜುಂಜಪ್ಪನ ಜಾತ್ರೆಗೆ ಬಂದಿದ್ದ ಬೆಂಗಳೂರಿನ ನಂದಿನಿ ಬಡಾವಣೆಯ ಕೆಲವರು ಬಡಾವಣೆಯಲ್ಲಿ ನಡೆಯುವ ದೇವರ ಉತ್ಸವಕ್ಕೆ ಆಹ್ವಾನಿಸಿದರು. ಎಲ್ಲ ವಾದ್ಯ ಪ್ರಕಾರಗಳ ಪ್ರದರ್ಶನ ಮುಗಿಯಿತು. ಕೊನೆಯಲ್ಲಿ ನಮಗೆ ಅವಕಾಶ ಮಾಡಿಕೊಟ್ಟರು. ಅರೆ ಮೊಳಗಿದ ತಕ್ಷಣವೇ ಕಳಸ ಹೊತ್ತಿದ್ದ ಹುಡುಗಿ ಕುಣಿಯಲು ಆರಂಭಿಸಿದಳು. ಹಲವು ವರ್ಷಗಳಿಂದ ಈ ಉತ್ಸವ ನಡೆಸುತ್ತಿದ್ದರೂ ಕಳಸ ಹೊತ್ತ ಹುಡುಗಿ ಕುಣಿದಿರಲಿಲ್ಲವಂತೆ. ನಾವು ಅರೆ ಬಡಿಯದಿದ್ದರೆ ಆಕೆ ಸುಮ್ಮನೆ ನಿಂತುಬಿಡುತ್ತಿದ್ದಳು. ಮುಂದಕ್ಕೆ ಹೆಜ್ಜೆ ಸಹ ಇಡುತ್ತಿರಲಿಲ್ಲ. ಜನರಿಗೆ ಅಚ್ಚರಿ. ಈ ನಾದದಲ್ಲಿ ಏನೋ ಒಂದು ಶಕ್ತಿ ಇದೆ ಎಂದು ಆಗಲೇ ಅನ್ನಿಸಿತು’ ಎನ್ನುವರು ಗುರುಮೂರ್ತಿ.

ಅದು 2000ನೇ ಇಸವಿ. ಮದುವೆ ಸುಗ್ಗಿ ಕಾಲ. ಹಿರಿಯೂರು ತಾಲ್ಲೂಕು ಸೋಮೇನಹಳ್ಳಿಯ ಕೆಲವರು ಬಂದರು. ಈ ದಿನ ನಮ್ಮ ಊರಲ್ಲಿ ಕಳಸ ಪ್ರತಿಷ್ಠಾಪನೆ ಇದೆ. ಬೇವಿನಹಳ್ಳಿ ಹುಡುಗರನ್ನು ಕರೆದುಕೊಂಡು ಬರುತ್ತೇವೆ ಎಂದು ಊರಿನಲ್ಲಿ ಹೇಳಿದ್ದೇವೆ. ನಿಮ್ಮ ತಂಡ ಬರಲೇಬೇಕು ಎಂದು ಪಟ್ಟು ಹಿಡಿದರು. ಆಗ ಬ್ಯಾಂಡ್‌ ಸೆಟ್ ಬಡಿಯುತ್ತಿದ್ದೆವು. ನೀವು ಹೇಳುವ ದಿನ ಎರಡು ಮೂರು ಕಡೆ ಕಾರ್ಯಕ್ರಮ ಇದೆ ಎಂದರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ನಮ್ಮಲ್ಲಿ ಒಂದು ಪದ್ಥತಿ ಇದೆ. ಒಂದು ಗ್ರಾಮದಲ್ಲಿ ಅರೆ ಬಡಿಯುವವರು ಇದ್ದರೆ ಆ ಗ್ರಾಮಕ್ಕೆ ಅವರ ಒಪ್ಪಿಗೆ ಇಲ್ಲದೆ ನಾವು ಪ್ರವೇಶಿಸುವುದಿಲ್ಲ. ಇದನ್ನು ಬಂದಿದ್ದವರಿಗೆ ಹೇಳಿದೆವು. ತಕ್ಷಣ ಅವರು ಆ ಗ್ರಾಮದ ಅರೆಬಡಿಯುವವರನ್ನು ಸಂಪರ್ಕಿಸಿದರು. ‘ನೀವು ಬನ್ನಿ’ ಎಂದು ಅಲ್ಲಿ ಅರೆಬಡಿಯುವವರು ಆಹ್ವಾನ ನೀಡಿದರು. ಒಪ್ಪಿಕೊಂಡಿದ್ದ ಕಾರ್ಯಕ್ರಮ ಬಿಡುವಂತಿಲ್ಲ. ನಡುವೆ ಇವರ ಒತ್ತಾಯ. ತಪ್ಪಿಸಿಕೊಳ್ಳಲು ಒಂದು ಉಪಾಯ ಮಾಡಿದೆವು. ₹ 3 ಸಾವಿರ ಕೊಟ್ಟರೆ ಬರುತ್ತೇವೆ ಎಂದೆವು.

ಅಷ್ಟು ಹಣ ಕೇಳಿದರೆ ಇವರು ಒಪ್ಪುವುದಿಲ. ವಾಪಸ್ ಹೋಗುವರು ಎಂದುಕೊಂಡಿದ್ದೆವು. ಆದರೆ ತಕ್ಷಣವೇ ₹ 1 ಸಾವಿರ ಮುಂಡವಾಗಿ ಕೊಟ್ಟರು. ಆ ಹಳ್ಳಿಯಲ್ಲಿ ತಂಡಕ್ಕೆ ಒಳ್ಳೆಯ ಸ್ವಾಗತ ಸಿಕ್ಕಿತು. ಅಲ್ಲಿ ಅರೆ ಬಡಿಯುತ್ತಿದ್ದವರ ಜತೆ ನಮ್ಮನ್ನು ಪೈಪೋಟಿಗೆ ನಿಲ್ಲಿಸಿದರು, ಪ್ರೀತಿಯಿಂದ ಗೆಲ್ಲಿಸಿದರು’ ಎಂದು ನೆನಪು ಮಾಡಿಕೊಳ್ಳುವರು ನರಸಿಂಹರಾಜು.

ಇಂತಹ ಹಲವು ಪ್ರಸಂಗಗಳು ತಂಡದ ಹೆಜ್ಜೆ ಗುರುತುಗಳಲ್ಲಿ ಇವೆ. ಅರೆಯಲ್ಲಿ ನಾನಾ ಪ್ರಕಾರದ ಚಿಟುಕು (ತಾಳ) ಇವೆ. ಉತ್ಸವ, ಪೂಜೆ ಮಾಡುವಾಗ, ದೀಪ ಹಚ್ಚುವಾಗ, ದೇವರು ಹೊರಟಾಗ ಬಡಿಯುವ ಚಿಟುಕುಗಳೇ ಬೇರೆ ಬೇರೆಯಾಗಿರುತ್ತವೆ. ಅರೆ ಸದ್ದು ಕೇಳಿದಾಗ ಈಗ ಇಂತಹ ಕಾರ್ಯಕ್ರಮ ನಡೆಯುತ್ತಿದೆ ಎಂದು ಅರೆಯ ಆಳ ಅಗಲ ಬಲ್ಲವರು ಹೇಳಬಹುದು ಎನ್ನುವರು ಬೇವಿನಹಳ್ಳಿಯ ಅರೆವಾದ್ಯದ ಹುಡುಗರು.

ಕಾಮೆಂಟ್‌ಗಳಿಲ್ಲ: