ಮಂಗಳವಾರ, ಜನವರಿ 16, 2018

ಬಿಟ್‌ಕಾಯಿನ್-ಬ್ಲಾಕ್‌ಚೇಯಿನ್ ಹುಚ್ಚು


ಅನುಶಿವಸುಂದರ್ 
Image result for bitcoin
ಇತ್ತೀಚೆಗೆ ಕಂಡುಬಂದ ಆಸ್ತಿಬೆಲೆ ಹೆಚ್ಚಳದ ನೀರ್ಗುಳ್ಳೆಯು ನಿರಂತರವಾಗಿ ಖಾಸಗಿ ಆಸ್ತಿಯನ್ನು ಕ್ರೂಢೀಕರಿಸುತ್ತಲೇ ಇರಬೇಕೆನ್ನುವ  ಬಂಡವಾಳಶಾಹಿ ಗೀಳಿನ  ಅವಿವೇಕದ ಚಿಹ್ನೆಯಾಗಿದೆ.

೨೦೧೭ರ ಡಿಸೆಂಬರ್ ೧೦ರಂದು ಅಮೆರಿಕದ ಚಿಕಾಗೋ ಬೋರ್ಡ್ ಆಪ್ಷನ್ ಎಕ್ಸ್ಚೇಂಜ್ನಲ್ಲಿ ಅಧಿಕೃತ ಸರ್ಕಾರಿ ನೋಟು-ನಾಣ್ಯಗಳಿಗೆ ಬದಲಿಯಾಗಿ ಅನಧಿಕೃತವಾಗಿ ಚಾಲ್ತಿಯಲ್ಲಿದ್ದ ಗೂಢಲಿಪಿ ಡಿಜಿಟಲ್ ಕರೆನ್ಸಿಯಾದ ಬಿಟ್ಕಾಯಿನ್ ವ್ಯವಹಾರದ ಫ್ಯೂಚರ್ ಟ್ರೇಡಿಂಗ್ (ಭವಿಷ್ಯದ ದರದಲ್ಲಿ ಇಂದಿನ ಊಹಾತ್ಮಕ ವ್ಯಾಪಾರ) ಕ್ಕೆ ಅಧಿಕೃತವಾಗಿ ಅವಕಾಶ ಮಾಡಿಕೊಡಲಾಯಿತು. ಮರುವಾರದಲ್ಲಿ ಅದಕ್ಕಿಂತ ದೊಡ್ಡದಾಗಿ ವ್ಯವಹಾರ ನಡೆಸುವ ಚಿಕಾಗೋ ಮರ್ಕನ್ಟಲ್ ಎಕ್ಸ್ಚೇಂಜ್ನಲ್ಲೂ ಬಿಟ್ಕಾಯಿನ್ ವ್ಯವಹಾರ ಅಧಿಕೃತವಾಗಿ ಪ್ರಾರಂಭವಾಯಿತು. ಕಾರಣದಿಂದಾಗಿ ಹಣಕಾಸು ಬಂಡವಾಳದ ದೈತ್ಯರಿಗೆ ವ್ಯವಹಾರ ಮಾಡಲು ಮತ್ತೊಂದು ಹಣಕಾಸು ಉಪಕರಣ ದೊರೆತಂತಾಗಿದೆ. ಏಕೆಂದರೆ ಈವರೆಗೆ ಬಿಟ್ಕಾಯಿನ್ ವ್ಯವಹಾರಕ್ಕೆ ಅಧಿಕೃತ ನಿರ್ಬಂಧವಿತ್ತು

ಬದಲೀ ಮಾರುಕಟ್ಟೆಯಲ್ಲಿ ಬಿಟ್ಕಾಯಿನ್ಗಳ ಬೆಲೆಯು ಒಂದೇ ಸಮನೆ ಏರುತ್ತಿದ್ದಾಗ ಅವಕಾಶವನ್ನು ಬಳಸಿಕೊಂಡು ಬೃಹತ್ ಲಾಭ ಮಾಡಿಕೊಳ್ಳದೆ ಸುಮ್ಮನಿರಲು ದೊಡ್ಡ ಕಾರ್ಪೊರೇಟ್ ಹಣಕಾಸು ಉದ್ದಿಮೆಗಳಿಗೆ ಸಾಧ್ಯವೇ ಇರಲಿಲ್ಲ. ಉದಾಹರಣೆಗೆ ಬಿಟ್ಕಾಯಿನ್ಗಳ ನಾಮಾಂಕಿತ ಬೆಲೆ ೨೦೧೭ರ ಜನವರಿಯಲ್ಲಿ ೧೦೦೦ ಡಾಲರ್ ಇದ್ದದ್ದು ಡಿಸೆಂಬರ್ ಮೂರನೇ ವಾರದಲ್ಲಿ ೨೦,೦೦೦ ಡಾಲರ್ ಗೆರೆಯನ್ನು ದಾಟಿತ್ತು. ಒಂದೆಡೆ ಪ್ರಮಾಣದ ಬೆಲೆ ಅಸ್ಥಿರತೆಯಿಂದಾಗಿ ಬಾಜಿ ಮಾರುಕಟ್ಟೆಯ ನೀರ್ಗುಳ್ಳೆಯು ಯಾವಾಗ ಬೇಕಾದರೂ ಒಡೆದು ಹೋಗಬಹುದಾದ ಆತಂಕವನ್ನು ಸೃಷ್ಟಿಸಿತ್ತು. ಮತ್ತೊಂದೆಡೆ ಕೇಂದ್ರದ ಬ್ಯಾಂಕರುಗಳು ಮತ್ತು ಹಣಕಾಸು ಅಧಿಕಾರಿಗಳು ಬಿಟ್ಕಾಯಿನ್ನಲ್ಲಿ ನಡೆಯುವ ಸಟ್ಟಾಬಾಜಿಯು ಅತ್ಯಂತ ಅಪಾಂಕಾರಿಯೆಂದು ಎಚ್ಚರಿಸುತ್ತಿದ್ದರೂ ಬಗೆಯ ಜೂಜು ವ್ಯವಹಾರದಲ್ಲಿ ಪರಿಣಿತರಾದ ಹಣಕಾಸು ಬಂಡವಾಳಿಗರು ಬಿಟ್ಕಾಯಿನ್ ವ್ಯವಹಾರದಲ್ಲಿ ಕಂಡರಿಯದ ಲಾಭವನ್ನು ಗಳಿಸಿಕೊಂಡಿದ್ದಂತೂ ನಿಜ.
 
ಆದರೆ ವಾಸ್ತವವೇನೆಂದರೆ ೨೦೦೮ರ ಮಹಾನ್ ಹಣಕಾಸು ಬಿಕ್ಕಟ್ಟಿನ ನಂತರದಲ್ಲಿ ಅಮೆರಿಕದ ಫೆಡರಲ್ ಬ್ಯಾಂಕು, ಯೂರೋಪಿಯನ್ ಸೆಂಟ್ರಲ್ ಬ್ಯಾಂಕು ಹಾಗೂ ಬ್ಯಾಂಕ್ ಆಫ್ ಜಪಾನಿನಂತ ರಾಷ್ಟ್ರೀಕೃತ ಕೇಂದ್ರೀಯ ಬ್ಯಾಂಕುಗಳು ಅನುಸರಿಸಿದ ಹಣಕಾಸು ಹರಿವಿನ ಪ್ರಮಾಣ ನಿರ್ಬಂಧ ಸಡಿಲೀಕರಣ ನೀತಿಯಿಂದಾಗಿಯೇ ಮಾರುಕಟ್ಟೆಯಲ್ಲಿ ಅಪಾರ ಪ್ರಮಾಣದ ಕರೆನ್ಸಿಗಳು ಅನಿಯಂತ್ರಿತವಾಗಿ ಸಿಗಲಾರಂಭಿಸಿತು. ಇದನ್ನು ಸ್ಟಾಕುಗಳು, ಬಾಂಡುಗಳಂಥ ಹಣಕಾಸು ಆಸ್ತಿ ಮಾರುಕಟ್ಟೆ ಹಾಗೂ ರಿಯಲ್ ಎಸ್ಟೇಟ್ಗಳಂಥ ಆಸ್ತಿ ಸಂಬಂಧಿತ ಸಟ್ಟಾ ಮಾರುಕಟ್ಟೆಯಲ್ಲಿ ಹೂಡಿದ್ದರಿಂದಲೇ ಆಸ್ತಿಗಳ ಬೆಲೆಗಳಲ್ಲಿ ಅಸಾಧಾರಣ ಉಬ್ಬರ ಉಂಟಾಯಿತು. ರೀತಿ ಆಸ್ತಿ ವ್ಯವಹಾರಗಳಲ್ಲಿ ಆದ ಬೆಲೆ ಉಬ್ಬರಗಳು ಆಸ್ತಿಗಳ ಖರೀದಿಗಾಗಿ ಬೇಕಾದ ಹಣಕಾಸಿಗಾಗಿ ಬೇಕಾದ ಸಾಲದ ಮಾರುಕಟ್ಟೆಯನ್ನು  ಹೆಚ್ಚಿಸಿದೆ. ಇದು ಹಿಂತಿರುಗಿ ಆಸ್ತಿ ಬೆಲೆಗಳಲ್ಲಿ ಮತ್ತಷ್ಟು ಉಬ್ಬರವನ್ನುಂಟ್ಟುಮಾಡಿ ಬಾಜಿ ವ್ಯಾಪಾರದ ಉನ್ಮಾದವನ್ನು ಹೆಚ್ಚಿಸಿದೆ. ಏಕೆಂದರೆ ಬಾಜಿ ಮಾರುಕಟ್ಟೆಯಲ್ಲಿ ಒಬ ಬಾಜಿದಾರನ ಸಾಲದ ಅರ್ಹತೆಯು ವ್ಯಕ್ತಿ ಬ್ಯಾಂಕುಗಳಲ್ಲಿ ಅಡಮಾನಕ್ಕೆ ಇಡಬಹುದಾದ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನೇ ಆಧರಿಸಿರುತ್ತದೆ.
Image result for bitcoin

ಒಂದೆಡೆ ಹಣಕಾಸು ಹರಿವಿನ ಪ್ರಮಾಣದಲ್ಲಿ ಸಡಿಲತೆ ಯಿಂದಾಗಿ ಮಾರುಕಟ್ಟೆಯಲ್ಲಿ ಸುಲಭವಾಗಿ ಹಣಕಾಸು ಲಭ್ಯವಾಗುತ್ತಿದ್ದದು ಮತ್ತು ಅಭಿವೃದ್ಧಿ ಹೊಂದಿದ ಬಂಡವಾಳಶಾಹಿ ಆರ್ಥಿಕತೆಗಳಲ್ಲಿನ ನೈಜ ಕ್ಷೇತ್ರಗಳ ಅಭಿವೃದ್ಧಿ ಸ್ಥಗಿತಗೊಂಡಿದ್ದರಿಂದಲೂ ಬಾಜಿ ಮಾರುಕಟ್ಟೆಯಲ್ಲಿ ಅತಿಹೆಚ್ಚು ಲಾಭವನ್ನು ಸೂರೆಹೊಡೆಯುವ ಸ್ಪರ್ಧೆ ಏರ್ಪಟ್ಟಿತು. ಹೀಗಾಗಿ ಹೊಸ ಹಣಕಾಸು ಮಾರುಕಟ್ಟೆಯ ಸರಬರಾಜು ವಿಭಾಗದಲ್ಲಿ ಗೂಢಲಿಪಿಕರೆನ್ಸಿಯ ಸಂಶೋಧನೆ ತ್ವರಿತವಾಗಿಯೇ ಆಗಿಬಿಟ್ಟಿತು. ಅದರ ಭಾಗವಾಗಿಯೇ ೨೦೦೯ರಲ್ಲೇ ಬಿಟ್ಕಾಯಿನ್ ಎಂಬ ಪ್ರಪ್ರಥಮ ಡಿಜಿಟಲ್ ಕರೆನ್ಸಿಯ ವ್ಯವಹಾರ ಪ್ರಾರಂಭವಾಯಿತು. ಅದು ತನ್ನ ವ್ಯವಹಾರಗಳ ಸುಭದ್ರತೆ, ಡಿಜಿಟಲ್ ಕರೆನ್ಸಿಯ ಸೃಷ್ಟಿ, ಮತ್ತು ಅದರ ಹೆಚ್ಚುವರಿ ಘಟಕಾಂಶಗಳ ಸೇರ್ಪಡೆಯಲ್ಲಿ ನಿಯಂತ್ರಣ ಮತ್ತು ವ್ಯವಹಾರಗಳ ವರ್ಗಾವಣೆಯ ಪರಿಶೀಲನೆಯಂಥ ಪ್ರಕ್ರಿಯೆಗಳನ್ನು ನಡೆಸಲು ಗೂಢ ಡಿಜಿಟಲ್ ಲಿಪಿಯನ್ನು ಬಳಸುತ್ತದೆ. ಹೀಗಾಗಿ ಬಿಟ್ಕಾಯಿನ್ ಪದ್ಧತಿಯಲ್ಲಿರುವ ವಿಕೇಂದ್ರಿತ ಲೆಡ್ಜರ್ ತಂತ್ರಜ್ನಾನ, ಘಟಕ ಸರಣಿ ಪದ್ಧತಿಗಳನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿಕೊಳ್ಳುವ ಉದ್ಯಮಗಳ ವ್ಯವಹಾರಗ ಶೇರುಗಳ ಬೆಲೆಗಳು ಸಹಜವಾಗಿಯೇ ಸ್ಟಾಕ್ ಮಾರ್ಕೆಟ್ನಲ್ಲಿ ಉಬ್ಬರ ಕಾಣುತ್ತಿವೆ. ಅಷ್ಟು ಮಾತ್ರವಲ್ಲ ಗೂಢಲಿಪಿ ಕರೆನ್ಸಿಯ ಗಣಿಗಾರಿಕೆ (ಕ್ರಿಪ್ಟೋಕರೆನ್ಸಿ ಮೈನಿಂಗ್) ಎಂದು ಕರೆಯಲ್ಪಡುವ ಬಿಟ್ಕಾಯಿನ್ ಮತ್ತಿತರ ಗೂಢಲಿಪಿ ಕರೆನ್ಸಿಗಳ ಹೆಚ್ಚುವರಿ ಘಟಕಗಳನ್ನು ಸ್ಥಾಪಿಸುವ ಉದ್ಯಮದಲ್ಲಿರುವ ಕಂಪನಿಗಳ ಶೇರುಗಳೂ ಸಹ ಉಬ್ಬರವನ್ನು ಕಾಣುತ್ತಿವೆ.

ಇದೇ ರೀತಿ ೧೯೯೯ರ ಡಾಟ್ಕಾಮ್ ನೀರ್ಗುಳ್ಳೆಯು ಉಬ್ಬರದಲ್ಲಿದ್ದ ಅವಧಿಯಲ್ಲಿ ಇಂಟರ್ನೆಟ್ ಉದ್ಯಮದಲ್ಲಿ ಇದ್ದೇವೆಂದು ಹೇಳಿಕೊಳ್ಳುತ್ತಿದ ಉದ್ಯಮಗಳ ಶೇರುಬೆಲೆಗಳು ಗಗನಕ್ಕೆ ಮುಟ್ಟಿದ್ದು ನೆನಪಿಗೆ ಬರುತ್ತದೆ. ಅತಾರ್ಕಿಕ ಉನ್ಮಾದಗಳು ಮತ್ತೊಮ್ಮೆ ಮಾರುಕಟ್ಟೆಯನ್ನು ಆವರಿಸಿಕೊಂಡಂತೆ ಕಂಡುಬರುತ್ತಿದೆ. ನಾವು ಉತ್ಪ್ರೇಕ್ಷೆ ಮಾಡುತ್ತಿದ್ದೇವೆ ಎಂದು ನಿಮಗೆ ಅನಿಸಬಹುದು. ಆದರೆ ಒಮ್ಮೆ ನಿಮ್ಮ ಕಂಪನಿಯ ಹೆಸರನ್ನೊಮ್ಮೆ ಬಿಟ್ಕಾಯಿನ್ ತರದ ಹೆಸರಿನೊಂದಿಗೆ ತಗುಲಿಸಿ ನೋಡಿ. ಉದಾಹರಣೆಗೆ ಇತ್ತೀಚೆಗೆ ಲಾಂಗ್ ಲ್ಯಾಂಡ್ ಟೀ ಕಾರ್ಪ್ ಎಂಬ ಕಂಪನಿಯು ತನ್ನ ಹೆಸರನ್ನು ಲಾಂಗ್ ಬ್ಲಾಕ್ಚೈನ್ (ಬಿಟ್ ಕಾಯಿನ್) ಕಾಪ್ ಎಂದು ಬದಲಿಸಿಕೊಂಡಿದ್ದೇ ತಡ ಅದರ ಶೇರು ಬೆಲೆಗಳು ಆಕಾಶ ಮುಟ್ಟತೊಡಗಿದ್ದವು. ವಾಸ್ತವವಾಗಿ ಬಿಟ್ಕಾಯಿನ್ ಮತ್ತು ಬ್ಲಾಕ್ಚೇಯಿನ್ ವಕ್ತಾರರು ಹಣಕಾಸು ಉಪಕರಣದ ಮತ್ತು ಪ್ರಕ್ರಿಯೆಯ ಅನ್ವೇಷಣೆಯು ಇಂಟರ್ನೆಟ್ ಕ್ರಾಂತಿಯ ಎರಡನೇ ಹಂತವಾಗಿದೆ ಎಂದೇ ಪ್ರಚಾರ ಮಾಡುತ್ತಿಲ್ಲವೇ? ವಕ್ತಾರರ ಪ್ರಕಾರ ಡಾಲರ್ ಅಥವಾ ಯೂರೋ ಅಥವಾ ರೂಪಾಯಿಗಳ ಕರೆನ್ಸಿಗಳ ಮೌಲ್ಯವನ್ನು ಪಡೆದುಕೊಳ್ಳಲು ನೀವು ಆಯಾ ದೇಶಗಳ ಸೆಂಟ್ರಲ್ ಬ್ಯಾಂಕುಗಳ ಮೇಲೆ ಮತ್ತು ಮಧ್ಯವರ್ತಿ ಬ್ಯಾಂಕುಗಳ ಮೇಲೆ ಮತ್ತು ಅದಕ್ಕೆ ಬೆಂಗಾವಲಾಗಿರುವ ಆಯಾ ರಾಷ್ಟ್ರಪ್ರಭುತ್ವಗಳ ಮೇಲೆ ಭರವಸೆ ಇರಿಸಬೇಕಾಗುತ್ತದೆ. ಆದರೆ ಬಿಟ್ಕಾಯಿನ್ ವ್ಯವಸ್ಥೆಯಲ್ಲಿ ಅಂಥಾ ಯಾವುದರ ಅಗತ್ಯವೂ ಇರುವುದಿಲ್ಲ. ಒಂದು ಜಾಗತಿಕ ಆರ್ಥಿಕತೆಯಲ್ಲಿ ಇಂಟರ್ನೆಟ್ ಮೂಲಕ ನಡೆಯುವ ಜಾಗತಿಕ ಹಣಕಾಸು ವ್ಯವಹಾರಗಳು ಇನ್ನುಮುಂದೆ ಯಾವುದೇ ಸೆಂಟ್ರಲ್ ಬ್ಯಾಂಕು ಅಥವಾ ಹಣಕಾಸು ಪ್ರಾಧಿಕಾರಗಳು ಹೇರುವ ನಿಯಂತ್ರಣಕ್ಕೆ ಒಳಪಡುವ ಅವಶ್ಯಕತೆಯೇ ಇರುವುದಿಲ್ಲ.

ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಉನ್ಮಾದಗಳನು ಹೊರತುಪಡಿಸಿ ನೋಡಿದರೆ, ಬಿಟ್ ಕಾಯಿನ್- ಬ್ಲಾಕ್ಚೇಯಿನ್ ನಿರ್ಗುಳ್ಳೆಯು ಖಚಿತವಾಗಿ ಸ್ಪೋಟಗೊಳ್ಳಲಿದ್ದು ಅದರ ನಂತರದ ವಿದ್ಯಮಾನದ ಬಗ್ಗೆಯೂ ಗಮನಹರಿಸಬೇಕಿದೆ. ೨೦೦೭ರಲ್ಲಿ ಅಮೆರಿಕದ ಹಣಕಾಸು ಬಿಕ್ಕಟ್ಟು ಸ್ಪೋಟಗೊಳ್ಳುವ ಸ್ವಲ್ಪ ಮುನ್ನ ಸಂಭವಿಸಿದ ಬೇರ್ ಸ್ಟ್ರನ್ ಸಟ್ಟಾ ನಿಧಿಗೆ ಸಂಬಂಧಪಟ್ಟ ಪ್ರಕರಣ ಮತ್ತು ಅದರಿಂದಾಗಿ ಅದೇ ವರ್ಷ ಜೂನ್ನಲ್ಲಿ ಸಹವರ್ತಿ ಗ್ಯಾರಂಟಿ ಇದ್ದರೂ ಅತ್ಯಧಿಕ ರಿಸ್ಕ್ ಇದ್ದ ಸಾಲ ಖಾತೆಗಳನ್ನು ಸ್ಥಂಭನ ಮಾಡಬೇಕಾಗಿ ಬಂದಂಥ ಸಂದರ್ಭ ಎದುರಾಗಿದ್ದರೂ ಆಮೆರಿಕದ ಆಗಿನ ಫೆಡರಲ್ ರಿಸರ್ವ್ ಬ್ಯಾಂಕಿನ ಅಧ್ಯಕ್ಷ ಬೆನ್ ಬೆರ್ನಾನ್ಕೆಯವರು ಅಡಮಾನ ಸಾಲವನ್ನು ಆಧರಿಸಿರುವ ಶೇರುಮಾರುಕಟ್ಟೆ ಕುಸಿತವು ಒಟ್ಟಾರೆ ಹಣಕಾಸು ವ್ಯವಸ್ಥೆಯ ಮೇಲೆ ಯಾವುದೇ ಹಾನಿಕರ ಪರಿಣಾಮವನ್ನು ಬೀರುವುದಿಲ್ಲ ಎಂದೇ ಘೋಷಿಸಿದ್ದರುಆದರೆ ಅವರಿಗೆ ಅಡಮಾನ ವ್ಯವಹಾರಗಳ ಸೆಕ್ಯೂರಿಟಿಯಲ್ಲಿ ನಡೆಯುತ್ತಿರುವ ಬಾಜಿ ವ್ಯವಹಾರಕ್ಕೂ ಹಾಗೂ ಒಟ್ಟಾರೆ ಹಣಕಾಸು ವ್ಯವಸ್ಥೆಗೂ ಇರುವ ಅಂತರ್ಗತ ಸಂಬಂಧಗಳು ಮತ್ತು ಅದರಿಂದಾಗಿ ಉಂಟಾಗುವ ಹಣಕಾಸು ಬಿಕ್ಕಟ್ಟಿನ ಬಗ್ಗೆ ತಿಳಿವಿರಲಿಲ್ಲವೇ?

ಹಾಗಿದ್ದಮೇಲೆ ಬಿಟ್ಕಾಯಿನ್- ಬ್ಲಾಕ್ಚೇನ್ ಉನ್ಮಾದಗಳಿಗೂ ಇತರ ಆಸ್ತಿ ಮಾರುಕಟ್ಟೆಗಳಿಗೂ, ಬ್ಯಾಂಕ್ ಸಾಲಗಳಿಗೂ, ಮತ್ತು  ಸಾಲ ಮರುಪಾವತಿ ಖಾತರಿ ಒಪ್ಪಂದಗಳಿಗೂ ಇರುವ ಅಂತರ್ಗತ ಸಂಬಂಧಗಳೇನು? ವಾಸ್ತವವಾಗಿ ಹೇಳಬೇಕೆಂದರೆ ನಮಗೆ ಅದರ ಬಗ್ಗೆ ಯಾವುದೇ ಸುಳಿವಿಲ್ಲ. ನಮಗೆ ತಿಳಿದಿರುವುದೆಲ್ಲಾ ಏನೆಂದರೆ ಯಾವುದಾದರೂ ಆಸ್ತಿ ಮಾರುಕಟ್ಟೆಯ ನೀರ್ಗುಳ್ಳೆಯು ಒಡೆದುಹೋದರೆ ಅದರಿಂದಾಗಿ ಅವುಗಳ ಹಿಂದಿರುವ ಎಲ್ಲಾ ಮರು ಹಾಗೂ ಪೂರಕ ಸಾಲ ಖಾತರಿ ವ್ಯವಸ್ಥೆಗಳು ನಾಶವಾಗಿ ಹೋಗುತ್ತವೆಇದರಿಂದಾಗಿ ಹಣಕಾಸು ವ್ಯವಸ್ಥೆ ಜಾಗತಿಕರಣಗೊಂಡಿರುವ ಇಂದಿನ ಪ್ರಪಂಚದಲ್ಲಿ ದೇಶಗಳ ಗಡಿಗಳನ್ನು ದಾಟಿ ಎಲ್ಲಾ uಕಾಸು ಸಂಸ್ಥೆಗಳು ಮತ್ತು ಮಾರುಕಟ್ಟೆಗಳು ಕುಸಿದುಬೀಳುತ್ತವೆ. ಅದೇನೇ ಇದ್ದರೂ ಇವೆಲ್ಲವನ್ನೂ ಮೀರಿರುವ ಸಂಗತಿಯೆಂದರೆ ಅಭಿವೃದ್ಧಿ ಹೊಂದಿದ ಬಂಡವಾಳಶಾಹಿ ದೇಶಗಳಲ್ಲಿ ದೀರ್ಘಕಾಲದಿಂದ ಮುಂದುವರೆಯುತ್ತಿರುವ ಆರ್ಥಿಕ ಸ್ಥಗಿತತೆ (ನಿಧಾನಗತಿಯ ಆರ್ಥಿಕ ಅಭಿವೃದ್ಧಿ, ಅತಿ ಹೆಚ್ಚು ನಿರುದ್ಯೋಗ ಅಥವಾ ಅರೆ ಉದ್ಯೋಗ ಮತ್ತು ಅಧಿಕ ಉತ್ಪಾz ಸಾಮರ್ಥ್ಯ) ಕೊನೆಗೊಳ್ಳದ ಹೊರತು ಉತ್ಪಾದಕ ಹೂಡಿಕೆಗಳ ಬದಲಿಗೆ ಬಗೆಯ ಬಾಜಿ ಮಾರುಕಟ್ಟೆಯ ಹೂಡಿಕೆಗಳೇ ಆರ್ಥಿಕ ಅಭಿವೃದ್ಧಿಯ ಚಾಲಕ ಶಕ್ತಿಗಳಾಗಿ ಮುಂದುವರೆಯಲಿವೆ

 ಮತ್ತೊಂದು ಮಾತಿನಲ್ಲಿ ಹೇಳುವುದಾದರೆ ಆರ್ಥಿಕತೆಯನ್ನು ಚಾಲ್ತಿಯಲ್ಲಿಡಲು ಇಂಥ ಹಲವಾರು ನೀರುಗುಳ್ಳೆಗಳ ಅಗತ್ಯವಿದೆ. ಸಂಪತ್ಪರಿಣಾಮದಿಂದಾಗಿ (ವೆಲ್ತ್ ಎಫೆಕ್ಟ್) ಎಂದರೆ- ಆದಾಯಗಳಲ್ಲಿ ಏರಿಕೆಯಿರದಿದ್ದರೂ ಆಸ್ತಿ ಬೆಲೆಗಳಲ್ಲಿ ಕಂಡುಬರುವ ಏರಿಕೆಯಿಂದಾಗಿ ಆಗುವ ವೆಚ್ಚದಲ್ಲಿನ ಹೆಚ್ಚಳಗಳು- ನೈಜ ಆರ್ಥಿಕಯೆಲ್ಲೂ ಒಂದಷ್ಟು ಚಲನೆಯನ್ನು ತರುತ್ತದೆ. ಆದರೆ ಹಣಕಾಸು ಗುಳ್ಳೆಯು ಒಡೆದುಹೋದೊಡನೆ ನೈಜ ಆರ್ಥಿಕತೆಯೂ ದಿಕ್ಕೆಡುತ್ತದೆ. ಹಿಂದಿನ ಹಣಕಾಸು ಉನ್ಮಾದಗಳಂತೆ ಬಿಟ್ಕಾಯಿನ್-ಬ್ಲಾಕ್ಚೇಯಿನ್ ಎಂಬ ವಿದ್ಯಮಾನವು ಒಟ್ಟಾರೆ ಜನತೆಯ ಯಾವ ನೈಜ ಅಗತ್ಯಗಳನ್ನು ಪೂರೈಸದಿದ್ದರೂ ಯಾವುದೇ ಮಾರ್ಗದಿಂದಲಾದರೂ ಸರಿ ತಮ್ಮ ಸಂಪತನ್ನು ಮಾತ್ರ ಹೆಚ್ಚಿಸಿಕೊಳ್ಳಬೇಕೆಂಬ ಬಂಡವಾಳಶಾಹಿಗಳ ಗೀಳಿನ ಪರಿಣಾಮವಾಗಿದೆ.

 ಕೃಪೆ: Economic and Political Weekly,Jan 13,  2018. Vol. 53. No. 2
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )
                                                                                

ಕಾಮೆಂಟ್‌ಗಳಿಲ್ಲ: