ಮಂಗಳವಾರ, ಜನವರಿ 2, 2018

ಸಮಾಜದ ಅಂಚಿಗೆ ದೂಡಲ್ಪಟ್ಟ ಟ್ರಾನ್ಸ್‌ಜೆಂಡರ್ ಸಮುದಾಯ


        ಅನುಶಿವಸುಂದರ್ 
Image result for indian transgender

ಟ್ರಾನ್ಸ್ಜೆಂಡರ್ ಸಮುದಾಯಗಳ ಕುರಿತು ಪ್ರಸ್ತಾಪಿತವಾಗಿರುವ ಹೊಸ ಮಸೂದೆಯು ಸಂವೇದನಾರಹಿತವಾಗಿದೆ ಮತ್ತು ಪ್ರತಿಗಾಮಿಯಾಗಿದೆ

ಭಾರತದ ಟ್ರಾನ್ಸ್ಜೆಂಡರ್ಗಳು ಮತ್ತು ವಿಭಿನ್ನಲಿಂಗಿ ಸಮುದಾಯಗಳು ಹಲವಾರು ವರ್ಷಗಳ ಕಾಲ ನಡೆಸಿದ ಹೋರಾಟಗಳ ಮೂಲಕ ಪಡೆದುಕೊಂಡ ಹಕ್ಕುಗಳನ್ನು ಕಸಿದುಕೊಳ್ಳುವಂಥ ಮಸೂದೆಯೊಂದನ್ನು ಭಾರತ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಮುಂದಾಗಿದೆ. ಇದು ಟ್ರಾನ್ಸ್ಜೆಂಡರ್ ಸಮುದಾಯದ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾರ್ಯಕರ್ತರಿಗೆ ಆಘಾತ ಉಂಟುಮಾಡಿದೆ. ಈಗ ಪ್ರಸ್ತಾಪಿತವಾಗಿರುವ ಟ್ರಾನ್ಸ್ಜೆಂಡರ್ ಪರ್ಸನ್ಸ್ (ಪ್ರೊಟೆಕ್ಷನ್ ಆಪ್ ರೈಟ್ಸ್) ೨೦೧೬ (ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಸುರಕ್ಷತೆಯ ಹಕ್ಕುಗಳ ಕಾಯಿದೆ- ೨೦೧೬) ಕಾಯಿದೆಯು ೨೦೧೪ರಲ್ಲಿ ಸರ್ಕಾರವು ನೇಮಕ ಮಾಡಿದ ಪರಿಣಿತರ ಸಮಿತಿಯ ವರದಿಯನ್ನೂ, ೨೦೧೫ರ ಸುಪ್ರೀಂ ಕೋರ್ಟಿನ ಆದೇಶವನ್ನೂ, ೨೦೧೫ರಲ್ಲಿ ಸರ್ವ ಸಮ್ಮತವಾಗಿ ಅನುಮೋದಿಸಲಾದ ಖಾಸಗಿ ಮಸೂದೆಯೊಂದನ್ನೂ ಆಧರಿಸಿದೆ. ಅವೆಲ್ಲವೂ ಟ್ರಾನ್ಸ್ಜೆಂಡರ್ ಸಮುದಾಯದ ಅಗತ್ಯಗಳ ಬಗ್ಗೆ ಬಗ್ಗೆ ಹೆಚ್ಚಿನ ತಿಳವಳಿಕೆಯನ್ನು ಹೊಂದಿದ್ದವು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಬಗೆಗಿನ ಸಂಸತ್ತಿನ ಸ್ಥಾಯೀ ಸಮಿತಿಯು ತನ್ನ ೪೩ನೇ ವರದಿಯಲ್ಲಿ ಮಸೂದೆಯು ಟ್ರಾನ್ಸ್ಜೆಂಡರ್ ಮತ್ತು ವಿಭಿನ್ನಲಿಂಗಿ ಸಮುದಾಯಗಳ ಆಗ್ರಹಗಳನ್ನು ಗಮನಿಸದಿರುವುದರ ಬಗ್ಗೆ ವಿಮರ್ಶೆಯನ್ನು ಮಾಡಿತ್ತು. ಅದನ್ನೂ ಕೂಡಾ ಸರ್ಕಾರ ತಿರಸ್ಕರಿಸಿದೆ.

  ಟ್ರಾನ್ಸ್ಜೆಂಡರ್ ಸಮುದಾಯದ ಭಿನ್ನತೆಯನ್ನು ಗುರುತಿಸುವುದರಿಂದ ಮೊದಲುಗೊಂಡು ಇತರ ಪ್ರತಿಯೊಂದು ವಿಷಯದಲ್ಲೂ ಮಸೂದೆ ಪ್ರತಿಗಾಮಿಯಾಗಿದೆ. ಸಮುದಾಯವು ತಮ್ಮನ್ನು ತಾವು ಟ್ರಾನ್ಸ್ ಜೆಂಡರ್ಎಂದು ಗುರುತಿಸಿಕೊಳ್ಳುವ ಹಕ್ಕಿನ ಬಗ್ಗೆ, ತಮ್ಮವರೇ ತಮ್ಮನ್ನು ದೂರ ಮಾಡಿದ ಸಂದರ್ಭದಲ್ಲಿ ಟ್ರಾನ್ಸ್ ಜೆಂಡರ್ ವ್ಯಕ್ತಿಗಳಿಗೆ ಬೇಕಾಗುವ ಒಂದು ಪರ್ಯಾಯ ಕೌಟುಂಬಿಕ ಪರಿಸರದ ಬಗ್ಗೆ, ಅವರ ತೀರಾ ಕೆಟ್ಟದಾದ ಶೈಕ್ಷಣಿಕ ಮತ್ತು ಜೀವನ ಮಟ್ಟಗಳನ್ನು ಸುಧಾರಿಸಲು ಅತ್ಯಗತ್ಯವಾಗಿರುವ ಮೀಸಲಾತಿಯ ಬಗ್ಗೆ, ಮತ್ತು ಅವರ ಬಗ್ಗೆ ತಾರತಮ್ಯ ತೋರುವವರನ್ನು ದಂಡಿಸುವ ಬಗ್ಗೆ..ಹೀಗೆ ಪ್ರತಿಯೊಂದು ಸೂಕ್ಷ್ಮ ವಿಷಯದಲ್ಲೂ ಮಸೂದೆ ಪ್ರತಿಗಾಮಿ ಧೋರಣೆಯನ್ನು ತಳೆದಿದೆ. ಒಬ್ಬ ವ್ಯಕ್ತಿಯ ಲೈಂಗಿಕತೆಯು ವ್ಯಕ್ತಿಯ ಬೆಳವಣಿಗೆ ಮತ್ತು ಅನನ್ಯತೆಯನ್ನು ರೂಪಿಸುವ ನಿರ್ಣಾಯಕ ವಿಷಯಗಳಲ್ಲಿ ಒಂದೆಂಬುದನ್ನು ಈಗ ಜಗತ್ತೇ ಮಾನ್ಯ ಮಾಡುತ್ತಿದೆ. ಒಬ್ಬ ವ್ಯಕ್ತಿಯ ಲಿಂಗವು (ಸೆಕ್ಸ್) ಜೈವಿಕವಾದರೂ ಜೆಂಡರ್ ಎಂಬುದು ಸಮಾಜದಿಂದ ನಿರ್ಮಿತಿಗೊಳ್ಳುತ್ತದೆ ಎಂಬುದು ಈಗ ನಿರ್ವಿವಾದಿತವಾದ ಸಂಗತಿಯಾಗಿದೆ. ಆದರೆ ಮಸೂದೆಯು ಅಂತ ಯಾವ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮಸೂದೆಯಲ್ಲಿ ಟ್ರಾನ್ಸ್ ಜೆಂಡರ್ ವ್ಯಕ್ತಿಯ ಬಗೆಗಿನ ನಿರ್ವಚನ ಅತ್ಯಂತ ಹಾಸ್ಯಾಸ್ಪದವಾಗಿದೆಟ್ರಾನ್ಸ್ ಜೆಂಡರ್ ವ್ಯಕ್ತಿ ಯಾರೆಂದರೆ ಯಾರು ಸಂಪೂರ್ಣವಾಗಿ ಪುರುಷನಾಗಲೀ ಅಥವಾ ಮಹಿಳೆಯಾಗಲೀ ಅಲ್ಲವೋ ಅವರು; ಅಥವಾ ಪುರುಷ ಮತ್ತು ಮಹಿಳೆ ಎರಡರ ಮಿಶ್ರಣವಾಗಿರುವವರು: ಮತ್ತು ಯಾರ ಲೈಂಗಿಕ ಸಂವೇದನೆಯು ಅವರು ಹುಟ್ಟಿದ್ದಾಗ ಪಡೆದುಕೊಂಡ ಜೆಂಡರ್ ಜೊತೆ ತಾಳಮೇಳಗೊಳ್ಳುವುದಿಲ್ಲವೋ ಅವರು ಮತ್ತು ಅದರಲ್ಲಿ ಟ್ರಾನ್ಸ್ ಪುರುಷರು ಮತ್ತು ಟ್ರಾನ್ಸ್ ಮಹಿಳೆಯರು, ಅಂತರ್ಲಿಂಗೀಯ ಸಂವೇದನೆಗಳುಳ್ಳ ವ್ಯಕ್ತಿಗಳು ಮತ್ತು ಸಲಿಂಗ ಸಂವೇದಿಗಳು ಒಳಗೊಳ್ಳುತ್ತಾರೆ

  ಆದರೆ ಟ್ರಾನ್ಸ್ಜೆಂಡರ್ ಸಮುದಾಯವು ತಮ್ಮನ್ನು ಬೇರೆ ರೀತಿಯಲ್ಲಿ ಗುರ್ತಿಸಬೇಕೆಂದು ಆಗ್ರಹಿಸುತ್ತಾ ಬಂದಿದ್ದಾರೆ. ಅವರ ಪ್ರಕಾರ ಟ್ರಾನ್ಸ್ಜೆಂಡರ್ ಯಾರೆಂದರೆ ತಮ್ಮನ್ನು ಸಾಮಾಜಿಕವಾಗಿ, ಕಾನೂನಾತ್ಮಕವಾಗಿ ಮತ್ತು ವೈದ್ಯಕೀಯವಾಗಿ ಹೆಣ್ಣು ಅಥವಾ ಗಂಡೆಂದು ವರ್ಗೀಕರಿಸಿದ್ದರೂ, ತಮ್ಮ ಅನನ್ಯತೆ ಅಥವಾ ಅಭಿವ್ಯಕ್ತಿ ಅಥವಾ ಸಂವೇದನೆ ಅದು ಅಲ್ಲವೆಂದು ಪ್ರತಿಪಾದಿಸುವವರು. ತಮ್ಮನ್ನು ಅದೇ ರೀತಿ ನಿರ್ವಚಿಸಬೇಕೆಂದು ಅವರು ಸರ್ಕಾರಕ್ಕೆ ಸಲಹೆಯನ್ನೂ ನೀದಿದ್ದರು. ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಅಂತರ್ಲಿಂಗೀಯರೂ ಆಗಿರಬಹುದು ಅಥವಾ ಹಾಗೆ ಇಲ್ಲದೆಯೂ ಇರಬಹುದು. ಹಾಗೆಯೇ ಅಂತರ್ಲಿಂಗೀಯ ವ್ಯಕ್ತಿಗಳು ಟ್ರಾನ್ಸ್ಜೆಂಡರ್ ಆಗಿರಬಹುದು ಅಥವಾ ಆಗದೆಯೂ ಇರಬಹುದು. ಯಾರ ಲೈಂಗಿಕ ಲಕ್ಷಣಗಳು (ದೇಹ ರಚನೆ, ಕ್ರೋಮೋಸೋಮುಗಳ ಮತ್ತು ಹಾರ್ಮೋನುಗಳ ಕಾರಣದಿಂದ) ರೂಢಿಗತವಾದ ಸಾಮಾಜಿಕ, ಕಾನೂನಾತ್ಮಕ ಮತ್ತು ವೈದ್ಯಕೀಯ ಪರಿಭಾಷೆಗಳಲ್ಲಿ ಗಂಡು ಅಥವಾ ಹೆಣ್ಣೆಂದು ಪರಿಗಣಿಸಲಾಗುವುದಿಲ್ಲವೋ ಅವರನ್ನು ಅಂತರ್ಲಿಂಗೀಯ ವ್ಯಕ್ತಿಗಳೆಂದು ಕರೆಯುತ್ತಾರೆ.

 ಜೆಂಡರ್ ಗುರುತಿನ ಬಗ್ಗೆ ಸುಪ್ರೀಂ ಕೋರ್ಟು ೨೦೧೫ರಲ್ಲಿ ನ್ಯಾಷನಲ್ ಲೀಗಲ್ ಸರ್ವೀಸ್ ಅಥಾರಿಟಿ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಒಂದು ಮಾರ್ಗದರ್ಶಿ ತೀರ್ಪನ್ನು ನೀಡಿದೆ. ತನ್ನ ತೀರ್ಪಿನಲ್ಲಿ ಅದು ಒಂದು ಸಮುದಾಯವು ಯಾವುದೇ ದೈಹಿಕ ಪರಿಶೀಲನೆಗೆ ಒಳಪಡದೆ ತನ್ನ ಜೆಂಡರ್ ಆಯ್ಕೆಯನ್ನು ಪ್ರತಿಪಾದಿಸುವ ಹಕ್ಕನ್ನು ಎತ್ತಿಹಿಡಿದಿದೆ. ಈಗಿರುವ ಕಾನೂನಿನ ಪ್ರಕಾರ ಒಬ್ಬ ಟ್ರಾನ್ಸ್ಜೆಂಡರ್ ವ್ಯಕ್ತಿಯು ಒಂದು ಅಫಿಡವಿಟ್ ಅನ್ನು ದಾಖಲಿಸುವ ಮೂಲಕ ತಾನು ಯಾವ ಜೆಂಡರ್ಗೆ ಸೇರುತ್ತೇನೆಂಬುದನ್ನು ಘೋಷಿಸಿಕೊಳ್ಳಬಹುದಾಗಿದೆ. ಆದರೆ ಪ್ರಸ್ತಾಪಿತ ಮಸೂದೆಯು ಹಕ್ಕನ್ನು ಕಿತ್ತುಕೊಳ್ಳುತ್ತದೆ. ಮತ್ತು ಅಧಿಕಾರವನ್ನು ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ, ಒಬ್ಬ ಮನಶಾಸ್ತ್ರಜ್ನ ಅಥವಾ ಮನೋವೈದ್ಯರನ್ನೊಳಗೊಂಡ ಪರಿಶೀಲನಾ ಸಮಿತಿಗೆ ನೀಡುತ್ತದೆ. ಇಂಥಾ ಒಂದು ಕಾನುನುಬದ್ಧ ಅವಕಾಶವು ಎಂಥಾ ಕಿರುಕುಳ ಮತ್ತು ತೊಂದರೆಗಳನ್ನು ಉಂಟುಮಾಡಬಹುದೆಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಇದು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಜಾತಿ ಅಥವಾ ಅಂಗವೈಕಲ್ಯ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕಾದವರು ಏನೆಲ್ಲ ತೊಂದರೆಗಳನ್ನು ಅನುಭವಿಸುತ್ತಿದ್ದಾರೋ ಅವೆಲ್ಲವನ್ನೂ ಟ್ರಾನ್ಸ್ಜೆಂಡರ್ ಸಮುದಾಯವೂ ಅನುಭವಿಸುವಂತೆ ಮಾಡುತ್ತದೆ. ವಿಚಿತ್ರವೆಂದರೆ ಅಂಶದ ಬಗ್ಗೆ ಸಮಿತಿಯು ಕೇಳಿದ ಪ್ರಶ್ನೆಗೆ ಸಾಮಾಜಿಕ ನ್ಯಾಯದ ಇಲಾಖೆಯು ಭಾರತ ಸಂವಿಧಾನವು ಲಿಂಗ ಭಿನ್ನತೆಯನ್ನು ಮಾನ್ಯ ಮಾಡುವಿದಿಲ್ಲವೆಂದೂ ಮತ್ತು ವ್ಯಕ್ತಿಯ ಲಿಂಗ ಯಾವುದೆಂಬುದು ಅಸಂಗತವೆಂದು ಉತ್ತರಿಸಿದೆ. ಆದರೆ ಅದೇ ಉಸಿರಿನಲ್ಲಿ ಮಹಿಳೆಯರಿಗೆ ವಿಶೇಷವಾದ ಅವಕಾಶಗಳನ್ನು ಕಲ್ಪಿಸಿಕೊಡಬೇಕೆಂದೂ ಸಹ ಸಲಹೆ ನೀಡಿದೆ.

 ಅಲ್ಲದೆ ಸಮುದಾಯಗಳಿಗೆ ಸೇರಿದ ವಯಸ್ಕರು ಮತ್ತು ಕಿರಿಯ ವಯಸ್ಸಿನವರು ತಮ್ಮನ್ನು ಅರ್ಥಮಾಡಿಕೊಳ್ಳದ ಕುಟುಂಬಗಳಿಂದ ಯಾವುದೇ ಸಹಾಯ ಸಿಗದಿರುವುದರಿಂದ ಎದುರಿಸಬೇಕಾದ ಸಮಸ್ಯೆಗಳ ಕುರಿತು ಮಸೂದೆಯು ಯಾವುದೇ ಸೂಕ್ಷತೆಯನ್ನು ತೋರಿಲ್ಲ. ಬದಲಿಗೆ ಮಸೂದೆಯು ಯಾವುದೇ ಟ್ರಾನ್ಸ್ಜೆಂಡರ್ ವ್ಯಕ್ತಿಯನ್ನು ಒಂದು ಸಕ್ಷಮ ಪ್ರಾಧಿಕಾರದ ಆದೇಶವಿಲ್ಲದೆ ಅವರ ಕುಟುಂಬದಿಂದ ಅಥವಾ ಹತ್ತಿರದ ಸಂಬಂಧಿಕರಿಂದ ಬೇರ್ಪಡಿಸುವಂತಿಲ್ಲವೆಂದೂ, ಒಂದು ವೇಳೆ, ವ್ಯಕ್ತಿಯ ಕ್ಷೇಮವನ್ನು ನೋಡಿಕೊಳ್ಳುವಲ್ಲಿ ಅವರ ಕುಟುಂವು ವಿಫಲವಾದಲ್ಲಿ ವ್ಯಕ್ತಿಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಬೇಕೆಂದೂ ಹೇಳುತ್ತದೆ. ಕುಟುಂಬವೆಂಬ ವ್ಯಾಖ್ಯಾನದಲ್ಲಿ ಕಿರಿಯ ಟ್ರಾನ್ಸ್ಜೆಂಡರ್ ಮಕ್ಕಳನ್ನು ದತ್ತುತೆಗೆದುಕೊಂಡು ಅವರನ್ನು ಅಪಾಯಗಳಿಂದ ರಕ್ಷಿಸುವ ಹಿಜ್ರಾ ಮತ್ತು ಅರಾವಣಿ ಸಮುದಾಯದ ಹಿರಿಯರನ್ನೂ ಸೇರಿಸಬೇಕೆಂದೂ ಮತ್ತು ಹಿಜ್ರಾ ಕುಟುಂಬ ವ್ಯವಸ್ಥೆಯನ್ನು ಅಪರಾಧವೆಂದು ನೋಡಬಾರದೆಂದೂ ಬಹಳಕಾಲದಿಂದ ಟ್ರಾನ್ಸ್ಜೆಂಡರ್ ಸಮುದಾಯವು ಒತ್ತಾಯಿಸುತ್ತಾ ಬಂದಿದೆ. ಅದೇರೀತಿ ಟ್ರಾನ್ಸ್ಜೆಂಡರ್ ಸಮುದಾಯಗಳ ತಳಸಮುದಾಯದವರು ತಮ್ಮ ಬದುಕನ್ನು ನಡೆಸಲು ಅನಿವಾರ್ಯವಾಗಿ ನಡೆಸುವ ವೃತ್ತಿಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸುವ ಬಗ್ಗೆ, ಅವರ ಅರೋಗ್ಯ ಮತ್ತಿತರ ಸಂಕ್ಷೇಮ ಕಾರ್ಯಕ್ರಗಳ ಬಗ್ಗೆಯೂ ಮಸೂದೆ ಮೌನವಾಗಿದೆ. ಹಾಗೆಯೇ ಟ್ರಾನ್ಸ್ಜೆಂಡರ್ ಸಮುದಾಯಗಳ ಮೇಲೆ ನಡೆಯುವ ಅಪರಾಧಗಳನ್ನು ನಿಗ್ರಹಿಸುವ ಕಾನೂನುಗಳ ಬಗ್ಗೆಯೂ, ಜೈಲುಗಳಲ್ಲಿ ಮತ್ತು ಬಾಲಮಂದಿರಗಳಲ್ಲಿ ಇರುವ ಟ್ರಾನ್ಸ್ಜೆಂಡರ್ ಸಮುದಾಯಗಳ ವ್ಯಕ್ತಿಗಳ ರಕ್ಷಣೆಯ ಬಗ್ಗೆಯೂ ಮಸೂದೆಯಲ್ಲಿ ಏನೂ ಇಲ್ಲ.

ಇದು ಒಂದು ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮ ವಿಷಯದ ಬಗ್ಗೆ ಸರ್ಕಾರಕ್ಕಿರುವ ಅದಿಕಾರಶಾಹಿ ಧೋರಣೆಯನ್ನೂ ತೋರಿಸುತ್ತದೆ. ಹಿಜ್ರಾ ಅಥವಾ ಅರವಣಿ ಟ್ರಾನ್ಸ್ಜೆಂಡರ್ ಸಮುದಾಯಗಳನ್ನು ಸಾರ್ವಜನಿಕವಾಗಿ ನಿಂದನೆಗೆ ಮತ್ತು ಅಪಮಾನಕ್ಕೆ ಗುರಿಮಾಡಲಾಗುತ್ತದೆ. ಇತ್ತೀಚೆಗೆ ಮಾತ್ರ ಅವರ ಅಸ್ತಿತ್ವವವನ್ನು ಕಾನೂನು ರೀತಿಯಲ್ಲು ಮಾನ್ಯ ಮಾಡಲಾಗುತ್ತಿದೆ. ಇದು ರಾಜಕೀಯ, ಸಾಮಾಜಿಕ ಹಾಗು ಅರ್ಥಿಕ ಪ್ರಕ್ರಿಯೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯ ಮೇಲೆ ತೀವ್ರ ಪ್ರಭಾವ ಬೀರುತ್ತಿದೆ. ಇದರ ಪರಿಣಾಮವಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಯು ಅವರ ಬಗ್ಗೆ ಅತ್ಯಂತ ಕ್ರೂರವಾಗಿ ಮತ್ತು ಸಂವೇದನಾಶೂನ್ಯವಾಗಿ ನಡೆದುಕೊಳ್ಳುವಂತಾಗಿದೆ. ಹೀಗಾಗಿ ಮಸೂದೆಯು ಸರ್ಕಾರದ ಮತ್ತು ಸಮಾಜದ ಸಂವೇದನಾಶೂನ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ

   ಕೃಪೆ:       Economic and Political Weekly Dec 2,  2017. Vol. 52. No. 48
                                                                                                        
                  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )










ಕಾಮೆಂಟ್‌ಗಳಿಲ್ಲ: