ಬುಧವಾರ, ಜನವರಿ 24, 2018

ಒಂದು ಬಯಲಾಟ

Image result for ಬಯಲಾಟ




-ರಹಮತ್ ತರೀಕೆರೆ

ಬಳ್ಳಾರಿ ಸೀಮೆಗೆ ಹೊಸ ಬದುಕನ್ನರಸಿ ಬಂದು ನೆಲೆಸಿದ ತರುವಾಯ, ಈ ಭಾಗದ ಜನರ ದುಡಿಮೆ, ವಿಶ್ರಾಂತಿಯ ಪರಿ, ಕಲಾಸಕ್ತಿ, ವ್ಯಸನ, ಜಗಳಗಳನ್ನು ಆಸ್ಥೆಯಿಂದ ನೋಡಲಾರಂಭಿಸಿದೆ. ಜನಪದ ಕಲೆಗಳಲ್ಲಿ ಬುರ್ರಕಥಾ, ತೊಗಲುಗೊಂಬೆ, ಚೌಡಿಕೆಹಾಡು, ಸವಾಲ್-ಜವಾಬ್ ಪದ, ದೊಡ್ಡಾಟಗಳು ನನ್ನನ್ನು ಸೆಳೆದಕೊಂಡವು. ಅನೇಕ ದೊಡ್ಡಾಟಗಳನ್ನು ನೋಡಿದೆ. ಅವುಗಳಲ್ಲಿ ಮೊದಲನೆಯದು ಯಾಕೊ ಸ್ಮರಣೆಯಲ್ಲಿ ಉಳಿದುಬಿಟ್ಟಿದೆ.

ನಮ್ಮ ಬಿಡಾರವಿರುವ ಹೊಸಪೇಟೆಗೆ ಕೂಗಳತೆ ದೂರದಲ್ಲಿ ಹತ್ತಾರು ಹಳ್ಳಿಗಳಿವೆ. ಇವೆಲ್ಲ ಶಾಸನೋಕ್ತ ಪ್ರಾಚೀನ ಗ್ರಾಮಗಳು. ಕುರುಬರು ಬೇಡರು ಮುಸ್ಲಿಮರು ದಲಿತರು ಲಿಂಗಾಯತರು ವಾಸಿಸುವ ಇಲ್ಲಿ ಹೆಚ್ಚಾನ್ಹೆಚ್ಚು ಮಂದಿ ರೈತರು ಮತ್ತು ಕೂಲಿಗಾರರು; ನಸುಕಿಗೇ ಎದ್ದು ಮಾಗಾಣಿ ಕೆಲಸಕ್ಕೆ ಹೋದರೆ ಸಂಜೆ ನಾಲ್ಕೈದಕ್ಕೆ ಮರಳುವರು; ಉಳಿದ ಹೊತ್ತನ್ನು ಕೊಳ್ಳುಬಿಟ್ಟು ನಿಂತಿರುವ ಬಂಡಿಯ ಮೂಕಿ ಮೇಲೊ, ರಸ್ತೆಬದಿಯ ಕಟ್ಟೆ ಮೇಲೊ ಕುಳಿತು ಬೀಡಿ ಎಳೆಯುತ್ತ, ಮಂಡಾಳು ಮಿರ್ಚಿ ತಿನ್ನುತ್ತ, ಲೋಕದ ಸಮಸ್ತ ವಿಷಯಗಳ ಮೇಲೆ ಕೊಟ್ಟಣ ಕುಟ್ಟುವರು; ಬ್ಯಾಸರಾದರೆ ಸಿಟ್ಟಿಬಸ್ಸೇರಿ ಬಜಾರಿಗೆ ಹೋಗಿ ಮಸಾಲೆದೋಸೆ ತಿಂದು ತೆಲುಗು ಸಿನಿಮಾ ನೋಡಿ ಬರುವರು; ಆಷಾಢ ಕಳೆದ ಮೇಲೆ ರಸ್ತೆಯಲ್ಲಿ ಗುಂಡೆಸೆತ ಮಾಡಿಕೊಂಡು ಹಂಪಿತನಕ ಹೋಗುವರು; ಉಗಾದಿ ದಿನ ಅಹೋರಾತ್ರಿ ಇಸಪೀಟಿಗೆ ತಪಸ್ವಿಗಳಂತೆ ಕೂರುವರು; ಕಬ್ಬಿನರೊಕ್ಕ ಕೈಗೆ ಹತ್ತಿದ ದಿನಗಳಲ್ಲಿ ದರ್ಬಾರು ಮಾಡುವರು; ದುರುಗಮ್ಮನ ಜಾತ್ರೆಗೆ ಮರಿಕಡಿದು ಬಂಧುಗಳಿಗೆ ಉಣಿಸುವರು. ಈ ಜೀವನ ಲಯದಲ್ಲಿ ವರ್ಷಕ್ಕೊಮ್ಮೆ ಆಡುವ ಬಯಲಾಟವೂ ಸೇರಿದೆ.

ಹಬ್ಬಕ್ಕೊ ಜಾತ್ರೆಗೊ ಕಂದಗಲ್ ಹನುಮಂತರಾಯ ವಿರಚಿತ `ರಕ್ತರಾತ್ರಿ’ಯ ಅಥವಾ `ಗಿರಿಜಾಕಲ್ಯಾಣ' `ಕೀಚಕವಧೆ’ `ದ್ರೌಪದಿ ವಸ್ತ್ರಾಪಹರಣ’ `ಲಂಕಾದಹನ’ಗಳ ಆಟ ಏರ್ಪಡುತ್ತದೆ. ಹೆಚ್ಚಿನವು ಮಹಾಭಾರತದ ಪ್ರಸಂಗಗಳಾಗಿದ್ದು ವಧೆ, ದಹನ, ಅಪಹರಣ, ಕಲ್ಯಾಣಗಳಿಂದ ಕೂಡಿವೆ. ಈ ವಿಶೇಷಣಗಳಿಗೂ ವಿಜಯನಗರ ಸಾಮ್ರಾಜ್ಯದ ಈ ಮಾಜಿ ಪ್ರಜೆಗಳ ಬದುಕಿಗೂ ಯಾವುದೊ ನಂಟಿರಬೇಕು. ಹಂಪೆಯ ಹರಿಹರನ `ಗಿರಿಜಾಕಲ್ಯಾಣ’ದಲ್ಲೂ ಇವೇ ಅಂಶಗಳು ಪ್ರಧಾನ ತಾನೇ? ಅವನ ಕಾವ್ಯದಲ್ಲಿ ಕಾಮದಹನದ ಬಳಿಕ ಕಲ್ಯಾಣ ಬಂದರೆ, ಈ ಹಳ್ಳಿಗಳಲ್ಲಿ ಕಾಮ-ಕಲ್ಯಾಣಗಳ ಬಳಿಕ ದಹನ. ಟಿವಿ ಸಿನಿಮಾ ಮೊಬೈಲುಗಳ ಅಬ್ಬರದಲ್ಲೂ ಬಯಲಾಟಗಳಲ್ಲಿ ಜನರಿಗಿರುವ ತನ್ಮಯತೆ ಸಂಭ್ರಮ ಖುಶಿ ತರುತ್ತದೆ. ಆದರೆ ಈ ಆಟಗಳನ್ನು ಕಾಣುವಾಗ, ಒಂದು ಕಾಲಕ್ಕೆ ಸಂಪನ್ನವಾಗಿ ಬಾಳಿದ ಮನೆತನ, ಬಡತನಕ್ಕಿಳಿದಂತೆ ವಿಷಾದವೂ ಕವಿಯುತ್ತದೆ.

ನಾನು ನೋಡಿದ ಮೊದಲ ದೊಡ್ಡಾಟ ಹೀಗೆ ನಡೆಯಿತು: ಊರಮಧ್ಯದಲ್ಲಿ ಚಪ್ಪರ ಕಟ್ಟಿ ಬಾಳೆತರಗು ಮಾವಿನಸೊಪ್ಪು ಹರಡಿ ಮಾಡಿದ ವೇದಿಕೆ; ರಂಗಸ್ಥಳಕ್ಕೆ ಹಿನ್ನೆಲೆಯಾಗಿ ತಿರುಪತಿ ತಿಮ್ಮಪ್ಪನ ಚಿತ್ರವಿರುವ ದೊಡ್ಡ ಅಂಕಪರದೆ; ಕೆಳಗೆ ದಪ್ಪಹಲಗೆಯಿಂದ ಮಾಡಿದ ರಂಗಮಂಚ; ನಾಲ್ದೆಸೆಗೂ ಬೆಳಕಿನ ಚೌಕಟ್ಟು ಹಾಕಿದಂತೆ ಟೂಬ್‍ಲೈಟು. ಜನ ರಾತ್ರಿಯೂಟ ಮುಗಿಸಿ, ಗೋಣಿಚೀಲ ಪ್ಲಾಸ್ಟಿಕ್‍ಹಾಳೆ, ಈಚಲುಚಾಪೆ, ತಲೆದಿಂಬು ಹೊದಿಕೆ ಹೊತ್ತುತಂದು, ನಡುಬೀದಿಯಲ್ಲೇ ಸೀಟುಹಿಡಿದು, ಎಲೆ ಅಡಿಕೆ ಜಗಿಯುತ್ತ ಗುಜುಗುಜು ಗೈಯುತ್ತ ಕುಳಿತರು. ಮಂಡಾಳು ಮಿರ್ಚಿ ವಗ್ಗಾಣಿ ಚಹದ ಅಂಗಡಿಗಳು ಆಟಕ್ಕಿಂತಲೂ ಹೆಚ್ಚಿನ ಗಿರಾಕಿಗಳನ್ನು ಸೆಳೆಯುತ್ತಿದ್ದವು. ಪಾತ್ರಧಾರಿಗಳ ನಂಟರು ಆಗಮಿಸಿದ್ದರಿಂದ ಊರ ಜನಸಂಖ್ಯೆ ದಿಢೀರನೆ ಏರಿತ್ತು. ಅತೀವ ಸಂತೋಷದಲ್ಲೊ ಅರ್ಥವಾಗದ ದುಗುಡದಲ್ಲೊ ಕೆಲವರು ಟೈಟಾಗಿದ್ದು, ನಾಟಕ ಶುರುವಾಗುವ ಮೊದಲೇ ಮಧ್ಯಂತರ ವಿರಾಮ ತೆಗೆದುಕೊಂಡು ಜಗಲಿಗಳಲ್ಲಿ ಅನಂತಶಯನರಾಗಿದ್ದರು. ವೇದಿಕೆ ಸಮೀಪದಲ್ಲಿ ಕೆಲವು ಗಣ್ಯರನ್ನು ಕುರ್ಚಿ ಹಾಕಿ ಕೂರಿಸಲಾಗಿತ್ತು. ಗಲಭೆಪೀಡಿತ ಸಭೆ ಸ್ಥಳೀಯ ಶಾಸಕರ ಆಗಮನವನ್ನು ಎದುರು ನೋಡುತ್ತಿತ್ತು. ಮಾನ್ಯ ಶಾಸಕರು, ಬಹುಶಃ ನಾಟಕದ ಖರ್ಚನ್ನು ವಹಿಸಿಕೊಂಡಿದ್ದರೆಂದು ಕಾಣುತ್ತದೆ, ಬಂದೊಡನೆ ಸೀಟಿ ಉಘೆಗಳಾದವು. ಅವರನ್ನು ವೇದಿಕೆಯಲ್ಲಿ ಪ್ರತಿಷ್ಠಾಪಿಸಿ ಹಾರಹಾಕಿ ಅವರ ದಾನಗುಣದ ಬಗ್ಗೆ ಕೊಂಡಾಟ ನಡೆಯಿತು. ಶಾಸಕರು ನಾಳೆ ಚುನಾವಣೆಯಲ್ಲಿ ಉಪಯೋಗಕ್ಕೆ ಬರುವ ಸಮಾಜದ ಯಜಮಾನರನ್ನು ಕರೆದು ಹಾರಹಾಕಿದರು. ಇದಕ್ಕೆ ಒಂದು ತಾಸು ಹಿಡಿಯಿತು. ಆಟ ನೋಡಬಂದ ನಾನು ಕಿರಿಕಿರಿ ಪಡುತಿದ್ದರೆ, ಜನ ಇದನ್ನು ಆಟದ ಮೊದಲ ಅಂಕದಂತೆ ಉತ್ಸಾಹದಿಂದ ನೋಡಿದರು.
Image result for ಬಯಲಾಟ

ರಾತ್ರಿ 11ಕ್ಕೆ ಆಟ ಶುರುವಾಯಿತು. ಪಾತ್ರಧಾರಿಗಳ ಪ್ರಸಾದನಕ್ಕೆ ದೂರದಲ್ಲಿದ್ದ ಗುಡಿಯ ಪಡಸಾಲೆಯೇ ಬಣ್ಣದ ಮನೆಯಾಗಿತ್ತು. ಇದರ ಫಾಯದೆಯನ್ನು ಪಾತ್ರಧಾರಿಗಳು ರಂಗಸ್ಥಳದವರೆಗೆ ಹಲಗೆ ಬಾರಿಸಿಕೊಂಡು ಮೆರವಣಿಗೆ ಬರುವ ಮೂಲಕ ಪಡೆದರು. ಕೆಲವರು ಪ್ರೇಕ್ಷಕ ಸಾಗರ ಸೀಳಿಕೊಂಡು ರಂಗಪ್ರವೇಶ ಮಾಡಿದರು. ಅವರ ಪ್ರವೇಶದುದ್ದಕ್ಕೂ `ಪಟಾಕ್ಷಿ’. ಹಲಗೆ ಸದ್ದಿಗೆ ಗಾಬರಿಯಾಗಿದ್ದ ಊರನಾಯಿಗಳು, ಪಟಾಕಿ ಸದ್ದಿಗೆ ದಿಕ್ಕೆಟ್ಟು ಓಡಿದವು. ಹಾಗೆ ಓಡುವಾಗ ಯಾವುದೊ ಒಂದು ಒಬ್ಬಳ ಕಾಲನಡುವೆ ನುಸುಳಿ, `ಏಯ್ ತಿಕ್ಕ, ಥೂ' ಎಂದು ಬೈಸಿಕೊಂಡಿತು.

ಪಾತ್ರಧಾರಿಗಳು ರಂಗಕ್ಕೆ ಏರಿದೊಡನೆ ಆಹೇರಿ ಶುರುವಾಯಿತು. ಪಾತ್ರಧಾರಿಯ ಹೆಂಡತಿ ಕಡೆಯವರು ಉಂಗುರ ಮುಯ್ಯಿ ಮಾಡಲಾರಂಭಿಸಿದರು. ಗೆಳೆಯರು ಹೂಹಾರ ಹಾಕಿದರು. ಅದರ ವ್ಯವಸ್ಥೆಯನ್ನು ಪಾತ್ರಧಾರಿಯೇ ಮಾಡಿದ್ದನೆಂದು ಕೆಲವರು ಅಂಬೋಣ. ಭುಜಕೀರ್ತಿ ಕಿರೀಟಗಳ ವಜನದಿಂದ ಜಾತ್ರೆಯ ಗೊಂಬೆಯಂಗಡಿಯಂತೆ ಕಾಣುತ್ತಿದ್ದ ಪಾತ್ರಧಾರಿ, ಹಾರದ ಭಾರಕ್ಕೆ ಮತ್ತಷ್ಟು ಕುಸಿದುಹೋದನು. ಹಾರದ ಭಾರಕ್ಕೂ, ಬಳಿದುಕೊಂಡ ಬಣ್ಣಕ್ಕೂ, ಪ್ರಖರ ಲೈಟಿನ ಬೆಳಕಿಗೂ, ರೇಷ್ಮೆಸೀರೆಯನ್ನು ಕಚ್ಚೆಹಾಕಿ ಉಟ್ಟುಕೊಂಡಿದ್ದಕ್ಕೂ, ನೆರೆದ ಸಂದಣಿಗೂ, ಪಾತ್ರಧಾರಿಗಳ ದೇಹದಿಂದ ಬೆವರು ಕೆರೆಕೆಳಗಿನ ಗದ್ದೆಯಲ್ಲಿ ಬಸಿನೀರು ಉಕ್ಕುವಂತೆ ಉಕ್ಕುತ್ತಿತ್ತು. ಅದನ್ನು ಒರೆಸಲು ದಸ್ತಿ ಹಿಡಿದು ಸಹಾಯಕರು. ಆಹೇರಿಯ ಕಾರ್ಯಕ್ರಮ ಕೊನೆಗೊಳ್ಳುವ ಸೂಚನೆಯೇ ಕಾಣದಿರಲು, ನಾಟಕ ಮುಂದುವರೆಸಲು ಭಾಗವತನು ತಟ್ಟನೆ ಕಂದಪದ್ಯ ಹಾಡಲು ಶುರುಮಾಡುತ್ತಿದ್ದನು. ಆಗ ನಟರು ಅನ್ಯ ಮಾರ್ಗವಿಲ್ಲದೆ ಕುಣಿತ ಆರಂಭಿಸುತ್ತಿದ್ದರು. ಕುಣಿತಕ್ಕೆ ಹಾರಗಳು ತೊಡಕನ್ನು ಒಡ್ಡುತ್ತಿದ್ದವು. ಆನೆಕಿವಿಯಂತಿದ್ದ ಭುಜಕೀರ್ತಿ, ಗುಡಿಯ ಕಳಸವನ್ನೇ ತಂದಿಟ್ಟಂತಹ ಕಿರೀಟಗಳು ಗಲಗಲ ಅಲುಗುತ್ತಿದ್ದವು. ಇವು ಕುಣಿವಾಗ ಬೀಳದಂತೆ ದೇಹದ ಬೇರೆಬೇರೆ ಭಾಗಕ್ಕೆ ಸೆಣಬಿನ ಸುತ್ತಲಿಗಳಲ್ಲಿ ಕಟ್ಟಲಾಗಿತ್ತು. ಅವು ಕುಣಿತದಲ್ಲಿ ಸಡಿಲಗೊಂಡಾಗ, ಸಹಾಯಕರು ಹುಲ್ಲಹೊರೆಯನ್ನು ಅಂಬಳ್ಳಿಯಲ್ಲಿ ಬಿಗಿಯುವಂತೆ ಪುನಃ ಕಟ್ಟುತ್ತಿದ್ದರು. ಕರಾವಳಿಯ ಯಕ್ಷಗಾನದಲ್ಲೂ ಕೇರಳದ ಕಥಕ್ಕಳಿಯಲ್ಲೂ ಭೂತದ ಕೋಲಗಳಲ್ಲೂ ವೇಷಗಾರಿಕೆ ಕುಣಿತಕ್ಕೆ ಅಡ್ಡಿಯಾಗದಂತೆ ರೂಪುಗೊಂಡಿದೆ. ಇಲ್ಲಿ ನಡೆದಾಡುವುದಕ್ಕು ಅವು ತೊಡರೊಡ್ಡುತ್ತಿದ್ದವು. ಕೀಚಕ-ಭೀಮರ ಯುದ್ಧಕ್ಕೆ ಜಾಗವಿಲ್ಲದಾಗ, ಒಬ್ಬ ಮಾಜಿ ಪೈಲವಾನನು, ರಂಗಮಂಚದ ಮೇಲೆ ಜಮಾಯಿಸಿದ್ದ ಅಭಿಮಾನಿಗಳನ್ನೆಲ್ಲ ಕೆಳಗೆಳೆದು ಹಾಕಿದನು. ಆದರೂ ನಟರ ಬಂಧುಗಳು ಆದಷ್ಟೂ ವೇದಿಕೆಯಲ್ಲೆ ಜಾಗಮಾಡಿಕೊಂಡು ಕಿಕ್ಕಿರಿದು ನಿಲ್ಲುತ್ತಿದ್ದರು. ಆತ ಕುಣಿದು ಸುಸ್ತಾಗಿ ಫೈಬರ್ ಚೇರಿನಲ್ಲಿ ಕುಳಿತೊಡನೆ, ಬಾಕ್ಸಿಂಗಿನಲ್ಲಿ ಕೋಚು ಬಾಕ್ಸರನಿಗೆ ಮಾಡುವ ಸೇವೆಯಂತೆ, ಸಿಟ್ರಾ ಕುಡಿಸುವುದು, ಗಾಳಿ ಹಾಕುವುದು, ನಿಂಬೆಹಣ್ಣು ಮೂಗಿಗೆ ಹಿಡಿವುದು, ಎದೆಗೆ ಪಿನ್ನಿನಿಂದ ಲಗತ್ತಿಸಿದ ನೋಟುಗಳನ್ನು ಸರಿಮಾಡುವುದು ಮುಂತಾಗಿ ಶೈತ್ಯೋಪಚಾರ ನಡೆಸುತ್ತಿದ್ದರು.

ನಾಟಕದ ಹಸ್ತಪ್ರತಿ ಹಿಡಿದಿದ್ದ ಕಾಲೇಜು ತರುಣನೊಬ್ಬ ಪಾತ್ರಧಾರಿಗಳ ಹಿಂದೆ ಸುಳಿಯುತ್ತ, ಡೈಲಾಗಿನ ಮೊದಲ ಪದವನ್ನು ನೆನಪಿಸಿಕೊಡುತ್ತಿದ್ದನು. ಹಾಡಿನ ಅಥವಾ ಸಂಭಾಷಣೆಯ ಸಾಹಿತ್ಯವು ಪ್ರೇಕ್ಷಕರಿಗೆ ತಿಲಮಾತ್ರವೂ ಕೇಳಿಸುತ್ತಿರಲಿಲ್ಲ. ನಾಟಕದ ಕಥೆಯ ಬಗ್ಗೆ ಪ್ರೇಕ್ಷಕರಲ್ಲಿ ಯಾರಿಗೂ ಆಸಕ್ತಿಯಿದ್ದಂತೆ ಕಾಣಲಿಲ್ಲ. ತಮ್ಮ ನಟನೆಯ ಗುಣಮಟ್ಟದ ಬಗ್ಗೆ ನಟರಿಗೂ ಅರಿವಿರಲಿಲ್ಲ. ಮೊಳಕಾಲನ್ನು ಗಲ್ಲದವರೆಗೆ ಎತ್ತಿತಂದು, ಹಲಗೆಗೆ ಪಾದವನ್ನು ಅಪ್ಪಳಿಸಿ ``ಎಲೆಲೆಲೆಲೆ ಭೀಮಾ ನರಕುಲ ಅಧಮಾ, ಎಲೆಲೆಲೆಲೆಲೆ ದುಶ್ಯಾಸನಾ ಕುರುಕುಲ ಅಪಮಾನಾ...'' ಮುಂತಾದ ಪ್ರಾಸಬದ್ಧ ಹೇಳಿಕೆಗಳನ್ನು ಮಾತ್ರ ಚೆನ್ನಾಗಿ ಹೇಳುತ್ತಿದ್ದರು. ಕೆಲವೊಮ್ಮೆ ಪ್ರೇಕ್ಷಕರೇ ನಿರ್ದೇಶನದ ಹೊಣೆಯನ್ನು ಕೈಗೆತ್ತಿಕೊಳ್ಳುತ್ತಿದ್ದರು. ಭಾಗವತನು ಸರಿಯಾಗಿ ಪಾತ್ರಧಾರಿಗಳಿಗೆ ನಾಟಕ ಕಲಿಸಿಲ್ಲವೆಂದೂ ಮೂರು ತಿಂಗಳ ಖರ್ಚು ಕೊಟ್ಟಿದ್ದು ವ್ಯರ್ಥವಾಯಿತೆಂದೂ ಒಬ್ಬ ಎದ್ದುನಿಂತು ಆಪಾದಿಸಿದನು. ಇದೊಂದು ಸಲ ಸುಧಾರಿಸಿಕೊಳ್ಳಬೇಕೆಂದೂ, ಶಾಂತರೀತಿಯಿಂದ ವರ್ತಿಸಬೇಕೆಂದೂ ಭಾಗವತನು ಪರಿಪರಿಯಾಗಿ ವಿನಂತಿಸಿದನು. ಟಿವಿ ಸೀರಿಯಲ್ಲುಗಳಲ್ಲಿ ಕಥೆ ಕಮ್ಮಿ ಜಾಹಿರಾತು ಜಾಸ್ತಿ ಎನ್ನುವಂತೆ, ಆಟದ ಆಜುಬಾಜು ಜರುಗುತ್ತಿದ್ದ ಘಟನೆಗಳೇ ಇಲ್ಲಿ ಪ್ರಧಾನವಾಗಿದ್ದವು.

ಇಲ್ಲಿನ ದೊಡ್ಡಾಟಗಳು ಬೆಳವಣಿಗೆ ನಿಂತ ವ್ಯಕ್ತಿಯಂತಾಗಿವೆಯೇ? ಹೊಸಕಾಲದ ಪ್ರತಿಭೆಗಳು ಸೇರಿ, ಪರಂಪರೆಯನ್ನು ಅನುಸಂಧಾನ ಮಾಡಿ ಸಮಕಾಲೀನಗೊಳಿಸದಿದ್ದರೆ, ಅದರ ಚೈತನ್ಯವೆಲ್ಲ ಸೋರಿಹೋಗಿ ಕಂಕಾಲವಷ್ಟೆ ಉಳಿಯುತ್ತದೆ. ಕರಾವಳಿಯ ಯಕ್ಷಗಾನಗಳು ತಮ್ಮ ಪ್ರಯೋಗಶೀಲತೆಯಿಂದ ವೃತ್ತಿಪರತೆ ಮೈಗೂಡಿಸಿಕೊಂಡು ಎಷ್ಟು ಜೀವಂತವಾಗಿವೆ. ಅಲ್ಲಿ ಕೆಲವು ಮೇಳಗಳಿಗೆ ಈಗ ಬುಕಿಂಗ್ ಮಾಡಿದರೆ, ಹತ್ತು ವರ್ಷ ಕಾಯಬೇಕೆಂದು ಹೇಳಲಾಗುತ್ತದೆ. ವ್ಯವಹಾರ ಪ್ರಜ್ಞೆ ಜಾಗೃತವಾಗಿರುವ ಕರಾವಳಿಯಲ್ಲಿ, ಯಕ್ಷಗಾನ `ಕಲೋದ್ಯಮ’ವೂ ಆಗಿದೆ. ಆದರೆ ಇಷ್ಟೆ ಜೀವಂತವಾಗಿದ್ದ ಬಯಲಾಟ ಅಳವಿನಂಚಿಗೆ ನಿಂತಿದೆ. ಇದು ಮಾರುಕಟ್ಟೆಯ ಯುಗದಲ್ಲಿ ಸಾಂಪ್ರದಾಯಿಕ ರೈತಾಪಿತನ ಹಿಂದುಳಿದು ಸ್ವಹತ್ಯೆಯ ಹಾದಿ ಹಿಡಿದಿರುವಂತೆ ತೋರುತ್ತದೆ.

ಬಳ್ಳಾರಿ ಜಿಲ್ಲೆಯ ವೃತ್ತಿರಂಗಭೂಮಿ ಬಳ್ಳಾರಿ ರಾಘವ, ಜೋಳದರಾಶಿ, ದುರ್ಗಾದಾಸ್, ಸುಭದ್ರಮ್ಮ ಮನ್ಸೂರ್, ಬೆಳಗಲ್ ವೀರಣ್ಣ ಮುಂತಾದ ಪ್ರತಿಭಾವಂತ ಕಲಾವಿದರನ್ನು ಕಂಡಿದೆ. ಆದರೆ ಇಲ್ಲಿ ಕಂಪನಿ ಮತ್ತು ಜನಪದ ರಂಗಭೂಮಿಗಳ ನಡುವೆ ಕಲಾ ವಿನಿಮಯ ನಡೆಯಲಿಲ್ಲ. ರೈತಾಪಿಗಳೂ ಕೂಲಿಕಾರರೂ ಆದವರು, ನಾಟಕದ ಮೇಷ್ಟರನ್ನು ನೇಮಿಸಿಕೊಂಡು, ದುಡಿತದ ಏಕತಾನತೆಯಿಂದ ಹೊರಬರಲು ಬಿಡುವಿನಲ್ಲಿ ತಾಲೀಮು ಮಾಡಿ ಹವ್ಯಾಸಿ ನಟರಾಗಿ ದೊಡ್ಡಾಟ ಆಡುವರು. ಈ ಆಟಗಳಲ್ಲಿ ವೃತ್ತಿಪರ ರಂಗಭೂಮಿಯ ಕಲಾತ್ಮಕ ಶಿಸ್ತನ್ನು ನಿರೀಕ್ಷಿಸಲಾಗದು. ಆದರೆ ವಾದ್ಯಗಳ ಅಬ್ಬರದಲ್ಲಿ ಹಾಡಿನೊಳಗಿನ ಸಾಹಿತ್ಯವೇ ಸಂವಹನವಾಗುತ್ತಿಲ್ಲ.

ಕಾರಂತರಂತಹ ಆಧುನಿಕ ಪ್ರಜ್ಞೆಯ ಪ್ರಯೋಗಶೀಲ ಕಲಾವಿದನ ಸಹವಾಸದಿಂದ ಯಕ್ಷಗಾನದಲ್ಲಿ ಹೊಸ ಜೀವರಸ ಆಡಿತು. ಅದರಂತೆ ದೊಡ್ಡಾಟಗಳಿಗೂ ಇಲ್ಲಿ ಅನೇಕ ವಿದ್ವಾಂಸರು ಹೊಸನೆತ್ತರು ಕೂಡಿಸಲು ಯತ್ನಿಸಿದರು. ಆದರೂ ಅವು ಪಡೆಯಬೇಕಾದಷ್ಟು ಚೈತನ್ಯವನ್ನು ಪಡೆಯುತ್ತಿಲ್ಲ. ಹೊರಗಿನ ರಕ್ತಕ್ಕೆ ಪುನಶ್ಚೇತನಗೊಳಿಸುವ ಕಸುವಿಲ್ಲವೊ, ಪಡೆದ ರಕ್ತವನ್ನು ತನ್ನದಾಗಿಸಿಕೊಳ್ಳುವ ಒಳತಾಕತ್ತು ಈ ರಂಗಪ್ರಕಾರಕ್ಕೆ ಇಲ್ಲವೊ ಅಥವಾ ಯಕ್ಷಗಾನದ ಕಣ್ಣಲ್ಲಿ ಇವನ್ನು ನಿಸ್ಸತ್ವವೆಂದು ನಾನೇ ತಪ್ಪು ತಿಳಿದಿರುವೆನೊ? ಆಟವೊಂದು ತನ್ನ ಕಲಾವಂತಿಕೆ ಕಳೆದುಕೊಂಡೂ ಮುಂದುವರೆಯುತ್ತಿದ್ದರೆ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬ ಪ್ರಶ್ನೆಯಂತೂ ಕಾಡುತ್ತಿದೆ.

ಕಾಮೆಂಟ್‌ಗಳಿಲ್ಲ: