ಅನು: ಶಿವಸುಂದರ್
ಅಮೆರಿಕ ಮತ್ತು ಭಾರತ ದೇಶಗಳ ಎರಡೂ ಸರ್ಕಾರಗಳು ದ್ವೇಷದ ಫಸಲಿಗೆ ಗೊಬ್ಬರ ಸುರಿಯುತ್ತಿವೆ.
ಇದೊಂದು ನಿಜಕ್ಕೂ ವಿಚಿತ್ರ ಸಂಗತಿ. ತನ್ನ ದೇಶದೊಳಗೆ ನಡೆಯುತ್ತಿರುವ ದ್ವೇಷಾಧಾರಿತ ಅಪರಾಧಗಳ ಬಗ್ಗೆ ಕುರುಡಾಗಿರುವ ಭಾರತ ಸರ್ಕಾರ, ಅಮೆರಿಕದಲ್ಲಿ ಒಬ್ಬ ಭಾರತೀಯ ಇದೇ ರೀತಿಯ ದ್ವೇಷಕ್ಕೆ ಬಲಿಯಾದ ಕೂಡಲೇ ಆ ದೇಶದ ಅಧ್ಯಕ್ಷ ಇಂಥಾ ಅಪರಾಧಗಳನ್ನು ಖಂಡಿಸಬೇಕೆಂದು ಒತ್ತಾಯಿಸುತ್ತಿದೆ. ಕಳೆದ ಫೆಬ್ರವರಿ ೨೨ ರಂದು ಅಮೆರಿಕದ ಕಾನ್ಸಾಸ್ ಪ್ರಾಂತ್ಯದ ಒಲಾಥೆಯಲ್ಲಿ ಶ್ರೀನಿವಾಸ್ ಕುಚ್ಚಿಬೋತ್ಲಾ ಎಂಬ ಭಾರತೀಯನನ್ನು ಒಬ್ಬ ಅಮೆರಿಕನ್ ಬಿಳಿಯ ಗುಂಡಿಟ್ಟು ಕೊಂದುಹಾಕಿದ. ಕೊಲ್ಲುವ ಮೊದಲು ಆತನನ್ನು ಮತ್ತು ಇನ್ನೊಬ್ಬ ಭಾರತೀಯನ್ನು ಉದ್ದೇಶಿಸಿ ನಮ್ಮ ದೇಶಬಿಟ್ಟು ತೊಲಗಿ ಎಂದು ಅರಚಿದ್ದ. ಆ ಇಬ್ಬರೂ ಭಾರತೀಯರೂ ಕಾನೂನುಬದ್ಧವಾಗಿ ಅಮೆರಿಕಕ್ಕೆ ವಲಸೆ ಬಂದಿದ್ದವರು. ಆದರೆ ಆ ಸತ್ಯವೇನೂ ಕೊಲೆಗಾರನ ಧೋರಣೆಯಲ್ಲಿ ವ್ಯತ್ಯಾಸ ಉಂಟುಮಾಡುತ್ತಿರಲಿಲ್ಲ. ನಿಸ್ಸಂದೇಹವಾಗಿ ದ್ವೇಷಾಧಾರಿತ ಅಪರಾಧವೇ ಆಗಿದ್ದ ಈ ಕೊಲೆಯ ಬಗ್ಗೆ ಅಮೆರಿಕದ ಸರ್ಕಾರ ಒಂದು ವಾರದ ಕಾಲ ಯಾವ ಪ್ರತಿಕ್ರಿಯೆಯನ್ನೂ ಕೊಡದೇ ಮೌನವಾಗಿತ್ತು. ಅಮೆರಿಕದ ಅಧ್ಯಕ್ಷೀಯ ಕಾರ್ಯಾಲಯ-ವೈಟ್ ಹೌಸಿನ- ಪತ್ರಿಕಾ ಕಾರ್ಯದರ್ಶಿ ಸೀನ್ ಸ್ಪೈಸರ್ ಅವರು ಇದೊಂದು ಮನ ಕಲಕುವ ಸಂಗತಿಯೆಂದು ಹೇಳಿಕೆ ಇತ್ತು ಕೈತೊಳೆದುಕೊಂಡರು. ನಂತರ ಅಧ್ಯಕ್ಷ ಟ್ರಂಪ್ ಅವರು ಫೆಬ್ರವರಿ ೨೮ರಂದು ಅಮೆರಿಕದ ಸಂಸತ್ತನ್ನುದ್ದೇಶಿಸಿ ಮಾಡಿದ ಜಂಟಿ ಭಾಷಣzಲ್ಲಿ ಈ ಕೊಲೆಯ ಬಗ್ಗೆ ಒಂದು ಸಣ್ಣ ಉಲ್ಲೇಖ ಮಾಡಿದರು. ಆದರೆ ಆ ಅಮಾನುಷ ಕೊಲೆಯ ಬಗೆಗೆ ಅಧ್ಯಕ್ಷರ ಅತ್ಯಂತ ಮೃದು ಟಿಪ್ಪಣಿಯನ್ನೇ ಭಾರತೀಯ ಮಾಧ್ಯಮಗಳು ಖಂಡನೆ, ತೀಕ್ಷ್ಣ ಟೀಕೆ ಎಂದೆಲ್ಲಾ ಗುಣವಾಚಕಗಳನ್ನು ಬಳಸಿ ಬಣ್ಣಿಸಿದವು.
ಆದರೆ ಟ್ರಂಪ್ ಹೇಳಿದ್ದೆಲ್ಲಾ ಇಷ್ಟೆ: ಜ್ಯೂ ಸಮುದಾಯ ಕೇಂದ್ರಗಳ ಮೇಲಿನ ಬೆದರಿಕೆಗಳು ಮತ್ತವರ ಮಸಣದ ಮೇಲಿನ ಪುಂಡಾಟಿಕೆಗಳು ಹಾಗೂ ಕಾನ್ಸಾಸ್ನಲ್ಲಿ ನಡೆದ ಗುಂಡಿನ ದಾಳಿಗಳು ಹೇಳುವುದೇನೆಂದರೆ ನಾವು ಕಾರ್ಯನೀತಿಗಳ ವಿಷಯಗಳಲ್ಲಿ ಭಿನ್ನಭಿನ್ನ ಅಭಿಪ್ರಾಯ ಹೊಂದಿರುವ ದೇಶವಾದರೂ, ದ್ವೇಷ ಮತ್ತು ದುಷ್ಟಶಕ್ಟಿಗಳನ್ನು ಮತ್ತವುಗಳ ಎಲ್ಲಾ ಕುರೂಪಗಳನ್ನು ಮಾತ್ರ ಒಂದೇ ಧ್ವನಿಯಲ್ಲಿ ಖಂಡಿಸುವ ದೇಶವಾಗಿದ್ದೇವೆ. ಆದರೆ ಇಲ್ಲಿ ಅಮೆರಿಕದ ಅಧ್ಯಕ್ಷರು ಹೇಳದ ಒಂದು ವಿಷಯವಿದೆ. ತನ್ನ ಆಡಳಿತದ ಏಳು ಮುಸ್ಲಿಮ್ ಬಹುಸಂಖ್ಯಾತ ದೇಶಗಳಿಂದ ವಲಸೆಯನ್ನು ನಿಷೇಧಿಸುವಂಥಾ (ಕಾನೂನು ಮಧ್ಯಪ್ರವೇಶದಿಂದ ಇದನ್ನು ಈ ಸದ್ಯಕ್ಕೆ ಹಿಂತೆಗೆದುಕೊಳ್ಳಲಾಗಿದೆ) ನೀತಿಗಳು ಮತ್ತು ಘೋಷಣೆಗಳೇ ಇಂಥಾ ದ್ವೇಷಾಪರಾಧಗಳಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿದೆ ಎಂಬ ಮಾತು ಅಧ್ಯಕ್ಷರ ಹೇಳಿಕೆಯಲ್ಲಿರಲಿಲ್ಲ. ಹಾಗೆ ನೋಡಿದರೆ ಅಮೆರಿಕವನ್ನೂ ಒಳಗೊಂಡಂತೆ ಎಲ್ಲಾ ದೇಶಗಳ ಸಮಾಜಗಳಲ್ಲೂ ವಿಭಿನ್ನ ಗುಂಪುಗಳ ನಡುವೆ ಪೂರ್ವಗ್ರಹಗಳು ಮತ್ತು ಅಸಹನೆಗಳೂ ಇದ್ದಿವೆ. ಆದರೆ ತಮ್ಮ ಕೆಲವು ನೀತಿಗಳೇ ಭಿನ್ನ ಸಾಮಾಜಿಕ ಗುಂಪುಗಳ ನಡುವಿನ ಒಡಕುಗಳನ್ನು ಮತ್ತಷ್ಟು ಹೆಚ್ಚಿಸುತ್ತವೆಂಬುದನ್ನು ಮಾತ್ರ ಯಾವ ದೇಶವೂ ಒಪ್ಪಿಕೊಳ್ಳುವುದಿಲ್ಲ.
ಇಂದು ಅಮೆರಿಕದಲ್ಲಿ ನಡೆಯುತ್ತಿರುವ ಸಂಗತಿಗಳು ಕಳೆದ ಎರಡೂವರೆ ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿರುವ ಘಟನಾವಳಿಗಳ ಪ್ರತಿಫಲನದಂತಿದೆ. ೨೦೧೪ರ ಮೇ ತಿಂಗಳ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದ ನಂತರದಲ್ಲಿ, ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ದ್ವೇಷಾಧಾರಿತ ಅಪರಾಧಗಳಲ್ಲಿ ಹೆಚ್ಚಳವಾಗಿರುವುದನ್ನು ಮತ್ತು ದುರುದ್ದೇಶಪೂರಿತವಾಗಿ ಮತ್ತು ಅತ್ಯಂತ ಅಮಾನುಷವಾಗಿ ಮುಸ್ಲಿಮ್ ಸಮುದಾಯವನ್ನು ಪರಕೀಯಗೊಳಿಸುತ್ತಿರುವುದನ್ನೂ ನೋಡುತ್ತಿದ್ದೇವೆ. ಗುಂಪುದಾಳಿ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲ್ಲುವುದು ಮತ್ತು ಲವ್ ಜೆಹಾದ್ ಆರೋಪ ಹೊರಿಸುವುದರಿಂದ ಹಿಡಿದು ಹಾಲಿ ಉತ್ತರಪ್ರದೇಶ ಚುನಾವಣೆಗಳಲ್ಲಿ ಮೋದಿಯವರು ಮುಸುಕುಹೊದಿಸಿ ಬಳಸಿದ ಕೋಮುವಾದಿ ಪರಿಭಾಷೆಗಳ ತನಕ, ಕಳೆದೆರಡು ವರ್ಷಗಳಿಂದ ಮುಸ್ಲಿಮರ ಮೇಲೆ ನಡೆಸಲಾಗುತ್ತಿರುವ ಬಗೆಬಗೆಯ ದಾಳಿಗಳು ಭಾರತೀಯ ಸಮಾಜದಲ್ಲಿ ತಮ್ಮ ಸ್ಥಾನವೇನೆಂಬ ಅಭದ್ರತೆಯನ್ನು ಮುಸ್ಲಿಮರಲ್ಲಿ ನಿಚ್ಚಳವಾಗಿ ಹೆಚ್ಚಿಸುತ್ತಿದೆ.
ಇದನ್ನು ಮೈತುಂಬಾ ದ್ವೇಷವನ್ನೇ ತುಂಬಿಕೊಂಡಿರುವ ಕೆಲವೇ ಕೆಲವು ವ್ಯಕ್ತಿಗಳ ದಾಳಿಗಳು ಅಥವಾ ಆಳುವ ಪಕ್ಷದ ರೀತಿಯಲ್ಲೇ ಹಿಂದೂತ್ವ ಸಿದ್ಧಾತಂತವನ್ನು ನೆಚ್ಚಿಕೊಂಡಿರುವ ಸಣ್ಣಸಣ್ಣ ಗುಂಪುಗಳ ದಾಳಿಕೋರ ಚಟುವಟಿಕೆಗಳಿಂದ ಮಾತ್ರವೇ ಉಂಟುಮಾಡಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರ ಮೇಲೆ ನಡೆಸುವ ಇಂಥಾ ದಾಳಿಗಳನ್ನು ತಾವು ವಿರೋಧಿಸುವುದಿಲ್ಲ ಅಥವಾ ಖಂಡಿಸುವುದಿಲ್ಲ ಅಥವಾ ಅದಕ್ಕೂ ತಮಗೂ ಸಂಬಂಧವಿಲ್ಲವೆಂದು ದೂರತಳ್ಳುವುದಿಲ್ಲವೆಂಬ ಸಂದೇಶವು ಮೇಲಿನಿಂದ ಬಂದಿದ್ದರೆ ಮಾತ್ರ ಇವೆಲ್ಲಾ ಸಾಧ್ಯವಾಗುತ್ತದೆ. ಉತ್ತರಪ್ರದೇಶದ ಅಖ್ಲಾಕ್ನನ್ನು ಗುಂಪುಗೂಡಿ ಕೊಂದುಹಾಕಿದಂಥಾ ಪ್ರತಿಯೊಂದು ದ್ವೇಷಾಧಾರಿತ ಘಟನೆ ನಡೆದಾಗಲೂ ಮೇಲಿನವರು ರೌರವ ಮೌನವನ್ನು ಪರಿಪಾಲಿಸಿದ್ದಾರೆ. ಹಾಗೆ ನೋಡಿದರೆ ಇಂಥಾ ದ್ವೇಷಾಧಾರಿತ ಅಪರಾಧಗಳು ಸಂಭವಿಸಿದ ನಂತರದಲ್ಲಿ ಮೋದಿ ಹೇಳಿದ್ದಕ್ಕಿಂತ ಹೆಚ್ಚಿನದನ್ನು ಟ್ರಂಪ್ ಅವರೇ ಹೇಳಿದ್ದಾರೆನ್ನಬಹುದು.
ಭಾರತ ಮತ್ತು ಅಮೆರಿಕದಲ್ಲಿ ನಡೆಯುತ್ತಿರುವ ಘಟನೆಗಳ ಸಾಮ್ಯತೆಯು ಇಲ್ಲಿಗೇ ನಿಲ್ಲುವುದಿಲ್ಲ. ರಾಷ್ಟ್ರದ ನಿರ್ವಚನದ ಬಗ್ಗೆಯೂ ಈ ಸಾಮ್ಯತೆ ಮುಂದುವರೆಯುತ್ತದೆ. ಅಮೆರಿಕವನ್ನು ಮತ್ತೆ ಮಹಾನ್ ರಾಷ್ಟ್ರವನ್ನಾಗಿ ಮಾಡುವುದಾಗಿ ಟ್ರಂಪ್ ಪದೇಪದೇ ಹೇಳುತ್ತಾರೆ. ಆದರೆ ಈ ಮಹಾನ್ ಅಮೆರಿಕ ಎಂದರೇನು? ಮುಸ್ಲಿಮರನ್ನೂ ಒಳಗೊಂಡಂತೆ ಜಗತ್ತಿನ ಬೇರೆಬೇರೆ ದೇಶಗಳ ಜನರಿಗೆ ಆ ಅಮೆರಿಕದಲ್ಲಿ ಜಾಗವಿರುತ್ತದೆಯೇ? ಅಥವಾ ಅವರೆಲ್ಲರನ್ನೂ ಅಮೆರಿಕದ ಗತವೈಭವವನ್ನು ಪುನರ್ಸ್ಥಾಪಿಸಬೇಕೆಂಬ ಬೃಹತ್ ಯೋಜನೆಗೆ ಗಂಡಾಂತರ ಉಂಟುಮಾಡುವವರೆಂದು ಪರಿಗಣಿಸಲಾಗುವುದೇ? ಟ್ರಂಪ್ ಅವರು ಕಾನ್ಸಾಸ್ ಗುಂಡಿನ ದಾಳಿಯ ಬಗ್ಗೆ ಪ್ರಸ್ತಾಪ ಮಾಡಿದ ಭಾಷಣದಲ್ಲೇ ವಲಸಿಗರ ಅಪರಾಧಗಳಿಗೆ ಬಲಿಯಾದ ಅಮೆರಿಕನ್ನರಿಗೆ ಸೇವೆ ಮಾಡಲು ವಾಯ್ಸ್ (ವಿಕ್ಟಿಮ್ಸ್ ಆಫ್ ಇಮಿಗ್ರಿಷನ್ ಕ್ರೈಮ್ ಎಂಗೇಜ್ಮೆಂಟ್) ಎಂಬ ಸಂಸ್ಥೆಯ ಸ್ಥಾಪನೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ವಲಸಿಗರ ಅಪರಾಧಗಳಿಂದ ಕೊಲ್ಲಲ್ಲ್ಪಟ್ಟರೆಂದು ಹೇಳಲಾದ ಪೊಲೀಸ್ ಆಧಿಕಾರಿಗಳ ಗುಣ ವಿಶೇಷಗಳನ್ನು ಟ್ರಂಪ್ ಕೊಂಡಾಡುತ್ತಾರೆ. ಆದರೆ ವಲಸಿಗರು ಎಸಗಿದರೆನ್ನಲಾದ ಅಪರಾಧವು ಅಮೆರಿಕನ್ನರೆಂದು ಕರೆಸಿಕೊಳ್ಳಲ್ಪಡುವವರು ಎಸಗಿದ ಅಪರಾಧಗಳಿಗಿಂತ ಹೆಚ್ಚಾಗಿದೆಯೇ ಎಂಬ ಬಗ್ಗೆ ಮಾತ್ರ ಅವರು ತುಟಿ ಬಿಚ್ಚುವುದಿಲ್ಲ. ಟ್ರಂಪ್ ಅವರು ಯಾವುದೇ ಗುಣವಾಚಕ ಅಥವಾ ವಿವರಣೆಗಳಿಲ್ಲದೆ ಕೇವಲ ವಲಸಿಗ ಎಂಬ ಪದವನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ಕುಚ್ಚಿಬೋತ್ಲಾ ಅವರನ್ನು ಕೊಂದ ಕೊಲೆಗಾರನಂಥವರ ಕೈದಾಳವೂ ಆಗಿದ್ದಾರೆ. ಅಂಥವರಿಗೆ ಭಿನ್ನವಾಗಿ ಕಾಣುವ, ಭಿನ್ನವಾದ ಮೈಬಣ್ಣ ಹೊಂದಿರುವ, ಭಿನ್ನವಾದ ಭಾಷೆಯನ್ನು ಮಾತನಾಡುವ , ಭಿನ್ನವಾದ ದಿರಿಸನ್ನು ಧರಿಸುವ ಪ್ರತಿಯೊಬ್ಬರೂ ಅಮೆರಿಕಕ್ಕೆ ಗಂಡಾಂತರ ಉಂಟುಮಾಡುವ ಅಕ್ರಮ ವಲಸಿಗರೇ, ಹೊರಗಿನವರೇ ಆಗಿರುತ್ತಾರೆ.
ಭಾರತದಲ್ಲಿ, ಹಾಲಿ ಸರ್ಕಾರವು ತಾನು ಯಾವುದನ್ನು ರಾಷ್ಟ್ರ ಮತ್ತು ರಾಷ್ಟ್ರೀಯತೆ ಎಂದು ಪರಿಗಣಿಸುತ್ತದೋ ಅದರ ಸುತ್ತಾ ಒಂದು ಕಾರ್ಯಸೂಚಿಯನ್ನು ಜಾರಿಮಾಡಿದೆ. ಎಲ್ಲಿಯವರೆಗೆ ದ್ರೋಹಿಗಳೆಂದು ಸಾಬೀತಾಗುವುದಿಲ್ಲವೋ ಅಲ್ಲಿಯವರೆಗೆ ಭಾರತದ ಎಲ್ಲಾ ಹಿಂದೂಗಳು ಸಹಜ ರಾಷ್ಟ್ರೀಯವಾದಿಗಳೇ. ಆದರೆ ಮುಸ್ಲಿಮರು ಮಾತ್ರ ತಮ್ಮ ರಾಷ್ಟ್ರೀಯವಾದಿ ಗುಣಲಕ್ಷಣಗಳನ್ನು ಸಾಬೀತುಪಡಿಸಬೇಕು. ಇದರ ಜೊತೆಜೊತೆಗೆ ಯಾರು ಸರ್ಕಾರವನ್ನು ಮತ್ತು ಅದರ ನೀತಿಗಳನ್ನು ವಿರೋಧಿಸುತ್ತಾರೋ, ಯಾರು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿಕೊಳ್ಳುವ ಕಾಶ್ಮೀರಿಗಳ ಹಕ್ಕನ್ನು ಸಮರ್ಥಿಸುತ್ತಾರೋ, ಕಾಶ್ಮೀರ, ಬಸ್ತರ್ ಮತ್ತು ಈಶಾನ್ಯ ಭಾರತಗಳಲ್ಲಿ ಭದ್ರತಾಪಡೆಗಳ ದೌರ್ಜನ್ಯವನ್ನು ಖಂಡಿಸುತ್ತಾರೋ, ಅಭಿವ್ಯಕ್ತಿ ಸ್ವಾತಂತ್ಯ್ರದ ಹಕ್ಕು ಎಲ್ಲಾ ಭಾರತೀಯರಿಗೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಕೊಡುತ್ತದೆಂದು ಗಟ್ಟಿಸಿ ಹೇಳುತ್ತಾರೋ ಅವರೆಲ್ಲರೂ ರಾಷ್ಟ್ರ ವಿರೋಧಿಗಳೇ. ಕೇಂದ್ರ ಗೃಹಖಾತೆಯ ರಾಜ್ಯ ಮಂತ್ರಿ ಕಿರೆಣ್ ರಿಜಿಜು ಅವರ ಪ್ರಕಾರ, ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದ ರಾಮ್ಜಾಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪ್ರತಿರೋಧದ ಸಂಸ್ಕೃತಿಗಳು ಎಂಬ ವಿಚಾರ ಸಂಕಿರಣದಲ್ಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಬಿಜೆಪಿಯ ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಸದಸ್ಯರು ಮಾಡಿದ ಮಾರಣಾಂತಿಕ ದಾಳಿಯು, ಉಗ್ರ ಎಡಪಂಥೀಯರು ಮತ್ತು ರಾಷ್ಟ್ರೀಯವಾದಿಗಳ ನಡುವೆ ನಡೆದ ತಾತ್ವಿಕ ಸಂಘರ್ಷವಾಗಿತ್ತು. ಎಬಿವಿಪಿ ಮಾತ್ರ ಇಲ್ಲಿ ರಾಷ್ಟ್ರೀಯವಾದಿ ಎಂಬ ಪಟ್ಟಕ್ಕೆ ಅರ್ಹವೆಂಬುದು ಸ್ಪಷ್ಟವಾಗಿದೆ.
ಇದು ಭಾರತ ಮತ್ತು ಅಮೆರಿಕ ಸರ್ಕಾರಗಳು ಸಮರ್ಥಿಸುತ್ತಿರುವ ಅಪಾಯಕಾರಿ ಧೃವೀಕೃತ ಪರಿಕಲ್ಪನೆಗಳು. ಭಾರತದಲ್ಲಿ ಎಬಿವಿಪಿಯಂಥ ಗುಂಪುಗಳಿಗೆ ತಮ್ಮ ರೀತಿಯ ರಾಷ್ಟ್ರೀಯವಾದವನ್ನು ಹೇರಲು ಪರವಾನಗಿ ಕೊಡಲಾಗಿದೆ. ಅಮೆರಿಕದಲ್ಲಿ ಈಗ ಶಸ್ತ್ರಧಾರಿ ವ್ಯಕ್ತಿಗಳು ಮತ್ತು ಸರ್ಕಾರದ ಪ್ರತಿನಿಧಿಗಳು ಅಕ್ರಮ ವಲಸಿಗರು ಮತ್ತು ರಾಷ್ಟ್ರಕ್ಕೆ ಗಂಡಾಂತರ ಎಂದು ಪರಿಗಣಿಸಿದವರನ್ನು ಬೆನ್ನು ಹತ್ತಬಹುದು ಮತ್ತು ಕೊಲ್ಲಲೂಬಹುದು. ಅಂತಿಮವಾಗಿ ಇಂಥಾ ಸರ್ಕಾರಗಳೇ ನಮ್ಮ ಸಮಾಜದಲ್ಲಿ ಸಹನೆ ಮತ್ತು ಸಂವಾದಗಳಿಗಿದ್ದ ಅವಕಾಶವನ್ನು ನಾಶಗೊಳಿಸಿ ದ್ವೇಷದ ಫಸಲು ಹುಲುಸಾಗಿ ಬೆಳೆಯಲು ಕಾರಣವಾಗಿವೆ.
ಕೃಪೆ: Economic and Political Weekly
March 4, 2017. Vol. 52. No. 9
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ