ಅನು: ಶಿವಸುಂದರ್
ಬದಲಾವಣೆಗಾಗಿ ಜೊತೆಗೂಡಿ ಹೆಜ್ಜೆಹಾಕಿದ್ದ ಸೋವಿಯತ್ಗಳು ಮತ್ತು ಮಹಿಳಾ ಕಾರ್ಮಿಕರು ಏನಾದರು?
೧೯೧೭ರ ಮಾರ್ಚ್ ೮ರಂದು ಪೆಟ್ರೋಗ್ರಾಡ್ ನಲ್ಲಿ ನಡೆದ ಮಹಿಳಾ ಮುಷ್ಕರವೇ ರಷ್ಯನ್ ಕ್ರಾಂತಿಯ ಪ್ರಾರಂಭಕ್ಕೆ ನಾಂದಿಹಾಡಿತೆಂಬುದನ್ನು ಬಹಳಷ್ಟು ಜನರು ಮರೆತು ಹೋಗಿರಬಹುದು. ರಷ್ಯಾದ ಎರಡು ಕ್ರಾಂತಿಗಳ ಶತಮಾನೋತ್ಸವದಲ್ಲಿ ಅಕ್ಟೊಬರ್ ಕ್ರಾಂತಿಗೆ (ಪಶ್ಚಿಮದ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ನವಂಬರ್ ಕ್ರಾಂತಿ) ಅತ್ಯಂತ ಮಹತ್ವದ ಸ್ಥಾನ ದಕ್ಕುವುದು ಸಹಜ. ಏಕೆಂದರೆ ಅದು ಇಪ್ಪತ್ತನೇ ಶತಮಾನದ ಪ್ರಾಯಶಃ ಅತ್ಯಂತ ಪ್ರಭಾವಶಾಲಿ ರಾಜಕೀಯ ವಿದ್ಯಮಾನ. ಆ ವರ್ಷದ (ಪಶ್ಚಿಮ ಜೂಲಿಯೆನ್ ಕ್ಯಾಲೆಂಡರ್ ಪ್ರಕಾರ) ಫೆಬ್ರವರಿ-ಮಾರ್ಚಿಯಲ್ಲಿ ಕಾರ್ಮಿಕರು ಮತ್ತು ಸೈನಿಕರು (ಸೈನಿಕರೆಂದರೆ ಸಮವಸ್ತ್ರದಲ್ಲಿದ್ದ ಕಾರ್ಮಿಕರೇ) ನಿರಂಕುಶ ರಾಜಸತ್ತೆಯ ಸರ್ವಾಧಿಕಾರಿ ಆಳ್ವಿಕೆಯ ವಿರುದ್ಧ ಬಂಡೆದ್ದು ಕೊನೆಗಾಣಿಸಿದಾಗ, ಅವರಿಗೆ, ಬಂಡವಾಳಶಾಹಿಯ ವಿರುದ್ಧ ಸೆಣೆಸಾಡುವ ಉದ್ದೇಶವೇನೂ ಇರಲಿಲ್ಲ. ಹೀಗಾಗಿ ಅವರು ಬಂಡವಾಳಶಾಹಿಗಳ ಮತ್ತು ಕುಲೀನರ ಪಕ್ಷವಾಗಿದ್ದ ಕೆಡೆಟ್ ಪಕ್ಷಕ್ಕೆ ಹಂಗಾಮಿ ಸರ್ಕಾರ ರಚಿಸಲು ಅವಕಾಶ ಬಿಟ್ಟುಕೊಟ್ಟರು.
ಮೊದಲನೇ ವಿಶ್ವಯುದ್ಧದ ನಡುವಿನಲ್ಲಿ ಎದುರಾದ ೧೯೧೭ರ ಆ ಚಳಿಗಾಲವು ಜನಸಾಮಾನ್ಯರು ಸಹಿಸಿಕೊಳ್ಳಲಾಗದಷ್ಟು ಅಸಹನೀಯವಾಗಿತ್ತು. ಆಹಾರ ಮತ್ತು ಉರುವಲಿನ ತೀವ್ರ ಕೊರತೆಯು ಕಾರ್ಮಿಕರ ಕುಟುಂಬಗಳನ್ನು ಬಡತನದ ದವಡೆಗೆ ದೂಡಿತ್ತು. ಆಗ ಹನ್ನೆರಡು ವರ್ಷಗಳ ಕೆಳಗೆ ಪರಾಭವಗೊಂಡಿದ್ದ ೧೯೦೫ರ ಕ್ರಾಂತಿಯ ಪ್ರಾರಂಭದ ಬಿಂದುವಾಗಿದ್ದ ರಕ್ತಸಿಕ್ತ ರವಿವಾರದ ನೆನಪಿನಲ್ಲಿ ಪೆಟ್ರೋಗ್ರಾಡಿನ ತುಂಬಾ ಮುಷ್ಕರಗಳು ಮತ್ತು ಪ್ರತಿಭಟನಾ ಪ್ರದರ್ಶನಗಳು ನಡೆಯುತ್ತಿದ್ದವು. ಬೃಹತ್ ಪ್ಯುಟಿಲೋವ್ ಕಾರ್ಖಾನೆಯಲ್ಲಿ ಲಾಕ್ ಔಟ್ ಘೊಷಣೆಯಾದದ್ದು ಸಂದರ್ಭಕ್ಕೆ ವ್ಯಗ್ರತೆಯ ಕಾವನ್ನು ತಂದುಕೊಟ್ಟಿತ್ತು. ಆ ಸಮಯದಲ್ಲಿ ಫೆಬ್ರವರಿ ೨೩ರಂದು-ಪಶ್ಚಿಮದ ಜುಲಿಯನ್ ಕ್ಯಾಲೆಂಡರಿನ ಪ್ರಕಾರ ಮಾರ್ಚ್ ೮ ರ ಅಂತರರಾಷ್ಟ್ರೀಯ ಮಹಿಳಾ ದಿನದಂದು- ಮಹಿಳಾ ಜವಳಿ ಕಾರ್ಮಿಕರು ಆಹಾರಕ್ಕಾಗಿ ಒತ್ತಾಯಿಸುತ್ತಾ ಬೃಹತ್ ಸಂಖ್ಯೆಯಲ್ಲಿ ಪೆಟ್ರೋಗ್ರಾಡಿನ ಬೀದಿಗೆ ಇಳಿದದ್ದು ನಂತರದ ಘಟನೆಗಳ ಸರಣಿಗೆ ಕಿಡಿಹಚ್ಚಿತೆಂದು ತೋರುತ್ತದೆ. ಆಗ ಯಾರಿಗೂ ಮಾರ್ಚ್ ೮ರ ಈ ಬೃಹತ್ ಮಹಿಳಾ ಪ್ರತಿಭಟನೆ ಫೆಬ್ರವರಿ ಕ್ರಾಂತಿಯ ಮೊದಲ ದಿನವಾದೀತೆಂಬ ಅಂದಾಜಿರಲಿಲ್ಲ. ಏಕೆಂದರೆ ಅತ್ಯಂತ ಧೈರ್ಯ ಮತ್ತು ಮುಂದೊಡಗಿನಿಂದ ಹೋರಾಟಕ್ಕೆ ಧುಮುಕಿದ್ದ ಈ ಮಹಿಳಾ ಕಾರ್ಮಿಕರು, ಕ್ರಾಂತಿಕಾರಿತನಕ್ಕೆ ಖ್ಯಾತರಾಗಿದ್ದರೂ ಆ ಸಂದರ್ಭದಲ್ಲಿ ಜಡತ್ವ ತೋರಿದ್ದ ಬೋಲ್ಷೆವಿಕ್ ನೇತೃತ್ವದ ವೈಬಾರ್ಗ್ ಜಿಲ್ಲಾ ಲೋಹ ಕಾರ್ಮಿಕರನ್ನು ತಮ್ಮ ಜೊತೆ ಅಕ್ಷರಶ: ಎಳೆದುಕೊಂಡು ಕರೆದೊಯ್ದರು.
ಈ ಮಹಿಳಾ ಕಾರ್ಮಿಕರನ್ನು ಫೆಬ್ರವರಿ ಕ್ರಾಂತಿಯ ಸೂಲಗಿತ್ತಿಯರೆಂದು ಕರೆಯುವುದು ಉತ್ಪ್ರೇಕ್ಷೆಯೇ ಇರಬಹುದು. ಆದರೆ ಅವರ ಈ ನಡೆಯು ದಿನದ ಅಂತ್ಯದ ವೇಳೆಗೆ ೯೦,೦೦೦ಕ್ಕೂ ಹೆಚ್ಚು ಕಾರ್ಮಿಕರನ್ನು ಬೀದಿಗಿಳಿಯುವಂತೆ ಮಾಡಿತಲ್ಲದೆ ಬರಲಿದ್ದ ಬಿರುಗಾಳಿಗೆ ಪ್ರಾರಂಭಿಕ ಕಸುವನ್ನು ತುಂಬಿತು. ಮರುದಿನವೇ ಬೀದಿಯಲ್ಲಿದ್ದ ಕಾರ್ಮಿಕರ ಸಂಖ್ಯೆ ದುಪ್ಪಟ್ಟಾಯಿತು. ಆಹಾರದ ಬೇಡಿಕೆಯ ಜೊತೆಜೊತೆಗೆ ನಿರಂಕುಶತ್ವಕ್ಕೆ ಧಿಕ್ಕಾರ, ಯುದ್ಧಕ್ಕೆ ಧಿಕ್ಕಾರ ವೆಂಬ ಸುಸ್ಪಷ್ಟ ರಾಜಕೀಯ ಘೋಷಣೆಗಳೂ ಸೇರಿಕೊಂಡವು. ಇದು ಮಹಿಳಾ ಕಾರ್ಮಿಕರಿಗೆ ಪ್ರತಿಭಟನೆಯನ್ನು ಹತ್ತಿಕ್ಕಲು ಕಳಿಸಲಾಗಿದ್ದ ಸೈನಿಕರ ಎದಿರು ನಿಲ್ಲಲು ಬೇಕಾದ ಧೈರ್ಯವನ್ನು ನೀಡಿತು. ಅವರು ಸೈನಿಕರನ್ನುದ್ದೇಶಿಸಿ ಸಂಗಾತಿಗಳೇ ನಿಮ್ಮ ಬಂದೂಕನ್ನು ಕೆಳಗಿಳಿಸಿ. ನಮ್ಮ ಜೊತೆ ಸೇರಿರಿ ಎಂದು ದೊಡ್ಡ ಧ್ವನಿಯಲ್ಲಿ ಕರೆನೀಡಲು ಪ್ರಾರಂಭಿಸಿದರು. ಬಹಳಷ್ಟು ಸೈನಿಕರು ರೈತ ಹಿನ್ನೆಲೆಯವರೇ ಆಗಿದ್ದರಿಂದ ಈ ಕರೆಯು ಅವರ ಮನಕರಗಿಸಿತು. ಅವರು ಪ್ರತಿಭಟನಾಕಾರರೊಂದಿಗೆ ಮುಕ್ತವಾಗಿ ಬೆರೆಯಲು ಪ್ರಾರಭಿಸಿದರು. ಫೆಬ್ರವರಿ ೨೬ರಂದು (ಪಶ್ಚಿಮದ ಜ್ಯೂಲಿಯನ ಕ್ಯಾಲೆಂಡರಿನ ಪ್ರಕಾರ ಮಾರ್ಚ್ ೧೧ರಂದು) ದಂಗೆಯು ಪ್ರಾರಂಭವಾಯಿತು. ಸಾಮಾನ್ಯವಾಗಿ ಜನರು ಗೆಲ್ಲುವದು ಖಾತರಿಯಿದ್ದರೆ ಮಾತ್ರ ಸೈನಿಕರು ಕೂಡಾ ದಂಗೆಯೇಳುತ್ತಾರೆ. ಆಗ ಮಾತ್ರ ಅವರು ಜನರೊಡನೆ ಸೇರಿಕೊಳ್ಳುತ್ತಾರೆ. ಸೈನಿಕರಲ್ಲಿ ಈ ವಿಶ್ವಾಸವನ್ನು ಮೂಡಿಸುವಲ್ಲಿ ಮಹಿಳಾ ಕಾರ್ಮಿಕರು ವಹಿಸಿದ ಪಾತ್ರ ಅತ್ಯಂತ ದೊಡ್ಡದು.
ಮಾರ್ಚ ೧೨ರ ವೇಳೆಗೆ ಜಾರ್ ದೊರೆಯನ್ನು ಪದಚ್ಯುತಗೊಳಿಸುವ ಮೂಲಕ ದಂಗೆಯು ಪೂರ್ಣಗೊಂಡಿತ್ತು. ಆದರೆ ದಂಗೆಯ ವಿಜಯದ ನಂತರದಲ್ಲಿ ತತ್ವ ಸಿದ್ಧಾಂತದ ಪ್ರಭಾವ (ಎಂದರೆ ಹುಸಿ ಜ್ನಾನ-ಫಾಲ್ಸ್ ಕಾನ್ಸಿಯಸ್ನೆಸ್) ತುಂಬಾ ಹೆಚ್ಚಾಗಿರುತ್ತದೆ. ಆಗ ಜಾರ್ ರಾಜಸತ್ತೆಯನ್ನು ಕಿತ್ತುಹಾಕಿದ ನಂತರದಲ್ಲಿ ಅಧಿಕಾರವನ್ನು ಬಂಡವಳಶಾಹಿ-ಬೂರ್ಝ್ವಾಗಳೇ-ವಹಿಸಿಕೊಳ್ಳಬೇಕೆಂಬುದು ವಿಧಿಲಿಖಿತವೆಂಬಷ್ಟು ಸಹಜ ಎಂಬ ವಾದವೇ ಚಾಲ್ತಿಯಲ್ಲಿತ್ತು. ಅದೂ ಹೇಗೇ ಇದ್ದರೂ ಇದಕ್ಕೆ ಸಮಾನಾಂತರವಾಗಿ, ಫೆಬ್ರವರಿ ಕ್ರಾಂತಿಯ ಪ್ರಕ್ರಿಯೆಯಲ್ಲಿ, ಕಾರ್ಮಿಕರು ಮತ್ತು ಸೈನಿಕರು ಆಯ್ಕೆ ಮಾಡಿದ್ದ ಕಾರ್ಮಿಕರ ಮತ್ತು ಸೈನಿಕರ ಪ್ರತಿನಿಧಿಗಳ ಸೋವಿಯತ್ ಎಂಬ ಪರ್ಯಾಯ ಅಧಿಕಾರ ಕೇಂದ್ರಗಳು ಅಸ್ಥಿತ್ವಕ್ಕೆ ಬಂದಿದ್ದವು. ಮತ್ತೊಂದೆಡೆ ಕೆಡೆಟ್ ಪಕ್ಷದ ನಾಯಕರೇ ಹೆಚ್ಚಾಗಿದ್ದ ಹಂಗಾಮಿ ಸರ್ಕಾರವು ಜನರ ಕ್ರಾಂತಿಕಾರಿ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಅಡ್ಡಿಯಾಯಿತು.
ಹೀಗಾಗಿ ಹೊಸ ಸರ್ಕಾರ ಅಥವಾ ಇಂಥಾ ಯಾವುದೇ ಬಂಡವಾಳಶಾಹಿ ಸರ್ಕಾರಗಳು ಸಹ ತಮ್ಮ ಬೇಡಿಕೆಗಳಾದ- ಒಂದು ಪ್ರಜಾತಾಂತ್ರಿಕ ಗಣರಾಜ್ಯ, ಗ್ರಾಮೀಣ ಶ್ರೀಮಂತವರ್ಗಗಳ ಜಮೀನನ್ನು ವಶಪಡಿಸಿಕೊಂಡು ಅದನ್ನು ಉಚಿತವಾಗಿ ರೈತಾಪಿಗೆ ಹಂಚುವ, ಸಾಗುತ್ತಿರುವ ಪ್ರಪಂಚ ಯುದ್ಧದಲ್ಲಿ ರಷ್ಯಾ ಸಾಮ್ರಾಜ್ಯಶಾಹಿಗಳ ಹಿತಾಸಕ್ತಿಯನ್ನು ಬಿಟ್ಟುಕೊಡುವ, ಶಾಂತಿ ಸ್ಥಾಪನೆಯನ್ನು ಬಲವಾಗಿ ಪ್ರತಿಪಾದಿಸುವ ಮತ್ತು ದಿನಕ್ಕೆ ೮ ಗಂಟೆ ಮಾತ್ರ ಕೆಲಸದ ಬೇಡಿಕೆಗಳನ್ನು-ಈಡೇರಿಸಲಾರವೆಂಬುದನ್ನು ಅರ್ಥಮಾಡಿಕೊಳ್ಳಲು ಕಾರ್ಮಿಕರಿಗೆ ಮತ್ತು ಸೈನಿಕರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಸುತ್ತಮುತ್ತಲೂ ಕ್ರಾಂತಿವಿರೋಧಿ ಸೈನಿಕ ದಂಗೆಗಳು ನಡೆಯುತ್ತಿತ್ತು. ಮತ್ತು ಅದಕ್ಕೆ ಸಹಾಯವಾಗುವ ರೀತಿ ಬಂಡವಾಳಶಾಹಿಗಳೇ ಲಾಕ್ ಔಟ್ ಘೊಷಿಸುತ್ತಿದ್ದರು. ಇಂಥಾ ವಿದ್ಯಮಾನಗಳ ನಡುವೆ ಈ ಸರ್ಕಾರವನ್ನು ತಮ್ಮ ಸರ್ಕಾರವೆಂದು ಭಾವಿಸಿ ಅತಿ ದೊಡ್ಡ ಪ್ರಮಾದ ಎಸಗಿದ್ದೇವೆಂಬ ಅರಿವು ಕಾರ್ಮಿಕರಲ್ಲಿ ಮತ್ತು ಸೈನಿಕರಲ್ಲಿ ಮೂಡತೊಡಗಿತು. ಮತ್ತು ಹಾಲಿ ಸರ್ಕಾರವನ್ನು ಕಿತ್ತೊಗೆದು ಸೋವಿಯತ್ತುಗಳ ಸರ್ಕಾರವನ್ನು ಸ್ಥಾಪಿಸುವ ಮೂಲಕ ಮಾತ್ರ ಮೇಲಿನ ಬೇಡಿಕೆಗನ್ನು ಈಡೇರಿಸಿಕೊಳ್ಳಲು ಸಾಧ್ಯವೆಂಬುದನ್ನು ಅರ್ಥಮಾಡಿಕೊಂಡರು. ಅಂತಿಮವಾಗಿ ಸೋವಿಯತ್ತುಗಳ ಸರ್ಕಾರವೇ ಅಕ್ಟೋಬರ್ (ನವಂಬರ್) ನಲ್ಲಿ ಅಧಿಕಾರಕ್ಕೆ ಬಂದಿತು. ಆದರೆ ಆ ವೇಳೆಗೆ ಜಾರ್ ಅಧಿಪತ್ಯವನ್ನು ಕೊನೆಗಾಣಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಮಹಿಳಾ ಕಾರ್ಮಿಕರು ಹಿನ್ನೆಲೆಗೆ ಸರಿದಿದ್ದರು. ಹಂಗಾಮಿ ಸರ್ಕಾರವನ್ನು ಉರುಳಿಸುವಲ್ಲಿ ಅವರ ಗಂಡು ಒಡನಾಡಿಗಳೇ ಪ್ರಮುಖ ನಾಯಕತ್ವವನ್ನು ವಹಿಸಿದ್ದರು. ಆದರೆ ೧೯೧೮ರ ಬೇಸಿಗೆಯ ನಂತರದಲ್ಲಿ ಸೋವಿಯತ್ತುಗಳೂ ಸಹ ಒಂದು ಸ್ವತಂತ್ರ ಸ್ವಯಮಾಡಳಿತ ಘಟPವಾಗಿ ಉಳಿದುಕೊಳ್ಳಲಿಲ್ಲ.
ರಷ್ಯಾ ಕ್ರಾಂತಿಯಲ್ಲಿ ಮಹಿಳಾ ಕಾರ್ಮಿಕರನ್ನು ಒಳಗೊಂಡಂತೆ ಇಡೀ ಕಾರ್ಮಿಕ ವರ್ಗ ಮುಂಚೂಣಿ ಪಾತ್ರವಹಿಸಿದ್ದರೂ ಸೋವಿಯತ್ತುಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಆ ಕಾರ್ಮಿಕ ವರ್ಗಕ್ಕೇ ಅಧಿಕಾರವಿಲ್ಲದಂತಾಗಿದ್ದು ಎಂಥಾ ವಿಪರ್ಯಾಸ!
ಸಾಮಾನ್ಯ ಮನುಷ್ಯರು ತಮ್ಮ ಜೀವವನ್ನು, ಆಯುಷ್ಯವನ್ನು ಒತ್ತೆಯಿಟ್ಟು ಅಪಾರ ತ್ಯಾಗಗಳಿಂದ ಕಟ್ಟುವ ಸಂಸ್ಥೆಗಳನ್ನು ಶ್ರೇಷ್ಠರೆನಿಸಿಕೊಂಡವರು ಆಕ್ರಮಿಸಿಕೊಳ್ಳುವುದು ನಡೆಯುತ್ತಲೇ ಬಂದಿದೆ. ಬಲಿಷ್ಟರಿಂದ ಜನಸಾಮಾನ್ಯರು ಈ ಬಗೆಯ ವಂಚನೆಗೆ ಸದಾ ಗುರಿಯಾಗುತ್ತಲೇ ಇರಬೇಕೆ?
ಕೃಪೆ: Economic and Political Weekly
March 11, 2017. Vol. 52, No.10
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ