ಮಂಗಳವಾರ, ಮಾರ್ಚ್ 28, 2017

ಆರೋಗ್ಯ ರಕ್ಷಣೆಯ ಹಕ್ಕು




         ಅನುಶಿವಸುಂದರ್

ಆರೋಗ್ಯ ರಕ್ಷಣೆಯ ಹಕ್ಕನ್ನು ಗುರುತಿಸಲು ಭಾರತವುಇನ್ನೂ ಹೆಚ್ಚು ತಡಮಾಡಲಾಗದು, ತಡಮಾಡಬಾರದು.
health ಗೆ ಚಿತ್ರದ ಫಲಿತಾಂಶ

ಒಂದು ರಾಷ್ಟ್ರೀಯ ಆರೋಗ್ಯ ನೀತಿಯು ಮೂಲಭೂತವಾಗಿ ಉದ್ದೇಶದ ಹೇಳಿಕೆಯಾಗಿರುತ್ತದೆ. ರಾಷ್ಟ್ರೀಯ ಆರೋಗ್ಯ ನೀತಿ-೨೦೧೭- ಕೂಡಾ ಮಾಡಿರುವುದು ಅದನ್ನೇ. ಆದರೂ ಅದರ ಉದ್ದೇಶ ಮತ್ತು ಅದನ್ನು ಜಾರಿಗೆ ತರಲು ಹಾಕಿಕೊಂಡಿರುವ ಚೌಕಟ್ಟುಗಳೆರಡೂ ತೀವ್ರ ಕೊರತೆಗಳಿಂದ ಕೂಡಿದೆ. ಅವುಗಳಲ್ಲಿ ಅತ್ಯಂತ ಕಳವಳಕಾರಿ ಅಂಶವೆಂದರೆ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಖಾಸಗಿ ಕ್ಷೇತ್ರಕ್ಕೆ ಕೊಟ್ಟಿರುವ ಪಾತ್ರ.

ಪ್ರಾಥಮಿಕ ಆರೋಗ್ಯ ಸೇವೆಗೆ ಸಂಬಂಧಪಟ್ಟಂತೆ ಅಲ್ಮಾ-ಆಟಾ ಘೋಷಣೆಯ ನಂತರಭಾರತವು ೧೯೮೩ರಲ್ಲಿ ತನ್ನ ಮೊದಲನೇ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಮತ್ತು ೨೦೦೨ರಲ್ಲಿ ಎರಡನೇ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಅಳವಡಿಸಿಕೊಂಡಿತು. ಹಿಂತಿರುಗಿ ನೋಡಿದಲ್ಲಿ ಆರೋಗ್ಯ ಸ್ಥಿತಿಗತಿಯ ಸೂಚಕಗಳಾದ ಮರಣ, ಆಯಸ್ಸಿನ ಸರಾಸರಿ ಪ್ರಮಾಣ ಮತ್ತು ಖಾಯಿಲೆಗಳ ನಿಯಂತ್ರಣಗಳ ಪ್ರಮಾಣಗಳಲ್ಲಿ ಒಂದಷ್ಟು ಅಭಿವೃದ್ಧಿ ಕಂಡುಬಂದಿದೆ. ಇದು ಕೂಡಾ  ಸಾಧ್ಯವಾದದ್ದು ವಿಶೇಷವಾಗಿ ೨೦೦೫ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಿಂದಾಗಿ. ಆದರೆ ಮರಣದ ದರ, ಆಯಸ್ಸಿನ ಪ್ರಮಾಣ ಮತ್ತು ಖಾಯಿಲೆ ನಿಯಂತ್ರಣಗಳ ಅಭಿವೃದ್ಧಿಗೆ ಇಟ್ಟುಕೊಂಡಿದ್ದ ಗುರಿಗಳು ಮಾತ್ರ ಇನ್ನೂ ತುಂಬಾ ದೂರದಲ್ಲೇ ಉಳಿದುಕೊಂಡಿವೆ. ನಿರೀಕ್ಷಿಸಿದಂತೆ ರಾಷ್ಟ್ರೀಯ ಆರೋಗ್ಯ ನೀತಿ-೨೦೧೭ ಗುರಿಯನ್ನು ಸಾಧಿಸಲು ಇರಿಸಲಾಗಿದ್ದ ಕಾಲಾವಧಿಯನ್ನು ಮತ್ತಷ್ಟು ದೂರಕ್ಕೆ ತಳ್ಳಿದೆ.

ಭಾರತವು ಆರೋಗ್ಯ ಸೇವೆಗೆ ಜಗತ್ತಿನಲ್ಲೇ ಅತ್ಯಂತ ಕಡಿಮೆ ಸಂನ್ಮೂಲವನ್ನು ಒದಗಿಸುವ ದೇಶಗಳಲ್ಲಿ ಒಂದಾಗಿದೆ. ಇದು ೨೦೧೭ರಲ್ಲಿ ನಮ್ಮ ಒಟ್ಟಾರೆ ಅಂತರಿಕ ಉತ್ಪತ್ತಿ (ಜಿಡಿಪಿ) ಕೇವಲ ಶೇ.. ರಷ್ಟಿತ್ತು. ಅಂಕಿಅಂಶಗಳು ನಾವು ಆರೋಗ್ಯ ಪೂರೈಕೆಯ ಕುರಿತಾದ ಗುರಿಗಳನ್ನು ಬೇಗನೇ ಸಾಧಿಸುವ ಬಗ್ಗೆ ಯಾವುದೇ ವಿಶ್ವಾಸವನ್ನು ಹುಟ್ಟುಹಾಕುವುದಿಲ್ಲ. ಭರ್ತಿ ೧೫ ವರ್ಷಗಳ ನಂತರ ರೂಪಿಸಿ, ಕೇಂದ್ರ ಸಚಿವ ಸಂಪುಟವೂ ಇತ್ತೀಚೆಗೆ ಅನುಮೋದಿಸಿರುವ ೨೦೧೭ರ ರಾಷ್ಟ್ರೀಯ ಆರೋಗ್ಯ ನೀತಿಯು, ಆರೋಗ್ಯ ಸೇವೆಯ ಮೇಲಿನ ವೆಚ್ಚವನ್ನೂ ೨೦೨೫ರ ವೇಳೆಗೆ ಶೇ..೫ಕ್ಕೆ ಏರಿಸುವ ಪ್ರಸ್ತಾಪವನ್ನು ಮಾಡಿದೆ. ಮತ್ತು ೨೦೨೦ರ ವೇಳೆಗೆ ರಾಜ್ಯಗಳು ತಮ್ಮ ಬಜೆಟ್ಟಿನ ಶೇ.೮ರಷ್ಟನ್ನು ಆರೋಗ್ಯ ಸೇವೆಯ ಮೇಲೆ ವೆಚ್ಚ ಮಾಡಬೇಕೆಂಬ ಇಂಗಿತವನ್ನು ವ್ಯಕ್ತಪಡಿಸಿದೆ. ಒಟ್ಟಾರೆ ಆರೋಗ್ಯ ಸೇವೆಗೆ ನಿಗದಿಯಾಗುವ ಸಂಪನ್ಮೂಲದಲ್ಲಿ ಮೂರನೇ ಎರಡರಷ್ಟನ್ನು ಅಥವಾ ಅದಕ್ಕಿಂತ ಹೆಚ್ಚನ್ನು ಪ್ರಾಥಮಿಕ ಆರೋಗ್ಯ ಸೇವೆಯ ಮೇಲೂ ಉಳಿದದ್ದನ್ನು ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಸೇವೆಗಳ ಮೇಲೆ ವೆಚ್ಚ ಮಾಡಬೇಕೆಂದು ಅದು ಪ್ರತಿಪಾದಿಸುತ್ತದೆ. ರಾಷ್ಟ್ರೀಯ ನೀತಿಯು ಪ್ರಾಥಮಿಕ ಹಂತದಲ್ಲಿ ಸಮಗ್ರ ಆರೋಗ್ಯ ಆರೈಕೆಯನ್ನು ಖಾತರಿ ಪಡಿಸುತ್ತಿರುವಾಗಲೇ, ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಅನುದಾನಿತ ಆರೋಗ್ಯ ಸೇವಾ ವಿಮೆಯನ್ನು ಮುಂದುವರೆಸುವುದನ್ನೂ ಮತ್ತು ಎರಡನೇ ಹಾಗೂ ಮೂರನೆಯ ಹಂತದ ಆರೋಗ್ಯ ಸೇವೆಯನ್ನು  ಖಾಸಗಿ ಕ್ಷೇತ್ರದಿಂದಲೇ ನೇರವಾಗಿ ಕೊಂಡುಕೊಳ್ಳುವ ಪ್ರಸ್ತಾಪವನ್ನು ಮಾಡಿದೆ. ಪ್ರಾಥಮಿಕ ಹಂತದಲ್ಲಿ ಸಮಗ್ರ ಆರೋಗ್ಯ ಸೇವೆಯ ಪ್ರಸ್ತಾಪವಾಗಿರುವುದು ಸ್ವಾಗತಾರ್ಹವಾದರೂ, ಅದನ್ನು ಸಾಧಿಸಲು ಕೇವಲ ಶೇ..೫ರಷ್ಟು ಸಂಪನ್ಮೂಲವನ್ನು ಒದಗಿಸಿರುವುದು ಏನೇನೂ ಸಾಲದು. ವಾಸ್ತವವಾಗಿ ಇದು ಜಗತ್ತಿನ ಇತರ ಅಭಿವೃದ್ಧಿಶೀಲ ದೇಶಗಳು ತಮ್ಮ ದೇಶದ ಆರೋಗ್ಯ ಸೇವೆಗೆಂದು ಎತ್ತಿಡುತ್ತಿರುವ ಮೊತ್ತಕ್ಕಿಂತ ಕಡಿಮೆಯಾಗಿದೆ.

ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ಆಗಿರುವ ಒಂದು ಸಕಾರಾತ್ಮಕ ಕೂಡಿಕೆಯೆಂದರೆ ಎಲ್ಲಾ ರಾಜ್ಯಗಳಲ್ಲೂ ಸಾರ್ವಜನಿಕ ಆರೋಗ್ಯ ನಿರ್ವಹಣೆಯ ಪದಾಧಿಕಾರದ ಕಾರ್ಯಕರ್ತರನ್ನು ಸೃಷ್ಟಿಸುವುದು. ಕಾರ್ಯಕರ್ತರು ಈಗಿನಂತೆ ಕೇವಲ ವೈದ್ಯಾಧಿಕಾರಿಗಳನ್ನು ಮಾತ್ರ ನಿಯೋಜಿಸಿಕೊಳ್ಳದೆ  ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಶುಶ್ರೂಷೆ, ಆಸ್ಪತ್ರೆ ನಿರ್ವಹಣೆಯಂಥ ಭಿನ್ನ ಭಿನ್ನ ಹಿನ್ನೆಲೆಯಿಂದ ಬಂದವರ ಸೇವೆಯನ್ನೂ ತೊಡಗಿಸಿಕೊಳ್ಳುತ್ತದೆ. ಇದರ ಜೊತೆಗೆ ಮತ್ತೊಂದು ಸ್ವಾಗತಾರ್ಹ ಹೆಜ್ಜೆಯೆಂದರೆ ಜಿಲ್ಲಾ ಮತ್ತು ಅದಕ್ಕಿಂತ ತಳಗಿನ ಹಂತದ ಆಸ್ಪತ್ರೆಗಳನ್ನು ಮತ್ತಷ್ಟು ಬಲಪಡಿಸುವ ಮತ್ತು ಕೆಲವು ಜಿಲ್ಲಾ ಆಸ್ಪತ್ರೆಗಳನ್ನು ಅಧ್ಯಾಪನಾ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸುವ ಪ್ರಸ್ತಾಪಗಳು. ಪ್ರಾಥಮಿಕ ಆರೋಗ್ಯ ಸೇವೆಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಲೇ, ರಾಷ್ಟ್ರೀಯ ನೀತಿಯು ಆಯುಷ್ ವೈದ್ಯ ಸೇವಕರನ್ನು ಮುಖ್ಯಧಾರೆಗೆ ತಂದು ಅವರನ್ನು ಇತರ ಪೂರಕ ವೈದ್ಯ (ಪಾರಾಮೆಡಿಕಲ್) ಸೇವಕರ ರೀತಿ ಮಧ್ಯಮ ಹಂತದ ಆರೋಗ್ಯ ಸೇವಾ ಪೂರೈಕೆದಾರರನ್ನಾಗಿ ಪ್ರಾಥಮಿಕ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಅಂತರ್ಗತಗೊಳಿಸಿಕೊಳ್ಳುವ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಕ್ಷೇಮ (ವೆಲ್ನೆಸ್), ರೋಗ ನಿರೋಧಕ (ಪ್ರಿವೆಂಟೀವ್) ಮತ್ತು ಆರೋಗ್ಯ ವರ್ಧನಾ (ಪ್ರಮೋಟೀವ್) ಕೇಂದ್ರಗಳನ್ನಾಗಿ ವಿಸ್ತರಿಸುವ ಪ್ರಸ್ತಾಪಗಳನ್ನೂ ಹೊಂದಿದೆ. ೨೦೧೭ರ ಆರೋಗ್ಯ ನೀತಿಯು ವೈದ್ಯರುಗಳಿಗೆ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸುವ ಮತ್ತು ಕೌಟುಂಬಿಕ ಆರೋಗ್ಯ ಮತ್ತು ಸಾಮಾನ್ಯ ಆರೋಗ್ಯ ಸೇವೆಗಳಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಜನಪ್ರಿಯಗೊಳಿಸುವ ಉದ್ದೇಶವನ್ನೂ ಹೊಂದಿದೆ. ನೀತಿ ಪ್ರಸ್ತಾಪಗಳನ್ನು ಶ್ರದ್ಧಾಪೂರ್ವಕ ಆಸಕ್ತಿಯಿಂದ ಅನುಷ್ಠಾನಕ್ಕೆ ತರುವುದೇ ಆದಲ್ಲಿ ಸಮಗ್ರ ಮತ್ತು ಪರಿಪೂರ್ಣ ಪ್ರಾಥಮಿಕ ಆರೋಗ್ಯ ಸೇವೆಯನ್ನು ಅದರಲ್ಲೂ ಗ್ರಾಮೀಣ ಪ್ರದೇಶಕ್ಕೆ ಒದಗಿಸುವಲ್ಲಿ ದೊಡ್ಡ ಹೆಜ್ಜೆಯನ್ನೇ ಇಟ್ಟಂತಾಗುತ್ತದೆ.

ಆದರೆ ಇದು ಪ್ರಸ್ತಾಪಿಸಿರುವಸಾರ್ವಜನಿಕ ಆರೋಗ್ಯ ಸೇವೆಯ ಕೆಲವೊಂದು ಅಂಶಗಳನ್ನೂ ಒಳಗೊಂಡಂತೆ ಆರೋಗ್ಯ ಸೇವೆಯ ಬಹಳಷ್ಟು ಅಂಶಗಳಲ್ಲಿ ಖಾಸಗಿ ಕ್ಷೇತ್ರಗಳನ್ನು ಒಳಗೊಳ್ಳುವ ಪ್ರಸ್ತಾಪ ಮತ್ತು ಆರೋಗ್ಯ ಸೇವೆಯ ಹಾಗೂ ಆರೋಗ್ಯ ವಿಮೆಗಳ ವ್ಯೂಹಾತ್ಮಕ ಖರೀದಿಯ ಶಿಫಾರಸ್ಸುಗಳು ಅತ್ಯಂತ ಕಳವಳಕಾರಿ ಅಂಶಗಳಾಗಿವೆ. ಇದರ ಜೊತೆಗೆ ಆರೋಗ್ಯ ಸೇವೆಯನ್ನು ಒದಗಿಸಲು ಬೇಕಾದ ಹಣಕಾಸು ಸಂಪನ್ಮೂಲವನ್ನು ಪ್ರಧಾನವಾಗಿ ಸಾಮಾನ್ಯ ತೆರಿಗೆಯಿಂದಲೇ ಭರಿಸುವುದಾಗಿ ಹೇಳುತ್ತಿದ್ದರೂ, ಆರೋಗ್ಯ ಸೇವೆಯನ್ನು ಮೊದಲು ಸಾರ್ವಜನಿಕ ಕ್ಷೇತ್ರದಿಂದ  ನಂತರ ಲಾಭ ರಹಿತ ಸಾಮಾಜಿಕ ಕ್ಷೇತ್ರದಿಂದ ಮತ್ತು ಅಂತಿಮವಾಗಿ ಖಾಸಗಿ ಕ್ಷೇತ್ರದಿಂದ ಕೊಂಡುಕೊಳ್ಳುವುದನ್ನು ನೀತಿ ಶಿಫಾರಸ್ಸು ಮಾಡುತ್ತದೆ. ಸಾರ್ವಜನಿಕ ವೆಚ್ಚದಿಂದ ಹಣಕಾಸು ಒದಗಿಸದಿದ್ದರೆ ಯಾವುದೇ ಸಾರ್ವಜನಿಕ ಆರೋಗ್ಯ ಸೇವಾ ಪದ್ಧತಿಯು ಊರ್ಜಿತವಾಗುವುದಿಲ್ಲ. ಹೀಗಾಗಿ ಶಿಫಾರಸ್ಸು ಮಾಡಲಾಗಿರುವ ಇತರ ಮೂಲದ ಹಣಕಾಸು ವ್ಯವಸ್ಥೆಗಳು ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸಲಿಕ್ಕಾಗಿ ಒಂದು ಬಳಸು ದಾರಿಯನ್ನಾಗಿ ಬಳಸಲಾಗುತ್ತದೆಯೇ ಎಂಬುದು ಕಳವಳಕಾರಿ ಅಂಶವಾಗಿದೆ.

ದುರದೃಷ್ಟವಶಾತ್, ೨೦೧೭ರ ರಾಷ್ಟ್ರೀಯ ಆರೋಗ್ಯ ನೀತಿಯು ಶಿಕ್ಷಣದ ಮತ್ತು ಆಹಾರದ ಹಕ್ಕಿನ ರೀತಿ ಆರೋಗ್ಯದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿಸುವ ಯಾವುದೇ ಬದ್ಧತೆಯನ್ನು ತೋರಿಸಿಲ್ಲ. ಅದು ೨೦೧೫ರ ಕರಡಿನಲ್ಲಿ ಪ್ರಸ್ತಾಪಿಸಲಾಗಿದ್ದ ರಾಷ್ಟ್ರೀಯ ಆರೋಗ್ಯ ಹಕ್ಕಿನ ಕಾಯಿದೆಯನ್ನು ಅನುಷ್ಠಾನಕ್ಕೆ ತರುವ ಎಲ್ಲಾ ಪ್ರಸ್ತಾಪಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಅದರ ಬದಲಿಗೆ ಭವಿಷ್ಯದಲ್ಲಿ, ಖಾತರಿ ಸಂಪನ್ಮೂಲಗಳ ಆಧಾರದಲ್ಲಿ ಆರೋಗ್ಯ ಸೇವೆಯನ್ನು ಒಂದು ಹಕ್ಕನ್ನಾಗಿ ಮಾಡಲು ಬೇಕಾದ ಸಮರ್ಥ ಪರಿಸರವನು ಸೃಷ್ಟಿಸುವ ಉದ್ದೇಶದಿಂದ ಹಂತಹಂತವಾಗಿ ಸೇವಾ ಸಂಪನ್ಮೂಲಗಳನ್ನು ಹೆಚ್ಚಿಸುವ ಧೋರಣೆಯನ್ನು ಅಳವಡಿಸಿಕೊಂಡಿದೆ. ಆರೋಗ್ಯ ಹಕ್ಕನ್ನು ಖಾತರಿಗೊಳಿಸಬೇಕೆಂದರೆ ಒಂದು ನಿರ್ದಿಷ್ಟ ಮಟ್ಟದ ಮೂಲಭೂತ ಆರೋಗ್ಯ ಮೂಲ ಸೌಕರ್ಯಗಳು ಅಸ್ಥಿತ್ವದಲ್ಲಿ ಇರಬೇಕಾಗುತ್ತದೆ ಎಂದು ಅದು ವಾದಿಸುತ್ತದೆ. ಕಾರಣಗಳು ಸಮರ್ಪಕವೂ ಅಲ್ಲ. ಮತ್ತು ಆರೋಗ್ಯ ಸೇವೆಯನ್ನು ಪಡೆಯುವುದು ಮೂಲಭೂತ ಹಕ್ಕಾಗುವುದಕ್ಕೆ ಪರ್ಯಾಯವೂ ಅಲ್ಲ. ಆರೋಗ್ಯ ಸೇವೆಯನ್ನು ಒಂದು ಮೂಲಭೂತ ಹಕ್ಕನ್ನಾಗಿ ಪರಿಗಣಿಸದ ಹೊರತು ಆರೋಗ್ಯ ಮೂಲ ಸೌಕರ್ಯಗಳನ್ನು ಸುಧಾರಿಸಲು ಮತ್ತು ಅದನ್ನು ಒಂದು ನಿರ್ದಿಷ್ಟ ಗುಣಮಟ್ಟಕ್ಕೆ ಏರಿಸಲು ಬೇಕಾದ ಪ್ರೇರಣೆಯಾಗಲೀ ಅಥವಾ ರಾಜಕೀಯ ಇಛ್ಛಾಶಕ್ತಿಯಾಗಲೀ ಒದಗಿ ಬರುವುದಿಲ್ಲ.

ಭಾರತವು ಸಾರ್ವಜನಿಕ ಆರೋಗ್ಯ ಸೇವಾ ವೆಚ್ಚಗಳಲ್ಲಿ, ಆರೋಗ್ಯ ಸೇವೆಗಳು ಎಟಕುವಂತೆ ಮಾಡುವುದರಲ್ಲಿ ಮತ್ತು ಇನ್ನಿತರ ಆರೋಗ್ಯ ಸೂಚಕಗಳಲ್ಲಿ ಕೇವಲ ಥೈಲ್ಯಾಂಡ್ ಮತ್ತು ಶ್ರೀಲಂಕಾಗಳ ಹಿಂದೆ ಮಾತ್ರವಲ್ಲ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಒಕ್ಕೂಟದ ಇತರ ಎಲ್ಲಾ ದೇಶಗಳಿಗಿಂತ ಹಿಂದೆ ಬಿದ್ದಿದೆ. ಎಲ್ಲಾ ದೇಶಗಳು ತಮ್ಮ ತಮ್ಮ  ದೇಶಗಳ ಆರೋಗ್ಯ ಸೇವೆಗಳ ಗುರಿಯನ್ನು ಸಾಧಿಸುತ್ತಾ ಭಾರತವನ್ನು ಹಿಂದೆ ಹಾಕಿದ್ದರೆ ಭಾರತವು ಮಾತ್ರ ತನ್ನ ಜನತೆಗೆ ಮೂಲಭೂತ ಆರೋಗ್ಯ ಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಸಾಧಿಸುವಲ್ಲಿ ಇನ್ನೂ ಮೀನಮೇಷ ಎಣಿಸುವ ಧೋರಣೆಯನ್ನು ಅನುಸರಿಸುತ್ತಿದೆ. ಗುರಿಗಳನ್ನು ಸಾಧಿಸುವಲ್ಲಿ ತೋರಬೇಕಾದ ತುರ್ತನ್ನು ರಾಷ್ಟ್ರೀಯ ಆರೋಗ್ಯ ನೀತಿಯು ತೋರುವಲ್ಲಿ ವಿಫಲವಾಗಿದೆ. ಆರೋಗ್ಯವನ್ನು ಒಂದು ಬೇರ್ಪಡಿಸಲಾಗದ ಮೂಲಭೂತ ಹಕ್ಕನ್ನಾಗಿ ಪರಿಗಣಿಸಬೇಕೆಂಬ ಪ್ರತಿಪಾದನೆಯನ್ನು ಕಡೆಗಣಿಸಿರುವುದರಿಂದ ಭಾರತವು ಇತರ ದೇಶಗಳಿಗಿಂತ ಹಿಂದೆಯೇ ಉಳಿಯುವುದನ್ನು ರಾಷ್ಟ್ರೀಯ ಆರೋಗ್ಯ ನೀತಿಯು ಖಾತರಿಗೊಳಿಸಿದೆ.


                                                                                        ಕೃಪೆ: Economic and Political Weekly
                                                                                            March 25, 2017. Vol. 52, No.12
                                                                                                       




ಕಾಮೆಂಟ್‌ಗಳಿಲ್ಲ: