ಭಾನುವಾರ, ಮಾರ್ಚ್ 5, 2017

ರಾಷ್ಟ್ರೀಯವು ಪ್ರಾದೇಶಿಕವನ್ನು ಸೋಲಿಸಿದ ಬಗೆ

 ಅನುಶಿವಸುಂದರ್

ಮಹಾರಾಷ್ಟ್ರದ ಸ್ಥಳೀಯಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಯು ವಿಜಯಿಯಾಗಿರುವುದು ಪ್ರಾದೇಶಿಕ ಪಕ್ಷಗಳ ಬಲಹೀನತೆಯನ್ನು ಬಯಲುಗೊಳಿಸುತ್ತದೆ.

ಮಹಾರಾಷ್ಟ್ರದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅನಿರೀಕ್ಷಿತ ಮತ್ತು ಅಸಾಧಾರಣ ಸಾಧನೆಯು, ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರುವ ರಾಜ್ಯಗಳಲ್ಲಿ ಹಿಡಿತ ಸಾಧಿಸಬೇಕೆಂದು ಬಯಸುವ ಇತರ ರಾಷ್ಟ್ರೀಯ ಪಕ್ಷಗಳಿಗೆ ಹಲವಾರು ಗುಣಪಾಠಗಳನ್ನು ಕಲಿಸಿಕೊಡುತ್ತದೆ. ಬಿಜೆಪಿಯು ಶಿವಸೇನಾದೊಂದಿಗಿನ ಮೈತ್ರಿಯ ಬೆನ್ನೇರಿಯೇ ಮಹಾರಾಷ್ಟ್ರದಲ್ಲಿ ಉದ್ದಗಲಕ್ಕೂ ತನ್ನ ಪ್ರಭಾವವನ್ನು ವಿಸ್ತರಿಸಿಕೊಂಡಿತ್ತು. ಚುನಾವಣೆಯಲ್ಲಿ ಬಿಜೆಪಿ ಮೈತ್ರಿಯನ್ನು ಕಡಿದುಕೊಂಡರೂ ಶಿವಸೇನಾಗಿಂತ ಹೆಚ್ಚಿನ ಸಾಧನೆಯನ್ನೇ ಮಾಡಿದೆ. ಫಲಿತಾಂಶಕ್ಕೆ ಇನ್ನೂ ಒಂದು ಪ್ರಮುಖ ಕಾರಣವಿದೆ. ಪ್ರಮುಖ ವಿರೋಧೀ ಪಕ್ಷಗಳಾಗಿರುವ ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್.ಸಿ.ಪಿ), ಮತ್ತು ಮಹರಾಷ್ಟ್ರ ನವನಿರ್ಮಾಣ ಸೇನೆ (ಎಂ.ಎನ್.ಎಸ್)ಗಳು ಚುನಾವಣೆಯಲ್ಲಿ ಒಂದೋ ದುರ್ಬಲ ವಿರೋಧವನ್ನು ಒಡ್ಡಿದವು ಅಥವಾ ವಿರೋಧವನ್ನೇ ಒಡ್ಡಲಿಲ್ಲ ಎಂದರೂ ಸರಿಯೇ.

ಬಾರಿ ಬಿಜೆಪಿಯ ಪ್ರಧಾನ ವ್ಯೂಹತಂತ್ರ, ಸರಿಯಾದ ಸಮಯದಲ್ಲಿ ಕಾಂಗ್ರೆಸ್,ಎನ್ಸಿಪಿ ಮತ್ತು ಎಂಎನ್ಎಸ್ ಗಳಿಂದ ಹಲವಾರು ಪ್ರಭಾವಶಾಲಿ ನಾಯಕರನ್ನು ತನ್ನೆಡೆಗೆ ಸೆಳೆದುಕೊಳ್ಳುವುದಾಗಿತ್ತು. ಇದು ಬಿಜೆಪಿಯ ಒಟ್ಟಾರೆ ಸೀಟುಸಂಖ್ಯೆಯನ್ನು ಹೆಚ್ಚಿಸಿತು. ಮತ್ತೊಂದು ತಂತ್ರವೆಂದರೆ ಎಲ್ಲಾ ಭಿತ್ತಿಪತ್ರಗಳಲ್ಲೂ, ಬೃಹತ್ ಜಾಹಿರಾತು ಫಲಕಗಳಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಜೊತೆಜೊತೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಭಾವಚಿತ್ರವನ್ನು ಪ್ರದರ್ಶಿಸುವ ಮೂಲಕ ಒಟ್ಟೂ ಪ್ರಚಾರದಲ್ಲಿ ಫಡ್ನವೀಸ್ ಅವರನ್ನು ಬಿಜೆಪಿಯ ಮುಖವನ್ನಾಗಿ ಮುಂದೆಮಾಡಿದ್ದು. ಮಹಾರಾಷ್ಟ್ರದ ಜನರು ಫಡ್ನವಿಸ್ ಅವರನ್ನು ಚಾಲ್ತಿಯಲ್ಲಿರುವ ರಾಜಕರಣಿಗಳಿಗಿಂತ ಭಿನ್ನವೆಂದು ಭಾವಿಸುತ್ತಾರಾದ್ದರಿಂದ ತಂತ್ರ ಬಿಜೆಪಿಗೆ ಸಹಾಯ ಮಾಡಿತು. ಇದರ ಜೊತೆಗೆ ತನ್ನ ದೀರ್ಘಕಾಲೀನ ಮಿತ್ರಪಕ್ಷವಾದ ಶಿವಸೇನಾದ ಹಲವು ರಾಜಕೀಯ ಕ್ರಮಗಳಲ್ಲಿ, ಅದರಲ್ಲೂ ವಿಶೇಷವಾಗಿ ಮುಂಬೈ ಬೃಹತ್ ನಗರಪಾಲಿಕೆಯಲ್ಲಿನ ಅದರ ಹಲವಾರು ನೀತಿನಿರ್ಣಯಗಳಲ್ಲಿ, ತಾನು ಭಾಗಿಯಲ್ಲವೆಂಬ ರೀತಿಯಲ್ಲಿ ದೂರವನ್ನು ಕಾಪಾಡಿಕೊಳ್ಳುವುದರಲ್ಲೂ ಬಿಜೆಪಿ ಯಶಸ್ವಿಯಾಯಿತು. ಅಷ್ಟೇ ಅಲ್ಲದೆ, ೨೦೧೬ರ ಕೊನೆಯ ಭಾಗದಲ್ಲಿ ಮರಾಠ ಸಮುದಾಯವು ತನ್ನ ಸಮುದಾಯಕ್ಕೆ ಮೀಸಲಾತಿ ಬೇಕೆಂದೂ ಹಾಗೂ  ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ವರ್ಗU ಮೇಲಿನ ಅತ್ಯಾಚಾರ ನಿಷೇಧ ಕಾಯಿದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ನಡೆಸಿದ ಆಂದೋಲನವೂ ಬಿಜೆಪಿಯ ಬೆಂಬಲಕ್ಕೆ ಬಂದಿರುವ ಸಾಧ್ಯತೆ ಇದೆ. ಮರಾಠರು ಕೃಷಿ ಬಿಕ್ಕಟ್ಟನ್ನೂ ಮತ್ತು ನಿರುದ್ಯೋಗವನ್ನೂ ಎದುರಿಸುತ್ತಿರುವುದು ನಿಜವೇ ಆದರೂ ಅವರನ್ನು ರಾಜ್ಯದ ಆರ್ಥಿಕತೆಯ ಮೇಲೆ ಮತ್ತು ರಾಜಕೀಯದ ಜೀವನದ ಮೇಲೆ ಪ್ರಭಾವ ಬೀರುವ ವರ್ಗವೆಂದು ಪರಿಗಣಿಸಲಾಗುತ್ತದೆ. ಮಹಾರಾಷ್ಟ್ರವನ್ನು ಮುನ್ನೆಡೆಸಿರುವ ಕೆಲವೇ ಮರಾಠರಲ್ಲದ ಮುಖ್ಯಮಂತ್ರಿಗಳಲ್ಲಿ ಫಡ್ನವಿಸ್ ಕೂಡಾ ಒಬ್ಬರು. ಫಡ್ನವಿಸ್ ಅವರು ಮರಾಠರ ಆಂದೋಲನ ಪ್ರಾರಂಭವಾದಾಗಿನಿಂದಲೂ ಅವರಿಗೆ ಭರವಸೆ ನೀಡುತ್ತಾ ಬಂದಿದ್ದಾರೆ. ಒಂದು ರೀತಿಯಲ್ಲಿ ಎಲ್ಲರಿಗೂ ಎಲ್ಲವನ್ನೂ ಭರವಸೆ ಕೊಡುವ ನೀತಿಯನ್ನು ಅವರು ಅನುಸರಿಸುತ್ತಿದ್ದಾರೆ.

ಹಾಗೆಯೇ ನೋಟು ನಿಷೇಧದ ವಿರುದ್ಧದ ಜನರ ಆಕ್ರೋಶ ಬಿಜೆಪಿಯ ವಿರುದ್ಧ ತಿರುಗಲಿಲ್ಲವೆಂದು ಕಾಣುತ್ತದೆ. ಬಿಜೆಪಿಯಿಂದ ಪ್ರತ್ಯೇಕಗೊಂಡು ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಶಿವಸೇನಾವನ್ನು ಬಿಟ್ಟರೆ ಕಾಂಗ್ರೆಸ್ ಆಗಲೀ ಎನ್ಸಿಪಿಯಾಗಲೀ ಜನರಲ್ಲಿದ್ದ ಆಕ್ರೋಶವನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಹಲವಾರು ಹಗರಣಗಳಿಂದ ಹತ್ತಿಕೊಂಡ ಅಪಖ್ಯಾತಿ ಮತ್ತು ರೈತರ ಆತ್ಮಹತ್ಯೆಗಳ ಬಗ್ಗೆ ತೋರಿದ ತಾತ್ಸಾರಗಳಿಂದಾಗಿ ಕಾಂಗ್ರೆಸ್-ಎನ್.ಸಿಪಿ. ಮೈತ್ರಿಕೂಟವನ್ನು ೨೦೧೪ರ ಚುನಾವಣೆಗಳಲ್ಲಿ ಅಧಿಕಾರದಿಂದ ಹೊರಗಟ್ಟಲಾಯಿತು.ಹೀಗಾಗಿ ಪಕ್ಷಗಳು ಬಿಜೆಪಿಗೆ ಸವಾಲೊಡ್ಡುವ ಸ್ಥಿತಿಯಲ್ಲಿರಲಿಲ್ಲ. ಮತ್ತೊಂದೆಡೆ ಫಡ್ನವೀಸ್ ಅವರಿಗಿರುವ ಶುದ್ಧಹಸ್ತರೆಂಬ ಜನಾಭಿಪ್ರಾಯ ಬಿಜೆಪಿಯ ನೆರವಿಗೆ ಬಂತು. ಅಲ್ಲದೆ ಫಡ್ನವಿಸ್ ನೀಡಿದ ಅಭಿವೃದ್ಧಿಯ ಭರವಸೆಯೂ ಬಿಜೆಪಿಯ ಸಹಾಯಕ್ಕೆ ಬಂದಂತಿದೆ. ಗ್ರಾಮೀಣ ಮಹಾರಾಷ್ಟ್ರವು ದೀರ್ಘಕಾಲದಿಂದ ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜಿನಲ್ಲಿ ನಿರಂತರ ವ್ಯತ್ಯಯ, ಹಾಳಾದ ರಸ್ತೆಗಳು, ಕೆಲಸ ಮಾಡದ ಆಸ್ಪತ್ರೆ ಸೌಕರ್ಯಗಳು, ಕಲ್ಯಾಣ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಭ್ರಷ್ಟಾಚಾರ, ಪಂಚಾಯತ್ ಅಧಿಕಾರಿಗಳ ಉದ್ದಟತನಗಳಂಥಾ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಮತ್ತು ಮಹಾರಾಷ್ಟ್ರದ ರಾಜಧಾನಿಯಾದ ಮುಂಬೈ ಮಹಾನಗರವು, ರೂ. ೩೭,೦೫೨ ಕೋಟಿಗಳಷ್ಟು ಬೃಹತ್ ಬಜೆಟ್ಟನ್ನು ಹೊಂದಿದ್ದರೂ ಮೂಲಭೂತ ಸೌಕರ್ಯಗಳ ಕುಸಿತ ಮತ್ತು ಹೆಚ್ಚೂಕಡಿಮೆ ನಗರಾಭಿವೃದ್ಧಿಯ ಪ್ರತಿಯೊಂದು ಕ್ಷೇತ್ರದಲ್ಲೂ ಢಾಳಾಗಿರುವ ದುರಾಡಳಿತದಿಂದಾಗಿ ತತ್ತರಿಸುತ್ತಿದೆ.

ಶಿವಸೇನೆಯು ಮುಂಬೈನಲ್ಲಿ ಸತತ ನಾಲಕ್ಕು ಅವಧಿಗಳು ಅಧಿಕಾರದಲ್ಲಿದ್ದರೂ ಆಡಳಿತ ವಿರೋಧಿ ಅಲೆಯಿಂದ ಬಚಾವಾಗಿರುವುದು ಮಾತ್ರವಲ್ಲದೆ ಸೀಟುಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡಿದೆ. ಆದರೂ, ಮುಂದೆಯೂ ಅದು   ತನ್ನ ಪ್ರಾದೇಶಿಕ ಅಸ್ಮಿತೆಯ ರಾಜಕಾರಣವನ್ನೇ ನೆಚ್ಚಿಕೊಂಡು ಹೋಗಲು ಸಾಧ್ಯವಿಲ್ಲವೆನ್ನುವುದು ಸ್ಪಷ್ಟವಾಗಿದೆ. ಯುವ ಮಹಾರಾಷ್ಟ್ರೀಯರನ್ನೂ ಒಳಗೊಂಡಂತೆ ಯುವ ಮುಂಬೈಯಿಗರು ಪ್ರಾದೇಶಿಕ ಮತ್ತು ಭಾಷಿಕ ಅಸ್ಮಿತೆಗಳಿಗಿಂತ ಶೈಕ್ಷಣಿಕ ಮತ್ತು ಔದ್ಯೋಗಿಕ ಆಶೋತ್ತರಗಳ ಮೇಲೆ ಹೆಚ್ಚಿಗೆ ಗಮನವಹಿಸುತ್ತಿದ್ದಾರೆ. ಶಿವಸೇನೆಯು ಹೆಚ್ಚಿನ ಜನರನ್ನು ಆಕರ್ಷಿಸುವಂಥಾ ಧೋರಣೆಯನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿದ್ದರೂ ತನ್ನ ವ್ಯೂಹತಂತ್ರಗಳಲ್ಲಿ ಯುವ ವರ್ಗಗಳನ್ನು ಆಕರ್ಷಿಸಲು ಬೇಕಾದ ಹೊಂದಾಣಿಕೆಗಳಿನ್ನೂ ಮಾಡಿಕೊಂಡಿಲ್ಲ. ಅದು ತನ್ನ ಪಾರಂಪರಿಕ ನೆಲದ ಮಕ್ಕಳ ಹಕ್ಕೆಂಬ ತತ್ವಸರಣಿ ಹಾಗೂ ದಿನೇದಿನೇ ಹೆಚ್ಚುತ್ತಿರುವ ಹೊರಗಿನವರು ಎಂದು ತನ್ನಿಂದ ಕರೆಯಲ್ಪಡುವ ಜನವರ್ಗಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಹೆಣಗುತ್ತಿದೆ. ಎಲ್ಲಾ ಪ್ರಯತ್ನಗಳ ನಡುವೆಯೂ ಬಾರಿ ಬಿಜೆಪಿಯು ಶಿವಸೇನಾದಿಂದ  ಗುಜರಾತಿ, ಮತ್ತು ಉತ್ತರ ಭಾರತೀಯ ಮತದಾರರನ್ನು ಮಾತ್ರವಲ್ಲದೆ ಯುವ ಮಹಾರಾಷ್ಟ್ರೀಯರನ್ನು ಸಹ ಕಸಿದುಕೊಂಡಿದೆ. ಶಿವಸೇನಾವು ಮೂಲಭೂತವಾಗಿ ಒಂದು ನಗರದ ಪಕ್ಷವೆಂಬ ಭಾವನೆಗೆ ಬಾರಿ ಅದು ತನ್ನ ಇಡೀ ಪ್ರಚಾರವನ್ನು ಮುಂಬೈ ಮತ್ತು ಠಾಣೆಯ ಮೇಲೆ ಮಾತ್ರ ಕೇಂದ್ರೀಕರಿಸಿದ್ದು ಪುಷ್ಟಿಕೊಟ್ಟಿದೆ.

ಕಾಂಗ್ರೆಸ್, ಎನ್ಸಿಪಿ ಮತ್ತು ಎಂಎನ್ಎಸ್ಗಳ ಬಗ್ಗೆ ಹೇಳುವುದಾದರೆ ಗೋಡೆಯ ಮೇಲಿನ ಬರಹ ನಿಚ್ಚಳವಾಗಿದೆ. ಮೊದಲೆರಡರ ಬಗ್ಗೆ ಹೇಳುವುದಾದರೆ ಅವು ಇನ್ನೂ ತಮ್ಮ ಹಿಂದಿನ ನಾಯಕರು ಮಾಡಿದ ಸಾಧನೆಗಳು ಅಥವಾ  ಬಡವರ ಪರವೆಂಬ ಸದಭಿಪ್ರಾಯಗಳನ್ನೇ ನೆಚ್ಚಿಕೂರಲು ಸಾಧ್ಯವಿಲ್ಲ. ತಮ್ಮ ದುರಹಂಕಾರ ಮತ್ತು ಭ್ರಷ್ಟಾಚಾರಗಳ ಬಗ್ಗೆ ಜನರಿಗಿರುವ ಆಕ್ರೋಶವನ್ನು ಅವು ಅರ್ಥಮಾಡಿಕೊಳ್ಳಬೇಕಿದೆ. ಹಾಗೆಯೇ ವಿನಯವನ್ನು ರೂಢಿಸಿಕೊಂಡು ಮತ್ತೆ ಜನರತ್ತ ತೆರಳಿ ಬುಡಮಟ್ಟದಿಂದ ತಮ್ಮ ಪಕ್ಷಕ್ಕೆ ಬೆಂಬಲವನ್ನು ಗಳಿಸಿಕೊಳ್ಳಬೇಕಿದೆ. ಒಬ್ಬರನ್ನೊಬ್ಬರು ಸರ್ವನಾಶಮಾಡುವ ಭಿನ್ನಮತೀಯ ಚಟುವಟಿಕೆಗಳು, ಬಹಿರಂಗವಾಗಿ ಭಿನ್ನಮತದ ಘೋಷಣೆಗಳು ಮತ್ತು ತಮ್ಮ ಪಾರಂಪರಿಕ ಮತದಾರರು ಹೇಗಿದ್ದರೂ ತಮಗೇ ಓಟುಹಾಕುತ್ತಾರೆಂಬ ಉಡಾಫೆ ಧೋರಣೆಗಳು ಆದಷ್ಟು ಬೇಗನೆ ಬದಲಾಗಲೇ ಬೇಕಿದೆ. ಇನ್ನು ಎಂಎನ್ಎಸ್ ಅಂತೂ ಬಾರಿ ಹೇಳಹೆಸರಿಲ್ಲದಂತಾಗಿದೆ. ಅದಕ್ಕೆ ಮುಖ್ಯ ಕಾರಣ ಜನರಿಗಾಗಿ ಯಾವುದೇ ಗಟ್ಟಿ ಕೆಲಸವನ್ನು ಮಾಡದೆ ಜನರಲ್ಲಿ ದುರಭಿಮಾನವನ್ನು ಪ್ರಚೋದಿಸುತ್ತಾ ಸೋಮಾರಿತನದಿಂದ ಕಾಲಕಳೆzದ್ದು. ಆದರೂ ಪಕ್ಷಗಳು ಅತ್ಯಗತ್ಯವಾಗಿ ಮರುಜೀವ ಪಡೆಯಲೇ ಬೇಕಿದೆ. ಏಕೆಂದರೆ ಒಂದು ಬಲವಾದ ವಿರೋಧ ಪಕ್ಷವಿಲ್ಲದೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಅಧಿಕಾರವಿರುವುದು ರಾಜ್ಯದ ಭವಿಷ್ಯಕ್ಕೆ ಒಳ್ಳೆಯದನ್ನೇನೂ ಮಾಡುವುದಿಲ್ಲ.

                                                                                                 ಕೃಪೆ: Economic and Political Weekly
                                                                                                March 4, 2017. Vol. 52. No. 9
                                              
                                                                                                                                 

    





ಕಾಮೆಂಟ್‌ಗಳಿಲ್ಲ: