ಭಾನುವಾರ, ಆಗಸ್ಟ್ 9, 2015

ಸುಂದರ ಮಲೆಕುಡಿಯ ಮತ್ತು ಅನಾಥ ಆದಿವಾಸಿಗಳು



curtusy: vijaykarnataka

ಡಿ ಉಮಾಪತಿ 

ದಕ್ಷಿಣ ಕನ್ನಡದ ಮಲೆಕುಡಿಯನೊಬ್ಬನ ಕೈಗಳನ್ನು ಕತ್ತರಿಸಿ ಖಾರದ ಪುಡಿಯನ್ನು ಮೆತ್ತಿದ ಕ್ರೌರ್ಯ ನಾಗರಿಕ ಜಗತ್ತನ್ನು ಬೆಚ್ಚಿ ಬೀಳಿಸುತ್ತಿಲ್ಲ. ಮಲೆಕುಡಿಯರು ಈ ನೆಲದ ಮೂಲನಿವಾಸಿ ಜನಾಂಗವೊಂದಕ್ಕೆ ಸೇರಿದವರು. ಆದಿವಾಸಿಗಳನ್ನು ಅವರ ನೆಲದಿಂದಲೇ ಒಕ್ಕಲೆಬ್ಬಿಸಿ ಕಾಡುಮೇಡುಗಳಿಗೆ ಗುಡ್ಡ ಗವಿಗಳಿಗೆ ಅಟ್ಟುತ್ತ ಬಂದಿರುವ ಅನ್ಯಾಯ ನಿರಂತರ ಮತ್ತು ಅವಿರತ. ನೂರು ಎಕರೆ ಜಮೀನು ಹೊಂದಿದ ನಾಗರಿಕ ನೆರೆಯ ಮಲೆಕುಡಿಯನ ಎರಡೂವರೆ ಎಕರೆಯ ಮೇಲೆ ಕಣ್ಣು ಹಾಕುತ್ತಾನೆ. ಈ ಜಮೀನು ಬಡ ಮಲೆಕುಡಿಯನಿಗೇ ಸೇರಿದ್ದೆಂಬ ತೀರ್ಪುಗಳನ್ನೂ ಆತ ಲೆಕ್ಕಿಸುವುದಿಲ್ಲ. ಮಲೆಕುಡಿಯ ಕುಟುಂಬವನ್ನು ಓಡಿಸಲೆಂದು ಇಪ್ಪತ್ತು ವರ್ಷಗಳ ಹಿಂದೆ ತೊಟ್ಟಿಲ ಕಂದನನ್ನು ಕೆಳಚೆಲ್ಲಿ ಅದರ ತಾಯಿಯ ಬೆರಳುಗಳನ್ನು ಕತ್ತರಿಸಿದ್ದವನು ಇದೀಗ ಅದೇ ಕಂದನ ತಂದೆಯ ಕೈಗಳನ್ನು ಮರಕತ್ತರಿಸುವ ಯಂತ್ರದಿಂದ ಕತ್ತರಿಸಿ ಒಗೆದಿದ್ದಾನೆ. ಹಸಿದು ತತ್ತರಿಸಿದವನೊಬ್ಬ ರೊಟ್ಟಿ ಕದ್ದರೆ ಅವನನ್ನು ಹಿಡಿದು ಜೈಲಿಗೆ ತಳ್ಳುವ ನಾಗರಿಕ ಜಗತ್ತು, ಬಡ ಮಲೆಕುಡಿಯನ ಕೈ ಕತ್ತರಿಸಿದ ಜಮೀನುದಾರನನ್ನು ಮುಟ್ಟುವ ಧೈರ್ಯ ಮಾಡುವುದಿಲ್ಲ. 

ಮಲೆಕುಡಿಯರನ್ನು ಜೀತಕ್ಕೆ ಇರಿಸಿ ಸರಪಳಿಗಳಲ್ಲಿ ಬಂಧಿಸಿ ಇಡುತ್ತಿದ್ದ ದಕ್ಷಿಣ ಕನ್ನಡದ ಇದೇ ಸೀಮೆಯಲ್ಲಿ ಸಾವಿರಾರು ಎಕರೆ ಜಮೀನು ಹೊಂದಿರುವ ಪಾಳೇಗಾರರು ಈಗಲೂ ಇದ್ದಾರೆ. ಕರಿಮಲೆಯ ಕಗ್ಗತ್ತಲು ಎಂಬ ಚಲನಚಿತ್ರಕ್ಕೆ ಪ್ರೇರಣೆ ದೊರೆತದ್ದು ಇದೇ ನೆಲದ ಊಳಿಗಶಾಹಿಯಿಂದ. ನೆರೆಹೊರೆಯ ತಾಲೂಕುಗಳನ್ನು ಮುಟ್ಟಿದ ಭೂಸುಧಾರಣೆ ಈ ಕಗ್ಗತ್ತಲ ಖಂಡಕ್ಕೆ ಬೆದರಿ ದೂರ ಉಳಿದಂತಿದೆ. 

ಮೊನ್ನೆ ನಡೆದಿರುವುದು ಒಬ್ಬ ಮಲೆಕುಡಿಯನ ಕತೆಯಲ್ಲ. ದೇಶದ ಉದ್ದಗಲಕ್ಕೆ ಹಬ್ಬಿದ ಕೋಟ್ಯಂತರ ಆದಿವಾಸಿಗಳು ನಾಗರಿಕ ಜಗತ್ತಿನ ಕ್ರೌರ್ಯದಡಿ ನಲುಗಿ ನವೆಯುತ್ತಿದ್ದಾರೆ. ಮನುಷ್ಯ ಮತ್ತೊಬ್ಬ ಮನುಷ್ಯನನ್ನು ದುರಾಸೆಗಾಗಿ ಹಿಂಸಿಸುವ, ಕೊಲ್ಲುವ ಕ್ರೌರ್ಯ ನಿಲ್ಲದೆ ನಡೆದಿದೆ. 

ಕೋಟಿ ಕೋಟಿ ಆದಿವಾಸಿಗಳನ್ನು ಶೋಷಣೆಯಿಂದ ಮುಕ್ತಗೊಳಿಸುವ ಮನಸ್ಸು ಭಾರತದ ಸರ್ಕಾರಕ್ಕೆ ಇಲ್ಲ ಎಂಬುದು ಕೆಲ ವರ್ಷಗಳ ಹಿಂದೆ ವಿಕಿಲೀಕ್ಸ್ ದಾಖಲೆಗಳಿಂದ ಹೊರಬಿದ್ದಿದ್ದ ಅಂಶ. ತೀವ್ರ ವೇಗದಿಂದ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಅರ್ಥವ್ಯವಸ್ಥೆಯು ಬರಿದಾಗುತ್ತಿರುವ ಅರಣ್ಯಪ್ರದೇಶ ಮತ್ತು ಅವುಗಳ ಸಂಪನ್ಮೂಲಗಳ ಮೇಲೆ ಭಾರೀ ಒತ್ತಡ ಹೇರಿದೆ. ಪರಿಣಾಮವಾಗಿ ಆದಿವಾಸಿ ಜನರು ಸಂಕಟಕ್ಕೆ ಸಿಲುಕಿದ್ದಾರೆ. ಅಡವಿಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಅಲ್ಲಿನ ಸಂಪನ್ಮೂಲಗಳನ್ನು ಕಾರ್ಪೊರೇಟುಗಳಿಗೆ ಬಿಡಿಸಿಕೊಡುವುದು ಸರ್ಕಾರದ ಕಾರ್ಯಸೂಚಿ. 

ಅಭಿವೃದ್ಧಿಗೆ ಅಡ್ಡಗಲ್ಲಾಗಿರುವ ಆದಿವಾಸಿಗಳನ್ನು ಅಡವಿಗಳಿಂದ ಒಕ್ಕಲೆಬ್ಬಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸಬೇಕು ಎಂಬುದು ಭಾರತದಲ್ಲಿ ವ್ಯಾಪಕವಾಗಿ ಚಾಲ್ತಿಗೆ ಬರುತ್ತಿರುವ ಅಭಿಪ್ರಾಯ. ಈ ಅಮಾನವೀಯ ಚಿಂತನೆಯು ಆದಿವಾಸಿಗಳನ್ನು ಕಟ್ಟಕಡೆಗೆ ಸಾಮಾಜಿಕ ಏಣಿಶ್ರೇಣಿಯ ತಳಾತಳಕ್ಕೆ ನೂಕಲಿದೆ ಎಂಬ ಮಾತನ್ನು ಈ ದಾಖಲೆಗಳಲ್ಲಿ ಬರೆಯಲಾಗಿತ್ತು. 

ಆದಿವಾಸಿಗಳನ್ನು ಶೋಷಣೆಯಿಂದ ತಾರತಮ್ಯದಿಂದ ಕಾಪಾಡಲು ಹಲವು ಹತ್ತು ಕಾಯಿದೆ ಕಾನೂನುಗಳು ಹೊರಬಿದ್ದಿವೆ. ಆದರೂ ಅವರು ಅವ್ಯಾಹತ ಹಿಂಸೆಯ, ಪರಮಶೋಷಣೆಯ ಬಲಿಪಶುಗಳು. ಇವರನ್ನು ದೈಹಿಕವಾಗಿ ನಿತ್ಯ ಹಿಂಸೆಗೆ ಗುರಿ ಮಾಡುವವರ ವಿರುದ್ಧ ಪೊಲೀಸರು ಕೇಸುಗಳನ್ನೇ ದಾಖಲು ಮಾಡದೆ ಹೋದರೆ ಈ ಕಾಯಿದೆ ಕಾನೂನುಗಳಿಂದ ಪ್ರಯೋಜನವಾದರೂ ಏನು? 

ಮೇಲ್ವರ್ಗಗಳು ಅದಿವಾಸಿಗಳ ಮೇಲೆ ನಡೆಸುವ ದೌರ್ಜನ್ಯದ ಹಿಂದಿನ ಕೆಲವು ಕಾರಣಗಳನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ ಹೀಗೆ ಗುರುತಿಸಿತ್ತು. ಸರ್ಕಾರಿ ಜಮೀನು ಅಥವಾ ಹೆಚ್ಚುವರಿ ಜಮೀನಿನ ಹಂಚಿಕೆಯ ಹಿನ್ನೆಲೆಯಲ್ಲಿ ಭುಗಿಲೆದ್ದು ಬಗೆಹರಿಯದೆ ನೆನೆಗುದಿಗೆ ಬಿದ್ದಿರುವ ಭೂ ವಿವಾದಗಳು, ಕನಿಷ್ಠ ಕೂಲಿ ಪಾವತಿಯ ನಿರಾಕರಣೆ, ಜೀತಪದ್ಧತಿ, ಸಾಲಸೋಲ, ಆದಿವಾಸಿಗಳಿಗೆ ತಮ್ಮ ಹಕ್ಕುಗಳ ಕುರಿತು ಮೂಡುತ್ತಿರುವ ಅರಿವು. 

ಮೇಲ್ವರ್ಗಗಳ ಜೊತೆಗೆ ಪ್ರಭುತ್ವ ಮತ್ತು ಅದರ ಬಲಿಷ್ಠ ಬಾಹುಗಳಾದ ಪೊಲೀಸರು ಮತ್ತು ಅರೆಸೇನಾ ಪಡೆಗಳು ಆದಿವಾಸಿಗಳ ಬೆನ್ನು ಬಿದ್ದಿವೆ. ಅಡವಿಗಳು ಮತ್ತು ಗುಡ್ಡಗಾಡುಗಳಲ್ಲಿ ಭೂಗರ್ಭದಲ್ಲಿ ಅಡಗಿರುವ ಖನಿಜ ಸಂಪತ್ತನ್ನು ಕಾರ್ಪೊರೇಟುಗಳು ಕೈಗೆ ಒಪ್ಪಿಸಿರುವ ಸರ್ಕಾರಗಳು ಇದೀಗ ಆದಿವಾಸಿಗಳ ಪಾಲಿನ ಹೊಸ ಶೋಷಕರು. 

ಹೀಗಾಗಿ ಆದಿವಾಸಿಗಳು ತಮ್ಮದೇ ನೆಲದಲ್ಲಿ ನಿರಾಶ್ರಿತರು. ಕೇಳುವವರೇ ದಿಕ್ಕಿಲ್ಲದ ಅನಾಥರು. ಪ್ರಭುತ್ವ, ಪೊಲೀಸರು, ಕ್ರೂರ ಅರ್ಥವ್ಯವಸ್ಥೆ ಜೀವಂತವಾಗಿ ಹರಿದು ಮುಕ್ಕುತ್ತಿರುವ ಪರದೇಸಿಗಳು. 

ದಟ್ಟ ಆದಿವಾಸಿ ಜನಸಾಂದ್ರತೆಯ ಪಟ್ಟಿಗೆ ಸೇರಿದ ಛತ್ತೀಸ್‌ಗಢ, ಝಾರ್ಖಂಡ, ಒರಿಸ್ಸಾದಲ್ಲಿ ಈ ಜನರ ಬದುಕುಗಳು ಮೂರಾಬಟ್ಟೆ ಆಗುತ್ತಿವೆ. ಶೇ.90ರಷ್ಟು ಕಲ್ಲಿದ್ದಿಲು ಮತ್ತು ಶೇ.50ಕ್ಕೂ ಹೆಚ್ಚಿನ ಖನಿಜಗಳು ಮತ್ತು ಜಲಾಶಯಗಳನ್ನು ಕಟ್ಟಿರುವ ಜಾಗಗಳು ಇರುವುದು ಆದಿವಾಸಿಗಳು ಜೀವಿಸಿರುವ ಪ್ರದೇಶಗಳಲ್ಲೇ. 

ಆದಿವಾಸಿ ಎಳೆಯರ ಕೈಗೆ ಪ್ರಭುತ್ವ ಪುಸ್ತಕಗಳನ್ನು ಇರಿಸಬೇಕಿತ್ತು. ಆದರೆ ನಿಜದಲ್ಲಿ ತುರುಕುತ್ತಿರುವುದು ಬಂದೂಕುಗಳನ್ನು. ಅವರೇ ನೆಲೆಸಿರುವ ಅಡವಿ- ಗುಡ್ಡಗಳ ಅಡಿಯಲ್ಲಿ ಹುದುಗಿರುವ ಸಂಪತ್ತಿನ ಹಗಲುದರೋಡೆಗೆ ಅವರೇ ಕಾವಲುಗಾರರು!! ಇದಕ್ಕಿಂತ ದುರಂತ ಮತ್ತೊಂದು ಇರಲಾರದು. 

ನಂದಿನಿ ಸುಂದರ್ ಮತ್ತಿತರೆ ಪ್ರಮುಖರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ಸಾಲ್ವಾ ಜುದುಂ ಸಂವಿಧಾನ ಬಾಹಿರ ಎಂದು 2011ರಲ್ಲಿ ನೀಡಿದ್ದ ತೀರ್ಪು ನಾಗರಿಕ ಜಗತ್ತಿನ ಕಣ್ಣು ತೆರೆಸುವಂತಹುದು. ಆದಿವಾಸಿಗಳನ್ನು ಆದಿವಾಸಿಗಳಿಂದಲೇ ಬೇಟೆಯಾಡಿಸುವ ಕ್ರೌರ್ಯವನ್ನು ಈ ತೀರ್ಪು ಎಳೆ ಎಳೆಯಾಗಿ ಬಿಡಿಸಿಟ್ಟಿತ್ತು. 

ತೀರ್ಪಿನ ಕೆಲ ಭಾಗಗಳು ಹೀಗಿವೆ: ಪ್ರಭುತ್ವದ ಅಗಾಧ ಬಲದ ವಿರುದ್ಧ ಜನ ಕಾರಣವೇ ಇಲ್ಲದೆ ಸುಮ್ಮ ಸುಮ್ಮನೆ ಬಂದೂಕು ಕೈಗೆ ಎತ್ತಿಕೊಳ್ಳುವುದಿಲ್ಲ. ದರಿದ್ರರು, ದುರ್ಬಲರು, ವಂಚಿತರನ್ನು ಬಗೆ ಬಗೆಯ ಅನ್ಯಾಯಗಳ ಸರಣಿಯೇ ಹುರಿದು ಮುಕ್ಕಿದಾಗ ಜನ ಬಂಡೇಳುತ್ತಾರೆ. ಛತ್ತೀಸ್‌ಗಢ ಸೀಮೆಯ ಬಹುಪಾಲು ಮಾವೋವಾದೀ ಚಟುವಟಿಕೆಯಿಂದ ಬಾಧಿತ ಎಂಬುದು ವ್ಯಾಪಕ ತಿಳಿವಳಿಕೆ. ಮಾವೋವಾದಿ ಬಂಡುಕೋರ ಚಟುವಟಿಕೆ ಮತ್ತು ಪ್ರಭುತ್ವ ಕೈಗೊಂಡ ಮಾವೋವಾದೀ ದಮನ ಕ್ರಮಗಳೆರಡರಿಂದಲೂ ಈ ಸೀಮೆಯ ಜನ ತೀವ್ರ ಸಂಕಟಕ್ಕೆ ಸಿಕ್ಕಿದ್ದಾರೆ. .. 

ಯೋಜನಾ ಆಯೋಗ ರಚಿಸಿದ್ದ ತಜ್ಞರ ಸಮಿತಿಯೊಂದು 'ತೀವ್ರಗಾಮಿ ಬಾಧಿತ ಪ್ರದೇಶಗಳಲ್ಲಿ ಅಭಿವದ್ಧಿಯ ಸವಾಲುಗಳು' ಎಂಬ ವಿಷಯ ಕುರಿತು ನಿಡಿರುವ ವರದಿಯ ಸಮಾಪ್ತಿಯ ಭಾಗದಲ್ಲಿರುವ ವಾಕ್ಯಗಳನ್ನು ಉಲ್ಲೇಖಿಸುವುದೇ ಆದರೆ- ಸ್ವಾತಂತ್ರ್ಯಾನಂತರದಲ್ಲಿ ಅಳವಡಿಸಿಕೊಳ್ಳಲಾಗಿರುವ ಅಭಿವದ್ಧಿಯ ಮಾದರಿಯು ಸಮಾಜದ ಅಂಚಿನಲ್ಲಿ ಬದುಕಿರುವ ಜನವರ್ಗಗಳಲ್ಲಿನ ಹಾಲಿ ಅಸಂತಪ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. . . . ನೀತಿ ನಿರೂಪಕರು ನೀಡಿದ ಈ ಅಭಿವದ್ಧಿ ಮಾದರಿಯನ್ನು ಈ ಸಮುದಾಯಗಳ ಮೇಲೆ ಹೇರುತ್ತ ಬರಲಾಗಿದೆ. ಈ ಅಭಿವದ್ಧಿ ಮಾದರಿಯ ಬಹುತೇಕ ಬೆಲೆ ತೆತ್ತವರು ಬಡವರು ಆದಿವಾಸಿಗಳು. ಅವರ ಹಿತವನ್ನು ಬಲಿಗೊಟ್ಟು ಬಲಾಢ್ಯ ಜನವರ್ಗಗಳು ಈ ಅಭಿವದ್ಧಿ ಮಾದರಿಯ ಲಾಭಗಳನ್ನು ಬಹು ದೊಡ್ಡ ಪ್ರಮಾಣದಲ್ಲಿ ಕಬಳಿಸಿವೆ. ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗಗಳ ಕುರಿತು ಹೇಳುವುದಾದರೆ ಈ ಅಭಿವದ್ಧಿ ಮಾದರಿಯು ಈ ಸಮುದಾಯಗಳ ಸಾಮಾಜಿಕ ಸಂಘಟನೆಯನ್ನು, ಸಾಂಸ್ಕತಿಕ ಅಸ್ಮಿತೆಯನ್ನು ಹಾಗೂ ಸಂಪನ್ಮೂಲ ನೆಲೆಯನ್ನು ನಾಶ ಮಾಡಿದೆ. ಪರಿಣಾಮವಾಗಿ ಈ ಸಮುದಾಯಗಳು ಶೋಷಣೆಗೆ ಹೆಚ್ಚು ಹೆಚ್ಚು ಪಕ್ಕಾಗುವಂತೆ ಆಗಿದೆ. ಅಭಿವದ್ಧಿಯ ಈ ಮಾದರಿ ಮತ್ತು ಇದರ ಅನುಷ್ಠಾನವು ಅಧಿಕಾರಶಾಹಿಯ ಭ್ರಷ್ಟ ಆಚರಣೆಗಳನ್ನು ಹೆಚ್ಚಿಸಿದೆ. ಜೀವಿ ಮತ್ತೊಂದು ಜೀವಿಯನ್ನು ಕಬಳಿಸುವ ಲಾಲಸೆಕೋರ ಹಪಾಹಪಿಯ (rapascious) ಕಾಂಟ್ರ್ಯಾಕ್ಟರುಗಳು, ಮಧ್ಯವರ್ತಿಗಳು, ವರ್ತಕರು ಹಾಗೂ ಸಮಾಜದ ಇತರೆ ಆಶೆಬುರುಕ ವರ್ಗಗಳು ಆದಿವಾಸಿಗಳ ಸಂಪನ್ಮೂಲಗಳನ್ನು ಕಸಿದುಕೊಂಡು ಅವರ ಬದುಕಿನ ಘನತೆಯನ್ನು ಉಲ್ಲಂಘಿಸಿವೆ . 

ಘನತೆಯ ಬದುಕನ್ನು ಬದುಕಲು ಅಗತ್ಯವಿರುವ ಸಾಧನಗಳನ್ನು ಈ ಜನವರ್ಗಗಳಿಗೆ ನಿರಾಕರಿಸಿ ನಿಕಷ್ಟ ಬದುಕಿಗೆ ಅವರನ್ನು ವ್ಯವಸ್ಥಿತವಾಗಿ ನೂಕಿರುವುದು ಇದೇ ಅಭಿವದ್ಧಿ ಮಾದರಿಯ ಶಕ್ತಿಗಳು ಮತ್ತು ಹುನ್ನಾರಗಳೇ ಎಂಬುದು ನಿಚ್ಚಳ ಎನ್ನುತ್ತದೆ ನ್ಯಾಯಾಲಯ.. . ತೀವ್ರಗಾಮಿ ಆಂದೋಲನ ಮತ್ತು ಬಡತನದ ನಡುವೆ ಮತ್ತು ಅರಣ್ಯಗಳು ಮತ್ತು ಅರಣ್ಯವಾಸಿಗಳ ನಡುವೆ ನೇರ ಆಳ ಸಂಬಂಧವಿದೆ. . . ಒಕ್ಕಲೆಬ್ಬಿಸುವ ನೀತಿಯಿಂದ ಆದಿವಾಸಿಗಳು ಗಿರಿಜನರು ಕಾರ್ಪಣ್ಯಗಳ ಸರಣಿಗೆ ಬಿದ್ದು ಬೇಯುತ್ತಾರೆ ಎಂದು ಸರ್ಕಾರದ ನೀತಿ ನಿರೂಪಕ ದಾಖಲೆ ದಸ್ತಾವೇಜುಗಳು ಸಾರುತ್ತವೆ. ಆದರೆ ಸರ್ಕಾರಗಳು ಈ ಕ್ಷೋಭೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದೇ ಬಗೆದು ಭಿನ್ನಮತವನ್ನೂ ಅಸಂತಪ್ತಿಯನೂ ್ನ ಜನತಂತ್ರದ ಸಕಾರಾತ್ಮಕ ಅಂಶವೆಂದು ಪರಿಗಣಿಸದೆ ದಮನ ಮಾಡುತ್ತಿವೆ. ಈ ಮನಸ್ಥಿತಿಬದಲಾಗಬೇಕು. 

ಬಡಜನರ ಸಿಟ್ಟು, ಅಶಾಂತಿಯನ್ನು ಎದುರಿಸಲು ಅದೇ ಬಡಜನರ ಮಕ್ಕಳ ಕೈಗೆ ಬಂದೂಕನ್ನು ನೀಡುತ್ತಿದೆ ಪ್ರಭುತ್ವ. ಕಾಳ್ಗಿಚ್ಚನ್ನು ಪ್ರತಿ ಕಿಚ್ಚನ್ನು ಹಚ್ಚಿ ಅಡಗಿಸುವುದು ಅರಣ್ಯದಲ್ಲಿ ಸಾಧ್ಯ. ಆದರೆ ಸಮಾಜ ಅರಣ್ಯ ಅಲ್ಲ. ಮನುಷ್ಯರೆಂದರೆ ಹುಲ್ಲಿನ ಒಣ ಹುಲ್ಲಿನ ಎಸಳುಗಳಲ್ಲ. ಸ್ವತಂತ್ರ ಚೇತನಗಳು. ಕೈಗೆ ಬಂದೂಕಿತ್ತ ಗುಂಪುಗಳು ಇತರೆ ನಾಗರಿಕರ ವಿರುದ್ಧ ಆನಂತರ ಪ್ರಭುತ್ವದ ವಿರುದ್ಧವೇ ತಿರುಗಿ ಬಿದ್ದಿರುವ ಉದಾಹರಣೆಗಳು ಇತಿಹಾಸದಲ್ಲಿ ಹೇರಳ. . . ಎನ್ನುತ್ತದೆ ಸುಪ್ರೀಂ ತೀರ್ಪು. 

ಕಾಮೆಂಟ್‌ಗಳಿಲ್ಲ: