ಕೊರಗ ಆದಿವಾಸಿ ಸಮುದಾಯದ 'ಶೈಕ್ಷಣಿಕ ರಂಗ'ದತ್ತ ಒಮ್ಮೆ ದೃಷ್ಠಿ ಹಾಯಿಸಿದರೆ, ಕೆಲವೊಂದು ಅಚ್ಚರಿಯ ಸಾಧಕರ ಮಾಹಿತಿಗಳು ಕಾಣಸಿಗುತ್ತದೆ.
ಒಬ್ಬನೇ ಒಬ್ಬ ಪೈಲಟ್ :
ಮನೋಹರ ಬೀಡಿನಗುಡ್ಡೆ, ಉಡುಪಿ.
ಇವರು ಇಡೀ ಕೊರಗ ಸಮುದಾಯದಲ್ಲೇ ಮೂಡಿಬಂದ ಪ್ರಪ್ರಥಮ ಸಾಧಕರು! ಕೊರಗ ಸಮುದಾಯ ಸಂಘಟನಾತ್ಮಕವಾಗಿ ಪ್ರವರ್ಧಮಾನಕ್ಕೆ ಬರುವ ಮುನ್ನವೇ, ಯಾರೂ ಊಹಿಸದ ಪ್ರತಿಭೆಯಾಗಿ ಮೂಡಿ ಬಂದವರು. ಆಕಾಶದೆತ್ತರಕ್ಕೆ ಏರಿದವರು! ಕೊರಗ ಸಮುದಾಯವು ಕನಸು ಮನಸಿನಲ್ಲಿಯೂ ಎಣಿಸಿರದ ವಿಮಾನಯಾನ ಕ್ಷೇತ್ರದಲ್ಲಿ 'ಪೈಲಟ್' ಆಗಿ ಸೇವೆಸಲ್ಲಿಸಿದವರು. ಕೊರಗ ಸಮುದಾಯ ಸಂಘಟನೆಯಾಗಿ ರೂಪುಗೊಳ್ಳುವ ಮೊದಲೇ ನಿವೃತ್ತಿಯಾಗಿದ್ದರು! ಹಾಗಾಗಿ, ಇವತ್ತಿಗೂ ಇವರ ಹೆಸರನ್ನು - ಸಾಧನೆಯನ್ನು ಕೊರಗ ಸಮುದಾಯದವರು ಗುರುತಿಸಲೂ ಸಾಧ್ಯವಾಗದ ಸಂಧಿಗ್ದ ಸ್ಥಿತಿಯಲ್ಲಿ ಪೇಚಾಡಿಕೊಳ್ಳುವಂತಾಗಿದೆ! ಆದರೆ, ಕೊರಗ ಸಮುದಾಯದ ಕುರಿತು ಅತ್ಯಾಭಿಮಾನ ಹೊಂದಿದ್ದ ಇವರು, 'ಕೊರ್ರೆ/ಕೊರಗ ಭಾಷೆ' ಸೇರಿದಂತೆ 9 ಭಾಷೆಗಳನ್ನು ಬಲ್ಲವರಾಗಿದ್ದರು. 1988 ರಲ್ಲಿ ನಿಧನ ಹೊಂದಿದರು.
ಪ್ರಥಮ ಪದವೀಧರ :
ಪಿ. ಗೋಕುಲದಾಸ್
ಕೊರಗ ಸಮುದಾಯದ ಪ್ರಪ್ರಥಮ ಪದವೀಧರರು. ಅಂಚೆ ಇಲಾಖೆಯ ಸೇವೆಸಲ್ಲಿಸಿರುವ ಇವರು, ಪ್ರಸ್ತುತ ಮಂಗಳೂರಿನ ಚಿಲಿಂಬಿಯಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಕೊರಗ ಸಮುದಾಯದ ಅಪ್ರತಿಮ ಸಂಘಟಕರಿವರು ಮತ್ತು 'ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ' ಕರ್ನಾಟಕ ಮತ್ತು ಕೇರಳ (ರಿ) ಇದರ ಗೌರವಾಧ್ಯಕ್ಷರು.
ಪ್ರಥಮ ಪಿಹೆಚ್ ಡಿ ಪದವಿ ಪಡೆದವರು :
ಡಾ. ಬಾಬು, ಬೆಳ್ತಂಗಡಿ.
ಅತ್ಯಂತ ಕ್ಲಿಷ್ಟ ವಿಷಯಗಳಲ್ಲಿ ಒಂದಾದ ಸಿಂಥಟಿಕ್ ಆಂಡ್ ಬಯಲಾಜಿಕಲ್ ಸ್ಟಡೀಸ್ ಆನ್ ನೈಟ್ರೋಜನ್ ಸಲ್ಫರ್ ಆಂಡ್ ಆಕ್ಸಿಜನ್ ಕಂಟೈನಿಂಗ್ ಹೈಕ್ರೋಪೆರೋ ಸೈಕಲ್ಸ್ ವಿಷಯವಾಗಿ ಮಂಗಳೂರು ವಿವಿಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ 'ಡಾಕ್ಟರೇಟ್' ಪದವಿ ಪಡೆಯುವ ಮೂಲಕ ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲಿಗರೆನಿಸಿದರು.
ಪ್ರಥಮ ಇಂಜಿನೀಯರ್ :
ಗುರುದೇವ ಪೇತ್ರಿ, ಬ್ರಹ್ಮಾವರ
ದ್ವಿತೀಯ ಇಂಜಿನೀಯರ್ :
ಮೋಹನ ಅಡ್ವೆ
ಪ್ರಪ್ರಥಮ ವೈದ್ಯಕೀಯ ಪದವಿ ಪಡೆದವರು :
ಡಾ. ಸುಲೋಚನ ಕೋಡಿಕಲ್, ಮಂಗಳೂರು.
ಡೆಂಟಲ್ ಸ್ಪೆಷಲಿಸ್ಟ್
ಪ್ರಪ್ರಥಮ ಎಲ್ ಎಲ್ ಬಿ ಪದವಿ ಪಡೆದವರು : ಆನಂದ ಕಂಕನಾಡಿ
ದ್ವಿತೀಯ : ಕು. ರತ್ನಾ ಕಂಕನಾಡಿ
ತ್ರಿತೀಯ : ಪ್ರವೀಣ ಮೂಡುಶೆಡ್ಡೆ
ಯುಜಿಸಿ ಪಾಸಾದ ಪ್ರಥಮ ಪ್ರತಿಭೆ : ಸಬೀತಾ ಗುಂಡ್ಮಿ ದ್ವಿತೀಯ : ದಿನೇಶ್ ಕೆಂಜೂರು
ಪ್ರಥಮ ಗಗನಸಖಿ :
ಕು. ಸಂಧ್ಯಾ ಕೋಟ.
ಕುಂದಾಪುರ ತಾಲೂಕಿನ ಕೋಟ ಗ್ರಾಮದ ಶಂಕರ ಕೊರಗ ಎಂಬವರ ಮಗಳು. ಪ್ರಸ್ತುತ ಎರಡು ವರ್ಷದಿಂದ ಗಗನಸಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.
ಕಾಸರಗೋಡಿನಲ್ಲಿ 'ಕನ್ನಡ'ದ ಸಾಧಕಿ : ಮೀನಾಕ್ಷಿ ಬೊಡ್ಡೋಡಿ
ಮಲಯಾಳ ಭಾಷೆಯ ಪ್ರಭಾವಕ್ಕೆ ಭಾಗಶಃ ಒಳಗಾಗಿರುವ, ಕರ್ನಾಟಕದ ಗಡಿನಾಡು ಕಾಸರಗೋಡುನಲ್ಲಿ ಕೊರಗ ಸಮುದಾಯದ ಯುವತಿಯೊಬ್ಬಳು ಕನ್ನಡದಲ್ಲಿಯೇ ಸ್ನಾತ್ತಕೋತ್ತರ ಪದವಿ ಪೂರೈಸಿ ಸಮುದಾಯಕ್ಕೆ ಕೀರ್ತಿ ತಂದಿದ್ದಾಳೆ.
ವರ್ಕಾಡಿ ಗ್ರಾಮ ಪಂಚಾಯತಿನ ಬೊಡ್ಡೋಡಿಯ ಕೂಲಿಕಾರ್ಮಿಕ ವೃತ್ತಿಯ ಶೇಖರ ಕೊರಗ ಮತ್ತು ತುಕ್ರು ಎಂಬವರ ಮಗಳಾಗಿರುವ ಮೀನಾಕ್ಷಿ ಕೊರಗ ಎಂಬವಳೇ ಈ ಸಾಧನೆಗೈದವಳು.
ಬೊಡ್ಡೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದ ಈಕೆ ಹತ್ತಿರದ ಕೊಡ್ಲುಮೊಗರು ವಾಣಿವಿಜಯ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿದರು. ಕನ್ಯಾನ ಕಾಲೇಜಿನಲ್ಲಿ ಪಿಯುಸಿ ಪಾಸಾದ ಮೀನಾಕ್ಷಿ, ಮಂಜೇಶ್ವರ ಗೋವಿಂದ ಪೈ ಸರಕಾರಿ ಸ್ಮಾರಕ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ. 2012ರಲ್ಲಿ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡದಲ್ಲಿ ಎಂ.ಎ ಪೂರೈಸುವ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಆದಿವಾಸಿ ಕೊರಗ ಸಮುದಾಯದ ಸ್ನಾತ್ತಕೋತ್ತರ ಪದವಿ ಪೂರೈಸಿದ ಪ್ರಪ್ರಥಮ ಸಾಧಕಿಯಾಗಿ ಮೂಡಿ ಬಂದಿದ್ದಾರೆ.
ಈ ಎಲ್ಲಾ ಶೈಕ್ಷಣಿಕ ರಂಗದ ಸ್ಪೂರ್ತಿ ಚೇತನಗಳ ಸಾಧನೆಗಳಿಂದ ಪ್ರೇರಣೆಗಳೊಂಡು, ಇದೀಗ 'ನಾವು ಯಾರಿಗೇನು ಕಮ್ಮಿ?' ಎಂದು ಎದೆ ತಟ್ಟಿ ಹೇಳುವಂತೆ ಬೀಗುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕೊರಗ ಸಮುದಾಯದ ಸಾಲು ಸಾಲು ಶೈಕ್ಷಣಿಕ ಸಾಧಕರು - ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿ ಮೂಡಿಬಂದಿದೆ.
- ಬಿ ಎಸ್ ಹೃದಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ